Tag: ಕನಕಪುರ

  • ಇಡಿ ವಿಚಾರಣೆ ಅಂತ್ಯವಾಗಿದೆ, ಇನ್ನೂ ವಿಚಾರಣೆಗೆ ಬೇಕಾದರೆ ಸಹಕರಿಸ್ತೇವೆ: ಡಿಕೆ ಸುರೇಶ್

    ಇಡಿ ವಿಚಾರಣೆ ಅಂತ್ಯವಾಗಿದೆ, ಇನ್ನೂ ವಿಚಾರಣೆಗೆ ಬೇಕಾದರೆ ಸಹಕರಿಸ್ತೇವೆ: ಡಿಕೆ ಸುರೇಶ್

    ರಾಮನಗರ: ಇಡಿ ಅಧಿಕಾರಿಗಳ ತನಿಖೆ ಆಂತ್ಯವಾಗಿದ್ದು ಸುದೀರ್ಘವಾಗಿ ವಿಚಾರಣೆ ನಡೆದಿದ್ದಾರೆ. ಮುಂದೆಯೂ ಕೂಡಾ ಅವರಿಗೆ ಬೇಕಾದ ಮಾಹಿತಿ ಹಾಗೂ ವಿಚಾರಣೆಗೆ ಸಹಕರಿಸಲು ಸಿದ್ಧರಿದ್ದೇವೆ ಎಂದು ಸಂಸದ ಡಿಕೆ ಸುರೇಶ್ ತಮ್ಮ ತಾಯಿ ಗೌರಮ್ಮರ ಇಡಿ ವಿಚಾರಣೆ ಬಳಿಕ ತಿಳಿಸಿದ್ದಾರೆ.

    ಕನಕಪುರ ತಾಲೂಕಿನ ಕೋಡಿಹಳ್ಳಿಯ ನಿವಾಸದಲ್ಲಿ ಇಂದು ಗೌರಮ್ಮರ ವಿಚಾರಣೆಯನ್ನು ಸುಮಾರು 8 ಗಂಟೆಗಳ ಕಾಲ ಇಡಿ ಅಧಿಕಾರಿಗಳು ನಡೆಸಿದರು. ವಿಚಾರಣೆ ಬಳಿಕ ಮಾತನಾಡಿದ ಡಿಕೆ ಸುರೇಶ್, ಮುಂದೆ ವಿಚಾರಣೆ ಅವಶ್ಯವಿದ್ದರೆ 85 ವರ್ಷವಾದ್ರೂ ನಮ್ಮ ತಾಯಿ ಕೂಡ ಸ್ಪಂದಿಸುವುದಾಗಿ ಹೇಳಿದ್ದಾರೆ. ನಮ್ಮ ತಾಯಿಗೆ ಜ್ವರ ಇತ್ತು. ಆದರೂ ತನಿಖೆಗೆ ಸಹಕರಿಸಿದ್ದಾರೆ. ನಾನು ಮತ್ತು ಅಣ್ಣ ಗೌರವಯುತ ಸ್ಥಾನದಲ್ಲಿದ್ದು, ಸಹಕರಿಸಲು ನಿರ್ಧರಿಸಿದ್ದೇವು. ಅಮ್ಮ ಕೂಡ ತಿಳಿಸಿದರು ಎಂದು ಹೇಳಿದರು.

    ವಿಚಾರಣೆ ವೇಳೆ ಗಲಾಟೆ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಬಂದೋಬಸ್ತ್ ನೀಡಿದ್ದರು. ನಾವು ಕೂಡಾ ಕಾರ್ಯಕರ್ತರು ಮನೆಯ ಬಳಿ ಬರದಂತೆ ಮನವಿ ಮಾಡಿದ್ದೇವು. ನಮ್ಮ ಮನವಿಗೆ ಕಾರ್ಯಕರ್ತರು ಸಹಕರಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

    ಅಧಿಕಾರಿಗಳು ಕೂಲಂಕುಷವಾಗಿ ವಿಚಾರಣೆ ನಡೆಸಿ ಹೋಗಿದ್ದಾರೆ. ಮತ್ತೆ ವಿಚಾರಣೆ ಬೇಕಾದರೆ ಎದರುಸಿಲು ಸಿದ್ಧರಿದ್ದು, ಅಧಿಕಾರಿಗಳು ಬರುವುದಾದರೆ ನಾವು ಸ್ವಾಗತಿಸ್ತೇವೆ. ಅವರು ಯಾವಾಗ ಬೇಕಾದರೂ ತನಿಖೆ ನಡೆಸಬಹುದು. ಕಾನೂನಿನ ಮುಂದೆ ಎಲ್ಲರೂ ಕೂಡಾ ತಲೆಬಾಗಲೇಬೇಕು ಎಂದರು.

  • ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಖತರ್ನಾಕ್ ದಂಪತಿ ಜೈಲುಪಾಲು

    ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಖತರ್ನಾಕ್ ದಂಪತಿ ಜೈಲುಪಾಲು

    ರಾಮನಗರ: ಬಿಬಿಎಂಪಿಯಲ್ಲಿ ಹಾಗೂ ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಪದವೀಧರರಿಂದ ಲಕ್ಷಾಂತರ ರೂಪಾಯಿ ಪೀಕುತ್ತಿದ್ದ ಜಿಲ್ಲೆಯ ಖತರ್ನಾಕ್ ದಂಪತಿ ಜೈಲುಪಾಲಾಗಿದ್ದಾರೆ.

    ಕನಕಪುರ ತಾಲೂಕಿನ ಯಡುವನಹಳ್ಳಿ ಗ್ರಾಮದ ಚೇತನ್ ಹಾಗೂ ಕನಕಪುರದ ಹೌಸಿಂಗ್ ಬೋರ್ಡ್ ನಿವಾಸಿ ಬೇಬಿ ಬೆನಕಜಾದವ್ ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ ದಂಪತಿ. ಆರೋಪಿ ಚೇತನ್ ತಾನು ಬಿಬಿಎಂಪಿಯಲ್ಲಿ ಮುಖ್ಯ ಹಿರಿಯ ಅಧಿಕಾರಿ ಎಂದು ಲೆಟರ್‍ಹೆಡ್, ಸೀಲು, ತಯಾರಿಸಿಕೊಂಡಿದ್ದ. ಆ ಮೂಲಕ ಯುವಕರಿಗೆ ಗಾಳ ಹಾಕಿದ್ದ ಚೇತನ್ ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬರೋಬ್ಬರಿ 70ಕ್ಕೂ ಹೆಚ್ಚು ಯುವಕರಿಗೆ ಪಂಗನಾಮ ಹಾಕಿದ್ದಾನೆ. ಸರ್ಕಾರಿ ಕೆಲಸ ಸಿಗುತ್ತೆ ಅಂತಾ ಸಾಲ ಮಾಡಿ, ಜಮೀನು ಮಾರಿ, ಒಡವೆಗಳನ್ನು ಅಡವಿಟ್ಟು ಹಣ ಕೊಟ್ಟ ಯುವಕರಿಗೆ ಇದೀಗ ದಿಕ್ಕು ತೋಚದಂತಾಗಿದೆ.

    ಯುವಕರನ್ನೇ ಟಾರ್ಗೇಟ್ ಮಾಡಿಕೊಂಡಿದ್ದ ಚೇತನ್ ಪತ್ನಿ ಬೇಬಿ ಬೆನಕಜಾದವ್ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರಿಂದ ಲಕ್ಷಾಂತರ ರೂಪಾಯಿ ಪೀಕಿದ್ದಾರೆ. ಕೆಲಸವಿಲ್ಲದೇ ಡಿಗ್ರಿ ಮಾಡಿ ಓಡಾಡುತ್ತಿದ್ದ ನಿರುದ್ಯೋಗಿ ಯುವಕರು ಕೆಲಸ ಸಿಗುತ್ತೆ ಅಂತೇಳಿ ಹಣ ಕೊಟ್ಟು ಇಂಗು ತಿಂದ ಮಂಗನಂತಾಗಿದ್ದರೆ, ಇದೀಗ ನಿರುದ್ಯೋಗಿ ಯುವಕರಿಗೆ ಪಂಗನಾಮ ಹಾಕಿದ್ದ ಕಿಲಾಡಿ ಜೋಡಿ ಪೊಲೀಸರ ಅತಿಥಿಯಾಗಿದ್ದಾರೆ.

    ಬಿಬಿಎಂಪಿಯಲ್ಲಿ ಏನು ಕೆಲಸ:
    ಬಿಬಿಎಂಪಿಯಲ್ಲಿ ಸರ್ಕಾರಿ ಕೆಲಸವಿದ್ದು 1 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ 23 ಸಾವಿರ ರೂ. ವೇತನ ನೀಡುತ್ತಾರೆ. ಅದರಲ್ಲಿ ಇಎಸ್‍ಐ, ಪಿಎಫ್ ಕಡಿತಗೊಳಿಸಿ 21 ಸಾವಿರ ರೂ. ವೇತನ ಸಿಗುತ್ತದೆ ಎಂದು ಕೆಲವು ಪದವೀಧರರಿಗೆ ಮೊದಲು ಚೇತನ್ ಹಾಗೂ ಬೇಬಿ ಬಲೆ ಬೀಸಿ ಅವರಿಂದ ಹಣವನ್ನ ಪೀಕಿದ್ದರು. ಅಷ್ಟೇ ಅಲ್ಲದೆ ಬಿಬಿಎಂಪಿಯ ನಕಲಿ ಲೆಟರ್‍ಹೆಡ್, ನಕಲಿ ಸೀಲ್‍ಗಳನ್ನು ಬಳಸಿಕೊಂಡು ಕೆಲವು ಯುವಕರಿಗೆ ಕೆಲಸದ ಅಪಾಯಿಂಟ್‍ಮೆಂಟ್ ಲೆಟರ್ ನೀಡಿದ್ದಾರೆ.

    ಅಪಾಯಿಂಟ್‍ಮೆಂಟ್ ಲೆಟರ್ ಪಡೆದ ಯುವಕರಿಗೆ ಬಿಬಿಎಂಪಿಯ ಐಡಿ ಕಾರ್ಡ್ ಗಳನ್ನು ತಾವೇ ತಯಾರಿಸಿ ನೀಡಿದ್ದಾರೆ. ಜೊತೆಗೆ ಬೆಂಗಳೂರಿನ ವಾರ್ಡ್ ವಾರು ಸ್ವಚ್ಛತೆ ಬಗ್ಗೆ ಫೀಲ್ಡ್ ವರ್ಕ್ ಮಾಡಬೇಕು. ನಿಮ್ಮ ಕೆಲಸ ಬೆಂಗಳೂರಿನ ಶಿವಾಜಿನಗರ, ವಸಂತನಗೆ, ಜಯನಗರ, ಆರ್‍ಎಂಸಿ ಯಾರ್ಡ್, ಯಶವಂತಪುರ ಹೀಗೆ ವಾರ್ಡ್ ವಾರು ತೆರಳಿ ಕೆಲಸ ಮಾಡಬೇಕು. ಪ್ರತಿನಿತ್ಯ ಎಷ್ಟು ಗಂಟೆಗೆ ಬಿಬಿಎಂಪಿ ಕಸದ ವಾಹನ ಬಂತು ಎಷ್ಟು ಗಂಟೆಗೆ ಹೋಯಿತು. ವಾರ್ಡ್ ಸ್ವಚ್ಛವಾಗಿದೆಯಾ ಎಂದು ಪರಿಶೀಲನೆ ನಡೆಸುವುದು. ಅಲ್ಲದೇ ತಾವು ಕೆಲಸ ಮಾಡುತ್ತಿರುವ ಬಗ್ಗೆ ಎಲ್ಲಿದ್ದೀರಿ ಎಂಬ ಬಗ್ಗೆ ವಾಟ್ಸಪ್‍ನಲ್ಲಿ ಲೊಕೇಶನ್ ಶೇರ್ ಮಾಡಬೇಕು. ಕೆಲಸ ಮುಗಿದ ಬಳಿಕ ಕಚೇರಿಗೆ ಬಂದು ಸಹಿ ಮಾಡಿ ತೆರಳಬೇಕು ಎಂದು ತಿಳಿಸಿದ್ದರು.

    ಈ ಫ್ರಾಡ್ ದಂಪತಿ ಬಳಿ ಸರ್ಕಾರಿ ಕೆಲಸ ಅಂತ ಸೇರಿದ್ದ ಅಲ್ಲದೇ ಮೊದಲು ಕೆಲಸಕ್ಕೆ ಸೇರಿದ್ದ ಯುವಕರಿಗೆ ಮೂರು ತಿಂಗಳು 21 ಸಾವಿರ ರೂಪಾಯಿಗಳ ಸಂಬಳವನ್ನು ಸಹ ನೀಡಿದ್ದರು. ಬಳಿಕ ಸೇರಿದ ನಿರುದ್ಯೋಗಿಗಳಿಗೆ ಅಪಾಯಿಂಟ್‍ಮೆಂಟ್ ಲೆಟರ್ ಕೊಡದ ಹಿನ್ನೆಲೆಯಲ್ಲಿ ಯುವಕರು ಪರಿಶೀಲನೆಗೆ ಇಳಿದಾಗ ದಂಪತಿಗಳ ಅಸಲಿ ಮುಖ ಹೊರಬಿದ್ದಿದೆ.

    ಮೋಸ ಹೋಗಿದ್ದ 23 ಯುವಕರು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖತರ್ನಾಕ್ ದಂಪತಿಯನ್ನ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲೂ ಸಹ ಈ ಕಿಲಾಡಿಗಳ ಜಾಲ ಹರಡಿರುವ ಶಂಕೆಯೂ ವ್ಯಕ್ತವಾಗಿದೆ.

  • ಏಸು ಪ್ರತಿಮೆ ನಿರ್ಮಾಣ ವಿವಾದ – ಸರ್ಕಾರಕ್ಕೂ ಮುನ್ನ ಕ್ರೈಸ್ತ ಮುಖಂಡರ ಸತ್ಯ ಶೋಧನ ವರದಿ ಬಿಡುಗಡೆ

    ಏಸು ಪ್ರತಿಮೆ ನಿರ್ಮಾಣ ವಿವಾದ – ಸರ್ಕಾರಕ್ಕೂ ಮುನ್ನ ಕ್ರೈಸ್ತ ಮುಖಂಡರ ಸತ್ಯ ಶೋಧನ ವರದಿ ಬಿಡುಗಡೆ

    ಬೆಂಗಳೂರು: ಸದ್ಯಕ್ಕೆ ತಣ್ಣಗಾಗಿದ್ದ ಕನಕಪುರದ ಕಪಾಲ ಬೆಟ್ಟದಲ್ಲಿ ಉದ್ದೇಶಿತ ಏಸು ಪ್ರತಿಮೆ ನಿರ್ಮಾಣ ವಿವಾದಕ್ಕೆ ಮತ್ತೆ ಜೀವ ಬಂದಿದೆ. ಏಸು ಪ್ರತಿಮೆ ನಿರ್ಮಾಣ ಸಂಬಂಧ ವಿವಾದಿತ ಗೋಮಾಳ ಭೂಮಿ ವಾಪಸ್ ಬಗ್ಗೆ ನಿರ್ಧರಿಸಲು ಸರ್ಕಾರ ಈಗಾಗಲೇ ರಾಮನಗರ ಜಿಲ್ಲಾಡಳಿತದಿಂದ ವರದಿ ಕೇಳಿರೋದು ಹಳೆಯ ಸುದ್ದಿ. ಆದರೆ ರಾಮನಗರ ಜಿಲ್ಲಾಡಳಿತವು ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಿದ್ದ ಬಹಳ ದಿನಗಳಾಗಿದ್ದರೂ ಆ ವರದಿಯನ್ನು ಬಿಡುಗಡೆ ಮಾಡಲು ಸರ್ಕಾರ ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಸರ್ಕಾರದ ವರದಿಗೂ ಮುನ್ನವೇ ಕ್ರೈಸ್ತ ಮುಖಂಡರ ಸತ್ಯಶೋಧನಾ ಸಮಿತಿಯೊಂದು ವಿವಾದ ಸಂಬಂಧ ವರದಿ ಸಿದ್ಧಪಡಿಸಿ ಇವತ್ತು ಬಿಡುಗಡೆಗೊಳಿಸಿದೆ. ಆ ಮೂಲಕ ಸಮಿತಿಯು ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.

    ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಮರಿಸ್ವಾಮಿ ಅಧ್ಯಕ್ಷತೆಯ ಈ ಸತ್ಯ ಶೋಧನಾ ಸಮಿತಿಯಲ್ಲಿ ಐದು ಮಂದಿ ಕ್ರೈಸ್ತ ಸದಸ್ಯರಿದ್ದರು. ವರದಿ ಬಂದ ಬಳಿಕವೂ ವಿಧಾನಪರಿಷತ್ ಸದಸ್ಯ ಐವಾನ್ ಡಿಜೋಜಾ ನೇತೃತ್ವದ ನಿಯೋಗವು ನಿನ್ನೆ ಕಪಾಲ ಬೆಟ್ಟಕ್ಕೆ ಭೇಟಿ ಕೊಟ್ಟು ವರದಿಯ ಸತ್ಯಾಂಶಗಳನ್ನು ಪರಿಶೀಲಿಸಿತು. ಇಂದು ಐವಾನ್ ಡಿಸೋಜಾ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವರದಿಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತಾಡಿದ ಐವಾನ್ ಡಿಸೋಜಾ, ಈ ವರದಿಯ ಪ್ರಕಾರ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ಕಾರ 2018 ರಲ್ಲಿ 10 ಎಕರೆ ಭೂಮಿ ಮಂಜೂರು ಮಾಡಿತ್ತು. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗಾಗಿ ಅಂತಲೇ ಸ್ಪಷ್ಟವಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ವಿರೋಧಿಸದಂತೆ ಮನವಿ ಮಾಡಿಕೊಂಡರು.

    ರಾಜಕೀಯ ದುರುದ್ದೇಶಕ್ಕಾಗಿ ಪ್ರಕರಣಕ್ಕೆ ವಿವಾದ ಬಣ್ಣ ಬಳಿಯಲಾಗಿದೆ. ವಿಷಬೀಜ ಬಿತ್ತುವ ಪ್ರಯತ್ನಗಳು ನಡೆದಿವೆ. ಗೋಮಾಳ ಭೂಮಿಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಇತರೇ ಸಮುದಾಯಗಳಿಗೆ ಸರ್ಕಾರ ಮೊದಲಿಂದಲೂ ಮಂಜೂರು ಮಾಡುತ್ತಾ ಬಂದಿದೆ. ಹಾಗೆಯೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರಿಗೂ ಭೂಮಿ ಮಂಜೂರು ಮಾಡಲಾಗಿದೆ. ಹಾಗಾಗಿ ಸರ್ಕಾರ ಏಸುಪ್ರತಿಮೆ ನಿರ್ಮಿಸಲು ಅವಕಾಶ ಕೊಡಬೇಕೆಂದು ಐವಾನ್ ಡಿಸೋಜಾ ಮನವಿ ಮಾಡಿಕೊಂಡರು. ಇದೇ ವೇಳೆ ಸಕಾಧರದ ಆದೇಶ ಪ್ರತಿಯನ್ನೂ ಬಿಡುಗಡೆಗೊಳಿಸಲಾಯ್ತು.

    ಕ್ರೈಸ್ತ ಮುಖಂಡರ ಸತ್ಯ ಶೋಧನಾ ಸಮಿತಿ ವರದಿಯ ಪ್ರಮುಖ ಅಂಶಗಳು ಹೀಗಿವೆ :

    1. ಹಾರೋಬೆಲೆಯಲ್ಲಿ 1662ರಿಂದಲೂ ಕ್ರೈಸ್ತರ ವಾಸ ಇದೆ.
    2. 26/02/2018 ರಂದು ರಾಜ್ಯ ಸರ್ಕಾರವು ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ವೆ ನಂ.283 ರಲ್ಲಿ 10 ಎಜತೆ ಗೋಮಾಳ ಜಾಗ ಮಂಜೂರು.
    3. ಕಾನೂನಾತ್ಮಕವಾಗಿ ಜಮೀನು ಮಂಜೂರು. ಪಹಣಿ ಮತ್ತು ಮ್ಯೂಟೇಷನ್ ದಾಖಲೆಗಳಲ್ಲೂ ನಮೂದು.
    4. ಆದೇಶ ಪ್ರತಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅಂತ ಸ್ಪಷ್ಟವಾಗಿ ಉಲ್ಲೇಖ.

    5. ಹಾರೋಬೆಲೆ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಿಗೆ ಕುಡಿಯಲು ರಾಮನಗರ ಜಿ.ಪಂ.ಯಿಂದ ಬೋರ್ ವೆಲ್ ಹಾಕಿಸಿಕೊಡಲಾಗಿದೆ. ಪ್ರತಿಮೆಗಾಗಿ ಹಾಕಿಸಿದ ಬೋರ್ ವೆಲ್ ಅಲ್ಲ.
    6. ಏಸುಪ್ರತಿಮೆ ನಿರ್ಮಾಣಕ್ಕೆ ಬಂದಿರುವ ಕಾರ್ಮಿಕರಿಗಾಗಿ ಕ್ರಮಬದ್ಧವಾಗಿ, ಶುಲ್ಕ ಪಾವತಿಸಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ವಿದ್ಯುತ್ ಸಂಪರ್ಕ ಅನಧಿಕೃತ ಅನ್ನುವ ಆರೋಪ ಸುಳ್ಳು.
    7. ಬೆಟ್ಟದ ಮೇಲೆ ಬೃಹತ್ ವಾಟರ್ ಟ್ಯಾಂಕ್ ಕಟ್ಟಲಾಗಿದೆ. ಆ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಪರಿಕರ, ಸಾಮಾಗ್ರಿ ತೆಗೆದುಕೊಂಡು ಹೋಗಲು ಅದರ ಗುತ್ತಿಗೆದಾರ ರಸ್ತೆ ನಿರ್ಮಿಸಿದ್ದಾನೆ. ಅದು ಏಸುಪ್ರತಿಮೆಗಾಗಿ ನಿರ್ಮಿಸಿದ ರಸ್ತೆ ಅಲ್ಲ.

  • ರಾಜಶೇಖರ ರೆಡ್ಡಿಗೆ ಏನಾಯ್ತು? ಓರ್ವ ಹಿಂದೂ ಭಾರತದಿಂದ ಹೊರ ಹೋದರೆ ಎಲ್ಲಿದೆ ದೇಶ – ಪ್ರಭಾಕರ ಭಟ್ ಪ್ರಶ್ನೆ

    ರಾಜಶೇಖರ ರೆಡ್ಡಿಗೆ ಏನಾಯ್ತು? ಓರ್ವ ಹಿಂದೂ ಭಾರತದಿಂದ ಹೊರ ಹೋದರೆ ಎಲ್ಲಿದೆ ದೇಶ – ಪ್ರಭಾಕರ ಭಟ್ ಪ್ರಶ್ನೆ

    – ರಾಜಶೇಖರ ರೆಡ್ಡಿ ಮತಾಂತರ ಮುಖ್ಯಮಂತ್ರಿಯಾಗಿದ್ದ
    – ಈಗ ನಿಮ್ಮ ಸರ್ಕಾರವಿಲ್ಲ, ಇಲ್ಲಿ ನೀವು ಮಂತ್ರಿಗಳಲ್ಲ
    – ಧರ್ಮದ ವಿರುದ್ಧ ಮೋಸ ಮಾಡಬೇಡಿ

    ರಾಮನಗರ: ರಾಜಶೇಖರ ರೆಡ್ಡಿ ಮತಾಂತರ ಮುಖ್ಯಮಂತ್ರಿಯಾಗಿದ್ದ. ತಿರುಪತಿಯಲ್ಲಿ 1 ಸಾವಿರ ಕ್ರಿಶ್ಚಿಯನ್ನರಿಗೆ ಮನೆ ಕಟ್ಟಿ ಕೊಟ್ಟ. 400 ಜನರಿಗೆ ತಿರುಪತಿಯಲ್ಲಿ ಕೆಲಸ ಕೊಟ್ಟ ಹಿಂದುಯೇತರರಿಗೆ ತಿರುಪತಿ ಪ್ರವೇಶ ಇಲ್ಲ. ಒಬ್ಬ ಮತಾಂತರಿ ಏನು ಮಾಡಿದ ಎನ್ನುವುದಕ್ಕೆ ರಾಜಶೇಖರ ರೆಡ್ಡಿ ಉದಾಹರಣೆ. ರಾಜಶೇಖರ ರೆಡ್ಡಿ ಕೊನೆಗೆ ಏನಾದ ಗೊತ್ತಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿ ಶಿವಕುಮಾರ್ ಅವರೇ ನೀವು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತೀರಿ ಎಂಬುದು ನೆನಪಿರಲಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

    ಕಪಾಲ ಬೆಟ್ಡದ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ‘ಕನಕಪುರ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದರ್ ತೆರೆಸಾ ಕ್ರೈಸ್ತ ಮಿಷನರಿಗಳಿಂದ ದುಡ್ಡು ತೆಗೆದುಕೊಂಡು ಲೆಕ್ಕ ಕೊಟ್ಟಿಲ್ಲ. ಸೇವೆ ಹೆಸರಲ್ಲಿ ಶಿಲುಬೆ ಹಾಕುತ್ತಿದ್ದರು ಇದನ್ನ ಇಂಗ್ಲೆಡಿನ ಕ್ರಿಶ್ಚಿಯನ್ ಒಬ್ಬ ಪ್ರಶ್ನಿಸಿದ. ಇವತ್ತು ನಿಮ್ಮ ಸರ್ಕಾರವಿಲ್ಲ. ಇಲ್ಲಿ ನೀವು ಮಂತ್ರಿಗಳಲ್ಲ, ಕಂತ್ರಿಗಳು ನೀವು. ಏನೇ ಮಾಡಿದರೂ ನೆಲವೇ ಗತಿ. ನಾನು ರಾಜಕಾರಣಿಯಂತೆ ಮಾತನಾಡುವುದಿಲ್ಲ. ಕೆಟ್ಟ ರಾಜಕಾರಣಕ್ಕೆ ಮುಂದಾಗಬೇಡಿ ಎಂದರು. ಇದನ್ನೂ ಓದಿ: ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

    ಇದು ಕೃಷ್ಣನ ನಾಡು:
    ಅಲ್ಪಸಂಖ್ಯಾತರ ಹೆಸರಿನಲ್ಲಿ ದೇಶವನ್ನು ಲೂಟಿ ಮಾಡ್ತಿದ್ದೀರಾ? ಇದು ಹಿಂದೂ ಧರ್ಮದ ಭೂಮಿ, ಅಲ್ಲಿ ಹಿಂದೂಗಳ ಪ್ರತಿಮೆಯಾಗಬೇಕು ಏಸುವಿನದ್ದಲ್ಲ. ಏಸುವಿನ ಹೆಸರಿನಲ್ಲಿ ಮೋಸ ಮಾಡ್ತೀರಲ್ಲ. ಅಲ್ಲಿರುವ 223 ಕುಟುಂಬದವರಿಗೆ ಜಾಗ ಕೊಡ್ತೀರಾ? ಭೂಮಿ ಆಸೆ ತೋರಿಸಿ ಮತಾಂತರ ಮಾಡ್ತೀರಲ್ಲ ಯಾಕೆ? ಇಡೀ ಗ್ರಾಮವನ್ನು ಕ್ರಿಶ್ಚಿಯನ್ ಗ್ರಾಮ ಮಾಡಲು ಹೋಗ್ತಿದ್ದೀರಾ. ಈ ದೇಶದಲ್ಲಿ ಕ್ರಿಸ್ತನ ನಾಡಿದ್ಯಾ? ಕ್ರಿಸ್ತನ ನಾಡಲ್ಲ ಕೃಷ್ಣನ ನಾಡಿದೆ. ದೇಶದ ಹಲವೆಡೆ ಮತಾಂತರ ನಡೆದು ಕ್ರಿಶ್ಚಿಯನ್ ಗೆ ಬದಲಾಗಿದ್ದಾರೆ. ಈ ಭೂ ಭಾಗವನ್ನು ಮತ್ತೆ ಇಂಗ್ಲೆಂಡ್‍ಗೆ ತೆಗೆದುಕೊಂಡು ಹೋಗುವ ಪ್ರಯತ್ನ ಅವರದ್ದು ಎಂದು ಪ್ರಭಾಕರ ಭಟ್ ದೂರಿದರು.

    ಹಲವಾರು ವರ್ಷಗಳಿಂದ ಹೊರದೇಶದಲ್ಲಿ ನಮ್ಮವರ ಮೇಲೆ ಲಕ್ಷಾಂತರ ಅತ್ಯಾಚಾರ, ಕೊಲೆ ನಡೆದಿವೆ. ಇಷ್ಟು ದಿನ ಪೌರತ್ವ ಕಾಯ್ದೆಗೆ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಇದೀಗ ಸರ್ಕಾರ ಪೌರತ್ವಕ್ಕೆ ಮುಂದಾಗಿದೆ. ನಾನು ಈ ದೇಶದ ಮಗ ಎನ್ನಲು ಪೌರತ್ವ ಕಾಯ್ದೆ ಬೇಕು. ಮಂಗಳೂರಿನಲ್ಲಿ ಪೊಲೀಸರ ಮೇಲೆ ಎಸೆದ ಕಲ್ಲು ಡಿಕೆಶಿ ಕಲ್ಲು ಇರಬಹುದು. ದೇಶದಲ್ಲಿ ಆ ಕಡೆ ಮುಸ್ಲಿಮರು, ಈ ಕಡೆ ಕ್ರೈಸ್ತರು, ಮತ್ತೊಂದು ಕಡೆ ಕಮ್ಯುನಿಸ್ಟರ್ ದೇಶ ನಮ್ಮದು ಎನ್ನುತ್ತಿದ್ದಾರೆ ಈ ಮಧ್ಯೆ ಹಿಂದೂಗಳು ಒದ್ದಾಡುವಂತಾಗಿದೆ. ತಾಕತ್ ಇದ್ದರೆ ಬನ್ನಿ, ಇವತ್ತು ಡಿಕೆಶಿ ವಿರುದ್ಧ ನಾನು ನಿಂತಿಲ್ಲ. ಅಧಿಕಾರ ಅನುಭವಿಸಿದ್ದಾಯ್ತು ಅದಕ್ಕೂ ಇತಿಮಿತಿಗಳು ಇರಲ್ವಾ? ಎಲ್ಲವನ್ನೂ ಡಿಕೆ ಸಹೋದರರು ಅರಿಯಬೇಕು. ಎಂತಹ ಕೆಟ್ಟವರನ್ನ ಆಯ್ಕೆ ಮಾಡಿದ್ದೀರಿ. ಒಳ್ಳೆಯ ಕೆಲಸಕ್ಕೆ ಮುಂದೆ ಬರುವಂತಹವರು ಇರಬೇಕು.

    ಭಾರತದಲ್ಲಿ ಬೇಡ:
    ಅವರದ್ದು ಭೋಗದ ಭೂಮಿ, ನಮ್ಮದು ತ್ಯಾಗದ ಭೂಮಿ. ಯೋಗ ದಿನಾಚರಣೆ ಬುದ್ಧಿ ಜೀವಿಗಳಿಗೆ ಆಗುವುದಿಲ್ಲ. ಜಗತ್ತು ಈಗ ಭಾರತದ ಕಡೆಗೆ ನೋಡುತ್ತಿದೆ ಡಿಕೆಶಿಯವರೆ, ಹಿಂದೂ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ. ನಾವು ಕೋಮುವಾದಿಗಳಾ? ನೀವು ಕೋಮುವಾದಿಗಳಾ? ನಮಗೆ ಏಸು ಕ್ರಿಸ್ತನ ಪ್ರತಿಮೆ ಬೇಡ, ದೇಶದ ಪರ ಹೋರಾಡಿದವರ ಪ್ರತಿಮೆ ಬೇಕು. ಹಿಂದೂ ಸಮಾಜಕ್ಕಿರುವ ಒಂದೇ ದೇಶ ಭಾರತ ಇಲ್ಲಿ ಏಸು ಪ್ರತಿಮೆ ಇರುವುದು ಬೇಡ ಎಂದು ಆಗ್ರಹಿಸಿದರು.

    ಧರ್ಮವಲ್ಲ ಮತಗಳು:
    ಎಲ್ಲರನ್ನು ಒಪ್ಪಿಕೊಳ್ಳುವ, ಎಲ್ಲರನ್ನು ಅಪ್ಪಿಕೊಳ್ಳುವ ಶ್ರೇಷ್ಠವಾದ ಧರ್ಮವೆಂದರೆ ಅದು ಹಿಂದೂ ಧರ್ಮ. ಅನೇಕರು ಹೇಳುತ್ತಾರೆ ಮುಸಲ್ಮಾನ್ ಧರ್ಮ, ಕ್ರೈಸ್ತ ಧರ್ಮ ಎಂದು. ಆದರೆ ಅದು ಧರ್ಮವಲ್ಲ ಮತಗಳು. ಅದು ಯಾವುದೋ ಒಂದು ಪುಸ್ತಕ, ಯಾವುದೋ ಒಂದು ಪ್ರವಾಸಿಗ, ಪದ್ಧತಿ ತಂದ ಮತಗಳು ಅವು. ಅಂತಹ ಬೇರೆ ಬೇರೆ ಮತಗಳು ನಮ್ಮಲಿವೆ. ಅವು ಧರ್ಮವಲ್ಲ ಮತಗಳು ಎಂದು ಹೇಳಿದರು.

    ಹಿಂದೂ ಧರ್ಮ ಏನು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಧರ್ಮ ಎಂದರೆ ಆರಾಧನೆ ಮಾಡುವುದು ಅಲ್ಲ. ಜೀವನದ ಪದ್ಧತಿಯೇ ಧರ್ಮ. ಹಿಂದೂ ಧರ್ಮ ಎಂದರೆ ಜೀವನದ ಪದ್ಧತಿ. ಆದ್ದರಿಂದ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಹಿಂದೂ ಸಾಮಾಜದ ಮೇಲಿದೆ. ಅದಕ್ಕಾಗಿ ಇಂತಹ ಏಸುವಿನ ಪ್ರತಿಮೆ ಬೇಡ ನಮಗೆ. ಅಲ್ಲಿ ಬಸವೇಶ್ವರ, ಬಾಲಗಂಗಾಧರನಾಥ ಮಹಾತ್ಮ ಗಾಂಧೀಜಿ ಅವರದ್ದೋ, ಪೇಜಾವರ ಶ್ರೀಗಳದ್ದೋ ಪ್ರತಿಮೆ ಬೇಕು. ಈ ದೇಶಕ್ಕಾಗಿ, ಧರ್ಮಕ್ಕಾಗಿ ಬದುಕಿದಂತಹ ಮಹಾನ್ ವ್ಯಕ್ತಿಗಳ ಪ್ರತಿಮೆ ಬೇಕು. ಹಿಂದೂಗಳಿಗೆ ಒಂದೇ ಒಂದು ಭೂಮಿ, ಅದು ಭಾರತ ಎಂದರು.

    ಹಿಂದೂಗಳಿಗೆ ಜಾಗ ಎಲ್ಲಿ?
    ಕನಕಪುರದಲ್ಲಿರುವ ಮುಸ್ಲಿಂ ವ್ಯಕ್ತಿ ಕನಕಪುರ ಬೇಡವೆಂದು ಮಂಗಳೂರಿಗೆ ಹಾರಿದರೆ, ಅಲ್ಲಿಂದ ಬೇರೆ ಕಡೆಗೆ ಹೋದರೆ 70 ಮುಸ್ಲಿಂ ರಾಷ್ಟ್ರಗಳು ಆತನಿಗೆ ನೆಲೆ ನೀಡುತ್ತದೆ. ಹಾಗೆಯೇ ಕ್ರೈಸ್ತ ವ್ಯಕ್ತಿ ದೇಶ ಬೇಡವೆಂದು ಹೋದರೆ ಆತನಿಗಾಗಿ ಸುಮಾರು 70 ಕ್ರೈಸ್ತ ರಾಷ್ಟ್ರಗಳು ಇವೆ. ಆದರೆ ಓರ್ವ ಹಿಂದೂ ಭಾರತದಿಂದ ಹೊರಹೋದರೆ ಆತನಿಗಾಗಿ ಬೇರೆ ದೇಶವಿಲ್ಲ. ಆತ ಹೋಗಿ ಸಮುದ್ರಕ್ಕೆ ಹಾರಬೇಕಾಗುತ್ತೆ. ಹಿಂದೂ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಲು ಇರುವುದು ಒಂದೇ ಒಂದು ದೇಶ. ಇಲ್ಲಿ ನೀವು ಏಸು ಪ್ರತಿಮೆಯನ್ನ ಇಡಬೇಡಿ ಎಂದು ಕಿಡಿಕಾರಿದರು.

    ಜನರು ಹೆಲಿಕಾಪ್ಟರ್ ಮೇಲೆ ಹಾರಬಹುದು, ವಿಮಾನದಲ್ಲಿ ಆಕಾಶದಲ್ಲಿ ಸಂಚರಿಸಬಹುದು. ಆದರೆ ಕೊನೆಗೆ ಎಲ್ಲರಿಗೂ ನೆಲವೇ ಗತಿ ತಾನೇ. ಎಲ್ಲರೂ ಭೂಮಿ ಮೇಲೆ ಇಳಿಯಲೇ ಬೇಕು. ಅದಕ್ಕಾಗಿ ಈ ಕೆಟ್ಟದಾದ ರಾಜಕೀಯ ಮಾಡಬೇಡಿ. ಈ ರೀತಿ ರಾಜಕಾರಣಕ್ಕೆ ನಮ್ಮ ಒಪ್ಪಿಗೆ ಇಲ್ಲ. ನಾವು ಕೆಟ್ಟ ರಾಜಕಾರಣ ವಿರುದ್ಧ ನಿಂತು ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿ ಡಿಕೆಶಿ ಸಹೋದರರು ಯಾರಿದ್ದೀರಿ ದಯವಿಟ್ಟು ಹಿಂದಕ್ಕೆ ಬನ್ನಿ. ಮುನೇಶ್ವರ ಬೆಟ್ಟವನ್ನು ಮುನೇಶ್ವರ ಬೆಟ್ಟವನ್ನಾಗಿಯೇ ಇರಲು ಬಿಡಿ ಎಂದು ಕೇಳಿಕೊಂಡರು.

    ಏಸುಕ್ರಿಸ್ತ ದೇವರಲ್ಲ, ಅವನು ಸತ್ತ ಬಳಿಕ ಜನಾಂಗ ಸೃಷ್ಟಿ ಮಾಡಿಕೊಂಡರು. ಅವರ ಬಗ್ಗೆ ಗೌರವವಿದೆ, ಅವರ ಹೆಸರಿನಲ್ಲಿ ಮತಾಂತರ, ಮೋಸ ಮಾಡಬೇಡಿ. ದಯವಿಟ್ಟು ಅದನ್ನ ಬಿಟ್ಟು ಬಿಡಿ ನೀವು ಏಸುವನ್ನ ಆರಾಧನೆ ಮಾಡಿ. ನಾವು ಕೃಷ್ಣನ ಆರಾಧಿಸುತ್ತೇವೆ. ವೋಟಿನ, ಸೀಟಿನ, ನೋಟಿನ ರಾಜಕಾರಣ ಮಾಡಬೇಡಿ. ಧರ್ಮದ ವಿರುದ್ಧ ಮೋಸ ಮಾಡಬೇಡಿ. ಸಾಮರಸ್ಯದ ಜೀವನ ಕೆಡಿಸಲು ಅನ್ಯಾಯ ಮಾಡಬೇಡಿ ಎಂದು ಕಲ್ಲಡ್ಕ ಪ್ರಭಾಕರ ಭಟ್ ಮನವಿ ಮಾಡಿಕೊಂಡರು.

  • ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

    ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

    – ಸೋನಿಯಾ ಓಲೈಕೆಗಾಗಿ ಏಸು ಪ್ರತಿಮೆ
    – ಡಿಕೆಶಿ ಮಗಳು ಲಿಲ್ಲಿ, ಮಗ ಡೇವಿಡ್ ಆಗಬಹುದು

    ರಾಮನಗರ: ನಾವು ಶಾಂತಿ ಕದಡುತ್ತೇವೆ ಎಂದು ಡಿಕೆಶಿ ಹೇಳುತ್ತಾರೆ. ನಾವು ಶಾಂತಿ ಕದಡಿಲ್ಲ. ನೀವು ಶಾಂತಿಯ ಹೆಸರಲ್ಲಿ ನಮ್ಮ ತಾಳ್ಮೆ ಕೆದಕುತಿದ್ದೀರಿ. ಬಾಲಗಂಗಾಧರ ನಾಥ ಸ್ವಾಮಿ ಪ್ರತಿಮೆ ಮಾಡಬಹುದಿತ್ತು. ಮಹಾತ್ಮ ಗಾಂಧೀಜಿಯವರ ಮೂರ್ತಿ ನಿರ್ಮಿಸಿದರೂ ನಮಗೆ ಅಡ್ಡಿಯಿಲ್ಲ. ಆದರೆ ಸೋನಿಯಾ ಗಾಂಧಿ ಓಲೈಕೆಗಾಗಿ ಮೂರ್ತಿ ಮಾಡಿದ್ದಕ್ಕೆ ನಮ್ಮ ವಿರೋಧವಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಕಪಾಲ ಬೆಟ್ಡದ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ‘ಕನಕಪುರ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಗ್ದರಿಗೆ ಮೋಸ ಮಾಡಿ ಕೆಲಸ ಮಾಡುತ್ತಿದ್ದೀರಾ? ಮೋಸ ವಂಚನೆ ಮೂಲಕ ಪ್ರತಿಮೆ ನಿರ್ಮಿಸುತ್ತಿದ್ದೀರಾ? ಮೋಸ ವಂಚನೆಯಿಂದ ಮತಾಂತರ ಮಾಡುತ್ತಿದ್ದೀರಾ? ಈ ಮತಾಂತರಕ್ಕೆ ಡಿಕೆ ಸಹೋದರರು ಸಾಥ್ ನೀಡುತ್ತಿದ್ದಾರೆ. ನಿಮ್ಮ ಅಪ್ಪ- ಅಮ್ಮ ನಿಮಗೆ ಜನ್ಮ ನೀಡಿದ್ದಾರೆ. ನಿಮಗೆ ಶಿವ, ಸುರೇಶ ಎಂದು ಹೆಸರಿಟ್ಟಿದ್ದಾರೆ. ಸುರೇಶನ್ನು ದಿನೇಶ ಅಂತಾ ಕರೆಯಲು ಆಗುತ್ತಾ? ಒಂದು ಕಡೆಯ ಓಟು, ನೋಟು ಮುಖ್ಯವಾಯಿತೇ? ವೋಟಿಗೋಸ್ಕರ ಸೀಟಿಗೋಸ್ಕರ ಈ ರೀತಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

    ನಾವು ಮುಗ್ಧ ಜನರು, ಹಿಂದೂಗಳು ಮುಗ್ದರು. 33 ಕೋಟಿ ದೇವರು 1947ರಲ್ಲೇ ಇದ್ದಾರೆ ಎಂದು ಹೇಳುತ್ತಾರೆ. ದೇವರಲ್ಲಿ ಒಬ್ಬ ಅಲ್ಲ, ಒಬ್ಬ ಏಸು ಇದ್ದರೆ ನಮ್ಮ ವಿರೋಧವಿಲ್ಲ. ಆದರೆ ಅವರ ಹೆಸರಿನಲ್ಲಿ ಮತಾಂತರ ನಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. 33 ಕೋಟಿ ದೇವರು ಎಲ್ಲಿ ಬರುತ್ತಾರೆ ಎಂದು ಕೇಳುತ್ತಾರೆ? ನಮಗೆ 33 ಕೋಟಿ ದೇವರ ಪೈಕಿ ಒಬ್ಬರು ನಮ್ಮನ್ನು ಕಾಪಾಡುತ್ತಾರೆ ಎಂದು ಹೇಳಿದರು.

    ಪ್ರಭಾಕರ್ ಭಟ್ ಯಾರು ಅಂತಾ ಡಿಕೆ ಶಿವಕುಮಾರ್ ಹೇಳುತ್ತಾರೆ. ನಾನು ಯಾರು ಎನ್ನುವುದು ಗೊತ್ತಿಲ್ಲ ಅಂದಿದ್ದಕ್ಕೆ ಸಂತೋಷ. ಶ್ರೀರಾಮುಲು ಮಗಳ ಮದುವೆಯಲ್ಲಿ ಡಿಕೆಶಿ ನನ್ನನ್ನು ಕರೆದು ಮಾತನಾಡಿಸಿದರು. ಈಗ ಪ್ರಭಾಕರ ಭಟ್ಟ ನನಗೆ ಗೊತ್ತಿಲ್ಲ ಅಂತಾರೆ. ಮದುವೆಯಲ್ಲಿ ಸಿಕ್ಕ ಪ್ರಭಾಕರ ಭಟ್ಟನೆ ನಾನು ನೆನಪಿರಲಿ. ಇದೀಗ ನಾನು ಅವರ ಊರಿಗೆ ಬಂದಿದ್ದರೂ ನಾನು ಯಾರೂ ಎನ್ನುವುದು ಗೊತ್ತಿಲ್ಲ ಎಂದು ಹೇಳುತ್ತಾರೆ. ಡಿಕೆಶಿಯವರೇ ನಿಮ್ಮ ಮಗಳು ಲಿಲ್ಲಿ ಆಗಬಹುದು. ದುನೇಶ್ ಅಂತ ಮಗನ ಹೆಸರಿದ್ದರೆ ಅವನು ಮುಂದೆ ಡೇವಿಡ್ ಆಗಬಹುದು. ನಿಮಗೆ ಶಿವ ಅಂತ ತಮ್ಮನಿಗೆ ಸುರೇಶ ಅಂತ ಹೆಸರಿಟ್ಟಿದ್ದಾರೆ ಅದನ್ನ ಉಳಿಸಿ. ವೋಟು ಸೀಟು ಎರಡು ಆಗಿದ್ದು ಡಿಕೆಶಿ ಸಹೋದರರಿಗೆ ಈಗ ಬೇಕಾಗಿರುವುದು ನೋಟು ಎಂದು ವ್ಯಂಗ್ಯವಾಡಿದರು.

    ಅಮೆರಿಕ, ಇಂಗ್ಲೆಂಡ್ ಚರ್ಚಿನಲ್ಲಿ ಜನರೇ ಇಲ್ಲದೇ ಚರ್ಚ್ ಖಾಲಿ ಖಾಲಿ ಆಗಿದೆ. ವಿಶ್ವ ಹಿಂದೂ ಪರಿಷತ್ 3 ಖಾಲಿ ಚರ್ಚ್ ಖರೀದಿಸಿದ್ದಾರೆ. ಬಲಿದಾನಕ್ಕೆ ನಾವು ತಯಾರಿದ್ದೇವೆ. ಆದರೆ ಅದಕ್ಕೆ ಮೊದಲು ನಿಮ್ಮ ಬಲಿದಾನ ಗ್ಯಾರಂಟಿ. ಸಿದ್ದರಾಮಯ್ಯ ಜೊತೆ ಸೇರಿ ನಮ್ಮ ಮೂರುವರೆ ಸಾವಿರ ಮಕ್ಕಳ ಅನ್ನದ ಮೇಲೆ ಕಲ್ಲು ಹಾಕಿದ್ದೀರಿ. ಇಲ್ಲಿ ಒಡೆದ ಅಕ್ರಮ ಕಲ್ಲು ತಂದು ಕಲ್ಲಡ್ಕದ ಮಕ್ಕಳ ತಟ್ಟೆಗೆ ಹಾಕಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

    ರಾಂಚಿ ಯಲ್ಲಿ ಪೋಪ್ ಬರುವ ಕಾರ್ಯಕ್ರಮವಿತ್ತು. ಮತಾಂತರದ ಬಗ್ಗೆ ಸಂಘ ಎಚ್ಚರಿಸಿತು. ಆಗ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಕಾಂಗ್ರೆಸ್ ಡಿಸಿ. ಅವನು ಪೋಪ್ ಅವರನ್ನ ತಡೆಯಲು ಆಗುವುದಿಲ್ಲ ಎಂದ. ಆಗ ಅಲ್ಲಿದ್ದ ಆದಿವಾಸಿ ಜನಾಂಗದವನೊಬ್ಬ ಬಾಣವನ್ನ ಮೇಲಕ್ಕೆ ಬಿಟ್ಟ ಹಾರುತ್ತಿದ್ದ ಹಕ್ಕಿ ಕೆಳಗೆ ಬಿತ್ತು. ಆಗ ಡಿಸಿ ನನಗೂ ಬಾಣ ಬಿಡುಬಹುದು ಎಂದು ಹೆದರಿದ. ಇಲ್ಲೂ ಹೀಗೆಯೇ ಆಗಬೇಕು ಎಂದು ಹೇಳಿದರು.

  • ಡಿಕೆಶಿ ಕನಕಪುರದ ಎಂಎಲ್‍ಎ ಅಷ್ಟೇ ಎಂದು ಗುಡುಗಿದ ಆರ್.ಅಶೋಕ್

    ಡಿಕೆಶಿ ಕನಕಪುರದ ಎಂಎಲ್‍ಎ ಅಷ್ಟೇ ಎಂದು ಗುಡುಗಿದ ಆರ್.ಅಶೋಕ್

    ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ ರಾಜಕೀಯಯಕ್ಕೆ ತಿರುಗಿದೆ. ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಬಿಜೆಪಿ ಸಾಥ್ ನೀಡಿದ್ದು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ಬಾಣಗಳ ಸುರಿಮಳೆ ಜೋರಾಗಿದೆ. ಕನಕಪುರ ಡಿಕೆಶಿಗೆ ಸಂಬಂಧಿಸಿದ್ದಲ್ಲ, ಡಿಕೆಶಿ ಕನಕಪುರ ಎಂಎಲ್‍ಎ ಅಷ್ಟೇ ಅಂತಾ ಕಂದಾಯ ಸಚಿವ ಆರ್.ಅಶೋಕ್ ಗುಡುಗಿದ್ದಾರೆ.

    ಬೆಂಗಳೂರಿನ ಪದ್ಮನಾಭನಗರದಲ್ಲಿ ಮಾತನಾಡಿದ ಆರ್.ಅಶೋಕ್, ಗಲಾಟೆ ಮಾಡಬೇಡಿ ಅಂತಾ ಡಿಕೆಶಿ ಅವರ ಕಾರ್ಯಕರ್ತರಿಗೆ ಹೇಳಿದ್ರೆ ಗಲಾಟೆ ಮಾಡಿ ಅಂತಾ ಅರ್ಥ. ನಮ್ಮ ಸರ್ಕಾರ ಗಲಾಟೆ ಮಾಡಿಸಲ್ಲ, ಗಲಾಟೆ ಮಾಡಿಸಲು ಡಿಕೆಶಿಯಿಂದ ಸಾಧ್ಯ ಅಂತಾ ಟಾಂಗ್ ಕೊಟ್ಟರು.

    ಶಿವಕುಮಾರ್ ಪ್ರಚೋದಿಸುವ ಹೇಳಿಕೆ ಕೊಡಬಾರದು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮೀಜಿ ರಾಮನಗರ ಜಿಲ್ಲೆಯವರು. ಶಿವಕುಮಾರ್ ಅವರಿಗೆ ಇವರು ಯಾರೂ ನೆನಪಾಗಿಲ್ವಾ? ಮೊದಲು ಹೆತ್ತ ತಾಯಿಯನ್ನು ಪೂಜಿಸೋಣ, ನಂತರ ಪಕ್ಕದ ಮನೆ ತಾಯಿಯನ್ನು ಪೂಜಿಸೋಣ ಎಂದರು.

    ಇನ್ನು ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಡಿಸಿ ಮೌಖಿಕ ವರದಿ ನೀಡಿದ್ದು, ಸಮಗ್ರವಾಗಿ ಲಿಖಿತ ವರದಿ ನೀಡುವಂತೆ ಸೂಚಿಸಿರುವುದಾಗಿ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಡಿಸೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದಾರೆ. ಆದರೆ ಎರಡು ವರ್ಷಗಳಿಂದ ಕೆಲಸ ನಡೆಯುತ್ತಿದೆ. ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕಕ್ಕೆ ಅನುಮತಿಯನ್ನೇ ಪಡೆದಿಲ್ಲ ಅನ್ನೋದು ಆರ್. ಅಶೋಕ್ ವಾದ. ಹಾಗಾಗಿ ಸರ್ಕಾರ ಕಾನೂನಾತ್ಮಕವಾಗಿ ಹೋಗುತ್ತಿದೆ ಅಷ್ಟೇ. ಸಮಯಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

  • ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ ಏಸುಕ್ರಿಸ್ತನ ಪ್ರತಿಮೆ ವಿವಾದ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಾಕಷ್ಟು ವಿರೋಧಗಳ ನಡುವೆ ಇದೀಗ ಏಸುಕ್ರಿಸ್ತನ ಬೆಂಬಲಕ್ಕೂ ಕೆಲ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ.

    ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣವಾಗುತ್ತಿರುವ 10 ಏಕರೆ ಜಾಗವನ್ನು ಸರ್ಕಾರ ವಾಪಸ್ ಪಡೆಯುವುದಾದರೆ, ಈ ಹಿಂದೆ ಮಠ, ಆಶ್ರಮ, ದರ್ಗಾದಂತಹ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಜಾಗಗಳನ್ನು ಕೂಡ ವಾಪಸ್ ಪಡೆಯಬೇಕು ಎಂದು ಕರ್ನಾಟಕ ಸಮತಾ ಸೈನಿಕದಳದ ಜಿಲ್ಲಾದ್ಯಕ್ಷ ಕೋಟೆ ಕುಮಾರ್ ಆಗ್ರಹಿಸಿದ್ದಾರೆ.

    ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘಟನೆ ವತಿಯಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಪ್ರತಿಮೆ ನಿರ್ಮಾಣದ ವಿಚಾರವಾಗಿ ಏನೆಲ್ಲಾ ಅನುಕೂಲಗಳು ಬೇಕಿದೆ, ಜೊತೆಗೆ ಪ್ರತಿಮೆ ವಿರೋಧಿಸುವವರ ವಿರುದ್ಧ ಹೋರಾಟಕ್ಕೂ ತಾವು ಕೈ ಜೋಡಿಸುವುದಾಗಿ ತಿಳಿಸಿದರು.

    ಕೆಲವರು ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರವಾಗಿ ಆಧಾರಗಳೇ ಇಲ್ಲದ ಮತಾಂತರದ ಊಹಾಪೋಹದ ಆರೋಪಗಳನ್ನು ಮಾಡುತ್ತಿದ್ದಾರೆ. ಹಾರೋಬೆಲೆಯಲ್ಲದೇ ಪ್ರತಿಮೆಯಾದರೆ ವಿಶ್ವದ ಜನ ಈ ಭಾಗಕ್ಕೆ ಬರುತ್ತಾರೆ ಪ್ರವಾಸೋದ್ಯಮ ಕೂಡ ಅಭಿವೃದ್ದಿಯಾಗಲಿದೆ. ಅಲ್ಲದೇ ಈ ಭಾಗದ ರೈತರ ಜಮೀನುಗಳು ಚಿನ್ನದಂತಹ ಬೆಲೆಯನ್ನ ಪಡೆದುಕೊಳ್ಳಲಿವೆ. ಆದರೆ ಧರ್ಮದ ಹೆಸರಿನಲ್ಲಿ ಕಲಹವನ್ನುಂಟು ಮಾಡುವಂತಹ ಕೆಲಸವನ್ನು ಮತಾಂಧರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಲಂಡನ್‍ನಲ್ಲಿ ವಿಶ್ವಮಾನವತೆ ಸಾರಿದ ಬಸವಣ್ಣನ ವಿಗ್ರಹವನ್ನ ಇಲ್ಲಿಂದ ತೆರಳಿ ಅಲ್ಲಿ ವಾಸ ಮಾಡುತ್ತಿರುವ ಹಿಂದೂಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಆದರೆ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಪ್ರತಿಮೆಗೆ ಮತಾಂಧರಿಂದ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇದೇ ಜ.13ಕ್ಕೆ ಕನಕಪುರ ಚಲೋಗೆ ಮುಂದಾಗಿದ್ದಾರೆ, ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

    ಸರ್ವಧರ್ಮದ ರಾಷ್ಟ್ರ ನಮ್ಮದಾಗಿದ್ದು. ಸಂವಿಧಾನದಲ್ಲೇ ಸರ್ವಧರ್ಮದ ಕಲ್ಪನೆಯನ್ನ ಹೇಳಲಾಗಿದೆ. ದೇಶದಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ, ಜೈನ, ಭೌದ್ಧರು ವಾಸಿಸುತ್ತಿದ್ದಾರೆ. ಕೆಲವರು ಸಮಾಜದ ಸ್ವಾಸ್ಥ್ಯ ಕದಡುವಂತಹ ಕೆಲಸ ಮಾಡುತ್ತಿದ್ದಾರೆ. ಪ್ರತಿಮೆ ನಿರ್ಮಾಣದ ಜಾಗ ವಾಪಸ್ ಪಡೆಯುವಂತೆ ಆಗ್ರಹಿಸಿರುವುದು ಸರಿಯಲ್ಲ ಎಂದರು.

     

  • ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ: ಡಿಕೆಶಿ

    ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ: ಡಿಕೆಶಿ

    ಬೆಂಗಳೂರು: ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ರೇಷ್ಮೆ, ಕಡಲೆ, ಅರಿಶಿನ ಬೆಳೆಯುತ್ತೇನೆ ವಿನಃ ಆದರೆ ದೆಹಲಿಗೆ ಹೋಗಲ್ಲ. ರಾಜ್ಯದಲ್ಲಿಯೇ ರಾಜಕಾರಣ ಮಾಡುತ್ತೇನೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ನಾನು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಸದಾಶಿವ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಸಂಬಂಧಪಟ್ಟವರನ್ನ ಕೇಳಿ. ಎಐಸಿಸಿ ಅಧ್ಯಕ್ಷರು ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ನಾನು ಅಧ್ಯಕ್ಷರನ್ನ ಭೇಟಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ವಿಚಾರ ನಾನಂತು ಮಾತನಾಡಲ್ಲ. ನನಗೇನು ಅತುರ ಇಲ್ಲ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಡಿಕೆಶಿ ಕೆಪಿಸಿಸಿ ಪಟ್ಟದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಏನೇ ಆದರು ರಾಜ್ಯ ರಾಜಕಾರಣದ ಮೇಲೆ ನನ್ನ ಕಣ್ಣು ಅನ್ನೋದನ್ನ ಸ್ಪಷ್ಟವಾಗಿ ತಿಳಿಸಿದ್ದಾರೆ.

    ಸಿಬಿಐ ಮೇಲೆ ನನಗೆ ನಂಬಿಕೆ ಇದೆ. ಸಿಬಿಐ ತನ್ನ ಗೌರವ ಉಳಿಸಿಕೊಂಡಿದೆ. ಸಿಬಿಐ ಯಾವುದೇ ನೋಟಿಸ್ ನನಗೆ ಕೊಟ್ಟಿಲ್ಲ. ಕೇಂದ್ರ ಮತ್ತು ಯಡಿಯೂರಪ್ಪ ಸಿಬಿಐ ಅವರಿಗೆ ನನ್ನ ಮನೆ ಸುತ್ತಲೂ ಇರುವಂತೆ ಹೇಳಿದ್ದಾರೆ. ರಾಜ್ಯದಲ್ಲಿ ಲೋಕಾಯುಕ್ತ, ಎಸಿಬಿ ಇದ್ದರೂ ಸಿಎಂ ಸಿಬಿಐಗೆ ಪತ್ರ ಬರೆದಿದ್ದಾರೆ. ಎಲ್ಲವನ್ನೂ ಆರ್‍ ಟಿಐ ಅಡಿ ದಾಖಲೆ ತೆಗೆದುಕೊಂಡಿದ್ದೇನೆ. ಮಾಧ್ಯಮಗಳ ಮುಂದೆ ಏನೂ ಹೇಳಲ್ಲ ಎಂದರು.

  • ಏಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಿ- ಸಿಎಂ ಭೇಟಿ ಮಾಡಿದ ಕ್ರೈಸ್ತರ ನಿಯೋಗ

    ಏಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಿ- ಸಿಎಂ ಭೇಟಿ ಮಾಡಿದ ಕ್ರೈಸ್ತರ ನಿಯೋಗ

    ಬೆಂಗಳೂರು: ಕನಕಪುರದ ಹಾರೋಬೆಲೆಯಲ್ಲಿರುವ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಲು ಅವಕಾಶ ಕೋರಿ ಕ್ರೈಸ್ತರ ನಿಯೋಗ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ.

    ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೊ ನೇತೃತ್ವದ ನಿಯೋಗದಿಂದ ಇಂದು ಮಧ್ಯಾಹ್ನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಬಿಎಸ್‍ವೈ ಭೇಟಿ ಮಾಡಿ ಮಾತುಕತೆ ನಡೆಸಲಾಯ್ತು. ಈ ವೇಳೆ ಕಪಾಲ ಬೆಟ್ಟದಲ್ಲಿ ಕ್ರೈಸ್ತ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡುವಂತೆ ಸಿಎಂಗೆ ಮನವಿ ನಿಯೋಗದಿಂದ ಮನವಿ ಮಾಡಲಾಯಿತು.

    ಸಿಎಂ ಭೇಟಿ ಬಳಿಕ ಮಾತಾಡಿದ ಪೀಟರ್ ಮಚಾಡೊ, ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಸಿಎಂಗೆ ಮನವಿ ಮಾಡಿದ್ದೇವೆ. ಇದರಲ್ಲಿ ಯಾರೂ ರಾಜಕೀಯ ಮಾಡೋದು ಬೇಡ. ಸುಮಾರು ವರ್ಷಗಳಿಂದಲೂ ಏಸುವನ್ನು ಅಲ್ಲಿ ನಾವು ಪೂಜಿಸುತ್ತಾ ಬಂದಿದ್ದೇವೆ. ಅಲ್ಲಿ ಈಗ ಏಸು ಪ್ರತಿಮೆ ನಿರ್ಮಾಣ ಆಗುತ್ತಿದೆ. ಇದಕ್ಕೆ ವಿರೋಧ ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

    ಕಪಾಲ ಬೆಟ್ಟದಲ್ಲಿ ಹಿಂದೂ ದೇವತೆಗಳನ್ನು ಪೂಜೆ ಮಾಡುತ್ತಾ ಇದ್ದರು ಎನ್ನುವ ವಿಷಯದ ಬಗ್ಗೆ ನಮಗೆ ಮಾಹಿತಿ ಇಲ್ಲ. ಅಷ್ಟಕ್ಕೂ ಅದು ಕಪಾಲಿ ಬೆಟ್ಟ ಅಲ್ಲ. ಅದು ಕಪಾಲ ಬೆಟ್ಟ. ಕಪಾಲಿ ಬೆಟ್ಟ ಅಂತ ಆಗಿದ್ದು ಹೇಗೆಂದು ಗೊತ್ತಿಲ್ಲ ಅಂತ ಇದೇ ವೇಳೆ ಪೀಟರ್ ಮಚಾಡೊ ಹೇಳಿದರು.

    ಕಪಾಲ ಬೆಟ್ಟದ ಸುತ್ತಮುತ್ತಲಿನ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪವನ್ನೂ ಅವರು ಅಲ್ಲಗಳೆದರು. ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ. ಮತಾಂತರ ಮಾಡೋದು ಸುಲಭ ಅಲ್ಲ. ಹಿಂದೆ ಬಂದಿದ್ದ ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿರಬಹದು. ನಾವು ಒಂದೂವರೆ ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತಿದ್ದೇವೆ. ಒಬ್ಬರನ್ನಾದರೂ ಮತಾಂತರ ಮಾಡಿದ್ದನ್ನು ತೋರಿಸಲಿ ಎಂದು ಪೀಟರ್ ಮಚಾಡೋ ಸ್ಪಷ್ಟಪಡಿಸಿದರು.

    ಕ್ರೈಸ್ತರ ನಿಯೋಗಕ್ಕೆ ಮುಖ್ಯಮಂತ್ರಿಗಳು ಯಾವುದೇ ಸ್ಪಷ್ಟ ಭರವಸೆ ಕೊಟ್ಟಿಲ್ಲ ಎನ್ನಲಾಗಿದೆ. ರಾಮನಗರ ಜಿಲ್ಲಾಡಳಿತದಿಂದ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • “ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಲ್ಲ, ಕೃಷ್ಣನೂ ಒಂದೇ, ಏಸುವೂ ಒಂದೇ, ಆದರೆ..”

    “ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಲ್ಲ, ಕೃಷ್ಣನೂ ಒಂದೇ, ಏಸುವೂ ಒಂದೇ, ಆದರೆ..”

    – ವಿಧಾನ ಸೌಧದಲ್ಲಿ ಅಶೋಕ್, ಸಿಟಿ ರವಿ ಪ್ರತಿಕ್ರಿಯೆ
    – ಇಷ್ಟು ದಿನ ಸುಮ್ಮನೆ ಇದ್ದದ್ದನ್ನ ಕೆಣಕಿದ್ದು ಯಾಕೆ?

    ಬೆಂಗಳೂರು: ಏಸು ಪ್ರತಿಮೆ ನಿರ್ಮಾಣದ ಬಗ್ಗೆ ನಮ್ಮ ವಿರೋಧ ಇಲ್ಲ. ಡಿಕೆ ಶಿವಕುಮಾರ್ ಏನಾದ್ರೂ ಮಾಡಿಕೊಳ್ಳಲಿ. ಆದರೆ ಜಾಗ ಯಾವುದು ಎನ್ನುವುದನ್ನು ನೋಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

    ವಿಧಾನ ಸೌಧದಲ್ಲಿ ಕ್ಯಾಬಿನೆಟ್ ಸಭೆಗೂ ಮುನ್ನ ಮಾತನಾಡಿದ ಅವರು, ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಸಂಬಂಧಿಸಿದಂತೆ ಇವತ್ತು ಅಥವಾ ನಾಳೆ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬೆಟ್ಟ ಇದೆ, ಪಕ್ಕದಲ್ಲಿ ಡ್ಯಾಮ್ ಇದೆ. ಆದರೆ ಜಾಗ ಯಾವುದು ಎನ್ನುವುದನ್ನು ನೋಡಬೇಕು. ಇಷ್ಟು ದಿನ ಸುಮ್ಮನೆ ಇದ್ದದ್ದನ್ನ ಕೆಣಕಿದ್ದು ಯಾಕೆ ಎನ್ನುವುದು ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

    ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಇಸ್ಕಾನ್‍ನವರು ಥೀಮ್ ಪಾರ್ಕ್ ಮಾಡಲು ಹೊರಟಾಗ ಡಿ.ಕೆ.ಶಿವಕುಮಾರ್ ಇಲ್ಲ ಸಲ್ಲದ ಕಿರುಕುಳ ನೀಡಿ ಆ ಯೋಜನೆ ನಿಲ್ಲುವ ಹಾಗೆ ಮಾಡಿದ್ದರು. ಆದರೆ ನಾವು ಹಾಗೆ ಮಾಡುವುದಿಲ್ಲ. ನಮಗೆ ಕೃಷ್ಣನೂ ಒಂದೇ ಏಸುವೂ ಒಂದೇ. ಆದರೆ ಗೋಮಾಳ ಜಮೀನು ದುರುಪಯೋಗದ ಬಗ್ಗೆ ಈಗಾಗಲೇ ಕಂದಾಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

    ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ 114 ಅಡಿಯ ಏಕಶಿಲಾ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಿವಕುಮಾರ್ ಡಿ.25ರ ಕ್ರಿಸ್‍ಮಸ್ ದಿನದಂದು ಶಂಕುಸ್ಥಾಪನೆ ಮಾಡಿದ್ದಾರೆ. ಕ್ರಿಸ್ ಮಸ್ ಶುಭ ದಿನದ ಹಿನ್ನೆಲೆಯಲ್ಲಿ ಪ್ರತಿಮೆಗೆ ಸಿದ್ಧವಾಗಿರುವ ಕಲ್ಲಿಗೆ ಉಳಿ ಪೆಟ್ಟು ಹಾಕುವ ಮೂಲಕ ಶಿಲಾನ್ಯಾಸ ನೆರವೇರಿಸಿದ್ದರು.

    ಅದರಲ್ಲಿ 13 ಅಡಿ ಮೆಟ್ಟಿಲುಗಳು ಇದ್ದು, ಅದರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಹಾರೋಬೆಲೆ ಗ್ರಾಮದಲ್ಲಿ ಶೇಕಡಾ 99 ರಷ್ಟು ಮಂದಿ ಕ್ರೈಸ್ತ ಸಮುದಾಯದವರಿದ್ದಾರೆ. ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡಿದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರಿಗೆ ಕ್ರಿಶ್ಚಿಯನ್ನರು ಕೃತಜ್ಞತೆ ಸಲ್ಲಿಸಿದ್ದರು.

    ಬಿಜೆಪಿ ವಿರೋಧ: ಇತ್ತ ಏಸು ಪ್ರತಿಮೆ ಸ್ಥಾಪನೆ ಬಗ್ಗೆ ಬಿಜೆಪಿ ಕಟು ಟೀಕೆ ಮಾಡಿದೆ. ಯಾವುದೋ ಆಸೆಗಾಗಿ ತಿಹಾರ್ ಜೈಲಿನಲ್ಲಿದ್ದು ಬಂದಿರೋ ಡಿಕೆಶಿ, ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು ಇಂತಹ ಕೆಲಸ ಮಾಡಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಅನಂತ್‍ಕುಮಾರ್ ಹೆಗ್ಡೆ ಟೀಕಿಸಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಕೆಂಪೇಗೌಡರ ಅನುಯಾಯಿ ಅಂತಾರೆ. ನಿರ್ಮಾಲಾನಂದ ಸ್ವಾಮಿಗಳ ಭಕ್ತ ಅಂತಾರೆ. ಯೇಸು ಪ್ರತಿಮೆ ಮಾಡೋವಾಗ ಕೇಂಪೆಗೌಡರ ನೆನಪು ಯಾಕೆ ಆಗಿಲ್ಲ? ಸ್ವಾಮೀಜಿಗಳ ನೆನಪು ಯಾಕೆ ಆಗಿಲ್ಲ. ಡಿಕೆ ಶಿವಕುಮಾರ್ ಹಿಂದೂ ಸಮಾಜದ ದೇವರ ಬಗ್ಗೆಯೂ ಚಿಂತಿಸಲಿ ಅಂತ ಮಂಗಳೂರಲ್ಲಿ ಸಚಿವ ಕೆಎಸ್ ಈಶ್ವರಪ್ಪ ಪ್ರಶ್ನಿಸಿದ್ದರು.