Tag: ಕನ್ನಡ ಸಿನೆಮಾ

  • ಈ ವಾರ ಗ್ರಾಮೀಣ ಸೊಗಡಿನ ಡೇಸ್ ಆಫ್ ಬೋರಾಪುರ

    ಈ ವಾರ ಗ್ರಾಮೀಣ ಸೊಗಡಿನ ಡೇಸ್ ಆಫ್ ಬೋರಾಪುರ

    ಬೆಂಗಳೂರು: ಅಪ್ಪಟ ಗ್ರಾಮೀಣ ಕಥಾಹಂದರ ಹೊಂದಿರುವ ಡೇಸ್ ಆಫ್ ಬೋರಾಪುರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಠಿ ಮೊನ್ನೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರೆಲ್ಲ ಹಾಜರಿದ್ದು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ತುಂಬಾ ಸುಭಿಕ್ಷವಾಗಿದ್ದ ಒಂದು ಕುಗ್ರಾಮದಲ್ಲಿ ಹೊಸ ವಸ್ತುವೊಂದು ಬಂದಾಗ ಅಲ್ಲಿನ ಜನರಲ್ಲಿ ಏನೇನೆಲ್ಲ ಬದಲಾವಣೆಗಳಾದವು ಎಂಬ ವಿಷಯವನ್ನು ಇಟ್ಟುಕೊಂಡು ಮಾಡಿದಂಥ ಕಥಾನಕವಿದು.

    ಆದಿತ್ಯ ಕುಣಿಗಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಕಲಾನಿರ್ದೇಶಕ ದಿನೇಶ್ ಮಂಗಳೂರು ಬೆಟ್ಟೇಗೌಡ ಎಂಬ ಪಾತ್ರವನ್ನು ಮಾಡಿದ್ದರೆ, ಅವರ ಪುತ್ರ ಸೂರ್ಯ ಸಿದ್ದಾರ್ಥ ನಾಯಕನಾಗಿ ನಟಿಸಿದ್ದಾರೆ. ಪ್ರಶಾಂತ್ ಸಿ.ಎಂ., ಅನಿತಾ ಭಟ್, ಪ್ರಕೃತಿ ಮತ್ತು ಅಮಿತಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ 35 ದಿನಗಳ ಕಾಲ ಇಡೀ ಚಿತ್ರದ ಚಿತ್ರೀಕರಣವನ್ನು ನಡೆಸಲಾಗಿದೆ.

    ನಾಯಕ ಸೂರ್ಯ ಮಾತನಾಡಿ ಇದೊಂದು ಸಸ್ಪೆನ್ಸ್, ಥ್ರಿಲರ್, ಕಾಮಿಡಿ ಸಿನಿಮಾ. 10 ದಿನಗಳ ಹಿಂದಷ್ಟೇ ಬಿಟ್ಟಿದ್ದ ಟ್ರೈಲರ್‍ಗೆ ಅದ್ಭುತ ರೆಸ್ಪಾನ್ಸ್ ಸಿಕ್ತು. ಈ ಚಿತ್ರದಲ್ಲಿ ನನ್ನದು ಒಬ್ಬ ಹಳ್ಳಿ ಹುಡುಗನ ಪಾತ್ರ. ಸುಮಾರು ಷೇಡ್ಸ್ ಈ ಪಾತ್ರದಲ್ಲಿದೆ. ಈ ಹಿಂದೆ ನಾನು ಮಾಡಿದ್ದ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದೆ ಎಂದು ಹೇಳಿದರು. ಮತ್ತೊಬ್ಬ ನಾಯಕ ಪ್ರಶಾಂತ್ ಮಾತನಾಡುತ್ತ ನಾನೊಬ್ಬ ಭಗ್ನ ಪ್ರೇಮಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಇಡೀ ಸಿನಿಮಾದಲ್ಲಿ ನಾಯಕಿಯನ್ನು ಟಚ್ ಮಾಡುವುದಿಲ್ಲ. ಚಿತ್ರದ ಡೈಲಾಗ್ ಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಇಡೀ ಸಿನಿಮಾ ಅರ್ಥವಾಗುತ್ತದೆ ಎಂದು ಹೇಳಿದರು.

    ನಾಯಕಿಯಾದ ಅಮಿತಾ ರಂಗನಾಥ್ ಮಾತನಾಡಿ, ಭಾಗ್ಯ ಎಂಬ ಹಳ್ಳಿಯ ವಿದ್ಯಾವಂತೆ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಮೆಚೂರ್ಡ್ ಹೆಣ್ಣಿನ ಪಾತ್ರ. ನಾನು ಮಾಡುವ ಒಂದು ಕೆಲಸದಿಂದ ಇಡೀ ಹಳ್ಳಿಯ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದರು. ಮತ್ತೊಬ್ಬ ನಟಿ ಅನಿತಾ ಭಟ್ ಮಾತನಾಡಿ, ಒಬ್ಬ ಡ್ರಾಮಾ ಆರ್ಟಿಸ್ಟ್ ಆಗಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಮತ್ತೊಬ್ಬ ನಾಯಕಿ ಪ್ರಕೃತಿ, ನನ್ನಲ್ಲಿನ ಟ್ಯಾಲೆಂಟನ್ನು ತೋರಿಸುವಂಥ ಅವಕಾಶ ಈ ಚಿತ್ರದಲ್ಲಿ ಸಿಕ್ಕಿತು. ಲಕ್ಷ್ಮಿ ಎಂಬ ಇನ್ನೋಸೆಂಟ್ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

    ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅವರು ಒಂದು ಹಾಡನ್ನು ಹಾಡಿದ್ದಾರೆ. ನಟ ಶಿವರಾಜ ಕುಮಾರ್ ಅಭಿಮಾನಿಗಳಾದ ಮಧು ಬಸವರಾಜ ಹಾಗೂ ಅಜಿತ್ ಕುಮಾರ್ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಎನ್.ಆದಿತ್ಯ ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮನು ಮಂಡ್ಯ ಈ ಚಿತ್ರಕ್ಕೆ ಸಂಭಾಷಣೆಗಳನ್ನು ರಚಿಸಿ ಸಹನಿರ್ದೇಶನ ಮಾಡಿದ್ದಾರೆ. ಹೈದರಾಬಾದ್ ಮೂಲದ ನಟ ಶಫಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ರಘು ಪಾಂಡೇಶ್ವರ, ಮಹದೇವ ಲಾಲಿಪಾಳ್ಯ ಉಳಿದ ಪಾತ್ರಗಳಲ್ಲಿದ್ದಾರೆ.

  • ಎಟಿಎಂ ಭರ್ಜರಿ ಪ್ರದರ್ಶನ!

    ಎಟಿಎಂ ಭರ್ಜರಿ ಪ್ರದರ್ಶನ!

    ಕನ್ನಡದಲ್ಲಿ ಸತ್ಯಕಥೆಗಳನ್ನಾಧರಿಸಿದ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತವೆ. ಇದೀಗ ಅದೇ ಸಾಲಿನಲ್ಲಿ ಸೇರ್ಪಡೆಯಾಗಿರುವ ಚಿತ್ರ ಎಟಿಎಂ (ಅಟೆಂಪ್ಟ್ ಟು ಮರ್ಡರ್). 5 ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದಂಥ ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಇದಾಗಿದ್ದು, ಕಳೆದ ವಾರ ರಾಜ್ಯಾದ್ಯಂತ ತೆರೆಗೆ ಬಂದಿತ್ತು. ನೈಜ ಘಟನೆ ಆಧರಿಸಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿರುವ ಕಾರಣಕ್ಕೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರೂ ಎಟಿಎಂಗೆ ಫುಲ್ ಮಾರ್ಕ್ ನೀಡಿದ್ದಾರೆ. ಇದರ ಪ್ರತಿಫಲವೆಂಬಂತೆ ಎಟಿಎಂ ಬಿಡುಗಡೆಯಾದ ಸ್ಥಳಗಳಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

    ಈ ಚಿತ್ರಕ್ಕೆ ಅಮರ್ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ, ಎಸ್.ವಿ. ನಾರಾಯಣ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಅಮರ್ ಮಾಡಿಕೊಂಡಿದ್ದ ಈ ಕಥೆ ಕೇಳಿದಾಗ ಅದರಲ್ಲಿನ ವಿಶೇಷ ಅಂಶವನ್ನು ಗ್ರಹಿಸಿ, ಆ ಕಥೆಯಲ್ಲಿ ಏನೋ ಹೊಸತನವಿರುವುದನ್ನು ಕಂಡುಕೊಂಡು ಸಹೋದರ ಕೃಷ್ಣಮೂರ್ತಿ ಅವರ ಜೊತೆ ಚರ್ಚಿಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಟಿಎಂ ಚಿತ್ರದಲ್ಲಿ ಪ್ರಮುಖವಾಗಿ ಐದು ಜನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೂ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳೂ ಅದರದೇ ಆದ ಪ್ರಾಮುಖ್ಯತೆ ಹೊಂದಿವೆ. ಚಿತ್ರದಲ್ಲಿರುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಂಟೆಂಟ್ ಪ್ರೇಕ್ಷಕರನ್ನು ಹಿಡಿದು ಕೂರಿಸುವಂತಿದೆ.

    ನಿರ್ದೇಶಕ ಅಮರ್ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಇದೇ ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರದ ನಾಯಕನಟ ವಿನಯ್ ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಹೇಮಲತಾ ಅವರು ಒಬ್ಬ ಜರ್ನಲಿಸ್ಟ್ ಪಾತ್ರವನ್ನು ನಿರ್ವಹಿಸಿದ್ದಾರೆ.

  • ಅನ್‍ಕಟ್ ಮೂವಿ ‘ಹೀಗೊಂದ್ ದಿನ’ ಬರ್ತಿದೆ ನೋಡಿ!

    ಅನ್‍ಕಟ್ ಮೂವಿ ‘ಹೀಗೊಂದ್ ದಿನ’ ಬರ್ತಿದೆ ನೋಡಿ!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸಾ ಆಲೋಚನೆ, ಹೊಸಾ ಪ್ರಯೋಗಗಳ ಪರ್ವ ಕಾಲವೊಂದು ಶುರುವಾಗಿದೆಯಲ್ಲಾ? ಅದರ ಕೊಂಡಿಯಂತೆ ತಯಾರಾಗಿ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಚಿತ್ರ `ಹೀಗೊಂದ್ ದಿನ’!

    ಸದಭಿರುಚಿಯ ಸಿನಿಮಾಸಕ್ತರ ವಲಯದಲ್ಲಿ ಸಣ್ಣಗೆ ಈ ಸಿನಿಮಾ ಕುರಿತಾಗಿ ನಿರೀಕ್ಷೆ ಜೀವ ಪಡೆದುಕೊಳ್ಳುತ್ತಿದೆ. ಯಾವುದೇ ಚಿತ್ರದ ಪಾಲಿಗಾದರೂ ತಾನೇ ತಾನಾಗಿ ಹುಟ್ಟಿಕೊಳ್ಳುವ ಇಂಥಾ ನಿರೀಕ್ಷೆಯೇ ಗೆಲುವಿನ ಮೊದಲ ಮೆಟ್ಟಿಲು. ಅಂಥಾದ್ದೊಂದು ಮೆಟ್ಟಿಲೇರಿ ನಿಂತಿರುವ ಖುಷಿಯಲ್ಲಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಸೇರಿದಂತೆ ಚಿತ್ರತಂಡ ಈ ವಾರ ತೆರೆಗೆ ಬರುತ್ತಿರುವ ಸಿನಿಮಾದ ಫಲಿತಾಂಶಕ್ಕಾಗಿ ಕಾದಿದ್ದಾರೆ.

    ಹಾಗೆ ನೋಡಿದರೆ, ಹೀಗೊಂದು ದಿನ ಹೆಚ್ಚು ಸೌಂಡ್ ಮಾಡಲು ಕಾರಣ ಇದು ಅನ್ ಕಟ್ ಮೂವಿ ಅನ್ನೋದಕ್ಕೆ. ಅಂದಹಾಗೆ ಅನ್ ಕಟ್ ಮೆಥಡ್ಡಿನಲ್ಲಿ ಒಂದು ಚಿತ್ರವನ್ನು ರೂಪಿಸೋದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡ ಸಮರ್ಥವಾಗಿ ನಿಭಾಯಿಸಿದ ಖುಷಿಯಲ್ಲಿದೆ. ಇದು ಎರಡು ಗಂಟೆಯಲ್ಲಿ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ಒಂದ್ಯಾವುದೋ ಗುರಿಯಿಟ್ಟುಕೊಂಡು ಮನೆಯಿಂದ ಹೊರ ಬೀಳೋ ಹುಡುಗಿಯ ಸುತ್ತಾ ಎರಡು ಘಂಟೆಗಳ ಕಾಲ ನಡೆಯುವ ವಿದ್ಯಮಾನ ಈ ಚಿತ್ರದ ಮುಖ್ಯ ವಿಚಾರ.

    ಇದಕ್ಕಾಗಿ ದಿನಾ ಬೆಳಗ್ಗೆ ಆರರಿಂದ ಎಂಟು ಘಂಟೆವರೆಗೆ ಶೂಟ್ ಮಾಡಲಾಗುತ್ತಿತ್ತಂತೆ. ಅಷ್ಟೂ ಜನ ಕಲಾವಿದರು ಹೊಸಾ ಪ್ರಯೋಗವೆಂಬ ಕಾರಣದಿಂದ ಸಾಥ್ ನೀಡಿದ್ದಾರೆಂಬ ತೃಪ್ತಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಅವರದ್ದು.

    ಸಿಂಧು ಲೋಕನಾಥ್ ಮುಖ್ಯಭೂಮಿಕೆಯಲ್ಲಿರುವ ಹೀಗೊಂದು ದಿನ ಪಕ್ಕಾ ಮಹಿಳಾ ಪ್ರಧಾನವಾದ ಚಿತ್ರ. ಕಥಾ ಹಂದರವೂ ಸೇರಿದಂತೆ ಎಲ್ಲ ವಿಚಾರಗಳಲ್ಲಿಯೂ ಹೊಸತನ ಹೊಂದಿದೆ. ಈವರೆಗೆ ಒಂದಷ್ಟು ಪಾತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಸಿಂಧು ಲೋಕನಾಥ್ ಈ ಚಿತ್ರದಲ್ಲಿ ಇಲ್ಲಿವರೆಗಿನ ಅಷ್ಟೂ ಪಾತ್ರಗಳಿಗಿಂತಲೂ ಭಿನ್ನವಾದ, ಸವಾಲಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ.

    ಅಂದಹಾಗೆ ವಿಕ್ರಂ ಯೋಗಾನಂದ್ ನಿರ್ದೇಶನದ ಈ ಚಿತ್ರವನ್ನು ನಿರ್ಮಾಣ ಮಾಡಿರುವವರು ದಿವ್ಯದೃಷ್ಟಿ ಚಂದ್ರಶೇಖರ್. ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷಗಳಿಂದ ಸಕ್ರಿಯರಾಗಿರುವ ಚಂದ್ರಶೇಖರ್ ಅಭಿರುಚಿಯ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಎರಡ್ಮೂರು ವರ್ಷಗಳಿಂದಲೂ ತಯಾರಿ ನಡೆಸಿದ್ದರು. ಕಡೆಗೂ ‘ಹೀಗೊಂದು ದಿನ’ ಚಿತ್ರದ ಮೂಲಕ ಆ ಕನಸು ನನಸಾಗಿಸಿಕೊಂಡಿದ್ದಾರೆ. ನಿರ್ಮಾಪಕರೂ ಸೇರಿದಂತೆ ಇಡೀ ಚಿತ್ರ ತಂಡ ಟ್ರೈಲರ್‍ಗೆ ಸಿಕ್ಕ ವ್ಯಾಪಕ ಪ್ರತಿಕ್ರಿಯೆ ಕಂಡು ಖುಷಿಗೊಂಡಿದ್ದಾರೆ. ಯಾರೇ ಯಶಸ್ವೀ ಪುರುಷರ ಹಿಂದೆ ಒಬ್ಬಳು ಹೆಣ್ಣಿರುತ್ತಾಳೆಂಬುದು ಲೋಕ ರೂಢಿಯ ಮಾತು. ಯಶಸ್ವೀ ಪುರುಷರ ಹಿಂದಿರುವ ಇಂಥಾ ಹೆಣ್ಣಿನ ತ್ಯಾಗವನ್ನು, ಕಷ್ಟವನ್ನು ಯಾರೂ ಮುನ್ನೆಲೆಗೆ ತಂದು ಮಾತಾಡೋದಿಲ್ಲ. ಆದರೆ ಈ ಚಿತ್ರದಲ್ಲಿ ಅಂಥಾ ಹೆಣ್ಣಿನ ಸೂಕ್ಷ್ಮ ಸಂಗತಿಗಳನ್ನು ರೋಚಕವಾದ ತಿರುವುಗಳ ಮೂಲಕ, ಚೆಂದದ ಕಥಾ ಹಂದರದ ಮೂಲಕ ವಿವರಿಸಲಾಗಿದೆಯಂತೆ. ಇನ್ನುಳಿದಂತೆ ಈ ಚಿತ್ರದಲ್ಲಿ ಘಟಾನುಘಟಿಗಳಾದ ನಟ ನಟಿಯರೇ ಅಭಿನಯಿಸಿದ್ದಾರೆ. ಶೋಭರಾಜ್, ಪದ್ಮಜಾ ರಾವ್, ಮಿತ್ರಾ ಮುಂತಾದ ನಟ ನಟಿಯರ ದಂಡೇ ಈ ಚಿತ್ರದಲ್ಲಿದೆ. ಈಗಾಗಲೇ ಟ್ರೈಲರ್ ಕೂಡಾ ಚಿತ್ರದ ಬಗ್ಗೆ ಕೌತುಕ ಹುಟ್ಟಿಸುವಲ್ಲಿ ಯಶ ಕಂಡಿದೆ. ಈ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆಂಬುದಷ್ಟೇ ಸದ್ಯದ ಕುತೂಹಲ.

    ವಿಕಾಸ್ ಅವರ ಕಥೆಗೆ, ನಿರ್ದೇಶಕ ವಿಕ್ರಮ್ ಯೋಗಾನಂದ್ ಅವರೇ ಛಾಯಾಗ್ರಹಕರು, ಸಂಕಲನಕಾರರು ಹಾಗೂ ವಿಷುವಲ್ ಎಫ್ಫೆಕ್ಟ್ ಸಹ ನೀಡಿದ್ದಾರೆ, ಅಭಿಲಾಷ್ ಗುಪ್ತ ಸಂಗೀತ, ರಾಮಕೃಷ್ಣ ರಣಗಟ್ಟಿ ಗೀತ ಸಾಹಿತ್ಯ ನೀಡಿದ್ದಾರೆ.

  • ರಾಜ್ ಕುಮಾರ್ ರಸ್ತೆಯಲ್ಲಿ ಏನು ನಡೆಯುತ್ತೆ ಗೊತ್ತಾ?

    ರಾಜ್ ಕುಮಾರ್ ರಸ್ತೆಯಲ್ಲಿ ಏನು ನಡೆಯುತ್ತೆ ಗೊತ್ತಾ?

    ರಾಜಕುಮಾರ, ನಟ ಸಾರ್ವಭೌಮ, ಕನಕ-ಅಣ್ಣಾವ್ರ ಅಭಿಮಾನಿ…. ಹೀಗೆ ಡಾ. ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ ಸಿನಿಮಾಗಳು ಬಿಡುಗಡೆಯಾಗೋದು, ಸೆಟ್ಟೇರೋದು ಮಾಮೂಲಾಗಿಬಿಟ್ಟಿದೆ. ಈಗ ಮತ್ತೊಂದು ಕುತೂಹಲಭರಿತ ಸಿನಿಮಾವೊಂದು ಆರಂಭವಾಗುತ್ತಿದೆ. ಈ ಚಿತ್ರದ ಹೆಸರೇ `ಡಾ. ರಾಜ್ ಕುಮಾರ್ ರಸ್ತೆ’!

    ಪತ್ರಕರ್ತರಾಗಿ ನಂತರ ರಿಯಾಲಿಟಿ ಶೋಗಳ ಸ್ಕ್ರಿಪ್ಟ್ ರೈಟರ್ ಆಗಿ ಹೆಸರು ಮಾಡಿರುವ ವಿನಾಯಕ ರಾಮ್ ಕಲಗಾರು ನಿರ್ದೇಶನದ ಚೊಚ್ಚಲ ಸಿನಿಮಾ ಡಾ. ರಾಜ್ ಕುಮಾರ್ ರಸ್ತೆ! ರಾತ್ರಿ ಆರಂಭವಾಗಿ ಬೆಳಗ್ಗೆಯ ಹೊತ್ತಿಗೆ ಮುಗಿಯುವ ಕಥೆ ಈ ಸಿನಿಮಾದ್ದಂತೆ. ಅಂದಹಾಗೆ ಈ ಚಿತ್ರದ ಹೆಸರಲ್ಲಿ ರಾಜ್ ಕುಮಾರ್ ಅವರ ಹೆಸರು ಇರೋದರ ಜೊತೆಗೆ ಚಿತ್ರದ ನಾಯಕನಟ ಕೂಡಾ ಡಾ. ರಾಜ್ ಅವರ ಅಭಿಮಾನಿಯಾಗಿರುತ್ತಾನಂತೆ. ಕನ್ನಡದಲ್ಲಿ ಈಗಾಗಲೇ ಹೆಸರು ಮಾಡಿರುವ ಸ್ಟಾರ್ ನಟ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದು ಯಾರು ಅನ್ನೋದನ್ನು ನಿರ್ದೇಶಕ ಕಲಗಾರು ಇನ್ನೂ ಗುಟ್ಟಾಗಿಟ್ಟಿದ್ದಾರೆ. ಅಂದಹಾಗೆ ಈ ಸಿನಿಮಾದ ಶೀರ್ಷಿಕೆ ಅನಾವರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಲಿದ್ದಾರಂತೆ!

  • ಶಕ್ತಿ, ಯುಕ್ತಿ, ಭಕ್ತಿಯ ‘ಉರ್ವಿ’ ಟ್ರೇಲರ್ ರಿಲೀಸ್ – ಭೇಷ್ ಅಂದ್ರು ಕಿಚ್ಚ ಸುದೀಪ್

    ಬೆಂಗಳೂರು: ಬಹುನಿರೀಕ್ಷಿತ ಮಹಿಳಾ ಪ್ರಧಾನ ಚಿತ್ರ ‘ಉರ್ವಿ’ ಟ್ರೇಲರ್ ಬಿಡುಗಡೆಯಾಗಿದೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್ ಗುರುವಾರ ರಾತ್ರಿ ಟ್ರೇಲರ್ ಬಿಡುಗಡೆಗೊಳಿಸಿದರು.

    ಸ್ಟಾರ್ ನಟಿಯರಾದ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್, ಜಾನ್ವಿ ಜ್ಯೋತಿ, ಮಧುಕರ್, ಪ್ರಭು ಮುಂಡ್ಕೂರು ಹಾಗೂ ವಾಸುಕಿ ವೈಭವ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆಯಲ್ಲಿ ಅಚ್ಯುತ ಕುಮಾರ್ ಅವರೂ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಪ್ರದೀಪ್ ವರ್ಮಾ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು ಚಿತ್ರದ ಟ್ರೇಲರ್ ಭಾರೀ ಕ್ಯೂರಿಯಾಸಿಟಿ ಹುಟ್ಟು ಹಾಕಿಸಿದೆ ಎನ್ನುವುದಂತೂ ಸುಳ್ಳಲ್ಲ. ಮನೋಜ್ ಜಾರ್ಜ್ ಚಿತ್ರಕ್ಕೆ ಸಂಗೀತ ನೀಡಿದರೆ ತಿಳಿ ಪ್ರೇಮ ಎಂಬ ಹಾಡನ್ನು ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಹಾಡಿದ್ದಾರೆ. ವಿಭಿನ್ನವಾದ ಪೋಸ್ಟರ್, ಹಾಡುಗಳಿಂದಲೇ ಉರ್ವಿ ಈಗಾಗಲೇ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಉರ್ವಿ ಚಿತ್ರದ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಫೇಸ್‍ಬುಕ್‍ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ತಾವು ಮಾಡುವ ಚಿತ್ರದ ಬಗ್ಗೆ ಹೆಮ್ಮೆ ಇರುತ್ತದೆ. ಉರ್ವಿ ಎನ್ನುವುದು ನಮ್ಮ ಮಗು. ಇದು ನಿಮಗಿಷ್ಟವಾದರೆ ನಮಗೆ ತಿಳಿಸಿ ಎಂದು ಅವರು ಫೇಸ್‍ಬುಕ್ ವಾಲ್‍ನಲ್ಲಿ ಬರೆದುಕೊಂಡಿದ್ದಾರೆ.

    ಇನ್ನು ಚಿತ್ರದ ಟ್ರೇಲರ್ ನೋಡಿದ ಕಿಚ್ಚ ಸುದೀಪ್, ಪವನ್ ಒಡೆಯರ್ ಮೆಚ್ಚುಗೆಯ ಮಾತನ್ನಾಡಿ ಚಿತ್ರ ತಂಡದ ಬೆನ್ನು ತಟ್ಟಿದ್ದಾರೆ.