ಮಡಿಕೇರಿ: ರಾಮನಗರ (Ramanagara) ಜಿಲ್ಲೆಯನ್ನು ಬೆಂಗಳೂರಿಗೆ (Bengaluru) ವಿಲೀನ ಮಾಡುವ ವಿಚಾರ ಡಿಕೆ ಶಿವಕುಮಾರ್ (DK Shivakumar) ಅವರ ನಿರ್ಧಾರ ಮುಂದಾಲೋಚನೆಯಿಂದ ಮಾಡಿದ್ದಾರೆ. ಅದು ರಾಮನಗರ ಜಿಲ್ಲೆಯ ಪರವಾಗಿ ಇರುತ್ತದೆ ಎಂದು ಮೀನುಗಾರಿಕ ಸಚಿವ ಮಂಕಾಳ ವೈದ್ಯ (Mankala Vaidya) ಹೇಳಿದ್ದಾರೆ.
ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ಬಳಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಏನು ನಿರ್ಧಾರ ಮಾಡುತ್ತಾರೆ ಅದು ರಾಮನಗರ ಜಿಲ್ಲೆಯ ಜನರ ಪರವಾಗಿ ಇರುತ್ತದೆ. ರಾಮನಗರ ಎಂದರೆ ಡಿಕೆ ಶಿವಕುಮಾರ್ ಅವರ ಆಸ್ತಿ. ಅವರು ಯಾವುದೇ ರೀತಿಯ ವ್ಯತ್ಯಾಸ ಆಗಲು ಬಿಡುವುದಿಲ್ಲ. ಅಲ್ಲಿಯ ಜನರಿಗೆ ರಾಮನಗರಕ್ಕೆ ಒಳ್ಳೆಯದೇ ಆಗುತ್ತದೆ. ಅವರಿಂದ ಕೆಟ್ಟದು ಅಂತೂ ಆಗೋಲ್ಲ. ಅವರು ಏನು ನಿರ್ಧಾರ ಮಾಡುತ್ತಾರೋ ಅದು ಸರಿಯಾಗಿಯೇ ಇರುತ್ತದೆ ಎಂದು ಭರವಸೆ ನೀಡಿದರು.
ರಾಮನಗರ ಜಿಲ್ಲೆಯ ಜನರು ಭೂಮಿಗೆ ಬಂಗಾರ ಬೆಲೆ ಬರುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆ ಶಿವಕುಮಾರ್ ಅವರ ಆಸ್ತಿಗೆ ಬೆಲೆ ಬರುತ್ತದೆ ಎಂದು ಹೇಳಿಲ್ಲ. ಸಾರ್ವಜನಿಕರ ಆಸ್ತಿಗೆ, ಬಡವರ ಆಸ್ತಿ, ಸಾಮಾನ್ಯ ಜನರ ಆಸ್ತಿಗೆ ಬೆಲೆ ಬರುತ್ತದೆ ಎಂದು ಹೇಳಿದ್ದಾರೆ. ಅದರಲ್ಲಿ ಏನು ತಪ್ಪು ಇದೆ? ರಾಮನಗರ ಜಿಲ್ಲೆ ಜನರ ಪರವಾಗಿ ಅವರ ನಿರ್ಧಾರ ಇರುತ್ತದೆ. ಜನರ ವಿರುದ್ಧವಾಗಿ ಯಾವುದೇ ನಿರ್ಧಾರ ಇರೋಲ್ಲ. ಜನರ ವಿಶ್ವಾಸ ತೆಗೆದುಕೊಂಡು ಅವರು ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾದ್ರೆ ಅಮರಣಾಂತ ಉಪವಾಸ ಮಾಡ್ತೀನಿ: ಹೆಚ್‌ಡಿಕೆ ಪ್ರತಿಜ್ಞೆ
ಬೆಂಗಳೂರು: ರಾಮನಗರ (Ramanagara) ಜಿಲ್ಲೆಯ ಹೆಸರು ಬದಲಾವಣೆ ಮಾಡಿದರೆ ನಾನು ಅಮರಣಾಂತ ಉಪವಾಸ ಸತ್ಯಾಗ್ರಹ (Hunger Strike) ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರತಿಜ್ಞೆ ಮಾಡಿದ್ದಾರೆ.
ರಾಮನಗರ ಜಿಲ್ಲೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಸವಾಲು ಸ್ವೀಕರಿಸುತ್ತೇನೆ. ನನ್ನ ಆರೋಗ್ಯ ಲೆಕ್ಕಿಸದೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಡಿಕೆ ಶಿವಕುಮಾರ್ ಬೆಂಗಳೂರು ಮೂಲದವರಲ್ಲ. ಬೆಂಗಳೂರು ಇಡೀ ಕರ್ನಾಟಕ ರಾಜ್ಯದ ಭಾಗ. ಬೆಂಗಳೂರಿನ ಆರ್ಥಿಕ ಶಕ್ತಿ ಇಡೀ ಕರ್ನಾಟಕ ಅಭಿವೃದ್ಧಿಗೆ ಕಾರಣ ಎಂದು ವಾಗ್ದಾಳಿ ನಡೆಸಿದರು.
ಎಷ್ಟೆಲ್ಲಾ ಕೆರೆ-ಕಟ್ಟೆ ನುಂಗಿ ಹಾಕಿದ್ದೀರಾ? ಯಾವ್ ಯಾವ್ ಕೆರೆ ನುಂಗಿದ್ದೀರಾ ಪಟ್ಟಿ ಬೇಕಾ? ಯಾವ ಮುಖ ಇಟ್ಟುಕೊಂಡು ಕೆಂಪೇಗೌಡರ ಹೆಸರು ಹೇಳ್ತೀರಾ? ಈ ಬಗ್ಗೆ ಚರ್ಚೆ ನಡೆಸಲು ಪಾಪ ಅವರು ಬ್ಯುಸಿ ಇದ್ದಾರೆ. ಅವರು ಯಾವಾಗ ಬೇಕಾದರೂ ಸಮಯ ಫಿಕ್ಸ್ ಮಾಡಲಿ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ನಾನು ಹುಟ್ಟಿದ್ದು ಹಾಸನ ಆದರೂ ನನ್ನ ಜೀವನ ಅಂತ್ಯ ಆಗೋದು ರಾಮನಗರದಲ್ಲೇ. ನನ್ನ ಹೋರಾಟಕ್ಕೆ ರಾಮನಗರದ ಜನರ ಸಹಕಾರ ಕೇಳುತ್ತೇನೆ. ನಮ್ಮ ಸಮಾಜದವರು ಹೇಳಿದ್ರು ಅಂತ ಸುಮ್ಮನೆ ಇದ್ದೆ ಎನ್ನುವ ಡಿಕೆ ಹೇಳಿಕೆ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎಲ್ಲವು ಜನರೇ ತೀರ್ಮಾನ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು. ಇದನ್ನೂ ಓದಿ: ಚರ್ಚೆಗೆ ಡೇಟ್, ಟೈಮ್ ಫಿಕ್ಸ್ ಮಾಡಿ: ಡಿ.ಕೆ ಶಿವಕುಮಾರ್
ಬೆಂಗಳೂರು: ಕನಕಪುರದಲ್ಲಿ (Kanakapura) ಮಿಲ್ಕ್ ಪೌಡರ್ ಮಾಡಲು ಭೂಮಿ ಖರೀದಿಗೆ ರೈತರಿಗೆ ಪರಿಹಾರ ಕೊಟ್ರಾ? ನಿಮ್ಮ ಪಟಾಲಂಗಳಿಗೆ ಕೊಟ್ರಾ? ಯಾರಿಗೆ ಎಷ್ಟೆಲ್ಲಾ ಕೊಟ್ಟಿದ್ದೀರಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‍ಡಿಕೆ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ರಾಮನಗರಕ್ಕೆ ನಿಮ್ಮ ಕೊಡುಗೆ ಏನು ಎಂದು ಹೆಚ್‍ಡಿಕೆಗೆ ಡಿಕೆ ಶಿವಕುಮಾರ್ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಈಗ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಹೊರಟಿದ್ದೀರಿ. ಈ ಮೂಲಕ ಬೆಂಗಳೂರು (Bengaluru) ಬ್ರ್ಯಾಂಡ್ ಹೆಸರನ್ನು ವಿಸ್ತರಣೆ ಎಂದು ಹೇಳುತ್ತಿದ್ದಾರೆ. ಬೆಂಗಳೂರು ಬ್ರ್ಯಾಂಡ್ ಬೆಂಗಳೂರು ಮಾಡುತ್ತಿದ್ದೀರಾ? ಕಸದ ರಾಶಿ ಇದು ಎಂದು ಫೋಟೋ ತೋರಿಸಿ, ಇದು ನಿಮ್ಮ ಬ್ರ್ಯಾಂಡ್ ಬೆಂಗಳೂರಾ ಎಂದು ಡಿಕೆಶಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನಾನು ಸಿದ್ದರಾಮಯ್ಯಗೆ ರಾಜಕೀಯ ವಿಲನ್ನೇ: ಹೆಚ್‍ಡಿಕೆ ವಾಗ್ದಾಳಿ
ಬಿಡದಿಯಲ್ಲಿ ಜಪಾನ್ ಟೌನ್ ಶಿಪ್ ತರುವ ಯೋಜನೆ ಇತ್ತು. ಕಾಂಗ್ರೆಸ್ ಯಾಕೆ ತಂದಿಲ್ಲ? ಯಾರು ಜಮೀನು ಮಾರಬೇಡಿ ಎನ್ನುತ್ತಿದ್ದಾರೆ. ಕನಕಪುರದಲ್ಲಿ 50 ಎಕ್ರೆ ಜಾಗದಲ್ಲಿ ಮೆಗಾ ಡೈರಿ ಆರಂಭಿಸಿದ್ದೀರಿ. ಈ ಡೈರಿಗೆ ಜಾಗ ನೀಡಿದ ರೈತರಿಗೆ ಎಷ್ಟು ಕೊಟಿದ್ದೀರಿ? ರೈತರಿಗೆ 50 ಸಾವಿರ ರೂ. ನಿಂದ 1 ಲಕ್ಷ ರೂ. ಪರಿಹಾರ ಧನ ಕೊಟ್ಟಿದ್ದಾರೆ. ಆದರೆ ಡಿಕೆಶಿ ಪಟಾಲಂನವರು 55 ಲಕ್ಷ ರೂ. ಪರಿಹಾರ ತೆಗೆದುಕೊಳ್ಳುತ್ತಾರೆ. ಇದು ಇವರ ಇತಿಹಾಸ ಎಂದು ಕಿಡಿಕಾರಿದರು.
ವಿಜಯದಶಮಿ ಆಚರಣೆ ವೇಳೆ ಸಿಎಂ ಮತ್ತು ಡಿಸಿಎಂ ಅವರು ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ಮಾಡಿದ್ದಾರೆ. ಡಿಸಿಎಂ ಅವರು ಟಿಆರ್‌ಪಿ ಜಾಸ್ತಿ ಇರುವ ಸುದ್ದಿವಾಹಿನಿಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಅವರ ಆಹ್ವಾನವನ್ನು ಸ್ವೀಕರಿಸುತ್ತೇನೆ. ನಾನು ಪಲಾಯಾನ ಮಾಡುವವನಲ್ಲ. ನನ್ನ ಬಳಿ ಅಷ್ಟು ಸರಕುಗಳು ಇದೆ ಎಂದು ಚರ್ಚೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಇನ್ನೂ ಸಿಎಂ ಅವರು ಆರ್ಥಿಕ ವಿಚಾರ ಸಂಬಂಧ ಶ್ವೇತ ಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ನಾನು ಸ್ವಾಗತ ಮಾಡ್ತೀನಿ. ಬಿಜೆಪಿ ಆಡಳಿತದಿಂದ ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂದು ಹೇಳುತ್ತಾರೆ. ಈ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು 15 ಲಕ್ಷ ಮನೆಗಳನ್ನು ಕೊಡುವುದಾಗಿ ಚುನಾವಣೆ ಮುಂಚೆ ಘೋಷಣೆ ಮಾಡಿದ್ದರು. ಅವರು ಮನೆ ಕಟ್ಟೋಕೆ 2700 ಕೋಟಿ ರೂ. ಹಣ ಇಟ್ಟಿದ್ದಾರೆ. ಮೊದಲು 29 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದಿದ್ದರು. ನೀರಾವರಿಗೆ 1 ಲಕ್ಷ ಕೋಟಿ ರೂ. ಇಡುವುದಾಗಿ ಚುನಾವಣೆ ವೇಳೆ ಘೋಷಣೆ ಮಾಡಿದ್ದರು. ಬಜೆಟ್ ನಲ್ಲಿ ಎಷ್ಟು ಇಟ್ಟಿದ್ದಾರೆ ಎಂದು ಹೆಚ್‍ಡಿಕೆ ಪ್ರಶ್ನಿಸಿದರು.
1500 ಕೋಟಿ ರೂ. ಯಾವುದೇ ವರ್ಕ್ ಆರ್ಡರ್ ಇಲ್ಲದೇ ಕಂಟ್ರಾಕ್ಟರ್‍ಗೆ ಕೊಟ್ಟು ಹೊಗಿದ್ದರು. ನಿಯಮ ಮೀರಿ ಲೂಟಿ ಹೊಡೆಯಲು ಹಣ ಬಿಡುಗಡೆ ಮಾಡಿದ್ದರು. ಹಣಕಾಸು ಇಲಾಖೆ ಅನುಮತಿ ಇಲ್ಲದೆ 1,500 ಕೋಟಿ ರೂ. ಹೇಗೆ ಬಿಡುಗಡೆ ಮಾಡಿದ್ದೀರಿ? ಇದೆಲ್ಲ ಅಧಿವೇಶನದಲ್ಲಿ ಮಾತನಾಡುತ್ತೇನೆ. ನಿಮ್ಮ ಪ್ರಜ್ಞಾವಂತಿಕೆ ನನಗೆ ಬೇಡ. ನಮ್ಮ ಮೈತ್ರಿ ಬಗ್ಗೆ ಈಗ ಮಾತನಾಡುವುದು ಬೇಡ. ಮೇಲಿನ ಎಲ್ಲಾ ವಿಚಾರಗಳನ್ನು ನಾನು ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ಹೇಳಿ ಕಿಡಿಕಾರಿದರು. ಇದನ್ನೂ ಓದಿ: ಧರ್ಮಸ್ಥಳಕ್ಕೆ ಬರಲು ನಾನು ಸಿದ್ಧ- ಬಾಲಕೃಷ್ಣ ಸವಾಲು ಸ್ವೀಕರಿಸಿದ ಹೆಚ್ಡಿಕೆ
ಬೆಂಗಳೂರು: ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ಆಸ್ತಿಯ ಮೌಲ್ಯ ಹತ್ತು ಪಟ್ಟು ಹೆಚ್ಚಾಗಲಿದೆ. ನಿಮ್ಮ ಕೃಷಿ ಭೂಮಿಯನ್ನು ಮಾರಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್ (DK Shivakumar) ಅವರು ಪರೋಕ್ಷವಾಗಿ ರೈತರಿಗೆ ಕರೆ ನೀಡಿದ್ದಾರೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿಗೂ ತಮಗೂ ಏನು ಸಂಬಂಧ ಎಂದು ಕೇಳಿದಾಗಲೆಲ್ಲ ಉತ್ತರಿಸಲಾಗದೇ ತಡಬಡಿಸುತ್ತಿದ್ದ ಡಿ.ಕೆ ಶಿವಕುಮಾರ್ ಕನಕಪುರವನ್ನು ಬೆಂಗಳೂರಿಗೆ ಸೇರಿಸಿ ಸಂಬಂಧ ಕಲ್ಪಿಸುವ ಶಾರ್ಟ್‍ಕಟ್ ಮಾರ್ಗ ಅನುಸರಿಸಿದಂತಿದೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ತಾವು ಬೆಂಗಳೂರಿನವರು ಎಂದು ಹೇಳಿಕೊಳ್ಳಬಹುದು ಎನ್ನುವ ಆಲೋಚನೆ ಅವರದ್ದಾಗಿರಬಹುದು. ಕನಕಪುರ ಅಭಿವೃದ್ಧಿಪಡಿಸಲಾಗದೆ ಈ ಆಲೋಚನೆ ಅವರಿಗೆ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ಗುಜರಾತ್ ಗೆ ಹೊರಟ ನಟ ದರ್ಶನ್
ಪ್ರಧಾನಿ ಮೋದಿ ನೇತೃತ್ವದಲ್ಲಿ ಬೆಂಗಳೂರಿಂದ ಕನಕಪುರ ಮಾರ್ಗವಾಗಿ ದಿಂಡಿಗಲ್ಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿದೆ. ಇದರಿಂದ ಕನಕಪುರದ ಆರ್ಥಿಕ ಚಟುವಟಿಕೆಗೆ ವೇಗ ಸಿಗಲಿದೆ. ಜಲ ಜೀವನ್ ಮಿಷನ್ ಅಡಿ ರಾಮನಗರದ ಮನೆ ಮನೆಗೂ ಕುಡಿಯುವ ನೀರು ಸೌಲಭ್ಯ ಕಲ್ಪಿಸಿದ್ದೇವೆ. ಬೆಂಗಳೂರು ಸ್ಯಾಟಲೈಟ್ ಟೌನ್‍ಶಿಪ್ ರಿಂಗ್ ರೋಡ್ ನಿರ್ಮಾಣವಾಗುತ್ತಿದೆ. ಸಬ್ ಅರ್ಬನ್ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗ ಇವರು ಕನಕಪುರದ ಜನತೆಯ ಜೀವನ ಮಟ್ಟ ಸುಧಾರಿಸಲು ಅಭಿವೃದ್ಧಿಯ ಮಾರ್ಗ ಹಿಡಿಯುವುದನ್ನು ಬಿಟ್ಟು ಈ ರೀತಿಯ ಅಡ್ಡ ಮಾರ್ಗ ಹಿಡಿದರೆ ಕಬ್ಬಾಳಮ್ಮ ಮೆಚ್ಚುತ್ತಾಳಾ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸುಧಾರಣೆಗೆ ಆದ್ಯತೆ ನೀಡಿದ್ದೇವೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದರಿಂದ ಭೂಮಿಯ ಮೌಲ್ಯ ಹೆಚ್ಚಾಗುತ್ತದೆ ಎಂಬ ಕಪೋಲ ಕಲ್ಪಿತ ಆಲೋಚನೆಯನ್ನು ಮುಗ್ಧ ಜನರ ತಲೆಯಲ್ಲಿ ತುಂಬಿ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಬದಲಾಗಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಕುಟುಕಿದ್ದಾರೆ.
ಕೆಂಗಲ್ ಹನುಮಂತಯ್ಯ, ಶಿವಕುಮಾರ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮೀಜಿಯವರು ಜನಿಸಿದ ಪುಣ್ಯ ಭೂಮಿಯಲ್ಲಿ ಸೇವೆ ಮಾಡುವ ಅವಕಾಶವನ್ನು ಈ ಭಾಗದ ಜನತೆ ತಮಗೆ ಕಲ್ಪಿಸಿದ್ದಾರೆ. ನಾವು ರಾಮನಗರದವರೇ ಅಲ್ಲ ಎನ್ನುವ ನಿಮ್ಮ ಮಾತನ್ನು ರಾಮದೇವರ ಬೆಟ್ಟದ ಮೇಲಿರುವ ಆ ಶ್ರೀರಾಮಚಂದ್ರನು ಮೆಚ್ಚುತ್ತಾನಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 25 ವರ್ಷಗಳ ಹಿಂದೆ ವ್ಯಕ್ತಿ ಸಾವು- ನಕಲಿ ವ್ಯಕ್ತಿ, ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ
ಚಿಕ್ಕಬಳ್ಳಾಪುರ: ಅಭಿವೃದ್ಧಿ ವಿಚಾರವಾಗಿ ಕನಕಪುರ (Kanakapur) ಬೆಂಗಳೂರಿಗೆ (Bengaluru) ಸೇರಿಸೋದು ಸರಿ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿಕೆ ನೀಡಿದ್ದಾರೆ.
ಕನಕಪುರ ಬೆಂಗಳೂರಿಗೆ ಸೇರಿಸುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ಸಂಬಂಧ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ಅಭಿವೃದ್ಧಿ ವಿಚಾರವಾಗಿ ಕನಕಪುರ ಬೆಂಗಳೂರಿಗೆ ಸೇರಿಸೋದು ಸರಿ. ಡಿಸಿಎಂ ಡಿಕೆ ಶಿವಕುಮಾರ್ ಹೇಳಿರೋದು ಸರಿ ಇದೆ. ಉದ್ಯಮಿಗಳು ಧೈರ್ಯದಿಂದ ಬಂದು ಕನಕಪುರದಲ್ಲಿ ಬಂಡವಾಳ ಹೂಡುತ್ತಾರೆ. ಇದರಿಂದ ಕನಕಪುರ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಕಾಡಾನೆ ಥರ ಆಗ್ತಿದ್ದಾರೆ: ಸಿಪಿ ಯೋಗೇಶ್ವರ್ ಟಾಂಗ್
ಕನಕಪುರ ಬೇರೆ ಜಿಲ್ಲೆ ಅಂದಾಗ ಬಂಡವಾಳ ಹೂಡಿಕೆದಾರರು ಹಿಂಜರಿಯುತ್ತಾರೆ. ಬೆಂಗಳೂರು ಅಂದಾಗ ಜನರ ಮೈಂಡ್ ಸೆಟ್ ಬೇರೆ ಇರಲಿದೆ. ವಿಶಾಲವಾದ ದೃಷ್ಟಿಕೋನದಲ್ಲಿ ಡಿಕೆಶಿ ಇದನ್ನು ಹೇಳಿದ್ದಾರೆ. ಆದರೆ ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಬೈಯೋದೇ ಅವರ ಕೆಲಸ ಎಂದು ಪ್ರದೀಪ್ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಬರ ನಿರ್ವಹಣೆಗೆ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ: ಸಿದ್ದರಾಮಯ್ಯ ವಿರುದ್ಧ ಕೋಟ ಕಿಡಿಕಿಡಿ
ಬೆಂಗಳೂರು: ಡಿಕೆಶಿ (DK Shivakumar) ತುಂಬಾ ವೈಲ್ಡ್ ಆಗುತ್ತಿದ್ದಾರೆ. ಅವರು ಕಾಡಾನೆ ಥರ ಆಗುತ್ತಿದ್ದಾರೆ. ಯಾವಾಗ ಖೆಡ್ಡಾಕ್ಕೆ ಬೀಳುತ್ತಾರೆ ಎಂದು ನೋಡಬೇಕು ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwara), ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಕನಕಪುರವನ್ನು (Kanakapura) ಬೆಂಗಳೂರಿಗೆ (Bengaluru) ಸೇರಿಸುವ ಕುರಿತು ಡಿಕೆಶಿ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ರಾಮನನಗರ (Ramanagara) ಜಿಲ್ಲೆ ಆಡಳಿತಾತ್ಮಕವಾಗಿ ಈಗ ಸರಿ ಇದೆ. ಹೌದು ನಾವೆಲ್ಲ ಬೆಂಗಳೂರಿನವರೇ. ಒಂದು ಕಾಲದಲ್ಲಿ ಬೆಂಗಳೂರು ಬೆಳೆದಿರಲಿಲ್ಲ. ಬೆಂಗಳೂರು ಬೆಳೆಯುತ್ತಿದ್ದಂತೆ ಒತ್ತಡ ಕಮ್ಮಿ ಮಾಡಲು ಜಿಲ್ಲೆಗಳಾದವು. ಈಗ ರಾಮನಗರ ಜಿಲ್ಲೆ ಆಡಳಿತಾತ್ಮಕವಾಗಿ ಸರಿ ಇದೆ. ಅದು ಹಾಗೇ ಇರಬೇಕು. ಡಿಕೆಶಿ ರಾಮನಗರವನ್ನೇ ಅಭಿವೃದ್ಧಿ ಮಾಡಲಿ. ಆಡಳಿತದ ಹತೋಟಿ ತಪ್ಪಿ ಹೋಗುತ್ತೆ ಅಂತಲೂ, ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಡಿಕೆಶಿ ಈ ರೀತಿ ಹೇಳಿರಬೇಕು ಎಂದರು. ಇದನ್ನೂ ಓದಿ: ಬರ ನಿರ್ವಹಣೆಗೆ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ: ಸಿದ್ದರಾಮಯ್ಯ ವಿರುದ್ಧ ಕೋಟ ಕಿಡಿಕಿಡಿ
ರಾಜಕೀಯ ಮಹತ್ವಾಕಾಂಕ್ಷೆ ಇರುವವರಿಗೆ ಈ ಭಾವನೆ ತಪ್ಪಲ್ಲ. ಆದರೆ ಕನಕಪುರ ರಾಮನಗರದಲ್ಲೇ ಇದ್ದರೆ ಯಾರಿಗೂ ತೊಂದರೆ ಇಲ್ಲ. ಡಿಕೆಶಿಗೆ ಯಾವ ತೊಂದರೆ ಇದೆ ಅಂತ ಗೊತ್ತಿಲ್ಲ. ಇದನ್ನು ರಾಜಕೀಯಕರಣಗೊಳಿಸುವುದು ಬೇಡವಾಗಿತ್ತು. ಇದನ್ನು ಡಿಕೆಶಿ ಮತ್ತು ಹೆಚ್‌ಡಿಕೆ ಪ್ರತಿಷ್ಠೆ ಅನ್ನೋದಕ್ಕಿಂತ ಕನಕಪುರ ರಾಮನಗರದಲ್ಲೇ ಇರಲಿ. ಶಿವಕುಮಾರ್ ರಿಯಲ್ ಎಸ್ಟೇಟ್ ಅನ್ನು ಮನಸಲ್ಲಿ ಇಟ್ಟುಕೊಂಡು ಮಾತನಾಡುತ್ತಿದ್ದಾರೆ. ಅವರ ಭೂ ದಾಹ ಇನ್ನೂ ಮುಗಿದಿಲ್ಲ ಅನಿಸುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ದೆಹಲಿ ನಾಯಕರು ಪ್ರಯೋಗ ಮಾಡುತ್ತಿದ್ದಾರೆ: ಜಗದೀಶ್ ಶೆಟ್ಟರ್ ವ್ಯಂಗ್ಯ
ಸರ್ಕಾರ ಬೀಳಿಸಲು ಬಿಜೆಪಿಯ (BJP) ಒಂದು ಟೀಂ ಸಕ್ರಿಯವಾಗಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅಂತ ಅವರ ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರ ಶಾಸಕರಿಂದಲೇ ಅವರ ಸರ್ಕಾರಕ್ಕೆ ತೊಂದರೆ ಬರಬಹುದು. ಸರ್ಕಾರ ಬೀಳಿಸುವ ವಿಚಾರದಲ್ಲಿ ನಮ್ಮಿಂದ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸದ್ದಿಲ್ಲದೇ ನಡೆಯುತ್ತಿದೆ ಮಲಪ್ರಭಾ ನದಿ ಪ್ರದೇಶ ಒತ್ತುವರಿ ಕಾರ್ಯ – ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತ
ಡಿಕೆಶಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ರಾಮನಗರ ಜಿಲ್ಲೆಯಲ್ಲೇ ಸುಧಾರಣೆ ಮಾಡಲಿ. ಡಿಕೆಶಿ ಹೇಳಿಕೆ ಅಚ್ಚರಿ ತಂದಿದೆ. ಒಕ್ಕಲಿಗರು ಬೆಂಗಳೂರಿನಲ್ಲಿ ಜಾಸ್ತಿ ಇದ್ದಾರೆ. ಬೆಂಗಳೂರಿನಲ್ಲಿ 25-30 ಜನ ಶಾಸಕರ ಮೇಲೆ ಹತೋಟಿ ಇಟ್ಟುಕೊಳ್ಳಬಹುದು. ಬೆಂಗಳೂರಿನ ಆಡಳಿತದ ಹತೋಟಿ ಒಕ್ಕಲಿಗರ ಹತೋಟಿಯಿಂದ ತಪ್ಪಿ ಹೋಗುತ್ತದೆ ಎಂದು ಈ ಹೇಳಿಕೆ ಕೊಟ್ಟಿರಬಹುದು. ಆಡಳಿತದ ಹತೋಟಿ ಹಿಡಿಯಲು ಮತ್ತೆ ನಾವು ಬೆಂಗಳೂರಿಗೆ ಸೇರಬೇಕು ಅನ್ನೋದು ಡಿಕೆಶಿ ಮನದಲ್ಲಿ ಇರಬಹುದು ಎಂದು ಕಿಡಿಕಾರಿದರು. ಇದನ್ನೂ ಓದಿ: ಸರ್ಕಾರದ ಹಣ ತಿಂದಿಲ್ಲವೆಂದು ಹೆಚ್‍ಡಿಕೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ಲಿ: ಬಾಲಕೃಷ್ಣ
ಬೆಂಗಳೂರು: ರಾಮನಗರ (Ramanagar) ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ನಾಮಕರಣ ಮಾಡೋ ಚರ್ಚೆ ಆಗುತ್ತಿದೆ. ಡಿಕೆ ಶಿವಕುಮಾರ್ (D.K Shivakumar) ಅವರು ಇದನ್ನೇ ಹೇಳಿದ್ದಾರೆ. ಕನಕಪುರವನ್ನ (Kanakapura) ಬೆಂಗಳೂರಿಗೆ ಸೇರಿಸಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮಾಡೋ ಪ್ಲ್ಯಾನ್ ಇದೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ (MLA HC Balakrishna) ತಿಳಿಸಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಡಿಕೆಶಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಕನಕಪುರವನ್ನ ಬೆಂಗಳೂರಿಗೆ ಸೇರಿಸುತ್ತೇವೆ ಅನ್ನೋದು ಅಲ್ಲ. ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡ್ ನೇಮ್ ಇದೆ. ಮೊದಲು ನಮ್ಮದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂತ ಇತ್ತು. ಅದೇ ಬೆಂಗಳೂರು ಅನ್ನೋ ಹೆಸರನ್ನ ಇಟ್ಟುಕೊಂಡ್ರೆ ನಮ್ಮನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುತ್ತಾರೆ. ಹೀಗಾಗಿ ಅದನ್ನ ಬದಲಾವಣೆ ಮಾಡಬೇಕು ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕನಕಪುರವನ್ನ ಬೆಂಗಳೂರಿಗೆ ಸೇರಿಸೋಕೆ ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಮನಗರ ಇಬ್ಭಾಗ, ಬೆಂಗಳೂರಿಗೆ ಕನಕಪುರ – ಏನಿದು ಡಿಕೆಶಿ ಲೆಕ್ಕಾಚಾರ?
ಕುಮಾರಸ್ವಾಮಿ ಹೇಳಿಕೆಗೆ ಬೆಲೆ ಕೊಡೋ ಅವಶ್ಯಕತೆ ಇಲ್ಲ. ಅವರು ಹತಾಶೆಯಿಂದ ಮಾತಾಡ್ತಿದ್ದಾರೆ. ನಾವು ಶಾಸಕರಾಗಿರೋದು ಕುಮಾರಸ್ವಾಮಿಗೆ ಇಷ್ಟ ಇಲ್ಲ. ಹೀಗಾಗಿ ಕುಮಾರಸ್ವಾಮಿ ಮಾತಿಗೆ ಬೆಲೆ ಕೊಡಬೇಕಿಲ್ಲ. ಕನಕಪುರದಲ್ಲಿ ಕುಮಾರಸ್ವಾಮಿ ಆಸ್ತಿ ಇಲ್ಲ. ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಅಲ್ಲ ಎಂದು ಹೆಚ್‍ಡಿಕೆ ವಿರುದ್ಧ ಶಾಸಕರು ಕಿಡಿಕಾರಿದ್ದಾರೆ.
ರಾಮನಗರ ಜಿಲ್ಲೆಯನ್ನೇ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ನಾಮಕರಣ ಮಾಡ್ತೀವಿ. ಈಗ ಸಾರ್ವಜನಿಕ ಚರ್ಚೆಗೆ ಬಿಟ್ಟಿದ್ದಾರೆ. ಸಾರ್ವಜನಿಕರು ಹೇಳಿದಂತೆ ಮುಂದೆ ಮಾಡ್ತೀವಿ. ಕುಮಾರಸ್ವಾಮಿಗೆ ನಮ್ಮನ್ನು ಕಂಡ್ರೆ ಆಗಲ್ಲ. ನಾವು ಕರಿ ಕಾಗೆ ಅಂದ್ರೆ ಅವರು ಬಿಳಿ ಕಾಗೆ ಅಂತಾರೆ. ಅವರು ನಾವು ಏನೇ ಮಾತಾಡಿದ್ರು ವಿರೋಧ ಮಾಡ್ತಾರೆ. ಇದಕ್ಕೆ ನಾವು ಬೆಲೆ ಕೊಡೊ ಅವಶ್ಯಕತೆ ಇಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮಾಡೋಕೆ ನಾವೇ ಒತ್ತಡ ಮಾಡಿದ್ವಿ. ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೋಕೆ ನಮ್ಮ ಒಪ್ಪಿಗೆ ಇದೆ ಎಂದರು.
ಒಟ್ಟಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಬೇಕು ಅನ್ನೋದು ಈಗ ಚರ್ಚೆಗೆ ಬಿಟ್ಟಿದ್ದಾರೆ. ಚರ್ಚೆ ಆಗಲಿ, ಸಾರ್ವಜನಿಕರು ಏನ್ ಅಭಿಪ್ರಾಯ ಕೊಡ್ತಾರೋ ಅದರ ಮೇಲೆ ಮುಂದಿನ ತೀರ್ಮಾನ ಆಗುತ್ತವೆ.
ಬೆಂಗಳೂರು/ರಾಮನಗರ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ನಡುವೆ ಈಗ ಹೊಸ ಕಾಳಗಕ್ಕೆ ವೇದಿಕೆ ಸಿದ್ದವಾಗಿದೆ. ತಮ್ಮ ವಿಧಾನಸಭಾ ಕ್ಷೇತ್ರ ಕನಕಪುರವನ್ನು (Kanakapura) ರಾಮನಗರದಿಂದ ಪ್ರತ್ಯೇಕಿಸಿ ಬೆಂಗಳೂರಿಗೆ (Bengaluru) ಸೇರಿಸಲು ಡಿಕೆಶಿ ಮುಂದಾಗುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಕನಕಪುರವನ್ನು ರಾಮನಗರ (Ramanagara) ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರಿಗೆ ಸೇರಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಯಾರೋ ಹೆಸರಿಗಾಗಿ ಕನಕಪುರವನ್ನು ರಾಮನಗರಕ್ಕೆ ಸೇರಿಸಿದ್ದಾರೆ ಎನ್ನುವ ಮೂಲಕ ಕುಮಾರಸ್ವಾಮಿ ಅವರನ್ನು ಮಧ್ಯೆ ಎಳೆ ತಂದಿದ್ದಾರೆ.
ಇಷ್ಟು ದಿನ ಕುಮಾರಸ್ವಾಮಿ ವರ್ಸಸ್ ಡಿ.ಕೆ.ಶಿವಕುಮಾರ್ ನಡುವೆ ರಾಮನಗರ ಜಿಲ್ಲಾ ರಾಜಕಾರಣದ ವಿಚಾರದಲ್ಲಿ ಫೈಟ್ ನಡೆಯುತ್ತಿತ್ತು. ರಾಜ್ಯ ಮಟ್ಟದಲ್ಲಿ ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಜಟಾಪಟಿಯೂ ನಡೆದಿತ್ತು. ಈಗ ರಾಮನಗರ ಜಿಲ್ಲೆಯಿಂದ ಕನಕಪುರ ಹೊರಗಿಡುವ ಡಿಕೆಶಿ ಪ್ರಯತ್ನ ಇಬ್ಬರ ನಡುವೆ ಇನ್ನೊಂದು ಸುತ್ತಿನ ಜಟಾಪಟಿಗೆ ಕಾರಣವಾಗಿದೆ.
ರಾಮನಗರ ಜಿಲ್ಲೆ ಅಂದರೆ ಅದು ಹೆಚ್‌ಡಿಕೆ ಹೆಸರು ಮೊದಲು ಬರುತ್ತದೆ. ಹೀಗಾಗಿ ಜಿಲ್ಲಾ ಕೇಂದ್ರ ಮೀರಿ ಬೆಂಗಳೂರಿನ ಹೆಚ್ಚುವರಿ ಬೆಳವಣಿಗೆಗೆ ಕನಕಪುರ ಹಬ್ ಮಾಡಲು ಡಿಕೆಶಿ ಪ್ಲ್ಯಾನ್ ಮಾಡಿದ್ದಾರಾ ಎಂಬ ಚರ್ಚೆ ಈಗ ಶುರುವಾಗಿದೆ.
ಡಿಕೆ ಲೆಕ್ಕಾಚಾರ ಏನು?
ಬೆಂಗಳೂರು ಹೊರತುಪಡಿಸಿ 2ನೇ ಹಂತದ ನಗರವಾಗಿ ಕನಕಪುರಕ್ಕೆ ಆದ್ಯತೆ ನೀಡುವುದು. ಕನಕಪುರದಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾಗುವ ಮೂಲಕ ಪ್ರಾದೇಶಿಕವಾಗಿ ಅಭಿವೃದ್ಧಿಗೆ ಒತ್ತು ನೀಡುವುದು.
ಶೈಕ್ಷಣಿಕ ಹಬ್ ಸ್ಥಾಪನೆಯ ಜೊತೆಗೆ ನೀರಾವರಿ ಸೌಲಭ್ಯದ ಕಾರಣ ನೀಡಿ ಅಭಿವೃದ್ಧಿ ಕಾರ್ಯ ನಡೆಸುವುದು. ಕೊನೆಗೆ ಉದ್ಯಮ ಹೂಡಿಕೆಗೆ ವಾತಾವರಣ ನಿರ್ಮಿಸುವ ಉದ್ದೇಶದಿಂದ ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ಡಿಕೆ ಮುಂದಾಗುತ್ತಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
– ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಿಲ್ಲ
ಬೆಂಗಳೂರು: ರಾಮನಗರ (Ramanagara) ಜಿಲ್ಲೆಯಿಂದ ಕನಕಪುರ (Kanakapura) ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ (Bengaluru) ಸೇರಿಸುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಎಕ್ಸ್ ಪೋಸ್ಟ್‌ನಲ್ಲಿ ಗುಡುಗಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲೇನಿದೆ?
ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ, ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ.
ನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು ಆಗುವುದಿಲ್ಲ, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ ಎನ್ನುವ ಇವರು, ಇಷ್ಟು ದಿನ ಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿ ಆಗಿ ಮಾಡಿದ್ದೇನು? ತಮ್ಮ ಜೇಬು ತುಂಬಿಸಿಕೊಂಡಿದ್ದು, ತಮ್ಮ ಮನೆಯನ್ನು ಉದ್ಧಾರ ಮಾಡಿಕೊಂಡಿದ್ದಷ್ಟೇ. ಇಷ್ಟಕ್ಕೂ ಕನಕಪುರ ಸುತ್ತಮುತ್ತ ಯಾರ ಆಸ್ತಿಗಳಿವೆ? ಅದರಲ್ಲಿ ಬೇನಾಮಿಗಳು ಎಷ್ಟು? ಎಲ್ಲೆಲ್ಲಿ ಅಕ್ರಮವಾಗಿ ಬೇಲಿ ಹಾಕಲಾಗಿದೆ? ಅವೆಲ್ಲಾ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಲು ಬೆಂಗಳೂರು ಸೇರ್ಪಡೆಯ ನಾಟಕ! ಈಗಾಗಲೇ ಕನಕಪುರಕ್ಕೆ ಒಂದು ಮೆಡಿಕಲ್ ಕೊಟ್ಟಿದ್ದರೂ ರಾಮನಗರ ಮೆಡಿಕಲ್ ಕಾಲೇಜನ್ನು ಕದ್ದು ಒಯ್ಯವುದರ ಹಿಂದೆಯೂ ಇದೇ ದುಷ್ಟ ತಂತ್ರ ಅಡಗಿತ್ತು.
ಕನಕಪುರಕ್ಕೆ 52 ಕಿ.ಮೀ ದೂರದಲ್ಲಿದೆ ಬೆಂಗಳೂರು. 25 ಕಿ.ಮೀ ದೂರದಲ್ಲಿದೆ ರಾಮನಗರ. ಜನರಿಗೆ ಯಾವುದು ಅನುಕೂಲ? ದಿನ ಬೆಳಗಾದರೆ ಕನಕಪುರದವರು ಬೆಂಗಳೂರಿಗೆ ಅಲೆಯಬೇಕೆ? ಉಪ ಮುಖ್ಯಮಂತ್ರಿಗಳ ಒಳ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ಸಹಜವಾಗಿಯೇ ಮೂಡುತ್ತವೆ.
2006-2007ರಲ್ಲಿ ಕನಕಪುರ ಹೇಗಿತ್ತು? ಡಿಕೆಶಿ ಅವರು ನೆನಪು ಮಾಡಿಕೊಳ್ಳಬೇಕು. ಆಗಲೇ ಪಟ್ಟಣದ ಡಬಲ್ ರಸ್ತೆ ನಿರ್ಮಾಣ, ಕನಕಪುರ ಹೆಬ್ಬಾಗಿಲಿನಲ್ಲಿರುವ ಸೇತುವೆ ನಿರ್ಮಾಣಕ್ಕೆ ಯೋಜನೆ ಕೊಟ್ಟವನು ನಾನು. ಸಂಗಮದಲ್ಲಿ ಪ್ರವಾಹ ಬಂದಾಗಲೆಲ್ಲಾ ಅನೇಕರು ಹಗ್ಗ ಕಟ್ಟಿಕೊಂಡು ರಸ್ತೆ ದಾಟಲು ಹೋಗಿ ಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಅಲ್ಲಿ ಸೇತುವೆ ನಿರ್ಮಿಸಿ ಮಹದೇಶ್ವರ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಯೋಜನೆಗೆ ಇದೇ ಡಿಕೆ ಶಿವಕುಮಾರ್ ಅವರು 2006ರಲ್ಲಿಯೇ ವಿರೋಧ ಮಾಡಿದ್ದರು! ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ಮಾತು!! ನದಿಯಲ್ಲಿ ಜನರು ಕೊಚ್ಚಿಕೊಂಡು ಹೋಗಿ ಸತ್ತರೂ ಪರವಾಗಿಲ್ಲ. ಆದರೆ ಇವರ ರಿಯಲ್ ಎಸ್ಟೇಟ್ ವ್ಯವಹಾರ ಪೊಗದಸ್ತಾಗಿ ಸಾಗಬೇಕು. ಸದ್ಯ ಬೆಂಗಳೂರಿನಿಂದ ಕನಕಪುರಕ್ಕೆ ಸುರಂಗ ಕೊರೆಸುವೆ ಎಂದು ಹೇಳಲಿಲ್ಲ. ಅದೇ ನಮ್ಮ ಪುಣ್ಯ. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ – ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗಿದ ಅಭಿಮನ್ಯು
ಉಪ ಮುಖ್ಯಮಂತ್ರಿ @DKShivakumar ಅವರು ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 24, 2023
ಕನಕಪುರ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಪಾಲಾದ ಮೇಲೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ಮತ್ತೊಂದು ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. ಆದರೆ ಇದೇ ಮಹಾನುಭಾವರೇ ಮೈತ್ರಿ ಸರ್ಕಾರವನ್ನು ತೆಗೆದ ಪರಿಣಾಮ ಆ ಯೋಜನೆ ನೆನೆಗುದಿಗೆ ಬಿತ್ತು. ಯೋಜನೆಯೂ, ಅದರ 350 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವೂ ಅಲ್ಲಿಯೇ ಉಳಿಯಿತು. ಉಪಮುಖ್ಯಮಂತ್ರಿ ಆದವರು ಆ ಯೋಜನೆಯನ್ನು ಪೂರ್ಣಗೊಳಿಸಬೇಕೆ? ಅಥವಾ ರಾಮನಗರ ಮೆಡಿಕಲ್ ಕಾಲೇಜ್ ಅನ್ನು ಹೈಜಾಕ್ ಮಾಡಲು ಹುನ್ನಾರ ನಡೆಸಬೇಕೇ?
ರಾಮನಗರ ಜಿಲ್ಲೆ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳ ಜನರ ಬಹುಕಾಲದ ಕನಸು. ಆ ಕನಸನ್ನು ನಾನು ನನಸು ಮಾಡಿದ್ದೇನೆ. ಈಗ ತಮ್ಮ ಸ್ವಾರ್ಥಕ್ಕಾಗಿ ರಾಮನಗರ ಜಿಲ್ಲೆ ಜನರ ಬೆನ್ನಿಗೆ ಚೂರಿ ಹಾಕಿ ಕನಕಪುರದ ಜನರ ಹಿತಕ್ಕೆ ಕೊಡಲಿಪೆಟ್ಟು ಹಾಕುವ ಹುನ್ನಾರ ನಡೆದಿದೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕನಕಪುರ ಸೇರಿ 4 ವಿಧಾನಸಭೆ ಕ್ಷೇತ್ರಗಳ ಜನರೂ ಒಟ್ಟಾಗಿ ಒಂದೇ ಜಿಲ್ಲೆಯಲ್ಲಿ ಉಳಿಯಲಿದ್ದಾರೆ. ಡಿಕೆ ಶಿವಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ವರ್ತೂರ್ ಸಂತೋಷ್ ವಿಚಾರಣಾಧೀನ ಕೈದಿ ನಂ.10935
ರಾಮನಗರ: ಜೂಜು ಅಡ್ಡೆ ಮೇಲೆ ಪೊಲೀಸರು (Police) ದಾಳಿ ನಡೆಸಿದ ವೇಳೆ ತಪ್ಪಿಸಿಕೊಳ್ಳಲು ಅರ್ಕಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿ ಕನಕಪುರದಲ್ಲಿ (Kanakapura) ಶವವಾಗಿ ಪತ್ತೆಯಾಗಿದ್ದಾನೆ.
ಕನಕಪುರದ ತಿಗಳರಹಳ್ಳಿ ಗ್ರಾಮದ ಮರಿಸ್ವಾಮಿ (30) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಕಳೆದ ಮೂರು ದಿನಗಳ ಹಿಂದೆ ಜೂಜು ಅಡ್ಡೆ ಮೇಲೆ ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮರಿಸ್ವಾಮಿ ನದಿಗೆ ಹಾರಿದ್ದ. ನದಿಯಲ್ಲಿ ಈಜಿ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ಮರಳಿ ಬಂದಿದ್ದರು. ಆದರೆ ಮೂರು ದಿನಗಳ ಬಳಿಕ ಮರಿಸ್ವಾಮಿ ಶವ ಅರ್ಕಾವತಿ ನದಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: 10ನೇ ತರಗತಿ ವಿದ್ಯಾರ್ಥಿಯನ್ನ ಸೆಕ್ಸ್‌ಗೆ ಪೀಡಿಸುತ್ತಿದ್ದ ಟೀಚರ್; ಮತಾಂತರಕ್ಕೂ ಒತ್ತಾಯ – ಕೇಸ್ ದಾಖಲು