Tag: ಕನ್ನಡ ಸಂಘಟನೆ

  • ಕನ್ನಡ ಪರ ಸಂಘಟನೆಗಳ ತುಕ್ಡೆ ಗ್ಯಾಂಗ್ -ಸಿ.ಟಿ ರವಿ ರಾಜೀನಾಮೆಗೆ ಆಗ್ರಹ

    ಕನ್ನಡ ಪರ ಸಂಘಟನೆಗಳ ತುಕ್ಡೆ ಗ್ಯಾಂಗ್ -ಸಿ.ಟಿ ರವಿ ರಾಜೀನಾಮೆಗೆ ಆಗ್ರಹ

    ನೆಲಮಂಗಲ: ಕನ್ನಡ ಪರ ಸಂಘಟನೆಗಳು ‘ತುಕ್ಡೆ ಗ್ಯಾಂಗ್’ ಎಂದ ಸಚಿವ ಸಿ.ಟಿ ರವಿ ವಿರುದ್ಧ ಕನ್ನಡ ಸಂಘಟನೆಗಳು ತಿರುಗಿಬಿದ್ದಿವೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಪ್ರವಾಸಿ ಮಂದಿರದ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸಚಿವ ಸಿ.ಟಿ ರವಿ ವಿರುದ್ಧ ಘೋಷಣೆಗಳನ್ನು ಕೂಗಿ ಸಚಿವರ ಭಾವಚಿತ್ರಕ್ಕೆ ಮಸಿ ಬಳಿಯುವ ಮೂಲಕ ಪ್ರತಿಭಟಿದ್ದಾರೆ. ಅಲ್ಲದೆ ಈ ಕೂಡಲೇ ರಾಜೀನಾಮೆ ಕೊಟ್ಟು ಕನ್ನಡ ಸಂಘಟನೆಗಳ ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದ್ದಾರೆ.

    ಕನ್ನಡ ಪರ ಸಂಘಟನೆಗಳು ನಾಡು ನುಡಿ ವಿಚಾರದಲ್ಲಿ ಹಾಗೂ ಜನಸಾಮಾನ್ಯರ ಕುಂದುಕೊರತೆಗಳಿಗೆ ನ್ಯಾಯ ಒದಗಿಸಲು ಸಾಕಷ್ಟು ಹೋರಾಟದ ರೂಪದಲ್ಲಿ ಶ್ರಮಿಸಲಾಗುತ್ತಿದೆ. ಹೀಗಿರುವಾಗ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರ ಈ ಮಾತಿನಿಂದ ಕನ್ನಡಕ್ಕೆ ಅಪಮಾನವಾಗಿದೆ. ಹೀಗಾಗಿ ಕೂಡಲೇ ಸಚಿವ ಸಿಟಿ.ರವಿಯವರು ರಾಜೀನಾಮೆ ನೀಡಿ ಕನ್ನಡಿಗರ ಕ್ಷಮೆ ಕೇಳಬೇಕೆಂದು ನೆಲಮಂಗಲ ತಾಲೂಕು ಕರವೇ ಅಧ್ಯಕ್ಷ ಸುರೇಶ್ ಆಗ್ರಹಿಸಿದ್ದಾರೆ.

    ಪ್ರತಿಭಟನೆಯಲ್ಲಿ ರೆಹಮಾನ್, ಯಶವಂತ್, ಉಮೇಶ್, ಶ್ರೀನಿವಾಸ್, ರವಿ ಇನ್ನಿತರ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ಭಾಗಿಯಾಗಿದ್ದರು.

  • ಜೈನ ಸಮುದಾಯದ ಬ್ಯಾನರ್ ಹರಿದ ಹೋರಾಟಗಾರರು ರೌಡಿಗಳು: ತೇಜಸ್ವಿ ಸೂರ್ಯ

    ಜೈನ ಸಮುದಾಯದ ಬ್ಯಾನರ್ ಹರಿದ ಹೋರಾಟಗಾರರು ರೌಡಿಗಳು: ತೇಜಸ್ವಿ ಸೂರ್ಯ

    – ಉರ್ದು ಭಾಷೆಯಲ್ಲಿ ಬ್ಯಾನರ್ ಹಾಕಿದ್ರೆ ಪ್ರಶ್ನೆ ಮಾಡಲ್ಲ
    – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ಬೆಂಗಳೂರು: ಯುವ ಬಿಜೆಪಿ ನಾಯಕ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕನ್ನಡ ಸಂಘಟನೆಯ ಕಾರ್ಯಕರ್ತರ ಕುರಿತು ಮಾಡಿರುವ ಟ್ವೀಟ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಜೈನ ದೇವಾಲಯದಲ್ಲಿ ಹಿಂದಿ ಬ್ಯಾನರ್ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈನ ಸಹೋದರರ ಮೇಲೆ ಕೆಲ ರೌಡಿಗಳು ದಾಳಿ ಮಾಡಿರುವುದು ಬಹಳ ನೋವಾಗಿದೆ. ಆದರೆ ಇವರು ಬೆಂಗಳೂರಿನಲ್ಲಿ ಉರ್ದು ಭಾಷೆ ಬಳಕೆ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಕರ್ನಾಟಕಕ್ಕೆ ಕೊಡುಗೆ ನೀಡಿರುವ ಶಾಂತಿ ಪ್ರಿಯ ಜೈನರ ಮೇಲೆ ಹಲ್ಲೆ ನಡೆಸಿರುವುದು ನಿಜವಾದ ಕನ್ನಡಿಗರು ಮತ್ತು ಕಾರ್ಯಕರ್ತರಿಗೆ ಅಪಚಾರ ಮಾಡಿದಂತೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.

    ಇದಾದ ನಂತರ ಮತ್ತೊಂದು ಟ್ವೀಟ್ ನಲ್ಲಿ ದೊಡ್ಡ ಕವಿಗಳಾದ ಪಂಪ, ಪೊನ್ನ, ರನ್ನ ರತ್ನತ್ರಯರಾಗಿದ್ದು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಈ ಮೂವರು ಜೈನರಾಗಿದ್ದಾರೆ. ಹೀಗಾಗಿ ಕರ್ನಾಟಕ ಯುವ ಜೈನರು ಕರ್ನಾಟಕದ ಇತಿಹಾಸವನ್ನು ಓದಬೇಕು ಮತ್ತು ಸಂವಹನದ ವೇಳೆ ಕನ್ನಡವನ್ನು ಬಳಕೆ ಮಾಡಬೇಕು ಎಂದು ಹೇಳಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಸಂಘಟನೆಯ ಸದಸ್ಯರನ್ನು ರೌಡಿಗಳು ಎಂದು ಕರೆದಿದ್ದಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. 6 ಸಾವಿರಕ್ಕೂ ಹೆಚ್ಚು ಜನ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರೆ 23 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.

    https://twitter.com/SwamiGeetika/status/1163088798890094598

    ಕನ್ನಡದ ನೆಲದಲ್ಲಿ ಕನ್ನಡ ಹಾಕದಿದ್ದರೆ ಪ್ರಶ್ನೆ ಮಾಡಬೇಕು ತಾನೇ? ಕನ್ನಡ ನೆಲದ ಜಾಗ, ನೀರು, ಹಣ ಎಲ್ಲಾ ಬೇಕು. ಆದರೆ ಕನ್ನಡ ಬೇಡವೇ? ಹೋಗಿ ಅವರನ್ನು ಓಲೈಕೆ ಮಾಡೋದು ನೋಡಿದರೆ ನೀವು ಕೇವಲ ಓಟಿಗಾಗಿ ನಿಮ್ಮ ಈ ಹೇಳಿಕೆ ಅನಿಸುತ್ತದೆ. ಅಷ್ಟು ಕನ್ನಡ ಜನರ ಕಾಳಜಿ ಇದ್ದರೆ ನೆರೆ ಪರಿಹಾರ ತರಬೇಕಿತ್ತು. ಬಕೆಟ್ ಹಿಡಿಯೋದೇ ಜೀವನವಾಗಬಾರದು ಎಂದು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಕರ್ನಾಟಕದಲ್ಲಿರುವ ಬೋರ್ಡ್ ಗಳಲ್ಲಿ ಕನ್ನಡ ಇರಬೇಕು ಎನ್ನುವುದು ಹೇಗೆ ಅಪರಾಧ? ಇಲ್ಲದಿದ್ದಾಗ ಪ್ರಶ್ನಿಸುವುದು ಯಾವ ಅಪರಾಧ? ಕನ್ನಡಿಗರು ಏನೇ ಕೇಳಿದರೂ ಉರ್ದುವನ್ನು ಯಾಕೆ ಮಧ್ಯದಲ್ಲಿ ತರುತ್ತೀರಾ? ಕನ್ನಡದ ವಿಷಯದಲ್ಲಿ ಯಾಕೆ ವಸ್ತುನಿಷ್ಠ ವಾಗಿ ಹೇಳಿಕೆ ನೀಡುವುದಿಲ್ಲ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.

    ಏನಿದು ಪ್ರಕರಣ?
    ಇನ್‍ಫೆಂಟ್ರಿ ರಸ್ತೆಯ ಬಳಿ ಜೈನ ಸಮುದಾಯದ ಪ್ರಾರ್ಥನಾ ಮಂದಿರದಲ್ಲಿ ಚಾತುರ್ಮಾಸ ಆಚರಣೆ ನಡೆಯುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಲಾಗಿತ್ತು. ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಿದ್ದಕ್ಕೆ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ.ಹರೀಶ್‍ಕುಮಾರ್, ಪದಾಧಿಕಾರಿಗಳಾದ ಮಂಜು, ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಅಂಜನಪ್ಪ, ರಕ್ಷಣಾ ಸೇನೆಯ ರಮೇಶ್‍ಗೌಡ ಹಾಗೂ ಕರುನಾಡ ಸೇವಕರು ವೇದಿಕೆಯ ಮಾದೇಶ್‍ಗೌಡ ಈ ಬ್ಯಾನರ್ ಹರಿದು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

    ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬ್ಯಾನರ್ ಹರಿದು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡಪರ ಸಂಘಟನೆಗಳ ಆರು ಮಂದಿ ಕಾರ್ಯಕರ್ತರನ್ನು ಕೋಮು ಸೌಹರ್ದತೆಗೆ ಧಕ್ಕೆ ತರುವ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆರು ಮಂದಿಯನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

    ಆನಂದ ಚಾತುರ್ಮಾಸ ಸಮಿತಿಯ ಕಾರ್ಯದರ್ಶಿ ಫ್ಯಾನ್‍ಚಂದ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜೈನ ಸಮುದಾಯಕ್ಕಾಗಿ ನಡೆಸುವ ಕಾರ್ಯಕ್ರಮ ಆಗಿರುವುದರಿಂದ ಬೇರೆಯವರಿಗೆ ಪ್ರವೇಶ ಇರುವುದಿಲ್ಲ. ಈಗಾಗಿ ಕನ್ನಡದಲ್ಲಿ ಬ್ಯಾನರ್ ಹಾಕಿರಲಿಲ್ಲ. ಹಿಂದೆಯೂ ಹಿಂದಿ ಭಾಷೆಯಲ್ಲಿಯೇ ಬ್ಯಾನರ್ ಹಾಕಿದ್ದೇವೆ. ಎಂದೂ ಕೂಡ ಇಂತಹ ಅನುಭವ ಆಗಿಲ್ಲ. ಶುಕ್ರವಾರ ಮಾತ್ರ ಕೆಲ ಕಾರ್ಯಕರ್ತರು ಬ್ಯಾನರ್ ಹರಿದಿದ್ದಾರೆ. ನಾವು ಕನ್ನಡ ವಿರೋಧಿಗಳಲ್ಲ. ಚಾತುರ್ಮಾಸ್ಯಕ್ಕೆ ಕನ್ನಡಿಗರು ಬಾರದ ಕಾರಣ ಹಿಂದಿಯಲ್ಲಿ ಬ್ಯಾನರ್ ಹಾಕಲಾಗಿತ್ತು ಎಂದು ಹೇಳಿದ್ದಾರೆ.

  • ಆರು ಸಂಘಟನೆ, ಒಬ್ಬರೇ ಅಧ್ಯಕ್ಷ – ಸರ್ಕಾರದಿಂದ ಅನುದಾನದ ಮೇಲೆ ಅನುದಾನ

    ಆರು ಸಂಘಟನೆ, ಒಬ್ಬರೇ ಅಧ್ಯಕ್ಷ – ಸರ್ಕಾರದಿಂದ ಅನುದಾನದ ಮೇಲೆ ಅನುದಾನ

    – ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಗೆ ಸಂಘಟನೆಗಳ ಆಕ್ರೋಶ

    ಬೆಂಗಳೂರು: ಕನ್ನಡ ಅಭಿವೃದ್ಧಿಗಾಗಿ ಅನೇಕ ಸಂಘ ಸಂಸ್ಥೆಗಳು, ಕನ್ನಡ ಸಂಘಟನೆಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಲೇ ಇವೆ. ಇದಕ್ಕಾಗಿ ಇಲಾಖೆ ಪ್ರತೀ ವರ್ಷ ವಿವಿಧ ಸಂಘ ಸಂಸ್ಥೆಗಳಿಗೆ ಅನುದಾನ ನೀಡುತ್ತದೆ. ಆದರೆ ಅನುದಾನ ನೀಡಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪವೊಂದು ಕೇಳಿಬಂದಿದೆ.

    ಡಾ. ಶರಣ ಬಸವ ಗದ್ದುಗೆ ಎಂಬ ವ್ಯಕ್ತಿ ಅಧ್ಯಕ್ಷರಾಗಿರುವ ಆರು ಸಂಘಟನೆಗಳಿಗೂ ಅನುದಾನ ನೀಡಲಾಗುತ್ತಿದೆ ಅಂತ ದೂರು ನೀಡಲಾಗಿದೆ. ಈ ಪ್ರಕರಣ ಉಳಿದ ಕನ್ನಡ ಸಂಘಟನೆಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ದೂರಿನಲ್ಲಿ ನೀಡಿರುವ ಪ್ರಕಾರ ಡಾ. ಶರಣ ಬಸವ ಗದ್ದುಗೆ ಅಧ್ಯಕ್ಷರಾಗಿರುವ ಸಂಘಟನೆಗಳ ವಿವರ ಹೀಗಿದೆ.
    1. ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ
    2. ಶ್ರೀ ಚರ ಬಸವೇಶ್ವರ ಸಂಗೀತ ಸೇವಾ ಸಮಿತಿ
    3. ಕರ್ನಾಟಕ ಸಂಸ್ಕೃತಿ ಹಾಗೂ ಭಾಷಾ ಅಭಿವೃದ್ಧಿ ಸಂಸ್ಥೆ
    4. ಸರಗನಾಡು ಸೇವಾ ಪ್ರತಿಷ್ಠಾನ
    5. ಶೃಷ್ಟಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ
    6. ಸರಗನಾಡು ಕಲಾ ವೇದಿಕೆ

    ಪ್ರತಿ ವರ್ಷ ಏನಿಲ್ಲವೆಂದ್ರೂ ಒಂದು ಸಂಘಟನೆಗೆ ಕನಿಷ್ಟ 1 ಲಕ್ಷದಿಂದ 5 ಲಕ್ಷದವರೆಗೆ ಅನುದಾನ ಸಿಗತ್ತದೆ. ಈ ಆರು ಸಂಘಟನೆಗಳಿಗೂ ಪ್ರತೀ ವರ್ಷ ಅನುದಾನ ನೀಡಲಾಗುತ್ತಿದೆ. ಇದಕ್ಕೆ ಇತರ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬೇರೆ ಸಂಘಟನೆಗಳಿಗೆ ಸಿಗದ ಅನುದಾನ ಈ ಸಂಘಟನೆಗಳಿಗೆ ಹೇಗೆ ಸಿಕ್ತಿದೆ..? ಅಧಿಕಾರಿಗಳು ಶಾಮೀಲಾಗಿ ಅನುದಾನ ಬಿಡುಗಡೆಯಾಗುವಂತೆ ನೋಡಿಕೊಳ್ತಿದ್ದಾರೆ ಅಂತ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಕಿಡಿಕಾರಿದ್ದಾರೆ.

    ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಾ. ಶರಣ ಬಸವ ಗದ್ದುಗೆ, ಮೊದ ಮೊದಲು ನಂದು ಕೇವಲ ಒಂದೇ ಸಂಘಟನೆ ಎಂದ್ರು. ನಂತರ ಒಂದಕ್ಕೆ ಸಂಸ್ಥಾಪಕ ಅಧ್ಯಕ್ಷ, ಇನ್ನೊಂದಕ್ಕೆ ಅಧ್ಯಕ್ಷನಾಗಿದ್ದೇನೆ ಅಂದ್ರು ಬಳಿಕ ಮೂರು ಸಂಘಟನೆಗಳಿಗೆ ಅಧಕ್ಷನಾಗಿರಬಹುದು. ಆದ್ರೆ ಸದಸ್ಯರುಗಳು ಬೇರೆ ಬೇರೆ ಇದ್ದಾರೆ ಎಂದು ಸಮಜಾಯಿಷಿ ನೀಡಿದರು.

    ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶುಕುಮಾರ್ ಗಮನಕ್ಕೆ ತರಲಾಗಿದ್ದು, ನೋಟಿಸ್ ನೀಡಿ ಕ್ರಮಕೈಗೊಳ್ಳುವ ಭರವಸೆ ನೀಡದ್ದಾರೆ. ಸಚಿವೆ ಜಯಮಾಲಾ ಮೇಡಂ ಇಂಥ ಅಕ್ರಮಗಳಿಗೆ ಕಡಿವಾಣ ಹಾಕಿದ್ರೆ ಜನರ ತೆರಿಗೆ ಹಣವನ್ನ ಸಮರ್ಪಕವಾಗಿ ಬಳಸಿಕೊಳ್ಳಬಹುದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು

    ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು

    ಬೆಂಗಳೂರು: ರಾಜರಥ ಸಿನಿಮಾ ತಂಡದ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

    ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ರಾಜರಥ ಸಿನಿಮಾ ತಂಡದ ವಿರುದ್ಧ ದೂರು ನೀಡಿದ್ದು, ತಕ್ಷಣ ರಾಜರಥ ಸಿನಿಮಾ ಪ್ರದರ್ಶನ ನಿಲ್ಲಿಸದೆ ಇದ್ದರೆ ಪ್ರತಿಭಟನೆ ನಡೆಸುವ ಕುರಿತು ಎಚ್ಚರಿಕೆ ನೀಡಿದೆ. ಅಲ್ಲದೇ ರಾಜರಥ ಸಿನಿಮಾ ನಟ ನಟಿ ಮತ್ತು ನಿರ್ದೇಶಕರನ್ನು ಆರು ತಿಂಗಳ ಕಾಲ ಚಿತ್ರೋದ್ಯಮದಿಂದ ಅಮಾನತು ಮಾಡಬೇಕು ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಂದರ್ಶನದಲ್ಲಿ ಕನ್ನಡ ಸಿನಿಮಾವನ್ನ ನೋಡದೇ ಇರುವರು ಅಂತ ಹೇಳಿಲ್ಲ, ರಾಜರಥ ಸಿನಿಮಾವನ್ನ ನೋಡದೇ ಇರುವವರು ಕಚಡಾಗಳು ಎಂದು ಹೇಳಿಕೆ ಕೊಟ್ಟಿರುವುದು ನೋವುಂಟು ಮಾಡಿದೆ ಎಂದು ದೂರಿನಲ್ಲಿ ಸಂಘಟನೆ ಆರೋಪಿಸಿದೆ.

    ಕರ್ನಾಟಕ ಸಂಘಟನೆಗಳ ಒಕ್ಕೂಟ ಇದೇ ಕಾರಣಕ್ಕಾಗಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಚಿತ್ರ ತಂಡದ ವಿರುದ್ಧ ಮಂಗಳವಾರ ದೂರು ದಾಖಲಿಸಿತ್ತು.

    ಖಾಸಗಿ ರೇಡಿಯೋ ಕಾರ್ಯಕ್ರಮದಲ್ಲಿ ಭಾಗಿವಹಿಸಿದ್ದ ರಾಜರಥ ಸಿನಿಮಾ ತಂಡ, ರಾಜರಥ ಸಿನಿಮಾ ನೋಡದ ಪ್ರೇಕ್ಷಕ “ಕಚಡ ನನ್ಮಕ್ಳು” ಎನ್ನುವ ಹೇಳಿಕೆ ನೀಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕ ವಲಯದಿಂದ ತೀವ್ರ ಅಕ್ರೋಶ ವ್ಯಕ್ತವಾಗಿತ್ತು.  ಇದನ್ನೂ ಓದಿ: ರಾಜರಥ ಸಿನಿಮಾ ವಿವಾದದ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ರ‍್ಯಾಪಿಡ್ ರಶ್ಮಿ

    ಈ ಕುರಿತು ಮಂಗಳವಾರ ಫೀಲ್ಮ ಚೇಂಬರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರದ ನಿರ್ದೇಶಕ ಹಾಗೂ ನಾಯಕರಾದ ಭಂಡಾರಿ ಸಹೋದದರು ಚಿತ್ರರಂಗ ಹಾಗೂ ಕನ್ನಡ ಅಭಿಮನಿಗಳ ಕ್ಷಮೆ ಕೋರಿದ್ದರು. ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕು ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೆ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.