Tag: ಕನ್ನಡಕ

  • ಯೂತ್ಸ್‌ಗೆ ಹೆಚ್ಚಾಯ್ತು ಕನ್ನಡಕದ ಮೇಲೆ ಕ್ರಶ್‌ – ಟ್ರೆಂಡಿ ಕನ್ನಡಕಗಳ ವಿನ್ಯಾಸ ನೋಡಿ…

    ಯೂತ್ಸ್‌ಗೆ ಹೆಚ್ಚಾಯ್ತು ಕನ್ನಡಕದ ಮೇಲೆ ಕ್ರಶ್‌ – ಟ್ರೆಂಡಿ ಕನ್ನಡಕಗಳ ವಿನ್ಯಾಸ ನೋಡಿ…

    ಹುತೇಕ ಕಾಲೇಜು ಹುಡುಗ ಹುಡುಗಿಯರು ಟ್ರೆಂಡಿಯಾಗಿ ಸ್ಪೆಕ್ಸ್ ಧರಿಸಲು ಮುಂದಾಗಿದ್ದಾರೆ. ಕನ್ನಡಕ ಧರಿಸಿದರೆ ಸಾಕು ಕಣ್ಣು ಹೋಯ್ತೆ ಎಂದು ರೇಗಿಸುವ ಕಾಲವೊಂದಿತ್ತು. ಈಗ ಬಿಂಕ ಬಿಗುಮಾನಗಳನ್ನು ಬದಿಗಿಟ್ಟು ಅದನ್ನೇ ಫ್ಯಾಷನ್‌ಆಗಿ ಬದಲಾಯಿಸಿಕೊಂಡಿದ್ದಾರೆ. ಕಣ್ಣಿನ ತಪಾಸಣಾ ಕೇಂದ್ರಗಳು ಹಾಗೂ ಕನ್ನಡಕ ಕಂಪನಿಗಳು ಸಹ ಗ್ರಾಹಕರ ಅಭಿರುಚಿಗೆ ತಕ್ಕಂತೆ ಪೂರ್ಣ ಮತ್ತು ಅರ್ಧ ಚೌಕಟ್ಟುವುಳ್ಳ ಫ್ರೇಮ್ ಗ್ಲಾಸ್, ವೈರ್ ಫ್ರೇಮ್‌ಗ್ಲಾಸ್, ಪ್ಲಾಸ್ಟಿಕ್ ಫ್ರೇಮ್ ಹಾಗೂ ಲೋ ಬ್ರಿಡ್ಜ್‌ಗ್ಲಾಸ್‌, ಸಿಂಗಲ್ ಲೈನ್‌ಫ್ರೇಮ್ ಹಾಗೂ ಮರದ ವಿನ್ಯಾಸದಲ್ಲಿ ಕಾಣುವಂತೆ ವಿನ್ಯಾಸಗೊಳಿಸಿದ ಫ್ರೇಮ್‌ಗ್ಲಾಸ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ.

    ಯೂತ್ ಐಕಾನ್:
    ವಯಸ್ಸಾದವರು ಮಾತ್ರ ಕನ್ನಡಕ ಧರಿಸಬೇಕು ಎಂಬ ಜಮಾನಕ್ಕೆ ಗುಡ್‌ಬೈ ಹೇಳಿ ಇಂದಿನ ಯುವಜನತೆ ಕನ್ನಡಕದ ಮೋಹಿಗಳಾಗಿ ವರ್ಷಗಳೇ ಕಳೆದಿವೆ. ವೈವಿಧ್ಯಮಯ ವಿನ್ಯಾಸ ಬೀರುವ ಸ್ಪೆಕ್ಸ್ ಮುಖದಲ್ಲಿದ್ದು, ಅವರ ಸೌಂದರ್ಯ ದುಪ್ಪಟ್ಟು ಮಾಡುತ್ತಿದೆ. ಯಾರೂ ಕೂಡ ಮೂಗು ಮುರಿಯದೇ ಕನ್ನಡಕವನ್ನು ಪ್ರೀತಿಸುತ್ತಿದ್ದಾರೆ. ಅದೇ ಈಗ ಹೊಸದೊಂದು ಟ್ರೆಂಡ್ ಆಗಿದೆ.

    ಹುಡುಗಿಯರ ಕ್ರಶ್:
    ಹಿಂದೆಲ್ಲಾ ಸೋಡಾಬುಡ್ಡಿ ಎಂದು ರೇಗಿಸುತ್ತಾರೆ ಎಂಬ ಕಾರಣಕ್ಕಾಗಿಯೇ ಕಣ್ಣಿನ ಸಮಸ್ಯೆ ಇದ್ದರೂ ಕನ್ನಡಕ ಹಾಕಿಕೊಳ್ಳಲು ಸಂಕೋಚ ಪಡುತ್ತಿದ್ದ ಹೆಣ್ಣುಮಕ್ಕಳಿಗೀಗ ಕನ್ನಡಕದ ಮೇಲೆಯೇ ಕ್ರಶ್ ಹೆಚ್ಚಾಗಿದೆ. ವೈವಿಧ್ಯಮಯ ವಿನ್ಯಾಸದ ಸ್ಪೆಕ್ಸ್ ಧರಿಸಿ ತಿರುಗಾಡುತ್ತಾರೆ. ಕಾಲೇಜುಗಳಲ್ಲೂ ಇಂತಹದ್ದೇ ಟ್ರೆಂಡ್ ಹುಟ್ಟಿಕೊಂಡಿದೆ.

    ಕೇಶವಿನ್ಯಾಸವೂ ಬದಲಾಗಲಿ:
    ಎಲ್ಲ ರೀತಿಯ ಕನ್ನಡಕ ಎಲ್ಲ ರೀತಿಯ ಕೇಶ ವಿನ್ಯಾಸಕ್ಕೆ ಸೂಕ್ತವಾಗುವುದಿಲ್ಲ. ಅಲ್ಲದೆ ಹುಡುಗಿಯರು ರೌಂಡ್, ಸ್ಟೇರ್, ಓವೆಲ್ ಶೈಲಿಯ ಫ್ರೇಮ್ ಇರುವ ಕನ್ನಡಕವನ್ನು ಧರಿಸಿದರೆ ಬಹಳ ಆಕರ್ಷಕವಾಗಿ ಕಾಣುತ್ತಾರೆ. ಹಾಗೆಯೇ ಹುಡುಗರು ಸ್ಪೆಕ್ಸ್‌ಗೆ ತಕ್ಕಂತಹ  ಫ್ರೀ ಹೇರ್‌ಸ್ಟೈಲ್‌ ಮಾಡಿಕೊಂಡರೆ ಸ್ಯೂಟ್ ಆಗುತ್ತದೆ. ನಿಮ್ಮ ಉಡುಗೆಯೂ ಅದಕ್ಕೆ ಮ್ಯಾಚಿಂಗ್ ಆಗುವಂತಿರಬೇಕು.

    ಒಂದಿಷ್ಟು ಸಲಹೆ

    • ಯಾವುದೇ ಕನ್ನಡಕ ಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ
    • ನಿಮ್ಮ ಮುಖಕ್ಕೆ ಹೋಲಿಕೆಯಾಗುವ ಸ್ಪೆಕ್ಸ್ ಆಯ್ಕೆ ಮಾಡಿಕೊಳ್ಳಿ. ಇಲ್ಲವಾದರೆ ಎಲ್ಲರ ಮುಂದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ.
    • ಸ್ಕ್ಯಾಚ್‌ಪವರ್ ಇರುವ ಸ್ಪೆಕ್ಸ್ ಉಪಯೋಗಿಸಬೇಡಿ. ಇದರಿಂದ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಂಭವವಿರುತ್ತದೆ.
    • ನೀವು ಫ್ಯಾಷನೇಬಲ್ ಆಗಿ ಕಾಣಬೇಕಾದರೆ ದಿನಕ್ಕೊಂದು ಪ್ರೇಮ್ ಇರುವುದನ್ನು ಉಪಯೋಗಿಸಿ.
    • ನಿಮ್ಮ ಉಡುಗೆಗೆ ತಕ್ಕಂತೆ ಕಲರ್‌ಫುಲ್ ಕನ್ನಡಕ ಧರಿಸಿದರೆ ಮತ್ತಷ್ಟು ಅಂದವಾಗಿ ಕಾಣುತ್ತೀರಿ.

  • 2.55 ಕೋಟಿಗೆ ಮಾರಾಟವಾಯ್ತು ಗಾಂಧಿ ಕನ್ನಡಕ – ಏನಿದರ ವಿಶೇಷತೆ?

    2.55 ಕೋಟಿಗೆ ಮಾರಾಟವಾಯ್ತು ಗಾಂಧಿ ಕನ್ನಡಕ – ಏನಿದರ ವಿಶೇಷತೆ?

    ಲಂಡನ್: ಮಹಾತ್ಮ ಗಾಂಧಿಜೀ ಅವರು ಧರಿಸುತ್ತಿದ್ದರು ಎಂದು ಹೇಳಲಾದ ಚಿನ್ನ ಲೇಪಿತ ಕನ್ನಡಕವನ್ನು ಬ್ರಿಟನ್‍ನಲ್ಲಿ 2.55 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.

    ಕಳೆದ ನಾಲ್ಕು ವಾರದ ಹಿಂದೆ ಈ ಕನ್ನಡ ನಮಗೆ ಸಿಕ್ಕಿದೆ. ಇದನ್ನು ಮಾರಾಟ ಮಾಡಿದವರು, ನಮ್ಮ ತಂದೆಯ ಚಿಕ್ಕಪ್ಪನಿಗೆ ಸ್ವತಃ ಗಾಂಧಿಜೀಯರೆ ಈ ಕನ್ನಡಕವನ್ನು ಗಿಫ್ಟ್ ಆಗಿ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಅಸಾಮಾನ್ಯ ವಸ್ತುವಿಗಾಗಿ ಬಿಡ್ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದೆ.

    https://www.instagram.com/p/CEKTZfgnCwt/

    ಈ ಕನ್ನಡಕವನ್ನು ಮಾರಾಟ ಮಾಡುವವರು ಕೇವಲ 14 ಲಕ್ಷ ಮೂಲ ಬೆಲೆಯನ್ನು ಇಟ್ಟಿದ್ದರು. ಆದರೆ ಈ ಕನ್ನಡಕ ಹಾರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 2.55 ಕೋಟಿ ರೂ.ಗೆ ಮಾರಾಟವಾಗಿದೆ. ನೈಋತ್ಯ ಇಂಗ್ಲೆಂಡ್‍ನ ದಕ್ಷಿಣ ಗ್ಲೌಸೆಸ್ಟರ್‍ಶೈರ್ ನಲ್ಲಿರುವ ಮ್ಯಾಂಗೋಟ್ಸ್ ಫೀಲ್ಡ್ ನ ಅನಾಮಾಧೇಯ ವೃದ್ಧರೊಬ್ಬರು ಈ ಕನ್ನಡಕವನ್ನು ಖರೀದಿ ಮಾಡಿದ್ದಾರೆ. ಜೊತೆಗೆ ಅವರ ಮಗಳ ಕೈಯಿಂದ ಹಣವನ್ನು ಕೊಡಿಸಿದ್ದಾರೆ ಎಂದು ವರದಿಯಾಗಿದೆ.

    https://www.instagram.com/p/CEKBgSinGtc/

    ಈ ಕನ್ನಡಕವು ಇಂಗ್ಲೆಂಡ್‍ನ ಉದ್ಯಮಿಯೊಬ್ಬರ ಮನೆಯಲ್ಲಿ ಸಿಕ್ಕಿದ್ದು, ಅವರು ಹೇಳಿರುವ ಮಾಹಿತಿ ಪ್ರಕಾರ 1910 ಮತ್ತು 1930ರ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಚಿಕ್ಕಪ್ಪನಿಗೆ ಈ ಕನ್ನಡಕವನ್ನು ಸ್ವತಃ ಗಾಂಧಿಜೀಯವರೆ ಕೊಟ್ಟಿದ್ದರು ಎಂದು ಅವರ ತಂದೆ ಉದ್ಯಮಿಗೆ ಹೇಳಿದ್ದರಂತೆ. ಹೀಗಾಗಿ ಇದನ್ನು ಅವರು ಮಾರಾಟ ಮಾಡಿದ್ದಾರೆ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ತಿಳಿಸಿದೆ.

    ಕನ್ನಡಕದ ವಿಶೇಷತೆ:
    ಈ ಕನ್ನಡಕವನ್ನು ಗಾಂಧಿಜೀಯವರು 1920ರಲ್ಲಿ ಬಳಸಿದ್ದು ಎನ್ನಲಾಗಿದೆ. ಇದು ಚಿನ್ನ ಲೇಪಿತ ವೃತ್ತಾಕಾರದ ರಿಮ್ಡ್ ಕನ್ನಡಕವಾಗಿದೆ. ಇದರಲ್ಲಿರುವ ಲೇನ್ಸ್ ದುಬಾರಿ ಬೆಲೆಯಾದ್ದಗಿದ್ದು, ಇದರ ಸುತ್ತ ಚಿನ್ನದ ಲೇಪನದ ತಂತಿಯನ್ನು ಅಳವಡಿಸಲಾಗಿದೆ. ಜೊತೆಗೆ ಇದರಿಲ್ಲಿರುವ ನೋಸ್ ಬಾರ್ ಗಳಲ್ಲೂ ಕೂಡ ಚಿನ್ನದ ಲೇಪಿನವಿದೆ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ಮಾಹಿತಿ ನೀಡಿದೆ.

    ಗಾಂಧಿಜೀಯವರು ಸೌತ್ ಆಫ್ರಿಕಾದಲ್ಲಿ ಇದ್ದ ಸಮಯದಲ್ಲಿ ಇದನ್ನು ಉಡುಗೊರೆಯಾಗಿ ಕೊಟ್ಟಿರಬಹುದು. ಗಾಂಧಿಜೀಯವರು ತಾವು ಉಪಯೋಗಿಸಿದ ಮತ್ತು ತಮಗೆ ಬೇಡವಾದ ವಸ್ತುಗಳನ್ನು ಹಾಳು ಮಾಡದೆ. ಅವುಗಳನ್ನು ತಮ್ಮ ಆಪ್ತರಿಗೆ ಮತ್ತು ತಮಗೆ ಸಹಾಯ ಮಾಡಿದವರೆಗೆ ಉಡುಗೊರೆಯಾಗಿ ನೀಡುತ್ತಿದ್ದರು ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ವಿವರಣೆಯಲ್ಲಿ ತಿಳಿಸಿದೆ.

  • ಕನ್ನಡಕಕ್ಕಾಗಿ ಪರದಾಡಿದ ಸಿದ್ದರಾಮಯ್ಯ

    ಕನ್ನಡಕಕ್ಕಾಗಿ ಪರದಾಡಿದ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕನ್ನಡಕಕ್ಕಾಗಿ ಪರದಾಡಿದ ಪ್ರಸಂಗ ಇಂದು ಕೆ.ಆರ್.ಪುರದಲ್ಲಿ ನಡೆದಿದೆ.

    ಕೆ.ಆರ್.ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಸಿದ್ದರಾಮಯ್ಯ ಅವರು ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದರು. ಚೆನ್ನಸಂದ್ರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಹೂವು, ತುಳಸಿ ಹಾರ ಹಾಕಿದರು. ಬಳಿಕ ಹಾರ ತೆಗೆಯುತ್ತಿದ್ದಾಗ ಸಿದ್ದರಾಮಯ್ಯ ಅವರ ಕನ್ನಡಕ ಹಾರಕ್ಕೆ ಸಿಕ್ಕಿಹಾಕಿಕೊಂಡು ಬಿದ್ದಿತ್ತು.

    ಕನ್ನಡಕ ಕೆಳಗೆ ಬೀಳುತ್ತಿದ್ದಂತೆ ಸಿದ್ದರಾಮಯ್ಯ ಅವರು ಹುಡುಕಾಟ ಆರಂಭಿಸಿದರು. ಆಗ ಎಂ.ನಾರಾಯಣಸ್ವಾಮಿ ಅವರು ಹಾರದಲ್ಲಿ ಸಿಲುಕಿದ ಕನ್ನಡಕವನ್ನು ತೆಗೆದುಕೊಟ್ಟರು. ಬಳಿಕ ಕನ್ನಡಕ ಹಾಕಿಕೊಂಡ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸಿದರು.

    ಈ ಚುನಾವಣೆಯನ್ನು ನಾವು ಬಯಸಿರಲಿಲ್ಲ. ಅನಗತ್ಯವಾಗಿ ಬಂದಿದೆ. ಅನರ್ಹ ಶಾಸಕ ಭೈರತಿ ಬಸವರಾಜ್ ಕಾಂಗ್ರೆಸ್‍ನಿಂದ ಎರಡು ಬಾರಿ ಆಯ್ಕೆಯಾಗಿದ್ದರು. ನಾನು ಹೋರಾಟ ಮಾಡಿ ಅವರಿಗೆ ಟಿಕೆಟ್ ಕೊಡಿಸಿದ್ದೆ. ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿ ಲೂಟಿ ಹೊಡೆದರು. ಈಗ ಬಿಜೆಪಿಗೆ ಪಕ್ಷಾಂತರ ಆಗಿದ್ದಾರೆ. ಕಾಂಗ್ರೆಸ್‍ನಲ್ಲಿ ಏನು ಕಡಿಮೆ ಆಗಿತ್ತು ಅಂತ ನೀವು ಕೇಳಬೇಕು ಎಂದು ಸಿದ್ದರಾಮಯ್ಯ ಅವರು, ಮತದಾರರಿಗೆ ಮನವಿ ಮಾಡಿಕೊಂಡರು.

    ನಾನು ಮುಖ್ಯಮಂತ್ರಿ ಆಗಿದ್ದಾಗ ಕೆ.ಆರ್.ಪುರ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಕೊಟ್ಟಿದ್ದೆ. ಭೈರತಿ ಬಸವರಾಜ್ ಅವರನ್ನು ಬೋರ್ಡ್ ಗೆ ಮೆಂಬರ್ ಮಾಡಿದ್ವಿ. ಅನುದಾನ ಪಡೆದು, ಅಧಿಕಾರ ಅನುಭವಿಸಿ ಬಿಜೆಪಿಗೆ ಹೋಗಿದ್ದಾರೆ. ನಿಮಗೆ, ಕಾಂಗ್ರೆಸ್‍ಗೆ ಭೈರತಿ ಮೋಸ ಮಾಡಿದ್ದಾರೆ. ಅಂದು ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಿ ಭೈರತಿ ಅವರಿಗೆ ಕೊಟ್ಟೆ. ಅವತ್ತು ಟಿಕೆಟ್ ಕೊಡಿಸಿ ತಪ್ಪು ಮಾಡಿದೆ ಅಂತ ಈಗ ಅನ್ನಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

    ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿಯೂ ಪಕ್ಷಾಂತರಿಗಳನ್ನ ಸೋಲಿಸಬೇಕು. ಜನ ಇಂತಹವರಿಗೆ ಪಾಠ ಕಲಿಸಬೇಕು. ಭೈರತಿ ಬೆದರಿಕೆಗೆ ನಮ್ಮ ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರು ಹೆದರುವುದಿಲ್ಲ ಎಂದು ಗುಡುಗಿದರು.

  • ಕರುಣಾನಿಧಿ ಯಾವಾಗಲೂ ಕಪ್ಪು ಕನ್ನಡಕವನ್ನೇ ಧರಿಸುತ್ತಿದ್ದರು ಯಾಕೆ?

    ಕರುಣಾನಿಧಿ ಯಾವಾಗಲೂ ಕಪ್ಪು ಕನ್ನಡಕವನ್ನೇ ಧರಿಸುತ್ತಿದ್ದರು ಯಾಕೆ?

    ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿದ್ದರೂ ಕಪ್ಪು ಕನ್ನಡಕ ಧರಿಸಿ ಪಾಲ್ಗೊಳ್ಳುತ್ತಿದ್ದರು. ಎಲ್ಲಿ ಹೋದರೂ ಕಪ್ಪು ಕನ್ನಡ ಧರಿಸುತ್ತಿದ್ದ ಕಾರಣ ಕರುಣಾನಿಧಿ ಸ್ಟೈಲಿಶ್ ರಾಜಕಾರಣಿ ಎಂದೇ ಪ್ರಸಿದ್ಧರಾಗಿದ್ದರು. ಕರುಣಾನಿಧಿ ಕಪ್ಪು ಕನ್ನಡಕ ಹಾಕದೇ ಇರುವ ಫೋಟೋಗಳು ಕಾಣಸಿಗುವುದು ವಿರಳ. ಆದರೆ ಈ ಕಪ್ಪು ಕನ್ನಡಕದ ಹಿಂದೆ ನೋವಿನ ಕಥೆಯಿದೆ.

    ಕರುಣಾಧಿಯವರು ಗಾಯವಾಗಿದ್ದ ತಮ್ಮ ಎಡಗಣ್ಣನ್ನು ಮುಚ್ಚಲು ಹೀಗೆ ಕಡು ಕಪ್ಪು ಬಣ್ಣದ ಕನ್ನಡ ಬಳಕೆಯನ್ನು ಅವರು ರೂಢಿಸಿಕೊಂಡಿದ್ದರು. ಅಪಘಾತವೊಂದರಲ್ಲಿ ಕರುಣಾನಿಧಿ ಎಡಗಣ್ಣಿಗೆ ಭಾರೀ ಪೆಟ್ಟು ಬಿದ್ದಿತ್ತು. ಚಿಕಿತ್ಸೆ ಬಳಿಕವೂ ಗಾಯ ಹಾಗೇ ಉಳಿದುಕೊಂಡಿತ್ತು. ಹೀಗಾಗಿ ಕಣ್ಣಿನ ಗಾಯವನ್ನು ಮರೆಮಾಚಲು ಕಪ್ಪು ಕನ್ನಡಕವನ್ನು ಹಾಕಲು ಆರಂಭಿಸಿದರು. ಇದನ್ನು ಓದಿ: 10ನೇ ತರಗತಿ ಫೇಲ್ ಆಗಿದ್ದ ಕರುಣಾನಿಧಿ ರಾಜಕೀಯ ನಾಯಕನಾಗಿ ಬೆಳೆದ ಕಥೆ ಓದಿ

    ಸಂಪೂರ್ಣ ಕಪ್ಪು ಕನ್ನಡಕ ಹಾಕುತ್ತಿದ್ದ ಅವರು, 2017ರಲ್ಲಿ ವೈದ್ಯರ ಸಲಹೆ ಮೆರೆಗೆ ಕಪ್ಪು ಫ್ರೇಮ್, ಹಳದಿ ಬಣ್ಣದ ಗ್ಲಾಸ್ ಇರುವ ಕನ್ನಡ ಹಾಕಲು ಪ್ರಾರಂಭಿಸಿದ್ದರು. ಒಟ್ಟಿನಲ್ಲಿ 4 ದಶಕಗಳ ಹಿಂದೆಯೇ ಕರುಣಾನಿಧಿ ಕಪ್ಪು ಕನ್ನಡಕ ಹಾಕಲು ಆರಂಭಿಸಿದರು.

  • ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ದೃಷ್ಟಿಹೀನರಿಗಾಗಿ ಹೊಸ ಕನ್ನಡಕ!

    ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ದೃಷ್ಟಿಹೀನರಿಗಾಗಿ ಹೊಸ ಕನ್ನಡಕ!

    ಮಂಗಳೂರು: ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ದೃಷ್ಟಿ ಇಲ್ಲದವರ ಸಹಾಯಕ್ಕಾಗಿ ವಿಭಿನ್ನ ಸಾಮರ್ಥ್ಯದ ಕನ್ನಡಕವೊಂದನ್ನು ತಯಾರಿಸಿದ್ದಾರೆ.

    ಕಣ್ಣಿಲ್ಲದೇ ಇರುವ ಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಕಣ್ಣು ಕಾಣದವರಿಗೆ ದೃಷ್ಟಿ ತೋರುವಂತಾಗಲು ವೈದ್ಯರು ಏನೆಲ್ಲ ಕಸರತ್ತು ನಡೆಸುತ್ತಾರೆ. ಈ ಮಧ್ಯೆ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ಒಂದು ನೂತನ ಪ್ರಯತ್ನ ಮಾಡಿದ್ದಾರೆ.

    ಎಲ್‍ಇಡಿ ಬೆಳಕನ್ನು ಆಧರಿಸಿ ಕಾರ್ಯ ನಿರ್ವಹಿಸುವ ಈ ಕನ್ನಡಕ, ಕಟ್ಟಡದ ಒಳಭಾಗದಲ್ಲಿ ಸಂಚರಿಸಲು ಕನ್ನಡಕ ಧರಿಸಿದ ವ್ಯಕ್ತಿಗೆ ಸೂಚನೆಗಳನ್ನು ನೀಡುತ್ತದೆ. ಸಂಪೂರ್ಣ ಆಟೋಮ್ಯಾಟಿಕ್ ಆಗಿರುವ ಈ ಉಪಕರಣ ಈಯರ್ ಫೋನ್ ಹೊಂದಿದ್ದು, ಧರಿಸಿದ ವ್ಯಕ್ತಿಗೆ ಸಂಚರಿಸುವ ಸಂದರ್ಭದಲ್ಲಿ ಎದುರಾಗುವ ಅಡೆತಡೆಗಳ ಬಗ್ಗೆ ಸೂಚನೆ ನೀಡುತ್ತದೆ.

    ಸೂಚನೆ ಆಧಾರದಲ್ಲಿ ದೃಷ್ಟಿ ಹೀನ ವ್ಯಕ್ತಿ ಕಚೇರಿ ಇನ್ನಿತರ ಪ್ರದೇಶಗಳಲ್ಲಿ ಇತರೇ ವ್ಯಕ್ತಿಗಳ ನೆರವಿಲ್ಲದೆ ಓಡಾಡಬಹುದಾಗಿದೆ. ಸುಧಾರಣೆ ಹಂತದಲ್ಲಿರುವ ಈ ಕನ್ನಡಕ ದೃಷ್ಟಿಹೀನರಿಗೆ ಹೊಸ ರೀತಿಯ ಅನುಭವ ನೀಡಲಿದೆ ಅಂತ ಕಾಲೇಜಿನ ಶಿಕ್ಷಕರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews