Tag: ಕನ್ನಡ ಸಿನೆಮಾ ವಿಮರ್ಶೆ

  • ಮೆರೆದಾಡದೆಯೂ ಮನಸು ಮುಟ್ಟೋ ಪಾರ್ವತಮ್ಮನ ಮಗಳು!

    ಮೆರೆದಾಡದೆಯೂ ಮನಸು ಮುಟ್ಟೋ ಪಾರ್ವತಮ್ಮನ ಮಗಳು!

    ಬೆಂಗಳೂರು: ಹರಿಪ್ರಿಯಾ ನಟನೆಯ ಇಪ್ಪತೈದನೇ ಚಿತ್ರವೆಂಬುದೂ ಸೇರಿದಂತೆ ನಾನಾ ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಯಾವುದೇ ಅಬ್ಬರವಿಲ್ಲದ ನಿರೂಪಣೆ, ನಮ್ಮ ಆಸುಪಾಸಲ್ಲಿಯೇ ಕಥೆ ಘಟಿಸುತ್ತಾ ಪಾತ್ರಗಳು ಚಲಿಸಿದಂತೆ ಭಾಸವಾಗುವಷ್ಟು ವಾಸ್ತವಿಕ ದೃಶ್ಯಗಳ ಜೊತೆ ಜೊತೆಗೇ ಡೋಂಟ್ ಕೇರ್ ಸ್ವಭಾವದ ಪಾರ್ವತಮ್ಮನ ಮಗಳ ಸ್ಟೋರಿ ಬಿಚ್ಚಿಕೊಳ್ಳುತ್ತೆ.

    ಜೆ ಶಂಕರ್ ಇದೊಂದು ಭಿನ್ನ ಶೈಲಿಯ ಕಮರ್ಶಿಯಲ್ ಚಿತ್ರ ಎಂಬ ಸುಳಿವನ್ನು ಆರಂಭದಲ್ಲಿಯೇ ಜಾಹೀರು ಮಾಡಿದ್ದರು. ಆದ್ದರಿಂದಲೇ ಮಾಮೂಲಿ ಮೆಥಡ್ಡಿನ ನಾಯಕಿ ಪ್ರಧಾನ ಚಿತ್ರಗಳಿಗಿಂತ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಈ ಸಿನಿಮಾ ಪ್ರೇಕ್ಷಕರಿಗೆಲ್ಲ ಆಪ್ತವಾಗುತ್ತೆ.

    ನಾಯಕಿ ಶಾಲಾ ಕಾಲೇಜು ಹಂತದಿಂದಲೇ ಬೋಲ್ಡ್ ವ್ಯಕ್ತಿತ್ವ ಹೊಂದಿರುವಾಕೆ. ಈಕೆಯ ಖದರಿನ ಮುಂದೆ ಗಂಡು ಹೈಕಳೇ ಮಂಕು ಬಡಿಯುತ್ತವೆ. ಅಂಥಾ ಡೋಂಟ್ ಕೇರ್ ಸ್ವಭಾವದ ಹುಡುಗಿ ಪಾರ್ವತಮ್ಮನ ಮುದ್ದಿನ ಮಗಳು. ಆಕೆಯ ಬದುಕಲ್ಲಿಯೂ ಕೂಡಾ ಹಲವಾರು ನೋವು, ನಿರಾಸೆಗಳಿರುತ್ತವೆ. ಆದರೆ ಅದ್ಯಾವುದೂ ಕೂಡಾ ತನ್ನ ಪಾದರಸದಂಥಾ ವ್ಯಕ್ತಿತ್ವವನ್ನು ಘಾಸಿಗೊಳಿಸದಂತೆ ನೋಡಿಕೊಂಡು ಮುಂದುವರೆಯೋ ಪಾರ್ವತಮ್ಮನ ಮಗಳು ಕಡೆಗೂ ಕಷ್ಟಪಟ್ಟು ಓದಿ ಪೊಲೀಸ್ ಅಧಿಕಾರಿಯಾಗುತ್ತಾಳೆ. ಎಂಥಾ ಕ್ಲಿಷ್ಟಕರವಾದ ಕೇಸನ್ನೇ ಆದರೂ ಲೀಲಾಜಾಲವಾಗಿ ಬೇಧಿಸೋ ಚಾಕಚಕ್ಯತೆಯೊಂದಿಗೆ ಹೆಸರುವಾಸಿಯಾಗುತ್ತಾಳೆ.

    ಇಂಥಾ ಪೊಲೀಸ್ ಅಧಿಕಾರಿಣಿ ಪಾರ್ವತಮ್ಮನ ಮಗಳ ಮುಂದೆ ಭಯಾನಕವಾದೊಂದು ಪ್ರಕರಣ ತನಿಖೆಗಾಗಿ ಬರುತ್ತದೆ. ಅದು ವೈದ್ಯೆಯೊಬ್ಬಳ ಅಸಹಜ ಸಾವಿನ ಪ್ರಕರಣ. ಅದರಲ್ಲಿ ವೈದ್ಯಕೀಯ ವರದಿ ಸೇರಿದಂತೆ ಎಲ್ಲವೂ ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಈ ಪ್ರಕರಣದ ಸಿಕ್ಕನ್ನು ಪಾರ್ವತಮ್ಮನ ಮಗಳು ಹೇಗೆ ಬಿಡಿಸುತ್ತಾಳೆಂಬುದರ ಸುತ್ತ ಈ ಕಥೆ ರೋಚಕವಾಗಿ, ಯಾವುದೇ ಅಬ್ಬರಗಳಿಲ್ಲದೆ ಸಾಗುತ್ತೆ.

    ಇಂಥಾ ಪೊಲೀಸ್ ವೃತ್ತಿ, ಇನ್ವೆಸ್ಟಿಗೇಷನ್ನುಗಳಾಚೆಗೆ ಪಾರ್ವತಮ್ಮನ ಮಗಳ ಕಥೆ ಮನಸಿಗೆ ನಾಟುತ್ತೆ. ಆಕೆ ಒಳಿತೆಲ್ಲವನ್ನು ಮಗುಮನಸಿನಿಂದ ಸ್ವೀಕರಿಸುತ್ತಾ, ಅನ್ಯಾಯವನ್ನು ನಿಂತ ನಿಲುವಿನಲ್ಲಿಯೇ ಪ್ರತಿಭಟಿಸೋ ಹೆಣ್ಣುಮಗಳಾಗಿ ಎಲ್ಲರ ಮನಸಿಗಿಳಿಯುತ್ತಾಳೆ. ತೀರಾ ಯಾರಾದರೂ ಹುಡುಗ ಇಷ್ಟವಾದರೆ ನೇರಾನೇರ ಹೋಗಿ ಪ್ರಪೋಸ್ ಮಾಡಿ ಬಿಡುವಂಥಾ ಈ ಗಟ್ಟಿಗಿತ್ತಿಯ ಪಾಲಿಗೆ ಅಮ್ಮ ಪಾರ್ವತಮ್ಮ ನಿಜವಾದ ಶಕ್ತಿ. ಆ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸಿದ್ದಾರೆ. ತಾಯ್ತನದ ಎಲ್ಲ ಭಾವಗಳನ್ನೂ ಹೊಂದಿರೋ ಈ ಪಾತ್ರದ ಮೂಲಕ ಅವರ ಎಲ್ಲರನ್ನೂ ಆವರಿಸಿಕೊಳ್ಳುತ್ತಾರೆ.

    ನಾಯಕಿ ಪ್ರಧಾನ ಚಿತ್ರಗಳಲ್ಲಿರೋ ಯಾವ ಅಬ್ಬರವೂ ಇಲ್ಲಿಲ್ಲ. ಆದರೆ ನಿರ್ದೇಶಕ ಜೆ ಶಂಕರ್ ಅವರು ಅದೊಂದು ಕೊರತೆ ಅನ್ನಿಸದಂತೆ ದೃಶ್ಯ ಕಟ್ಟಿದ್ದಾರೆ. ಯಾಕೆಂದರೆ ಹರಿಪ್ರಿಯಾ ಪಾರ್ವತಮ್ಮನ ಮಗಳಾಗಿ ಯಾವ ಮೆರೆದಾಟವೂ ಇಲ್ಲದೆ ನೋಡುಗರ ಮನಸು ಮುಟ್ಟುತ್ತಾರೆ. ನಿರ್ಮಾಪಕರಾದ ಶಶಿಧರ್ ಕೆ ಎಂ ಅವರೂ ಕೂಡಾ ಡಾಕ್ಟರ್ ಪಾತ್ರದಲ್ಲಿ ಮಿಂಚಿದ್ದಾರೆ. ತರಂಗ ವಿಶ್ವ ಸೇರಿದಂತೆ ಎಲ್ಲರೂ ತಂತಮ್ಮ ಪಾತ್ರಗಳಿಗೇ ಬೇರೆಯದ್ದೇ ಟಚ್ ನೀಡಿದ್ದಾರೆ. ಈ ಮೂಲಕವೇ ಜೆ ಶಂಕರ್ ಭಿನ್ನ ಬಗೆಯ, ಕ್ರಿಯೇಟಿವ್ ನಿರ್ದೇಶಕರಾಗಿ ನೆಲೆ ನಿಲ್ಲುವ ಸೂಚನೆಯನ್ನೂ ರವಾನಿಸಿದ್ದಾರೆ. ಎಂಥಾ ಪಾತ್ರಗಳಿಗಾದರೂ ಹೊಂದಿಕೊಳ್ಳುವ ಹರಿಪ್ರಿಯಾ ಪಾರ್ವತಮ್ಮನ ಮಗಳಾಗಿ ಮತ್ತಷ್ಟು ಇಷ್ಟವಾಗುತ್ತಾರೆ. ಇದು ಎಲ್ಲರೂ ನೋಡಲೇ ಬೇಕಾದ ವಿಶಿಷ್ಟವಾದ ಚಿತ್ರ.

    ರೇಟಿಂಗ್: 3.5/5

  • ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ಬೆಂಗಳೂರು: ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಚಿತ್ರ ತೆರೆ ಕಂಡಿದೆ. ಬಿಡುಗಡೆಯ ಕಡೆಯ ಕ್ಷಣದಲ್ಲಿ ಈ ಸಿನಿಮಾ ಬಗ್ಗೆ ಗಾಢವಾದೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ಎಲ್ಲ ದಿಕ್ಕುಗಳಿಂದಲೂ ತಣಿಸುವಂಥಾ ಎಲಿಮೆಂಟುಗಳೊಂದಿಗೆ, ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ನೋಡುಗರನ್ನು ಸೆಳೆದಿಟ್ಟುಕೊಂಡು ಸಾಗುವ ವೀಕೆಂಡ್ ಒಂದೊಳ್ಳೆ ಚಿತ್ರವಾಗಿ ಎಲ್ಲರನ್ನೂ ತಾಕಿದೆ. ಸಾಮಾನ್ಯವಾಗಿ ಸಾಮಾಜಿಕ ಸಂದೇಶವನ್ನು ಕಮರ್ಶಿಯಲ್ ಜಾಡಿನಲ್ಲಿಯೇ ಹೇಳೋದು ಅಪರೂಪ. ಆದರೆ ಭರ್ಜರಿ ಕಾಮಿಡಿ, ಆಕ್ಷನ್, ಲವ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರೋ ವೀಕೆಂಡಿನಲ್ಲಿ ನಮ್ಮ ನಡುವಿದ್ದೂ ನಾವ್ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ವಿಚಾರಗಳನ್ನು ಪರಿಣಾಮಕಾರಿಯಾಗಿಯೇ ದೃಷ್ಯೀಕರಿಸಲಾಗಿದೆ.

    ಹೊರ ಜಗತ್ತಿನಲ್ಲಿ ಇವರಿಗೇನೂ ಕಮ್ಮಿ ಇಲ್ಲ ಎಂಬಂಥಾ ಇಮೇಜು, ಅದಕ್ಕೆ ಸರಿಯಾಗಿ ರೂಢಿಸಿಕೊಂಡ ಥಳುಕು ಬಳುಕಿನ ಲೈಫ್ ಸ್ಟೈಲ್… ಆದರೆ ಬದುಕಿನ ನೆತ್ತಿಯ ಮೇಲೆ ಸದಾ ನೇತಾಡುತ್ತಲೇ ಇರುವ ಅನಿಶ್ಚಿತತೆಯ ತೂಗುಗತ್ತಿ. ಯಾವುದೇ ಕ್ಷಣದಲ್ಲಿಯಾದರೂ ನೆಚ್ಚಿಕೊಂಡ ಕೆಲಸವನ್ನು ಬಿಟ್ಟು ಬೀದಿಯಲ್ಲಿ ನಿಲ್ಲಬಹುದಾದ ಬದುಕು… ಇದು ಐಟಿ ಬಿಟ ವಲಯದಲ್ಲಿ ಕೆಲಸ ಮಾಡೋರ ಸಾಮಾನ್ಯ ಗೋಳು. ಇಂಥಾ ಅಕ್ಷರಸ್ಥರೇ ಬದುಕಿನ ಅನಿವಾರ್ಯತೆಗೆ ಸಿಕ್ಕಿ ಅಡ್ಡ ದಾರಿ ಹಿಡಿದರೆ, ಕ್ರಿಮಿನಲ್ಲುಗಳಾದರೆ ಅದರ ಪರಿಣಾಮ ಘೋರ. ಇಂಥಾ ವಾಸ್ತವವನ್ನು ಸವರಿಕೊಂಡು ಹೋದಂತೆ ಭಾಸವಾಗುವ ರೋಚಕ ಕಥೆಯನ್ನು ವೀಕೆಂಡ್ ಚಿತ್ರ ಹೊಂದಿದೆ.

    ನಾಯಕ ಅಜೆಯ್ ಸಾಫ್ಟ್‍ವೇರ್ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಿಸುವಾತ. ಈತನ ಮೇಲೆ ಸಹೋದ್ಯೋಗಿಯೊಬ್ಬಳು ಮೋಹಗೊಂಡಿದ್ದರೆ ಈತ ಮಾತ್ರ ನಾಯಕಿಯ ಹಿಂದೆ ಬಿದ್ದಿರುತ್ತಾನೆ. ಈ ಪ್ರೇಮದ ಹಿನ್ನೆಲೆಯಲ್ಲಿಯೇ ನಿರ್ದೇಶಕರು ಐಟಿ ಬಿಟಿ ಕ್ಷೇತ್ರದ ಅಷ್ಟೂ ವಿಚಾರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಜಾಣ್ಮೆ ತೋರಿದ್ದಾರೆ. ಅಲ್ಲಿನ ಕೆಲಸದೊತ್ತಡ, ಸಂಬಳ ಪಡೆಯಲು ಮಾಡಬೇಕಾದ ಅನಿವಾರ್ಯ ಸರ್ಕಸ್ಸುಗಳೆಲ್ಲವನ್ನು ಕೂಡಾ ಮನ ಮುಟ್ಟುವಂತೆ ದೃಷ್ಯದ ಚೌಕಟ್ಟಿಗೆ ಒಗ್ಗಿಸಲಾಗಿದೆ.

    ಇಂಥಾ ಎಲ್ಲ ಸರ್ಕಸ್ಸುಗಳಾಚೆಗೂ ಕೆಲಸ ಕಳೆದುಕೊಂಡಾಗ ಈ ಐಟಿ ಉದ್ಯೋಗಿಗಳ ಬದುಕು ಹೇಗಿರುತ್ತೆ? ಎಂಥೆಂಥಾ ಅವಘಡಗಳು ಸಂಭವಿಸಬಹುದೆಂಬುದನ್ನು ನಿರ್ದೇಶಕರು ರುಚಿಕಟ್ಟಾಗಿಯೇ ನಿರೂಪಿಸಿದ್ದಾರೆ. ಹಾಗಂತ ಈ ಸಿನಿಮಾ ಇಂಥಾ ಒಳತೋಟಿ, ತಲ್ಲಣಗಳಲ್ಲಿಯೇ ಕಳೆದು ಹೋಗಿದೆ ಅಂದುಕೊಳ್ಳಬೇಕಿಲ್ಲ. ಕಾಮಿಡಿ, ಪ್ರೀತಿ ಸೇರಿದಂತೆ ಎಲ್ಲೆಲ್ಲಿ ಯಾವುದನ್ನು ಬೆರೆಸಬೇಕೋ ಅದನ್ನು ಅಚ್ಚುಕಟ್ಟಾಗಿಯೇ ಮಾಡಲಾಗಿದೆ. ಆದ್ದರಿಂದಲೇ ವೀಕೆಂಡ್ ಎಂಬುದು ಸಂಪೂರ್ಣ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಒಂದಿಡೀ ಚಿತ್ರ ಇಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲು ಬೇರೇನೇ ಕಾರಣಗಳಿದ್ದರೂ ಅನಂತ್ ನಾಗ್ ಎಂಬ ಮೇರು ನಟ ಈ ಚಿತ್ರದ ಪ್ರಧಾನ ಆಕರ್ಷಣೆ. ಅವರಿಲ್ಲಿ ಸಾಫ್ಟ್‍ವೇರ್ ಮೊಮ್ಮಗನ ತಾತನಾಗಿ, ತಪ್ಪಾದಾಗ ತಿದ್ದುವ ಹಿರಿಯನ ಪಾತ್ರವನ್ನು ಎಂದಿನಂತೆಯೇ ಮನಸೂರೆಗೊಳ್ಳುವಂತೆ ನಿರ್ವಹಿಸಿದ್ದಾರೆ.

    ವಿಶೇಷವೆಂದರೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಮಂಜುನಾಥ್ ಡಿ ಅವರೇ ಪೊಲೀಸ್ ಅಧಿಕಾರಿಯಾಗಿಯೂ ಅಬ್ಬರಿಸಿದ್ದಾರೆ. ಈ ಪಾತ್ರವೂ ಸೇರಿದಂತೆ ಗೋಪಿನಾಥ್ ಭಟ್, ರಘು ನೀನಾಸಂ ಸೇರಿದಂತೆ ಎಲ್ಲ ಪಾತ್ರಗಳೂ ಮನಮುಟ್ಟುವಂತಿವೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಕೂಡಾ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶಶಿಧರ್ ಅವರ ಛಾಯಾಗ್ರಹಣ ಕಥೆಗೆ ಹೊಸಾ ಓಘವನ್ನೇ ನೀಡಿದೆ. ಹೀಗೆ ಕಮರ್ಶಿಯಲ್ ವೇನಲ್ಲಿ ರೋಚಕವಾದ ಕಥೆ ಹೇಳೋ ಈ ಚಿತ್ರ ಮನಮಿಡಿಯುವಂಥಾ ಒಂದು ಸಂದೇಶವನ್ನೂ ರವಾನಿಸುತ್ತದೆ. ಇಡೀ ಸಿನಿಮಾ, ಶ್ರಮ ಸಾರ್ಥಕ ಅನ್ನಿಸೋದು ಈ ಕಾರಣದಿಂದಲೇ. ಒಟ್ಟಾರೆಯಾಗಿ ವೀಕೆಂಡ್ ಒಂದೊಳ್ಳೆ ಚಿತ್ರ ನೋಡಿದ ಖುಷಿಯನ್ನು ನೋಡುಗರೆಲ್ಲರ ಮನಸಿಗಿಳಿಯುವಂತೆ ಮಾಡುತ್ತದೆ.

    ರೇಟಿಂಗ್: 3.5/5 

  • ಪ್ರೀತಿಯ ರಾಯಭಾರಿ: ಅತ್ಯಾಚಾರಿಗಳಿಗೆ ಕತ್ತರಿ!

    ಪ್ರೀತಿಯ ರಾಯಭಾರಿ: ಅತ್ಯಾಚಾರಿಗಳಿಗೆ ಕತ್ತರಿ!

    ಇಂಪಾದ ಹಾಡುಗಳಿಂದ ಗಮನಸೆಳೆದಿದ್ದ ಸಿನಿಮಾ ಪ್ರೀತಿಯ ರಾಯಭಾರಿ. ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಕಥೆಯೇ ಇರೋದಿಲ್ಲ ಅಂತಾ ಕೊಂಕು ಮಾತಾಡುವವರಿಗೆ ಉತ್ತರವೆಂಬಂತೆ ಮೂಡಿ ಬಂದಿರುವ ಚಿತ್ರವಿದು.

    ಕಿತ್ತಾಟವಾಡುತ್ತಲೇ ಪ್ರೀತಿಯ ಬಲೆಯಲ್ಲಿ ಸಿಲುಕುವ ಜೋಡಿ ಅದು. ಇಂಥಾ ಪ್ರೇಮಿಗಳ ನಡುವೆ ಎಲ್ಲವೂ ಸರಿಯಿದ್ದರೂ ಸಮಾಜದ ಕ್ರೂರ ಕಣ್ಣುಗಳು ಹುಡುಗಿಯ ಮೇಲೆ ಬೀಳುತ್ತದೆ. ಮತ್ತದು ಆಕೆಯ ಬದುಕನ್ನೇ ಬಲಿ ತೆಗೆದುಕೊಳ್ಳುತ್ತದೆ.

    ಸಾಮಾನ್ಯಕ್ಕೆ ರಿವೆಂಜ್ ಕಿಲ್ಲಿಂಗ್ ಸ್ಟೋರಿಗಳು ಬೇರೆಯದ್ದೇ ರೀತಿಯಲ್ಲಿರುತ್ತವೆ. ಜನ್ಮಾಂತರದ ರಿವೆಂಜ್ ಕಿಲ್ಲಿಂಗ್ ಸ್ಟೋರಿಗಳೂ ಸಾಕಷ್ಟು ಬಂದಿವೆ. ಆದರೆ ಪ್ರೀತಿಯ ರಾಯಭಾರಿ ಸ್ವಲ್ಪ ಭಿನ್ನ. ಪ್ರೀತಿಸಿದವಳ ಜೀವ ತೆಗೆದವರ ಹುಡುಕಾಡಿ ಬಡಿತಾನೆ. ಬರೀ ಹೊಡೆದಾಟ ಮಾತ್ರವಲ್ಲ, ಕಂಡವರ ಮನೆ ಹೆಣ್ಣುಮಕ್ಕಳನ್ನು ಯಾವತ್ತೂ ಕಾಕದೃಷ್ಟಿಯಿಂದ ನೋಡಬಾರದು ಅಂಥಾ ಘೋರ ಶಿಕ್ಷೆಗೆ ಗುರಿಪಡಿಸುತ್ತಾನೆ.

    ಎಂ.ಎಂ. ಮುತ್ತು ನಿರ್ದೇಶನದ ಮೊದಲ ಚಿತ್ರ ಇದಾದರೂ ಈ ಹಿಂದೆ ಅವರು ಅನುಭವಿ ನಿರ್ದೇಶಕರೊಟ್ಟಿಗೆ ಕೆಲಸ ಮಾಡಿದ ಅನುಭವವನ್ನೆಲ್ಲಾ ಇಲ್ಲಿ ಧಾರೆಯೆರೆದಿದ್ದಾರೆ. ಹೊಸ ಹೀರೋನನ್ನು ನಟನೆಯಲ್ಲಿ ಪಳಗಿಸಿರೋದು ಮುತ್ತು ಹೆಚ್ಚುಗಾರಿಕೆ. ಇನ್ನು ನಾಯಕಿ ಅಂಜನಾ ದೇಶಪಾಂಡೆ ಪಾತ್ರ ಮತ್ತು ನಟನೆ ಎಂಥವರ ಕಣ್ಣಲ್ಲೂ ನೀರುಕ್ಕಿಸುತ್ತದೆ.

    ಒಟ್ಟಾರೆಯಾಗಿ ಇವತ್ತಿನ ಸಮಾಜಕ್ಕೆ ತಲುಪಲೇಬೇಕಿರುವ ಅಂಶಗಳನ್ನು ಮುತ್ತು ಸಮರ್ಥವಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ನಾಯಕ ನಕುಲ್ ಡ್ಯಾನ್ಸ್ ಮತ್ತು ಫೈಟ್ಸ್ ಗೆ ಎಂಥವರೂ ಫಿದಾ ಆಗೋದು ಗ್ಯಾರೆಂಟಿ.