Tag: ಕನಕ ಜಯಂತಿ

  • ಸಿಎಂ ಸಿದ್ದರಾಮಯ್ಯ ಇಂದು ಹಾವೇರಿ ಪ್ರವಾಸ

    ಸಿಎಂ ಸಿದ್ದರಾಮಯ್ಯ ಇಂದು ಹಾವೇರಿ ಪ್ರವಾಸ

    ಹಾವೇರಿ: ಕನಕ ಜಯಂತ್ಯೋತ್ಸವ (Kanaka Jayanthi) ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಹಾವೇರಿ (Haveri) ಜಿಲ್ಲೆಗೆ ಭೇಟಿ ನೀಡಲಿದ್ದು, ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಹೆಚ್‌ಎಎಲ್ (HAL) ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದ್ದಾರೆ.

    ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಯತ್ತ (Hubballi) ಸಿಎಂ ತೆರಳಲಿದ್ದು, ಹುಬ್ಬಳ್ಳಿಯಿಂದ 12:10ಕ್ಕೆ ಕಾಗಿನೆಲೆ (Kaginele) ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ನಂತರ 1:45ಕ್ಕೆ 536ನೇ ಕನಕ ಜಯಂತ್ಯೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 2 ಗಂಟೆಗೆ ಕದರಮಂಡಲಗಿ ಗ್ರಾಮದ ನೂತನ ಶಾಲಾ ಕಟ್ಟಡ ಉದ್ಘಾಟನೆಯಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ. ಸುಮಾರು 3:30ಕ್ಕೆ ರಸ್ತೆ ಮಾರ್ಗವಾಗಿ ಕದರಮಂಡಲಗಿಯಿಂದ ಕಾಗಿನೆಲೆ ಹೆಲಿಪ್ಯಾಡ್ ಮೂಲಕ ಹುಬ್ಬಳ್ಳಿಯತ್ತ ತೆರಳಲಿದ್ದು, ಸಂಜೆ 4:45ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಸಿಎಂ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ಭದ್ರಾವತಿಯಲ್ಲಿ ಸಿಡಿಲು ಬಡಿದು ಸಹೋದರರ ದುರ್ಮರಣ

    ಕಾಗಿನೆಲೆಗೆ ಸಿಎಂ ಭೇಟಿ ಹಿನ್ನೆಲೆ ಕಾಗಿನಲೆ ಗ್ರಾಮದಲ್ಲಿ ಫುಲ್ ಟೈಟ್ ಸೆಕ್ಯೂರಿಟಿ ನಿಯೋಜಿಸಲಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕನಕ ಜಯಂತ್ಯೋತ್ಸವ ಉದ್ಘಾಟನೆ ಮಾಡಲಿದ್ದು, ಕನಕದಾಸರ ನೆಲದಲ್ಲಿ ಬೃಹತ್ ಕನಕ ವೇದಿಕೆ ಸಜ್ಜಾಗಿದೆ. ವೇದಿಕೆ ಮುಂಭಾಗದಲ್ಲಿ ಸಾವಿರಾರು ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಅದ್ಧೂರಿ ಕನಕ ಜಯಂತ್ಯೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಅಹಿತಕರ ನಡೆಯದಂತೆ ಖಾಕಿ ಸರ್ಪಗಾವಲನ್ನು ನಿಯೋಜಿಸಲಾಗಿದ್ದು, ಜಿಲ್ಲಾಡಳಿತದಿಂದ 700ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಭ್ರೂಣ ಪತ್ತೆ, ಹತ್ಯೆ ಪ್ರಕರಣ- ಆಲೆಮನೆ ಮಾಲೀಕನಿಂದ ಆಶಾ ಕಾರ್ಯಕರ್ತೆಗೆ ಬೆದರಿಕೆ

  • ಜನಸಾಮಾನ್ಯರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

    ಜನಸಾಮಾನ್ಯರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

    ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಹಶೀಲ್ದಾರ್ ಜನಸಾಮಾನ್ಯರೊಂದಿಗೆ ಬೆರೆತು ಡ್ಯಾನ್ಸ್ ಮಾಡುವ ಮೂಲಕ ನೆರೆದಿದ್ದವರನ್ನು ಸಂತೋಷ ಪಡಿಸಿದ್ದಾರೆ.

    ಸಾಮಾನ್ಯ ಜನರೊಂದಿಗೆ ಬೆರೆಯುವ ಮೂಲಕ ಸರ್ಕಾರಿ ಅಧಿಕಾರಿಗಳು ಕೂಡ ಸಾಮಾನ್ಯರಲ್ಲಿ ಬೆರೆಯಬೇಕು ಎನ್ನುವುದನ್ನು ತಹಶೀಲ್ದಾರ್ ಶ್ರೀನಿವಾಸ್ ತೋರಿಸಿಕೊಟ್ಟಿದ್ದಾರೆ. ಹೊಳೆನರಸೀಪುರ ದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರಿದ್ದರು. ಕನಕದಾಸರ ಭಾವಚಿತ್ರದ ಜೊತೆ ಪಟ್ಟಣದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

    ಈ ಸಂದರ್ಭದಲ್ಲಿ ಬ್ಯಾಂಡ್ ಸೆಟ್‍ನೊಂದಿಗೆ ಮೆರವಣಿಗೆ ಸಾಗಿತ್ತು. ಯುವಕರ ತಂಡಗಳು ಡ್ಯಾನ್ಸ್ ಮಾಡುತ್ತಾ ಅದ್ಧೂರಿ ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿ ಇದ್ದ ತಹಶೀಲ್ದಾರ್ ರನ್ನು ಯುವಕರು ನೃತ್ಯಕ್ಕೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಶ್ರೀನಿವಾಸ್ ಎಲ್ಲರೊಂದಿಗೆ ಡ್ಯಾನ್ಸ್ ಮಾಡಿ ಗಮನಸೆಳೆದಿದ್ದಾರೆ.

  • ಟಿಪ್ಪು ಜಯಂತಿಗಿದ್ದ ಕಡ್ಡಾಯ ಹಾಜರಿ ಕನಕ ಜಯಂತಿಗೆ ಯಾಕಿಲ್ಲ: ಇಬ್ಬಗೆಯ ಧೋರಣೆಗೆ ಜನರ ಕಿಡಿ

    ಟಿಪ್ಪು ಜಯಂತಿಗಿದ್ದ ಕಡ್ಡಾಯ ಹಾಜರಿ ಕನಕ ಜಯಂತಿಗೆ ಯಾಕಿಲ್ಲ: ಇಬ್ಬಗೆಯ ಧೋರಣೆಗೆ ಜನರ ಕಿಡಿ

    ಮಂಗಳೂರು: ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರ, ಕನಕ ಜಯಂತಿಗೆ ಮಾತ್ರ ಕಡ್ಡಾಯ ಪದವನ್ನು ತೆಗೆದುಹಾಕಿದೆ. ಸರ್ಕರದ ಈ ಧೋರಣೆ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಕನಕ ಜಯಂತಿ ಕಾರ್ಯಕ್ರಮವನ್ನು ನವೆಂಬರ್ 26ರಂದು ಆಯೋಜಿಸಲಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಕನಕದಾಸರನ್ನು ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಸುತ್ತೋಲೆ ಕಳಿಸಲಾಗಿದೆ. ಆದರೆ ಸುತ್ತೋಲೆಯಿಂದ ಕಡ್ಡಾಯ ಎನ್ನುವ ಪದವನ್ನು ಸರ್ಕಾರ ಕೈ ಬಿಟ್ಟಿದೆ.

    ಸರ್ಕಾರಿ ಕಾರ್ಯಕ್ರಮ ಹಾಗೂ ಜಯಂತಿಗಳಲ್ಲಿ ಭಾಗವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಸುತ್ತೋಲೆ ಕಳುಹಿಸುವುದು ಶಿಷ್ಟಾಚಾರ. ಆದರೆ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ಇತ್ತೀಚೆಗೆ ನಡೆದ ಟಿಪ್ಪು ಜಯಂತಿಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಆದೇಶ ಹೊರಡಿಸಿದ್ದರು. ಅದರಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸುತ್ತೋಲೆ ನೀಡಲಾಗಿತ್ತು.

    ಒಂದೇ ತಿಂಗಳಿನಲ್ಲಿ ಟಿಪ್ಪು ಹಾಗೂ ಕನಕ ಜಯಂತಿ ಬಂದಿವೆ. ಆದರೆ ಟಿಪ್ಪು ಜಯಂತಿಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಸರ್ಕಾರ ಕನಕ ಜಯಂತಿಗೆ ನೀಡುತ್ತಿಲ್ಲ. ಅಧಿಕಾರಿಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ಕಡ್ಡಾಯ ತೆಗೆದುಹಾಕಿದ್ದು ಯಾವ ನ್ಯಾಯ ಎನ್ನುವ ಪ್ರಶ್ನೆ ಎದ್ದಿದೆ. ಟಿಪ್ಪು ಒಬ್ಬ ಮತಾಂಧ ಎನ್ನುವ ಆರೋಪ ಇದ್ದರೂ, ಆತನ ಜಯಂತಿಯನ್ನು ಜನರ ಮೇಲೆ ಹೇರಲಾಗಿತ್ತು. ಸೆಕ್ಷನ್ ವಿಧಿಸಿದ್ದರಿಂದ ಜನ ಬರುವುದಿಲ್ಲವೆಂದು ಕೊನೆಗೆ ಅಧಿಕಾರಿ ವರ್ಗವನ್ನೇ ಕಾರ್ಯಕ್ರಮಕ್ಕೆ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿತ್ತು. ಹೀಗಾಗಿ ಕನಕ ಮತ್ತು ಟಿಪ್ಪು ಜಯಂತಿ ಹೆಸರಲ್ಲಿ ರಾಜ್ಯ ಸರ್ಕಾರ ಇಬ್ಬಗೆ ನೀತಿ ತೋರಿದ್ದು ಎಷ್ಟು ಸರಿ ಎನ್ನುವ ಚರ್ಚೆ ಈಗ ಆರಂಭವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv