Tag: ಕದ್ದು ಮುಚ್ಚಿ

  • ಕದ್ದುಮುಚ್ಚಿ: ಪ್ರೀತಿ ಮತ್ತು ಬದುಕಿನ ಹದವಾದ ರಸಪಾಕ!

    ಕದ್ದುಮುಚ್ಚಿ: ಪ್ರೀತಿ ಮತ್ತು ಬದುಕಿನ ಹದವಾದ ರಸಪಾಕ!

    ಬೆಂಗಳೂರು: ಮಂಜುನಾಥ್ ನಿರ್ಮಾಣದ ಕದ್ದುಮುಚ್ಚಿ ಚಿತ್ರ ತೆರೆ ಕಂಡಿದೆ. ಹಂಸಲೇಖಾ ಅವರ ಸಂಗೀತದಲ್ಲಿ ಮೂಡಿ ಬಂದಿರೋ ಹಾಡುಗಳೂ ಸೇರಿದಂತೆ ನಾನಾ ಥರದಲ್ಲಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಈ ಸಿನಿಮಾ ಯುವ ತಲ್ಲಣಗಳ ಕಥೆಯ ಸುಳಿವನ್ನು ಬಿಟ್ಟುಕೊಟ್ಟಿತ್ತು. ಇದೀಗ ಕದ್ದುಮುಚ್ಚಿ ಒಳಗಿರೋ ಸಿಹಿಯಾದ ಹೂರಣ ಅನಾವರಣಗೊಂಡಿದೆ.

    ಒಂದು ಮಾಮೂಲಿ ಜಾಡಿನ ಕಥೆಯನ್ನೂ ಕೂಡಾ ವಿಶಿಷ್ಟವಾದ ಆಲೋಚನೆ ಮತ್ತು ಭಿನ್ನವಾದ ನಿರೂಪಣಾ ಶೈಲಿ ಹೊಸದಾಗಿಸಿ ಬಿಡುತ್ತದೆ. ಅದೇ ರೀತಿ ಪ್ರೀತಿ, ಪ್ರೇಮ ಮತ್ತು ಬದುಕಿನ ಕಥೆ ಹೊಂದಿರೋ ಈ ಚಿತ್ರವೂ ಕೂಡಾ ರೂಪುಗೊಂಡಿದೆ. ಇಡೀ ಸಿನಿಮಾ ಎಲ್ಲರಿಗೂ ಆಪ್ತವಾಗೋದೇ ಈ ಕಾರಣದಿಂದ.

    ನಾಯಕ ಅಗರ್ಭ ಶ್ರೀಮಂತಿಕೆಯ ಹಿನ್ನೆಲೆ ಹೊಂದಿರುವಾತ. ಆದರೆ ಸಹಜವಾದ ಪ್ರೀತಿ ಸಿಕ್ಕದೆ ಎಲ್ಲವೂ ಢಾಂಬಿಕ ಎಂಬ ಭಾವನೆ ರೂಢಿಸಿಕೊಳ್ಳೋ ಆತ ದಿಕ್ಕುದೆಸೆ ಇಲ್ಲದಂತೆ ಹೊರಟು ಬಿಡುತ್ತಾನೆ. ಆದರೆ ಬದುಕಿನ ವೈಚಿತ್ರ್ಯಗಳೇ ನಾಯಕನಿಗೆ ಅಪ್ಪಟ ಮಲೆನಾಡು ಸೀಮೆಯ ದಿಕ್ಕು ತೋರುತ್ತದೆ. ಪ್ರೀತಿಯ ತತ್ವಾರದಿಂದ ಬೆಂಗಾಡಿನಂತಾಗಿದ್ದ ಆತನ ಮುಂದೆ ಮಲೆನಾಡ ಚೆಲುವೆಯೊಬ್ಬಳ ಆಗಮನವಾಗುತ್ತದೆ. ಯಥಾ ಪ್ರಕಾರ ಸುತ್ತಾಟ, ರೊಮ್ಯಾನ್ಸುಗಳ ನಡುವೆ ಇನ್ನೇನು ಗಟ್ಟಿ ಮೇಳದತ್ತ ಈ ಜೋಡಿ ಹೊರಟಿದೆ ಅಂದುಕೊಳ್ಳುವ ಹೊತ್ತಿಗೆಲ್ಲ ಭಯಾನಕ ಟ್ವಿಸ್ಟು ಎದುರಾಗುತ್ತೆ.

    ಅದರ ಫಲವಾಗಿ ತಾನು ಅಪಾರವಾಗಿ ಪ್ರೀತಿಸಿದ ಹುಡುಗಿಯ ಮದುವೆಗೇ ತಾನೇ ಓಡಾಡೋ ದುಃಸ್ಥಿತಿ ನಾಯಕನಿಗೆ ಬಂದೊದಗುತ್ತೆ. ಹಾಗಾದರೆ ಈ ಪ್ರೀತಿಯಲ್ಲಿ ಬಿರುಕು ಮೂಡಲು ಕಾರಣವೇನು, ಈ ಜೋಡಿ ಮತ್ತೆ ಒಂದಾಗುತ್ತಾ ಅನ್ನೋದನ್ನ ಚಿತ್ರ ಮಂದಿರಗಳಲ್ಲಿಯೇ ನೋಡಿದರೆ ಚೆನ್ನ. ಹಾಗಂತ ಇಷ್ಟಕ್ಕೆ ಮಾತ್ರವೇ ಸಿನಿಮಾ ಸೀಮಿತವಾಗಿಲ್ಲ. ಅದರ ಹರವು ವಿಸ್ತಾರವಾಗಿದೆ. ಹಿರಿ, ಮರಿ ಕಲಾವಿದರೊಂದಿಗೆ ಇಡೀ ಚಿತ್ರವನ್ನ ಮಜವಾಗಿಯೇ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

    ಹಂಸಲೇಖ ಅವರ ಮಾಂತ್ರಿಕ ಸಂಗೀತದ ಶಕ್ತಿಯೊಂದಿಗೆ ಕೆಲ ಕೊರತೆಗಳ ನಡುವೆಯೂ ಕದ್ದುಮುಚ್ಚಿ ಚಿತ್ರ ಇಷ್ಟವಾಗುವಂತಿದೆ.

    ರೇಟಿಂಗ್: 3.5/5

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕದ್ದುಮುಚ್ಚಿ: ಬಚ್ಚಿಟ್ಟ ಭಾವಗಳ ಬೆರಗಾಗಿಸೋ ಕಥೆ!

    ಕದ್ದುಮುಚ್ಚಿ: ಬಚ್ಚಿಟ್ಟ ಭಾವಗಳ ಬೆರಗಾಗಿಸೋ ಕಥೆ!

    ಬೆಂಗಳೂರು: ದುಡ್ಡೊಂದಿದ್ದರೆ ಸಕಲ ಸುಖಗಳೂ ಕಾಲ ಬುಡದಲ್ಲಿ ಮುದುರಿ ಮಲಗುತ್ತವೆ ಅನ್ನೋ ಮನಸ್ಥಿತಿ ಅನೇಕರಿಗಿದೆ. ಆದರೆ ದುಡ್ಡು ಕಾಸಿನಾಚೆಗೆ ಸಿಗೋ ಪ್ರೀತಿ, ನೆಮ್ಮದಿಯೇ ಬದುಕೆಂಬ ಸತ್ಯ ಅನೇಕರ ಅರಿವಿಗೆ ಬಂದಿರೋದಿಲ್ಲ. ಇಂಥಾದ್ದೊಂದು ಸೂಕ್ಷ್ಮ ಎಳೆಯಲ್ಲಿಟ್ಟುಕೊಂಡು ರೂಪುಗೊಂಡಿರುವ ಮಧುರವಾದ ಕಥೆಯನ್ನು ಕದ್ದುಮುಚ್ಚಿ ಚಿತ್ರ ಒಳಗೊಂಡಿದೆ.

    ಈಗಿನ ಕಾಲಮಾನದ ಕೆಲ ಪೋಷಕರಲ್ಲಿಯೂ ದುಡ್ಡೇ ದೊಡ್ಡದು ಎಂಬಂಥಾ ಭ್ರಮ ಇದೆ. ಇದೇ ಮನಸ್ಥಿತಿಯಲ್ಲಿಯೇ ತಮ್ಮ ಮಕ್ಕಳ ಎಳೇ ಮನಸುಗಳನ್ನವರು ಪದೇ ಪದೆ ಘಾಸಿಗೊಳಿಸುತ್ತಿರುತ್ತಾರೆ. ಹಾಗೆಯೇ ನೋವುಣ್ಣುತ್ತಾ ಬೆಳೆದ ಹುಡುಗನೊಬ್ಬ ಎಲ್ಲ ಸಂಪತ್ತನ್ನೂ ಕಡೆಗಣಿಸಿ ಪ್ರೀತಿಯನ್ನಷ್ಟೇ ಅರಸಿ ಹೊರಡೋ ಯುವಕನೊಬ್ಬನ ಸುತ್ತಲಿನ ಕಥೆ ‘ಕದ್ದುಮುಚ್ಚಿ’ ಚಿತ್ರದ್ದು.

    ಹಾಗೆ ಪ್ರೀತಿಯನ್ನರಸಿ ಹೊರಡೋ ಹುಡುಗನ ಮುಂದೆ ಮಲೆನಾಡ ದೇವತೆಯಂಥಾ ಹುಡುಗಿಯೊಬ್ಬಳು ಎದುರಾಗುತ್ತಾಳೆ. ಆ ನಂತರ ಹುಡುಗನ ಬದುಕು ಹೇಗೆ ಬದಲಾಗುತ್ತೆ, ಆತ ಅರಸಿ ಹೊರಟ ಪ್ರೀತಿ ಸಿಗುತ್ತದಾ ಎಂಬುದು ಕಥೆಯ ಜೀವಾಳ. ಆದರೆ ಒಟ್ಟಾರೆ ಸಿನಿಮಾದಲ್ಲಿ ಊಹಿಸಲಾರದ ತಿರುವುಗಳಿವೆ. ಮನಸಾರೆ ನಗುವಂಥಾ ಕಾಮಿಡಿ, ಮೈನವಿರೇಳಿಸೋ ಸಾಹಸ ಮತ್ತು ನೇರವಾಗಿ ಎದೆಗೇ ನಾಟಿಕೊಳ್ಳುವಂಥಾ ಭಾವನಾತ್ಮಕ ವಿಚಾರಗಳೂ ಇವೆಯಂತೆ. ಇಂಥಾ ಹತ್ತಾರು ವೈಶಿಷ್ಟ್ಯಗಳನ್ನ ಹೊಂದಿರೋ ಈ ಚಿತ್ರ ಬಿಡುಗಡೆಯ ಹಾದಿಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕದ್ದುಮುಚ್ಚಿ: ಹಳತು ಹೊಸತರ ಮಹಾಸಂಗಮ!

    ಕದ್ದುಮುಚ್ಚಿ: ಹಳತು ಹೊಸತರ ಮಹಾಸಂಗಮ!

    ಬೆಂಗಳೂರು: ಮಂಜುನಾಥ್ ನಿರ್ಮಾಣದ ಕದ್ದುಮುಚ್ಚಿ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಈ ಮೂಲಕವೇ ಬಹು ಕಾಲದ ನಂತರ ಹಿರಿಯ ಕಲಾವಿದರನೇಕರು ಮತ್ತೆ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗಿದ್ದಾರೆ. ನಿರ್ಮಾಪಕರೇ ಹೇಳೋ ಪ್ರಕಾರ ಈ ಸಿನಿಮಾ ಹಳತು ಮತ್ತು ಹೊಸತರ ಮಹಾಸಂಗಮ!

    ಕದ್ದುಮುಚ್ಚಿ ಚಿತ್ರವನ್ನ ನಿರ್ದೇಶಕ ವಸಂತ್ ರಾಜಾ ಇಂಥಾ ನಾನಾ ವಿಶೇಷತೆಗಳೊಂದಿಗೆ ರೂಪಿಸಿದ್ದಾರೆ. ಹಳೇ ತಲೆಮಾರಿನ ಕಲಾವಿದರನ್ನೂ ಕೂಡಾ ಮತ್ತೆ ಕಣ್ತುಂಬಿಕೊಳ್ಳುವ ಸದಾವಕಾಶವನ್ನು ಕದ್ದುಮುಚ್ಚಿ ಚಿತ್ರ ಓಪನ್ನಾಗಿಯೇ ಪ್ರೇಕ್ಷಕರಿಗೆ ಕೊಟ್ಟಿದೆ.

    ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನ ಆಳಿದ್ದ ದೊಡ್ಡಣ್ಣ ಈ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಹೊನ್ನವಳ್ಳಿ ಕೃಷ್ಣ ಕೂಡಾ ಇದಕ್ಕೆ ಜೊತೆಯಾಗಿದ್ದಾರೆ. ಇವರೊಂದಿಗೆ ಸದ್ಯದ ಲೀಡ್ ಹಾಸ್ಯ ನಟ ಚಿಕ್ಕಣ್ಣನ ಸಾಥ್ ಕೂಡಾ ಇದೆ. ಈ ಮೂವರ ಪಾತ್ರಗಳೂ ಕೂಡಾ ಕಥೆಯೊಂದಿಗೇ ಹೊಸೆದುಕೊಂಡಿದೆಯಂತೆ. ಈವರೆಗೂ ನಾನಾ ಹೀರೋಗಳ ಜೊತೆ ಕಾಮಿಡಿ ಕಮಾಲ್ ಸೃಷ್ಟಿಸಿದ್ದ ಚಿಕ್ಕಣ್ಣ ಇಲ್ಲಿ ದೊಡ್ಡಣ್ಣರಂಥ ಹಿರಿಯ ಕಲಾವಿದರಿಗೆ ಜೊತೆಯಾಗಿದ್ದಾರೆ.

    ಈ ಹಿರಿ ಕಿರಿಯರ ಜುಗಲ್ಬಂದಿ ಕೂಡಾ ಕದ್ದುಮುಚ್ಚಿ ಸಿನಿಮಾದ ಮುಖ್ಯ ಆಕರ್ಷಣೆ ಎನ್ನಲಡ್ಡಿಯಿಲ್ಲ. ಅದರ ನಿಜವಾದ ಸೊಗಸು ಅನಾವರಣಗೊಳ್ಳೋ ಕಾಲ ಹತ್ತಿರದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕದ್ದುಮುಚ್ಚಿ: ಸ್ಟೀಲ್ ಉದ್ಯಮಿ ಮಂಜುನಾಥ್ ಮನಸಲ್ಲಿದ್ದದ್ದು ಉಕ್ಕಿನಂಥಾ ಸಿನಿಮಾಸಕ್ತಿ!

    ಕದ್ದುಮುಚ್ಚಿ: ಸ್ಟೀಲ್ ಉದ್ಯಮಿ ಮಂಜುನಾಥ್ ಮನಸಲ್ಲಿದ್ದದ್ದು ಉಕ್ಕಿನಂಥಾ ಸಿನಿಮಾಸಕ್ತಿ!

    ಬೆಂಗಳೂರು: ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನದ ಸ್ಪರ್ಶದೊಂದಿಗೇ ಕದ್ದುಮುಚ್ಚಿ ಎಂಬ ಹೊಸಬರ ಚಿತ್ರವೊಂದು ಸುದ್ದಿಯಲ್ಲಿದೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ಮತ್ತು ಬಿಗ್ ಬಾಸ್ ಫೇಮಿನ ಮೇಘಶ್ರೀ ಅಭಿನಯದ ಈ ಸಿನಿಮಾವೀಗ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಮೆಲುವಾಗಿ ತಾಕಿದೆ. ಬದುಕಿಗೆ ಹತ್ತಿರವಾದ, ಮನೋರಂಜನಾತ್ಮಕ ಅಂಶಗಳನ್ನೂ ಹೊಂದಿರುವ ಈ ಚಿತ್ರವನ್ನು ಅಕ್ಕರಾಸ್ಥೆಯಿಂದಲೇ ನಿರ್ಮಾಣ ಮಾಡಿರುವವರು ವಿ.ಜಿ ಮಂಜುನಾಥ್.

    ಸಿನಿಮಾ ಎಂಬುದರ ಸೆಳೆತವೇ ಮಾಯೆಯಂಥಾದ್ದು. ಅದು ಎತ್ತೆತ್ತಲ್ಲಿಂದಲೋ ಮನಸುಗಳನ್ನ ಸೆಳೆದು ಬಿಡುತ್ತದೆ. ಗೊತ್ತೇ ಆಗದಂತೆ ತನ್ನ ಭಾಗವಾಗಿಸಿಕೊಂಡು ಬಿಡುತ್ತದೆ. ಈ ಮಾತಿಗೆ ಹತ್ತಾರು ಉದಾಹರಣೆಗಳಿವೆಯಾದರೂ ಕದ್ದುಮುಚ್ಚಿ ಚಿತ್ರದ ನಿರ್ಮಾಪಕರಾದ ಮಂಜುನಾಥ್ ಅದಕ್ಕೆ ತಾಜಾ ಉದಾಹರಣೆಯಂಥವರು.

    ಆದಿಚುಂಚನಗಿರಿ ಸಮೀಪದ ವಡ್ಡರಹಳ್ಳಿಯವರಾದ ಮಂಜುನಾಥ್ ಅಪ್ಪಟ ರೈತಾಪಿ ವರ್ಗದಿಂದಲೇ ಬಂದವರು. ಈವತ್ತಿಗೂ ಅವರ ಬೇರುಗಳಿರೋದು ಅಲ್ಲಿಯೇ. ಆರಂಭ ಕಾಲದಲ್ಲಿ ಮಂಜುನಾಥ್ ಅವರ ಆಸಕ್ತಿಯಿದ್ದದ್ದು ಶಿಕ್ಷಣ ಕ್ಷೇತ್ರದತ್ತ. ಟಿಸಿಎಚ್ ಸೇರಿದಂತೆ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದ ಅವರು ಅಚಾನಕ್ಕಾಗಿ ಇಂಡಸ್ಟ್ರಿಯಲ್ ವಲಯಕ್ಕೆ ಪಾದಾರ್ಪಣೆ ಮಾಡಿದ್ದ 2000ನೇ ಇಸವಿಯಲ್ಲಿ. ಆದಿತ್ಯ ಬಿರ್ಲಾ ಕಂಪೆನಿಯ ಸ್ಟೀಲ್ ಸರಬರಾಜು ಉದ್ಯಮ ಆರಂಭಿಸಿ ಅದರಲ್ಲಿಯೇ ಪರಿಶ್ರಮ ಪಟ್ಟು ಗೆದ್ದ ಮಂಜುನಾಥ್ ಅವರ ಪ್ರಧಾನ ಕನಸಾಗಿದ್ದದ್ದು ಸಿನಿಮಾ.

    ಆರಂಭ ಕಾಲದಿಂದಲೂ ಮಂಜುನಾಥ್ ಅವರಿಗೆ ಸಿನಿಮಾ ಎಂದರೆ ಎಲ್ಲಿಲ್ಲದ ಪ್ರೀತಿ. ಅವರ ಮನೋರಂಜನೆಯ ಮೂಲವಾಗಿದ್ದದ್ದೂ ಕೂಡಾ ಸಿನಿಮಾಗಳೇ. ಅವರೊಬ್ಬ ಉದ್ಯಮಿಯಾಗಿ ಬೆಳೆದ ನಂತರ ಒಂದೊಳ್ಳೆ ಸಿನಿಮಾ ಮಾಡ ಬೇಕೆಂಬ ಹಂಬಲ ತೀವ್ರವಾಗಿತ್ತು. ಮನೋರಂಜನೆಯ ಅಂಶಗಳ ಜೊತೆಗೆ ಈ ಸಮಾಜಕ್ಕೆ ಸಂದೇಶ ಸಾರುವಂಥಾ ಕಥೆಯೊಂದು ಸಿಕ್ಕರೆ ಸಿನಿಮಾ ಮಾಡೋ ನಿರ್ಧಾರದೊಂದಿಗೆ ಮಂಜುನಾಥ್ ಮುಂದುವರೆಯುತ್ತಿದ್ದರು. ಅದೇ ಕಾಲಕ್ಕೆ ಸರಿಯಾಗಿ ನಿರ್ದೇಶಕ ವಸಂತ್ ಮಂಜುನಾಥ್ ಅವರನ್ನು ಸಂಪರ್ಕಿಸಿದ್ದರು.

    ವಸಂತ್ ಹೇಳಿದ ಕಥೆ ಇಷ್ಟವಾಗಿ 2016ರಲ್ಲಿ ಅದು ಟೇಕಾಫ್ ಕೂಡಾ ಆಗಿತ್ತು. ಆದರೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬರಬೇಕೆಂಬ ಮನಸ್ಥಿತಿಯ ಮಂಜುನಾಥ್ ಎಲ್ಲದರಲ್ಲಿಯೂ ಅಕ್ಕರಾಸಕ್ತಿಯಿಂದಲೇ ಗಮನ ಹರಿಸಿದ್ದರು. ಆದ್ದರಿಂದಲೇ ಕೊಂಚ ತಡವಾದರೂ ಇಡೀ ಚಿತ್ರ ಚೆಂದಗೆ ಮೂಡಿ ಬಂದಿದೆ ಎಂಬ ಆತ್ಮತೃಪ್ತಿ ಮಂಜುನಾಥ್ ಅವರಲ್ಲಿದೆ.

    ನಗರ ಜೀವನದ ಜಂಜಾಟಗಳಿಂದ ರೋಸತ್ತು ಮತ್ಯಾವುದೋ ಮಾಯೆಯ ಬೆಂಬಿದ್ದು ಹೊರಡೋ ಯುವಕನ ಸುತ್ತಾ ಈ ಚಿತ್ರದ ಕಥೆ ಬಿಚ್ಚಿಕೊಳ್ಳುತ್ತದೆಯಂತೆ. ಆ ಹುಡುಕಾಟದಲ್ಲಿಯೇ ಭರ್ಜರಿ ಮನೋರಂಜನೆಯೊಂದಿಗೆ ಬದುಕಿಗೆ ಹತ್ತಿರವಾದ ಅಂಶಗಳೂ ಅನಾವರಣಗೊಳ್ಳುತ್ತಾ ಸಾಗುತ್ತವೆ. ಕಡೆಗೊಂದು ಪರಿಣಾಮಕಾರಿಯಾದ ಸಂದೇಶವನ್ನೂ ನೀಡಲಾಗಿದೆ. ಒಟ್ಟಾರೆಯಾಗಿ ಇದು ಹೊಸಾ ಸಾಧ್ಯತೆಗಳನ್ನು ಕಾಣಿಸುವಂಥಾ ಪಕ್ಕಾ ಕಮರ್ಶಿಯಲ್ ಚಿತ್ರ.

    ಅದೇನೇ ಅಡೆತಡೆಗಳು ಎದುರಾದರೂ ಮಂಜುನಾಥ್ ಯಾವುದಕ್ಕೂ ಕೊರತೆ ಮಾಡದಂತೆ ಕದ್ದುಮುಚ್ಚಿ ಚಿತ್ರವನ್ನ ರೂಪಿಸಿದ್ದಾರೆ. ಇದರಲ್ಲಿ ಕಲಾವಿದರದ್ದೊಂದು ದೊಡ್ಡ ದಂಡೇ ಇದೆ. ಕಾಮಿಡಿಯೂ ಈ ಚಿತ್ರದ ಪ್ರಧಾನ ಅಂಶ. ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕರ ಕಾಮಿಡಿ ಕಮಾಲ್ ಈ ಚಿತ್ರದಲ್ಲಿದೆ. ಇನ್ನುಳಿದಂತೆ ಬಿ.ವಿ ರಾಧಾ, ಸುಚೇಂದ್ರ ಪ್ರಸಾದ್ ಮುಂತಾದವರ ಅದ್ಧೂರಿ ತಾರಾಗಣವನ್ನ ಕದ್ದುಮುಚ್ಚಿ ಚಿತ್ರ ಹೊಂದಿದೆ.

    ಈ ಮೂಲಕ ಹೊಸಾ ಅಲೆಯ ಚೆಂದದ್ದೊಂದು ಚಿತ್ರವನ್ನ ನಿರ್ಮಾಣ ಮಾಡಿದ ಖುಷಿ ಮಂಜುನಾಥ್ ಅವರಿಗಿದೆ. ಈಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋದರಿಂದ ಇದೇ ತಿಂಗಳ ಇಪ್ಪತ್ತೆರಡನೇ ತಾರೀಕಿನಂದು ಈ ಚಿತ್ರವನ್ನ ತೆರೆಗಾಣಿಸುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv