Tag: ಕನ್ನಡ ಪುಸ್ತಕ

  • ಪ್ರಕಾಶನ ರಂಗದ ಸಮಸ್ಯೆ ಪರಿಹಾರ: ಮಧು ಬಂಗಾರಪ್ಪ ಭರವಸೆ

    ಪ್ರಕಾಶನ ರಂಗದ ಸಮಸ್ಯೆ ಪರಿಹಾರ: ಮಧು ಬಂಗಾರಪ್ಪ ಭರವಸೆ

    ಬೆಂಗಳೂರು: ಪ್ರಕಾಶನ ರಂಗ (Publishing Industry) ಎದುರಿಸುತ್ತಿರುವ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ (Madhu Bangarappa)  ಭರವಸೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ಪ್ರಕಾಶಕರ ನಿಯೋಗವನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರಕಾಶನ ರಂಗ ಇತರ ರಾಜ್ಯಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದು, ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಿಂದ ದುಸ್ಥಿತಿಯಲ್ಲಿರುವ ಬಗ್ಗೆ ನಾನು ತಿಳಿದಿದ್ದೇನೆ. ಈ ಸಮಸ್ಯೆಗಳನ್ನು ನಾನು ಅಧ್ಯಯನ ಮಾಡಿ ಕ್ರಮೇಣ ಓದುವ ಸಂಸ್ಕೃತಿಯನ್ನು ಬಲಪಡಿಸುವ ಈ ಮಹತ್ವವಾದ ಕ್ಷೇತ್ರಕ್ಕೆ ಆದ್ಯತೆಯ ಮೇಲೆ ಪರಿಹಾರ ಒದಗಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ

    2020ರಿಂದ ಮೂರು ವರ್ಷಗಳ ಪುಸ್ತಕಗಳನ್ನು ಖರೀದಿಸಿಲ್ಲ. ಇದರಿಂದಾಗಿ ರಾಜ್ಯದ ಎಲ್ಲೆಡೆ ಹೊಸ ಕೃತಿಗಳಿಂದ ಓದುಗರು ವಂಚಿತರಾಗಿದ್ದಾರೆ. ಬಿಬಿಎಂಪಿ ಗ್ರಂಥಾಲಯ ಕರ ಎಂದು 450 ಕೋಟಿ ರೂ. ಗಳನ್ನು ಸಂಗ್ರಹಿಸಿದೆ. ಇದನ್ನು ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಿಲ್ಲ. ಇದರಿಂದಾಗಿ ಪ್ರಕಾಶನ ಉದ್ಯಮ ಕಂಗಾಲಾಗಿದೆ ಎಂದು ಪ್ರಕಾಶಕರ ಸಂಘ ಸಚಿವರ ಗಮನಕ್ಕೆ ತಂದಿದೆ. ಇದನ್ನೂ ಓದಿ: ಆರನೆಯ ಗ್ಯಾರಂಟಿ ಪಕ್ಕಾ: ಪ್ರಿಯಾಂಕ್ ಖರ್ಗೆ

    ಪುಸ್ತಕ ಪ್ರಕಟಣೆಯ ವೆಚ್ಚ ಇಂದು ಗಗನಕ್ಕೇರಿದೆ. ಆದರೆ ಸಗಟು ಖರೀದಿಯಲ್ಲಿ ಮಾತ್ರ ಹಳೆಯ ದರವನ್ನೇ ನಿಗದಿಪಡಿಸಿದ್ದಾರೆ. ಹೆಚ್ಚಿರುವ ಕಾಗದ, ಇಂಕು, ಮುದ್ರಣ ಬೆಲೆ, ಜಿಎಸ್‌ಟಿಯಿಂದಾಗಿ ಪ್ರಕಾಶನ ರಂಗ ತತ್ತರಿಸಿದೆ. ಆದ್ದರಿಂದ ಒಂದು ಪುಟದ ಬೆಲೆಯನ್ನು ಇನ್ನೂ 40 ಪೈಸೆ ಹೆಚ್ಚಳ ಮಾಡಬೇಕು ಎಂದು ಸಂಘ ಮನವಿ ಮಾಡಿತು. ಅಲ್ಲದೇ ಕನ್ನಡ ಪುಸ್ತಕಗಳನ್ನು (Kannada Books) ಖರೀದಿಸಲು ಈಗ ಮಂಡಿಸಲಿರುವ ಬಜೆಟ್‌ನಲ್ಲಿ 25 ಕೋಟಿ ರೂ. ಗಳನ್ನು ಮೀಸಲಿಡಬೇಕು ಎಂದು ಸಂಘ ಒತ್ತಾಯಿಸಿದೆ. ಇದನ್ನೂ ಓದಿ: ಬೈಕಿನಲ್ಲೇ ಹಳ್ಳಿ-ಹಳ್ಳಿ ಸುತ್ತಿ ಹೆಚ್‌ಡಿ ತಮ್ಮಯ್ಯ ಮತದಾರರಿಗೆ ಧನ್ಯವಾದ

    ಈ ಸಂದರ್ಭ ಕರ್ನಾಟಕ ಕನ್ನಡ ಬರಹಗಾರರ (Kannada Writers) ಮತ್ತು ಪ್ರಕಾಶಕರ ಸಂಘದ ನೇತೃತ್ವದಲ್ಲಿ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟಸ್ವಾಮಯ್ಯ, ಕಾರ್ಯದರ್ಶಿ ಆರ್.ದೊಡ್ಡೇಗೌಡ, ಹಿರಿಯ ಪ್ರಕಾಶಕರಾದ ನಿತಿನ್ ಶಾ ಉಪಸ್ಥಿತರಿದ್ದರು. ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ ಸಿದ್ದಗಂಗಾ ಮಠಕ್ಕೆ ಭೇಟಿ

  • ಕನ್ನಡ ಶಾಲೆಗಳ ಮುಚ್ಚುತ್ತಿರುವುದು ಯಾಕೆ? ನಮ್ಮ ನಿಮ್ಮೆಲ್ಲರ ಕರ್ತವ್ಯ ಏನು?

    ಕನ್ನಡ ಶಾಲೆಗಳ ಮುಚ್ಚುತ್ತಿರುವುದು ಯಾಕೆ? ನಮ್ಮ ನಿಮ್ಮೆಲ್ಲರ ಕರ್ತವ್ಯ ಏನು?

    ಇಂದು ನವೆಂಬರ್ 1 ಕನ್ನಡ ರಾಜ್ಯೋತ್ಸವ. ನಾಡಿನಾದ್ಯಂತ ಆಚರಣೆ ಭರ್ಜರಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಕನ್ನಡದ ಹುಟ್ಟು ಕನ್ನಡ ಮಾಧ್ಯಮ ಶಾಲೆಗಳು ಕಣ್ಮರೆ ಆಗುತ್ತಿರೋದು ಮಾತ್ರ ಕಾಣುತ್ತಿಲ್ಲ. ಕೆಲವರು ಕಂಡರೂ ಕಾಣದಂತೆಯೂ ಇದ್ದಾರೆ. ನವೆಂಬರ್ 1 ರಂದು ಕೇವಲ ಕನ್ನಡ ರಾಜ್ಯೋತ್ಸವ ಆಚರಿಸದೇ ಮಾತ್ರ ಅದು ಕನ್ನಡಾಭಿಮಾನ ಆಗಲಾರದು. ಇಂದು ನಮ್ಮ ನಾಡಿನಲ್ಲಿಯೇ ಕನ್ನಡ ಉಳುವಿಕೆಗಾಗಿ ಹೋರಾಡುವ ಸ್ಥಿತಿ ನಮಗೆ ಬಂದಿದೆ. ಕನ್ನಡ ಉಳಿಯಬೇಕೆಂದರೆ ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕಿದೆ.

    ಕನ್ನಡ ಎಂದರೆ ಬದುಕು, ಜೀವನ ಕ್ರಮ, ಉಸಿರು ಇಂದಿನ ದಿನದಲ್ಲಿ ಕೇವಲ ತೋರಿಕೆಯಾಗಿದೆ. ಕನ್ನಡ ನಂಬಿದರೆ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೇವೆ. ಈ ಎಲ್ಲದರ ಪರಿಣಾಮ ಗ್ರಾಮೀಣ ಭಾಗಗಳಲ್ಲಿಯೂ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಪೋಷಕರು ಸಹ ತಮ್ಮ ಮಕ್ಕಳು ಇಂಗ್ಲಿಷ್ ಕಲಿತರೆ ಮಾತ್ರ ಜಾಣರಾಗುತ್ತಾರೆ. ಭವಿಷ್ಯದಲ್ಲಿ ಉತ್ತಮ ಬದಕುಕಟ್ಟಿಕೊಳ್ಳಲು ಇದು ಸಹಕಾರಿ ಎಂಬ ಆಲೋಚನೆಯಿಂದ ಕಷ್ಟವಾದರೂ ಸರಿಯೇ ದುಬಾರಿ ಶುಲ್ಕ ನೀಡಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಗ್ರಾಮೀಣ ಭಾಗಗಳಲ್ಲಿಯೂ ಖಾಸಗಿ ಶಾಲೆಗಳು ಹುಟ್ಟಿಕೊಂಡಿವೆ.

    ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಗರಗಳಲ್ಲಿ ಖಾಸಗಿ ವಲಯದಲ್ಲಿ ಅನ್ಯ ಭಾಷಿಕರ ಧ್ವನಿ ಮಾರ್ದನಿಸುತ್ತಿದೆ. ಹಾಗಾಗಿ ರಾಜಧಾನಿ ಕನ್ನಡ ಅವಿನಾಶದ ಅಂಚಿಗೆ ತಲುಪಿ ಪರಭಾಷೆಗಳು ಸ್ಥಿರವಾಗುತ್ತಿವೆ. ಕನ್ನಡ ಎನೆ ಕುಣಿದಾಡುವುದೆನ್ನೆದೆಯು, ಕನ್ನಡ ಎನೆ ಕಿವಿ ನಿಮಿರುವುದು ಎನ್ನುವ ಕುವೆಂಪು ಅವರ ಸಾಲುಗಳು ಪುಸ್ತಕದಲ್ಲಿಯೇ ಮಾತ್ರ ಉಳಿದುಕೊಂಡಿವೆ. ಬೆಂಗಳೂರು ಎಂಬ ಮಹಾನಗರದಲ್ಲಿ ಕನ್ನಡ ಮಾತನಾಡುವವರೇ ವಿರಳ ಆಗುತ್ತಿರೋದು ಇಂದು ನಾವೆಲ್ಲ ಕಾಣುತ್ತಿದ್ದೇವೆ. ನಮ್ಮ ಉದಾರತೆ, ಹೃದಯ ವೈಶಾಲ್ಯತೆ ನಮಗೆ ಮುಳುವಾಗುತ್ತಿರುವುದು ಆತಂಕ. ಇಂದಿನ ಕನ್ನಡ ದುಸ್ಥಿತಿಗೆ ಕೇವಲ ಇಷ್ಟು ಮಾತ್ರ ಕಾರಣವಲ್ಲ. ಸಾರ್ವಜನಿಕವಾಗಿ ಕನ್ನಡ ಮಾತನಾಡಲು ಹಿಂಜರಿಕೆ, ಕೀಳರಿಮೆ, ಅನ್ಯಭಾಷಾ ವ್ಯಾಮೋಹವು ಕಾರಣವಾಗಿದೆ.

    ಶಿಕ್ಷಣ ಸೇರಿದಂತೆ ಇತರೆ ಹಲವಾರು ಕ್ಷೇತ್ರಗಳಲ್ಲಿ ಕನ್ನಡವನ್ನು ಸುಧಾರಿಸುವ ಸಾಧ್ಯತೆಗಳಿವೆ. ಆದ್ರೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ನಮ್ಮಯ ನಾಡಿನಲ್ಲಿ ಕನ್ನಡಕ್ಕಾಗಿ ಹೋರಾಡುವ ಸ್ಥಿತಿ ಎದುರಾಗಿದೆ. ಪಕ್ಕದ ತಮಿಳುನಾಡಿನಲ್ಲಿ ಎಲ್ಲವೂ ತಮಿಳು. ವ್ಯಾವಹಾರಿಕ ಮತ್ತು ಸರ್ಕಾರಿ ಬಳಕೆಯಲ್ಲಿ ತಮಿಳು ಭಾಷೆಗೆ ಆದ್ಯತೆ ನೀಡಲಾಗಿದೆ.

    ಕನ್ನಡ ಭಾಷೆ ಮತ್ತು ಸಾಹಿತ್ಯದ ದುಸ್ಥಿತಿಯ ಬಗ್ಗೆ ಏನೆಲ್ಲ ಕನ್ನಡ ಕಾರ್ಯಗಾರ ಮತ್ತು ಪುಸ್ತಕಗಳನ್ನು ಪ್ರಕಟಿಸಿದರೆ ಇಂದು ಅವುಗಳನ್ನು ಓದುವುದಕ್ಕೆ ಯಾರು ಮುಂದಾಗುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತವನ ಜೀವನ ಕೇವಲ ನಾಲ್ಕಂಕಿಯ ಸಂಬಳಕ್ಕೆ ಸೀಮಿತ ಎಂದು ಕನ್ನಡಿಗರು ಹೇಳಿಕೊಂಡು ಕುಹಕವಾಡುವುದರಿಂದಲೂ ಸಮಸ್ಯೆ ಹೆಚ್ಚಾಗಿದೆ. ಇತ್ತ ಕನ್ನಡಕ್ಕಾಗಿ ಹೋರಾಟ ಮಾಡಬೇಕಿದ್ದ ಬಹುತೇಕ ರಾಜಕಾರಣಿಗಳು ತಮ್ಮದೇ ಸ್ವಂತ ಆಂಗ್ಲ ಮಾಧ್ಯಮಗಳನ್ನು ತೆರೆಯುತ್ತಿದ್ದಾರೆ. ಅಲ್ಲಿ ಕನ್ನಡ ಕೇವಲ ಭಾಷೆಯಾಗಿಯೇ ಉಳಿದುಕೊಂಡಿದೆ. ಕೇವಲ ನವೆಂಬರ್ 1ರಂದು ಮಾತ್ರ ಕನ್ನಡ. ಕನ್ನಡ ಎಂದ್ರೆ ಸಾಲದು. ಅದಕ್ಕಾಗಿ ಹೋರಾಡುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮಾತ್ರ ಸರ್ಕಾರಿ ಉದ್ಯೋಗ, ಎಲ್ಲ ರಾಜಕೀಯ ನಾಯಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಲ್ಲಿಯೇ ಓದಿಸಬೇಕೆಂಬ ಕಟ್ಟುನಿಟ್ಟಿನ ಕಾನೂನುಗಳು ಜಾರಿಯಾಗಬೇಕಿದೆ.

    ಈ ಹಿಂದೆ ಅಲಹಬಾದ್ ಹೈಕೋರ್ಟ್ ಹಿಂದಿ ಮಾಧ್ಯಮ ದುಸ್ಥಿತಿಯ ಬಗ್ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತ್ತು. ಅಂದು ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿಯಿಂದ ಕೆಳದರ್ಜೆಯ ನೌಕರರು ತಮ್ಮ ಮಕ್ಕಳಿಗೆ ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು. ಎಲ್ಲ ಚುನಾಯಿತ ಅಭ್ಯರ್ಥಿಗಳು ಮಕ್ಕಳು ಸಹ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯಬೇಕು. ಅಂದಾಗ ಮಾತ್ರ ಪ್ರಾದೇಶಿಕ ಭಾಷೆಯ ಶಾಲೆ-ಕಾಲೇಜುಗಳು, ಶಿಕ್ಷಣದ ಗುಣಮಟ್ಟ ಹೆಚ್ಚಾಗಲು ಸಾಧ್ಯ ಎಂಬ ಸಲಹೆಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು. ಅಲಹಬಾದ್ ಹೈ ಕೋರ್ಟ್ ಸಲಹೆ ಪ್ರಾದೇಶಿಕ ಭಾಷೆಗಳಲ್ಲಿ ಆಶಾಕಿರಣವನ್ನು ಮೂಡಿಸಿತ್ತು.

    ಎಲ್ಲವನ್ನು ನ್ಯಾಯಾಲಯದಿಂದ ಹೇಳಿಸಿಕೊಂಡು ಮಾಡದೇ ನಾವೇ ಕನ್ನಡತನ ಉಳಿಸಲು ಪ್ರಯತ್ನ ನಡೆಸಬೇಕು. ರಾಜ್ಯೋತ್ಸವ ಉತ್ಸವ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಕನ್ನಡ ಬದುಕು-ಜೀವನ ಕ್ರಮವಾಗಿ ಮರುಹುಟ್ಟು ಪಡೆಯಬೇಕಿದೆ. ಶಾಲಾ ವಿದ್ಯಾರ್ಥಿಗಳನ್ನು ಸೆಳೆಯಲು ಸರ್ಕಾರ ಮತ್ತು ಇತರೆ ಕನ್ನಡ ಪರ ಸಂಘಟನೆಗಳು ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv