Tag: ಕನ್ನಡ ಸಿನೆಮಾ

  • ‘ಸೀಸ್ ಕಡ್ಡಿ’ಯ ಸೊಗಸಾದ ವೀಡಿಯೋ ಸಾಂಗ್ ಅನಾವರಣ!

    ‘ಸೀಸ್ ಕಡ್ಡಿ’ಯ ಸೊಗಸಾದ ವೀಡಿಯೋ ಸಾಂಗ್ ಅನಾವರಣ!

    ಬಿಡುಗಡೆಗೆ ಅಣಿಯಾಗಿರುವ `ಸೀಸ್ ಕಡ್ಡಿ’ (Sees Kaddi) ಚಿತ್ರದ ಅರ್ಥವತ್ತಾದ ವೀಡಿಯೋ ಸಾಂಗ್ ಒಂದು ಬಿಡುಗಡೆಗೊಂಡಿದೆ. ಈ ಮೂಲಕ ರತನ್ ಗಂಗಾಧರ್ (Rathan Gangadhar) ನಿರ್ದೇಶನದ ಈ ಚಿತ್ರ ಬಿಡುಗಡೆಯ ಅಂಚಿನಲ್ಲಿ ಒಂದಷ್ಟು ಚರ್ಚೆ ಹುಟ್ಟುಹಾಕಿದೆ.

    ಹಾಡೆಂಬುದು ಹೆಚ್ಚಿನ ಸಂದರ್ಭದಲ್ಲಿ ರೋಮಾಂಚನ ಮೂಡಿಸುವ ಮನೋರಂಜನೆಯ ವಾಹಕವಾಗಿಯಷ್ಟೇ ಸಿನಿಮಾಗಳಲ್ಲಿ ಬಳಕೆಯಾಗೋದಿದೆ. ಆದರೆ, ವಿರಳ ಸಂದರ್ಭಗಳಲ್ಲಿ ಮಾತ್ರ ಒಟ್ಟಾರೆ ಕಥೆಯ ಆತ್ಮವನ್ನೇ ಬಚ್ಚಿಟ್ಟುಕೊಂಡಂಥ, ಕೇಳಿದಾಕ್ಷಣವೇ ಆಲೋಚನೆಗೆ ಹಚ್ಚುವಂಥಾ ಹಾಡುಗಳು ಸೃಷ್ಟಿಯಾಗೋದೂ ಇದೆ. ಇದೀಗ ಬಿಡುಗಡೆಗೊಂಡಿರುವ ಸೀಸ್ ಕಡ್ಡಿಯ ವೀಡಿಯೋ ಸಾಂಗ್ ನಿಸ್ಸಂದೇಹವಾಗಿಯೂ ಆ ಸಾಲಿಗೆ ಸೇರಿಕೊಳ್ಳುವಂತಿದೆ.

    ಪೆನ್ಸಿಲ್ ಅನ್ನು ರೂಪಕವಾಗಿಟ್ಟುಕೊಂಡು ರೂಪುಗೊಂಡಿರುವ ಈ ಸಿನಿಮಾ ಮಕ್ಕಳ ಚಿತ್ರಗಳ ಸಾಲಿಗೆ ಸೇರ್ಪಡೆಗೊಳ್ಳುತ್ತದೆ. ಹೈಪರ್ ಲಿಂಕ್ ಆಂಥಾಲಜಿ ಶೈಲಿಯ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೆಟ್ ಸಿಕ್ಕಿದೆ. ಸೀಸ್ ಕಡ್ಡಿಯೀಗ ಈ ಸೊಗಸಾದ ವೀಡಿಯೋ ಸಾಂಗ್ ಮೂಲಕ ಮತ್ತೆ ಗಮನ ಸೆಳೆದಿದೆ. `ಬೇಧವು ಎಲ್ಲಿದೆ ಬೀಳುವ ಮಳೆಗೆ, ಕಾಗದ ಅಂಜಿದೆ ನಾಣ್ಯವು ಆಡಿದೆ’ ಅಂತ ಶುರವಾಗೋ ಈ ಹಾಡಿಗೆ ಮಹೇಂದ್ರ ಗೌಡ ಸಾಹಿತ್ಯ ಬರೆದಿದ್ದಾರೆ. ಕೆ.ಸಿ ಬಾಲ ಸಾರಂಗನ್ ಸಂಗೀತದ ಸದರಿ ಹಾಡನ್ನು ಬಾಲಸಾರಂಗನ್ ಮತ್ತು ಶುಭದಾ ಆರ್ ಪ್ರಕಾಶ್ ಹಾಡಿದ್ದಾರೆ.

    ಹಾಡೊಂದು ಸಾಹಿತ್ಯದ ಮೂಲಕವೇ ಕೇಳುಗರನ್ನು ಕಾಡುವಂಥಾ ಅಪರೂಪದ ಸನ್ನಿವೇಶ ಇದರೊಂದಿಗೆ ಮತ್ತೆ ಸೃಷ್ಟಿಯಾಗಿದೆ. ಈ ಹಾಡಿನ ಸಾಲುಗಳನ್ನು ಕೇಳುಗರು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ‘ಯರ‍್ಯಾಕೆ ಬರಬೇಕು ನೀ ನಂಬು ನಿನ್ನನ್ನೆ, ಕೈಯೆತ್ತಿ ಮುಗಿಯೋದು ಕಾಲ್ತುಳಿದ ಕಲ್ಲನ್ನೆ’ ಎಂಬಂಥ ಸಮ್ಮೋಹಕ ಸಾಲುಗಳನ್ನು ಕೇಳಿದವರೆಲ್ಲ ಅಕ್ಷರಶಃ ಸಂಭ್ರಮಿಸುತ್ತಿದ್ದಾರೆ.

    ಈ ಹಾಡಿನ ಹಿನ್ನೆಲೆಯ ಬಗ್ಗೆ ಒಂದಷ್ಟು ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಒಂದೊಳ್ಳೆ ಕುಟುಂಬದಲ್ಲಿ ಹುಟ್ಟಿ, ಎಲ್ಲಾ ಜಂಜಾಟಗಳಿಂದ ತಪ್ಪಿಸಿಕೊಳ್ಳುವುದಕ್ಕೋಸ್ಕರ ಲೋಕ ಸಂಚಾರ ಹೊರಟಾತ ಈ ಕಥೆಯ ಕೇಂದ್ರ ಬಿಂದು. ಅಂಥವನು ಆ ಹುಡುಕಾಟದ ಹಾದಿಯಲ್ಲಿ ಖಾಲಿ ಜಾಗದಲ್ಲಿರುವ ಒಂಟಿ ಮರ ನೋಡುತ್ತಾ ಧ್ಯಾನಸ್ಥನಾಗಿರುವಾಗಲೇ ಅರೆಹುಚ್ಚನೋರ್ವ ಬಳಿ ಬಂದು ಏನು ನೋಡುತ್ತಿದ್ದೀಯ ಎಂಬ ಪ್ರಶ್ನೆ ಕೇಳುತ್ತಾನೆ. ಆ ನಂತರ ನಡೆಯುವ ಸಂಭಾಷಣೆಯಲ್ಲಿ ಮತ್ತೊಂದು ಬಗೆಯ ಧ್ಯಾನೋದಯ ಆತನ ಪಾಲಿಗಾಗುತ್ತೆ. ಅದರ ಬಗ್ಗೆಯೇ ಆಲೋಚಿಸುತ್ತಾ ನಡೆಯುತ್ತಿರುವಾಗ ಘಟಿಸುವ ವಿದ್ಯಮಾನವೊಂದರ ಹಿನ್ನೆಲೆಯಲ್ಲಿ ಈ ಹಾಡು ಅರಳಿಕೊಂಡಿದೆ. ಅದು ಒಂದಿಡೀ ಸಿನಿಮಾದ ಆಂತರ್ಯವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಎಂಬುದು ಚಿತ್ರತಂಡದ ಮಾತು.

    ಅಂದಹಾಗೆ ಈ ಹಾಡಿನಲ್ಲಿ ಕಾಣಿಸಿಕೊಂಡಿರೋ ಪಾತ್ರದ ಹೆಸರು ಫರೀದ್. ಆತ ಹಿಂದೂನಾ ಅಥವಾ ಮುಸಲ್ಮಾನನಾ? ಆತ ಅದೇಕೆ ಆ ಹೆಸರನ್ನಿಟ್ಟುಕೊಳ್ಳುತ್ತಾನೆ? ಇಂಥಾ ತರ್ಕಗಳು ಸಿನಿಮಾದೊಳಗಿವೆಯಂತೆ. ವಿಶೇಷವೆಂದರೆ, ಈ ಪಾತ್ರವನ್ನು ಈ ಬಾರಿಯ ರಾಜರಾಣಿ ರಿಯಾಲಿಟಿ ಶೋ ಗೆದ್ದುಕೊಂಡಿರುವ ಸಂಜಯ್ ಕುಮಾರ್ ಗೌಡ ನಿರ್ವಹಿಸಿದ್ದಾರೆ. ಇದೇ ಮೇ ತಿಂಗಳ ಕಡೇಯ ಭಾಗದಲ್ಲಿ ‘ಸೀಸ್ ಕಡ್ಡಿ’ ಚಿತ್ರ ತೆರೆಗಾಣಲಿದೆ.

  • ಗನ್ಸ್ ಅಂಡ್ ರೋಸಸ್ ಮೂಲಕ ಮಿಂಚಲಣಿಯಾದ ರಂಗಭೂಮಿ ಪ್ರತಿಭೆ ಜಾಹ್ನವಿ!

    ಗನ್ಸ್ ಅಂಡ್ ರೋಸಸ್ ಮೂಲಕ ಮಿಂಚಲಣಿಯಾದ ರಂಗಭೂಮಿ ಪ್ರತಿಭೆ ಜಾಹ್ನವಿ!

    ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ‘ಗನ್ಸ್ ಅಂಡ್ ರೋಸಸ್’ ಚಿತ್ರ ಜನವರಿ 3ರಂದು ಅದ್ಧೂರಿಯಾಗಿ ತೆರೆಗಾಣುತ್ತಿದೆ. ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಗೊಳ್ಳಲಿದೆ.

    ಅರ್ಜುನ್ ನಾಯಕ ನಟನಾಗಿ ಈ ಚಿತ್ರದಲ್ಲಿ ಭರ್ಜರಿಯಾಗಿಯೇ ಎಂಟ್ರಿ ಕೊಡಲಿದ್ದಾರೆ. ಗನ್ಸ್ ಅಂಡ್ ರೋಸಸ್ ಭೂಮಿಕೆಯಿಂದ ಒಂದಷ್ಟು ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಆಗಮಿಸಲಿದ್ದಾರೆ. ಸದರಿ ಸಿನಿಮಾದ ನಾನಾ ವಿಭಾಗಗಳಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆ ಬೆಳಕು ಕಾಣಲು ತಯಾರಾಗಿರುವ ನವ ಪ್ರತಿಭಾನ್ವಿತರ ಸಾಲಿನಲ್ಲಿ ಜಾಹ್ನವಿ ವಿಶ್ವನಾಥ್ ಕೂಡಾ ಸೇರಿಕೊಂಡಿದ್ದಾರೆ.

    ಶಾಲಾ ಕಾಲೇಜು ದಿನಗಳಿಂದಲೇ ನಟಿಯಾಗುವ ಕನಸು ಹೊತ್ತು, ಅದರಲ್ಲಿ ಪಳಗಿಕೊಳ್ಳುವ ಸಲುವಾಗಿಯೇ ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದವರು ಜಾಹ್ನವಿ. ವರ್ಷಗಟ್ಟಲೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು ತಮ್ಮ ಕನಸಿನ ಕ್ಷೇತ್ರವಾದ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ತಯಾರಾಗಿದ್ದರು. ಒಂದೊಳ್ಳೆ ಅವಕಾಶಕ್ಕಾಗಿ ಅರಸುತ್ತಿದ್ದಾಗ ಅಚಾನಕ್ಕಾಗಿ ಗನ್ಸ್ ಅಂಡ್ ರೋಸಸ್ ಚಿತ್ರತಂಡದ ಸಂಪರ್ಕ ಸಿಕ್ಕಿತ್ತು. ಆ ಹೊತ್ತಿನಲ್ಲಿ ನಿರ್ದೇಶಕರು ತಾರಾಗಣದ ಆಯ್ಕೆಗಾಗಿ ಆಡಿಷನ್ ಕರೆದಿದ್ದರು. ಈ ವಿಚಾರ ತಿಳಿದ ಜಾಹ್ನವಿ ಅದರಲ್ಲಿ ಪಾಲ್ಗೊಂಡು, ಎಲ್ಲ ಪರೀಕ್ಷೆಗಳನ್ನು ದಾಟಿಕೊಂಡಿದ್ದರು. ಈ ಹಂತದಲ್ಲಿ ಜಾಹ್ನವಿಯ ನಟನೆಯ ಕಸುವು ಗಮನಿಸಿದ ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್, ಚಿತ್ರದುದ್ದಕ್ಕೂ ಚಲಿಸುವ ಚೆಂದದ ಪಾತ್ರವೊಂದರಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರು.‌ ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್‌ – ಜ.5 ರಿಂದ ಬಸ್‌ ಪ್ರಯಾಣ ದರ ಏರಿಕೆ

    Guns and Roses Kannada Movie Team

    ಜಾಹ್ನವಿ ವಿಶ್ವನಾಥ್ ಈ ಚಿತ್ರದಲ್ಲಿ ನಾಯಕಿಯ ಗೆಳತಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಅದು ಹಾಗೆ ಬಂದು, ಹೀಗೆ ಹೋಗುವ ಪಾತ್ರವಲ್ಲ. ಕಥೆಯೊಂದಿಗೇ ಚಲಿಸುತ್ತಾ, ನಿರ್ಣಾಯಕ ಘಟ್ಟಗಳಲ್ಲಿ ನಾಯಕಿಗೆ ಗೈಡ್ ಮಾಡೋ ಗಟ್ಟಿ ಪಾತ್ರವದು. ಅತ್ಯಂತ ಪ್ರಬುದ್ಧ ಚಹರೆಯ ಆ ಪಾತ್ರ ಕ್ಲೈಮ್ಯಾಕ್ಸಿನಲ್ಲಿಯೂ ತಿರುವಿಗೆ ಕಾರಣವಾಗುತ್ತದೆಯಂತೆ. ವಿದ್ಯಾಭ್ಯಾಸ ಮುಗಿಸಿಕೊಂಡಾಕ್ಷಣವೇ ನಟಿಯಾಗಬೇಕೆಂಬ ನಿರ್ಧಾರ ತಳೆದಿದ್ದ, ಅದಕ್ಕಾಗಿ ವರ್ಷಗಟ್ಟಲೆ ತಯಾರಿ ನಡೆಸಿದ್ದ ಜಾಹ್ನವಿ ಪಾಲಿಗೆ ಗನ್ಸ್ ಅಂಡ್ ರೋಸಸ್ ಮೈಲಿಗಲ್ಲಿನಂಥಾ ಚಿತ್ರ. ಇದರ ಪಾತ್ರದ ಮೂಲಕವೇ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಇರಾದೆ ಜಾಹ್ನವಿಗಿದೆ.

    ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆಗಾಣಲಿದೆ.

  • ಜಗ್ಗೇಶ್ ಜೊತೆ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ‘ರಾಘವೇಂದ್ರ ಸ್ಟೋರ್’

    ಜಗ್ಗೇಶ್ ಜೊತೆ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ‘ರಾಘವೇಂದ್ರ ಸ್ಟೋರ್’

    ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡುವುದರಲ್ಲಿ ಖ್ಯಾತಿ ಪಡೆದಿರುವ ಹೊಂಬಾಳೆ ಫಿಲ್ಮ್ಸ್ ಈಗ ಮತ್ತೊಂದು ಚಿತ್ರಕ್ಕೆ ಚಾಲನೆ ಕೊಡಲು ಸಜ್ಜಾಗಿದೆ. ಇದು ಈ ಬ್ಯಾನರ್ ನ 12ನೇ ಸಿನಿಮಾವಾಗಿದೆ.

    ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಅವರು ತಮ್ಮ ಬ್ಯಾನರ್ ನ 12ನೇ ಚಿತ್ರವನ್ನು ಇಂದು ಘೋಷಣೆ ಮಾಡಿದ್ದು, ಚಿತ್ರಕ್ಕೆ ರಾಘವೇಂದ್ರ ಸ್ಟೋರ್ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನವಿದ್ದು, ನವರಸ ನಾಯಕ ಜಗ್ಗೇಶ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.

    ಈ ಸಿನಿಮಾ ಫಸ್ಟ್ ಲುಕ್ ಹೊಂಬಾಳೆ ಫಿಲ್ಮ್ಸ್ ಕೂ ಹಾಗೂ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಫಸ್ಟ್ ಲುಕ್ ಪೋಸ್ಟರ್ ಗಮನಿಸಿದರೆ ಇದೊಂದು ಹೋಟೆಲ್ ಕುರಿತಾದ ಕಥೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದನ್ನೂ ಓದಿ: ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ

    ಸಾಲು ಸಾಲು ಚಿತ್ರ ಘೋಷಿಸಿರುವ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ ಮೊದಲ ಚಿತ್ರ ‘ನಿನ್ನಿಂದಲೇ’. 2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ‘ನಿನ್ನಿಂದಲೇ’ ಚಿತ್ರ ತೆರೆಗೆ ಬಂದಿತ್ತು. ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮಾಸ್ಟರ್‌ ಪೀಸ್’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿತ್ತು.

    2017ರಲ್ಲಿ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ ‘ರಾಜಕುಮಾರ’ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಯ್ತು. ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ‘ರಾಜಕುಮಾರ’ ಚಿತ್ರವೂ ಒಂದು ಎನಿಸಿಕೊಂಡಿತು.

  • ಹತ್ತೊಂಬತ್ತರ ಉನ್ಮಾದದ ಕಥೆಯಿಲ್ಲಿದೆ!

    ಹತ್ತೊಂಬತ್ತರ ಉನ್ಮಾದದ ಕಥೆಯಿಲ್ಲಿದೆ!

    ರಾಜೇಶ್ವರಿ ಫಿಲಂಸ್ ಲಾಂಛನದಲ್ಲಿ ಲೋಕೇಶ್ ನಿರ್ಮಾಣ ಮಾಡಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಯುವ ಆವೇಗದ ಸಿನಿಮಾ ಬಗ್ಗೆ ಪ್ರೇಕ್ಷಕರೊಂದು ಬೆರಗಿಟ್ಟುಕೊಂಡಿರುತ್ತಾರೆ. ಈ ಸಿನಿಮಾದತ್ತ ಒಲವು ಮೂಡಿಕೊಂಡಿರುವುದೂ ಆ ಕಾರಣಕ್ಕಾಗಿಯೇ. ಆರಂಭದಲ್ಲಿ ಇದೊಂದು ಬರೀ ಯುವ ಹುಮ್ಮಸ್ಸಿನ ಕಥನ ಅಂದುಕೊಂಡಿದ್ದವರಿಗೆ ಟ್ರೇಲರ್ ನಲ್ಲಿ ಘನ ಗಂಭೀರವಾದ ವಿಚಾರಗಳೇ ಕಾಣಿಸಿವೆ. ಈ ಸಿನಿಮಾದೊಳಗೆ ಗಹನವಾದೊಂದು ಕಥೆ ಇದೆ ಎಂಬ ವಿಚಾರವನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಎಲ್ಲರಿಗೂ ತಲುಪಿಸಿದೆ.

    19 ಏಜ್ ಈಸ್ ನಾನ್ಸೆನ್ಸ್ ಎಂಬ ಈ ಸಿನಿಮಾ ತನ್ನ ಶೀರ್ಷಿಕೆಯ ಕಾರಣದಿಂದಲೇ ಆರಂಭಿಕವಾಗಿ ಗಮನ ಸೆಳೆದಿತ್ತು. ಆದರೆ ಅದರ ಬಗ್ಗೆ ಪ್ರೇಕ್ಷಕರೆಲ್ಲ ಚರ್ಚೆ ನಡೆಸಲಾರಂಭಿಸಿದ್ದು ಟ್ರೇಲರ್ ಹೊರ ಬಂದ ನಂತರವೇ. ಯಾಕೆಂದರೆ ಅದರಲ್ಲಿ ಬೇರೆಯದ್ದೇ ಹಾದಿಯಲ್ಲಿರುವಂತೆ ಭಾಸವಾಗುವ ಗಟ್ಟಿ ಕಥೆಯ ಹೊಳಹೊಂದು ಸಿಕ್ಕಿತ್ತು.

    ಹತ್ತೊಂಬತ್ತರ ಹರೆಯದ ನಿರ್ಧಾರಗಳ ಆಚೀಚೆಗೆ ಸಮಾಜಕ್ಕೆ ಸಂದೇಶ ನೀಡುವಂಥಾ, ನಮಗೆಲ್ಲ ಮುಖ್ಯವೆನಿಸದಿದ್ದರೂ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವಂಥಾ ಒಂದಷ್ಟು ವಿಚಾರಗಳು ಈ ಮೂಲಕ ಹರಡಿಕೊಂಡಿತ್ತು. ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆದಿದ್ದ ಈ ಸಿನಿಮಾವನ್ನು ಸುರೇಶ್ ಎಂ ಗಿಣಿ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಮನುಷ್ ನಾಯಕನಾಗಿ ನಟಿಸಿದ್ದಾರೆ.

    ಹತ್ತೊಂಬತ್ತರ ಹರೆಯದ ಕಥೆ ಎಂದಾಕ್ಷಣ ಇದು ಯುವ ಸಮುದಾಯಕ್ಕೆ ಸೀಮಿತವಾದ ಕಥೆ ಅನ್ನಿಸೋದು ಸಹಜವೇ. ಇಲ್ಲಿರುವುದೂ ಕೂಡಾ ಯೂಥ್‍ಫುಲ್ ಕಥೆಯಾಗಿದ್ದರೂ ಸಹ ಅದು ಕೌಟುಂಬಿಕ ಸನ್ನಿವೇಶಗಳನ್ನು ಬಳಸಿಕೊಂಡೇ ಸಾಗುತ್ತದೆ. ಚಿತ್ರರಂಗ ಹೇಳಿಕೊಂಡಿರೋ ಪ್ರಕಾರ ನೋಡೋದಾದರೆ ಇಲ್ಲಿ ಫ್ಯಾಮಿಲಿ ಕಥನವೇ ಪ್ರಧಾನ ಪಾತ್ರ ವಹಿಸುತ್ತದೆಯಂತೆ.

    ಇದು ಯುವ ಸಮುದಾಯದೊಂದಿಗೆ ಪೋಷಕರಿಗೂ ಒಂದು ಸಂದೇಶವನ್ನು ಹೊತ್ತು ತಂದಿದೆ. ಇದರೊಂದಿಗೆ ಲವ್, ಮಾಸ್ ಕಥನವನ್ನೂ ಒಳಗೊಂಡಿರುವ 19 ಏಜ್ ಈಸ್ ನಾನ್ಸೆನ್ಸ್ ಕಮರ್ಶಿಯಲ್ ಸೂತ್ರದೊಂದಿಗೆ ತಯಾರಾಗಿರುವ ಚಿತ್ರ.

  • ‘ಗಂಟುಮೂಟೆ’ಯೊಂದಿಗೆ ಕನ್ನಡದ ಘನತೆ ಎತ್ತಿಹಿಡಿದ ರೂಪಾ ರಾವ್!

    ‘ಗಂಟುಮೂಟೆ’ಯೊಂದಿಗೆ ಕನ್ನಡದ ಘನತೆ ಎತ್ತಿಹಿಡಿದ ರೂಪಾ ರಾವ್!

    ಬೆಂಗಳೂರು: ಸದ್ದೇ ಇಲ್ಲದೆ ಚಿತ್ರೀಕರಣಗೊಂಡು ಬಿಡುಗಡೆಯ ಹೊಸ್ತಿಲಲ್ಲಿ ನಿಂತ ಕೆಲ ಚಿತ್ರಗಳು ತನ್ನ ತಾಜಾತನದಿಂದಲೇ ಎಲ್ಲರೂ ತಿರುಗಿ ನೋಡುವಂತೆ ಸದ್ದು ಮಾಡೋದಿದೆ. ಆದರೆ ರೂಪಾ ರಾವ್, ನಿರ್ದೇಶನ ಮಾಡಿರೋ ‘ಗಂಟುಮೂಟೆ’ ಎಂಬ ಚಿತ್ರದ ಮೂಲಕ ಬಿಡುಗಡೆ ಪೂರ್ವದಲ್ಲಿಯೇ ದೇಶ ವಿದೇಶಗಳಲ್ಲಿಯೂ ಕನ್ನಡದ ಘನತೆಯನ್ನು ಮಿನುಗಿಸಿದ್ದಾರೆ. ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿರೋ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಆ ಮಟ್ಟಕ್ಕೆ ಸಂಚಲನಕ್ಕೆ ಕಾರಣವಾಗಿರೋ ಗಂಟುಮೂಟೆಯ ಹೂರಣ ಕಂಡ ಪ್ರಖ್ಯಾತ ನಿರ್ದೇಶಕರುಗಳೇ ಅಚ್ಚರಿಗೀಡಾಗಿದ್ದಾರೆ. ಹಲವರು ಸಿನಿಮಾ ಒಂದನ್ನು ಹೀಗೂ ರೂಪಿಸಬಹುದಾ ಎಂಬ ಪ್ರಶ್ನೆಯೊಂದಿಗೆ ಥ್ರಿಲ್ ಆಗಿದ್ದಾರೆ!

    ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ, ಪ್ರದರ್ಶನಗೊಂಡಿದೆ ಅಂದ ಮಾತ್ರಕ್ಕೆ ಇದನ್ನು ಆರ್ಟ್ ಮೂವಿ ಅಂದುಕೊಳ್ಳಬೇಕಿಲ್ಲ. ಈಗಾಗಲೇ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ವೆಬ್ ಸೀರೀಸ್‍ಗಳ ಮೂಲಕ ಗಮನ ಸೆಳೆದಿರುವ, ಹಲವಾರು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ರೂಪಾ ರಾವ್ ಗಂಟುಮೂಟೆಯನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅದಾಗ ತಾನೇ ಟೀನೇಜು ಪ್ರವೇಶಿಸೋ ಅಂಚಿನಲ್ಲಿ ನಿಂತು, ಅದರ ಮನೋದೈಹಿಕ ತೊಳಲಾಟಗಳಿಗೆ ಪಕ್ಕಾಗಿರುವ ಮನಸುಗಳ ವಿಚಾರಗಳನ್ನೊಳಗೊಂಡಿರೋ ಪ್ರೇಮಕಥೆಯಾಧಾರಿತವಾದ ಚಿತ್ರ.

    ಮಾಮೂಲಿಯಾಗಿ ಇಂಥಾ ಕಥೆಗಳನ್ನು ಹುಡುಗನ ದಿಕ್ಕಿನಿಂದ ನಿರೂಪಣೆ ಮಾಡಲಾಗುತ್ತದೆ. ಆದರೆ ಗಂಟುಮೂಟೆ ಹುಡುಗಿಯ ಕಡೆಯಿಂದಲೇ ಬಿಚ್ಚಿಕೊಳ್ಳುತ್ತದೆ. ಹಾಗಂತ ಇದೇನು ಹೆಣ್ಣುಮಕ್ಕಳ ಶೋಷಣೆಯಂಥಾ ಕಥೆಯನ್ನು ಹೊಂದಿರೋ ಚಿತ್ರ ಅಂದುಕೊಳ್ಳುವಂತಿಲ್ಲ. ಇಲ್ಲಿ ಹೈಸ್ಕೂಲು ದಿನಗಳಲ್ಲಿ ಚಿಗಿತುಕೊಳ್ಳುವ ಮೊದಲ ಪ್ರೇಮದ ನವಿರಾದ ಪುಳಕಗಳಿವೆ. ಹುಡುಗಿಯೊಳಗಿನ ಅನೇಕ ತುಮುಲ, ತೊಳಲಾಟಗಳ ಹೃದಯಸ್ಪರ್ಶಿ ಕಥಾನಕವನ್ನು ಈ ಚಿತ್ರ ಒಳಗೊಂಡಿದೆಯಂತೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ಪ್ರಕಾಶ್ ಬೆಳವಾಡಿಯವರ ಮಗಳು ತೇಜು ಬೆಳವಾಡಿ ನಿರ್ವಹಿಸಿದ್ದಾರೆ. ತೀರ್ಥಹಳ್ಳಿಯ ಹಳ್ಳಿಯೊಂದರ ಹುಡುಗ ನಿಶ್ವಿತ್ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಈ ಚಿತ್ರವನ್ನು ನೋಡಿದ ಖ್ಯಾತ ನಿರ್ದೇಶಕರೊಬ್ಬರು ಈ ಥರದ ಕಥೆ ಹೊಂದಿರುವ, ನಿರೂಪಣಾ ಶೈಲಿಯ ಚಿತ್ರಗಳನ್ನು ಈವರೆಗೆ ನೋಡಿಲ್ಲ ಎಂಬಂಥಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ. ಇದನ್ನು ನೋಡಿದ ವಿತರಕರೂ ಕೂಡಾ ಇಂಥಾದ್ದೇ ಉದ್ಘಾರವೆತ್ತಿದ್ದಾರೆ.

    ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಕಡಿಮೆಯಿದೆ. ಎತ್ತಲಿಂದ ಹುಡುಕಿದರೂ ಮಹಿಳಾ ನಿರ್ದೇಶಕಿಯರ ಸಂಖ್ಯೆ ಚಿಕ್ಕದಿದೆ. ಆದರೆ ಆ ಸಾಲಿನಲ್ಲಿ ಗಂಟುಮೂಟೆಯ ನಿರ್ದೇಶಕಿ ರೂಪಾ ರಾವ್ ವಿಶಿಷ್ಟವಾದ ಸ್ಥಾನ ಪಡೆದುಕೊಳ್ಳೋ ಎಲ್ಲ ಸಾಧ್ಯತೆಗಳೂ ಇವೆ. ಯಾಕೆಂದರೆ, ಅವರು ಈ ಸಿನಿಮಾವನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳು ಪ್ರವೇಶ ಪಡೆಯೋದೇ ಸವಾಲಿನ ಸಂಗತಿ. ಅಂಥಾದ್ದರಲ್ಲಿ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‍ನ ಪ್ರೀಮಿಯರ್‍ನಲ್ಲಿ ಪ್ರದರ್ಶನ ಕಂಡಿರೋ ಈ ಚಿತ್ರ ಬೆಸ್ಟ್ ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಕೆನಡಾದಲ್ಲಿ ನಡೆದ ಒಟ್ಟಾವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿಯೂ ಗಂಟುಮೂಟೆ ಸ್ಪರ್ಧಿಸಿದೆ.

    ಇದು ತೊಂಭತ್ತರ ದಶಕದಲ್ಲಿ ನಡೆಯೋ ಕಥೆ ಹೊಂದಿರೋ ಚಿತ್ರ. ಇದರಲ್ಲಿ ಹುಡುಗಿಯ ಪರಿಧಿಯಲ್ಲಿಯೇ ಬಿಚ್ಚಿಕೊಳ್ಳುತ್ತಾ ಆಕೆಯ ಮನೋ ತೊಳಲಾಟಗಳ ಸುತ್ತ ಹೆಣೆದ ವಿಶಿಷ್ಟವಾದ ಪ್ರೇಮ ಕಥೆಯನ್ನೊಳಗೊಂಡಿರೋ ಚಿತ್ರ. ವಿಷ್ಣುವರ್ಧನ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರೂಪಾ ರಾವ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕಿಯಾಗಿದ್ದಾರೆ. ಇವರು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಿರ್ದೇಶನ ಮಾಡಿರೋ ದ ಅದರ್ ಲವ್ ಸ್ಟೋರಿ ವೆಬ್ ಸೀರೀಸ್ ತುಂಬಾನೇ ಪ್ರಸಿದ್ಧಿ ಪಡೆದುಕೊಂಡಿದೆ. ಈ ವೆಬ್ ಸೀರೀಸ್ ರೂಪಾ ರಾವ್ ಅವರ ಪ್ರತಿಭೆಗೆ, ಭಿನ್ನ ಒಳನೋಟಕ್ಕೆ ಕನ್ನಡಿಯಂತೆಯೂ ಇದೆ.

    ಕನ್ನಡ ಚಿತ್ರವೊಂದು ಹೊಸತನದೊಂದಿಗೆ ಬಿಡುಗಡೆಗೆ ಮುನ್ನವೇ ಈ ಪಾಟಿ ಪ್ರಸಿದ್ಧಿ ಪಡೆದುಕೊಂಡಿರೋದು ನಿಜಕ್ಕೂ ಅಪರೂಪದಲ್ಲೇ ಅಪರೂಪದ ಬೆಳವಣಿಗೆ. ಪಕ್ಕಾ ಕಮರ್ಶಿಯಲ್ ಸ್ವರೂಪದ ಈ ಚಿತ್ರ ಪ್ರತೀ ಪ್ರೇಕ್ಷಕರನ್ನೂ ಬೆರಗಾಗಿಸಲಿದೆ ಅನ್ನೋ ಗಾಢವಾದ ಭರವಸೆ ರೂಪಾ ರಾವ್ ಅವರಲ್ಲಿದೆ. ದೇಶಾದ್ಯಂತ ಹೆಸರಾಗಬಲ್ಲ ಮಹಿಳಾ ನಿರ್ದೇಶಕಿಯಾಗಿ ಗುರುತಿಸಿಕೊಳ್ಳೋ ಎಲ್ಲ ಲಕ್ಷಣಗಳನ್ನೂ ಹೊಂದಿರೋ ರೂಪಾ ರಾವ್ ಬಿಡುಗಡೆ ಪೂರ್ವದಲ್ಲಿಯೇ ಕೇಳಿ ಬರುತ್ತಿರೋ ಸದಭಿಪ್ರಾಯಗಳಿಂದ ಮತ್ತಷ್ಟು ಖುಷಿಗೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ತೆರೆಕಾಣಲಿದೆ. ಆ ಮೂಲಕ ಕನ್ನಡಕ್ಕೆ ಏಕಕಾಲದಲ್ಲಿಯೇ ಒಂದೊಳ್ಳೆ ಚಿತ್ರ ಮತ್ತು ಕ್ರಿಯೇಟಿವ್ ನಿರ್ದೇಶಕಿಯ ಆಗಮನವೂ ಆಗಲಿದೆ.

  • ಮೈಸೂರಲ್ಲಿ ಪವರ್ ಸ್ಟಾರ್ – ರಾಕಿಂಗ್ ಸ್ಟಾರ್ ಸಮಾಗಮ!

    ಮೈಸೂರಲ್ಲಿ ಪವರ್ ಸ್ಟಾರ್ – ರಾಕಿಂಗ್ ಸ್ಟಾರ್ ಸಮಾಗಮ!

    ನ್ನಡ ಚಿತ್ರರಂಗದಲ್ಲಿ ಎಲ್ಲರೂ ಗೆಳೆಯರೇ. ಸ್ಟಾರ್ ವಾರ್ ಮುಂತಾದವುಗಳ ಮೂಲಕ ಕೆಲ ಸಂದರ್ಭಗಳಲ್ಲಿ ಊಹಾಪೋಹಗಳು ಹರಿದಾಡಿದರೂ ಇಲ್ಲಿನ ಸ್ಟಾರ್ ಗಳು ಸದಾ ಒಬ್ಬರಿಗೊಬ್ಬರು ಬೆಂಬಲವಾಗುತ್ತಾ, ಭೇಟಿಯಾಗುತ್ತಾ ಸ್ನೇಹದಿಂದಿದ್ದಾರೆ. ಈ ಕಾರಣದಿಂದಲೇ ಪರಸ್ಪರ ಸಿನಿಮಾ ಸೆಟ್‍ಗಳಿಗೆ ಭೇಟಿ ನೀಡಿ ಮಾತಾಡಿಸೋದು, ಒಂದೇ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದರೆ ಭೇಟಿಯಾಗೋದೆಲ್ಲ ನಡೆಯುತ್ತಿರುತ್ತೆ. ಹಾಗೆಯೇ ಮೈಸೂರಿನಲ್ಲಿ ಚಿತ್ರೀಕರಣದ ಬಿಡುವಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಗಮದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ.

    ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಇದೇ ಸಮಯದಲ್ಲಿಯೇ ಪವರ್ ಸ್ಟಾರ್ ಪನೀತ್ ಕೂಡಾ ಮೈಸೂರಿನಲ್ಲಿ ಯುವರತ್ನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರೂ ಬ್ಯುಸಿಯಾಗಿದ್ದರೂ ಕೂಡಾ ಭೇಟಿಯಾಗಿ ಕೂತು ಮಾತಾಡಿದ್ದಾರಂತೆ. ಹೀಗೆ ಈ ಭೇಟಿಯ ಸಂದರ್ಭದಲ್ಲಿ ತೆಗೆದ ರಾಕಿಂಗ್ ಸ್ಟಾರ್ ಮತ್ತು ಪವರ್ ಸ್ಟಾರ್ ಫೋಟೋ ಈಗ ಸೋಶಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿದೆ.

    ಅಷ್ಟಕ್ಕೂ ಪುನೀತ್ ರಾಜ್ ಕುಮಾರ್ ಮತ್ತು ಯಶ್ ಒಳ್ಳೆ ಗೆಳೆಯರು. ಆದರೆ ತಂತಮ್ಮ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಅವರು ಬಹು ಕಾಲದ ನಂತರ ಮೈಸೂರಲ್ಲಿ ಭೇಟಿಯಾಗಿದ್ದಾರೆ. ಪರಸ್ಪರರ ಚಿತ್ರಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರಂತೆ. ಈ ಭೇಟಿಯಿಂದ ರಾಕಿಂಗ್ ಸ್ಟಾರ್ ಮತ್ತು ಪವರ್ ಸ್ಟಾರ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

  • ಮೈಂಡ್ ಗೇಮ್ ಆಧಾರಿತ ‘ಆಪರೇಷನ್ ನಕ್ಷತ್ರ’

    ಮೈಂಡ್ ಗೇಮ್ ಆಧಾರಿತ ‘ಆಪರೇಷನ್ ನಕ್ಷತ್ರ’

    ಬೆಂಗಳೂರು: ಆಪರೇಷನ್ ನಕ್ಷತ್ರ ಫೈವ್ ಸ್ಟಾರ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ಈ ಚಿತ್ರಕ್ಕೆ ಮಧುಸೂದನ್ ಕೆ.ಆರ್. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಂದಕುಮಾರ್ ಎನ್, ಅರವಿಂದ ಟಿ.ಎಸ್. ರಾಧಾಕೃಷ್ಣ ಸಿ.ಎಸ್, ಕಿಶೋರ್ ಕುಮಾರ್ ಮೇಗಳ ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿ, ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಸೇರಿ ಈ 5 ಜನರು ಹುಟ್ಟು ಹಾಕಿರುವ ಸಂಸ್ಥೆಯೇ ಫೈವ್ ಸ್ಟಾರ್ ಫಿಲಮ್ಸ್ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ರೇಣುಕಾಂಬಾ ಥಿಯೇಟರ್ ನಲ್ಲಿ ನೆರವೇರಿತು.

    ನಿರಂಜನ್ ಒಡೆಯರ್, ಲಿಖಿತ್ ಸೂರ್ಯ, ಅದಿಥಿ ಪ್ರಭುದೇವ ಹಾಗೂ ಯಜ್ಞಾಶೆಟ್ಟಿ ಚಿತ್ರದ 4 ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಿಂದೇಗೌಡ (ಕಾಮಿಡಿ ಕಿಲಾಡಿಗಳು), ಪ್ರಶಾಂತ್, ನಟನಾ, ಶ್ರೀನಿವಾಸ್ ಪ್ರಭು, ದೀಪಕ್ ರಾಜ್ ಶೆಟ್ಟಿ, ವಿಕ್ಟರಿ ವಾಸು ಕೂಡ ಈ ಚಿತ್ರದಲ್ಲಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಧುಸೂದನ್ ಕಾನ್ಫಿಡಾದಲ್ಲಿ ಡೈರೆಕ್ಷನ್ ಕೋರ್ಸ್ ಮುಗಿಸಿದ ನಂತರ ಸ್ನೇಹಿತರೆಲ್ಲರ ಸಲಹೆಯ ಮೇರೆಗೆ ಥ್ರಿಲ್ಲರ್ ಕಥೆಯೊಂದನ್ನು ರೆಡಿ ಮಾಡಿದೆ. ಕಲಾವಿದರನ್ನೆಲ್ಲ ಫೈನಲ್ ಮಾಡಿಕೊಂಡು ಬೆಂಗಳೂರು, ಗೋವಾದಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಇದು ಮೈಂಡ್ ಗೇಮ್ ಮೇಲೆ ನಡೆಯುವ ಕಥೆ. 4 ಜನ ಪಾತ್ರಧಾರಿಗಳ ಜೀವನದಲ್ಲಿ ಬಂದು ಹೋಗುವ ಘಟನೆಗಳು ಅವರ ಜೀವನದಲ್ಲಿ ಹೇಗೆ ಟ್ವಿಸ್ಟ್ ಆಂಡ್ ಟರ್ನ್ ಕೊಡುತ್ತವೆ ಎಂದು ಆಪರೇಷನ್ ನಕ್ಷತ್ರ ಚಿತ್ರದ ಮೂಲಕ ಹೇಳಲು ಟ್ರೈ ಮಾಡಿದ್ದೇವೆ. ಈ ಎಲ್ಲಾ ಕ್ಯಾರೆಕ್ಟರ್‍ಗಳನ್ನು ಬಿಟ್ಟು ಮತ್ತೊಂದು ಪ್ರಮುಖ ಪಾತ್ರವಿದೆ. ಅದನ್ನು ತೆರೆಯ ಮೇಲೆ ನೋಡಬೇಕು ಎಂದು ಹೇಳಿದರು. ಜನರಿಗೆ ನಾವು ಮೋಸ ಮಾಡಲು ಪ್ರಯತ್ನಿಸಿದರೆ ಆಗ ನಾವೇ ಹೇಗೆ ಮೋಸ ಹೋಗ್ತೀವಿ ಎನ್ನುವುದೇ ಚಿತ್ರದ ಕಥೆ ಎನ್ನುವುದು ನಿರ್ದೇಶಕರ ಮಾತಾಗಿತ್ತು.

    ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಅರವಿಂದ್ ಮೂರ್ತಿ ಮಾತನಾಡಿ, ಈ ಕಥೆಯಲ್ಲಿರುವ ರೋಚಕ ಟ್ವಿಸ್ಟ್‍ಗಳು ನಮಗೆ ತುಂಬಾ ಇಷ್ಟವಾದವು. ಬಜೆಟ್ ಅಂದುಕೊಂಡದ್ದಕ್ಕಿಂತ ಸ್ವಲ್ಪ ಜಾಸ್ತಿಯಾದರೂ ಚಿತ್ರ ಚೆನ್ನಾಗಿ ಮೂಡಿಬಂದಿರುವುದರಿಂದ ನಮಗೆ ತೃಪ್ತಿಯಾಗಿದೆ ಎಂದು ಹೇಳಿದರು.

    ನಾಯಕ ನಟ ನಿರಂಜನ್ ಒಡೆಯರ್ ಮಾತನಾಡಿ ಪ್ರತಿ ನಿಸ್ವಾರ್ಥ ಮುಖದ ಹಿಂದೆ ಸ್ವಾರ್ಥ ಮನಸ್ಸಿರುತ್ತದೆ. ಅದು ಏನೇನು ಮಾಡಬಹುದು. ಅದರಲ್ಲೂ ಹಣ ಅಂತ ಬಂದಾಗ ಏನು ಮಾಡುತ್ತದೆ ಈ ಚಿತ್ರದಲ್ಲಿ ಹೇಳಲಾಗಿದೆ. ಹಿನ್ನೆಲೆ ಸಂಗೀತವೇ ಈ ಚಿತ್ರದಲ್ಲಿ ಹೀರೋ, ಕಥೆ ಚಿತ್ರದ ಮತ್ತೊಬ್ಬ ನಾಯಕ ಎಂದು ಹೇಳಿದರು. ನಾಯಕಿ ಅದಿತಿ ಪ್ರಭುದೇವ ಮಾತನಾಡಿ ನನಗೆ ಮೊದಲಿನಿಂದಲೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳೆಂದರೆ ತುಂಬಾ ಇಷ್ಟ. ನನ್ನ ಪಾತ್ರದ ಹೆಸರು ತುಂಬಾ ಚೆನ್ನಾಗಿದೆ. ಜೀವನದಲ್ಲಿ ತುಂಬಾ ಎಥಿಕ್ಸ್ ಇಟ್ಟುಕೊಂಡ ಹುಡುಗಿ. ಇದು ನನಗೆ ಅದೃಷ್ಟದ ಸಿನಿಮಾ. ಏಕೆಂದರೆ ಇದರಲ್ಲಿ ಆಕ್ಟ್ ಮಾಡುವಾಗಲೇ ನನಗೆ ತುಂಬಾ ಆಫರ್‍ಗಳು ಬಂದವು ಎಂದು ಹೇಳಿದರು. ಮತ್ತೊಬ್ಬ ನಾಯಕಿ ಯಜ್ಞಶೆಟ್ಟಿ, ಸಂಗೀತ ನಿರ್ದೇಶಕ ವೀರ ಸಮರ್ಥ್, ನಟ ಲಿಖಿತ್ ಸೂರ್ಯ ಕೂಡ ಈ ಚಿತ್ರದ ಕುರಿತಂತೆ ಮಾತನಾಡಿದರು.

  • ‘ಮಾರ್ಲಾಮಿ’ ಚಿತ್ರಕ್ಕೆ ನಟ ಪ್ರಥಮ್ ಚಾಲನೆ

    ‘ಮಾರ್ಲಾಮಿ’ ಚಿತ್ರಕ್ಕೆ ನಟ ಪ್ರಥಮ್ ಚಾಲನೆ

    ಬೆಂಗಳೂರು: ಮನೆಯ ಹಿರಿಯರನ್ನು ಸ್ಮರಿಸುವುದಕ್ಕಾಗಿಯೇ ಒಂದು ತಿಂಗಳನ್ನು ನಮ್ಮ ಹಿಂದೂ ಶಾಸ್ತ್ರದಲ್ಲಿ ಮೀಸಲಿಡಲಾಗಿದೆ. ಆ ತಿಂಗಳನ್ನು ಪಿತೃ ಪಕ್ಷವೆಂದು ಕರೆಯುತ್ತಾರೆ. ಆ ಒಂದು ಆಚರಣೆಗೆ ಮಾರ್ಲಾಮಿ ಹಬ್ಬವೆಂದೂ ಕರೆಯುತ್ತಾರೆ. ಈ ಆಚರಣೆ ಹೇಗೆ ಬಂತು? ಇದರ ಹಿನ್ನೆಲೆ ಏನು? ಈ ಹಬ್ಬದ ವಿಶೇಷತೆಗಳೇನು? ಈ ಎಲ್ಲಾ ಸಂಗತಿಗಳನ್ನು ಇಟ್ಟುಕೊಂಡು ಈಗ ಸ್ಯಾಂಡಲ್‍ವುಡ್‍ನಲ್ಲಿ ಚಲನಚಿತ್ರವೊಂದು ನಿರ್ಮಾಣವಾಗುತ್ತಿದೆ.

    ಟಿ.ವಿನಯ್‍ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ನೆರವೇರಿತು. ಗವಿಪುರಂ ಗುಟ್ಟಹಳ್ಳಿಯ ಬಂಡೆ ಮಹಾಕಾಳಿಯ ದೇವಸ್ಥಾನದಲ್ಲಿ ನಡೆದ ಮುಹೂರ್ತದ ದೃಶ್ಯಕ್ಕೆ ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಕ್ಲ್ಯಾಪ್ ಮಾಡಿದರೆ ಧಾತ್ರಿ ಮಂಜುನಾಥ್ ಕ್ಯಾಮರಾ ಚಾಲನೆ ಮಾಡಿದರು.

    ಸರಿಗಮಪ ರಿಯಾಲಿಟಿ ಶೋ ವಿನ್ನರ್ ಚನ್ನಪ್ಪ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮಾರ್ಲಾಮಿ ಚಿತ್ರದ ನಾಯಕಿಯಾಗಿ ಪದ್ಮಾವತಿ ಧಾರವಾಹಿ ಖ್ಯಾತಿಯ ವರ್ಷಿತ ವರ್ಮ ನಟಿಸುತ್ತಿದ್ದಾರೆ. ಎರಿಕ್ ವಿ.ಜಿ. ಅವರ ಛಾಯಾಗ್ರಹಣ ಹಾಗೂ ಅರುಣ್ ಆಂಡ್ರೋ ಅವರ ಸಂಗೀತ ಈ ಚಿತ್ರಕ್ಕಿದೆ.

    ಮುಹೂರ್ತದ ನಂತರ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದ ನಿರ್ದೇಶಕ ವಿನಯ್ ಕುಮಾರ್ ಪಕ್ಕಾ ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಕಥೆಯೇ ಇದು. ಪಿತೃಪಕ್ಷವನ್ನು ಗ್ರಾಮೀಣ ಪ್ರದೇಶಗಳಲ್ಲಿ ತುಂಭಾ ಭಯ ಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬವನ್ನು ತೋರಿಸುವ ಮೂಲಕ ಸಮಾಜಕ್ಕೆ ಸಂದೇಶ ಹೇಳಲು ಪ್ರಯತ್ನಿಸುತ್ತಿದ್ದೇನೆ. ಈ ಚಿತ್ರದಲ್ಲಿ ಕಥೆಯೇ ಹೀರೋ. ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್ ಇದೆ. ಚೆನ್ನಪ್ಪ ಅವರ ಪಾತ್ರ ಚಿತ್ರಕ್ಕೆ ಹೊಸ ತಿರುವು ಕೊಡುತ್ತದೆ. ಇದರ ಜೊತೆಗೆ ಹಾರರ್ ಟಚ್ ಕೂಡ ಇದೆ. ಚನ್ನರಾಯಪಟ್ಟಣ ಸುತ್ತಮುತ್ತ ನಡೆಯುವ ಕಥೆ ಇದಾಗಿದ್ದು, 95% ಅಲ್ಲೇ ಚಿತ್ರೀಕರಣ ಮಾಡುತ್ತಿದ್ದೇವೆ. ಉಳಿದಂತೆ ಸಿಟಿ ಬ್ಯಾಕ್ ಡ್ರಾಪ್‍ನಲ್ಲಿ ನಡೆಯುತ್ತಿದೆ ಎಂದು ಹೇಳಿದರು.

    ಈ ಚಿತ್ರಕ್ಕೆ ಕುಮಾರ್ ಬಂಡವಾಳ ಹಾಕಿದ್ದು, ಚಿತ್ರದ ಕುರಿತಂತೆ ಮಾತನಾಡುತ್ತಾ, ಮಂಡ್ಯ, ಹಾಸನ ಏರಿಯಾದಲ್ಲಿ ನಡೆಯುವ ಕಥೆ ಇದು. ನಿರ್ದೇಶಕರು ಈ ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಕಥೆಯಲ್ಲಿ ಒಂದಿಷ್ಟು ಸಸ್ಪೆನ್ಸ್ ಹಾರರ್ ಕೂಡ ಇದೆ. ಈ ಚಿತ್ರದ ಕಾನ್ಸೆಪ್ಟ್ ಹೇಗಿರುತ್ತದೆ ಎಂಬುದನ್ನು ಚಿತ್ರ ಮುಗಿದ ನಂತರ ಟ್ರೈಲರ್ ಮಾಡಿ ಅದರ ಮೂಲಕ ಜನರಿಗೆ ಹೇಳಬೇಕೆಂದು ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಪ್ರಥಮ್ ಮಾತನಾಡಿ ನಮ್ಮನ್ನಗಲಿರುವ ಹಿರಿಯರನ್ನು ನೆನಪಿಸಿಕೊಂಡು ಮಾಡುವ ಪೂಜೆಯನ್ನು ಮಾರ್ಲಾಮಿ ಎನ್ನುತ್ತೇವೆ. ಈ ತರದ ಹಳ್ಳಿ ಸೊಗಡಿನ ಸಿನಿಮಾಗಳು ಇನ್ನು ಹೆಚ್ಚು ಬರಬೇಕೆಂದು ಶುಭ ಹಾರೈಸಿದರು. ಚಿತ್ರದಲ್ಲಿ 5 ಹಾಡುಗಳಿದ್ದು, ಅರುಣ್ ಆಂಡ್ರೋ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವರುಣ್ ಮೋಹನ್ ಜುನೇಜ, ಶೋಭರಾಜ್, ಮುನಿ ಕೆಂಪೇಗೌಡ, ಸುಧಾ, ದಿನೇಶ್ ಗುರೂಜಿ, ರೆಮೋ ಉಳಿದ ತಾರಾಬಳಗದಲ್ಲಿದ್ದಾರೆ.

  • ‘ಸಿಂಗ’ನ ಟ್ರೈಲರ್ ಲಾಂಚ್‍ಗೆ ಫಿಕ್ಸಾಯ್ತು ಮುಹೂರ್ತ!

    ‘ಸಿಂಗ’ನ ಟ್ರೈಲರ್ ಲಾಂಚ್‍ಗೆ ಫಿಕ್ಸಾಯ್ತು ಮುಹೂರ್ತ!

    ಬೆಂಗಳೂರು: ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರ ಪಕ್ಕಾ ಮಾಸ್ ಕಂಟೆಂಟಿನ ಮುನ್ಸೂಚನೆಯೊಂದಿಗೆ ಅಬ್ಬರಿಸಲಾರಂಭಿಸಿದೆ. ಯುಕೆಎಂ ಸ್ಟುಡಿಯೋಸ್ ಲಾಂಛನದಲ್ಲಿ ಉದಯ್ ಮೆಹ್ತಾ ನಿರ್ಮಾಣ ಮಾಡಿರೋ ಈ ಚಿತ್ರವೀಗ ಚಿತ್ರೀಕರಣ, ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿಕೊಂಡು ತೆರೆಗೆ ಬರಲು ಸಿದ್ಧವಾಗಿದೆ. ಈ ಕಡೆಯ ಕ್ಷಣಗಳಲ್ಲಿ ಬಿಸಿಯೇರಿಸುವ ಸಲುವಾಗಿಯೇ ಟ್ರೈಲರ್ ಒಂದನ್ನು ಲಾಂಚ್ ಮಾಡಲು ಚಿತ್ರತಂಡ ಅಣಿಗೊಂಡಿದೆ.

    ಇದೇ ಜೂನ್ 14ರಂದು ಸಿಂಗ ಟ್ರೈಲರ್ ಲಾಂಚ್ ಆಗಲಿದೆ. ಈ ಹಿಂದೆ ರಾಮ್ ಲೀಲಾ ಎಂಬ ಚಿತ್ರ ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಕೆಲ ಪೋಸ್ಟರ್ ಗಳ ಮೂಲಕವೇ ಇದೊಂದು ಪಕ್ಕಾ ಮಾಸ್ ಸಬ್ಜೆಕ್ಟಿನ ಚಿತ್ರ ಅನ್ನೋದೂ ನಿಖರವಾಗಿಯೇ ಮನದಟ್ಟಾಗಿದೆ. ಚಿರಂಜೀವಿ ಸರ್ಜಾ ಇದುವರೆಗೂ ಸಾಕಷ್ಟು ಚಿತ್ರಗಳಲ್ಲಿ ಮಾಸ್ ಲುಕ್ಕಿನಲ್ಲಿ ನಟಿಸಿದ್ದಾರೆ. ಆದರೆ ಸಿಂಗದಲ್ಲಿ ಅವರ ಪಾತ್ರಕ್ಕಿರೋ ರೌದ್ರ ಸ್ಪರ್ಶ ಪ್ರೇಕ್ಷಕರನ್ನು ಬೆರಗಾಗಿಸಲಿದೆ ಅನ್ನೋದು ಚಿತ್ರತಂಡದ ಭರವಸೆ.

    ಸಿಂಗ ಎಂಬ ಮಾಸ್ ಟೈಟಲ್ಲೇ ಹೇಳುವಂತೆ ಇದೊಂದು ಸಾಹಸ ಪ್ರಧಾನವಾದ ಚಿತ್ರ. ಇದರಲ್ಲಿ ಮೈ ನವಿರೇಳಿಸುವಂಥಾ ಸಾಹಸ ಸನ್ನಿವೇಶಗಳಿವೆ. ಅದೆಲ್ಲವನ್ನು ಡಾ.ಕೆ ರವಿವರ್ಮಾ ಮತ್ತು ಪಳನಿರಾಜ್ ನಿರ್ದೇಶನ ಮಾಡಿದ್ದಾರೆ. ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಚೇತನ್ ಹಾಡುಗಳನ್ನು ಬರೆದಿದ್ದಾರೆ. ಈಗಾಗಲೇ ಈ ಚಿತ್ರದ ಶ್ಯಾನೇ ಟಾಪಗೌವ್ಳೆ ಅನ್ನೋ ಹಾಡಂತೂ ಟ್ರೆಂಡ್ ಸೆಟ್ ಮಾಡಿದೆ. ಸಿಂಗ ಮೂಲಕ ಚಿರಂಜೀವಿ ಸರ್ಜಾಗೆ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ.

  • ಆರ್. ಚಂದ್ರು ಅದೆಷ್ಟು ಶ್ರದ್ಧೆಯಿಂದ ಐ ಲವ್ ಯೂ ಅಂದಿದ್ದಾರೆ ಗೊತ್ತಾ?

    ಆರ್. ಚಂದ್ರು ಅದೆಷ್ಟು ಶ್ರದ್ಧೆಯಿಂದ ಐ ಲವ್ ಯೂ ಅಂದಿದ್ದಾರೆ ಗೊತ್ತಾ?

    ಬೆಂಗಳೂರು: ತಾಜ್‍ಮಹಲ್, ಚಾರ್ ಮಿನಾರ್ ನಂಥಾ ಸದಾ ಕಾಡುವ ಪ್ರೇಮಕಾವ್ಯಗಳನ್ನು ಕಟ್ಟಿ ಕೊಟ್ಟವರು ನಿರ್ದೇಶಕ ಆರ್ ಚಂದ್ರು. ಇದೀಗ ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರ ತೆರೆ ಕಾಣಲು ರೆಡಿಯಾಗಿದೆ. ಈಗಾಗಲೇ ಭಾರೀ ನಿರೀಕ್ಷೆಗೆ ಕಾರಣವಾಗಿರೋ ಐ ಲವ್ ಯೂ ಜೂನ್ 14ರಂದು ತೆರೆ ಕಾಣುತ್ತಿದೆ. ಯಾವುದೇ ಚಿತ್ರಗಳನ್ನು ಮಾಡುವಾಗಲೂ ಅಚ್ಚುಕಟ್ಟಾದ ಪೂರ್ವ ತಯಾರಿ, ಒಂದೇ ಒಂದು ತೊಡಕೂ ಸಂಭವಿಸದಂತೆ ಮುಂದಡಿಯಿಡೋ ಎಚ್ಚರ ಮತ್ತು ಕಥೆಯನ್ನು ಕಣ್ಣಲ್ಲಿ ಕಣ್ಣಿಟ್ಟು ರೂಪಿಸೋ ಕಲಾವಂತಿಕೆ ಚಂದ್ರು ಅವರ ಟ್ರೇಡ್ ಮಾರ್ಕುಗಳಿದ್ದಂತೆ. ಬಿಡುಗಡೆಯ ಪೂರ್ವದಲ್ಲಿಯೇ ಐ ಲವ್ ಯೂ ಇಂಥಾದ್ದೊಂದು ಕ್ರೇಜ್ ಹುಟ್ಟು ಹಾಕಿರೋದರ ಹಿಂದೆಯೂ ಅಂಥಾದ್ದೇ ಪರಿಶ್ರಮಗಳ ಕಥೆಯಿದೆ!

    ಆರ್. ಚಂದ್ರು ವರ್ಷಕ್ಕೊಂದು ಅಚ್ಚುಕಟ್ಟಾದ ಚಿತ್ರ ಮಾಡೋ ಪರಿಪಾಠವನ್ನು ರೂಢಿಸಿಕೊಂಡು ಬಂದಿದ್ದಾರೆ. ತಮ್ಮ ಪ್ರೇಕ್ಷಕರು ಏನನ್ನು ನಿರೀಕ್ಷಿಸುತ್ತಾರೆಂಬ ನಾಡಿಮಿಡಿತವನ್ನು ಅರ್ಥೈಸಿಕೊಂಡಿರೋ ಅವರು ಕಾಡುವಂಥಾ ಕಥೆಗೊಂದು ಅಂತಿಮ ಸ್ಪರ್ಶ ನೀಡಿಯಾದ ಮೇಲಷ್ಟೇ ಹೀರೋ, ನಾಯಕಿ, ತಾರಾಗಣ ಮುಂತಾದವುಗಳ ಬಗ್ಗೆ ಗಮನ ಹರಿಸುತ್ತಾರೆ. ಹೀಗೆಯೇ ನಿರ್ದೇಶಕರಾಗಿ ಸಾಗಿ ಬಂದಿರೋ ಚಂದ್ರು ಅವರ ಪಾಲಿಗೇ ಐ ಲವ್ ಯೂ ಚಿತ್ರ ಸ್ಪೆಷಲ್ ಅನ್ನಿಸಲು ಹಲವಾರು ಕಾರಣಗಳಿವೆ.

    ಈ ಚಿತ್ರದ ವಿಚಾರದಲ್ಲಿ ನಿರ್ದೇಶಕನಾಗಿ, ನಿರ್ಮಾಪಕರಾಗಿಯೂ ಚಂದ್ರು ಜವಾಬ್ದಾರಿ ಹೊತ್ತುಕೊಂಡಿರೋದು ಗೊತ್ತೇ ಇದೆ. ಹೀಗೆ ಎರಡೆರಡು ಭಾರವಿದ್ದರೂ ಕೂಡಾ ಈ ಸಿನಿಮಾವನ್ನು ಅವರು ಏಕ ಕಾಲದಲ್ಲಿಯೇ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರೂಪಿಸಿರೋದೊಂದು ಸಾಹಸ. ಚಂದ್ರು ಈ ಹಿಂದೆಯೂ ತೆಲುಗಿನಲ್ಲೊಂದು ಚಿತ್ರವನ್ನ ನಿರ್ದೇಶನ ಮಾಡಿದ್ದರು. ಆದ್ದರಿಂದಲೇ ಅವರಲ್ಲಿನ ಪ್ರೇಕ್ಷಕ ವರ್ಗಕ್ಕೆ ಚಿರಪರಿಚಿತರು. ಉಪೇಂದ್ರ ಕೂಡಾ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ದಿಸೆಯಲ್ಲಿ ಐ ಲವ್ ಯೂ ಚಿತ್ರವನ್ನು ತೆಲುಗಿನಲ್ಲಿಯೂ ರೂಪಿಸುವ ನಿರ್ಧಾರಕ್ಕೆ ಬಂದು ಚಂದ್ರು ಅದರಲ್ಲಿಯೂ ಯಶ ಕಂಡಿದ್ದಾರೆ.

    ಈ ಚಿತ್ರದ ವಿಶೇಷತೆ ಏನು ಎಂಬ ಪ್ರಶ್ನೆ ಎದುರಾದರೆ ಚಂದ್ರು ಅವರು ಥಟ್ಟನೆ ಗಟ್ಟಿಯಾದ ಕಥೆ ಮತ್ತು ಯಾವ ಆಲೋಚನೆಗಳ ನಿಲುಕಿಗೂ ಸಿಗದ ಗಟ್ಟಿಯಾದ ಕಥೆ ಅನ್ನುತ್ತಾರೆ. ಅವರ ಈ ಹಿಂದಿನ ಚಿತ್ರಗಳ ಜೀವಾಳವೂ ಗಟ್ಟಿ ಕಥೆಯೇ. ಆದರೆ ಐ ಲವ್ ಯೂ ವಿಚಾರದಲ್ಲದು ಮತ್ತಷ್ಟು ಗಟ್ಟಿಯಾಗಿದೆಯಂತೆ. ಐ ಲವ್ ಯೂ ಅಂದರೆ ಪ್ರೇಮದ ಮೊದಲ ಪುಳಕಗಳು ಸಾಲುಗಟ್ಟಿ ನಿಲ್ಲುತ್ತವೆ. ಹಾಗೆಂದ ಮೇಲೆ ಇದೊಂದು ಅದ್ಭುತ ಪ್ರೇಮ ಕಥಾನಕ ಅನ್ನೋದರಲ್ಲಿ ಯಾವ ಡೌಟೂ ಇಲ್ಲ. ಆದರೆ ಅದರಾಚೆಗೂ ಕಥೆಯ ವಿಚಾರಗಳಲ್ಲಿ ಅಚ್ಚರಿಗಳು ಪ್ರೇಕ್ಷಕರಿಗಾಗಿ ಕಾದು ಕೂತಿವೆ. ಅದೇನೆಂಬುದೇ ಪ್ರಧಾನವಾದ ಸರ್ಪ್ರೈಸ್!

    ಐ ಲವ್ ಯೂ ಫ್ಯಾಮಿಲಿ ಸಮೇತ ಕೂತು ನೋಡಿ ಎಂಜಾಯ್ ಮಾಡುವಂಥಾ ಸಿನಿಮಾ ಮಾತ್ರವಲ್ಲ; ಫ್ಯಾಮಿಲಿ ಸಮೇತ ನೋಡಲೇ ಬೇಕಾದ ಚಿತ್ರ ಅನ್ನೋದು ಚಂದ್ರು ಅವರ ಭರವಸೆ. ಯಾಕೆಂದರೆ ಪ್ರೀತಿ ಪ್ರೇಮಗಳಾಚೆಗೂ ಇಲ್ಲಿ ಮೌಲ್ಯಯುತವಾದೊಂದು ಸಂದೇಶವಿದೆ. ಕ್ಲೈಮ್ಯಾಕ್ಸಿನಲ್ಲಿಯೂ ವಿಶೇಷತೆಗಳಿವೆ. ಇದೆಲ್ಲವೂ ಇದೇ ಜೂನ್ 14ರಂದು ಸ್ಪಷ್ಟವಾಗಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.