Tag: ಕನ್ನಡ ಸಿನೆಮಾ

  • ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಬೆಂಗಳೂರು: ಅಪಾರ ಅಭಿಮಾನಿ ಬಳಗವನ್ನು ಹೊಂದಿರುವವರು ಸುಮಲತಾ ಅಂಬರೀಶ್. ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿರೋ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್ ತಾಯಿಯಾಗಿ ನಟಿಸಿದ್ದರು. ಇದೀಗ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನಾಯಕಿ ಹರಿಪ್ರಿಯಾ ಅಮ್ಮನಾಗಿ ಭಾವನಾತ್ಮಕವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ.

    ನಿರ್ದೇಶಕ ಶಂಕರ್ ಜೆ ಕಥೆ ಬರೆಯೋ ಸಂದರ್ಭದಲ್ಲಿ ತಾವು ಸೃಷ್ಟಿಸಿದ ಪಾತ್ರಗಳಿಗೆ ಯಾವುದೇ ಕಲಾವಿದರನ್ನು ಕಲ್ಪಿಸಿಕೊಂಡಿರಲಿಲ್ಲವಂತೆ. ಕಥೆ ಬರೆದು, ಸ್ಕ್ರಿಪ್ಟ್ ರೆಡಿಯಾದ ನಂತರವಷ್ಟೇ ಪಾತ್ರಗಳಿಗೆ ಕಲಾವಿದರ ಆಯ್ಕೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರಂತೆ. ಈ ಸಂದರ್ಭದಲ್ಲಿ ಇಡೀ ಕಥೆಯ ಜೀವಾಳದಂತಿರೋ ತಾಯಿಯ ಪಾತ್ರಕ್ಕೆ ಸುಮಲತಾ ಅಂಬರೀಶ್ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರಂತೆ.

    ನಿರ್ದೇಶಕರು ಇಂಥಾದ್ದೊಂದು ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಸುಮಲತಾ ಅವರು ಬ್ಯುಸಿಯಾಗಿ ಬಿಟ್ಟಿದ್ದರು. ಆಗ ಚಿತ್ರವೊಂದರ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಂಡಿದ್ದರಂತೆ. ಈ ನಡುವೆಯೇ ಶಂಕರ್ ಕಥೆ ಮತ್ತು ಅಮ್ಮನ ಪಾತ್ರದ ಮಹತ್ವವನ್ನು ವಿವರಿಸಿ ಹೇಳಿದ್ದರಂತೆ. ಕಥೆ ಕೇಳಿ ಥ್ರಿಲ್ ಆದ ಸುಮಲತಾ ತಮ್ಮ ಪಾತ್ರವನ್ನೂ ಮೆಚ್ಚಿಕೊಂಡು ಆಗಲೇ ಒಪ್ಪಿಗೆ ಸೂಚಿಸಿದ್ದರಂತೆ. ಹೀಗೆ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಈ ಚಿತ್ರದಲ್ಲವರು ತಾಯಿಯ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ.

    ಇದೀಗ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣಕ್ಕಿಳಿದಿದ್ದಾರೆ. ಇದೇ ತಿಂಗಳ ಇಪ್ಪತ್ಮೂರರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಅದಾದ ಮಾರನೇ ದಿನವೇ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಅವರ ಪಾತ್ರ ನಿಜಕ್ಕೂ ಹೇಗಿದೆ ಎಂಬ ಕುತೂಹಲವಂತೂ ಎಲ್ಲರಲ್ಲಿಯೂ ಇದ್ದೇ ಇದೆ.

  • ವೀಕೆಂಡ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?

    ವೀಕೆಂಡ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?

    ಹಿರಿಯ ನಟ ಅನಂತ್ ನಾಗ್ ಒಂದು ಸಿನಿಮಾವನ್ನು ಒಪ್ಪಿಕೊಳ್ಳಲು ಅನುಸರಿಸೋ ರೀತಿ ರಿವಾಜುಗಳ ಬಗ್ಗೆ ಚಿತ್ರರಂಗದ ಮಂದಿಗೆ ಸ್ಪಷ್ಟವಾದ ಅಂದಾಜಿರುತ್ತದೆ. ತಮ್ಮ ಪಾತ್ರ ಮಾತ್ರವಲ್ಲ, ಇಡೀ ಕಥೆಯ ಇಂಚಿಂಚನ್ನೂ ಅಳೆದೂ ತೂಗಿದ ನಂತರವಷ್ಟೇ ಅವರು ಒಪ್ಪಿಗೆ ಸೂಚಿಸುತ್ತಾರೆ. ಆದರೆ ಅದು ತುಂಬಾ ಕಷ್ಟದ ಕೆಲಸ. ಅಂಥಾದ್ದರಲ್ಲಿ ಸ್ಕ್ರಿಪ್ಟ್ ನೋಡಿಯೇ ಅನಂತ್ ನಾಗ್ ಮೆಚ್ಚಿಕೊಳ್ಳುತ್ತಾರೆಂದರೆ ಅದು ಯಾವ ಚಿತ್ರಕ್ಕಾದರೂ ಗೆಲುವಿನ ಸ್ಪಷ್ಟ ಸೂಚನೆ. ಈ ವಾರ ಬಿಡುಗಡೆಗೆ ಅಣಿಯಾಗಿರುವ ವೀಕೆಂಡ್ ಚಿತ್ರ ಖುದ್ದು ಅನಂತ್ ನಾಗ್ ಅವರಿಂದಲೇ ಮೆಚ್ಚಿಗೆ ಗಳಿಸಿಕೊಂಡಿತ್ತೆಂಬುದು ನಿಜವಾದ ವಿಶೇಷ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ನಿರ್ಮಾಣ ಮಾಡಿರೋ, ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಟೆಕ್ಕಿಗಳ ಜಗತ್ತಿನ ಸುತ್ತ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ಇದರಲ್ಲಿ ಅನಂತ್ ನಾಗ್ ಟೆಕ್ಕಿಯ ತಾತನಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಎಲ್ಲವನ್ನೂ ನೇರ ನಿಷ್ಠುರವಾಗಿಯೇ ಹೇಳಿ ಬಿಡುವ ಸ್ವಭಾವದ ಅನಂತ್, ವೀಕೆಂಡ್ ಬಗ್ಗೆ ಮಾತ್ರ ಮೆಚ್ಚಿಕೊಂಡು ಭೇಷ್ ಅಂದಿದ್ದಾರೆಂದರೆ ಈ ಚಿತ್ರದ ಬಗ್ಗೆ ಯಾರಿಗಾದರೂ ಒಲವು ಮೂಡದಿರಲು ಸಾಧ್ಯವಿಲ್ಲ.

    ಆರಂಭದಲ್ಲಿ ಈ ಚಿತ್ರದ ಸ್ಕ್ರಿಪ್ಟ್ ಪಡೆದು ಎರಡೆರಡು ಸಲ ಓದಿಕೊಂಡಿದ್ದ ಅನಂತ್ ನಾಗ್ ಖುಷಿಯಿಂದಲೇ ಡೇಟ್ಸ್ ಕೊಟ್ಟಿದ್ದರಂತೆ. ಜೊತೆಗೆ ಕಥೆ ತುಂಬಾ ಚೆನ್ನಾಗಿದೆ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದರಂತೆ. ಬಳಿಕ ಹಿರಿಯರಾಗಿ ಚಿತ್ರತಂಡಕ್ಕೆ ಹುರುಪು ತುಂಬುತ್ತಲೇ ಚಿತ್ರೀಕರಣ ಮುಗಿಸಿಕೊಂಡ ಕ್ಷಣದಲ್ಲಿ ಸ್ಕ್ರಿಪ್ಟ್‍ಗಿಂತಲೂ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಅಂತ ನಿರ್ದೇಶಕರ ಬೆನ್ತಟ್ಟಿದ್ದರಂತೆ. ಅನಂತ್ ನಾಗ್ ಅವರ ಮೆಚ್ಚುಗೆಯ ಮಾತುಗಳೇ ಈ ಚಿತ್ರದ ಗೆಲುವಿನ ಮುನ್ಸೂಚನೆಯಂತೆ ಕಾಣಿಸುತ್ತಿದೆ.

    ಹೀಗೆ ಆರಂಭಿಕವಾಗಿಯೇ ಅನಂತ್ ನಾಗ್ ಅವರಿಂದ ಮೆಚ್ಚಿಗೆ ಗಳಿಸಿಕೊಂಡಿದ್ದ ವೀಕೆಂಡ್ ಈ ವಾರ ಬಿಡುಗಡೆಗೊಳ್ಳುತ್ತಿದೆ. ಯುವ ಮನಸುಗಳ ವೀಕೆಂಡ್ ಎಂಬ ಆವೇಗದ ಸುತ್ತಾ ಹೊಸೆದಿರೋ ಚೆಂದದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇದುವರೆಗೂ ಈ ಚಿತ್ರದ ಬಗ್ಗೆ ಹಬ್ಬಿಕೊಂಡಿರೋ ಕುತೂಹಲಗಳಿಗೆಲ್ಲ ಈ ವಾರವೇ ಸ್ಪಷ್ಟ ಉತ್ತರ ಸಿಗಲಿದೆ.

  • ಮೇ 31ರಂದು ‘ಸುವರ್ಣ ಸುಂದರಿ’ ಬಿಡುಗಡೆ

    ಮೇ 31ರಂದು ‘ಸುವರ್ಣ ಸುಂದರಿ’ ಬಿಡುಗಡೆ

    ಎಸ್.ಟೀಂ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಎಲ್ ಲಕ್ಷ್ಮೀ ನಿರ್ಮಿಸುತ್ತಿರುವ ನ್ಯಾಚುರಲ್, ಥ್ರಿಲ್ಲರ್ ಜಾನರ್ ನ ಹೊಸಬರ ಸಿನಿಮಾ ಸುವರ್ಣ ಸುಂದರಿ. ಚರಿತ್ರೆ ಭವಿಷ್ಯತ್ತನ್ನು ಹಿಂಬಾಲಿಸುತ್ತದೆ ಎಂಬ ಅಡಿ ಬರಹವನ್ನು ಸುವರ್ಣ ಸುಂದರಿ ಹೊಂದಿದೆ. ಈ ಸಿನಿಮಾವನ್ನು ಎಂ.ಎಸ್.ಎನ್ ಸೂರ್ಯ ನಿರ್ದೇಶನ ಮಾಡುತ್ತಿದ್ದು, ಇದೇ ಮೇ 31ರಂದು ಸಿನಿಮಾ ರಿಲೀಸ್ ಆಗಲಿದೆ.

    ಇತ್ತೀಚಿಗೆ ಸುವರ್ಣ ಸುಂದರಿ ಚಿತ್ರತಂಡ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಡೈರೆಕ್ಟರ್ ಸೂರ್ಯ ಮಾತಾಡುತ್ತಾ, ಸುವರ್ಣಸುಂದರಿ ಚಿತ್ರದಲ್ಲಿ ವಿಎಫ್‍ಎಕ್ಸ್ ಗಾಗಿ ಒಂದು ವರ್ಷದವರೆಗೂ ಕೆಲಸ ನಡೆಯಿತು. ಟೈಂ ತೆಗೆದುಕೊಂಡರು. ಔಟ್ ಪುಟ್ ಅದ್ಭುತವಾಗಿ ಬಂದಿದೆ. ಈಗಿನ ಕನ್ನಡ ಚಿತ್ರಗಳಲ್ಲಿ ಸ್ಕ್ರೀನ್ ಪ್ಲೇ ಬೇಸ್ಡ್ ಚಿತ್ರಗಳಲ್ಲಿ ಒಳ್ಳೆಯ ಪ್ರಶಂಸೆಗಳಿವೆ. ಅದೇ ರೀತಿಯಲ್ಲಿ ಸುವರ್ಣಸುಂದರಿ ಮೂರು ಜನ್ಮಗಳ ಕಾನ್ಸೆಪ್ಟ್ ನಿಂದ ಇಂಟ್ರೆಸ್ಟಿಂಗ್ ಸ್ಕ್ರೀನ್ ಪ್ಲೇಯೊಂದಿಗೆ ಮಾಡಿದ್ದೇವೆ. ಪ್ರೇಕ್ಷಕರನ್ನು ಆಕರ್ಷಿಸುವುದರೊಂದಿಗೆ ಕಮರ್ಷಿಯಲ್ ಆಗಿ ಪಕ್ಕಾ ಹಿಟ್ ಆಗಬಹುದೆಂಬ ನಂಬಿಕೆಯಲ್ಲಿದ್ದೇವೆ ಎಂದಿದ್ದಾರೆ.

    ನಿರ್ಮಾಪಕಿ ಲಕ್ಷ್ಮೀ ಮಾತನಾಡಿ, ಸುವರ್ಣ ಸುಂದರಿ ಚಿತ್ರದ ಟ್ರೇಲರ್ ಸಾಧಾರಣ ಪ್ರೇಕ್ಷಕರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಎಲ್ಲರಿಗೂ ಇಷ್ಟವಾಗಿದೆ. ಬಜೆಟ್ ಹೆಚ್ಚಾದರೂ ಕ್ವಾಲಿಟಿ ಔಟ್ ಪುಟ್ ನೋಡಿದ ಮೇಲೆ ಸಿನಿಮಾ ಗೆಲ್ಲುವುದರ ಬಗ್ಗೆ ತುಂಬಾ ಕಾನ್ಫಿಡೆಂಟ್ ಆಗಿ ಇದ್ದೀವಿ. ಶೀಘ್ರದಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಿ ಮೇ 31ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎಂದರು.

    ಸುವರ್ಣ ಸುಂದರಿಯಲ್ಲಿ ಜಯಪ್ರದ, ಪೂರ್ಣ, ಸಾಕ್ಷಿ, ಇಂದ್ರ, ರಾಮ್ ಮುದ್ದು ಕುಮಾರಿ, ಸಾಯಿ ಕುಮಾರ್, ತಿಲಕ್, ಅವಿನಾಶ್, ಜಯ ಜಗದೀಶ್, ಸತ್ಯ ಪ್ರಕಾಶ್ ಇನ್ನಿತರರು ನಿಟಿಸಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ರಾಮ ಸುಂಕರ ಸಾಹಸ ಸಂಯೋಜನೆಯನ್ನು ಮಾಡುತ್ತಿದ್ದಾರೆ. ಯುವ ಮಹಂತಿ ಛಾಯಾಗ್ರಹಣ, ನಾಗು ಕಲಾ ನಿರ್ದೇಶನ, ಪ್ರವೀಣ್ ಪುಡಿ ಸಂಕಲನ ಈ ಚಿತ್ರಕ್ಕಿದೆ.

  • ಪೂಜಾ ಗಾಂಧಿಯ `ಸಂಹಾರಿಣಿ’ ಚಿತ್ರೀಕರಣ ಪೂರ್ಣ

    ಪೂಜಾ ಗಾಂಧಿಯ `ಸಂಹಾರಿಣಿ’ ಚಿತ್ರೀಕರಣ ಪೂರ್ಣ

    ಅಂದು `ದಂಡು ಪಾಳ್ಯ’ ಸಿನಿಮಾದಲ್ಲಿ ನಿರ್ಭಯವಾಗಿ ಅಭಿನಯಿಸಿದ್ದವರು ಪೂಜಾ ಗಾಂಧಿ. ಈಗ ಪೂಜಾ ಗಾಂಧಿ `ಸಂಹಾರಿಣಿ’ ಎಂಬ ಸಾಹಸ ಪ್ರಧಾನ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಚಿತ್ರದ ಚಿತ್ರೀಕರಣವೀಗ ಸಂಪೂರ್ಣಗೊಂಡಿದೆ.

    2 ಎಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ, ಕೆ ವಿ ಶಭರೀಶ್ ನಿರ್ಮಾಣ ಮಾಡಿರುವ, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ಕೆ ಜವಾಹರ್ ನಿರ್ದೇಶನ ಮಾಡಿದ್ದಾರೆ.

    ಬಾಲಿವುಡ್ ಸಿನಿಮಾಗಳ ಪ್ರಸಿದ್ಧ ಖಳ ನಟ ರಾಹುಲ್ ದೇವ್, ರವಿ ಕಾಳೆ, ಹ್ಯಾರಿ ಜೋಶ್ ಈ ಚಿತ್ರದಲ್ಲಿ ಖಳನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ನಟ ಕಿಶೋರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಹಾಗೂ ಅರುಣ್ ಪೋಷಕ ಕಲಾವಿದರಾಗಿ ಅಭಿನಯಿಸಿದ್ದಾರೆ.

    ಮಾಸ್ ಮಾದ ಸಾಹಸ, ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ಅಖಿಲ್ ಸಂಕಲನ, ವಿ 2 ಸಂಗೀತ ನಿರ್ದೇಶನ, ರಾಜೇಶ್ ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಗಂಗಾಧರ್ ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ಪ್ರಚಾರ ಕಲೆ ಲಕ್ಕಿ, ಸ್ಥಿರ ಛಾಯಾಗ್ರಹಣ ಸುರೇಶ್ ಮೆರ್ಲಿನ್ ಅವರು ಮಾಡಿದ್ದಾರೆ.

  • ಸಾವಿನಂಚಿನಲ್ಲಿದ್ದ ನಟ ಮತ್ತೆ ಬಣ್ಣ ಹಚ್ಚಿದ್ದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್!

    ಸಾವಿನಂಚಿನಲ್ಲಿದ್ದ ನಟ ಮತ್ತೆ ಬಣ್ಣ ಹಚ್ಚಿದ್ದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡೋದರಲ್ಲಿ ಸದಾ ಮುಂದು. ಆದರೆ ಎಡಗೈಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದೆಂಬಂಥಾ ಸೂಕ್ಷ್ಮವಂತಿಕೆಯನ್ನೂ ಕೂಡಾ ಅವರು ಮೈಗೂಡಿಸಿಕೊಂಡಿದ್ದಾರೆ. ಯಾರಿಗೆ ಅದೆಷ್ಟೇ ಸಹಾಯ ಮಾಡಿದರೂ ತಾವಾಗೇ ಎಂದೂ ಹೇಳಿಕೊಳ್ಳುವ ಜಾಯಮಾನವೂ ಅವರದ್ದಲ್ಲ. ಆದರೆ, ಆಗಾಗ ದರ್ಶನ್ ಅವರ ದೊಡ್ಡತನಗಳು ಫಲಾನುಭವಿಗಳ ಕಡೆಯಿಂದಲೇ ಜಾಹೀರಾಗೋದಿದೆ. ಇದೀಗ ಅಂಥಾದ್ದೇ ಒಂದು ಮನಮಿಡಿಯುವ ವೃತ್ತಾಂತವನ್ನು ಹಿರಿಯ ಖಳನಟ ಭರತ್ ಅವರು ಹೇಳಿಕೊಂಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾನವೀಯ ಮನಸ್ಥಿತಿ, ಸಹಾಯಹಸ್ತದ ಗುಣವನ್ನು ತಮ್ಮ ಅನುಭವದ ಮೂಲಕವೇ ಭಹಿರಂಗಗೊಳಿಸಿರುವವರು ಹಿರಿಯ ಖಳನಟ ಭರತ್. ಈ ಬಣ್ಣದ ಲೋಕದಲ್ಲಿ ಅದೆಷ್ಟೇ ಮಿರುಗಿದವರಾದರೂ ಏಕಾಏಕಿ ಮರೆಯಾಗಿ ಬಿಟ್ಟರೆ ಜನ ಮರೆತು ಬಿಡುತ್ತಾರೆ. ಚಿತ್ರರಂಗದ ಮಂದಿಯೇ ತಮ್ಮ ಜೊತೆಗಿದ್ದ ಜೀವದ ಕಥೆ ಏನಾಯ್ತೆಂಬುದರ ಬಗ್ಗೆಯೂ ಆಲೋಚಿಸೋದಿಲ್ಲ. ತಲೆಗೆ ಸ್ಟ್ರೋಕ್ ಆಗಿದ್ದರಿಂದಾಗಿ ಬೇಡಿಕೆಯಲ್ಲಿರುವಾಗಲೇ ಮರೆಗೆ ಸರಿದಿದ್ದ ಭರತ್ ಕೂಡಾ ಅಂಥಾ ಅನೇಕ ಸಂಕಟಗಳನ್ನ ಅನುಭವಿಸಿದ್ದಾರೆ. ಹಾಸಿಗೆ ಹಿಡಿದ ಸಂದರ್ಭದಲ್ಲಿ ತಾವೇ ಸಹಾಯಕ್ಕಾಗಿ ಕೈ ಚಾಚಿದರೂ ಯಾರೋ ಮಾನವೀಯತೆ ತೋರಿಸದಿದ್ದರಿಂದಾಗಿ ಬದುಕಿದ್ದೂ ಸತ್ತಂಥಾ ಸ್ಥಿತಿಯಲ್ಲಿ ಒದ್ದಾಡಿದ್ದಾರೆ.

    ಹೀಗೆ ಯಾವ ಮನುಷ್ಯನೂ ತಲುಪ ಬಾರದ ಸ್ಥಿತಿಗಿಳಿದು ಇನ್ನೇನು ಸಾವಿನ ತೆಕ್ಕೆಗೆ ಶರಣಾಗಬೇಕೆಂಬಷ್ಟರಲ್ಲಿ ನಟ ಭರತ್ ಅವರತ್ತ ಸಹಾಯಹಸ್ತವೊಂದು ಚಾಚಿಕೊಂಡಿತ್ತು. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾನವೀಯ ನಡೆ!

    ಯಾವುದೇ ಪ್ರಚಾರವನ್ನೂ ಬಯಸದೇ ದರ್ಶನ್ ಹಿರಿಯ ಖಳನಟ ಭರತ್ ಅವರ ಚಿಕಿತ್ಸೆಗೆ ನೆರವಾಗಿದ್ದರು. ಇದರಿಂದಾಗಿಯೇ ಭರತ್ ಎಲ್ಲ ಥರದ ಚಿಕಿತ್ಸೆ ಪಡೆದು ಮೆಲ್ಲಗೆ ಚೇತರಿಸಿಕೊಂಡು ಮೇಲೆದ್ದು ನಿಂತಿದ್ದಾರೆ. ದರ್ಶನ್ ಅವರ ಸಹಾಯವೇ ಅವರಿಗೆ ಮರುಹುಟ್ಟು ನೀಡಿದೆ. ಹೀಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕರ್ಣನಂಥಾ ಗುಣವನ್ನು ನೆನಪಿಸಿಕೊಂಡಿರೋ ಭರತ್ ಟೈಗರ್ ಪ್ರಭಾಕರ್, ಮಾಲಾಶ್ರೀ, ಶಿವರಾಜ್ ಕುಮಾರ್ ಸೇರಿದಂತೆ ಘಟಾನುಘಟಿಗಳ ಚಿತ್ರಗಳಲ್ಲಿ ಖಳ ನಟನಾಗಿ ಅಬ್ಬರಿಸಿದ್ದವರು. ಥರ ಥರದ ಪಾತ್ರಗಳನ್ನು ನಿರ್ವಹಿಸುತ್ತಲೇ ಪ್ರತಿಭಾವಂತ ನಟನಾಗಿ ಕೈ ತುಂಬಾ ಅವಕಾಶಗಳನ್ನು ಪಡೆದುಕೊಂಡಿದ್ದವರು.

    ಅವರೀಗ ಅನಾರೋಗ್ಯದ ವನವಾಸ ಮುಗಿಸಿಕೊಂಡಿದ್ದಾರೆ. ಮತ್ತೆ ಹಳೆಯ ರೀತಿಯಲ್ಲಿ ದೇಹವನ್ನು ಹುರಿಗೊಳಿಸಿಕೊಂಡು ಜಲ್ಲಿಕಟ್ಟು ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗೆ ತಾನು ಮರು ಹುಟ್ಟು ಪಡೆಯಲು ಕಾರಣವಾಗಿರೋ ದರ್ಶನ್ ಅವರನ್ನು ಕಂಡು ಮಾತಾಡಿಸಿ ಧನ್ಯವಾದ ಹೇಳಬೇಕೆಂಬ ಆಸೆ ಭರತ್ ಅವರದ್ದು.

  • ಮೋಹದ ಮಬ್ಬಿನಲ್ಲಿ ಮನುಷ್ಯತ್ವದ ಖನನ!

    ಮೋಹದ ಮಬ್ಬಿನಲ್ಲಿ ಮನುಷ್ಯತ್ವದ ಖನನ!

    ಬೆಂಗಳೂರು: ವಿಶಿಷ್ಟವಾದ ಶೀರ್ಷಿಕೆಯ ಕಾರಣದಿಂದಲೇ ಗಮನ ಸೆಳೆದು ಆ ನಂತರ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡುತ್ತಾ ಬಂದಿದ್ದ ಖನನ ಚಿತ್ರ ತೆರೆ ಕಂಡಿದೆ. ಆರಂಭಿಕವಾಗಿ ಈ ಟೈಟಲ್ಲಿನ ಮೇಲೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ನೂರ್ಮಡಿಸುವಂಥಾ ಅಮೋಘವಾದ ಕಥೆ, ಹೊಸಾ ಶೈಲಿಯ ನಿರೂಪಣೆ ಮತ್ತು ಕ್ಷಣ ಕ್ಷಣವೂ ಬೆರಗಾಗಿಸುವಂಥಾ ಕಸುಬುದಾರಿಕೆಯೊಂದಿಗೆ ಖನನ ನೋಡುಗರನ್ನೆಲ್ಲ ಮೋಡಿಗೀಡು ಮಾಡುವಲ್ಲಿ ಯಶ ಕಂಡಿದೆ.

    ಸಸ್ಪೆನ್ಸ್ ಥ್ರಿಲ್ಲರ್ ಮತ್ತು ರಿವೆಂಜ್ ಕಥನಗಳೇನು ಕನ್ನಡಕ್ಕೆ ಹೊಸತಲ್ಲ. ಆದರೆ ಹೊಸಾ ಆಲೋಚನೆ, ಕ್ರಿಯೇಟಿವಿಟಿ ಮತ್ತು ಹೊಸತೇನನ್ನೋ ಸೃಷ್ಟಿಸಬೇಕೆಂಬ ಇಂಗಿತವೇ ಮಾಮೂಲಾಗಿ ದಾಖಲಾಗ ಬಹುದಾದ ಕಥೆಯನ್ನು ಡಿಫರೆಂಟಾಗಿಸುತ್ತದೆ. ಇದೇ ರೀತಿ ನಿರ್ದೇಶಕ ರಾಧಾ ಅವರು ಖನನವನ್ನು ಮಾಮೂಲಿ ಜಾಡಿನಲ್ಲಿ ಕಳೆದು ಹೋಗದಂತೆ ಪ್ರತೀ ಕ್ಷಣವೂ ಎಚ್ಚರ ವಹಿಸುತ್ತಲೇ ರೂಪಿಸಿದ್ದಾರೆ. ನಾಯಕ ಆರ್ಯವರ್ಧನ್ ಸೇರಿದಂತೆ ತಾರಾ ಬಳಗ ಮತ್ತು ತಾಂತ್ರಿಕ ವರ್ಗವೂ ರಾಧಾರ ಕನಸಿಗೆ ಸಾಥ್ ನೀಡಿದ್ದಾರೆ. ಈ ಕಾರಣದಿಂದಲೇ ಖನನ ಪ್ರೇಕ್ಷಕರನ್ನೆಲ್ಲ ಹೊಸ ಜಾಡಿನಲ್ಲಿಯೇ ತಾಕಿ ಮುದಗೊಳಿಸಿದೆ.

    ಆರ್ಯವರ್ಧನ್ ಅಜಯ್ ಎಂಬ ಪಾತ್ರಕ್ಕೆ ಜೀವ ತುಂಬಿದರೆ, ನಾಯಕಿ ಕರಿಷ್ಮಾ ಬರುಹಾ ನೈನಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಥೆ ಆರಂಭದಲ್ಲಿ ರೊಮ್ಯಾಂಟಿಕ್ ಮೂಡಿನಲ್ಲಿಯೇ ಬಿಚ್ಚಿಕೊಳ್ಳುತ್ತೆ. ನಾಯಕ ಅಜೇಯ್ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥ ಪ್ರಜ್ಞೆ ತುಂಬಿಕೊಂಡು ಬೆಳೆದ ಹುಡುಗ. ಆತನಿಗೆ ನೈನಾ ಜೊತೆಯಾಗಿ ಎಲ್ಲವೂ ಸುಂದರವಾಗಿರುತ್ತೆ. ನಾಯಕನ ಪಾಲಿಗೆ ತನ್ನನ್ನು ಆರ್ಥಿಕವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡಿದ ಬ್ಯುಸಿನೆಸ್ ಮತ್ತು ಮುದ್ದಿನ ಮಡದಿಯೇ ಪ್ರಪಂಚ. ಆದರೆ ಹೆಂಡತಿ ಮಾತ್ರ ಮೆಲ್ಲಗೆ ಗಂಡನಿಂದ ದೂರ ಸರಿಯಲಾರಂಭಿಸುತ್ತಾಳೆ. ಆಕೆ ಗಂಡನ ಪ್ರಾಂಜಲ ಪ್ರೀತಿಯೂ ಉಸಿರುಗಟ್ಟಿಸಿದಂತಾಗಿ ಕೊಸರಾಡಲಾರಂಭಿಸುತ್ತಾಳೆ.

    ಇದಕ್ಕೆ ಕಾರಣ ಆಕೆಯ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಪರ ಪುರುಷ. ಈ ಅನೈತಿಕ ಸಂಬಂಧದಿಂದಲೇ ಕಥೆಯ ದಿಕ್ಕು ದೆಸೆಗಳೇ ಬದಲಾಗುತ್ತೆ. ಆ ಪರಪುರುಷನಿಗೆ ಕೇವಲ ನೈನಾ ಮೇಲಷ್ಟೇ ಮೋಹವಿರೋದಿಲ್ಲ, ಆಕೆಯ ಗಂಡ ಅಂದರೆ ನಾಯಕನ ಆಸ್ತಿಯ ಮೇಲೂ ಕಣ್ಣಿರುತ್ತೆ. ಆದ್ದರಿಂದಲೇ ಆತನನ್ನು ಕೊಲ್ಲುವಂತೆ ಪ್ರೇಯಸಿಗೆ ದುಂಬಾಲು ಬೀಳುತ್ತಿರುತ್ತಾನೆ. ಮೋಹಕ್ಕೆ ಬಿದ್ದ ಈಕೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ಗಂಡನನ್ನು ಕೊಲೆ ಮಾಡಲೂ ಮುಂದಾಗುತ್ತಾಳೆ. ಆ ನಂತರ ಏನಾಗುತ್ತೆ ಎಂಬ ಕುತೂಹಲವನ್ನು ಥೇಟರಿನಲ್ಲಿಯೇ ಶಮನ ಮಾಡಿಕೊಂಡರೊಳಿತು. ಈ ಕುತೂಹಲವಿಟ್ಟುಕೊಂಡು ಥೇಟರು ಹೊಕ್ಕವರನ್ನೆಲ್ಲ ಖನನದ ಕಥೆ ಬೇರೆಯದ್ದೇ ರೀತಿಯಲ್ಲಿ ಕಾಡುತ್ತದೆ. ಮೋಹದ ಮಬ್ಬಿನಲ್ಲಿ ಕಡೆಯಾದರೂ ಮನುಷ್ಯತ್ವ ಬದುಕಿಕೊಳ್ಳುತ್ತಾ ಅನ್ನೋದು ಪ್ರಧಾನ ಆಕರ್ಷಣೆ.

    ಈ ಮೂಲಕ ರಾಧಾ ಅವರು ನಿರ್ದೇಶಕರಾಗಿಯೂ ಗಮನ ಸೆಳೆದಿದ್ದಾರೆ. ನಾಯಕ ಆರ್ಯವರ್ಧನ್ ಮೊದಲ ಚಿತ್ರದಲ್ಲಿಯೇ ಚೆಂದದ ನಟನೆ ಕೊಟ್ಟಿದ್ದಾರೆ. ಹೀರೋ ಆಗಿ ನೆಲೆ ನಿಲ್ಲುವ ಸೂಚನೆಯನ್ನೂ ರವಾನಿಸಿದ್ದಾರೆ. ನಿರ್ಮಾಪಕ ಶ್ರೀನಿವಾಸ ರಾವ್ ಅವರ ಶ್ರಮವೂ ಸಾರ್ಥಕವಾದಂತಾಗಿದೆ. ಒಟ್ಟಾರೆಯಾಗಿ ಖನನ ಬೇರೆಯದ್ದೇ ರೀತಿಯ ಥ್ರಿಲ್ಲರ್ ಅನುಭವವೊಂದನ್ನು ನೋಡುಗರಿಗೆ ದಾಟಿಸುತ್ತೆ. ಅಪ್ಪಟ ಮನರಂಜನಾತ್ಮಕ ಚಿತ್ರವಾಗಿ ಗಮನ ಸೆಳೆಯುತ್ತೆ.

    ರೇಟಿಂಗ್: 3.5/5

  • ನಿಜಕ್ಕೂ ಕನ್ನಡಕ್ಕೆ ಬರ್ತಾಳಾ ರೌಡಿ ಬೇಬಿ?

    ನಿಜಕ್ಕೂ ಕನ್ನಡಕ್ಕೆ ಬರ್ತಾಳಾ ರೌಡಿ ಬೇಬಿ?

    ಒಂದೆಡೆ ಪರಭಾಷಾ ನಟಿಯರಿಗೆ ಮಣೆ ಹಾಕೋದರ ವಿರುದ್ಧ ಕನ್ನಡಿಗರಿಂದ ಪ್ರತಿರೋಧ ವ್ಯಕ್ತವಾಗುತ್ತಾ ಬಂದಿದೆ. ಆದರೆ ಪರಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ಕೆಲ ನಟಿಯರು ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಇಂಗಿತವೂ ಕನ್ನಡದ ಪ್ರೇಕ್ಷಕರಲ್ಲಿಯೇ ಇರುತ್ತೆ. ಆಯಾ ಕಾಲ ಘಟ್ಟಕ್ಕೆ ಫೇಮಸ್ ಆದ ನಟಿಯರು ಇನ್ನೇನು ಕನ್ನಡಕ್ಕೆ ಬಂದೇ ಬಿಟ್ಟರು ಎಂಬಂತೆ ಸುದ್ದಿ ಹಬ್ಬಿಸೋದು ಮಾಮೂಲಿ. ಆದರೆ ಸಾಯಿಪಲ್ಲವಿಯ ಅಭಿಮಾನಿಗಳು ಮಾತ್ರ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಲಿರೋದು ನಿಜ ಎಂದೇ ನಂಬಿ ಕೂತಿದ್ದಾರೆ.

    ಸಾಯಿಪಲ್ಲವಿ ಮಲೆಯಾಳದ ಪ್ರಸಿದ್ಧ ಚಿತ್ರ ಪ್ರೇಮಂ ಮೂಲಕ ಬೆಳಕಿಗೆ ಬಂದ ಪ್ರತಿಭಾನ್ವಿತ ನಟಿ. ಇದೊಂದು ಚಿತ್ರದ ನಂತರ ಈ ಹುಡುಗಿ ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಪಡೆದುಕೊಂಡ ರೀತಿ ಎಂಥವರೂ ಅಚ್ಚರಿಗೊಳ್ಳುವಂತಿದೆ. ಇಂಥಾ ಸಾಯಿಪಲ್ಲವಿಯನ್ನು ನಿರ್ದೇಶಕ ಮಹೇಶ್ ತಮ್ಮ ಮದಗಜ ಚಿತ್ರಕ್ಕೆ ನಾಯಕಿಯಾಗಿ ಕರೆತರುತ್ತಾರೆಂಬ ಮಾತು ಈಗೊಂದಷ್ಟು ದಿನಗಳಿಂದ ಕೇಳಿ ಬರುತ್ತಿದೆ.

    ಇದರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ವಿಚಾರದಲ್ಲಿಯೂ ಸಾಯಿಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ ಇದುವರೆಗೂ ಕೂಡಾ ಚಿತ್ರತಂಡದ ಕಡೆಯಿಂದ ಯಾರೊಬ್ಬರೂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ.

    ಆದರೆ ಸಾಯಿಪಲ್ಲವಿಯನ್ನು ಮನಸಾರೆ ಆರಾಧಿಸುವ ಒಂದಷ್ಟು ಕನ್ನಡದ ಅಭಿಮಾನಿಗಳು ಮಾತ್ರ ಆಕೆ ಬಂದೇ ಬರುತ್ತಾರೆಂಬ ನಂಬಿಕೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ತೆರೆ ಕಂಡಿದ್ದ ತಮಿಳಿನ ಮಾರಿ ಚಿತ್ರದ ರೌಡಿ ಬೇಬಿ ಹಾಡಿನ ಮೂಲಕವೇ ಪಡ್ಡೆಗಳನ್ನು ಹುಚ್ಚೆಬ್ಬಿಸಿರೋ ಸಾಯಿಪಲ್ಲವಿ ಕನ್ನಡಕ್ಕೆ ನಿಜಕ್ಕೂ ಬರ್ತಾರಾ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆಯಷ್ಟೇ.

  • `ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಮೇ 10ಕ್ಕೆ ಬಿಡುಗಡೆ

    `ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಮೇ 10ಕ್ಕೆ ಬಿಡುಗಡೆ

    ಸಾಮಾಜಿಕ ಕಳಕಳಿ ಇರುವ ಚಿತ್ರ `ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಮೇ 10ಕ್ಕೆ ಬಿಡುಗಡೆಯಾಗಲಿದೆ. ವಿಶೇಷ ಚೇತನರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಎಚ್ ಸೋಮಶೇಖರ್ ಅವರ ಹೆತ್ತವರು ಅಂಗವೈಕಲ್ಯ ಹೊಂದಿದವರು. ನಿರ್ದೇಶಕ ರಾಜ ರವಿ ವರ್ಮಾ ಸಹಾ ವಿಕಲಚೇತನರಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲಿ ಭೋಗಪುರದ ಅಂಧ ಬಾಲಕ ಮಾಸ್ಟರ್ ಮಹೇಶ್ ಶುಕ್ಲಾಚಾರಿ ಪಾತ್ರಧಾರಿಯಾಗಿದ್ದಾನೆ. ಜಕಣಾಚಾರಿ ಪಾತ್ರಧಾರಿಯಾಗಿರುವ ಲಿಂಗರಾಜಪುರದ ಹುಡುಗ ಮಾಸ್ಟರ್ ಜಯ್ಯದ್ ಕೂಡಾ ವಿಶೇಷಚೇತನರಾಗಿದ್ದಾರೆ.

    ನಿರ್ದೇಶಕ ರಾಜ ರವಿ ವರ್ಮಾ ಈ ಚಿತ್ರಕ್ಕೆ `ಎಂಡೋಸಲ್ಫಾನ್’ ವಿಷ ರಾಸಾಯನಿಕದಿಂದ ಅಂಗವೈಕಲ್ಯಕ್ಕೆ ತುತ್ತಾಗಿರುವವರ ಗಂಭೀರ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಕಥೆ, ಚಿತ್ರಕಥೆ ರಚಿಸಿದ್ದಾರೆ. ಮಾಸ್ಟರ್ ವಿನಯ್ ಸೂರ್ಯ, ಮಾಸ್ಟರ್ ಕಿರಣ್, ಮುನಿ, ಮೂಗು ಸುರೇಶ್, ನೀನಾಸಮ್ ಅಶ್ವಥ್, ಮನದೀಪ್ ರಾಯ್, ಗಿರೀಶ್ ಶೆಟ್ಟಿ, ಶಿವು, ಮೀನ, ಪಂಕಜ ರವಿಶಂಕರ್, ಮಂಜು ಸೂರ್ಯ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

    ರಾಜ್ ಪ್ರಿಯ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎ ರಾಮು. ಸಾಮ್ರಾಟ್ ಎಸ್ ಛಾಯಾಗ್ರಹಣ, ಸಿ ಜೆ ಅನಿಲ್ ಸಂಗೀತ, ಡಾ ವಿ.ನಾಗೇಂದ್ರ ಪ್ರಸಾದ್ ಮತ್ತು ರಾಜ ರವಿ ವರ್ಮ ಗೀತ ಸಾಹಿತ್ಯ ಒದಗಿಸಿದ್ದಾರೆ.

  • ನಾಲ್ಕು ತಲೆಮಾರಿನ ಕಥನ ‘ಸುವರ್ಣ ಸುಂದರಿ’!

    ನಾಲ್ಕು ತಲೆಮಾರಿನ ಕಥನ ‘ಸುವರ್ಣ ಸುಂದರಿ’!

    ಎರಡು ವರ್ಷದ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ‘ಸುವರ್ಣ ಸುಂದರಿ’ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಕ್ರಿ.ಶ. 1508 ರಿಂದ 2018ರವರೆಗಿನ ನಾಲ್ಕು ತಲೆಮಾರಿನ ಕತೆ ಈ ಚಿತ್ರದಲ್ಲಿದೆ. ಶ್ರೀ ಕೃಷ್ಣದೇವರಾಯರ ಅವಧಿಯಲ್ಲಿ ರಾಜಾ ಮಹಾದೇವರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಈ ಚಿತ್ರದ ಸನ್ನಿವೇಶಗಳಿಗೆ ವಿಶೇಷವಾಗಿ ಬಳಸಲಾಗಿದೆ.

    ಮೈ ನವಿರೇಳಿಸುವ ರೋಚಕ ಸ್ಟಂಟ್ಸ್ ಗಳು ಈ ಚಿತ್ರದಲ್ಲಿರಲಿವೆ. ಸುವರ್ಣ ಸುಂದರಿಗಾಗಿ ಕೇರಳ, ಹೈದರಾಬಾದ್, ಬೀದರ್, ವಿಧಾನಸೌಧ ರಸ್ತೆ, ನೈಸ್ ರೋಡ್‍ಗಳಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕತೆಗೆ ಪೂರಕವಾಗಿ 50 ನಿಮಿಷ ಗ್ರಾಫಿಕ್ಸ್ ಬಳಸಲಾಗಿದೆ. ನಾಯಕಿಯಾಗಿ ಡೆಹರಾಡೂನ್ ಮೂಲದ ಸಾಕ್ಷಿ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾರಂಭದ ಅವಧಿಯಲ್ಲಿ ಸಾಯಿಕುಮಾರ್ ಪಾತ್ರವಿರುತ್ತದೆ. ಹಾಗೆಯೇ 1960ರ ಕಲೆಕ್ಟರ್ ಪಾತ್ರದಲ್ಲಿ ತಿಲಕ್ ನಟಿಸಿದ್ದಾರೆ. ಮತ್ತೊಬ್ಬ ನಾಯಕಿ ಪೂರ್ಣ ಮತ್ತು ಜಯಪ್ರದಾ ಪಾತ್ರದ ವಿವರವನ್ನು ಚಿತ್ರತಂಡ ಇನ್ನೂ ಜಾಹೀರು ಮಾಡಿಲ್ಲ. ಈ ಚಿತ್ರದಲ್ಲಿರುವ ಎರಡು ಹಾಡುಗಳಿಗೆ ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ.

    ಇತಿಹಾಸ ವಿಷಯದಲ್ಲಿ ಪದವಿ ಪಡೆದುಕೊಂಡಿರುವ ಎಂ.ಎಸ್.ಎನ್.ಸೂರ್ಯ ಕತೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅವರ ಸಹೋದರಿ ನಿರ್ಮಾಪಕಿಯಾಗಿದ್ದಾರೆ. ಬಾಹುಬಲಿ-2 ಚಿತ್ರದ ಸೆಕೆಂಡ್ ಕ್ಯಾಮರಾಮೆನ್ ಯಲ್ಲಮಹಂತಿ ಈಶ್ವರ್ ಛಾಯಾಗ್ರಹಣವಿದ್ದು, ರಾಮ್ ಸುಂಕರ ಸಾಹಸ ಸಂಯೋಜಿಸಿದ್ದಾರೆ.

    ಅನುಷ್ಕಾ ಶೆಟ್ಟಿ ಅಭಿನಯದ ಆರುಂಧತಿ ನಿರ್ಮಾಣದ ಸಂದರ್ಭದಲ್ಲಿ ತಂತ್ರಜ್ಞಾನ ಈಗಿನಷ್ಟು ಮುಂದುವರಿದಿರಲಿಲ್ಲ. ಆದರೆ ಸುವರ್ಣ ಸುಂದರಿಗೆ ಈಗಿನ ಅಪ್‍ಡೇಟೆಡ್ ಟೆಕ್ನಾಲಜಿಯನ್ನು ಬಳಸಿಕೊಂಡಿರುವುದರಿಂದ ದೃಶ್ಯಗಳು ಮತ್ತಷ್ಟು ನೈಜವಾಗಿ ಮೂಡಿಬಂದಿವೆ. ಇದೆಲ್ಲದರ ಪರಿಣಾಮವೆನ್ನುವಂತೆ ಆರು ಕೋಟಿಯಲ್ಲಿ ನಿರ್ಮಾಣಗೊಳ್ಳಬೇಕಿದ್ದ ಸುವರ್ಣ ಸುಂದರಿ ಪ್ರಚಾರದ ಹಂತಕ್ಕೆ ಬರುವ ಹೊತ್ತಿಗೆ ಹತ್ತು ಕೋಟಿಗೆ ಬಂದು ನಿಂತಿದೆಯಂತೆ. ಆದರೂ ಇದಕ್ಕೆಲ್ಲಾ ಚಿಂತೆ ಮಾಡದೆ ಎಂ.ಎನ್.ಲಕ್ಷೀ ಖರ್ಚು ಮಾಡಿದ್ದಾರೆ. ಈ ಚಿತ್ರವು ಇದೇ 31ರಂದು ರಾಜ್ಯದ್ಯಂತ ತೆರೆ ಕಾಣುವ ಸಾಧ್ಯತೆ ಇದೆ.

  • ಏನೋ ಹೇಳ ಹೊರಟಿದ್ದಾರೆ ಖನನ ಹೀರೋ!

    ಏನೋ ಹೇಳ ಹೊರಟಿದ್ದಾರೆ ಖನನ ಹೀರೋ!

    ಬೆಂಗಳೂರು: ಇದೀಗ ಖನನ ಎಂಬ ವಿಶಿಷ್ಟವಾದ ಟೈಟಲ್ ಹೊಂದಿರೋ ಚಿತ್ರವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಹೆಸರು ಕೇಳಿದಾಕ್ಷಣವೇ ಇದು ಯಾವ ಬಗೆಯ ಚಿತ್ರ, ಆರ್ಟ್ ಮೂವಿಯಾ ಅಂತೆಲ್ಲ ನಾನಾ ಪ್ರಶ್ನೆಗಳಿಗೆ ಕಾರಣವಾಗೋ ಖನನ ಅಪ್ಪಟ ಕಮರ್ಶಿಯಲ್ ಸೂತ್ರಗಳೊಂದಿಗೆ ಬಿಡುಗಡೆಗೆ ಸಜ್ಜಾಗಿರೋ ಚಿತ್ರ. ಇದೇ ಮೇ ತಿಂಗಳಲ್ಲಿ ರಿಲೀಸ್ ಆಗಲಿರುವ ಖನನ ತನ್ನೊಳಗೆ ಅನೇಕ ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ.

    ರಾಧಾ ನಿರ್ದೇಶನ ಮಾಡಿರೋ ಖನನ ಮೂಲಕ ಹೀರೋ ಆಗಿ ಎಂಟ್ರಿ ಕೊಡಲು ಆರ್ಯವರ್ಧನ್ ಸಜ್ಜಾಗಿದ್ದಾರೆ. ಈಗಾಗಲೇ ಮಾರ್ಚ್ 22 ಚಿತ್ರದ ಸಲ್ಮಾನ್ ಎಂಬ ಪಾತ್ರದ ಮೂಲಕ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿರೋ ಆರ್ಯವರ್ಧನ್ ಪಾಲಿಗೆ ಹೀರೋ ಆಗಿ ಇದು ಮೊದಲ ಚಿತ್ರ. ತಾನು ಹೀರೋ ಆಗಿ ಲಾಂಚ್ ಆಗೋ ಚಿತ್ರ ವಿಶೇಷ ಕಥೆ ಹೊಂದಿರಬೇಕು ಮತ್ತು ಅದು ಸಂದೇಶವನ್ನೂ ಕೂಡಾ ರವಾನಿಸುವಂತಿರಬೇಕು ಅನ್ನೋದು ಆರ್ಯವರ್ಧನ್ ಅವರ ಆಳದ ಕನಸು. ಅದಕ್ಕೆ ತಕ್ಕುದಾದ ಕಥೆಯನ್ನು ಖನನ ಒಳಗೊಂಡಿದೆಯಂತೆ.

    ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನೋಡಿದವರನ್ನೆಲ್ಲ ಅಚ್ಚರಿಗೀಡು ಮಾಡಲಿರೋ ಇದರಲ್ಲಿ ಆರ್ಯವರ್ಧನ್ ಹಲವಾರು ಶೇಡುಗಳಿರೋ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವೇ ಎಲ್ಲರಿಗೂ ಬದುಕಿನ ಕೆಲ ಗುಟ್ಟುಗಳನ್ನು ಹೇಳುವಂತಿದೆ. ಪ್ರತಿಕ್ಷಣವೂ ಕುತೂಹಲ ಆಚೀಚೆ ಆಗದಂತೆ ಬಿಚ್ಚಿಕೊಳ್ಳುತ್ತಾ ಸಾಗಲಿರೋ ಈ ಚಿತ್ರದಲ್ಲಿ ಹೀರೋ ಪ್ರೇಕ್ಷಕರೊಂದಿಗೆ ನೇರಾ ನೇರ ಕನೆಕ್ಟ್ ಆಗುತ್ತಾನೆ. ಅದೇ ಹೊತ್ತಲ್ಲಿ ಪ್ರೇಕ್ಷಕರಿಗೇನೋ ಹೇಳಲಿದ್ದಾನೆ. ಆ ರೋಚಕ ವಿಚಾರವೇನು ಅನ್ನೋದು ಇದೇ ಮೇ 10ರಂದು ಜಾಹೀರಾಗಲಿದೆ.