Tag: ಕನ್ನಡ ಶಾಲೆ

  • ಅಕ್ಷರ ಜ್ಞಾನ ಪಡೆದ ಕನ್ನಡ ಶಾಲೆಯನ್ನು ಮಾದರಿ ಶಾಲೆಯಾಗಿಸಿದ ಹಳೇ ವಿದ್ಯಾರ್ಥಿಗಳು

    ಅಕ್ಷರ ಜ್ಞಾನ ಪಡೆದ ಕನ್ನಡ ಶಾಲೆಯನ್ನು ಮಾದರಿ ಶಾಲೆಯಾಗಿಸಿದ ಹಳೇ ವಿದ್ಯಾರ್ಥಿಗಳು

    ಮಡಿಕೇರಿ: ಒಂದು ಊರಿನ ಅಭಿವೃದ್ಧಿಯನ್ನು ನೋಡಬೇಕಾದರೆ ಆ ಊರಿನ ದೇವಾಲಯಗಳನ್ನು ನೋಡಬೇಕು. ಇಲ್ಲವೇ ಶಾಲೆಗಳನ್ನು ನೋಡಬೇಕು ಎನ್ನುವುದು ಹಿರಿಯರ ಮಾತು. ಇದು ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಅಕ್ಷರಶಃ ಒಪ್ಪುವಂತಹ ಮಾತಾಗಿದೆ. ತಾವು ಕಲಿತ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ ನೀಡಿ ಮಾದರಿ ಶಾಲೆಯನ್ನಾಗಿಸಿ ಹಳೇ ವಿದ್ಯಾರ್ಥಿಗಳು ಮೆಚ್ಚುಗೆ ಪಡೆದುಕೊಂಡಿದ್ದಾರೆ.

    ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂದು ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ಸುಮಾರು 40 ಸಾವಿರ ರೂ. ವೆಚ್ಚದಲ್ಲಿ ಶಾಲೆಗೆ ಬೆಂಚ್ ಹಾಗೂ ಡೆಸ್ಕ್ ನೀಡಿದ್ದಾರೆ.

    ಮಡಿಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಕೆಲವು ವರ್ಷಗಳ ಹಿಂದೆ ಕೊಡಗಿನ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳ ಪಾಲಿನ ಜ್ಞಾನ ದೇಗುಲವಾಗಿತ್ತು.

    ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿಗಳು ಬೇರೆ ಬೇರೆ ಪ್ರದೇಶದಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ತಾವು ಕಲಿತ ಶಾಲೆಯಲ್ಲಿ ಮೂಲಸೌಲಭ್ಯ ಕೊರತೆ ಕಂಡಿದ್ದ ಅವರು ಏನಾದರೂ ವ್ಯವಸ್ಥೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಕೈ ಹಾಕಿದ್ದರು. ಇದಕ್ಕೆ ಸುಮಾರು 35ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ಮೊದಲ ಹಂತದಲ್ಲಿ ಈ ಸಂಘವು ಶಾಲೆಗೆ ಪೀಠೋಪಕರಣ ನೀಡುವ ಕೆಲಸ ಮಾಡಿದೆ.

    ಸರ್ಕಾರಿ ಕನ್ನಡ ಶಾಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಉತ್ತಮ ಶಿಕ್ಷಣ, ವಾತಾವರಣ ನೀಡುವ ಕೆಲಸವನ್ನು ಹಳೇ ವಿದ್ಯಾರ್ಥಿಗಳು ಮಾಡುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚನೆ ಮಾಡಿಕೊಂಡ ಸ್ನೇಹ ಮಿಲನ ಸವಿ ನೆನಪು ಎನ್ನುವ ಕಾರ್ಯಕ್ರಮ ಮಾಡಲಾಗುತ್ತಿದೆ. ಹೀಗೆ ಸಂಘಟನೆಯಾದ ವಿದ್ಯಾರ್ಥಿಗಳು ಶಾಲೆ/ಕಾಲೇಜುಗಳ ಅಭಿವೃದ್ಧಿಗೆ ಸಹಕರಿಸಿದರೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ.

    ಶಾಲೆಗೆ ಕೊಡುಗೆಯಾಗಿ ನೀಡಿದ ಬೆಂಚ್ ಹಾಗೂ ಡೆಸ್ಕ್ ಗಳನ್ನು ಇಂದು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಕುಶಾಲಿನಿ, ಸದಸ್ಯರಾದ ಪೀಟರ್, ದಯಾನಂದ, ಲೋಹಿತ್, ರಾಜೇಶ್, ಮಲ್ಲಿಕಾರ್ಜುನ್, ಪವಿತ್ರ, ಭಾಗೀರಥಿ, ಶ್ವೇತಾ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡ ಶಾಲೆಗಳ ಮುಚ್ಚುತ್ತಿರುವುದು ಯಾಕೆ? ನಮ್ಮ ನಿಮ್ಮೆಲ್ಲರ ಕರ್ತವ್ಯ ಏನು?

    ಕನ್ನಡ ಶಾಲೆಗಳ ಮುಚ್ಚುತ್ತಿರುವುದು ಯಾಕೆ? ನಮ್ಮ ನಿಮ್ಮೆಲ್ಲರ ಕರ್ತವ್ಯ ಏನು?

    ಇಂದು ನವೆಂಬರ್ 1 ಕನ್ನಡ ರಾಜ್ಯೋತ್ಸವ. ನಾಡಿನಾದ್ಯಂತ ಆಚರಣೆ ಭರ್ಜರಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಕನ್ನಡದ ಹುಟ್ಟು ಕನ್ನಡ ಮಾಧ್ಯಮ ಶಾಲೆಗಳು ಕಣ್ಮರೆ ಆಗುತ್ತಿರೋದು ಮಾತ್ರ ಕಾಣುತ್ತಿಲ್ಲ. ಕೆಲವರು ಕಂಡರೂ ಕಾಣದಂತೆಯೂ ಇದ್ದಾರೆ. ನವೆಂಬರ್ 1 ರಂದು ಕೇವಲ ಕನ್ನಡ ರಾಜ್ಯೋತ್ಸವ ಆಚರಿಸದೇ ಮಾತ್ರ ಅದು ಕನ್ನಡಾಭಿಮಾನ ಆಗಲಾರದು. ಇಂದು ನಮ್ಮ ನಾಡಿನಲ್ಲಿಯೇ ಕನ್ನಡ ಉಳುವಿಕೆಗಾಗಿ ಹೋರಾಡುವ ಸ್ಥಿತಿ ನಮಗೆ ಬಂದಿದೆ. ಕನ್ನಡ ಉಳಿಯಬೇಕೆಂದರೆ ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕಿದೆ.

    ಕನ್ನಡ ಎಂದರೆ ಬದುಕು, ಜೀವನ ಕ್ರಮ, ಉಸಿರು ಇಂದಿನ ದಿನದಲ್ಲಿ ಕೇವಲ ತೋರಿಕೆಯಾಗಿದೆ. ಕನ್ನಡ ನಂಬಿದರೆ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೇವೆ. ಈ ಎಲ್ಲದರ ಪರಿಣಾಮ ಗ್ರಾಮೀಣ ಭಾಗಗಳಲ್ಲಿಯೂ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಪೋಷಕರು ಸಹ ತಮ್ಮ ಮಕ್ಕಳು ಇಂಗ್ಲಿಷ್ ಕಲಿತರೆ ಮಾತ್ರ ಜಾಣರಾಗುತ್ತಾರೆ. ಭವಿಷ್ಯದಲ್ಲಿ ಉತ್ತಮ ಬದಕುಕಟ್ಟಿಕೊಳ್ಳಲು ಇದು ಸಹಕಾರಿ ಎಂಬ ಆಲೋಚನೆಯಿಂದ ಕಷ್ಟವಾದರೂ ಸರಿಯೇ ದುಬಾರಿ ಶುಲ್ಕ ನೀಡಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಗ್ರಾಮೀಣ ಭಾಗಗಳಲ್ಲಿಯೂ ಖಾಸಗಿ ಶಾಲೆಗಳು ಹುಟ್ಟಿಕೊಂಡಿವೆ.

    ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಗರಗಳಲ್ಲಿ ಖಾಸಗಿ ವಲಯದಲ್ಲಿ ಅನ್ಯ ಭಾಷಿಕರ ಧ್ವನಿ ಮಾರ್ದನಿಸುತ್ತಿದೆ. ಹಾಗಾಗಿ ರಾಜಧಾನಿ ಕನ್ನಡ ಅವಿನಾಶದ ಅಂಚಿಗೆ ತಲುಪಿ ಪರಭಾಷೆಗಳು ಸ್ಥಿರವಾಗುತ್ತಿವೆ. ಕನ್ನಡ ಎನೆ ಕುಣಿದಾಡುವುದೆನ್ನೆದೆಯು, ಕನ್ನಡ ಎನೆ ಕಿವಿ ನಿಮಿರುವುದು ಎನ್ನುವ ಕುವೆಂಪು ಅವರ ಸಾಲುಗಳು ಪುಸ್ತಕದಲ್ಲಿಯೇ ಮಾತ್ರ ಉಳಿದುಕೊಂಡಿವೆ. ಬೆಂಗಳೂರು ಎಂಬ ಮಹಾನಗರದಲ್ಲಿ ಕನ್ನಡ ಮಾತನಾಡುವವರೇ ವಿರಳ ಆಗುತ್ತಿರೋದು ಇಂದು ನಾವೆಲ್ಲ ಕಾಣುತ್ತಿದ್ದೇವೆ. ನಮ್ಮ ಉದಾರತೆ, ಹೃದಯ ವೈಶಾಲ್ಯತೆ ನಮಗೆ ಮುಳುವಾಗುತ್ತಿರುವುದು ಆತಂಕ. ಇಂದಿನ ಕನ್ನಡ ದುಸ್ಥಿತಿಗೆ ಕೇವಲ ಇಷ್ಟು ಮಾತ್ರ ಕಾರಣವಲ್ಲ. ಸಾರ್ವಜನಿಕವಾಗಿ ಕನ್ನಡ ಮಾತನಾಡಲು ಹಿಂಜರಿಕೆ, ಕೀಳರಿಮೆ, ಅನ್ಯಭಾಷಾ ವ್ಯಾಮೋಹವು ಕಾರಣವಾಗಿದೆ.

    ಶಿಕ್ಷಣ ಸೇರಿದಂತೆ ಇತರೆ ಹಲವಾರು ಕ್ಷೇತ್ರಗಳಲ್ಲಿ ಕನ್ನಡವನ್ನು ಸುಧಾರಿಸುವ ಸಾಧ್ಯತೆಗಳಿವೆ. ಆದ್ರೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ನಮ್ಮಯ ನಾಡಿನಲ್ಲಿ ಕನ್ನಡಕ್ಕಾಗಿ ಹೋರಾಡುವ ಸ್ಥಿತಿ ಎದುರಾಗಿದೆ. ಪಕ್ಕದ ತಮಿಳುನಾಡಿನಲ್ಲಿ ಎಲ್ಲವೂ ತಮಿಳು. ವ್ಯಾವಹಾರಿಕ ಮತ್ತು ಸರ್ಕಾರಿ ಬಳಕೆಯಲ್ಲಿ ತಮಿಳು ಭಾಷೆಗೆ ಆದ್ಯತೆ ನೀಡಲಾಗಿದೆ.

    ಕನ್ನಡ ಭಾಷೆ ಮತ್ತು ಸಾಹಿತ್ಯದ ದುಸ್ಥಿತಿಯ ಬಗ್ಗೆ ಏನೆಲ್ಲ ಕನ್ನಡ ಕಾರ್ಯಗಾರ ಮತ್ತು ಪುಸ್ತಕಗಳನ್ನು ಪ್ರಕಟಿಸಿದರೆ ಇಂದು ಅವುಗಳನ್ನು ಓದುವುದಕ್ಕೆ ಯಾರು ಮುಂದಾಗುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತವನ ಜೀವನ ಕೇವಲ ನಾಲ್ಕಂಕಿಯ ಸಂಬಳಕ್ಕೆ ಸೀಮಿತ ಎಂದು ಕನ್ನಡಿಗರು ಹೇಳಿಕೊಂಡು ಕುಹಕವಾಡುವುದರಿಂದಲೂ ಸಮಸ್ಯೆ ಹೆಚ್ಚಾಗಿದೆ. ಇತ್ತ ಕನ್ನಡಕ್ಕಾಗಿ ಹೋರಾಟ ಮಾಡಬೇಕಿದ್ದ ಬಹುತೇಕ ರಾಜಕಾರಣಿಗಳು ತಮ್ಮದೇ ಸ್ವಂತ ಆಂಗ್ಲ ಮಾಧ್ಯಮಗಳನ್ನು ತೆರೆಯುತ್ತಿದ್ದಾರೆ. ಅಲ್ಲಿ ಕನ್ನಡ ಕೇವಲ ಭಾಷೆಯಾಗಿಯೇ ಉಳಿದುಕೊಂಡಿದೆ. ಕೇವಲ ನವೆಂಬರ್ 1ರಂದು ಮಾತ್ರ ಕನ್ನಡ. ಕನ್ನಡ ಎಂದ್ರೆ ಸಾಲದು. ಅದಕ್ಕಾಗಿ ಹೋರಾಡುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮಾತ್ರ ಸರ್ಕಾರಿ ಉದ್ಯೋಗ, ಎಲ್ಲ ರಾಜಕೀಯ ನಾಯಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಲ್ಲಿಯೇ ಓದಿಸಬೇಕೆಂಬ ಕಟ್ಟುನಿಟ್ಟಿನ ಕಾನೂನುಗಳು ಜಾರಿಯಾಗಬೇಕಿದೆ.

    ಈ ಹಿಂದೆ ಅಲಹಬಾದ್ ಹೈಕೋರ್ಟ್ ಹಿಂದಿ ಮಾಧ್ಯಮ ದುಸ್ಥಿತಿಯ ಬಗ್ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತ್ತು. ಅಂದು ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿಯಿಂದ ಕೆಳದರ್ಜೆಯ ನೌಕರರು ತಮ್ಮ ಮಕ್ಕಳಿಗೆ ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು. ಎಲ್ಲ ಚುನಾಯಿತ ಅಭ್ಯರ್ಥಿಗಳು ಮಕ್ಕಳು ಸಹ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯಬೇಕು. ಅಂದಾಗ ಮಾತ್ರ ಪ್ರಾದೇಶಿಕ ಭಾಷೆಯ ಶಾಲೆ-ಕಾಲೇಜುಗಳು, ಶಿಕ್ಷಣದ ಗುಣಮಟ್ಟ ಹೆಚ್ಚಾಗಲು ಸಾಧ್ಯ ಎಂಬ ಸಲಹೆಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು. ಅಲಹಬಾದ್ ಹೈ ಕೋರ್ಟ್ ಸಲಹೆ ಪ್ರಾದೇಶಿಕ ಭಾಷೆಗಳಲ್ಲಿ ಆಶಾಕಿರಣವನ್ನು ಮೂಡಿಸಿತ್ತು.

    ಎಲ್ಲವನ್ನು ನ್ಯಾಯಾಲಯದಿಂದ ಹೇಳಿಸಿಕೊಂಡು ಮಾಡದೇ ನಾವೇ ಕನ್ನಡತನ ಉಳಿಸಲು ಪ್ರಯತ್ನ ನಡೆಸಬೇಕು. ರಾಜ್ಯೋತ್ಸವ ಉತ್ಸವ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಕನ್ನಡ ಬದುಕು-ಜೀವನ ಕ್ರಮವಾಗಿ ಮರುಹುಟ್ಟು ಪಡೆಯಬೇಕಿದೆ. ಶಾಲಾ ವಿದ್ಯಾರ್ಥಿಗಳನ್ನು ಸೆಳೆಯಲು ಸರ್ಕಾರ ಮತ್ತು ಇತರೆ ಕನ್ನಡ ಪರ ಸಂಘಟನೆಗಳು ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊರ ರಾಜ್ಯದಲ್ಲಿ ಕನ್ನಡ ಕಲಿತ ವಿದ್ಯಾರ್ಥಿಗಳ ನೋವಿನ ಕಥೆ

    ಹೊರ ರಾಜ್ಯದಲ್ಲಿ ಕನ್ನಡ ಕಲಿತ ವಿದ್ಯಾರ್ಥಿಗಳ ನೋವಿನ ಕಥೆ

    ಬೆಂಗಳೂರು: ನವೆಂಬರ್ ತಿಂಗಳು ಬಂತು ಅಂದ್ರೆ ರಾಜ್ಯ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ ಹಾಗು ಕನ್ನಡ ಪ್ರಾಧಿಕಾರದವರು ಸೇರಿದಂತೆ ಕನ್ನಡ ಸಂಘಟನೆಗಳು ಕನ್ನಡ ರಾಜ್ಯೋತ್ಸವ ಎಂದು ಬೊಬ್ಬೆ ಹೊಡೆಯುತ್ತಾರೆ. ಸರ್ಕಾರವಾಗಲಿ, ಕನ್ನಡ ಪರ ಸಂಘಟನೆಗಳಾಗಲಿ ಹೊರ ರಾಜ್ಯಗಳಲ್ಲಿರುವ ಕನ್ನಡ ಶಾಲೆಗಳ ಬಗ್ಗೆ ಹಾಗು ಅಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಬಗ್ಗೆ ಸ್ವಲ್ಪವು ಕಾಳಜಿ ವಹಿಸದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸಮೀಪದಲ್ಲಿರುವ ಗಡಿಭಾಗವಾದ ತಮಿಳುನಾಡಿನ ಗುಮ್ಮಳಾಪುರದಲ್ಲಿ ತಮಿಳು ಶಾಲೆಗಳ ಪೈಪೋಟಿಯ ಮಧ್ಯೆ ಕನ್ನಡದ ಶಾಲೆ ಇದೆ. ಇದು ಕರ್ನಾಟಕ ಸರ್ಕಾರದಿಂದ ನಡೆಯುತ್ತಿರುವುದು ಅಲ್ಲ. ತಮಿಳುನಾಡು ಸರ್ಕಾರ ಈ ಶಾಲೆಯನ್ನು ನಡೆಸುತ್ತಿದೆ. ತಮಿಳುನಾಡಿನ ಸರ್ಕಾರಿ ಕನ್ನಡ ಶಾಲೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿರುವ ಸುಮಾರು 400 ರಿಂದ 500 ಬಡ ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದಾರೆ.

    ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳಿಗೆ ಕಡಿಮೆ ಇಲ್ಲ ಎಂಬಂತೆ ಈ ಶಾಲೆ ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳನ್ನು ಸರಿಯಾಗಿ ನಡೆಸಿ ನಿರ್ವಹಣೆ ಮಾಡಲು ಸಾಧ್ಯವಾಗದೆ ಮುಚ್ಚುತ್ತಿದ್ದು, ತಮಿಳುನಾಡಿನಲ್ಲಿರುವ ಈ ಕನ್ನಡ ಶಾಲೆಯಲ್ಲಿಯಲ್ಲಿಯೂ ಇದೇ ರೀತಿ ಸಮಸ್ಯೆಗಳಿದ್ದು, ವಿದ್ಯಾರ್ಥಿಗಳಿಗೆ ಸರಿಯಾದ ಮೂಲಭೂತ ಸೌಕರ್ಯಗಳು ಹಾಗು ಕ್ಲಾಸ್ ರೂಮ್‍ಗಳು ಇಲ್ಲದೆ ಶಾಲೆಯ ಹೊರಗಡೆ ಮೈದಾನದಲ್ಲಿ ಮಕ್ಕಳು ಕುತ್ತು ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

    ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಶಿಕ್ಷಣವಿದ್ದು ಪ್ರತಿ ವರ್ಷವೂ 90% ಫಲಿತಾಂಶ ಬರುತ್ತಿದೆ. ಕರ್ನಾಟಕದಲ್ಲಿರುವ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಕಾಲೇಜುಗಳಲ್ಲಿ ಸೀಟಿಗಾಗಿ ಹೋದರೆ ನೀವು ತಮಿಳುನಾಡಿನಲ್ಲಿ ಓದಿದ್ದು, ನಿಮಗೆ ಮೀಸಲಾತಿ ಕೊಡುವುದಕ್ಕೆ ಆಗುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಣ ಮಂಡಳಿ ಹೇಳುತ್ತಿದೆ. ವಿದ್ಯಾರ್ಥಿಗಳು ನಾವು ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ಓದಿದ್ದೇ ತಪ್ಪಾಯ್ತ ಎಂದು ಹೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

    ವಿದ್ಯಾರ್ಥಿಗಳಿಗೆ ಇಷ್ಟವಿರುವ ವಿಷಯವನ್ನು ತೆಗೆದುಕೊಂಡು ಶಿಕ್ಷಣ ಮುಂದುವರೆಸಲು ಕರ್ನಾಟಕದಲ್ಲಿ ಕಾಲೇಜುಗಳಲ್ಲಿ ಸೀಟು ಸಿಗದೆ ವಂಚಿತರಾಗುತ್ತಿದ್ದಾರೆ. ತಮಿಳುನಾಡಿನಲ್ಲಿರುವ ಶಾಲೆಗಳಿಗೆ ವಿದ್ಯಾರ್ಥಿಗಳು ಬರುವುದು ಸಹ ಕಡಿಮೆ ಆಗುತ್ತಿದೆ. ಆನೇಕಲ್ ತಮಿಳುನಾಡು ಗಡಿಭಾಗವಾಗಿದ್ದು ತಮ್ಮಪುರ, ಜೀಗೂರು, ಬ್ಯಾಲದ ಕೆರೆ, ಮದಗೊಂಡನಹಳ್ಳಿ ಇನ್ನು ಹತ್ತಾರು ಶಾಲೆಗಳು ತಾಲೂಕಿನ ಗಡಿಭಾಗದಲ್ಲಿದ್ದು ಸರ್ಕಾರವು ಕೂಡಲೇ ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಮಾಡಲು 5% ನಿಂದ 10% ನಷ್ಟು ಮೀಸಲಾತಿ ನೀಡಬೇಕಿದೆ. ಇದರಿಂದ ಸಾಕಷ್ಟು ಹೊರರಾಜ್ಯದ ಮಕ್ಕಳು ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡುವಂತಾಗುತ್ತದೆ. ಇಲ್ಲವಾದರೆ ಹೊರರಾಜ್ಯಗಳಲ್ಲಿ ಇರುವಂತಹ ಬೆರಳೆಣಿಕೆಯಷ್ಟು ಕನ್ನಡ ಶಾಲೆಗಳಿಗೆ ಬೀಗ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.

    ಒಟ್ಟಿನಲ್ಲಿ ರಾಜ್ಯದಲ್ಲಿ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಹಾಗು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಪ್ರಾಧಿಕಾರದವರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಾರಾ ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಸರಗೋಡಿನಲ್ಲಿ ಮಲೆಯಾಳಂ ಶಿಕ್ಷಕನ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನ

    ಕಾಸರಗೋಡಿನಲ್ಲಿ ಮಲೆಯಾಳಂ ಶಿಕ್ಷಕನ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನ

    ಕಾಸರಗೋಡು: `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಕನ್ನಡ ಶಾಲೆ ದುಸ್ಥಿತಿಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ, ಈಗ ಕೇರಳದ ಶಾಲೆಯೊಂದರಲ್ಲಿ ಕನ್ನಡ ತರಗತಿಗೆ ಮಲೆಯಾಳಂ ಅಧ್ಯಾಪಕನ ನೇಮಕಾತಿ ಖಂಡಿಸಿ ಉಗ್ರ ಹೋರಾಟ ನಡೆಸಲು ಗಡಿಯಲ್ಲಿರುವ ಭಾಷಾಭಿಮಾನಿಗಳು ತೀರ್ಮಾನಿಸಿದ್ದಾರೆ.

    ಕಾಸರಗೋಡು ಜಿಲ್ಲೆಯ ಉಪ್ಪಳದ ಮಂಗಲ್ಪಾಡಿ ಸರ್ಕಾರಿ ಹೈಸ್ಕೂಲ್(ಕುಕ್ಕಾರು)ನಲ್ಲಿರುವ ಶಾಲೆಯಲ್ಲಿ ಕನ್ನಡ ತರಗತಿಯ ಗಣಿತ ವಿಭಾಗಕ್ಕೆ ಮಲೆಯಾಳಂ ಅಧ್ಯಾಪಕನ ನೇಮಕಾತಿಯ ಮಾಡಲು ಮುಂದಾಗಿತ್ತು. ಬಳಿಕ ಈ ಬಗ್ಗೆ ಮಲೆಯಾಳ ಅಧ್ಯಾಪಕನ ನೇಮಕಾತಿ ಬೇಡ ಎಂದು ಕನ್ನಡ ಭಾಷಾಮಾನಿಗಳು ಹೋರಾಟ ಮಾಡಿದ್ದರು. ಇದನ್ನೂ ಓದಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ – ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ

    ಈ ಬಗ್ಗೆ ನಡೆದ ಹೋರಾಟ ಅಷ್ಟೇನು ತೀವ್ರವಾಗಿ ಪರಿಣಮಿಸಿರಲಿಲ್ಲ. ಆದರೆ ಇತ್ತೀಚೆಗೆ `ಸ.ಹಿ.ಪ್ರಾ. ಶಾಲೆ ಕಾಸಗೋಡು’ ಸಿನಿಮಾ ಬಿಡುಗಡೆಗೊಂಡ ನಂತರ ಆ ಸಿನಿಮಾದಲ್ಲಿ ಕನ್ನಡ ಶಾಲೆಯನ್ನು ಉಳಿಸಲು ನಡೆಸಿದ ಹೋರಾಟದ ಪ್ರಭಾವದಿಂದ ಮಲೆಯಾಳಂ ಪ್ರಧ್ಯಾಪಕನ ನೇಮಕಾತಿಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಪೋಷಕರು ಶಿಕ್ಷಕರ ಸಂಘ(ಪಿಟಿಎ) ಹಾಗೂ ಕನ್ನಡ ಭಾಷಾಭಿಮಾನಿಗಳ ಸಭೆಯಲ್ಲಿ ತೀರ್ಮಾನ ನಡೆಸಲಾಗಿದೆ.

    ಈ ಸಂಬಂಧ ಮಂಗಲ್ಪಾಡಿ ಶಾಲಾ ಪರಿಸರದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸಮಸ್ಯೆ ಇತ್ಯರ್ಥವಾಗುವ ತನಕ ಹೋರಾಟ ತೀವ್ರವಾಗಿ ನಡೆಸಲು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಓಣಂ ರಜೆ ಮುಗಿದ ನಂತರ ಮಲೆಯಾಳಂ ಅಧ್ಯಾಪಕ ಶಾಲೆಗೆ ಬಂದರೆ ವಿದ್ಯಾರ್ಥಿಗಳ ಪೋಷಕರ ಮೂಲಕ ದಿಗ್ಬಂಧನ ನಡಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಅಧ್ಯಾಪಕ ಶಾಲಿ ಮಾಸ್ಟರ್ ಸಮಸ್ಯೆಗಳ ಬಗ್ಗೆ ಕುರಿತು ವಿವರಿಸಿದ್ದರು.

    ಈ ಸಭೆಯಲ್ಲಿ ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಕಾಸರಗೋಡು, ಶಾಲಾ ಮಾತೃ ಸಮಿತಿಯ ಯಶೋಧ ಶೆಟ್ಟಿ, ಸಾಮಾಜಿಕ ಮುಂದಾಳು ದಿನೆಶ್ ಚೆರುಗೋಳಿ, ಚಂದ್ರ ಕುಬಣುರು ಅವರು ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಸಭೆಯಲ್ಲಿ ಪಿಟಿಎ ಅಧ್ಯಕ್ಷ ಬಾಲಕೃಷ್ಣ ಅಂಬಾರು ಅಧ್ಯಕ್ಷತೆ ವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಕನ್ನಡ ಶಾಲೆಯ ಮಕ್ಕಳಿಗೆ ಬೇಕಿದೆ ಡೆಸ್ಕ್

    ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಕನ್ನಡ ಶಾಲೆಯ ಮಕ್ಕಳಿಗೆ ಬೇಕಿದೆ ಡೆಸ್ಕ್

    ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶ ಮತ್ತು ಕರ್ನಾಟಕ ಗಡಿ ಭಾಗದಲ್ಲಿರುವ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿ ಗ್ರಾಮದ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ಸ್ಥಳೀಯ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಕಾರಣ ಶಿಕ್ಷಕ ನಾಗೇಶ್. ಶಿಕ್ಷಕರಾದ ನಾಗೇಶ್ ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಕರ್ನಾಟಕದಲ್ಲೇ ಈ ಗ್ರಾಮವಿದ್ದರೂ ಇಲ್ಲಿನ ಜನರ ಆಡು ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವಷ್ಟು ಭಾವನೆಗಳಲ್ಲಿ ಬದುಕುತ್ತಿದ್ರು. ಈ ಶಾಲೆಗೆ ಶಿಕ್ಷಕರಾಗಿ ನಾಗೇಶ್ ಬಂದಾಗ ಇಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಕೂಡ ಬರುತ್ತಿರಲಿಲ್ಲ. ಕನಿಷ್ಠ ಇಲ್ಲಿನ ಜನ ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿರಲಿಲ್ಲ. ಆದ್ರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಕ್ಷಕ ನಾಗೇಶ್ ಗ್ರಾಮದಲ್ಲೇ ವಾಸ ಮಾಡುವ ಮೂಲಕ, ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನ ತಿಳಿಸಿದರು. ಪೋಷಕರ ಮನವೊಲಿಸಿ ಎಲ್ಲಾ ಮಕ್ಕಳನ್ನ ಶಾಲೆಗೆ ಕರೆತಂದು ಸತ್ಪ್ರಜೆಗಳನ್ನ ಮಾಡುವ ಕಾಯಕಕ್ಕೆ ಮುಂದಾದರು.

    ಪ್ರತಿ ವರ್ಷ ಶಾಲೆಯಲ್ಲಿ ಕನ್ನಡದ ನುಡಿ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಕನ್ನಡದ ಕಂಪು ಸೂಸುವ ಕೆಲಸ ಮಾಡುತ್ತಿದ್ದಾರೆ. ತೆಲುಗು ಭಾಷೆಯ ಪ್ರಭಾವದಿಂದ ಕನ್ನಡವೇ ಬಾರದ ಮಕ್ಕಳ ಬಾಯಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದಾರೆ. ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿ ಭಿನ್ನ ವಿಭಿನ್ನ ಪ್ರಯತ್ನಗಳಿಂದ ಇಡೀ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಿದ ಕೀರ್ತಿ ಶಿಕ್ಷಕ ನಾಗೇಶರದ್ದು. ಅಸಲಿಗೆ ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಈ ಶಾಲೆಗೆ ಸಹೃದಯಿ ದಾನಿಗಳು ಹಾಗೂ ಸ್ನೇಹಿತರ ಬಳಗದಿಂದ, ಅಳಿವಿನಂಚಿಗೆ ಸಾಗುತ್ತಿದ್ದ ಸರ್ಕಾರಿ ಶಾಲೆಗೆ ಒಂದಷ್ಟು ಸೌಲಭ್ಯಗಳನ್ನ ಪಡೆದುಕೊಳ್ಳುವಲ್ಲಿ ಶಿಕ್ಷಕ ನಾಗೇಶ್ ಸಫಲರಾಗಿದ್ದಾರೆ.

    ದಾನಿಗಳ ನೆರವಿನಿಂದ ಪಡೆದ ಪ್ರೊಜೆಕ್ಟರ್ ಮೂಲಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಕಂಪ್ಯೂಟರ್‍ನ್ನೇ ಕಾಣದ ಮಕ್ಕಳ ಕೈ ಹಿಡಿದು ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಕನಿಷ್ಠ ಕನ್ನಡವೂ ಬಾರದ ಮಕ್ಕಳ ಬಾಯಲ್ಲಿ ಇಂದು ಪಟಪಟನೆ ಇಂಗ್ಲೀಷ್ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ. ಒಂದು ಕಾಲದಲ್ಲಿ ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯಲ್ಲಿ ಇಂದು 1 ರಿಂದ 7 ನೇ ತರಗತಿಯವರೆಗೂ 114 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

    ಪ್ರತಿ ವರ್ಷ ತಮ್ಮ ಫೇಸ್ ಬುಕ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನ ಸಹಾಯ ಪಡೆಯುವ ಶಿಕ್ಷಕ ನಾಗೇಶ್ ವಿದ್ಯಾರ್ಥಿಗಳಿಗೆ ಇಡೀ ವರ್ಷ ಉಚಿತ ನೋಟ್ ಪುಸ್ತಕ್ ಸೇರಿದಂತೆ ಪೆನ್, ಪೆನ್ಸಿಲ್., ರಬ್ಬರ್ ಹೀಗೆ ಎಲ್ಲಾ ಕಲಿಕಾ ಸಾಮಾಗ್ರಿಗಳನ್ನ ನೀಡುತ್ತಾರೆ. ಇನ್ನೂ ಕುಡಿಯುವ ನೀರಿನಿಂದ ಹಿಡಿದು ಆಡುಗೆಗೆ ಬೇಕಾದ ಗ್ರೈಂಡರ್, ತಟ್ಟೆ, ಲೋಟ, ವಾಟರ್ ಫಿಲ್ಟರ್ ಸೇರಿದಂತೆ ಶಾಲೆಗೆ ಬೇಕಾದ ಸಕಲ ಸೌಲಭ್ಯಗಳನ್ನ ದಾನ ಪಡೆದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.

    ಶಿಕ್ಷಕರ ಕೊರತೆ ಕಾರಣ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ತಮ್ಮ ಪತ್ನಿಯನ್ನೇ ತಮ್ಮ ಶಾಲೆಯಲ್ಲಿ ಉಚಿತವಾಗಿ ಭೋಧನೆ ಮಾಡಿಸುತ್ತಿದ್ದಾರೆ. ಪತಿಯ ಸಮಾಜಮುಖಿ ಕಾರ್ಯಕ್ಕೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟಿದ್ದಾರೆ. ಆದ್ರೆ ಇಂತಹ ಶಾಲೆಯಲ್ಲಿ 114 ಮಕ್ಕಳಿಗೆ ತಕ್ಕಂತೆ ಡೆಸ್ಕ್ ಗಳ ಕೊರತೆ ಇದೆ. ಹೀಗಾಗಿ ಕೆಲ ಮಕ್ಕಳು ಡೆಸ್ಕ್ ಗಳ ಮೇಲೆ ಕೂತು ಪಾಠ ಕೇಳಿದ್ರೇ ಕೆಲವರು ನೆಲದಲ್ಲೇ ಕೂರಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಹೀಗಾಗಿ ಯಾರಾದ್ರೂ ಸಹೃದಯಿ ದಾನಿಗಳು ತಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ 12 ಡೆಸ್ಕ್ ಗಳನ್ನ ಕೊಡಿಸಿ ಅಂತ ಬೆಳಕು ಕಾರ್ಯಕ್ರಮದ ಮೂಲಕ ಮನವಿ ಮಾಡುತ್ತಿದ್ದಾರೆ.

    https://youtu.be/VusB20dZ_WE

  • ಗಡಿನಾಡ ಕನ್ನಡದ ಕಂದಮ್ಮಗಳಿಗೆ ಹೀರೋ ಆದ ದರ್ಶನ್!

    ಗಡಿನಾಡ ಕನ್ನಡದ ಕಂದಮ್ಮಗಳಿಗೆ ಹೀರೋ ಆದ ದರ್ಶನ್!

    ಬೆಂಗಳೂರು: ದರ್ಶನ್ ಎಂಬ ಹೆಸರು ಕೇಳಿದರೆ ಸಾಕು ಅಭಿಮಾನಿಗಳ ಮೈ ರೋಮಾಂಚನಗೊಳ್ಳುತ್ತದೆ. ದರ್ಶನ್ ಕೇವಲ ಸಿನಿಮಾದಲ್ಲಿ ಹೀರೋ ಆಗದೇ ನಿಜ ಜೀವನದಲ್ಲೂ ಮತ್ತೊಮ್ಮೆ ಹೀರೋ ಆಗಿದ್ದಾರೆ. ಇತ್ತೀಚೆಗೆ ಹೈದರಾಬಾದ್ ನ ಹೋಟೆಲ್‍ನಲ್ಲಿ ಕನ್ನಡ ಚಾನೆಲ್ ಬರದಕ್ಕೆ ದರ್ಶನ್ ಗರಂ ಆಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಈಗ ದೂರದ ಗಡಿಯಲ್ಲಿರುವ ಕನ್ನಡ ಶಾಲೆಯ ಮಕ್ಕಳಿಗೆ ದರ್ಶನ್ ಸಹಾಯ ಹಸ್ತವನ್ನು ನೀಡಿದ್ದಾರೆ.

    ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಬಬಲಾದ್ ಗ್ರಾಮದಲ್ಲಿ ಒಂದು ಕನ್ನಡ ಶಾಲೆ ಇದೆ. ಗಡಿಗ್ರಾಮ ಆಗಿದ್ದರಿಂದ ಈ ಶಾಲೆಯ ಅಭಿವೃದ್ಧಿಗೆ ಎರಡು ರಾಜ್ಯ ಸರ್ಕಾರಗಳು ಮನಸ್ಸು ಮಾಡಿಲ್ಲ. ಅದು ಹೇಗೋ ದರ್ಶನ್ ಅವರಿಗೆ ಶಾಲೆ ಕಂಡಿದೆ. ಈ ಶಾಲೆಯ ಬಗ್ಗೆ ಮಾಹಿತಿ ಪಡೆದ ದರ್ಶನ್ ಅಲ್ಲಿಯ ಶಿಕ್ಷಕರಾದ ಶರಣಪ್ಪ ಪುಲರಿ ಎಂಬವರನ್ನು ಕರೆಸಿಕೊಂಡು 127 ಮಕ್ಕಳ ಡಿಜಿಟಲ್ ಶಿಕ್ಷಣಕ್ಕಾಗಿ ಒಟ್ಟು 30 ಟ್ಯಾಬ್‍ಗಳನ್ನ ಕೊಡಿಸಿದ್ದಾರೆ.

    ಇತ್ತೀಚೆಗೆ ರಾಜ್ಯದಲ್ಲಿ ಮಕ್ಕಳು ಇಲ್ಲ ಎಂಬ ಕಾರಣಕ್ಕೆ ಕನ್ನಡ ಶಾಲೆಗಳು ಮುಚ್ಚುತ್ತಿವೆ. ದೂರದ ಗಡಿಯಲ್ಲಿರುವ ಕನ್ನಡದ ಶಾಲೆಯ ಡಿಜಿಟಲ್ ಶಿಕ್ಷಣಕ್ಕಾಗಿ ಟ್ಯಾಬ್‍ಗಳನ್ನು ನೀಡುವ ಕನ್ನಡದ ಕಂದಮ್ಮಗಳಿಗೆ ರಿಯಲ್ ಹೀರೋ ಆಗಿದ್ದಾರೆ. ಸರ್ಕಾರಿ ಕನ್ನಡ ಮಾಧ್ಯಮಗಳ ಶಾಲೆ ಬಗ್ಗೆ ನಮ್ಮ ಸ್ಯಾಂಡಲ್‍ವುಡ್‍ನ ಅನೇಕ ನಟರು ಮುತುವರ್ಜಿ ವಹಿಸಿರುವುದನ್ನ ನಾವಿಲ್ಲಿ ನೆನಪಿಸಿಕೊಳ್ಳಬೇಕು.

    ಕಿಚ್ಚ ಸುದೀಪ್ ಹಾಗೂ ಚೇತನ್ ಸರ್ಕಾರಿ ಕನ್ನಡ ಮಾಧ್ಯಮಗಳನ್ನ ದತ್ತು ತೆಗೆದುಕೊಂಡು, ತಮ್ಮ ಕನ್ನಡ ಸೇವೆಯನ್ನ ಮಾಡುತ್ತಿದ್ದಾರೆ. ಕೆಲ ನಟರು ಯಾರಿಗೂ ಗೊತ್ತಾಗದಂತೆ ಕನ್ನಡ ಶಾಲೆಗಳಿಗೆ ಸಹಕಾರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ನಮ್ಮ ಕನ್ನಡ ನಟರು ಒಂದಿಲ್ಲೊಂದು ಸಮಾಜಸೇವೆಯಿಂದ ಅಭಿಮಾನಿಗಳಲ್ಲಿ ಸ್ಫೂರ್ತಿಯ ಸೆಲೆಯಾಗುತ್ತಿದ್ದಾರೆ.

  • ವಿಷ್ಣುವರ್ಧನ್ ಓದಿದ ಶಾಲೆ ಮುಚ್ಚಲು ಸಿದ್ಧತೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ

    ವಿಷ್ಣುವರ್ಧನ್ ಓದಿದ ಶಾಲೆ ಮುಚ್ಚಲು ಸಿದ್ಧತೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ

    ಬೆಂಗಳೂರು: ಕನ್ನಡ ಶಾಲೆಗಳನ್ನು ಮುಚ್ಚಲ್ಲ ಅಂತಾ ಬಡಾಯಿ ಕೊಚ್ಚಿಕೊಳ್ಳೋ ಸರ್ಕಾರ ಇದೀಗ ನಟ ವಿಷ್ಣುವರ್ಧನ್ ಓದಿದ ಶಾಲೆಯನ್ನೇ ಮುಚ್ಚಲು ಹೊರಟಿದೆ.

    ಚಾಮರಾಜಪೇಟೆಯಲ್ಲಿರೋ ಸರ್ಕಾರಿ ಅನುದಾನಿತ ಮಾಡಲ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿಯಲು ಸರ್ಕಾರ ಮುಂದಾಗಿದೆ. ಈ ಹಿಂದೆ ಈ ಶಾಲೆಗೆ ಸೇರಬೇಕಾದ್ರೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರಬೇಕಿತ್ತು ಅಥವಾ ರಾಜಕಾರಣಿಗಳ ರೆಕಮೆಂಡ್ ಬೇಕಿತ್ತು.

    ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಹಲವು ಬಾರಿ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೂ ಸರ್ಕಾರ ಶಿಕ್ಷಕರ ನೇಮಕಕ್ಕೆ ಮುಂದಾಗದ ಕಾರಣ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. 2 ತಿಂಗಳ ಹಿಂದೆ ಪ್ರೌಢಶಾಲೆಯನ್ನು ಮುಚ್ಚಿದ್ದ ಸರ್ಕಾರ ಈಗ ಮಕ್ಕಳ ಕೊರತೆಯನ್ನೇ ನೆಪವಾಗಿಟ್ಟುಕೊಂಡು ಪ್ರಾಥಮಿಕ ಶಾಲೆಯನ್ನು ಮುಚ್ಚಲು ಮುಂದಾಗಿದೆ ಎನ್ನಲಾಗಿದೆ.

  • ಸಿಎಂಗೆ ಓಪನ್ ಚಾಲೆಂಚ್ ಮಾಡಿ, ಸಚಿವರ ಬೆವರಿಳಿಸಿದ ವಿದ್ಯಾರ್ಥಿನಿ!

    ಸಿಎಂಗೆ ಓಪನ್ ಚಾಲೆಂಚ್ ಮಾಡಿ, ಸಚಿವರ ಬೆವರಿಳಿಸಿದ ವಿದ್ಯಾರ್ಥಿನಿ!

    ಚಿತ್ರದುರ್ಗ: ಸಿಎಂ ಅವರಿಗೆ ಪ್ರತಿಕ್ಷಗಳು ಓಪನ್ ಚಾಲೆಂಚ್ ಹಾಕುವುದನ್ನು ನೋಡಿದ್ದೇವೆ. ಆದ್ರೆ ವಿದ್ಯಾರ್ಥಿನಿಯೊಬ್ಬಳು ಖಾಸಗಿ ಶಾಲೆಯನ್ನ ಬಿಟ್ಟು ಸರ್ಕಾರಿ ಶಾಲೆಗೆ ಸೇರೋದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾಳೆ.

    ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯ್ತು. ವೇದಿಕೆಯಲ್ಲಿ ಸಚಿವ ಹೆಚ್.ಆಂಜನೇಯ ಸರ್ಕಾರಿ ಶಾಲೆಯಲ್ಲಿ ಓದಿವದರು ಸಂವಿಧಾನ ರಚಿಸಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನಿ ಯು.ಆರ್. ರಾವ್ ಸೇರಿದಂತೆ ಹಲವು ಗಣ್ಯರು ಸರ್ಕಾರಿ ಶಾಲೆಯಲ್ಲಿ ಕಲಿತು ಮಾಡಿದ ಸಾಧನೆ ಬಗ್ಗೆ ಭಾಷಣ ಮಾಡಿದ್ರು. ಅಲ್ಲದೆ ಸರ್ಕಾರಿ ಶಾಲೆಯನ್ನ ಉದಾಸೀನ ಮಾಡಬೇಡಿ ಅಂತಾ ಸಲಹೆ ನೀಡಿದ್ರು.

    ಭಾಷಣದ ಮುಗಿದ ಬಳಿಕ ವೇದಿಕೆಯಿಂದ ಇಳಿದು ಬಂದ ಸಚಿವ ಆಂಜನೇಯ ಅವರನ್ನ ಅಡ್ಡಗಟ್ಟಿದ ವಿದ್ಯಾವಿಕಾಸ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ನಯನಾ ತರಾಟೆಗೆ ತೆಗೆದುಕೊಂಡಳು.

    ನಾನು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದಳು.

    ನಮ್ಮ ಕನ್ನಡ ಶಾಲೆಗಳು ಉಳಿಯಬೇಕು ಅಂದ್ರೆ ರಾಜ್ಯದ ಎಲ್ಲಾ ಜನಪ್ರತಿನಿಧಿಗಳ ಮತ್ತು ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಮಕ್ಕಳು ಕನ್ನಡ ಶಾಲೆಗೆ ಬರಬೇಕು. ಇವರೆಲ್ಲರೂ ಕನ್ನಡ ಶಾಲೆಗೆ ಸೇರಿದರೆ ನಮ್ಮ ಕನ್ನಡ ಶಾಲೆಗಳು ಸುಧಾರಣೆಯಾಗುತ್ತದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರ ಬೇಗ ಕ್ರಮ ಕೈಗೊಳ್ಳಬೇಕು ಎಂದು ಹೇಳಿ ನಯನಾ ಸಚಿವರ ಬೆವರು ಇಳಿಸಿದ್ದಾಳೆ.

    ಇದನ್ನೂ ಓದಿ:  ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಕುರಿತು ಎಚ್ ಆಂಜನೇಯ ಪಾಠ!

  • 6 ವರ್ಷದ ಹಿಂದೆ ಮೂರು ಮಕ್ಕಳಿದ್ದ ಗಡಿನಾಡ ಕನ್ನಡ ಶಾಲೆಯಲ್ಲಿ ಈಗ ಓದ್ತಿದ್ದಾರೆ 120 ಮಕ್ಕಳು!

    6 ವರ್ಷದ ಹಿಂದೆ ಮೂರು ಮಕ್ಕಳಿದ್ದ ಗಡಿನಾಡ ಕನ್ನಡ ಶಾಲೆಯಲ್ಲಿ ಈಗ ಓದ್ತಿದ್ದಾರೆ 120 ಮಕ್ಕಳು!

    ಬೆಳಗಾವಿ: ಇಂದು ನಮ್ಮ ಪಬ್ಲಿಕ್ ಹೀರೋ ಒಬ್ಬರಲ್ಲ, ಮೂವರು. ಗಡಿನಾಡು ಬೆಳಗಾವಿಯಿಂದ ಬಂದಿರೋ ಹೀರೋಗಳಿವರು. ಕೇವಲ ಮೂವರು ಮಕ್ಕಳಿದ್ದ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ. ಇವತ್ತು ಈ ಶಾಲೆಯಲ್ಲಿ 120 ಮಕ್ಕಳಿದ್ದಾರೆ. ಎಲ್ಲರಿಗೂ ಹೈಟೆಕ್ ಶಿಕ್ಷಣ ಸಿಗುತ್ತಿದೆ.

    ರಾಮದುರ್ಗ ಮೂಲದ ವೈದ್ಯ ದಂಪತಿ ಶಶಿಕಾಂತ ಕುಲಗೋಡ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ರವೀಂದ್ರ ಗುರುವನ್ನವರ ಇವತ್ತಿನ ನಮ್ಮ ಪಬ್ಲಿಕ್ ಹೀರೋಗಳು. ಬೆಳಗಾವಿ ಮಹಾನಗರದ ಶಿವಬಸವ ನಗರದ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 6 ವರ್ಷಗಳ ಹಿಂದೆ ಕೇವಲ ಮೂವರೇ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಮೂರು ಕೊಠಡಿಯ ಶಾಲೆಗೆ ಶಿಕ್ಷಕರು ಬೇಕಾಬಿಟ್ಟಿಯಾಗಿ ಬಂದು ಪಾಠ ಮಾಡಿ ಹೋಗ್ತಿದ್ರು. ರಾತ್ರಿಯಾದ್ರೆ ಶಾಲಾ ಕಟ್ಟಡದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು.

    ಶಾಲೆಯ ಪಕ್ಕದಲ್ಲೇ ಇದ್ದ ವೈದ್ಯ ದಂಪತಿ ಶಶಿಕಾಂತ ಕುಲಗೋಡ ಹಾಗೂ ಇವರ ಪತ್ನಿ ವಿಜಯಲಕ್ಷ್ಮಿ ಶಾಲೆ ಅಭಿವೃದ್ಧಿಗೆ ಪಣ ತೊಟ್ಟರು. ಶಾಲೆಯನ್ನು ದತ್ತು ಪಡೆದು ಎರಡು ಹೊಸ ಕೊಠಡಿಗಳ ಜೊತೆಗೆ 4 ಹೈಟೆಕ್ ಶೌಚಾಲಯ ಕಟ್ಟಿಸಿದ್ದಾರೆ. ಸತತ 6 ವರ್ಷಗಳ ಪರಿಶ್ರಮದಿಂದ ಈ ಶಾಲೆ ಈಗ ಹೈಟೆಕ್ ಆಗಿದೆ. ಈ ವೈದ್ಯ ದಂಪತಿ ವಾರಕ್ಕೆ ಮೂರು ದಿನ ಸಂಜೆ ಹೊತ್ತಲ್ಲಿ ಮಕ್ಕಳಿಗೆ ಟ್ಯೂಷನ್ ಕೂಡಾ ಮಾಡ್ತಾರೆ.

    ವೈದ್ಯ ದಂಪತಿ ಜೊತೆಗೆ ರವೀಂದ್ರ ಗುರುವನ್ನವರ ಅನ್ನೋರು ಕೈ ಜೋಡಿಸಿದ್ದಾರೆ. ಐಐಟಿಯಲ್ಲಿ ಪಿಎಚ್‍ಡಿ ಮಾಡಿರೋ ಇವರು ಪ್ರತಿ ಶನಿವಾರ ಹಾಗೂ ಭಾನುವಾರ ಮಕ್ಕಳಿಗೆ ವಿಶೇಷ ಕ್ಲಾಸ್ ತೆಗೆದುಕೊಳ್ತಾರೆ. ಈ ಶಾಲಾ ಮಕ್ಕಳಿಗೆ ಹೊಸ ಯೂನಿಫಾರಂ, ನೋಟ್‍ಬುಕ್, ಪೆನ್, ಪುಸ್ತಕ ಎಲ್ಲವನ್ನೂ ಇವರ ದುಡ್ಡಿನಿಂದಲೇ ಕೊಡಿಸಿದ್ದಾರೆ. ಟೀಚರ್‍ಗಳಿಗೆ ವಿಶೇಷ ಟ್ರೈನಿಂಗ್ ಕೂಡಾ ಕೊಡ್ತಾರೆ. ಮಕ್ಕಳಿಗೆ ಸರ್ಕಾರದ ಅನ್ನಭಾಗ್ಯದ ಜೊತೆ ಇಲ್ಲಿ ಮೊಳಕೆ ಕಟ್ಟಿದ ಕಾಳು ಸೇರಿದಂತೆ ಪೌಷ್ಠಿಕಾಂಶದ ಆಹಾರ ನೀಡಲಾಗುತ್ತೆ. ಶಾಲೆ ನೋಡಿಕೊಳ್ಳಲು ಒಬ್ಬ ಸೆಕ್ಯೂರಿಟಿ ಗಾರ್ಡ್ ಕೂಡಾ ನೇಮಿಸಲಾಗಿದೆ. ಇವರಿಗೆ ಶಾಲಾ ಆವರಣದಲ್ಲೇ ಮನೆ ಕಟ್ಟಿಕೊಟ್ಟಿದ್ದು, ಇವರ ಸಂಬಳವನ್ನೂ ಈ ಪ್ರಾಧ್ಯಾಪಕರೇ ನೀಡುತ್ತಿದ್ದಾರೆ.

    ಗಡಿನಾಡಲ್ಲಿ ಕನ್ನಡ ಹಾಗೂ ಕನ್ನಡ ಶಾಲೆಗಳೇ ಮಾಯವಾಗ್ತಿರೋ ಈ ಕಾಲದಲ್ಲಿ ಈ ಮೂವರ ಕೆಲಸ ನಿಜಕ್ಕೂ ಶ್ಲಾಘನೀಯ.

    https://www.youtube.com/watch?v=jG3GoTOCDuo

     

  • ಗೋಡೆಯಲ್ಲಿ ಬಿರುಕು, ಬೀಳುವ ಸ್ಥಿತಿಯಲ್ಲಿ ಶಾಲೆ- ಗಂಡಾಂತರದಲ್ಲಿದೆ ಗಡಿನಾಡ ಕನ್ನಡ ಮಕ್ಕಳ ದೇಗುಲ

    ಗೋಡೆಯಲ್ಲಿ ಬಿರುಕು, ಬೀಳುವ ಸ್ಥಿತಿಯಲ್ಲಿ ಶಾಲೆ- ಗಂಡಾಂತರದಲ್ಲಿದೆ ಗಡಿನಾಡ ಕನ್ನಡ ಮಕ್ಕಳ ದೇಗುಲ

    ಬೆಳಗಾವಿ: ಹೆಸರಿಗೆ ಅದು ಸರ್ಕಾರಿ ಶಾಲೆ ಕಟ್ಟಡ. ಆದ್ರೆ ಅದನ್ನ ನೋಡಿದವರಿಗೆ ಮಾತ್ರ ಅದು ಶಾಲೆ ಅಂತ ಅನ್ನಿಸೋದೇ ಇಲ್ಲ. ಮಕ್ಕಳು ಸದಾ ಭಯದಲ್ಲೇ ಕುಳಿತು ಪಾಠ ಕೇಳಬೇಕು. ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರದವಾಡ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ದುಸ್ಥಿತಿ.

    ಶಿಥಿಲಾವಸ್ಥೆಯಲ್ಲಿರೋ ಗೋಡೆಗಳು, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಶಾಲೆಯನ್ನು ದುರಸ್ತಿ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಡಿರುವ ಮನವಿಗೆ ಲೆಕ್ಕವೇ ಇಲ್ಲ. ಆದ್ರೆ ಯಾವ ಅಧಿಕಾರಿಯೂ ಕನ್ನಡ ಶಾಲೆಯನ್ನು ಉಳಿಸಲು ಮುಂದೆ ಬಂದಿಲ್ಲ.

    ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯ ಹೆಚ್ಚುತ್ತಿದ್ರೂ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗ್ತಿಲ್ಲ ಅನ್ನೋದೇ ವಿಪರ್ಯಾಸ.