Tag: ಕನಕಪುರ ಬಂಡೆ

  • ಇಡಿ ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ – ನಾನು ಹೇಡಿಯಲ್ಲ ಎಲ್ಲವನ್ನೂ ಎದುರಿಸುತ್ತೇನೆ ಎಂದ ಡಿಕೆಶಿ

    ಇಡಿ ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ – ನಾನು ಹೇಡಿಯಲ್ಲ ಎಲ್ಲವನ್ನೂ ಎದುರಿಸುತ್ತೇನೆ ಎಂದ ಡಿಕೆಶಿ

    ನವದೆಹಲಿ: ಮಾಜಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಸಮಯದಲ್ಲಿ ಜಾರಿ ನಿರ್ದೇಶನಾಲಯದ ಕಚೇರಿ ಮುಂಭಾಗ ದೊಡ್ಡ ಹೈಡ್ರಾಮಾವೇ ನಡೆದಿದೆ. ಡಿಕೆಶಿ ಅಭಿಮಾನಿಗಳು ಅಡ್ಡಿಯ ನಡುವೆಯೂ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಕಾರಿನಲ್ಲಿ ಕನಕಪುರದ ಬಂಡೆಯನ್ನು ಕರೆದುಕೊಂಡು ಹೋದರು.

    ದೆಹಲಿ ಫ್ಲ್ಯಾಟ್‍ನಲ್ಲಿ ಪತ್ತೆಯಾದ ದಾಖಲೆ ಇಲ್ಲದ 8.59 ಕೋಟಿ ರೂ. ಹಣದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ಸತತ 4 ದಿನಗಳಿಂದ ವಿಚಾರಣೆ ನಡೆಸುತ್ತಿದ್ದ ಇಡಿ ಅಧಿಕಾರಿಗಳು ಇಂದು ರಾತ್ರಿ 8.20ರ ವೇಳೆಗೆ ಬಂಧಿಸಿದರು.

    ವಿಚಾರಣೆಯ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಅಕ್ರಮ ಹಣಕಾಸು ವ್ಯವಹಾರಗಳ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿದೆ. ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆ ಮಾಡಿಸಲು ಮನೋಹರ್ ಲೋಹಿಯಾ (ಆರ್ ಎಂಎಲ್) ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. 24 ಗಂಟೆಯ ಒಳಗಡೆ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗಿರುವ ಕಾರಣ ಇಡಿ ಅಧಿಕಾರಿಗಳು ಇಂದು ರಾತ್ರಿಯೇ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೋ ಅಥವಾ ನಾಳೆ ಹಾಜರು ಪಡಿಸುತ್ತಾರೋ ಎನ್ನುವುದು ತಿಳಿದು ಬಂದಿಲ್ಲ.

    ಮಾಧ್ಯಮಗಳಲ್ಲಿ ಡಿಕೆಶಿ ಬಂಧನದ ಸುದ್ದಿ ಪ್ರಕಟವಾಗುತ್ತಿದ್ದಂತೆ ಇಡಿ ಕಚೇರಿ ಮುಂಭಾಗದಲ್ಲಿದ್ದ ಅಭಿಮಾನಿಗಳು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗತೊಡಗಿದರು. ರಾತ್ರಿ 9.05ರ ವೇಳೆಗೆ ಡಿಕೆಶಿ ಇಡಿ ಕಚೇರಿಯಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿ, ನಾನು ಹೇಡಿಯಲ್ಲ, ಎಲ್ಲವನ್ನೂ ಎದುರಿಸುತ್ತೇನೆ. ನಾನು ತಪ್ಪು ಮಾಡಿಲ್ಲ. ಮೋಸ ಮಾಡಿಲ್ಲ ಬಿಜೆಪಿ ಈಗ ಗೆಲುವು ಸಾಧಿಸಿದೆ. ಅವರಿಗೆ ಶುಭವಾಗಲಿ ಎಂದು ಹೇಳುತ್ತಾ ಮುಂದೆ ಸಾಗಿದರು. ಕೊನೆಗೆ ಕಾರಿನ ಮುಂದೆ ನಿಂತು ಕೈ ಮುಗಿದರು. ಅಷ್ಟರಲ್ಲೇ ಇಡಿ ಅಧಿಕಾರಿಗಳು ಬಲವಂತವಾಗಿ ಡಿಕೆಶಿಯನ್ನು ಕಾರಿನಲ್ಲಿ ಕುಳ್ಳಿರಿಸಿದರು.

    ಈ ಸಂದರ್ಭದಲ್ಲಿ ಅಭಿಮಾನಿಗಳು ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಧಿಕ್ಕಾರ ಕೂಗಲು ಆರಂಭಿಸಿದರು. ಅಷ್ಟೇ ಅಲ್ಲದೇ ಡಿಕೆ ಶಿವಕುಮಾರ್ ಇದ್ದ ಕಾರಿಗೆ ಅಡ್ಡ ಬಂದು ತಡೆಯಲು ಯತ್ನಿಸಿದರು. ಪೊಲೀಸರು ಅಭಿಮಾನಿಗಳನ್ನು ಚದುರಿಸಿ ಕಾರು ಚಲಿಸಲು ಅನುವು ಮಾಡಿಕೊಟ್ಟರು. ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಅಭಿಮಾನಿಗಳು ಮುಂಭಾಗಕ್ಕೆ ಬಂದು ಅಡ್ಡಿ ಪಡಿಸಿದರು. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಿದ ಬಳಿಕ ಕಾರು ಇಡಿ ಗೇಟ್ ದಾಟಿ ರಸ್ತೆ ಪ್ರವೇಶಿಸಿತು. ಕಾರು ಮುಂದಕ್ಕೆ ಹೋಗುತ್ತಿದ್ದರೂ ಅಭಿಮಾನಿಗಳು ಕಾರಿನ ಹಿಂದೆಯೇ ಓಡತೊಡಗಿದ್ದರು. ಡಿಕೆ ಶಿವಕುಮಾರ್ ಹಿಂಬಾಲಿಸಿ ಸುರೇಶ್ ಅವರು ತಮ್ಮ ಕಾರಿನಲ್ಲಿ ತೆರಳಿದರು.

    ನಿರೀಕ್ಷಣಾ ಜಾಮೀನು ಸಲ್ಲಿಸುವ ನಿರ್ಧಾರದಿಂದ ಸದ್ಯಕ್ಕೆ ಡಿಕೆ ಶಿವಕುಮಾರ್ ಹಿಂದೆ ಸರಿದಿದ್ದಾರೆ. ಡಿಕೆಶಿ ಹೊರತುಪಡಿಸಿ ಉಳಿದವರು, ಸಮನ್ಸ್ ರದ್ದು ಕೋರಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ವಿಚಾರಣೆ ನಡೆಯುತ್ತಾ ಇರುವಾಗ ತುರ್ತು ವಿಚಾರಣೆ ಅಗತ್ಯ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

    ಏನಿದು ಪ್ರಕರಣ?
    2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಈ ಸಮನ್ಸ್ ರದ್ದು ಪಡಿಸುವಂತೆ ಕೋರಿ ಡಿಕೆ ಶಿವಕುಮಾರ್ ಹೈ ಕೋರ್ಟ್ ಮೊರೆ ಹೋಗಿದ್ದರು. ಡಿಕೆ ಶಿವಕುಮಾರ್ ಅವರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಕಳೆದ ವಾರ ವಜಾಗೊಳಿಸಿದ ಹಿನ್ನೆಲೆಯಲ್ಲಿ ಇಡಿ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿತ್ತು.

  • ಸದನದಲ್ಲಿ ಕನಕಪುರ ಬಂಡೆಯನ್ನು ಹೊಗಳಿದ ಬಿಜೆಪಿ ಶಾಸಕ ಸಿಸಿ ಪಾಟೀಲ್

    ಸದನದಲ್ಲಿ ಕನಕಪುರ ಬಂಡೆಯನ್ನು ಹೊಗಳಿದ ಬಿಜೆಪಿ ಶಾಸಕ ಸಿಸಿ ಪಾಟೀಲ್

    ಬೆಳಗಾವಿ: ಕನ್ನಡ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ಶಾಸಕ ಸಿಸಿ ಪಾಟೀಲ್ ಅವರು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಹೊಗಳಿದಿದ್ದಾರೆ.

    ನವಲಗುಂದ, ನರಗುಂದ ಭಾಗದ ನೀರಾವರಿ ಯೋಜನೆಯ ಬಗ್ಗೆ ಶಾಸಕ ಶಂಕರಪಾಟೀಲ್ ಮುನೇನಕೊಪ್ಪ ಪ್ರಶ್ನೆ ಕೇಳುವ ಸಮಯದಲ್ಲಿ ಸಿಸಿ ಪಾಟೀಲ್ ಮಧ್ಯಪ್ರವೇಶ ಮಾಡಿ ಶಿವಕುಮಾರ್ ಡೈನಾಮಿಕ್ ಇದ್ದಾರೆ. ಕನಕಪುರದ ಬಂಡೆಯಂತಹ ಸಾಮಥ್ರ್ಯ ಹೊಂದಿರುವ ಶಿವಕುಮಾರ್ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೂ ತಮ್ಮ ಸಾಮಥ್ರ್ಯ ಬಳಸಿ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.

    ಈ ಸಮಯದಲ್ಲಿ ಸ್ಪೀಕರ್ ರಮೇಶಕುಮಾರ್ ಮಧ್ಯಪ್ರವೇಶ ಮಾಡಿ, ಏನ್ರೀ ಶಿವಕುಮಾರ್ ಎಲ್ಲೆಲ್ಲೂ ನಿಮ್ಮದೇ ಮಾತು. ಏನ್ರಿ ಯಡಿಯೂರಪ್ಪನವರೇ ಎಂದು ಹೇಳಿ ಶಿವಕುಮಾರ್ ದೀರ್ಘ ಆಯುಶ್ಮಾನ್ ಭವ ಎಂದಾಗ ಸದನ ನಗೆಗಡಲಲ್ಲಿ ತೇಲಾಡಿತು.

    ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಹಾನಗಲ್ ಶಾಸಕ ಉದಾಸಿ ಇಂದು ಕಾಣಿಸಿಕೊಂಡಿದ್ದರು. ಸದನದಲ್ಲಿ ಪ್ರಶ್ನೆ ಕೇಳಲು ಎದ್ದು ನಿಂತಾಗ, ಎಲ್ಲಿ ಹೋಗಿದ್ರಿ ಇಷ್ಟು ದಿನ? ಅಸೆಂಬ್ಲಿಯಲ್ಲಿ ಕಾಣಿಸುತ್ತಿರಲಿಲ್ಲ ಎಂದು ಸ್ಪೀಕರ್ ಪ್ರಶ್ನೆ ಮಾಡಿದರು. ಇದಕ್ಕೆ ಆರೋಗ್ಯ ಸರಿ ಇರಲಿಲ್ಲ, ಹಾಗಾಗಿ ಬಂದಿರಲಿಲ್ಲ ಎಂದು ಉದಾಸಿ ಉತ್ತರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv