Tag: ಕನ್ನಡ ಶಾಲೆ

  • ರಾಜ್ಯದಲ್ಲಿಲ್ಲ ಕನ್ನಡ ಶಾಲೆಗಳಿಗೆ ಬೇಡಿಕೆ- ಕಾಫಿನಾಡಲ್ಲಿ ಒಂದೇ ವರ್ಷಕ್ಕೆ 21 ಶಾಲೆಗಳು ಬಂದ್

    ರಾಜ್ಯದಲ್ಲಿಲ್ಲ ಕನ್ನಡ ಶಾಲೆಗಳಿಗೆ ಬೇಡಿಕೆ- ಕಾಫಿನಾಡಲ್ಲಿ ಒಂದೇ ವರ್ಷಕ್ಕೆ 21 ಶಾಲೆಗಳು ಬಂದ್

    ಚಿಕ್ಕಮಗಳೂರು: ಪೋಷಕರ ಇಂಗ್ಲೀಷ್ ವ್ಯಾಮೋಹವೋ, ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಪೈಪೋಟಿ ನಿಡೋದಕ್ಕೆ ಸಾಧ್ಯವಾಗ್ತಿಲ್ವೋ ಅಥವಾ ಸರ್ಕಾರ ಕೇಳಿದವರಿಗೆಲ್ಲ ಖಾಸಗಿ ಶಾಲೆಗಳಿಗೆ ಅನುಮತಿ ನೀಡ್ತಿರೋದ್ರಿಂದ್ಲೋ ಗೊತ್ತಿಲ್ಲ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಬೀಗ ಬೀಳ್ತಾನೆ ಇದೆ. ಮಕ್ಕಳಿಗೆ ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್ ಅಂತೆಲ್ಲಾ ವಿವಿಧ ಯೋಜನೆಗಳನ್ನ ಜಾರಿಗೆ ತಂದರೂ ಕನ್ನಡ ಶಾಲೆಗಳನ್ನ ಮಾತ್ರ ಉಳಿಸಿಕೊಳ್ಳೋದಕ್ಕೆ ಆಗ್ತಿಲ್ಲ.

    ಹೌದು. ಚಿಕ್ಕಮಗಳೂರು (Chikkamagaluru) ಜಿಲ್ಲೆಯೊಂದರಲ್ಲೇ 21 ಕನ್ನಡ ಶಾಲೆಗಳು (Kannada School) ಬಂದ್ ಆಗಿವೆ. ಸರ್ಕಾರ ಬಿಸಿಯೂಟ, ಮೊಟ್ಟೆ-ಹಾಲು, ಶೂ-ಸಾಕ್ಸ್ ಅಂತೆಲ್ಲಾ ಹತ್ತಾರು ಯೋಜನೆಗಳನ್ನ ಜಾರಿಗೆ ತಂದರೂ ಹೆತ್ತವರು ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸೋಕೆ ಮೂಗು ಮುರಿಯುತ್ತಿದ್ದಾರೆ. ಇದರಿಂದ ಕಾಫಿನಾಡಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಬೀಗ ಬೀಳ್ತಿರೋ ಪ್ರಮಾಣ ಕೂಡ ಹೆಚ್ಚಿದೆ. ಸರ್ಕಾರ ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡುತ್ತಿರುವುದರಿಂದಲೇ ಈ ಸ್ಥಿತಿ ಬಂದಿದೆ ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇದನ್ನೂ ಓದಿ: ನನ್ನ ಸಿ.ಡಿ ಮಾಡಿಸಿದ್ದೇ ಡಿಕೆಶಿ, ಪ್ರಕರಣ ಸಿಬಿಐಗೆ ವಹಿಸಿ: ಜಾರಕಿಹೊಳಿ ಆಗ್ರಹ

    ಸರ್ಕಾರಿ ಶಾಲೆಗಳನ್ನ ಉಳಿಸೋಕೆ ಸರ್ಕಾರ ನಾನಾ ಯೋಜನೆಗಳನ್ನ ಜಾರಿಗೆ ತಂದ್ರೂ ಪೋಷಕರು ಮಾತ್ರ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸ್ತಿಲ್ಲ. ಜೊತೆಗೆ ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡ್ತಿರೋದ್ರಿಂದ ಸರ್ಕಾರಿ ಶಾಲೆಗಳು ಅವನತಿಯ ಅಂಚಿನಲ್ಲಿವೆ. ಕಳೆದ ಏಳೆಂಟು ವರ್ಷದಲ್ಲಿ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಶಾಶ್ವತ ಬೀಗ ಬಿದ್ದಿದೆ. ನೂರಾರು ಮಕ್ಕಳಿಗೆ ವಿದ್ಯಾಧಾನ ಮಾಡಿದ ಸರ್ಕಾರಿ ಶಾಲೆಗಳಿಂದು ಲೂಟಿಯೊಡೆದ ಕೋಟೆಯಂತಾಗಿದೆ. ಸರ್ಕಾರ ಕನ್ನಡ ಶಾಲೆಗಳಿಗೆ ನಾನಾ ಸೌಲಭ್ಯ ನೀಡ್ತಿದೆ. ಆದರೆ ಈ ಬೆನ್ನಲ್ಲೇ ಖಾಸಗಿ ಶಾಲೆಗಳಿಗೆ ಎಗ್ಗಿಲ್ಲದೆ ಅನುಮತಿ ನೀಡ್ತಿರೋದ್ರಿಂದ ಪೋಷಕರಿಗೆ ಇಂಗ್ಲಿಷ್ ಮೇಲಿರೋ ವ್ಯಾಮೋಹದಿಂದ ಮಕ್ಕಳನ್ನ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈ ಮಧ್ಯೆ ವಸತಿ ಶಾಲೆಗಳ ಆರಂಭ ಕೂಡ ಸರ್ಕಾರಿ ಶಾಲೆಗೆ ಮರಣಶಾಸನ ಬರೆದಿದೆ.

    ಒಟ್ಟಾರೆ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವೆ ಕಣ್ಣಾಮುಚ್ಚಾಲೆ ಆಟವಾಡುತ್ತಿರೋ ಸರ್ಕಾರಗಳ ನಡೆಯಿಂದಲೇ ಸರ್ಕಾರಿ ಶಾಲೆಗಳು ಬೀಗ ಕಾಣ್ತಿವೆಯಾ ಅನ್ನೋ ಅನುಮಾನ ಮೂಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ – ಕನ್ನಡ ಶಿಕ್ಷಕರನ್ನೇ ನೇಮಿಸುವಂತೆ ಆದೇಶ

    ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ – ಕನ್ನಡ ಶಿಕ್ಷಕರನ್ನೇ ನೇಮಿಸುವಂತೆ ಆದೇಶ

    ಮಂಗಳೂರು: ಕನ್ನಡ ಶಾಲೆಗೆ ಮಲಯಾಳಂ (Malayalam) ಶಿಕ್ಷಕಿಯನ್ನು ನೇಮಿಸಿದ್ದ ಕೇರಳ‌ ಸರ್ಕಾರಕ್ಕೆ‌ ಕೇರಳ ಹೈಕೋರ್ಟ್ (Kerala High Court) ತಪರಾಕಿ ಹಾಕಿದ್ದು, ಕನ್ನಡ ತಿಳಿದ ಶಿಕ್ಷಕರನ್ನೇ ನೇಮಿಸುವಂತೆ ಆದೇಶಿಸಿದೆ.

    ಕರ್ನಾಟಕದ (Karnataka) ಗಡಿಭಾಗ ಕೇರಳದ ಕಾಸರಗೋಡು ಜಿಲ್ಲೆಯ ಅಡೂರು‌ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೇರಳ ಸರ್ಕಾರ ಕನ್ನಡ ತಿಳಿಯದ ಮಲಯಾಳಿ ಶಿಕ್ಷಕಿಯನ್ನು ನೇಮಿಸಿತ್ತು. ಇದರಿಂದ ಸಮಸ್ಯೆಗೀಡಾದ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ನಡೆಸಿದ್ದು, ಎರಡು ತಿಂಗಳಿನಿಂದ ಕೋರ್ಟ್ ಹೋರಾಟ ನಡೆಸಿದ್ದರು. ಇದನ್ನೂ ಓದಿ: ಧಾರವಾಡ ಮೂಲದ ಆಸ್ಟ್ರೇಲಿಯಾ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಆಸ್ಟ್ರೇಲಿಯಾದ ಕಠಿಣ ಕಾನೂನುಗಳೇ ಸಾವಿಗೆ ಕಾರಣ

    ಪೋಷಕರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಕೇರಳ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಚಾಟಿ ಬೀಸಿದೆ. ಕನ್ನಡ ಮಕ್ಕಳಿಗೆ ಮಲಯಾಳಿ ಶಿಕ್ಷಕಿಯನ್ನ ನೇಮಿಸಿ ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ. ಇಂತಹ ಘಟನೆ ಅಡೂರು ಶಾಲೆಯಲ್ಲಿ ಮಾತ್ರವಲ್ಲ ಕಾಸರಗೋಡಿನ‌ ಹೆಚ್ಚಿನ ಕನ್ನಡ ಶಾಲೆಗಳಲ್ಲಿ ಅನ್ಯಾಯ ಆಗುತ್ತಿದೆ ಎಂದು ಪೋಷಕರ ಕಡೆಯ ವಕೀಲರು ವಾದ ಮಾಡಿದ್ದರು.

    ಈ‌ ವಾದವನ್ನ ಪುರಸ್ಕರಿಸಿದ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಕನ್ನಡಿಗರಿಗೆ ಜಯ ಸಿಕ್ಕಂತಾಗಿದೆ. ಇದನ್ನೂ ಓದಿ: ಚಂದ್ರನ ಮೇಲಿರುವ ಚಂದ್ರಯಾನ-3 ಲ್ಯಾಂಡರ್‌ ಫೋಟೋ ಸೆರೆ ಹಿಡಿದ ಚಂದ್ರಯಾನ-2ರ ಆರ್ಬಿಟರ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಪಾಜೆ ಶಾಲೆಗೆ ಹಳೆ ವಿದ್ಯಾರ್ಥಿಗಳ ಕೊಡುಗೆ – 2.41 ಲಕ್ಷ ರೂ. ಮೌಲ್ಯದ ವಸ್ತುಗಳು ಹಸ್ತಾಂತರ

    ಸಂಪಾಜೆ ಶಾಲೆಗೆ ಹಳೆ ವಿದ್ಯಾರ್ಥಿಗಳ ಕೊಡುಗೆ – 2.41 ಲಕ್ಷ ರೂ. ಮೌಲ್ಯದ ವಸ್ತುಗಳು ಹಸ್ತಾಂತರ

    – ಕಲ್ಲುಗುಂಡಿ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳಿಂದ ಸಹಾಯ
    – 4 ಸಿಸಿಟಿವಿ, 1 ಇನ್ವರ್ಟರ್, ತಲಾ 26 ಬೆಂಚ್-ಡೆಸ್ಕ್, 8 ಫ್ಯಾನ್ ಕೊಡುಗೆ

    ಮಂಗಳೂರು: ಮಕ್ಕಳ ಹಾಜರಾತಿ ಇಲ್ಲದೆ ರಾಜ್ಯದ ಹಲವು ಶಾಲೆಗಳು ಮುಚ್ಚಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಾವು ಓದಿದ ಸರ್ಕಾರಿ ಕನ್ನಡ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಕಲಿಕೆಗೆ ಅನುಕೂಲಕರ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.

    ಹೌದು. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗುಂಡಿಯ ಹಳೆ ವಿದ್ಯಾರ್ಥಿಗಳ ತಂಡವೇ ಇಂತಹದ್ದೊಂದು ಮಾದರಿ ಹೆಜ್ಜೆಯನ್ನಿಟ್ಟು ತಮ್ಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.

    ವಿದ್ಯಾರ್ಥಿಗಳು ಒಂದಾಗಿದ್ದು ಹೇಗೆ?
    ನಮ್ಮೂರ ಶಾಲೆಯನ್ನು ಉಳಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ವಾಟ್ಸಪ್ ನಲ್ಲಿ ನೂರಕ್ಕೂ ಹೆಚ್ಚಿನ ಹಳೆ ವಿದ್ಯಾರ್ಥಿಗಳ ತಂಡ ಒಂದಾಯಿತು. ಶಾಲೆಯ ಅಧ್ಯಾಪಕ ಬಳಗ, ಊರಿನ ಗುರು-ಹಿರಿಯರ ಮಾರ್ಗದರ್ಶನ ಪಡೆದು ಶಾಲೆಯ ಸಬಲೀಕರಣಕ್ಕೆ ಮುಂದಾಯಿತು. ಊರಿನ ಶಾಲೆಯ ಮೂಲಭೂತ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು, ಮಕ್ಕಳಿಗೆ ಓದಲು ಪೂರಕ ವಾತಾವರಣ ನಿರ್ಮಿಸುವುದು. ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಕಲ್ಲುಗುಂಡಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವುದೇ ಹಳೆ ವಿದ್ಯಾರ್ಥಿಗಳ ತಂಡದ ಪ್ರಮುಖ ಧ್ಯೇಯೋದ್ದೇಶವಾಗಿತ್ತು. ಇದನ್ನೂ ಓದಿ:  ಕನ್ನಡ ಶಾಲೆಗಳ ಮುಚ್ಚುತ್ತಿರುವುದು ಯಾಕೆ? ನಮ್ಮ ನಿಮ್ಮೆಲ್ಲರ ಕರ್ತವ್ಯ ಏನು?

    ಕೊರೊನಾ ಸವಾಲು ಮೆಟ್ಟಿ ನಿಂತರು
    ನಮ್ಮೂರ ಶಾಲೆ ಉಳಿಸೋಣ ತಂಡ ಉಳಿಸೋಣ ವಾಟ್ಸಪ್ ಅಭಿಯಾನದ ನೇತೃತ್ವವನ್ನು ಪತ್ರಕರ್ತ ಹೇಮಂತ್ ಸಂಪಾಜೆ ವಹಿಸಿಕೊಂಡಿದ್ದರು. ಇವರಿಗೆ ಮಿತ್ರರಾದ ವಿನಯ್ ಸುವರ್ಣ, ಶರತ್ ಕೈಪಡ್ಕ ಸಾಥ್ ನೀಡಿದರು. ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದ್ದರಿಂದ ಹೊರಗೆಲ್ಲೂ ಹೋಗುವ ಪರಿಸ್ಥಿತಿ ಇರಲಿಲ್ಲ. ಧನ ಸಂಗ್ರಹಿಸುವುದು ಹೇಗೆ ಎನ್ನುವ ಸವಾಲು ಎದುರಾಯಿತು. ಈ ಸಂದರ್ಭದಲ್ಲಿ ವಾಟ್ಸಪ್‌ನಲ್ಲಿಯೇ ಎಲ್ಲವನ್ನೂ ನಿಭಾಯಿಸಲಾಯಿತು. ಹಣದ ಖರ್ಚು ವೆಚ್ಚ, ತೆಗೆದುಕೊಂಡ ವಸ್ತುಗಳಗಳ ಬಿಲ್, ದಾನಿಗಳ ವಿವರ ಸೇರಿದಂತೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಕೆಲಸ ಮಾಡಿ ಮುಗಿಸಲಾಯಿತು. ತಂಡವು ಸಂಘಟಿತವಾಗಿ ರಚನಾತ್ಮಕ ಕಾರ್ಯ ವೈಖರಿಗೆ ಮುಂದಾಯಿತು. ಯಾರನ್ನೂ ಮುಖತಃ ಭೇಟಿಯಾಗದೇ ಕೇವಲ ವಾಟ್ಸಪ್ ಮೂಲಕ ನಮ್ಮೂರ ಶಾಲೆ ಉಳಿಸೋಣ ತಂಡ ಕೇವಲ 50 ದಿನಗಳಲ್ಲಿ 2,41,741 ರೂ. ಸಂಗ್ರಹಿಸಿತು. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಶಾಲೆಗೆ ಹಲವು ಮಂದಿ ಧನ ಸಹಾಯ ಮಾಡಿ ಹೃದಯ ಶ್ರೀಮಂತಿಕೆ ಮೆರೆದದ್ದು ವಿಶೇಷವಾಗಿತ್ತು.  ಇದನ್ನೂ ಓದಿ: ಮರಾಠಿ ಭಾಷೆಗೆ ಬ್ರೇಕ್ – ಕಾರವಾರ ಗಡಿಯಲ್ಲಿ ಹೆಚ್ಚಾಯ್ತು ಕನ್ನಡ ಶಾಲೆಗಳು

    ಕನಸು ಹುಟ್ಟಿದ್ದೇಗೆ?
    ಕಲ್ಲುಗುಂಡಿ ಶಾಲೆಯಲ್ಲಿ ಇಂತಹದ್ದೊದು ಕೆಲಸವನ್ನು ಮಾಡಬೇಕು ಅನ್ನುವ ಕನಸಿನ ಆರಂಭದ ಹಿಂದೆ ಇರುವುದು ಪತ್ರಕರ್ತ ಹೇಮಂತ್‌ ಸಂಪಾಜೆ ಹಾಗೂ ವಿನಯ್ ಸುವರ್ಣ. ಇಬ್ಬರು ಇತ್ತೀಚೆಗೆ ಶಾಲೆಗೆ ಭೇಟಿ ನೀಡಿದ್ದಾಗ ಶಾಲೆಯ ಮೂಲಸೌಲಭ್ಯ ಕುಸಿದಿರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಬೇಕು ಎಂದು ತಕ್ಷಣ ದೃಢ ಸಂಕಲ್ಪ ಮಾಡಿದ ಅವರಿಬ್ಬರು ‘ನಮ್ಮೂರ ಶಾಲೆ ಉಳಿಸೋಣ’ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್‌ ತೆರೆದರು. ಜಾಲತಾಣದ ಮೂಲಕ ಹಳೆ ವಿದ್ಯಾರ್ಥಿಗಳನ್ನು ಒಂದುಗೂಡಿಸಿದರು. ‘ನಮ್ಮೂರ ಶಾಲೆ ಉಳಿಸೋಣ’ ಎಂಬ ವಾಟ್ಸಪ್ ಗುಂಪನ್ನು ಸೇರುವಂತೆ, ಓದಿದ ಶಾಲೆಯನ್ನು ಉಳಿಸುವಂತೆ ಮನವಿ ಮಾಡಿದರು. ಇದಕ್ಕೆ ಹಳೆ ವಿದ್ಯಾರ್ಥಿಗಳು, ಊರಿನ ಹಾಗೂ ಪರವೂರಿನ ದಾನಿಗಳು ಸಹಾಯ ಹಸ್ತ ಚಾಚಿದರು. ಇದನ್ನೂ ಓದಿ: ಕನ್ನಡ ಶಾಲೆ ಉಳಿವಿಗಾಗಿ ಡ್ರೈವರ್ ಆದ್ರು ಮೇಷ್ಟ್ರು!

    ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಿಜಿಎಂ (ನಿವೃತ್ತ) ರಮೇಶ್ ತೆಂಕಿಲ್ ಹಾಗೂ ಅವರ ತಂಡ, ಸಿನಿಮಾ ನಟ- ಬಾಡಿಬಿಲ್ಡರ್ ಎ.ವಿ.ರವಿ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ನಿರೂಪಕಿ ರೀನಾ ಡಿಸೋಜಾ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎನ್ ಕೆ ಶಿವಣ್ಣ, ಪ್ರೊ ಕಬಡ್ಡಿ ರೆಫ್ರಿ ಉಸ್ನಾ ನವಾಜ್, ಮಾಜಿ ಕಬಡ್ಡಿ ಆಟಗಾರರಾದ ಬಿಸಿ ರಮೇಶ್, ಮಾಜಿ ಕಬಡ್ಡಿ ತಾರೆ ಪ್ರಸಾದ್ ಬಾಬು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ವೈ ವೆಂಕಟೇಶ್, ಐಪಿಎಲ್ ಕ್ರಿಕೆಟ್ ನ ಪ್ರಮುಖ ತಂಡವಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫಿಸಿಯೋ ಡಾ.ಶ್ರವಣ್, ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ ಚಂದ್ರಶೇಖರ ದಾಮ್ಲೆ ಸೇರಿದಂತೆ ಪರವೂರಿನ ಹಲವು ಜನರು ಧನ ಸಹಾಯ ನೀಡಿ ಅಭಿಯಾನಕ್ಕೆ ಶಕ್ತಿ ತುಂಬಿದರು. ಹಳೆ ವಿದ್ಯಾರ್ಥಿಗಳಾದ ವಸಂತ್ ರೈ ಬಿವಿ ಸಂಪಾಜೆ, ಜಯಾನಂದ ಸಂಪಾಜೆ, ದಾಮೋದರ ಮಾಸ್ಟರ್ ಗೂನಡ್ಕ, ಸವೀತಾ ಟೀಚರ್, ಶಶಿಕಲಾ ಟೀಚರ್ ಹಳೆ ವಿದ್ಯಾರ್ಥಿಗಳ ತಂಡದ ಪ್ರಯತ್ನವನ್ನು ಬೆಂಬಲಿಸಿದರು. ಇದನ್ನೂ ಓದಿ: ಅಕ್ಷರ ಜ್ಞಾನ ಪಡೆದ ಕನ್ನಡ ಶಾಲೆಯನ್ನು ಮಾದರಿ ಶಾಲೆಯಾಗಿಸಿದ ಕೊಡಗಿನ ಹಳೆ ವಿದ್ಯಾರ್ಥಿಗಳು

    ನಿಮ್ಮ ಊರಿನ ಶಾಲೆಯನ್ನೂ ಉಳಿಸಿ:
    ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದಾದ್ಯಂತ ಎರಡು ಸಾವಿರಕ್ಕೂ ಹೆಚ್ಚಿನ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಪ್ರಸ್ತಾವನೆ ಸದ್ಯ ರಾಜ್ಯ ಸರ್ಕಾರದ ಮುಂದಿದೆ. ನಮ್ಮ ಊರಿನಲ್ಲಿ ಅಂತಹ ಪರಿಸ್ಥಿತಿ ಬರಬಾರದು, ನಾವು ಓದಿದ ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆ ಮುಚ್ಚಬಾರದು. ಭವಿಷ್ಯದಲ್ಲೂ ಶಿಕ್ಷಣಾಂಮೃತವನ್ನು ಕಲ್ಲುಗುಂಡಿಯ ಶಾಲೆ ನಿರಂತರವಾಗಿ ಬಡ ವಿದ್ಯಾರ್ಥಿಗಳಿಗೆ ಉಣಬಡಿಸಬೇಕೆನ್ನುವ ಕನಸನ್ನಿಟ್ಟುಕೊಂಡ ಹಳೆ ವಿದ್ಯಾರ್ಥಿಗಳ ತಂಡ ಇಂತಹ ಕಾರ್ಯಕ್ಕೆ ಮುಂದಾಗಿದೆ.

  • ಸರ್ಕಾರದ ಆದೇಶಗಳು, ಒತ್ತಾಯಗಳಿಂದ ಕನ್ನಡ ಕಲಿಸುವ ಕೆಲಸ ಅಸಾಧ್ಯ: ಡಾ.ಗುರುರಾಜ ಕರ್ಜಗಿ

    ಸರ್ಕಾರದ ಆದೇಶಗಳು, ಒತ್ತಾಯಗಳಿಂದ ಕನ್ನಡ ಕಲಿಸುವ ಕೆಲಸ ಅಸಾಧ್ಯ: ಡಾ.ಗುರುರಾಜ ಕರ್ಜಗಿ

    ಬೆಂಗಳೂರು: ಪ್ರೀತಿಯಿಂದ ಕನ್ನಡ ಕಲಿಸುವ ಕೆಲಸವಾಗಬೇಕು ಹೊರತು ಸರ್ಕಾರದ ಆದೇಶಗಳು, ಒತ್ತಾಯಗಳಿಂದ ಕನ್ನಡ ಕಲಿಸುವ ಕೆಲಸ ಅಸಾಧ್ಯ. ಜನರ ಹೃದಯದಲ್ಲಿ ಕನ್ನಡ ಭಾಷೆ ಕಲಿಯುವ ಇಚ್ಛೆ ಮೂಡಬೇಕು ಎಂದು ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟಿದ್ದಾರೆ.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಜಾಗೃತಿ ಸಮಿತಿಯ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರವನ್ನು ಬೆಂಗಳೂರಿನ ನಹಾದೇವ ದೇಸಾಯಿ ಸಭಾಂಗಣದಲ್ಲಿ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಗುರುರಾಜ ಕರ್ಜಗಿ, ಕನ್ನಡದ ಜಾತ್ರೆಗಳು, ಉತ್ಸವಗಳು, ಕಾರ್ಯಕ್ರಮಗಳ ಕನ್ನಡದ ತೋರಣಗಳಂತೆ ಕಾಣುತ್ತವೆ. ಕನ್ನಡಕ್ಕೆ ತೋರಣದ ಜೊತೆ ಹೂರಣವೂ ಬೇಕು. ಹೀಗಾಗಿ ಕನ್ನಡ ಭಾಷೆಯ ಹೂರಣದ ಕೆಲಸವಾಗಬೇಕು ಎಂದು ತಿಳಿಸಿದರು.

    ಕನ್ನಡವನ್ನು ದೈಹಿಕವಾಗಿ, ಭಾವನಾತ್ಮಕವಾಗಿ, ಬೌದ್ಧಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬೆಳೆಸುವ ಕೆಲಸವಾಗಬೇಕು. ಸಾಹಿತಿಗಳು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು. ಹೀಗೆ ರಚಿತಗೊಂಡ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವು ಆಗಬೇಕು. ಜೀವನ ಮಾರ್ಗಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸಲು ಮುಂದಾಗುತ್ತಾರೆ. ಕನ್ನಡದಿಂದಲೂ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದು ಪೋಷಕರಿಗೆ ಅರ್ಥವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಗೊಂದು ಕನ್ನಡ ಮಾಧ್ಯಮ ಮಾದರಿ ಶಾಲೆಗಳನ್ನು ತೆರೆದು ಅಲ್ಲಿನ ಮಕ್ಕಳು ತಾಂತ್ರಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲೂ ಯಶಸ್ವಿಯಾಗುತ್ತಾರೆ ಎಂಬುದನ್ನು ಸಾಬೀತುಪಡಿಸಬೇಕು. ಆಗ ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಾರೆ. ಕನ್ನಡ ಜಾಗೃತಿ ಸಮಿತಿ ಸದಸ್ಯರು ತಮ್ಮ ಊರುಗಳಲ್ಲಿ ವಾರಕ್ಕೊಂದು ಕನ್ನಡದ ಕಾರ್ಯಕ್ರಮಗಳನ್ನು ಮಾಡಿ ಜನಸಾಮಾನ್ಯರಿಗೆ ಕನ್ನಡ ಭಾಷೆಯನ್ನು ತಲುಪಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆಗೆ ಆದೇಶ

    ಸಂಸ್ಕøತಿ ಚಿಂತಕ ಸುಚೇಂದ್ರ ಪ್ರಸಾದ್ ಮಾತನಾಡಿ, ಮನೋ ವಿಕೃತಿಗಳನ್ನು ತೊಡೆಯದೆ ಜಾಗೃತಿ ಆಗಲು ಸಾಧ್ಯವಿಲ್ಲ. ನಮ್ಮ ಭಾಷೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಪ್ರಾಧಿಕಾರ, ಜಾಗೃತಿ ಸಮಿತಿಗಳು ರಚನೆಗೊಂಡಲೇ ಕನ್ನಡಿಗರು ಜಾಗೃತಗೊಳ್ಳಬೇಕಿತ್ತು. ಇದಾಗದಿರುವುದು ದುರದೃಷ್ಟಕರ. ಭಾಷೆಯ ಬದ್ಧತೆಯ ಕೆಲಸಗಳನ್ನು ಮರೆತು ಅಧಿಕಾರದ ಗಾದಿಗಾಗಿ ತಾ ಮುಂದು ನಾ ಮುಂದು ಎಂದು ಮುಗಿ ಬೀಳುವಲ್ಲೇ ಹೆಚ್ಚಿನ ಮಂದಿ ನಿರತರಾಗಿರುವುದು ಬೇಸರದ ಸಂಗತಿ ಎಂದು ನುಡಿದರು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿ, ಕನ್ನಡ ಜಾಗೃತಿ ಸಮಿತಿ ಸದಸ್ಯರು ಕನ್ನಡದ ಕಾವಲುಪಡೆಯಂತೆ ಕೆಲಸ ಮಾಡಬೇಕು. ಸದಸ್ಯರು ತಮ್ಮ ಆತ್ಮ ವಿಮರ್ಶೆ ಮಾಡಿಕೊಂಡು ಆಶಯಗಳನ್ನು ಗುರುತಿಸಿಕೊಂಡು ಕನ್ನಡದ ಕೆಲಸಗಳನ್ನು ಮಾಡಬೇಕು. ಕನ್ನಡ ಕಾಯಕ ವರ್ಷದ ಶಪಥವನ್ನು ಈಡೀರಿಸುವ ನಿಟ್ಟಿನಲ್ಲಿ ಬಹಳ ಗಟ್ಟಿತನದಿಂದ ಕನ್ನಡದ ಕಾಯಕವನ್ನು ಮಾಡಬೇಕು ಎಂದು ಸೂಚಿಸಿದರು.

    ಕಾರ್ಯಕ್ರಮಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.

  • ಬೀಗ ಬೀಳುವ ಹೊಸ್ತಿಲಲ್ಲಿ ಶೃಂಗೇರಿ ಶ್ರೀಗಳು ಓದಿದ ಕನ್ನಡ ಶಾಲೆ

    ಬೀಗ ಬೀಳುವ ಹೊಸ್ತಿಲಲ್ಲಿ ಶೃಂಗೇರಿ ಶ್ರೀಗಳು ಓದಿದ ಕನ್ನಡ ಶಾಲೆ

    – ಶಾಲೆ ಉಳಿವಿಗಾಗಿ ಟೊಂಕ ಕಟ್ಟಿ ನಿಂತ ಹಳೆ ವಿದ್ಯಾರ್ಥಿಗಳು

    ಚಿಕ್ಕಮಗಳೂರು: ಶೃಂಗೇರಿ ಮಠದ 34ನೇ ಜಗದ್ಗುರುಗಳಾದ ಚಂದ್ರಶೇಖರ ಭಾರತೀ ಶ್ರೀಗಳು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗೆ ಬೀಗ ಬೀಳುವ ಕಾಲ ಸನ್ನಿಹಿತವಾಗಿದೆ. 1900 ಇಸವಿಯಲ್ಲಿ ಪುಟ್ಟ-ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಶ್ರೀಗಳು ಮುಂದಿನ ದಿನಗಳಲ್ಲಿ ಶೃಂಗೇರಿ ಮಠದ ಜಗದ್ಗುರುಗಳಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಅಜರಾಮರವಾದರು. ವಿಶ್ವದ ಉದ್ದಗಲಕ್ಕೂ ಖ್ಯಾತಿಯಾದರು. ಅದೆಲ್ಲಾ ಒಂದು ತಪ್ಪಸ್ಸು ಹಾಗೂ ಇತಿಹಾಸ. ಆದರೆ ಇಂದು ಅವರು ಆಡಿ-ಬೆಳೆದು ಓದಿದ ಸರ್ಕಾರಿ ಕನ್ನಡ ಶಾಲೆಗೆ ಬೀಗ ಬೀಳುವ ಕಾಲ ಸನ್ನಿಹಿತವಾಗಿದೆ.

    ಈ ಶಾಲೆ ಆರಂಭವಾಗಿದ್ದು 1853ನೇ ಇಸವಿಯಲ್ಲಿ. ಈ ಶಾಲೆಗೆ ಸುಮಾರು 168 ವರ್ಷಗಳ ಇತಿಹಾಸವಿದೆ. ಈ ಶಾಲೆಯ ದಾಖಲಾತಿ ಪುಸ್ತಕದಲ್ಲಿ ಶ್ರೀಗಳ ಹೆಸರೂ ಕೂಡ ಇದೆ. ಶ್ರೀ ಜಗದ್ಗುರು ಚಂದ್ರಶೇಖರ ಭಾರತಿಗಳು ಈ ಶಾಲೆಯಲ್ಲಿ ಅಂದಾಜು 1900ನೇ ಇಸವಿಯಲ್ಲಿ ಓದಿದ್ದಾರೆ. ಅವರ ಪೂರ್ಣನಾಮ ನರಸಿಂಹ. ತಂದೆ ವಿದ್ವಾನ್ ಗೋಪಾಲಶಾಸ್ತ್ರಿ ತಾಯಿ ಲಕ್ಷ್ಮಮ್ಮ. ಅವರು ಹುಟ್ಟಿದ ವರ್ಷ 1892. ದಾಖಲೆಗಳು ಕಳೆದು ಹೋಗಿವೆ ಎಂದು ಇಂದಿಗೂ 130 ವರ್ಷಗಳ ಹಿಂದಿನ ದಾಖಲಾತಿ ಪುಸ್ತಕದ ಮೇಲ್ಭಾಗದಲ್ಲೇ ಬರೆದು ಜೋಪಾನವಾಗಿ ಇಟ್ಟಿದ್ದಾರೆ. ಶೃಂಗೇರಿ ಮಠ ಅಂದ್ರೆ ದೇಶ-ವಿದೇಶದ ಉದ್ದಗಲಕ್ಕೂ ಪೂಜ್ಯ ಭಾವನೆ. ಮಠದ ಶ್ರೀಗಳು ಇಟ್ಟ ಒಂದೊಂದು ಹೆಜ್ಜೆಯೂ ನೆನಪಿನ ಬುತ್ತಿ. ಆದರೆ ಸರ್ಕಾರ ಇಂತಹಾ ಜೀವಂತ ದಂತಕಥೆಯ ಶಾಲೆಗೆ ಬೀಗ ಹಾಕುವ ಕಾಲ ಸನ್ನಿಹಿತವಾಗಿದೆ.

    ಶಾಲೆಯ ಈ ಸ್ಥಿತಿಗೆ ಎರಡು ಕಾರಣ: ಆರಂಭದಲ್ಲಿ ಶ್ರೀಗಳು ಓದುವಾಗ ಈ ಶಾಲೆಯಲ್ಲಿ ಸಾವಿರಾರು ಮಕ್ಕಳಿದ್ದರು. 168 ವರ್ಷಗಳಲ್ಲಿ ಲಕ್ಷಾಂತರ ಮಕ್ಕಳು ಬದುಕು ರೂಪಿಸಿಕೊಂಡಿದ್ದಾರೆ. ವಿವಿಧ ಉನ್ನತ ಹುದ್ದೆಗೇರಿದ್ದಾರೆ. ಇಂದು ಈ ಶಾಲೆಯಲ್ಲಿ ಇರೋದು ಕೇವಲ 16 ಜನ ಮಕ್ಕಳು. ಶಿಕ್ಷಕರ ಶ್ರಮ ಹಾಗೂ ಹೋರಾಟದ ಫಲವಾಗಿ ನಾಲ್ಕು ಜನ ಸೇರ್ಪಡೆಯಾಗಿದ್ದಾರೆ. ಈ ದಂತಕಥೆಯ ಶಾಲೆಯ ಇಂದಿನ ಸ್ಥಿತಿಗೆ ಕಾರಣ ಎರಡು. ಒಂದು, ಹೆತ್ತವರ ಇಂಗ್ಲಿಷ್ ವ್ಯಾಮೋಹ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮತ್ತೊಂದು, ಸರ್ಕಾರಿ ಶಾಲೆಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಶಾಲೆಗೆ ಅನುಮತಿ ನೀಡಬಾರದೆಂಬ ಸರ್ಕಾರದ ಆದೇಶದ ಮಧ್ಯೆಯೂ ಈ ಶಾಲೆಯ 100-200 ಮೀಟರ್ ದೂರದಲ್ಲಿ ಎರಡು ಖಾಸಗಿ ಶಾಲೆಗೆ ಅನುಮತಿ ನೀಡಿರೋದು. ಈ ಶಾಲೆಯ ಇಂದಿನ ಈ ಸ್ಥಿತಿಗೆ ಅಧಿಕಾರಿ ವರ್ಗ ಕೂಡ ಕಾರಣವಾಗಿದೆ.

    ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ: ಹಿಂದೊಮ್ಮೆ ಈ ಶಾಲೆಯನ್ನ ಮುಚ್ಚಲು ಮುಂದಾಗಿದ್ದರು. ಸ್ಥಳಿಯರು ಹಾಗೂ ಹಿರಿಯ ವಿದ್ಯಾರ್ಥಿಗಳು ಶ್ರೀಗಳ ನೆನಪಿಗಾಗಿ ಉಳಿಸಿದ್ದರು. 2016ರಲ್ಲಿ ಈ ಶಾಲೆಯನ್ನ ಬಾಲಕಿಯರ ಶಾಲೆ ಜೊತೆ ವಿಲೀನ ಮಾಡಲು ಸರ್ಕಾರ ಚಿಂತಿಸಿತ್ತು. ಸ್ಥಳಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಬಾಲಕರ ಶಾಲೆಯಾಗೇ ಉಳಿದಿದೆ. ಇಂತಹ ಶಾಲೆಯನ್ನ ಮುಚ್ಚಲು ಅಥವ ಮರ್ಜ್ ಮಾಡಲು ಯೋಚಿಸೋ ಸರ್ಕಾರಕ್ಕೆ ಈ ನೆನಪಿನ ಬುತ್ತಿಯನ್ನ ಉಳಿಸೋ ಮನಸ್ಸಿಲ್ಲ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಕೂಡ ಹೊರಹಾಕಿದ್ದಾರೆ. ಹೆತ್ತವರ ಇಂಗ್ಲಿಷ್ ಪ್ರೀತಿ ಕೂಡ ಶಾಲೆಯ ಈ ದುಸ್ಥಿತಿಗೆ ಕಾರಣವಾಗಿದೆ.

    ಶಾಲೆ ಉಳಿವಿಗಾಗಿ ಟೊಂಕ ಕಟ್ಟಿ ನಿಂತ ಹಳೆ ವಿದ್ಯಾರ್ಥಿಗಳು:
    ಸ್ಥಳೀಯರು, ಹಳೇ ವಿಧ್ಯಾರ್ಥಿಗಳು, ಅಧಿಕಾರಿಗಳು, ಶಿಕ್ಷಕ ವೃಂದ ಹಾಗೂ ಎಡಿಎಂಸಿ ಸದಸ್ಯರು ಈಗ ಮತ್ತೆ ಶಾಲೆಗೆ ಮರುಜೀವ ನೀಡಲು ಮುಂದಾಗುತ್ತಿದ್ದಾರೆ. ಸುಣ್ಣ-ಬಣ್ಣ ಹೊಡೆಸಿ ಶ್ರೀಗಳ ನೆನಪಿಗಾಗಿ ಈ ಶಾಲೆಯ ಹೊಸ ಶಕೆಗೆ ನಾಂದಿ ಹಾಡಲು ಸಿದ್ಧತೆ ನಡೆಸಿದ್ದಾರೆ. ಅಧಿಕಾರಿಗಳು ಕೂಡ ಕೂಡ ಶಾಲೆಯನ್ನ ಮುಚ್ಚಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯರು ಕೂಡ ಸರ್ಕಾರಕ್ಕೆ ಇದು ಬರೀ ಶಾಲೆಯಷ್ಟೆ. ನಮಗೆ ಜ್ಞಾನದ ದೇಗುಲ. ಶ್ರೀಗಳ ನೆನಪು. ಈ ಶಾಲೆಯ ಅಭಿವೃದ್ಧಿಗೆ ನಾವು ಸದಾ ಸಿದ್ಧ ಎಂದು ಶಾಲೆ ಉಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ.

    ವಿಶ್ವದ ಉದ್ಧಗಲಕ್ಕೂ ಶಂಕರಾಚಾರ್ಯರು, ಶೃಂಗೇರಿ ಮಠ ಅಂದ್ರೆ ಪೂಜ್ಯ ಭಾವನೆ. ಶೃಂಗೇರಿ ಶ್ರೀಗಳು ಇಟ್ಟ ಒಂದೊಂದು ಹೆಜ್ಜೆಯೂ ಒಂದೊಂದು ನೆನಪಿನ ಬುತ್ತಿ. ಇತಿಹಾಸ. ಜೀವಂತ ದಂತಕಥೆ. ಅವುಗಳನ್ನ ಉಳಿಸಿಕೊಳ್ಳಬೇಕೇ ವಿನಃ ಸೃಷ್ಠಿಸಲಾಗಲ್ಲ. ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪ್ರತಿಮೆ-ರಸ್ತೆ ಮಾಡಿ ಅದಕ್ಕೆ ಒಬ್ಬೊಬ್ಬರ ಹೆಸರಿಟ್ಟು ವಸ್ತುಗಳಲ್ಲಿ ವ್ಯಕ್ತಿಗಳನ್ನ ನೆನಪಿಸಿಕೊಳ್ಳುವ ಬದಲು ಶತಶತಮಾನಕ್ಕೂ ನೈಸರ್ಗಿಕ ಹಾಗೂ ಜೀವಂತ ಆ್ಯಂಟಿಕ್ ಪೀಸ್ ಆಗಿರೋ ಇಂತಹಾ ಕನ್ನಡ ಶಾಲೆಗಳನ್ನೇ ಉಳಿಸಿ ಅಭಿವೃದ್ಧಿಪಡಿಸಿದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ ಅನ್ನೋದು ಜಿಲ್ಲೆಯ ಜನರ ಆಸೆಯಾಗಿದೆ.

  • ಕನ್ನಡ ಶಾಲೆಗಳ ಹಿತಕ್ಕಾಗಿ ಕಡ್ಡಾಯ ಭಾಷೆ ಕಲಿಕೆ ಆದೇಶ ಕೈ ಬಿಡಿ: ಆಂಧ್ರ ಸಿಎಂಗೆ ಸುರೇಶ್ ಕುಮಾರ್ ಪತ್ರ

    ಕನ್ನಡ ಶಾಲೆಗಳ ಹಿತಕ್ಕಾಗಿ ಕಡ್ಡಾಯ ಭಾಷೆ ಕಲಿಕೆ ಆದೇಶ ಕೈ ಬಿಡಿ: ಆಂಧ್ರ ಸಿಎಂಗೆ ಸುರೇಶ್ ಕುಮಾರ್ ಪತ್ರ

    ಬೆಂಗಳೂರು : ಆಂಧ್ರ ಪ್ರದೇಶದಲ್ಲಿ ಇಂಗ್ಲಿಷ್, ತೆಲುಗು, ಉರ್ದು ಮಾತ್ರ ಕಡ್ಡಾಯವಾಗಿ ಕಲಿಯಬೇಕು ಅನ್ನೋ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ನಿರ್ಧಾರಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಧ್ರ ಸಿಎಂಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ತಮ್ಮ ನಿರ್ಧಾರ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಗಡಿಯಲ್ಲಿನ ಕನ್ನಡ ಶಾಲೆಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈ ಬಿಡಬೇಕು ಅಂತ ಪತ್ರದಲ್ಲಿ ಒತ್ತಾಯಿಸಿದ್ದಾರೆ.

    ಇತ್ತೀಚೆಗಷ್ಟೆ ಆಂಧ್ರ ಸಿಎಂ ಜಗನ್ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಕಲಿಸಲಾಗುತ್ತೆ. ಅಲ್ಲದೆ ತೆಲುಗು ಮತ್ತು ಉರ್ದುವನ್ನ ಆಂಧ್ರದಲ್ಲಿ ಕಡ್ಡಾಯವಾಗಿ ಕಲಿಯಬೇಕು ಎಂದು ಆದೇಶ ಹೊರಡಿಸಿದ್ದರು. ಜಗನ್ ಈ ನಿರ್ಧಾರದಿಂದ ಗಡಿಯಲ್ಲಿರೋ ಕನ್ನಡ ಶಾಲೆಗಳ ಮೇಲೆ ಪರಿಣಾಮ ಬೀರುತ್ತೆ. ಕನ್ನಡ ಕಲಿಕೆಯೇ ಕೈಬಿಡೋ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ ಸಿಎಂ ಜಗನ್ ಗೆ ಪತ್ರ ಬರೆದಿರೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

    ಸುರೇಶ್ ಕುಮಾರ್ ಪತ್ರದ ಸಾರಾಂಶ ಹೀಗಿದೆ:
    ಕರ್ನಾಟಕ ಮತ್ತು ಆಂಧ್ರಪದೇಶ ರಾಜ್ಯಗಳ ಸಂಬಂಧ ಐತಿಹಾಸಿಕವಾದುದು. ಕೃಷ್ಣದೇವರಾಯನ ಕಾಲಕ್ಕಿಂತಲೂ ಮೊದಲಿನಿಂದಲೂ ಈ ಎರಡೂ ರಾಜ್ಯಗಳು ಯಾವಾಗಲೂ ಸಹೋದರ ಸಂಬಂಧದಲ್ಲೇ ನಡೆದುಕೊಂಡು ಬರುತ್ತಿವೆ. ಭಾಷೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ನಮ್ಮೆರಡು ರಾಜ್ಯಗಳು ಪರಸ್ಪರ ಸೌಹಾರ್ದದಿಂದಲೇ ಇವೆ. ಇದು ಎರಡೂ ರಾಜ್ಯಗಳಿಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಆಂಧ್ರ ಪ್ರದೇಶ ಸರ್ಕಾರ ಸೀಮಾಂಧ್ರದಲ್ಲಿನ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸುವ ಹಾಗೆಯೇ ಪ್ರತಿ ವಿದ್ಯಾರ್ಥಿಯನ್ನು ತೆಲುಗು ಇಲ್ಲವೇ ಉರ್ದು ಭಾಷೆ ಕಲಿಯಬೇಕೆಂಬ ನಿರ್ಧಾರ ಕೈಗೊಂಡಿರುವುದು ನಮ್ಮೆರಡು ರಾಜ್ಯಗಳ ನಡುವಿನ ಸೌಹಾರ್ದಕ್ಕೆ ಧಕ್ಕೆಯಾದಂತಾಗಿದೆ.

    ಇದು ಆಂಧ್ರಪ್ರದೇಶದ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರ ಮನೋಸ್ಥೈರ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾಂಸ್ಕೃತಿಕ ಸಂಘರ್ಷ ಇತರೆ ಯಾವುದೇ ಸಾಮಾಜಿಕ ಸಂಘರ್ಷಗಳಿಗಿಂತಲೂ ತೀವ್ರ ನೋವಿನ ಸಂಗತಿಯಾಗಿದೆ. ನಮ್ಮ ರಾಜ್ಯದ ಉದಾರ ಮತ್ತು ಸಮಗ್ರ ಆಡಳಿತ ಕಾರ್ಯ ವಿಧಾನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹತ್ತಾರು ತೆಲುಗು ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಆಂಧ್ರಪ್ರದೇಶ ಕೈಗೊಂಡ ನಿರ್ಧಾರ ಕನ್ನಡ ಭಾಷಾ ಶಿಕ್ಷಕರ ಜೀವನವನ್ನು ಅಪಾಯಕ್ಕೆ ಸಿಕ್ಕಿಸುವುದು ಮಾತ್ರವೇ ಅಲ್ಲ, ಕರ್ನಾಟಕ ಹೊರಗೆ ವಾಸಿಸುತ್ತಾರೆಂಬ ಒಂದೇ ಕಾರಣಕ್ಕಾಗಿ ಕನ್ನಡಿಗರ ಮಕ್ಕಳು ತಮ್ಮ ಮಾತೃಭಾಷೆಯಿಂದ ವಂಚಿತವಾಗಬೇಕಾಗುತ್ತದೆ. ಹಾಗಾಗಿ ಕನ್ನಡವನ್ನು ಭಾಷೆಯಾಗಿ ಇಲ್ಲವೇ ಮಾಧ್ಯಮವಾಗಿ ಕಲಿಸುವ ಅಲ್ಪಸಂಖ್ಯಾತ ಭಾಷಾ ಶಾಲೆಗಳನ್ನು ಮುಂದುವರಿಸುವ ಮೂಲಕ ತಮ್ಮ ರಾಜ್ಯದಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವ ಸುರೇಶ್ ಕುಮಾರ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

  • ಮರಾಠಿ ಭಾಷೆಗೆ ಬ್ರೇಕ್ – ಕಾರವಾರ ಗಡಿಯಲ್ಲಿ ಹೆಚ್ಚಾಯ್ತು ಕನ್ನಡ ಶಾಲೆಗಳು

    ಮರಾಠಿ ಭಾಷೆಗೆ ಬ್ರೇಕ್ – ಕಾರವಾರ ಗಡಿಯಲ್ಲಿ ಹೆಚ್ಚಾಯ್ತು ಕನ್ನಡ ಶಾಲೆಗಳು

    – ಗೋವಾಕ್ಕೆ ಕಾರವಾರ ಸೇರಿಸಿ ಎಂದವರು ಕನ್ನಡ ಕಲಿತರು
    – ಬಾಗಿಲು ಮುಚ್ಚುತ್ತಿವೆ ಮರಾಠಿ ಶಾಲೆಗಳು

    ಕಾರವಾರ: ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವ ಕನ್ನಡಿಗರಿಗೆ ಕಾರವಾರ ಗಡಿಯಿಂದ ಸಿಹಿಸುದ್ದಿ ಸಿಕ್ಕಿದೆ. ಗಡಿಯಲ್ಲಿ ಹೆಚ್ಚಿದ್ದ ಮರಾಠಿ ಶಾಲೆಗಳಿಗೆ ಬೀಗ ಬಿದ್ದಿದ್ದು ಅಲ್ಲಿ ಕನ್ನಡ ಕಂಪು ನಿಧಾನವಾಗಿ ಅರಳುತ್ತಿದೆ. ಈ ಮೂಲಕ ಕನ್ನಡಿಗರು ಮನಸ್ಸು ಮಾಡಿದರೆ ಹೇಗೆ ಬದಲಾವಣೆ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

    ಗೋವಾ ಗಡಿಯಲ್ಲಿರುವ ಉತ್ತರ ಕನ್ನಡದ ಕೆಲ ಭಾಗದಲ್ಲಿ ಈ ಹಿಂದೆ ಕನ್ನಡಕ್ಕಿಂತ ಮರಾಠಿ ಭಾಷೆಯೇ ಪ್ರಮುಖವಾಗಿತ್ತು. ಅದರಲ್ಲೂ ಗೋವಾ ಗಡಿಯಲ್ಲಿ ಸುಮಾರು 20ಕ್ಕೂ ಅಧಿಕ ಶಾಲೆಗಳಲ್ಲಿ ಮಕ್ಕಳಿಗೆ ಮರಾಠಿ ಶಿಕ್ಷಣವನ್ನು ಕೊಡುತ್ತಿದ್ದರು. ಆದರೆ ಈಗ ಕಾರವಾರದಲ್ಲಿ ಮರಾಠಿ ಪ್ರಾಬಲ್ಯ ಕಡಿಮೆಯಾಗಿ ಕನ್ನಡ ಪ್ರೇಮ ಹೆಚ್ಚಾಗಿದೆ. ಬಹುತೇಕ ಮರಾಠಿ ಶಾಲೆಗಳಿಗೆ ಬೀಗ ಬಿದ್ದ ಮೇಲೆ ವಿದ್ಯಾರ್ಥಿಗಳು ಕನ್ನಡ ಶಾಲೆಯತ್ತ ಮುಖಮಾಡಿದ್ದಾರೆ. ಇದನ್ನೂ ಓದಿ:ಕಾಫಿನಾಡಿನ ದೇಗುಲದಲ್ಲಿ ಕನ್ನಡ ಡಿಂಡಿಮ

    ಮರಾಠಿ ಭಾಷೆಯನ್ನೇ ಮಾತನಾಡುವವರ ಸಂಖ್ಯೆ ಅಧಿಕವಾಗಿದ್ದರಿಂದ ಮರಾಠಿ ಶಾಲೆಗಳ ಸಂಖ್ಯೆ ಸಹ ಅಧಿಕವಾಗಿತ್ತು. ಅದರಲ್ಲೂ ಕಾರವಾರದ ಗಡಿ ಗ್ರಾಮಗಳಾದ ಮಾಜಾಳಿ, ಹಣಕೋಣ, ಅಸ್ನೋಟಿ, ಸದಾಶಿವಗಡ ಸೇರಿದಂತೆ ಹಲವು ಗ್ರಾಮದಲ್ಲಿ ಸುಮಾರು 31 ಮರಾಠಿ ಶಾಲೆಗಳನ್ನ ಸರ್ಕಾರವೇ ತೆರೆದಿತ್ತು. ಅಧಿಕ ವಿದ್ಯಾರ್ಥಿಗಳು ಮರಾಠಿ ಶಿಕ್ಷಣವನ್ನೇ ಪಡೆಯಲು ಇಚ್ಛಿಸುತ್ತಿದ್ದ ಹಿನ್ನೆಲೆಯಲ್ಲಿ ಮರಾಠಿ ಶಾಲೆಗಳನ್ನ ತೆರೆಯಲಾಗಿತ್ತು. ಆದರೆ ಕೆಲ ವರ್ಷದಿಂದ ಕನ್ನಡ ಪರ ಸಂಘಟನೆಗಳ ಶ್ರಮದಿಂದ ಗಡಿ ಭಾಗದಲ್ಲಿ ಮರಾಠಿ ಪ್ರೇಮ ಕಡಿಮೆಯಾಗಿ ಕನ್ನಡ ಮೇಲಿನ ಆಸಕ್ತಿ ಜನರಲ್ಲಿ ಹೆಚ್ಚಾಗತೊಡಗಿದೆ.

    ಮರಾಠಿ ಶಾಲೆಗಳನ್ನ ಬಿಟ್ಟು ಕನ್ನಡ ಶಾಲೆಯತ್ತ ಮುಖಮಾಡಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಸದ್ಯ ಕಾರವಾರದಲ್ಲಿ 28 ಮರಾಠಿ ಶಾಲೆಗಳು ಬಾಗಿಲು ಮುಚ್ಚಿ ಕೇವಲ 3 ಮರಾಠಿ ಶಾಲೆಗಳು ಮಾತ್ರ ಬಾಗಿಲು ತೆರೆದಿದ್ದು, ಅದೂ ಸಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಗಡಿಯಲ್ಲಿ ಕನ್ನಡ ಶಾಲೆಯತ್ತ ವಿದ್ಯಾರ್ಥಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸುಮಾರು 147 ಕನ್ನಡ ಶಾಲೆಗಳಲ್ಲಿ ಪ್ರಸ್ತುತ ಮಕ್ಕಳಿಗೆ ಶಿಕ್ಷಣವನ್ನ ಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದು ಕಾರವಾರದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ್ ನಾಯಕ್ ತಿಳಿಸಿದ್ದಾರೆ. ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟು ಎಂಇಎಸ್ ಪುಂಡಾಟ

    ಸದ್ಯ ಮೂರು ಮರಾಠಿ ಶಾಲೆಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ. ಗೋವಾ ಮಹಾರಾಷ್ಟ್ರ ಪಕ್ಕದ ರಾಜ್ಯವಾಗಿದ್ದು, ಗೋವಾದಲ್ಲೂ ಮರಾಠಿ ಭಾಷೆಯಲ್ಲಿಯೇ ಹಲವು ಭಾಗದ ನಿವಾಸಿಗಳು ಶಿಕ್ಷಣ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಕಾರವಾರದಲ್ಲೂ ಮರಾಠಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿತ್ತು. ಅಲ್ಲದೇ ಬಹುತೇಕ ಗಡಿ ಭಾಗದಲ್ಲಿನ ಜನರು ಕೆಲಸಕ್ಕಾಗಿ ಗೋವಾದ ಮೊರೆ ಹೋಗುತ್ತಿದ್ದ ಕಾರಣಕ್ಕೆ ಮರಾಠಿ ಶಿಕ್ಷಣ ಪಡೆಯಲು ಮುಂದಾಗಿದ್ದರು. ಆದರೆ ಕನ್ನಡ ಬಳಕೆ, ಕರ್ನಾಟದಲ್ಲಿಯೇ ಹೆಚ್ಚಾಗಿ ಕೆಲಸಕ್ಕೆ ಹೋಗುವವರ ಸಂಖ್ಯೆ ಅಧಿಕವಾಗತೊಡಗಿತು. ಕಳೆದ 20 ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಘಟನೆಗಳ ಶ್ರಮದಿಂದಾಗಿ ಕಾರವಾರದಲ್ಲಿ ಮರಾಠಿ ಶಿಕ್ಷಣ ಮಾಯವಾಗಿ ಕನ್ನಡ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಬಂದಿದೆ ಎನ್ನುವುದು ಸ್ಥಳೀಯರ ಮಾತಾಗಿದೆ.

    ಹಿಂದೆ ಪರಿಸ್ಥಿತಿ ಹೇಗಿತ್ತು?
    ಕಾರವಾರದ ಸುತ್ತಮುತ್ತಲ ಗ್ರಾಮಗಳಲ್ಲಿ ಕನ್ನಡ ಶಾಲೆ ಇದ್ದರೂ ಈ ಶಾಲೆಯಲ್ಲಿ ಕನ್ನಡ ಕಲಿಯುವ ಮಕ್ಕಳೇ ಇರಲಿಲ್ಲ. ಹೀಗಾಗಿ 20 ವರ್ಷಗಳ ಹಿಂದೆ ಕನ್ನಡ ಶಾಲೆಗಳೇ ಬಂದ್ ಆಗಿ ಮರಾಠಿ ಶಾಲೆಗಳು ತನ್ನ ಪ್ರಾಬಲ್ಯ ಮೆರೆದಿದ್ದವು. ಕರ್ನಾಟಕ ನೆಲದಲ್ಲೇ ಕನ್ನಡ ಮಾಯವಾಗುತ್ತಿರುವುದು ಅರಿವಿಗೆ ಬರುತ್ತಿದ್ದಂತೆ ಕನ್ನಡ ಸಂಘಟನೆಗಳು ಕೂಡ ಕನ್ನಡ ಕಲಿಸಲು ಹಾಗೂ ಕನ್ನಡ ಪ್ರೀತಿ ಬೆಳೆಸಲು ಹಲವು ಕಾರ್ಯಕ್ರಮ ರೂಪಿಸಿತ್ತು. ಜೊತೆಗೆ ಪೋಷಕರಲ್ಲಿ ಕನ್ನಡ ಪ್ರೇಮ ಬೆಳೆಸುವ ಕಾರ್ಯ ಸಹ ನಡೆಸಿತ್ತು. ಪರಿಣಾಮ ಫಲಿತಾಂಶ ಕಾಣುತ್ತಿದ್ದು ಮರಾಠಿ ಶಾಲೆಗಳು ಹಂತ ಹಂತವಾಗಿ ಮುಚ್ಚುತ್ತಿವೆ. ಇದನ್ನೂ ಓದಿ:ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ಬದಲಾವಣೆ ಹೇಗಾಯ್ತು?
    ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಮಟ್ಟಿಗೆ ಮರಾಠಿ, ಕೊಂಕಣಿ ಅತೀ ಪ್ರಭಾವ ಹೊಂದಿದ ಭಾಷೆಯಾಗಿದೆ. ಇನ್ನು ಇಲ್ಲಿನ ಜನ ಉದ್ಯೋಗ, ವ್ಯವಹಾರಕ್ಕಾಗಿ ಗೋವಾ ನೆಚ್ಚಿಕೊಂಡಿದ್ದರಿಂದಾಗಿ ಕೊಂಕಣಿ, ಮರಾಠಿ ಅನಿವಾರ್ಯವಾಗಿತ್ತು. ಹೀಗಾಗಿ ತಮ್ಮ ಮಕ್ಕಳಿಗೆ ಮರಾಠಿ ಶಾಲೆಯಲ್ಲಿಯೇ ಶಿಕ್ಷಣ ಕೊಡಿಸುತ್ತಿದ್ದರು. ಇದರಿಂದಾಗಿ ಈ ಭಾಗದಲ್ಲಿ ಕನ್ನಡ ಮಾತನಾಡುವ, ವ್ಯವಹರಿಸುವ ಜನರ ಸಂಖ್ಯೆ ವಿರಳವಾಗಿತ್ತು. ಹೀಗಾಗಿ ಬೇರೆ ರಾಜ್ಯಕ್ಕೆ ಬಂದಿದ್ದೇವೆ ಎಂದು ಕನ್ನಡಿಗರಿಗೆ ಅನುಭವ ಆಗುತಿತ್ತು. ಆದರೆ ಈಗ ಗೋವಾ ರಾಜ್ಯದಂತೆ ಕರ್ನಾಟಕದಲ್ಲಿಯೂ ಉದ್ಯೋಗದ ವಿಫುಲ ಅವಕಾಶ ದೊರೆಯುತಿದ್ದು, ಕಾರವಾರದ ಸ್ಥಳೀಯ ಜನರು ಕನ್ನಡ ಭಾಷೆಯತ್ತ ಮುಖಮಾಡಿದ್ದಾರೆ.

    ಹೋರಾಟ ಹೇಗಾಯ್ತು?
    2008ರಲ್ಲಿ ಸದಾಶಿವ ಘಡದ ಗೋವಾ ಕೊಂಕಣಿ ಮಂಚ್‍ನ ಪ್ರಕಾಶ್ ಪಾಲನ್ಕರ್, ಅಂದಿನ ಪುರಸಭಾ ಸದಸ್ಯೆ ಆಶಾ ಪಾಲನ್ಕರ್ ನೇತೃತ್ವದಲ್ಲಿ ಕಾರವಾರವನ್ನು ಗೋವಾ ರಾಜ್ಯಕ್ಕೆ ಸೇರಿಸಬೇಕೆಂದು ದೊಡ್ಡ ಪ್ರತಿಭಟನೆ ಆಗ್ರಹ ನಡೆದಿತ್ತು. ಇದಕ್ಕೆ ವಿರುದ್ಧವಾಗಿ ಅಂದಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಾನಾಯ್ಕ, ಸಾಹಿತಿ ಚಂಪಾ, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಿ, ಮನೆ ಮನೆಗೆ ತೆರಳಿ ಕನ್ನಡ ಪರ ಪ್ರಚಾರ, ಶಿಕ್ಷಣ, ಕನ್ನಡ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕನ್ನಡ ಅಭಿಮಾನವನ್ನು ಹೆಚ್ಚಿಸಲಾಯಿತು. ಇದರ ಫಲಶೃತಿಯಿಂದ ಕಾರವಾರ ಗೋವಾಕ್ಕೆ ಸೇರಬೇಕೆನ್ನುವ ಒತ್ತಾಯ ಮಾಯವಾಗಿ ಕನ್ನಡದ ಪರ ಒಲವು ಹೆಚ್ಚಾಗುವುದರ ಜೊತೆಗೆ ಕನ್ನಡದಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಇಲ್ಲಿನ ಜನ ಉತ್ಸುಕರಾದರು. ಅಂದು ಬಿತ್ತಿದ್ದ ಕನ್ನಡದ ಬೀಜ ಈಗ ಚಿಗುರೊಡೆದು ಮರವಾಗುತ್ತಿದೆ.

    ಗಡಿ ನಾಡಿನ ಕಾರವಾರದಲ್ಲಿ ಮರಾಠಿ ಶಾಲೆಗಳ ಪ್ರಾಬಲ್ಯವಿದ್ದ ಸ್ಥಳಗಳಲ್ಲಿ ಸದ್ಯ ಮರಾಠಿ ಶಾಲೆಗಳು ಸಂಪೂರ್ಣ ಬಂದ್ ಆಗುವ ಹಂತಕ್ಕೆ ತಲುಪಿವೆ. ಈ ಮೂಲಕ ಕನ್ನಡಕ್ಕೆ ಹೆಚ್ಚಿನ ಒಲವು ತೋರಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದ್ದು, ಕನ್ನಡದ ಏಕೈಕ ಭುವನೇಶ್ವರಿ ದೇವಿಯ ಸನ್ನಿಧಿಯಿರುವ ಈ ಜಿಲ್ಲೆಯಲ್ಲಿ ಕನ್ನಡ ಮರವಾಗಿ ಬೆಳೆದಿರುವುದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದೆ.

  • ಮಕ್ಕಳ ಕೊರತೆಯಿಂದಾಗಿ ಮುಚ್ಚುವ ಸ್ಥಿತಿಯಲ್ಲಿವೆ ಕನ್ನಡ ಶಾಲೆಗಳು

    ಮಕ್ಕಳ ಕೊರತೆಯಿಂದಾಗಿ ಮುಚ್ಚುವ ಸ್ಥಿತಿಯಲ್ಲಿವೆ ಕನ್ನಡ ಶಾಲೆಗಳು

    ಬೆಂಗಳೂರು: ಮಕ್ಕಳ ಕೊರತೆಯಿಂದಾಗಿ 603 ಕನ್ನಡ ಶಾಲೆಗಳ ಮೇಲೆ ತೂಗುಗತ್ತಿ ನೇತಾಡುತ್ತಿದ್ದು, ಮತ್ತೆ ಶಾಲೆಗಳು ಆರಂಭಗೊಳ್ಳೋದು ಸಂಶಯ ಎನ್ನಲಾಗಿದೆ.

    1 ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದ್ದರಿಂದ ಮಕ್ಕಳ ಸಂಖ್ಯೆ ಹೆಚ್ಚಿದೆ ಎನ್ನುತ್ತಿರುವಾಗಲೇ ಮಕ್ಕಳ ಕೊರತೆಯಿಂದ ಕೃಷವಾಗಿರುವ ಶಾಲೆಗಳ ವಾಸ್ತವ ಚಿತ್ರಣವೂ ಲಭಿಸಿದೆ. ಕನ್ನಡ ಶಾಲೆಗಳು ದಿನ ಕಳೆದಂತೆ ಕಳೆಗುಂದುತ್ತಿವೆ. 2018-19ನೇ ಸಾಲಿನಲ್ಲಿ 433 ಸರ್ಕಾರಿ ಕಿರಿಯ ಪ್ರಾಥಮಿಕ ಮತ್ತು 71 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ.

    ಇದೇ ಅವಧಿಯಲ್ಲಿ 20 ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹಾಗೂ 79 ಹಿರಿಯ ಪ್ರಾಥಮಿಕ ಶಾಲೆಗಳಿಗೂ ಹೊಸದಾಗಿ ಮಕ್ಕಳು ಬಂದೇ ಇಲ್ಲ. ಎರಡೂ ವಿಭಾಗಗಳನ್ನು ಸೇರಿಸಿದ್ರೆ ಒಟ್ಟು 603 ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಆಗಿಲ್ಲ. 2019-20ನೇ ಸಾಲಿನ ಪ್ರವೇಶಾತಿ ಮಾಹಿತಿಯನ್ನು ಸಂಗ್ರಹಿಸುವ ಕೆಲಸದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ತಲ್ಲೀನವಾಗಿದ್ದು ಇನ್ನೊಂದು ವಾರದಲ್ಲಿ ಮಾಹಿತಿ ಸಂಗ್ರಹ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

  • ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಿದ್ರೆ ಇಂಗ್ಲೆಂಡಿಗೆ ಹೋಗಲಿ: ಪಾಪು ಆಕ್ರೋಶ

    ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಿದ್ರೆ ಇಂಗ್ಲೆಂಡಿಗೆ ಹೋಗಲಿ: ಪಾಪು ಆಕ್ರೋಶ

    ಧಾರವಾಡ: ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಾಹಿತಿಗಳು ಮತ್ತು ಹೋರಾಟಗಾರರು ಧರಣಿ ನಡೆಸಿ ಆಕ್ರೋಶ ಹೋರಹಾಕಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರು, ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವ ಹಿನ್ನೆಲೆ ಕಿಡಿಕಾರಿದರು. ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಹರಿಹಾಯ್ದರು.

    ಕನ್ನಡ ಬೇಕು ಎನ್ನುವವರಿಗೆ ಮಾತ್ರ ಇಲ್ಲಿ ಸ್ಥಳ ಇದೆ. ಕನ್ನಡ ಬೇಡ ಎನ್ನುವವರಿಗೆ ಇಲ್ಲಿ ಸ್ಥಳ ಇಲ್ಲ. ಕನ್ನಡ ಯಾರಿಗೆ ಬೇಕಾಗಿದೆ ಅವರು ಕರ್ನಾಟಕದಲ್ಲಿ ಇರುತ್ತಾರೆ. ಯಾರಿಗೆ ಬೇಡವಾಗಿದೆಯೋ ಅವರು ಕರ್ನಾಟಕ ಬಿಟ್ಟು ಇಂಗ್ಲೆಂಡಿಗೆ ಹೋಗಲಿ. ಇನ್ನು ಕನ್ನಡ ತಾಯಿ ಬಗ್ಗೆ ನಾವು ಘೋಷಣೆ ಕೂಗುತ್ತೇವೆ. ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ನಾವು ಸಹಿಸುವುದಿಲ್ಲ ಸರ್ಕಾರದ ಇಂಗ್ಲೀಷ್ ಮಾಧ್ಯಮ ನೀತಿ ವಿರೋಧ ಮಾಡುತ್ತೇವೆ ಎಂದು ಕಿಡಿಕಾರಿದರು.

    ಪ್ರಸಕ್ತ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಮಾತನಾಡಿ, ಇವರಿಗೆ ಜನರ ಬಗ್ಗೆ ನಿಷ್ಠೆ ಇದ್ದರೆ ಈಗ ನಡೆದಿರುವುದನ್ನು ಬಿಟ್ಟು ಬಿಡಬೇಕು. ಕನ್ನಡ ಹಾಗೂ ಕರ್ನಾಟಕಕ್ಕಾಗಿ ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಜನರ ಬಗ್ಗೆ ಕನಿಕರ ಇಲ್ಲ ಅನಿಸುತ್ತದೆ ಎಂದು ಪಾಟೀಲ್ ಪುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

  • ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ: ಬಸವರಾಜ್ ಹೊರಟ್ಟಿ

    ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ: ಬಸವರಾಜ್ ಹೊರಟ್ಟಿ

    ಬೆಳಗಾವಿ (ಚಿಕ್ಕೋಡಿ): ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ, ಅವರನ್ನು ಸಿಎಂ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿರುವ ಕಾರದಗಾ ಗ್ರಾಮದಲ್ಲಿ ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಗಡಿ ಗ್ರಾಮದಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು  ಪಸರಿಸಿತ್ತು. ವಿವಿದ ವಾದ್ಯ ತಂಡಗಳ ಮೆರವಣಿಗೆ ಹಾಗೂ ಭುವನೇಶ್ವರಿ ಭಾವ ಚಿತ್ರದ ಮೆರವಣಿಗೆ ನಡೆಸಲಾಯಿತು. ಗಡಿ ಗ್ರಾಮದಲ್ಲಿ ಸರ್ಕಾರದ ಯಾವುದೇ ಅನುದಾನವಿಲ್ಲದೆ ಸಮ್ಮೇಳನವನ್ನ ಆಯೋಜಿಸಲಾಗಿತ್ತು. ಗಡಿ ಸಮ್ಮೇಳನದ ಅಧ್ಯಕ್ಶತೆಯನ್ನ ಸಾಹಿತಿ ಚಂದ್ರಶೇಖರ ಪಾಟೀಲ(ಚಂಪಾ) ವಹಿಸಿದ್ದರು.

    ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಸಮಾವೇಶದಲ್ಲಿ ಬಸವರಾಜ್ ಹೊರಟ್ಟಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ರಾಜಕೀಯ ಅನುಭವದ ಆಧಾರದ ಮೇಲೆ 20 ಜನ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇಲ್ಲ. ರಾಜಕೀಯದಿಂದ ನಿವೃತ್ತಿಯಾಗುವುದಿದ್ದರೆ ಮಾತ್ರ ರಾಜೀನಾಮೆ ನೀಡಬೇಕು. ಸರ್ಕಾರವನ್ನು ಅಭದ್ರಗೊಳಿಸುವ ನಿಟ್ಟಿನಲ್ಲಿ ರಾಜೀನಾಮೆ ಆಟ ಆಡುವುದು ಸರಿಯಲ್ಲ. ಸಿದ್ದರಾಮಯ್ಯ ಮಾಸ್ಟರ್ ಮೈಂಡ್ ಅಂತ ಹೇಳುವುದಿಲ್ಲ. ಬಹಳಷ್ಟು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅಂತಾರೆ. ಹಾಗಾದ್ರೆ ಕುಮಾರಸ್ವಾಮಿ ಅವರ ಪರಿಸ್ಥಿತಿ ಏನು? ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ, ಅವರನ್ನು ಸಿಎಂ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ಕಿಡಿಕಾರಿದ್ದಾರೆ.

    ರಮೇಶ್ ಜಾರಕಿಹೊಳಿ ಮಾಡುತ್ತಿರುವುದು ಸರಿ ಕಾಣುತ್ತಿಲ್ಲ. ಮಂತ್ರಿಯಾಗಿ ಅವರು ಕೆಡಿಪಿ ಸಭೆ ಕರೆದಿಲ್ಲ, ಕ್ಯಾಬಿನೆಟ್‍ಗೆ ಹಾಜರಾಗಿಲ್ಲ. ಹಾಗಾಗಿ ಸಚಿವ ಸ್ಥಾನ ಕೈ ತಪ್ಪಿದೆ. ಅಲ್ಲದೇ ಜೆಡಿಎಸ್ ಪಕ್ಷದ ಬಿಜೆಪಿ ಸತ್ಯ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಗೊತ್ತು. ಯಾರ ಜೊತೆಗೆ ಯಾರು ಕೈ ಜೋಡಿಸುತ್ತಾರೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರ ಬೀಳುವ ಉಮೇಶ ಕತ್ತಿ ಹೇಳಿಕೆ ಹುಡುಗಾಟದ ಹೇಳಿಕೆ. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಭಾಷಣ ಮಾಡುತ್ತ, ಮಹಾರಾಷ್ಟ್ರಕ್ಕೆ ಜೈ ಎನ್ನುವವರು ಬೆಳಗಾವಿಯಲ್ಲಿ ಶಾಸಕರಾಗುತ್ತಾರೆ. ಜನರು ಕನ್ನಡದಲ್ಲೇ ಮಾತನಾಡಿದರೂ ಸಹ ಅವರು ಮಾತ್ರ ಮರಾಠಿಯಲ್ಲಿಯೇ ಉತ್ತರಿಸುತ್ತಾರೆ ಎಂದು ವೇದಿಕೆಯ ಮೇಲೆಯೇ ಶಾಸಕ ಗಣೇಶ ಹುಕ್ಕೇರಿಗೆ ಬಸವರಾಜ್ ಹೊರಟ್ಟಿ ಅವರು ಟಾಂಗ್ ಕೊಟ್ಟಿದ್ದಾರೆ.

    ಶಾಸಕ ಉಮೇಶ ಕತ್ತಿ, ವೀರಕುಮಾರ ಪಾಟೀಲ ಅಂತವರು ಮರಾಠಿಯಲ್ಲೇ ಮಾತನಾಡುತ್ತಾರೆ. ಹೀಗಾಗಿ ಗಡಿ ಭಾಗದಲ್ಲಿ ಕನ್ನಡ ಅಭಿವೃದ್ಧಿ ಆಗುತ್ತಿಲ್ಲ. ಕನ್ನಡ ಭಾಷೆಯನ್ನು ಶಾಲೆಯಲ್ಲಿ ಬಳಸುವಂತೆ ಕ್ರಮ ತೆಗೆದುಕೊಳ್ಳಿ. ಇಲ್ಲದೇ ಹೋದಲ್ಲಿ ಆಂಧ್ರದ ಗಡಿಗೆ ಎತ್ತಂಗಡಿ ಮಾಡಲಾಗುವುದು. ಕೂಡಲೇ ಕ್ರಮ ಕೈಗೊಳದೇ ಇದ್ರೆ ಕನ್ನಡಕ್ಕೆ ಒತ್ತು ಕೊಡದ ಶಾಲೆಗಳ ಅನುದಾನ ಕಡಿತ ಮಾಡಲಾಗುವುದು. ಅನುದಾನ ಕಡಿತಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ನಿಪ್ಪಾಣಿ ಬಿಇಒ ಕೆ. ರಾಮನಗೌಡಗೆ ಸಾರ್ವಜನಿಕರ ಎದುರಿನಲ್ಲಿಯೇ ಬಸವರಾಜ್ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv