Tag: ಕನ್ನಡ ನ್ಯೂಸ್

  • ಮನೆಗೋ? ಜೈಲಿಗೋ? ಇಡಿ ಕಸ್ಟಡಿಗೋ? – ಇಂದು ಡಿಕೆಶಿ ಭವಿಷ್ಯ ನಿರ್ಧಾರ

    ಮನೆಗೋ? ಜೈಲಿಗೋ? ಇಡಿ ಕಸ್ಟಡಿಗೋ? – ಇಂದು ಡಿಕೆಶಿ ಭವಿಷ್ಯ ನಿರ್ಧಾರ

    ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಮನೆಗೋ, ಜೈಲಿಗೋ, ಇಡಿ ಕಸ್ಟಡಿಗೋ ಎನ್ನುವುದು ಇಂದು ನಿರ್ಧಾರವಾಗಲಿದೆ.

    ಇಡಿ ಕಸ್ಟಡಿ ಅವಧಿ ಇಂದು ಅತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇಂದೇ ಶಿವಕುಮಾರ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಲಿದೆ.

    ಇಡಿ ವಾದ ಏನಿರಬಹುದು?
    ಪುತ್ರಿ ಐಶ್ವರ್ಯ ವಿಚಾರಣೆ ನಿನ್ನೆಯಿಂದ ಆರಂಭಗೊಂಡಿದೆ. ಐಶ್ವರ್ಯ ನೀಡಿದ ಉತ್ತರಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರನ್ನು ಪ್ರಶ್ನಿಸಬೇಕು. ಹೀಗಾಗಿ ಮತ್ತೆ 4 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೇಳಬಹುದು.

    ಡಿಕೆ ವಕೀಲರ ವಾದ ಏನಿರಬಹುದು?
    ಕಕ್ಷಿದಾರರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಬಾರಿಯೇ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿಸಲಾಗಿತ್ತು. ಈಗ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಬಹುದು.

    ಕೋರ್ಟ್ ಏನು ಮಾಡಬಹುದು?
    ಇಡಿ ವಾದವನ್ನು ಪುರಸ್ಕರಿಸಿ ಮತ್ತೆ 4 ದಿನ ಕಸ್ಟಡಿಗೆ ನೀಡಬಹುದು. ಆರೋಗ್ಯ ಸಮಸ್ಯೆ ಇರುವ ಕಾರಣ ಮಧ್ಯಂತರ ಜಾಮೀನು ಮಂಜೂರು ಮಾಡಬಹುದು. ಮಧ್ಯಂತರ ಜಾಮೀನು ಮಂಜೂರು ಮಾಡುವುದು ಕಷ್ಟ ಎನ್ನಲಾಗುತ್ತಿದೆ. ಒಂದು ವೇಳೆ ಜಾಮೀನು ನೀಡದೇ ಮತ್ತು ಇಡಿ ಕಸ್ಟಡಿ ನೀಡದೇ ಇದ್ದರೆ ನ್ಯಾಯಾಂಗ ಬಂಧನ ವಿಧಿಸುತ್ತದೆ. ನ್ಯಾಯಾಂಗ ಬಂಧನ ವಿಧಿಸಿದರೆ ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ. ಜಾಮೀನು ಅರ್ಜಿಯ ವಿಚಾರಣೆ ನಡೆದರೆ ವಾದ, ಪ್ರತಿವಾದ ಮಾಡಬೇಕಾಗುತ್ತದೆ. ಬಳಿಕ ಕೆಲ ದಿನಗಳ ನಂತರ ಜಾಮೀನು ಆದೇಶ ಪ್ರಕಟವಾಗಬಹುದು. ಅಲ್ಲಿಯವರೆಗೆ ಡಿಕೆಶಿ ತಿಹಾರ್ ಜೈಲಿನಲ್ಲಿರಬೇಕಾಗುತ್ತದೆ.

    ನಿನ್ನೆ ಒಂದು ಕಡೆ ಐಶ್ವರ್ಯ ವಿಚಾರಣೆ ನಡೆದಿದ್ದರೆ ಮಗದೊಂದು ಕಡೆ ಡಿಕೆಶಿ ವಿಚಾರಣೆ ನಡೆಯಿತು. ಆದರೆ, ವಿಚಾರಣೆ ವೇಳೆ ಡಿಕೆಶಿಗೆ ಹೈಬಿಪಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಸಂಬಂಧಿ ಶಾಸಕ, ಡಾ. ರಂಗನಾಥ್ ಅವರು ತಪಾಸಣೆ ಮಾಡಿದರು. ನಂತರ ಡಿಕೆಶಿ ಅವರನ್ನು ಹತ್ತಿರದ ಆರ್‌ಎಂಎಲ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ, ಡಿಕೆ ಸುರೇಶ್ ಆಪ್ತ ವೈದ್ಯ ಜುಬಿನ್ ಸಲಹೆ ಮೇರೆಗೆ ಡಿಕೆಶಿಗೆ ಔಷಧಿ ತಂದುಕೊಟ್ಟರು. ಬಳಿಕ ಇಸಿಜಿ ಮಾಡಿದ್ದು, ಡಿಕೆಶಿ ವಿಶ್ರಾಂತಿ ಪಡೆಯುತ್ತಿದ್ದಾರೆ.

  • ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ, ಮಹಾರಾಜರಲ್ಲ: ಮೋದಿ

    ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ, ಮಹಾರಾಜರಲ್ಲ: ಮೋದಿ

    ನವದೆಹಲಿ: ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ ಮಹಾರಾಜರಲ್ಲ. ಚೌಕಿದಾರ ಮಾತ್ರ ದೇಶಕ್ಕೆ ಸೇವೆ ಮಾಡಬಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ‘ಮೇ ಭೀ ಚೌಕಿದಾರ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 2014 ರಲ್ಲಿ ದೇಶದ ಜನತೆ ನನ್ನ ಮೇಲೆ ನಂಬಿಕೆಯನ್ನು ಸೇವೆ ಮಾಡಲು ಅವಕಾಶವನ್ನು ನೀಡಿದರು. ನನಗೆ ಕೊಟ್ಟ ಅವಕಾಶವನ್ನು ನಾನು ಹಾಳು ಮಾಡಲಿಲ್ಲ. ಭ್ರಷ್ಟರಿಂದ ದೇಶದ ಸಂಪತ್ತನ್ನು ರಕ್ಷಿಸಲು ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ ಎಂದು ಹೇಳಿದರು.

    ಮೋದಿ ಪ್ರಮುಖ ಹೇಳಿಕೆಗಳು:
    ದೇಶದ ಪ್ರತಿಯೊಬ್ಬ ನಾಗರಿಕನೂ ಚೌಕೀದಾರರು. ಚೌಕೀದಾರ ಎನ್ನುವುದು ಒಂದು ಭಾವನೆ. ಆದರೆ ಕೆಲವರು ಬೌದ್ಧಿಕವಾಗಿ ಬೆಳವಣಿಗೆ ಆಗಿರದ ವ್ಯಕ್ತಿಗಳು ಚೌಕೀದಾರ ಎಂದರೆ ಟೋಪಿ ಹಾಕಿಕೊಂಡು ಕೋಲು ಹಿಡಿದು, ಸಿಳ್ಳೆ ಹಾಕಿಕೊಂಡು ಬರುವವರು ಎಂದು ತಿಳಿದುಕೊಂಡಿದ್ದಾರೆ.

    ಕಾಂಗ್ರೆಸ್ ಒಂದೊಂದು ಸಮಯದಲ್ಲಿ ಸುಳ್ಳು ಹೇಳಿಕೊಂಡು ಚುನಾವಣೆಗೆ ಹೋಗುತ್ತದೆ. ದೆಹಲಿ ಚುನಾವಣೆಯ ಸಮಯದಲ್ಲಿ ಅವರ ವಸ್ತು ‘ಅಸಹಿಷ್ಣುತೆ’ ಆಗಿತ್ತು. ಬಿಹಾರ ಚುನಾವಣೆಯ ಸಮಯದಲ್ಲಿ ‘ಎಲ್ಲ ಮೀಸಲಾತಿಯನ್ನು ಮೋದಿ ಸರ್ಕಾರ ತೆಗೆದು ಹಾಕುತ್ತದೆ’ ಆಗಿತ್ತು. ಇದರ ಜೊತೆ ‘ಅವಾರ್ಡ್ ವಾಪ್ಸಿ’ ಬಂದು ಹೋಯ್ತು.

    ಉಗ್ರರ ಕೇಂದ್ರ ಬಿಂದು ಎಲ್ಲಿದೆ ಎನ್ನುವುದು ಇಡಿ ವಿಶ್ವಕ್ಕೆ ಗೊತ್ತಿದೆ. ಈ ಕಾಣರಕ್ಕಾಗಿಯೇ ನಾವು ಅವರ ನೆಲಕ್ಕೆ ನುಗ್ಗಿ ದಾಳಿ ಮಾಡಿ ನೆಲೆಗಳನ್ನು ಧ್ವಂಸ ಮಾಡಿದ್ದೇವೆ. ಚುನಾವಣೆ ಇದೆ ಎನ್ನುವ ಕಾರಣಕ್ಕೆ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಿಲ್ಲ. ನಮ್ಮ ದೇಶದ ಜನರು ಪಾಕಿಸ್ತಾನ ಹೇಳಿಕೆಯನ್ನು ಬೆಂಬಲಿಸುತ್ತಿರುವುದನ್ನು ನೋಡಿ ನನಗೆ ಬೇಸರವಾಗುತ್ತದೆ.

    ಬಾಲಕೋಟ್ ಮೇಲೆ ಯಶಸ್ವಿಯಾಗಿ ದಾಳಿ ಮಾಡಿದ ನಮ್ಮ ವೀರ ಯೋಧರಿಗೆ ಭಾರತ ಸೆಲ್ಯೂಟ್ ಹೊಡೆಯುತ್ತದೆ. ನನಗೆ ನಮ್ಮ ಸೇನೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ಕಾರಣಕ್ಕಾಗಿಯೇ ನಾನು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ.

     

     

    ಕಳೆದ ಐದು ವರ್ಷದಲ್ಲಿ ನಾವು ಏನು ಸಾಧನೆ ಮಾಡಿದ್ದೇವೋ ಅದು ಸಾಧ್ಯವಾಗಿದ್ದು ಜನರ ಭಾಗಿದಾರಿಯಿಂದ. ಜನರಿಂದಾಗಿ ಸಚ್ಛತೆ ಒಂದು ದೊಡ್ಡ ಅಭಿಯಾನವಾಗಿ ರೂಪುಗೊಂಡಿದೆ.

    ನಾನು ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಲ್ಲ. ಭಾರತವನ್ನು ಲೂಟಿ ಹೊಡೆಯಲು ನಾನು ಬಿಡುವುದಿಲ್ಲ. ಮಿಶನ್ ಶಕ್ತಿಯ ಮೂಲಕ ನಾವು ಈಗ ಬಾಹ್ಯಾಕಾಶದಲ್ಲಿ ಎತ್ತರಕ್ಕೆ ತಲುಪಿದ್ದೇವೆ. ಇಲ್ಲಿಯವರೆಗೆ ಕೇವಲ ಮೂರು ದೇಶಗಳು ಮಾತ್ರ ಈ ಸಾಮರ್ಥ್ಯವನ್ನು ಹೊಂದಿದ್ದವು. ವಿಜ್ಞಾನಿಗಳಿಂದಾಗಿ ಈಗ ನಾವು ಬಾಹ್ಯಾಕಾಶ ಶಕ್ತಿ ರಾಷ್ಟ್ರಗಳ ಸಾಲಿಗೆ ಸೇರಿದ್ದೇವೆ.

    ಕಳೆದ 4 ವರ್ಷಗಳಿಂದ ಒಂದು ಕುಟುಂಬ ಅದೇ ಭರವಸೆಯನ್ನು ನೀಡುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಆ ಭರವಸೆ ಈಡೇರಿಲ್ಲ. ಈಗಲೂ ಆ ಭರವಸೆ ನೀಡುತ್ತಿದ್ದು, ಜನರ ಈ ವಿಚಾರವನ್ನು ಚುನಾವಣಾ ಸಮಯದಲ್ಲಿ ಗಂಭೀರವಾಗಿ ಪರಿಗಣಿಸಬೇಕು.

  • ‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’

    ‘ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಮಾಡೋದು ಹೇಗೆ?’

    – ತೇಜಸ್ವಿ ಸೂರ್ಯ ಪರ ಬಿಎಲ್ ಸಂತೋಷ್ ಬ್ಯಾಟಿಂಗ್
    – ಸಂತೋಷ್ ಮಾತಿಗೆ ಹೈಕಮಾಂಡ್ ಮಣೆ

    ಬೆಂಗಳೂರು: ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ನೀಡುವ ಕಾರ್ಯದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಯಶಸ್ವಿಯಾಗಿದ್ದಾರೆ.

    ಕೇಂದ್ರ ಸಚಿವ ಅನಂತ್ ಕುಮಾರ್ ನಿಧನರಾದ ಬಳಿಕ ಈ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದ ಬಗ್ಗೆ ರಾಜ್ಯ ನಾಯಕರು ಸಭೆ ನಡೆಸಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬಹುದು ಎನ್ನುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು.

    ದೆಹಲಿಯಲ್ಲಿರುವ ಚುನಾವಣಾ ಸಮಿತಿ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಬಿಎಲ್ ಸಂತೋಷ್ ಅವರು ಅನುಕಂಪದ ಮೇಲೆ ಟಿಕೆಟ್ ಕೊಟ್ಟರೆ ಮುಂದಿನ ಕಥೆಯೇನು? ಇನ್ನು ಹಲವು ವರ್ಷ ಪಕ್ಷ ಕಟ್ಟಿ, ಬೆಳೆಸುವವರು ಯಾರು ಎಂದು ಹೇಳಿ ತೇಜಸ್ವಿ ಸೂರ್ಯ ಹೆಸರನ್ನೂ ಪರಿಗಣಿಸಬಹುದು ಎಂದು ನಾಯಕರಿಗೆ ಮನವರಿಕೆ ಮಾಡಿದ್ದಾರೆ.

    ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿಯೂ ಹರಿದಾಡತೊಡಗಿ ಈ ಕ್ಷೇತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಯಿತು. ಅಂತಿಮವಾಗಿ ಹೈಕಮಾಂಡ್ ಸಂತೋಷ್ ಹೇಳಿದಂತೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಒಂದು ಕಾಲದಲ್ಲಿ ಅನಂತ್ ಕುಮಾರ್ ಟಿಕೆಟ್ ಘೋಷಣೆ ಮಾಡುತ್ತಿದ್ದರು. ಆದರೆ ಇಂದು ಒಂದು ಟಿಕೆಟ್‍ಗಾಗಿ ಕಡೆ ದಿನದವರೆಗೂ ತೇಜಸ್ವಿನಿ ಅನಂತಕುಮಾರ್ ಕಾದಿದ್ದರು. ಅಂದು ಅನಂತಕುಮಾರ್ ಜತೆ ಸಂತೋಷ್ ಚುನಾವಣಾ ತಂತ್ರಗಾರಿಕೆ ಮಾಡುತ್ತಿದ್ದರು. ಆದರೆ ಇಂದು ಬಿ.ಎಲ್.ಸಂತೋಷ್ ಚದುರಾಂಗದಾಟದಲ್ಲಿ ಎಲ್ಲವೂ ಉಲ್ಟಾವಾಗಿದೆ ಎನ್ನುವ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಇದರ ಜೊತೆಯಲ್ಲಿ ಮಂಡ್ಯದಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ನಿಧನರಾದರೂ ಪತ್ನಿಗೆ ಟಿಕೆಟ್ ನೀಡದೇ ಇರುವುದು ಎಷ್ಟು ಸರಿ ಎನ್ನುವ ಮಾತು ಕೇಳಿ ಬಂದಿದೆ.

    ನನಗೆ ನಂಬಲು ಸಾಧ್ಯವಾಗುತ್ತಿಲ್ಲ. 28 ವರ್ಷದ ಯುವಕನ ಮೇಲೆ ನಂಬಿಕೆ ಇಟ್ಟು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿದ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಧನ್ಯವಾದಗಳು. ಈ ರೀತಿ ಟಿಕೆಟ್ ಬಿಜೆಪಿ ಪಕ್ಷದಲ್ಲಿ ಮಾತ್ರ ಸಿಗುತ್ತದೆ. ನನ್ನನ್ನು ಬೆಂಬಲಿಸಿದ ನಾಯಕರಾದ ಮುಕುಂದ ಮತ್ತು ಬಿಎಲ್ ಸಂತೋಷ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ.

     

  • ಯೋಧ ಕಿಡ್ನಾಪ್ ಆಗಿಲ್ಲ, ಸುರಕ್ಷಿತವಾಗಿದ್ದಾರೆ: ರಕ್ಷಣಾ ಇಲಾಖೆ ಸ್ಪಷ್ಟನೆ

    ಯೋಧ ಕಿಡ್ನಾಪ್ ಆಗಿಲ್ಲ, ಸುರಕ್ಷಿತವಾಗಿದ್ದಾರೆ: ರಕ್ಷಣಾ ಇಲಾಖೆ ಸ್ಪಷ್ಟನೆ

    ಶ್ರೀನಗರ: ರಜೆ ಮೇಲೆ ಮನೆಗೆ ಬಂದಿದ್ದ ಯೋಧರೊಬ್ಬರನ್ನು ಉಗ್ರರು ಅಪಹರಣಗೈದಿದ್ದಾರೆ ಎನ್ನುವ ಒಂದು ಸುದ್ದಿ ಪ್ರಕಟವಾಗಿತ್ತು. ಆದರೆ ಯೋಧ ಅಪಹರಣಗೊಂಡಿಲ್ಲ ಅವರು ಸುರಕ್ಷಿತವಾಗಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

    ಜಮ್ಮು ಕಾಶ್ಮೀರದ ಲೈಟ್ ಇನ್‍ಫ್ಯಾಂಟ್ರಿಗೆ ಸೇರಿದ ಯಾಸೀನ್ ಭಟ್ ಅವರನ್ನು ಉಗ್ರರು ಕಿಡ್ನಾಪ್ ಮಾಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿತ್ತು.

    ಈ ಸುದ್ದಿಗೆ ಸ್ಪಷ್ಟನೆ ನೀಡಿದ ರಕ್ಷಣಾ ಇಲಾಖೆ, ಬದ್ಗಾಮ್ ಬಳಿಯ ಖಾಜಿಪೋರದಿಂದ ಯೋಧರೊಬ್ಬರನ್ನು ಅಪಹರಣ ಮಾಡಲಾಗಿದೆ ಎನ್ನುವ ಸುದ್ದಿ ನಿಜವಲ್ಲ. ಅವರು ಸುರಕ್ಷಿತವಾಗಿದ್ದು, ವದಂತಿಗಳನ್ನು ನಂಬಬೇಡಿ ಎಂದು ತಿಳಿಸಿದೆ.

    ಕಳೆದ ವರ್ಷ ಜೂನ್ ತಿಂಗಳಿನಲ್ಲೂ ಯೋಧರೊಬ್ಬರನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದರು. ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಔರಂಗಜೇಬ್ ಅವರನ್ನು ಅಪಹರಣ ಮಾಡಿದ್ದರು.

    23 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದ್ದ ಔರಂಗಜೇಬ್ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಪುಲ್ವಾಮಾದಲ್ಲಿ ಶಸ್ತ್ರ ಸಜ್ಜಿತ ಉಗ್ರರು ಸುತ್ತುವರಿದು ಅಪಹರಣ ಮಾಡಿ ಹತ್ಯೆಗೈದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಿನ ಯಲಹಂಕದಿಂದ ಯುದ್ಧ ವಿಮಾನಗಳು ರವಾನೆ

    ಬೆಂಗಳೂರಿನ ಯಲಹಂಕದಿಂದ ಯುದ್ಧ ವಿಮಾನಗಳು ರವಾನೆ

    ಬೆಂಗಳೂರು: ಭಾರತದ ಮೇಲೆ ಪಾಕ್ ದಾಳಿಗೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಯುದ್ಧ ವಿಮಾನಗಳು ರವಾನೆಯಾಗಿದೆ.

    ಈಗಾಗಲೇ ರಜೆಯಲ್ಲಿರುವ ಎಲ್ಲ ಸೈನಿಕರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಮೂರು ಸೇನೆಗಳು ಸೂಚನೆ ಕೊಟ್ಟಿವೆ.

    ಗಡಿಯಲ್ಲಿ ಭಾರತ ಹೈ ಅಲರ್ಟ್ ಘೋಷಿಸಿದ್ದು, ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿದೆ. ಭಾರತ ಸರ್ಕಾರ ಗಡಿಯಲ್ಲಿರುವ ನಾಗರಿಕರನ್ನು ಸುರಕ್ಷಿತ ಕಡೆಗೆ ಸಾಗಿಸುವಂತೆ ಭಾರತೀಯ ಸೇನೆಗೆ ಸೂಚಿಸಿದೆ. ಇದನ್ನೂ ಓದಿ:ಕರಾವಳಿಯಲ್ಲಿ ಹೈ ಅಲರ್ಟ್: ನೌಕಾ ಸಿಬ್ಬಂದಿಗಳಿಗೆ ಮಂಜೂರಾದ ರಜೆ ಕಟ್

    ಭಾರತದ ಸರ್ಜಿಕಲ್ ಸ್ಟ್ರೈಕ್ ನಿಂದ ದಿಕ್ಕೆಟ್ಟ ಪಾಕಿಸ್ತಾನ ಈಗ ಗಡಿಯಲ್ಲಿ ಒಂದೇ ಸಮನೆ ಗುಂಡಿನ ದಾಳಿ ನಡೆಸುತ್ತಿದೆ. ಪಾಕ್ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ನಡೆಸಿ ಈಗಾಗಲೇ 5 ಸೇನಾ ಚೌಕಿಗಳನ್ನು ಧ್ವಂಸ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 5 ಲಕ್ಷಕ್ಕೆ 1 ರೂ. ಸೇರಿದ್ರೂ 12,500 ರೂ. ಟ್ಯಾಕ್ಸ್ ಕಟ್ಟಿ: ಏನಿದು ಮೋದಿಯ ಹೊಸ ತೆರಿಗೆ ಲೆಕ್ಕಾಚಾರ?

    5 ಲಕ್ಷಕ್ಕೆ 1 ರೂ. ಸೇರಿದ್ರೂ 12,500 ರೂ. ಟ್ಯಾಕ್ಸ್ ಕಟ್ಟಿ: ಏನಿದು ಮೋದಿಯ ಹೊಸ ತೆರಿಗೆ ಲೆಕ್ಕಾಚಾರ?

    ನವದೆಹಲಿ: ಮಧ್ಯಮ ವರ್ಗ ಕುತೂಹಲದಿಂದ ಬೆರಗುಗಣ್ಣಿನಿಂದ ಕಾದು ಕುಳಿತಿದ್ದ ತೆರಿಗೆ ವಿಷಯದಲ್ಲಿ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. 5 ಲಕ್ಷದವರೆಗೆ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ. ಆದರೆ 5 ಲಕ್ಷಕ್ಕಿಂತಲೂ ಒಂದು ರೂ. ಜಾಸ್ತಿ ಆದಾಯ ಇದ್ದರೂ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

    ಈ ಹಿಂದೆ 2.50 ಲಕ್ಷ ರೂ. ನಿಂದ 5 ಲಕ್ಷ ರೂ. ಆದಾಯ ಇದ್ದವರಿಗೆ 5% ರಷ್ಟು ತೆರಿಗೆ ವಿಧಿಸಲಾಗುತಿತ್ತು. ಆದರೆ ಈಗ ಈ ತೆರಿಗೆ ವಿನಾಯಿತಿ ಮಿತಿಯನ್ನು ಕಿತ್ತು ಹಾಕಿಲ್ಲ. ಈ ಹಿಂದೆ 3 ಲಕ್ಷ ಆದಾಯವುಳ್ಳವರು ತೆರಿಗೆ ವ್ಯಾಪ್ತಿಗೂ ಬಂದರೂ ಅನ್ವಯವಾಗುತ್ತಿದ್ದ 2,500 ರಿಬೇಟ್ ಮೂಲಕ ಮನ್ನಾ ಆಗುತ್ತಿತ್ತು. ಈಗ 5 ಲಕ್ಷ ರೂ.ವರೆಗೆ ಆದಾಯವುಳ್ಳವರಿಗೆ ಅನ್ವಯವಾಗುವ 12,500ವರೆಗಿನ ತೆರಿಗೆ ರಿಬೇಟ್ ಮೂಲಕ ಮನ್ನಾ ಆಗಲಿದೆ.

    ಮೋದಿ ತೆರಿಗೆ ಲೆಕ್ಕಾಚಾರ ಹೀಗಿದೆ ನೋಡಿ:
    5 ಲಕ್ಷವರೆಗೆ 2018ರ ವರೆಗೆ 2,500 ರೂ. ರಿಬೇಟ್ ಇತ್ತು. ಈಗ ರಿಬೇಟ್ 12,500 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 3 ಲಕ್ಷ ರೂ. ಆದಾಯವುಳ್ಳವರು ತೆರಿಗೆ ವ್ಯಾಪ್ತಿಗೂ ಬಂದರೂ ಅನ್ವಯವಾಗುತ್ತಿದ್ದ 2,500 ರಿಬೇಟ್ ಮನ್ನಾ ಆಗುತ್ತಿತ್ತು. ಈಗ 5 ಲಕ್ಷ ರೂ.ವರೆಗೆ ಆದಾಯವುಳ್ಳವರಿಗೆ ಅನ್ವಯವಾಗುವ 12,500ರವರೆಗಿನ ರಿಬೇಟ್ ಮನ್ನಾ ಆಗಲಿದೆ. 5 ಲಕ್ಷಕ್ಕಿಂತ ಒಂದು ರೂಪಾಯಿ ಮೇಲ್ಪಟ್ಟರೂ ರಿಬೇಟ್ ಅನ್ವಯವಾಗುದಿಲ್ಲ.

    ಸ್ಟ್ಯಾಂಡರ್ಡ್ ಡಿಡಕ್ಷನ್ 40 ಸಾವಿರದಿಂದ 50 ಸಾವಿರ ರೂ. ಏರಿಕೆ ಮಾಡಿದ್ದು, ಗೃಹ ಸಾಲ 2 ಲಕ್ಷದವರೆಗೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಪಿಎಫ್, ಪಿಪಿಎಫ್ ಸೇರಿದಂತೆ ನಿಗದಿತ ಹೂಡಿಕೆಗೆ 6.50 ಲಕ್ಷದವರೆಗೆ ತೆರಿಗೆ ಭರಿಸಬೇಕಿಲ್ಲ. ಬ್ಯಾಂಕ್, ಅಂಚೆಯಂತ ಉಳಿತಾಯ ಯೋಜನೆಗಳ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ.

    40 ಸಾವಿರದವರೆಗಿನ ಬಡ್ಡಿ ಆದಾಯಕ್ಕೆ ಟಿಡಿಎಸ್ ಇಲ್ಲ. ಟಿಡಿಎಸ್‍ನ ಬಡ್ಡಿ ಮಿತಿ ವಿನಾಯಿತಿಯನ್ನು 10 ಸಾವಿರದಿಂದ 40 ಸಾವಿರದವರೆಗೆ ಏರಿಸಲಾಗಿದೆ. ಸ್ಟಾಂಡರ್ಡ್ ಡಿಡಕ್ಷನ್ ಎಲ್ಲವನ್ನು ಕಳೆದು 5 ಲಕ್ಷ ರೂ. ಒಳಗಡೆ ಆದಾಯ ಇದ್ದರೆ ತೆರಿಗೆ ಕಟ್ಟಬೇಕಿಲ್ಲ. ಎಲ್ಲವನ್ನು ಕಳೆದು 1 ರೂಪಾಯಿ ಜಾಸ್ತಿಯಾದರೆ ಅದಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ.

    12,500 ರೂ. ಹೇಗೆ? ಉದಾಹರಣೆಗೆ ವ್ಯಕ್ತಿ ಎಲ್ಲ ಸ್ಟ್ಯಾಂಡರ್ಡ್ ಡಿಡಕ್ಷನ್ ಕಳೆದು 6 ಲಕ್ಷ ರೂ. ಆದಾಯ ಹೊಂದಿದ್ದಾನೆ ಎಂದು ಭಾವಿಸಿಕೊಳ್ಳಿ. ಈಗ ಕೇವಲ ರಿಬೇಟ್ ಮೊತ್ತವಷ್ಟೇ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ವಾರ್ಷಿಕ ಆದಾಯ 5 ಲಕ್ಷ ರೂ. ಗಿಂತ ಮೇಲ್ಪಟ್ಟಿದ್ದರೆ ಆಗ 2.5 ಲಕ್ಷ ರೂ.( 2.5 ಲಕ್ಷ ರೂ.ವರೆಗೆ ತೆರಿಗೆ ಇಲ್ಲ)ನಿಂದ 6 ಲಕ್ಷ ರೂ.ವರೆಗೆ ಆದಾಯಕ್ಕೆ ತೆರಿಗೆ ಕಡ್ಡಾಯವಾಗಿ ಕಟ್ಟಬೇಕಾಗುತ್ತದೆ. 2.5 ಲಕ್ಷದವರೆಗೆ 5 ಲಕ್ಷದವರೆಗೆ 5%ರಷ್ಟು, 5 ಲಕ್ಷದಿಂದ ಉಳಿದ 1 ಲಕ್ಷ ರೂ.ಗೆ  20%ರಷ್ಟು ತೆರಿಗೆ ಒಟ್ಟು 12,500 ರೂ.  ಕಟ್ಟಬೇಕು.

    ಯಾರಿಗೆ ಎಷ್ಟೆಷ್ಟು ತೆರಿಗೆ?
    ಆದಾಯ ತೆರಿಗೆ ಸ್ಲಾಬ್‍ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2018-19ರ ಹಣಕಾಸು ವರ್ಷದಲ್ಲಿ ಇರುವಂತೆ 2019-20 ರಲ್ಲಿ ತೆರಿಗೆ ಕಟ್ಟಬೇಕು. 2.5 ಲಕ್ಷದ ವರೆಗೆ ಯಾವುದೇ ತೆರಿಗೆ ಇಲ್ಲ. 2.5 ಲಕ್ಷದಿಂದ 5 ಲಕ್ಷದ ವರೆಗೆ 5%, 5 ಲಕ್ಷಕ್ಕಿಂತ ಮೇಲ್ಪಟ್ಟು 10 ಲಕ್ಷದ ಒಳಗಡೆ ಇದ್ದರೆ 20%, 10 ಲಕ್ಷಕ್ಕೂ ಮೇಲ್ಪಟ್ಟು 30% ತೆರಿಗೆಯನ್ನು ಕಟ್ಟಬೇಕು.

    ಎಷ್ಟು ಆದಾಯ ಇರುವವರಿಗೆ ಎಷ್ಟು ತೆರಿಗೆ?
    5 ಲಕ್ಷ ರೂ. ಒಳಗಡೆ (ಸ್ಟ್ಯಾಂಡರ್ಡ್ ಡಿಡಕ್ಷನ್ ಕಳೆದು ಸಿಗುವ ಆದಾಯ) ಇರುವ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 5 ಲಕ್ಷದ ಮೇಲೆ 1 ರೂಪಾಯಿ ಆದಾಯ ಹೆಚ್ಚಾದರೂ 12,500 ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದಕ್ಕೆ ರಿಬೇಟ್ ಇರುವುದಿಲ್ಲ. 7.5 ಲಕ್ಷಕ್ಕೆ 62,500 ರೂ., 10 ಲಕ್ಷಕ್ಕೆ 1,12,500 ರೂ., 15 ಲಕ್ಷಕ್ಕೆ 2,62,500 ರೂ., 20 ಲಕ್ಷಕ್ಕೆ 4,12,500 ರೂ. ತೆರಿಗೆ ಕಟ್ಟಬೇಕು. (ಗಮನಿಸಿ: 5 ಲಕ್ಷದ 1 ರೂಪಾಯಿ ಮೀರಿದ ಎಲ್ಲಾ ಮೊತ್ತದ ಟ್ಯಾಕ್ಸ್ ಮೇಲೆ 3% ರಷ್ಟು ಸೆಸ್ ಅನ್ವಯ ಆಗಲಿದೆ)

    https://www.youtube.com/watch?v=W4j4iILKQNc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೂತ್ ರದ್ದು?

    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬೂತ್ ರದ್ದು?

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಪ್ರಯೋಗವೊಂದು ಯಶಸ್ವಿಯಾದರೆ ದೇಶದಲ್ಲಿರುವ ಟೋಲ್ ಬೂತ್‍ಗಳು ರದ್ದಾಗುವ ಸಾಧ್ಯತೆಯಿದೆ.

    ಹೈವೇಗಳ ಟೋಲ್ ಬೂತ್‍ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪ್ರಯಾಣಿಕರ ಸಮಯ ಹಾಳಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈಗ ಟೋಲ್ ಸಂಗ್ರಹಕ್ಕೆ ವಾಹನದಲ್ಲೇ ಸಾಧನವೊಂದನ್ನು ಅಳವಡಿಸಲು ಮುಂದಾಗಿದೆ.

     

    ಹೇಗೆ ಕೆಲಸ ಮಾಡುತ್ತೆ?
    ವಾಹನಗಳ ಮ್ಯೂಸಿಕ್ ಸಿಸ್ಟಂ ಬಳಿ ಈ ಸಾಧನ ಇರಲಿದೆ. ಈ ಸಾಧನ ವಾಹನ ಮಾಲೀಕರ ಬ್ಯಾಂಕ್ ಖಾತೆಗೆ ಜೋಡಣೆ ಆಗಿರುತ್ತದೆ. ವಾಹನ ಸವಾರ ಒಂದು ನಿರ್ದಿಷ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದರೆ ಅದಕ್ಕೆ ತಗುಲುವ ಶುಲ್ಕ ನೇರವಾಗಿ ಆತ/ಆಕೆಯ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ.

    ಈಗ ದೆಹಲಿ- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಉಪಕರಣದ ಪ್ರಯೋಗ ನಡೆಯುತ್ತಿದ್ದು, ಈ ಪ್ರಯೋಗ ಯಶಸ್ವಿಯಾದರೆ ದೇಶಾದ್ಯಂತ ವಿಸ್ತರಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈಗಾಗಲೇ ಟೋಲ್‍ಗಳಲ್ಲಿ ವಾಹನಗಳು ನಿಮಿಷಗಟ್ಟಲೇ ಕಾಯುವುದನ್ನು ತಡೆಯಲು ಫಾಸ್ಟ್ ಟ್ಯಾಗ್ ಅನ್ನು ಸರ್ಕಾರ ಪರಿಚಯಿಸಿದೆ. ಇದನ್ನೂ ಓದಿ: ಎಷ್ಟು ದೂರ ಹೋಗ್ತಿರೋ ಅಷ್ಟಕ್ಕೆ ಮಾತ್ರ ಟೋಲ್ ಕಟ್ಟಿ – ಮೋದಿ ಸರ್ಕಾರದಿಂದ ಮಹ್ವತದ ಪ್ರಯೋಗ ಜಾರಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಿಢೀರ್ ಉಪಹಾರ ಕೂಟದ ಸಭೆಯಲ್ಲಿ ಚರ್ಚಿಸಿದ್ದೇನು – ಡಿಕೆಶಿ ಹೇಳ್ತಾರೆ ಓದಿ

    ದಿಢೀರ್ ಉಪಹಾರ ಕೂಟದ ಸಭೆಯಲ್ಲಿ ಚರ್ಚಿಸಿದ್ದೇನು – ಡಿಕೆಶಿ ಹೇಳ್ತಾರೆ ಓದಿ

    ಬೆಂಗಳೂರು: ಆಪರೇಷನ್ ಕಮಲದ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್ ಹಿರಿಯ ಮುಖಂಡರು ದಿಢೀರ್ ಆಗಿ ಉಪಹಾರ ಕೂಟವನ್ನು ಆಯೋಜಿಸಿ ಮಂತ್ರಿಗಳ ಸಭೆ ನಡೆಸಿದ್ದಾರೆ.

    ಅಶೋಕ ಹೋಟೆಲ್ ನಲ್ಲಿ ಉಪಹಾರ ಕೂಟದ ನೆಪದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಸಿಕ್ಕಿದರು. ಸಭೆಯಲ್ಲಿ ಏನು ಚರ್ಚೆ ನಡೆದಿದೆ ಎಂದು ಕೇಳಿದ್ದಕ್ಕೆ, ಇವತ್ತಿನ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ಬಜೆಟ್ ಮತ್ತು ಸಾಮಾನ್ಯ ಕನಿಷ್ಟ ಕಾರ್ಯಕ್ರಮದ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದೇವೆ ಹೊರತು ಬೇರೆ ಏನು ಚರ್ಚೆ ನಡೆಸಿಲ್ಲ ಇಂಗ್ಲಿಷಿನಲ್ಲಿ ಉತ್ತರ ನೀಡಿದರು. ಇದನ್ನೂ ಓದಿ: ಆಪರೇಷನ್ ಕಮಲ ಆಗ್ತೀರೋದು ಸತ್ಯ: ಸಿಎಂ

    ಈ ಉತ್ತರ ಬಂದ ಕೂಡಲೇ ಕೆಲ ಶಾಸಕರು ಹೊರ ರಾಜ್ಯಕ್ಕೆ ತೆರಳಿದ್ದಾರೆ ಅಲ್ಲವೇ ಎಂದು ಕೇಳಿದ್ದಕ್ಕೆ, ಯಾರು ಎಲ್ಲೂ ಹೋಗಿಲ್ಲ. ಎಲ್ಲ ಶಾಸಕರು ನಮ್ಮ ಜೊತೆಗೆ ಇದ್ದಾರೆ ಎಂದು ಹೇಳುತ್ತಾ ಕಾರನ್ನು ಹತ್ತಿ ತೆರಳಿದರು.

    ಸಾಧಾರಣವಾಗಿ ಮಾಧ್ಯಮಗಳ ಪ್ರಶ್ನೆಗೆ ಸಮಾಧಾನದಿಂದ ನಗುಮುಖದಿಂದ ಉತ್ತರಿಸುವ ಡಿಕೆ ಶಿವಕುಮಾರ್ ಅವರು ಸಭೆಯ ಬಳಿಕ ಬಹಳ ಗಂಭೀರವಾಗಿ ಇದ್ದಂತೆ ಕಂಡು ಬಂದಿತ್ತು. ಅಷ್ಟೇ ಅಲ್ಲದೇ ಚುಟುಕಾಗಿ ಕೇವಲ 20 ಸೆಕೆಂಡ್ ಗಳಲ್ಲಿ ಪ್ರತಿಕ್ರಿಯೆ ನೀಡಿ ತೆರಳಿದರು. ಇದನ್ನೂ ಓದಿ: ಉಪಹಾರ ಕೂಟದ ನೆಪದಲ್ಲಿ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಪ್ರತಿತಂತ್ರ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಲ್ವರ್ಗದ ಹಿಂದುಳಿದವರಿಗೆ ಮೀಸಲಾತಿ: ಕೇಂದ್ರದ ನಿರ್ಧಾರಕ್ಕೆ ಎಚ್‍ಡಿಡಿ ಬೆಂಬಲ

    ಮೇಲ್ವರ್ಗದ ಹಿಂದುಳಿದವರಿಗೆ ಮೀಸಲಾತಿ: ಕೇಂದ್ರದ ನಿರ್ಧಾರಕ್ಕೆ ಎಚ್‍ಡಿಡಿ ಬೆಂಬಲ

    ಬೆಂಗಳೂರು: ಮೇಲ್ವರ್ಗದ ಹಿಂದುಳಿದವರಿಗೆ ಶೇ.10 ಮೀಸಲಾತಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ತರುವ ನಿರ್ಧಾರವನ್ನು ಜೆಡಿಎಸ್ ಬೆಂಬಲಿಸುತ್ತದೆ. ಸಮಾಜದ ಎಲ್ಲ ವರ್ಗದಲ್ಲಿರುವ ಬಡವರ ಏಳಿಗೆಗೆ ಜೆಡಿಎಸ್ ಯಾವಾಗಲೂ ಬದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.

    ಸೋಮವಾರ ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ. ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರು ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಸಮಾಜವಾದಿ ಪಕ್ಷದ ಪ್ರತಿಭಟನೆಯ ನಡುವೆಯೇ ಸಂವಿಧಾನಕ್ಕೆ 124ನೇ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಿದರು. ಜಾತಿ ಆಧರಿತ ಕೋಟಾ ನಿಗದಿಪಡಿಸುವ ಸಂವಿಧಾನದ 15 ಮತ್ತು 16ನೇ ವಿಧಿಗಳಿಗೆ ತಿದ್ದುಪಡಿ ಅಗತ್ಯವಿದ್ದು, ಅದಕ್ಕಾಗಿ ಮಸೂದೆಯನ್ನು ಮಂಡಿಸಲಾಗಿದೆ.

    ಸಂವಿಧಾನಕ್ಕೆ ತಿದ್ದುಪಡಿ ಯಾಕೆ?
    1992ರಲ್ಲಿ ನೀಡಿದ ಐತಿಹಾಸಿಕ ಮಂಡಲ್ ಮೀಸಲಾತಿ ತೀರ್ಪಿನಲ್ಲಿ ಯಾವ ಕಾರಣಕ್ಕೂ ಸಾಮಾಜಿಕ ಶೈಕ್ಷಣಿಕ ಮೀಸಲಾತಿ ಪ್ರಮಾಣ ಶೇ.50% ಮೀರಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ದೇಶದಲ್ಲಿ ಪ್ರಸ್ತುತ ಶೇ.49.5 ಇದ್ದು ಹೊಸ ಮೀಸಲಾತಿ ಜಾರಿಯಾದರೆ ಪ್ರಮಾಣ ಶೇ.59.5ಕ್ಕೆ ಏರಿಕೆಯಾಗುತ್ತದೆ. ಸಂವಿಧಾನದಲ್ಲಿ ಆರ್ಥಿಕ ಸ್ಥಿತಿಗತಿ ಆಧರಿತ ಮೀಸಲಾತಿಗೆ ಅವಕಾಶವಿಲ್ಲ. ಹೀಗಾಗಿ ಈಗ 15 ಮತ್ತು 16ನೇ ವಿಧಿಗೆ ತಿದ್ದುಪಡಿ ತಂದು ಮೀಸಲಾತಿ ತರಲು ಸರ್ಕಾರ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

     

  • ನಿಮ್ಮ ಮಗನ ಆಸ್ತಿ ಎಷ್ಟಿದೆ  – ಡಿಕೆಶಿ ತಾಯಿಗೆ ಐಟಿ ಕೇಳಿದ ಪ್ರಶ್ನೆಗಳು ಏನು?

    ನಿಮ್ಮ ಮಗನ ಆಸ್ತಿ ಎಷ್ಟಿದೆ – ಡಿಕೆಶಿ ತಾಯಿಗೆ ಐಟಿ ಕೇಳಿದ ಪ್ರಶ್ನೆಗಳು ಏನು?

    ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಆದಾಯ ತೆರಿಗೆ ಕಚೇರಿಗೆ ಆಗಮಿಸಿ ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಶುಕ್ರವಾರ ಮಧ್ಯಾಹ್ನ 12.30ಕ್ಕೆ ಆಗಮಿಸಿದ ಗೌರಮ್ಮ ಅವರನ್ನು ಸಂಜೆ 6.30ರವರೆಗೂ ವಿಚಾರಣೆ ನಡೆಸಲಾಯಿತು. ಪಿತ್ರಾರ್ಜಿತ ಆಸ್ತಿ ಮತ್ತು ಮಗನ ಆಸ್ತಿ ಬಗ್ಗೆ ತಾಯಿ ಗೌರಮ್ಮ ಉತ್ತರ ನೀಡಿದ್ದಾರೆ. ಈ ಹಿಂದೆ ಇದೇ ಪ್ರಶ್ನೆಗಳನ್ನು ಕೇಳಿದಾಗ ಡಿಕೆ ಶಿವಕುಮಾರ್ ಉತ್ತರ ನೀಡಲು ಸಮಯವಕಾಶ ಕೇಳಿದ್ದರು.

    ಡಿಕೆಶಿ ತಾಯಿಗೆ ಐಟಿ ಕೇಳಿದ 9 ಪ್ರಶ್ನೆಗಳು ಗೌರಮ್ಮ ಕೊಟ್ಟ ಉತ್ತರವೇನು..?

    ಪ್ರಶ್ನೆ: 1
    ನಿಮ್ಮ ಮಗನ ಆಸ್ತಿ ಎಷ್ಟಿದೆ ಅಂತ ನಿಮಗೆ ಗೊತ್ತಾ?
    ಬೆಂಗಳೂರಿನಾಗೆ ಮನೆ ಐತೆ ಅಂತ ಗೊತ್ತು ಸ್ವಾಮಿ

    ಪ್ರಶ್ನೆ: 2
    ಎಷ್ಟು ಮನೆಗಳಿವೆ ಗೊತ್ತಾ..?
    ಯಾವಾಗ್ಲೋ ಒಂದ್ಸಾರಿ ಬರ್ತೀವಿ ಹೋಗ್ತೀವಿ. ಹೀಗಾಗಿ ನನಗೆ ಗೊತ್ತಿರೋದು ಒಂದೇ ಮನೆ. ಇದನ್ನೂ ಓದಿ: 80 ವರ್ಷದ ತಾಯಿಯನ್ನು 6 ಗಂಟೆ ವಿಚಾರಣೆ ನಡೆಸಿದ್ದು ನೋವು ತಂದಿದೆ: ಡಿಕೆಶಿ

    ಪ್ರಶ್ನೆ: 3
    ನಿಮ್ಮ ಮೊಮ್ಮಗಳು ಏನು ಮಾಡ್ತಿದ್ದಾಳೆ ಗೊತ್ತಾ..?
    ಓದುತ್ತಿರಬೇಕು ಸ್ವಾಮಿ

    ಪ್ರಶ್ನೆ: 4
    ಬ್ಯುಸಿನೆಸ್ ಮಾಡ್ತಿರೋದು ನಿಮಗೆ ಗೊತ್ತಿಲ್ವಾ..?
    ಗೊತ್ತಿಲ್ಲ

    ಪ್ರಶ್ನೆ: 5
    ನಿಮ್ಮ ಸೊಸೆಯ ಬಳಿ ಇರೋ ಚಿನ್ನಾಭರಣ ಎಷ್ಟು ಅಂತ ಗೊತ್ತಾ..?
    ಇಲ್ಲ ಗೊತ್ತಿಲ್ಲ..

    ಪ್ರಶ್ನೆ: 6
    ನಿಮ್ಮ ಮಗನ ಅಕೌಂಟ್‍ನಲ್ಲಿ ಹಣ ಎಷ್ಟಿದೆ ಗೊತ್ತಾ..?
    ಗೊತ್ತಿಲ್ಲ

    ಪ್ರಶ್ನೆ: 7
    ನಿಮ್ಮ ಮಗ ತನ್ನ ವ್ಯವಹಾರದ ಬಗ್ಗೆ ಎಂದಾದ್ರು ತಮ್ಮ ಬಳಿ ಹೇಳಿದ್ದಾರಾ..?
    ಮಂತ್ರಿ ಆಗಿದ್ದಾನೆ ಅಂತ ಗೊತ್ತು. ಬೇರೆ ವ್ಯವಹಾರ ಗೊತ್ತಿಲ್ಲ.

    ಪ್ರಶ್ನೆ: 8
    ನಿಮ್ಮ ಹೆಸರಿನಲ್ಲಿ ನಿಮ್ಮ ಮಗ ಏನಾದ್ರು ಆಸ್ತಿ ಖರೀದಿ ಮಾಡಿದ್ದಾರಾ..?
    ನೆನಪಿಲ್ಲ ಸ್ವಾಮಿ

    ಪ್ರಶ್ನೆ: 9
    ನಿಮ್ಮ ಪಿತ್ರಾರ್ಜಿತ ಆಸ್ತಿ ಎಷ್ಟಿದೆ ..?
    ಅದರ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲವನ್ನೂ ಅವರೇ ನೋಡಿಕೊಳ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv