Tag: ಕನ್ನಡ ನ್ಯೂಸ್

  • ಯಾರಿಗೆ ಸಿಗಲಿದೆ ಧೋನಿಯ ನಂ.7 ಜೆರ್ಸಿ?

    ಯಾರಿಗೆ ಸಿಗಲಿದೆ ಧೋನಿಯ ನಂ.7 ಜೆರ್ಸಿ?

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ. ಆದರೆ  ಈಗ ಅವರು ಧರಿಸುತ್ತಿದ್ದ ನಂ.7 ಜೆರ್ಸಿ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಎದ್ದಿದೆ.

    ಧೋನಿ ಅಭಿಮಾನಿಗಳು ಈ ಜೆರ್ಸಿ ಸಂಖ್ಯೆಗೂ ನಿವೃತ್ತಿ ನೀಡಬೇಕು ಎಂದು ಎಂದು ಒತ್ತಾಯಿಸುತ್ತಿದ್ದಾರೆ. ಈ ಆಗ್ರಹಕ್ಕೆ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಸಾಥ್‌ ನೀಡಿದ್ದು 2019ರ ವಿಶ್ವಕಪ್‌ ಸೆಮಿಫೈನಲ್‌ ವೇಳೆ ಧೋನಿ ಜೊತೆಗಿನ ಫೋಟೋ ಹಾಕಿ ಈ ಜೆರ್ಸಿಗೆ ನಿವೃತ್ತಿ ನೀಡಬೇಕೆಂದು ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಅವರು ವಿಶ್ವಕಪ್‌ ಸೆಮಿಫೈನಲ್‌ ಕ್ರಿಕೆಟ್‌ ಮುಗಿದ ಬಳಿಕ ತೆಗೆದ ಫೋಟೋ ಇದು. ಈ ಪ್ರಯಾಣದಲ್ಲಿ ಬಹಳಷ್ಟು ನೆನಪುಗಳಿವೆ. ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ನಂ.7 ಜೆರ್ಸಿಗೂ ಬಿಸಿಸಿಐ ನಿವೃತ್ತಿ ಹೇಳಬಹುದು ಎಂನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇನೆ. ಜೀವನದಲ್ಲಿ ನಿಮ್ಮ ಎರಡನೇ ಇನ್ನಿಂಗ್ಸ್‌ಗೆ ಶುಭವಾಗಲಿ. ಅಲ್ಲಿಯೂ ಸಹ ನಮಗೆ ಸಾಕಷ್ಟು ಆಶ್ಚರ್ಯಗಳನ್ನು ನೀಡುತ್ತೀರಿ ಎಂಬ ಖಾತರಿಯಿದೆ ಎಂದು ಬರೆದುಕೊಂಡಿದ್ದಾರೆ.

    ಈಗ ಐಸಿಸಿ ಟೆಸ್ಟ್‌ ಕ್ರಿಕೆಟ್‌ನಲ್ಲೂ ನಂಬರ್‌ ಇರುವ ಜೆರ್ಸಿ ತೊಡಲು ಅನುಮತಿ ನೀಡಿದೆ. ಹೀಗಾಗಿ ಬಿಸಿಸಿಐ ಯಾವ ರೀತಿಯ ನಿರ್ಧಾರ ಮಾಡುತ್ತದೆ ಎಂಬ ಕುತೂಹಲ ಮೂಡಿದೆ. ಈ ಹಿಂದೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಬಿಸಿಸಿಐ ವಕ್ತಾರರೊಬ್ಬರು ಧೋನಿ ಅವರ ನಂ. 7ರ ಜೆರ್ಸಿಯನ್ನು ಯಾರಿಗೂ ನೀಡುವುದಿಲ್ಲ. ಈ ನಂಬರ್ ಗೆ ಹಾಗೂ ಧೋನಿಗೆ ಅವಿನಾಭವ ಸಂಬಂಧ ಇದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಯಾವುದೇ ನಂಬರ್‌ಗೆ ಅಧಿಕೃತವಾಗಿ ನಿವೃತ್ತಿ ಹೇಳಲು ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ನಂ.10 ಜೆರ್ಸಿಯನ್ನು ಶಾರ್ದೂಲ್‌ ಠಾಕೂರ್ ಧರಿಸಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಣಾಮ ಈ ಏಕದಿನ ಹಾಗೂ ಟಿ20 ಮಾದರಿಯಲ್ಲಿ ನಂ.10 ಜೆರ್ಸಿಯನ್ನು ಯಾರಿಗೂ ನೀಡದೇ ಬಿಸಿಸಿಐ ಅನಧಿಕೃತವಾಗಿ ನಿವೃತ್ತಿ ನೀಡಿದೆ. ಶಾರ್ದೂಲ್‌ ಠಾಕೂರ್‌ ಈಗ ನಂ.54 ಜೆರ್ಸಿ ತೊಟ್ಟು ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.

     

    39 ವರ್ಷದ ಧೋನಿ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸಮಯದಲ್ಲಿ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ಧೋನಿಯ ಜೆರ್ಸಿ ಸಂಖ್ಯೆ 7ಕ್ಕೆ ನಿವೃತ್ತಿ ನೀಡಬೇಕಾ ಅಥವಾ ಆಟಗಾರರಿಗೆ ಬಳಸಲು ನೀಡಬೇಕೇ? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮಾಡಿ ತಿಳಿಸಿ.

  • ಹೊರ ರಾಜ್ಯದಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಬರಬಹುದು – ಷರತ್ತುಗಳು ಅನ್ವಯ

    ಹೊರ ರಾಜ್ಯದಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಬರಬಹುದು – ಷರತ್ತುಗಳು ಅನ್ವಯ

    ಬೆಂಗಳೂರು: ಹೊರ ರಾಜ್ಯದಲ್ಲಿರುವ ಕನ್ನಡಿಗರು ಇನ್ನು ಮುಂದೆ ಕರ್ನಾಟಕಕ್ಕೆ ಬರಬಹುದು. ಲಾಕ್‍ಡೌನ್ ಘೋಷಣೆಗೂ ಮುನ್ನ ನೆರೆ ರಾಜ್ಯಕ್ಕೆ ಹೋಗಿರುವ ಕನ್ನಡಿಗರು ಪಾಸ್ ಪಡೆಯುವ ಮೂಲಕ ಮರಳಿ ಕರ್ನಾಟಕಕ್ಕೆ ಬರಬಹುದು.

    ರಾಜ್ಯಕ್ಕೆ ಬರುವ ಕನ್ನಡಿಗರು ಸೇವಾ ಸಿಂಧು ವೆಬ್‍ಸೈಟ್‍ಗೆ ತೆರಳಿ ವಿವರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ವಿವರಗಳು ಸರಿಯಾಗಿದ್ದರೆ ಇ ಪಾಸ್ ಡೌನ್‍ಲೋಡ್ ಮಾಡಬಹುದು.

    ಇ ಪಾಸ್ ಸಿಕ್ಕಿದ ದಿನದಿಂದ ಒಂದು ವಾರದ ವರೆಗೆ ಮಾತ್ರ ಈ ಪಾಸ್ ಉರ್ಜಿತದಲ್ಲಿರುತ್ತದೆ. ಸ್ವಂತ ವಾಹನ, ಬಾಡಿಗೆ ವಾಹನ ಅಥವಾ ಬಸ್ ಇವುಗಳ ಮೂಲಕ ಬರಬಹುದು.

    ವಾಹನದಲ್ಲಿ ಬರಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಬೇಕು. ಒಂದು ಕಾರಿನಲ್ಲಿ ಗರಿಷ್ಟ 3 ಮಂದಿ, ಎಸ್‍ಯುವಿ ವಾಹನದಲ್ಲಿ 5, ವ್ಯಾನ್ ನಲ್ಲಿ 10 ಮಂದಿ, ಬಸ್ ನಲ್ಲಿ ಗರಿಷ್ಟ 25 ಮಂದಿ ಪ್ರಯಾಣಿಸಬಹುದು.

    ಯಾವ ಚೆಕ್ ಪೋಸ್ಟ್ ಮೂಲಕ ಅನುಮತಿ ನೀಡಲಾಗಿದೆಯೋ ಆ ಚೆಕ್ ಪೋಸ್ಟ್ ಮೂಲಕ ಮಾತ್ರ ಪ್ರವೇಶ ನೀಡಲಾಗುತ್ತದೆ.

    ವೆಬ್‍ಸೈಟಿಗ್ ಭೇಟಿ ನೀಡಲು ಕ್ಲಿಕ್ ಮಾಡಿ:  www.sevasindhu.karnataka.gov.in/

  • ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಗೊಳಿಸಿದ ಜಿಲ್ಲಾಡಳಿತ

    ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಗೊಳಿಸಿದ ಜಿಲ್ಲಾಡಳಿತ

    ಮಡಿಕೇರಿ: ಜಿಲ್ಲೆಯಲ್ಲಿ ವಿಧಿಸಿದ್ದ ಲಾಕ್‍ಡೌನ್ ಮತ್ತಷ್ಟು ಸಡಿಲಗೊಂಡಿದ್ದು ವಾರದ ಎಲ್ಲಾ ದಿನಗಳು ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಜಿಲ್ಲಾಡಳಿತ ಮುಕ್ತ ಅವಕಾಶ ನೀಡಿದೆ.

    ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾಡಳಿತ, ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಬಹುದು. ಬುಧವಾರದಿಂದ ಜಿಲ್ಲೆಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಜಿಲ್ಲೆಯ ಒಳಗೆ ಮಾತ್ರವೇ ಸಂಚರಿಸಲು ಅವಕಾಶ ನೀಡಿದೆ.

    ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಸಂಚಾರವೂ ಪ್ರಾರಂಭವಾಗಲಿದೆ. ಆದರೆ ಒಟ್ಟು ಆಸನಗಳ ಶೇ.50 ಮೀರದಂತೆ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

    ವಾರದ ಎಲ್ಲಾ ದಿನಗಳು ಸಿಎಲ್ 2, ಸಿಎಲ್ 11ಸಿ ಮಾದರಿಯ ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

  • ಪೇಟಿಎಂ ಉದ್ಯೋಗಿಗೆ ಕೊರೊನಾ – ಇಟಲಿ ಪ್ರಯಾಣಿಕರನ್ನು ಕರೆದೊಯ್ದ ಚಾಲಕನಿಗೂ ಬಂತು

    ಪೇಟಿಎಂ ಉದ್ಯೋಗಿಗೆ ಕೊರೊನಾ – ಇಟಲಿ ಪ್ರಯಾಣಿಕರನ್ನು ಕರೆದೊಯ್ದ ಚಾಲಕನಿಗೂ ಬಂತು

    ನವದೆಹಲಿ: ಬುಧವಾರ ಒಂದೇ ದಿನ 22 ಕೊರೊನಾ ಕೇಸ್ ಪತ್ತೆಯಾಗಿದ್ದು, ಭಾರತದಲ್ಲಿ ಈಗ 29 ಮಂದಿಗೆ ಕೊರೊನಾ ಬಂದಿದೆ.

    ಹೊಸದಾಗಿ ಪೇಟಿಎಂ ಕಂಪನಿಯ ಉದ್ಯೋಗಿ ರಕ್ತದ ಮಾದರಿಯ ಪರೀಕ್ಷೆ ನಡೆಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಗುರುಗ್ರಾಮದ ಪೇಟಿಎಂ ಕಂಪನಿ ಮುಚ್ಚಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

    ಕೊರೊನಾ ಅತಿ ಹೆಚ್ಚು ವ್ಯಾಪಿಸುತ್ತಿರುವ ಇಟಲಿಯಿಂದ ಪೇಟಿಎಂ ಉದ್ಯೋಗಿ ಮರಳಿದ್ದರು. ಇಟಲಿಯ 16 ಮಂದಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಚಾಲಕನಿಗೆ ಸಹ ಈಗ ಕೊರೊನಾ ಬಂದಿದೆ.

    ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಈಗ ವಿದೇಶದಿಂದ ಆಗಮಿಸಿದ ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದೆ. ಈ ಮೊದಲು ಕೇವಲ 10 ದೇಶಗಳಿಂದ ಆಗಮಿಸಿದ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುತ್ತಿತ್ತು.

    ಜರ್ಮನಿಯ ಪ್ರಸಿದ್ಧ ಲುಫ್ಥಾನ್ಸ ಏರ್‍ಲೈನ್ಸ್ ತನ್ನ 750 ವಿಮಾನಗಳ ಪೈಕಿ 125 ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ. ಇಟಲಿಯಲ್ಲಿ 3,089 ಕೊರೊನಾ ಪ್ರಕರಣ ಪತ್ತೆಯಾಗಿದ್ದು 107 ಮಂದಿ ಮೃತಪಟ್ಟಿದ್ದಾರೆ.

  • ಬೆಂಗಳೂರಿನಲ್ಲಿ ಮಂಗಳೂರು ಬಾಂಬರ್ ಅರೆಸ್ಟ್

    ಬೆಂಗಳೂರಿನಲ್ಲಿ ಮಂಗಳೂರು ಬಾಂಬರ್ ಅರೆಸ್ಟ್

    ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಚ್ಚಾ ಬಾಂಬ್ ಇಟ್ಟು ಆತಂಕ ಸೃಷ್ಟಿಸಿದ್ದ ಬಾಂಬರ್ ಅರೆಸ್ಟ್ ಆಗಿದ್ದಾನೆ.

    ಮಣಿಪಾಲ ಮೂಲದ ಆದಿತ್ಯ ರಾವ್ ಬಂಧಿತ ಆರೋಪಿ. ಇಂದು ಬೆಳಗ್ಗೆ ಆದಿತ್ಯ ರಾವ್ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಕಚೇರಿಗೆ ಆಗಮಿಸಿ  ಶರಣಾಗಿದ್ದ. ಈಗ ಪೊಲೀಸರು ಈತನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

    ಯಾರು ಈ ಆದಿತ್ಯ ರಾವ್?
    ಉಡುಪಿಯ ಮಣಿಪಾಲ ಮೂಲದ ಎಂಜಿನಿಯರ್ ಆಗಿರುವ ಆದಿತ್ಯ ರಾವ್ ಈ ಹಿಂದೆಯೂ ಹುಸಿಬಾಂಬ್ ಕರೆ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ. 2012ರಲ್ಲಿ ಖಾಸಗಿ ಬ್ಯಾಂಕಲ್ಲೂ ಕೆಲಸ ಮಾಡಿದ್ದ ಈತ ಬೆಂಗಳೂರಿನಲ್ಲಿ ಈ ಹಿಂದೆ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಬೆದರಿಕೆ ಹಾಕಿದ್ದ. ಹುಸಿಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ 9 ತಿಂಗಳು ಜೈಲುವಾಸ ಅನುಭವಿಸಿದ್ದ. ಜೈಲುವಾಸ ಬಳಿಕ ಕೆಲಸ ಸಿಗದೇ ಮಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ

     

     

  • ರಶ್ಮಿಕಾಗೂ ರಾಜಕೀಯ ನಾಯಕರಿಗೂ ಇದೆಯೇ ಹಣಕಾಸಿನ ನಂಟು?

    ರಶ್ಮಿಕಾಗೂ ರಾಜಕೀಯ ನಾಯಕರಿಗೂ ಇದೆಯೇ ಹಣಕಾಸಿನ ನಂಟು?

    – 2.5 ಕೋಟಿ ರೂ. ಮೌಲ್ಯದ ಜಾಗ ಖರೀದಿ
    – ರಶ್ಮಿಕಾ ಹೆಸರಿನಲ್ಲಿ ಬೇನಾಮಿಯಾಗಿ ಹಣ ಹೂಡಿಕೆ?

    ಬೆಂಗಳೂರು/ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ಅವರಿಗೂ ರಾಜಕೀಯ ವ್ಯಕ್ತಿಗಳಿಗೂ ಹಣಕಾಸಿನ ನಂಟು ಇದೆಯೇ ಹೀಗೊಂದು ಅನುಮಾನ ಈಗ ಎದ್ದಿದೆ.

    ಈ ಹಿಂದೆ ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ದಾಳಿಯ ತನಿಖೆಯ ವೇಳೆ ಈ ವ್ಯಕ್ತಿಗಳು ರಶ್ಮಿಕಾ ಮಂದಣ್ಣ ಅವರ ಹೆಸರಿನಲ್ಲಿ ಬೇನಾಮಿಯಾಗಿ ಹಣವನ್ನು ಹೂಡಿಕೆ ಮಾಡಿದ್ದ ಬಗ್ಗೆ ಕೆಲ ವಿಚಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನುವ ಅನುಮಾನ ಈಗ ವ್ಯಕ್ತವಾಗಿದೆ.

    ಇಂದು ಬೆಳಗ್ಗೆ 7 ಗಂಟೆಯ ವೇಳೆಗೆ ಮೂರು ಕಾರುಗಳಲ್ಲಿ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ 10 ಐಟಿ ಅಧಿಕಾರಿಗಳು ಆಗಮಿಸಿ ರಶ್ಮಿಕಾ ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ಲೆಕ್ಕ ಪತ್ರವನ್ನು ಪರಿಶೀಲನೆ ನಡೆಸುತ್ತಿದ್ದಾರೆ. 2016ರ ಡಿಸೆಂಬರ್ 30 ರಂದು ಬಿಡುಗಡೆಯಾದ ‘ಕಿರಿಕ್ ಪಾರ್ಟಿ’ ಸಿನಿಮಾದ ಬಳಿಕ ಮನೆ ಮಾತಾಗಿರುವ ರಶ್ಮಿಕಾ ಮಂದಣ್ಣ ಆದಾಯ ಕೆಲ ವರ್ಷಗಳಿಂದ ಗಣನೀಯವಾಗಿ ಹೆಚ್ಚಳವಾಗಿದೆ. ಇದನ್ನೂ ಓದಿ: ನನ್ನ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ 5 ದಿನದಲ್ಲೇ ರಶ್ಮಿಕಾಗೆ ಐಟಿ ಶಾಕ್

    ತಂದೆ ಕಾಫಿ ಉದ್ಯಮಿ:
    ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಹೆಸರಿನಲ್ಲಿ ವಿರಾಜಪೇಟೆಯಲ್ಲಿ ಸೆರಿನಿಟಿ ಹಾಲ್ ಮತ್ತು ವಾಣಿಜ್ಯ ಸಂಕೀರ್ಣವಿದೆ. ವಿರಾಜಪೇಟೆ ಸುತ್ತಮುತ್ತ 50 ಎಕರೆ ಕಾಫಿ ತೋಟವನ್ನು ಮದನ್ ಮಂದಣ್ಣ ಹೊಂದಿದ್ದಾರೆ. ಅಷ್ಟೇ ಅಲ್ಲದೇ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ಸುಮಾರು 2.5 ಕೋಟಿ ರೂ. ಮೌಲ್ಯದ ಐದೂವರೆ ಎಕರೆ ಜಾಗ ಖರೀದಿ ಮಾಡಿದ್ದಾರೆ. ತಂದೆಯ ಹೆಸರಿನಲ್ಲಿ ರಶ್ಮಿಕಾ ಜಾಗ ಖರೀದಿ ಮಾಡಿದ್ದು ಇನ್ನು ಪತ್ರ ವ್ಯವಹಾರ ಮುಗಿದಿಲ್ಲ ಎನ್ನುವ ವಿಚಾರ ಈಗ ಲಭ್ಯವಾಗಿದೆ.

    ರಶ್ಮಿಕಾ ಕುಟುಂಬ ಇತ್ತೀಚೆಗೆ ವಿರಾಜಪೇಟೆ ಗೋಣಿಕೊಪ್ಪದಲ್ಲಿ 3 ಎಕರೆ ಜಾಗ ಖರೀದಿಸಿ ರೆಸಿಡೆನ್ಶಿಯಲ್ ಸ್ಕೂಲ್ ಪ್ರಾರಂಭ ಮಾಡುವ ಉದ್ದೇಶ ಹೊಂದಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ವಿರಾಜಪೇಟೆ ಸುತ್ತಮುತ್ತ ಸುಮಾರು 50 ಎಕರೆಯಷ್ಟು ಕಾಫಿ ತೋಟ ಖರೀದಿಯ ಬಗ್ಗೆಯೂ ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಹಲವು ವ್ಯವಹಾರಗಳಲ್ಲಿ ಹೂಡಿಕೆಯನ್ನು ಮಾಡಿದ್ದಾರೆ.

    ಮೂರು ತಿಂಗಳ ಹಿಂದೆ ರಶ್ಮಿಕಾ ಕೋಟ್ಯಂತರ ರೂ. ಬೆಲೆ ಬಾಳುವ ಕಾರು ಖರೀದಿ ಮಾಡಿದ್ದಾರೆ. ಜೊತೆಗೆ ಭೂಮಿ ಖರೀದಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೇ ರಶ್ಮಿಕಾ ನಗದು ರೂಪದಲ್ಲಿ ಸಂಭಾವನೆ ಪಡೆದಿರುವ ಕಾರಣ ತೆರಿಗೆ ಪಾವತಿಸಿಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ಮಾಹಿತಿಯ ಆಧಾರದ ಮೇರೆಗೆ ಐಟಿ ಅಧಿಕಾರಿಗಳು ರಶ್ಮಿಕಾ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಮದನ್ ಮಂದಣ್ಣ ಕಾಫಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ರಶ್ಮಿಕಾ ಅವರ ಎಲ್ಲ ಆಸ್ತಿಯೂ ತಂದೆ ಮದನ್ ಮಂದಣ್ಣ ಹೆಸರಲ್ಲಿದೆ ಎಂದು ಹೇಳಲಾಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಈಗ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯಾಗಿದ್ದು ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಸಿನಿಮಾಗಳಿಗೆ ಸಹಿ ಹಾಕಿರುವ ದಾಖಲೆ ಪತ್ರಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

    ಕಾಂಗ್ರೆಸ್ ನಾಯಕ:
    ರಶ್ಮಿಕಾ ತಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಮಾಜಿ ಸಚಿವರಾದ ಡಿಕೆ ಶಿವಕುಮಾರ್ ಮತ್ತು ಕೆಜೆ ಜಾರ್ಜ್ ಅವರ ಜೊತೆ ಅವರು ಉತ್ತಮ ಸಂಬಂಧ ಹೊಂದಿದ್ದ ಮದನ್ ಮಂದಣ್ಣ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ವಿರಾಜಪೇಟೆಯ ಪಟ್ಟಣ ಪಂಚಾಯತ್ ಸದಸ್ಯರಾಗಿ ಆಯ್ಕೆ ಆಗಿದ್ದರು.

    ಶೂಟಿಂಗ್ ನಲ್ಲಿರುವ ರಶ್ಮಿಕಾ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗ ಕೇಳಿ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಳಿಕ ದಾಳಿ ಕುರಿತ ಸತ್ಯಾಸತ್ಯತೆ ಹೊರಬರಲಿದೆ.

  • ಸಿದ್ದರಾಮಯ್ಯ ಬೆಂಬಲಿಗರ ಗೌಪ್ಯ ಸಭೆ

    ಸಿದ್ದರಾಮಯ್ಯ ಬೆಂಬಲಿಗರ ಗೌಪ್ಯ ಸಭೆ

    ಬೆಂಗಳೂರು: ಸಂಜಯನಗರದಲ್ಲಿರುವ ಮಾಜಿ ಸಚಿವ ಮಹದೇವಪ್ಪ ನಿವಾಸದಲ್ಲಿ ಸಿದ್ದರಾಮಯ್ಯ ಆಪ್ತರು ಗೌಪ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ ಆಪ್ತ ಕೆಲವು ಶಾಸಕರು, ಪರಿಷತ್ ಸದಸ್ಯರು ಹಾಗೂ ಮಾಜಿ ಸಂಸದರು, ಸಚಿವರುಗಳು ಸೇರಿದಂತೆ 15 ಮುಖಂಡರು ಭಾಗಿಯಾಗಿದ್ದರು.

    ವಿಪಕ್ಷ ನಾಯಕನ ಸ್ಥಾನಕ್ಕೆ ಹಾಗೂ ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಒಂದು ತಿಂಗಳು ಕಳೆದರೂ ಹೈ ಕಮಾಂಡ್ ಮನವೊಲಿಕೆಗೆ ಮುಂದಾಗದ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ.

    ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬೇರೆ ಮುಖಂಡರ ಅಭಿಪ್ರಾಯಕ್ಕೆ ಮಣೆ ಹಾಕದೇ ಪರಮೇಶ್ವರ್ ಅವರಿಗೆ ಮಾತ್ರ ಮಣೆ ಹಾಕಿದ್ದಾರೆ. ಅಲ್ಲದೇ ಲಾಬಿ ಮಾಡಲು ದೆಹಲಿಗೆ ಯಾರೂ ಬಾರದಂತೆ ಸೂಚಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಆತಂಕಕ್ಕೆ ಒಳಗಾದ ಸಿದ್ದರಾಮಯ್ಯ ಬಣ ಸೋಮವಾರದ ನಂತರ ದೆಹಲಿಗೆ ಹೋಗಿ ಲಾಬಿ ಮಾಡುವ ಸಂಬಂಧ ಮಹದೇವಪ್ಪ ನಿವಾಸದಲ್ಲಿ ಸಭೆ ನಡೆಸಿದ್ದಾರೆ.

    ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಸಾಧ್ಯವಿಲ್ಲ. ಅದರ ಬದಲು ಉಳಿದ ಎಐಸಿಸಿ ನಾಯಕರ ಭೇಟಿ ಮಾಡಿ ಸಿದ್ದರಾಮಯ್ಯ ಮನವೊಲಿಕೆಗೆ ಮುಂದಾಗುವಂತೆ ಸೋನಿಯಾ ಗಾಂಧಿ ಅವರನ್ನು ಒಪ್ಪಿಸಲು ಮಹದೇವಪ್ಪ ನೇತೃತ್ವದಲ್ಲಿ ದೆಹಲಿಗೆ ತೆರಳಲು ಬಣ ನಿರ್ಧಾರ ಕೈಗೊಂಡಿದೆ. ಬಹುತೇಕ ಸೋಮವಾರವೇ ಸಿದ್ದರಾಮಯ್ಯ ಬಣ ದೆಹಲಿಗೆ ತೆರಳುವ ಸಾಧ್ಯತೆಯಿದೆ.

  • ತಾಯಿ ತನ್ನ ಮಗನನ್ನು ಕೆಳಗಿಳಿಸಿದ್ದು ತಪ್ಪಾಯ್ತು – ಪೋಷಕರ ಕಣ್ಣೆದುರೇ ಚಿರತೆಗೆ ಆಹಾರ

    ತಾಯಿ ತನ್ನ ಮಗನನ್ನು ಕೆಳಗಿಳಿಸಿದ್ದು ತಪ್ಪಾಯ್ತು – ಪೋಷಕರ ಕಣ್ಣೆದುರೇ ಚಿರತೆಗೆ ಆಹಾರ

    – ಮೂರು ತಿಂಗಳಿನಲ್ಲಿ ಮೂರನೇ ಬಲಿ
    – ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ

    ತುಮಕೂರು: ನರಭಕ್ಷಕ ಚಿರತೆ 5 ವರ್ಷದ ಬಾಲಕನನ್ನು ಬಲಿ ತಗೆದುಕೊಂಡಿರುವ ಘಟನೆ ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ಇಂದು ಸಂಜೆ ನಡೆದಿದೆ.

    ದನ ಮೇಯಿಸಲು ಹೊಲಕ್ಕೆ ತೆರಳಿದ್ದ ತಂದೆ ಶಿವಕುಮಾರ್, ತಾಯಿ ಪುಷ್ಪಲತಾ ಜತೆ ಹಠವಿಡಿದು ಬಾಲಕ ಸಮರ್ಥ ಗೌಡ(5) ಕೂಡ ತೆರಳಿದ್ದ. ಅಲ್ಲೇ ಪಕ್ಕದಲ್ಲಿ ಆಟವಾಡುವಾಗ ಕಿರಾತಕ ಚಿರತೆ ಏಕಾಏಕಿ ದಾಳಿ ನಡೆಸಿ ಬಾಲಕನ ರಕ್ತಹೀರಿದೆ.

    ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸಮರ್ಥ್ ಗೌಡನ ಕುತ್ತಿಗೆಗೆ ಬಾಯಿಹಾಕಿ ರಕ್ತ ಹೀರುವ ಸಂದರ್ಭದಲ್ಲಿ ಅಪ್ಪ, ಅಮ್ಮ ಎಂದು ಕಣ್ಣೀರಿಟ್ಟಿದ್ದಾನೆ. ತಮ್ಮ ಕಣ್ಣೆದುರೇ ಇದ್ದ ಒಬ್ಬನೇ ಮಗ ಚಿರತೆಗೆ ಆಹಾರವಾಗುತ್ತಿದ್ದನ್ನು ಕಂಡು ಚೀರಾಡಿ ಸಹಾಯಕ್ಕೆ ಧಾವಿಸುವಷ್ಟರಲ್ಲಿ ಚಿರತೆ ಅರಣ್ಯದೊಳಗೆ ಜಿಗಿದು ಕಣ್ಮರೆಯಾಗಿದೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುಟಾಣಿ ಬಾಲಕನ ಶವ ಕಂಡು ಸ್ಥಳೀಯರು ಮರುಗಿದರು. ಚಿರತೆ ಹಿಡಿಯಲಾಗದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು.

    ಇದೇ ಚಿರತೆ ಹೆಬ್ಬೂರು ಹೋಬಳಿ ಬನ್ನಿಕುಪ್ಪೆ ಲಕ್ಷ್ಮಮ್ಮ, ಕುಣಿಗಲ್ ತಾಲೂಕು ದೊಡ್ಡಮರಳವಾಡಿ ಆನಂದಯ್ಯ ಎಂಬುವವರನ್ನು ತಿಂದು ಮುಗಿಸಿದ ಘಟನೆ ಹಸಿರಾಗಿರುವಾಗಲೇ ಈಗ ಮತ್ತೊಂದು ಭಯಾನಕ ಘಟನೆ ನಡೆದಿದೆ.

    ದನ ಕಾಯಲು ತೆರಳುವಾಗ ನಾನು ಬರುತ್ತೇನೆ ಎಂದು ಹಠವಿಡಿದು ಬಂದ ಮುದ್ದು ಕಂದ ಸಮರ್ಥ್ ಗೌಡನನ್ನು ಆತನ ತಾಯಿ ಪುಷ್ಪಲತಾ ಎಚ್ಚರಿಕೆಯಿಂದಲೇ ಎತ್ತಿಕೊಂಡು ಜೋಪಾನ ಮಾಡಿದ್ದರು. ಪೊದೆಯಲ್ಲಿ ಚಿರತೆಯಿರುವುದನ್ನು ಗ್ರಹಿಸಿ ಬೆಚ್ಚಿ ಓಡಿಹೋದ ಹಸುಗಳನ್ನು ನೋಡಲು ಮಗು ಕೆಳಗಿಳಿಸಿ ಸ್ವಲ್ಪ ದೂರ ಹೋಗಿದ್ದೇ ತಡ ನರ ಭಕ್ಷಕ ಚಿರತೆ ಪುಟಾಣಿ ಕಂದನ ರಕ್ತ ಹೀರಿದೆ. ಅಪಾಯ ಅರಿತು ಕೆಲವೇ ನಿಮಿಷದಲ್ಲಿ ತಾಯಿ ವಾಪಸಾದರೂ ಕಾಲ ಮಿಂಚಿ ಹೋಗಿತ್ತು.

  • ಹಾಲಿ 3 ಉಪಮುಖ್ಯಮಂತ್ರಿ ಸ್ಥಾನಗಳು ರದ್ದು? – ಬಿಜೆಪಿಯಲ್ಲಿ ನಡೆಯುತ್ತಿದೆ ಗಂಭೀರ ಮಂಥನ

    ಹಾಲಿ 3 ಉಪಮುಖ್ಯಮಂತ್ರಿ ಸ್ಥಾನಗಳು ರದ್ದು? – ಬಿಜೆಪಿಯಲ್ಲಿ ನಡೆಯುತ್ತಿದೆ ಗಂಭೀರ ಮಂಥನ

    ಬೆಂಗಳೂರು: ಸಚಿವ ಸಂಪುಟ ವಿಳಂಬ, ಸಚಿವ ಸ್ಥಾನಗಳಿವೆ ಲಾಬಿಗಳು ನಡೆಯುತ್ತಿರುವ ನಡುವೆಯೇ ಮಹತ್ವದ ಚಿಂತನ-ಮಂಥನ ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿದೆ. ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಚಿವ ಸ್ಥಾನಗಳ ಜೊತೆ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕೂ ಲಾಬಿ ಜೋರಾಗಿದೆ.

    ಒಂದೇ ಸಮುದಾಯದ ಇಬ್ಬರು ಪ್ರಭಾವಿಗಳು ಸಚಿವ ಸ್ಥಾನಕ್ಕಾಗಿ ಜಟಾಪಟಿ ನಡೆಸುತ್ತಿದ್ದಾರೆ. ಒಬ್ಬ ಹಾಲಿ ಉಪಮುಖ್ಯಮಂತ್ರಿಗಳು ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಇದು ಸಿಎಂ ಯಡಿಯೂರಪ್ಪನವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

    ಉಪಮುಖ್ಯಮಂತ್ರಿ ಸ್ಥಾನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ತಲೆಯಲ್ಲಿ ಮತ್ತೊಂದು ಆಲೋಚನೆ ನಡೆಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾರಿಗೂ ಉಪಮುಖ್ಯಮಂತ್ರಿ ಸ್ಥಾನ ಕೊಡುವುದು ಬೇಡ. ಜೊತೆಗೆ ಇರುವ ಹಾಲಿ ಮೂರು ಉಪಮುಖ್ಯಮಂತ್ರಿ ಸ್ಥಾನಗಳನ್ನೂ ರದ್ದು ಮಾಡುವುದು. ಈ ಆಲೋಚನೆಗೆ ಈಗಾಗಲೇ ರೆಕ್ಕೆ ಪುಕ್ಕ ಹುಟ್ಟಿಕೊಂಡು ಬಿಜೆಪಿ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ, ವಿವಾದ ಹುಟ್ಟು ಹಾಕಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಸಹ ಆಪ್ತರ ಜೊತೆ ಈ ಬಗ್ಗೆ ಗಹನವಾದ ಚರ್ಚೆಯಲ್ಲಿ ಮುಳುಗಿದ್ದಾರೆ. ಸದ್ಯದಲ್ಲೇ ಹೈಕಮಾಂಡ್ ಜೊತೆಗೂ ಉಪಮುಖ್ಯಮಂತ್ರಿ ಸ್ಥಾನಗಳನ್ನು ರದ್ದು ಮಾಡುವ ವಿಚಾರದ ಕುರಿತು ಯಡಿಯೂರಪ್ಪ ಚರ್ಚೆ ಮಾಡಲಿದ್ದಾರೆ. ಯಡಿಯೂರಪ್ಪನವರ ಈ ನಡೆ ಇದೀಗ ಹಾಲಿ ಉಪ ಮುಖ್ಯಮಂತ್ರಿಗಳಲ್ಲಿ ಆತಂಕ ಹೆಚ್ಚಿಸಿದೆ.

    ಸದ್ಯದ ಸಂಕೀರ್ಣ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳು ಬಹಿರಂಗವಾಗಿ ಎಲ್ಲೂ ಉಪಮುಖ್ಯಮಂತ್ರಿ ಸ್ಥಾನಗಳನ್ನು ರದ್ದು ಮಾಡುವ ಪ್ರಸ್ತಾಪದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬದಲಾಗಿ ತಮ್ಮ ಆಪ್ತ ಶಾಸಕರ ಮೂಲಕ ಡಿಸಿಎಂ ಹುದ್ದೆಗಳ ರದ್ದು ವಿಷಯವನ್ನು ಚರ್ಚೆಗೆ ತೇಲಿಸಿಬಿಟ್ಟುದ್ದಾರೆ. ಯಡಿಯೂರಪ್ಪ ಅವರ ಆಪ್ತ ಎಂಪಿ ರೇಣುಕಾಚಾರ್ಯ ಈಗಾಗಲೇ ಎರಡು ಸಲ ಬಹಿರಂಗವಾಗಿ ಹಾಲಿ ಉಪಮುಖ್ಯಮಂತ್ರಿ ಸ್ಥಾನಗಳ ರದ್ದು ಮಾಡುವ ಬಗ್ಗೆ ಮಾಧ್ಯಮಗಳಲ್ಲಿ ಮಾತಾಡಿದ್ದಾರೆ.

    ಇವತ್ತು ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಭೇಟಿ ಮಾಡಿದ ರೇಣುಕಾಚಾರ್ಯ ಡಿಸಿಎಂ ಹುದ್ದೆಗಳನ್ನು ರದ್ದು ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಹೊರಬಂದು ಮಾಧ್ಯಮಗಳಿಗೂ ರೇಣುಕಾಚಾರ್ಯ ಅದೇ ಹೇಳಿಕೆಯನ್ನು ಪುನರುಚ್ಚರಿಸಿದ್ದರು. ಮುಖ್ಯಮಂತ್ರಿ ಆಗಿ ಖುದ್ದು ಯಡಿಯೂರಪ್ಪ ಅವರೇ ಸಮರ್ಥರಾಗಿದ್ದಾರೆ. ಎಲ್ಲ ನಿರ್ಧಾರಗಳನ್ನು ಯಡಿಯೂರಪ್ಪ ಅವರೇ ಕೈಗೊಳ್ಳಲು ಸಮರ್ಥರಿದ್ದಾರೆ. ಹಾಗಾಗಿ ಉಪಮುಖ್ಯಮಂತ್ರಿ ಸ್ಥಾನಗಳ ಅಗತ್ಯ, ಅನಿವಾರ್ಯತೆ ಇಲ್ಲ. ಇದರಿಂದ ಅನಗತ್ಯ ಪವರ್ ಸೆಂಟರ್ ಗಳ ಸೃಷ್ಟಿಯಾಗುವುದಲ್ಲದೇ ಗುಂಪುಗಾರಿಕೆಗೂ ಅವಕಾಶ ಮಾಡಿಕೊಟ್ಟಂತಾಗುತ್ತದೆ ಅನ್ನೋದು ಶಾಸಕ ರೇಣುಕಾಚಾರ್ಯ ಅವರ ಅಭಿಪ್ರಾಯ.

    ಅಷ್ಟಕ್ಕೂ ಉಪಮುಖ್ಯಮಂತ್ರಿ ಸ್ಥಾನಗಳ ಸೃಷ್ಟಿಗೆ ಯಡಿಯೂರಪ್ಪ ನವರ ವಿರೋಧ ಮೊದಲಿಂದಲೂ ಇದೆ. ಉಪಮುಖ್ಯಮಂತ್ರಿ ಸ್ಥಾನಗಳನ್ನು ಯಾರಿಗೂ ಕೊಡೋದು ಬೇಡ ಅಂತ ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಯಡಿಯೂರಪ್ಪ ಹೈಕಮಾಂಡಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಆಗ ಹೈಕಮಾಂಡ್ ಯಡಿಯೂರಪ್ಪರನ್ನು ಕಂಟ್ರೋಲ್ ಮಾಡಬೇಕೆಂಬ ಉದ್ದೇಶದಿಂದ ಅವರ ಮನವಿ ನಿರಾಕರಿಸಿ ಮೂವರಿಗೆ ಉಪಮುಖ್ಯಮಂತ್ರಿ ಮಾಡಿತ್ತು. ಆದರೆ ಈಗ ಸನ್ನಿವೇಶ ಬದಲಾಗಿದೆ. ಉಪಚುನಾವಣೆ ಬಳಿಕ ಪಕ್ಷದಲ್ಲಿ, ಸರ್ಕಾರದಲ್ಲಿ, ರಾಜ್ಯದಲ್ಲಿ ಯಡಿಯೂರಪ್ಪ ಶಕ್ತಿ, ಸಾಮರ್ಥ್ಯ ವರ್ಚಸ್ಸು ಹೆಚ್ಚಾಗಿದೆ.

    ಈಗ ಯಡಿಯೂರಪ್ಪನವರನ್ನು ಯಾವ ರೀತಿ ನಿಯಂತ್ರಿಸಬೇಕು ಎನ್ನುವ ಹೈಕಮಾಂಡ್ ನಾಯಕರ ಪ್ರಯತ್ನಗಳೂ ಕೈ ಹಿಡಿಯಲ್ಲ. ಹಾಗಾಗಿ ಈಗ ಯಡಿಯೂರಪ್ಪ ಹೈಕಮಾಂಡಿಗೆ ಉಪಮುಖ್ಯಮಂತ್ರಿ ಸ್ಥಾನ ಬೇಡ ಅಂತ ಮತ್ತೊಮ್ಮೆ ಒತ್ತಾಯ ಹಾಕಿದರೆ ಅಷ್ಟು ಸುಲಭಕ್ಕೆ ಅದನ್ನು ಹೈಕಮಾಂಡ್ ನಿರಾಕರಿಸುವ ಪರಿಸ್ಥಿತಿಯಲ್ಲಿ ಇಲ್ಲ. ಆದರೂ ರಾಜ್ಯದ ಮಟ್ಟಿಗೆ ಹೈಕಮಾಂಡ್ ಯಾವಾಗಲೂ ಬಿಜೆಪಿಯಲ್ಲಿ ಸ್ಟ್ರಾಂಗೇ ಆಗಿರುವುದರಿಂದ ಅದರ ನಿರ್ಧಾರ ಏನು ಅನ್ನುವುದು ಯಾರಿಗೂ ಗೊತ್ತಿಲ್ಲ. ಸದ್ಯ ತೂಗುವ ತಕ್ಕಡಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ರದ್ದು ಮಾಡುವ ಪ್ರಸ್ತಾಪ ಇದೆ. ತಕ್ಕಡಿ ಯಾವ ಕಡೆಗೆ ವಾಲುತ್ತದೋ ಕಾದು ನೋಡಬೇಕಿದೆ.

  • ಉಪಚುನಾವಣೆಗೆ ತಡೆ – ಅತಂತ್ರರಿಗೆ ಬಿಗ್ ರಿಲೀಫ್

    ಉಪಚುನಾವಣೆಗೆ ತಡೆ – ಅತಂತ್ರರಿಗೆ ಬಿಗ್ ರಿಲೀಫ್

    ನವದೆಹಲಿ: ಕರ್ನಾಟಕ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು 15 ಮಂದಿ ಅತಂತ್ರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೇಸ್ ಇತ್ಯರ್ಥ ಆದ ಮೇಲೆ ಚುನಾವಣೆ ನಡೆಯಲಿ ಎಂದು ಹೇಳಿದ ತ್ರಿಸದಸ್ಯ ಪೀಠ ಮುಂದಿನ ವಿಚಾರಣೆಯನ್ನು ಅ.22ಕ್ಕೆ ಮುಂದೂಡಿದೆ.

    ಪ್ರಕರಣದ ತೀರ್ಪು ಬರುವವರೆಗೂ ಚುನಾವಣೆಯನ್ನು ಮುಂದೂಡಬಹುದು ಎಂದು ಚುನಾವಣಾ ಆಯೋಗದ ವಕೀಲರು ತಿಳಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಈಗ ಅ.22ರಿಂದ ದೀರ್ಘ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ತೆರವಾದ ಕ್ಷೇತ್ರಗಳನ್ನು 6 ತಿಂಗಳಿಗಿಂತ ಹೆಚ್ಚು ಕಾಲ ಖಾಲಿ ಬಿಡುವಂತಿಲ್ಲ. ಹೀಗಾಗಿ 6 ತಿಂಗಳೊಳಗೆ ಸುಪ್ರೀಂ ಕೋರ್ಟ್‌ ಆದೇಶ ಪ್ರಕಟವಾಗಬೇಕಿದೆ.

    ಶಾಸಕ ಸ್ಥಾನದ ಅನರ್ಹತೆಯನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟಿನಲ್ಲಿ ಅನರ್ಹರು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ತ್ವರಿತ ವಿಚಾರಣೆಗೆ ನಿರಾಕರಿಸಿತ್ತು. ಅಲ್ಲದೇ ಸೆ. 16ರಂದು ಪ್ರಕರಣ ವಿಚಾರಣೆಗೆ ಬಂದರೂ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದ ಪರಿಣಾಮ ಪ್ರಕರಣ ವಿಚಾರಣೆ ಮುಂದೂಡಲಾಗಿತ್ತು. ಹೀಗಾಗಿ ಸೆ.22 ರಿಂದ ವಿಚಾರಣೆ ಆರಂಭಗೊಂಡಿತ್ತು.

    ರಾಜ್ಯಗಳಲ್ಲಿ 15 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ಮುಂದಾಗಿತ್ತು. ನಾಮಪತ್ರ ಸಲ್ಲಿಕೆ ಮಾಡಲು ಸೆ.30 ಅಂತಿಮ ದಿನವಾಗಿತ್ತು. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 3 ಕಡೆಯ ದಿನಾಂಕವಾಗಿತ್ತು. ಅಕ್ಟೋಬರ್ 21 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಅ.24 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿತ್ತು. ಹೀಗಾಗಿ ಸೆ.30ರ ಒಳಗಡೆ ಪ್ರಕರಣ ಇತ್ಯರ್ಥವಾಗದಿದ್ದರೆ ಅನರ್ಹರು ಸಂಕಷ್ಟಕ್ಕೆ ಸಿಲುಕವ ಸಾಧ್ಯತೆ ಇತ್ತು.

    ಚುನಾವಣಾ ಆಯೋಗದ ಘೋಷಣೆಯಂತೆ ಹಿರೇಕೆರೂರು ಅನರ್ಹ ಶಾಸಕರಾದ ಬಿ.ಸಿ.ಪಾಟೀಲ್, ಯಶವಂತಪುರದ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡರ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲು ಆಯೋಗ ಸಿದ್ಧತೆ ನಡೆಸಿತ್ತು.