Tag: ಕಥೆ

  • ಕಾಲೇಜು ದಿನಗಳಲ್ಲೇ ‘ಕಾಂತಾರ’ ಕಥೆ ಹೊಳೆದಿತ್ತು: ನಟ ರಿಷಬ್ ಶೆಟ್ಟಿ

    ಕಾಲೇಜು ದಿನಗಳಲ್ಲೇ ‘ಕಾಂತಾರ’ ಕಥೆ ಹೊಳೆದಿತ್ತು: ನಟ ರಿಷಬ್ ಶೆಟ್ಟಿ

    ಕಾಂತಾರ ಸಿನಿಮಾ ಕುರಿತಂತೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ ರಿಷಬ್ ಶೆಟ್ಟಿ (Rishabh Shetty). ಅಮೆಜಾನ್ ಪ್ರೈಂ ಇವೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರಿಷಬ್, ಕಾಂತಾರ ಸಿನಿಮಾದ ಕಥೆ (Story) ಇಂದು ನಿನ್ನೆ ಹೊಳೆದದ್ದು ಅಲ್ಲ. ಕಾಲೇಜು ದಿನಗಳಲ್ಲೇ ಎರಡೂ ಭಾಗದ ಕಥೆಯನ್ನು ನಾನು ಕಲ್ಪಿಸಿಕೊಂಡಿದ್ದೆ. ನನ್ನ ನೆಲದ ಕಥೆಯನ್ನು ಹೇಳಬೇಕು ಅಂತ ಅವತ್ತೆ ಅನಿಸಿತ್ತು ಎಂದು ಮಾತನಾಡಿದ್ದಾರೆ.

    ಸಿನಿಮಾ ರಂಗಕ್ಕೆ ಬಂದ ನಂತರ ಕಾಂತಾರದ ಕಥೆಗೆ ಮತ್ತಷ್ಟು ಶಕ್ತಿ ಬಂದು, ಸಿನಿಮಾ ಮಾಡುವ ಹಾಗಾಯಿತು ಎಂದು ನೆನಪಿಸಿಕೊಂಡಿದ್ದಾರೆ. ಕಾಂತಾರ ಚಾಪ್ಟರ್ 1ಕ್ಕಾಗಿ ಅವರು ಊರ ಹತ್ತಿರವೇ ಸೆಟ್ ಹಾಕಿಸಿದ್ದಾರಂತೆ ರಿಷಬ್. ಮುಂದಿನ ತಿಂಗಳಿಂದ ಚಿತ್ರದ ಚಿತ್ರೀಕರಣ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

    ಕಾಂತಾರ 1 (Kantara) ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವೇ ಆಗಿಲ್ಲ. ಆಗಲೇ ಒಟಿಟಿಗೆ ಚಿತ್ರವನ್ನು ಮಾರಿಕೊಂಡಿದ್ದಾರೆ ನಿರ್ಮಾಪಕ ವಿಜಯ ಕಿರಗಂದೂರು. ಕಾಂತಾರ ಚಿತ್ರದ ಒಟಿಟಿ (OTT) ಹಕ್ಕನ್ನು ಪ್ರೈಮ್ ವಿಡಿಯೋ ಖರೀದಿಸಿದ್ದು, ಭಾರೀ ಮೊತ್ತಕ್ಕೆ ಸೇಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಂದಾಜಿನ ಪ್ರಕಾರ, ಸಿನಿಮಾದ ಬಜೆಟ್ ನ ಅರ್ಧದಷ್ಟು ದುಡ್ಡು ಒಟಿಟಿಯಿಂದಲೇ ಬಂದಿದೆ ಎನ್ನುವುದು ಸಿಕ್ಕಿರುವ ಮಾಹಿತಿ.

    ಈ ನಡುವೆ ‘ಕಾಂತಾರ’  ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ರಿಷಬ್ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ (Jr.Ntr) ನಟಿಸುತ್ತಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲೇ ವೈರಲ್ ಆಗಿದೆ. ರಿಷಬ್ ಶೆಟ್ಟಿ ಸೈಲೆಂಟಾಗಿದ್ದಾರೆ. ಕಾರಣ ಕರಾವಳಿಯಲ್ಲಿ ‘ಕಾಂತಾರ’ ಚಿತ್ರೀಕರಣದ ಸಿದ್ಧತೆ ನಡೆಯುತ್ತಿದೆ. ಹಾಗಾಗಿ ಕಾಣಿಸುತ್ತಿಲ್ಲ ಶಿವ. ಆದರೆ ಮೊನ್ನೆ ಅವರು ಜ್ಯೂ.ಎನ್‌ಟಿಆರ್ ಜೊತೆ ದಿಢೀರ್ ಎಂದು ಪೋಸ್ ಕೊಟ್ಟರು. ಅಲ್ಲಿಂದ ಆರಂಭ ತಲೆಗೊಂದು ಲೆಕ್ಕಾಚಾರ. ಹಾಗಾಗಿ ರಿಷಬ್ ಜೊತೆ ತಾರಕ್ ನಟಿಸುತ್ತಾರೆ ಎಂಬ ಗುಸು ಗುಸು ಶುರುವಾಗಿದೆ.

    ರಿಷಬ್ ಶೆಟ್ಟಿ ಈಗ ಎಲ್ಲೂ ಕಾಣುತ್ತಿಲ್ಲ. ಅದನ್ನು ಅವರೇ ಹೇಳಿದ್ದರು. ಶೂಟಿಂಗ್ ಆರಂಭವಾದ ಮೇಲೆ ನಾಟ್ ರೀಚೆಬಲ್ ಎಂದಿದ್ದರು. ಅದನ್ನು ಮಾಡಿ ತೋರಿಸುತ್ತಿದ್ದಾರೆ. ಈ ನಡುವೆ ಟಾಲಿವುಡ್ ಯಂಗ್ ಟೈಗರ್ ಜ್ಯೂ.ಎನ್‌ಟಿಆರ್ ಜೊತೆ ಪತ್ನಿ ಪ್ರಗತಿ ಸಮೇತ ಕಾಣಿಸಿಕೊಂಡಿದ್ದಾರೆ. ಆಗ ಎಲ್ಲರೂ ಸೇರಿ ಫೋಟೊ ತೆಗೆಸಿಕೊಂಡರು. ಆಗ ಆಕಾಶಕ್ಕೇರಿದ ಗಾಳಿಪಟದ ಹಾರಾಟ ಈಗಲೂ ನಿಂತಿಲ್ಲ. ಇದರ ಪರಿಣಾಮ, ಕಾಂತಾರದಲ್ಲಿ ಜ್ಯೂ.ಎನ್‌ಟಿಆರ್ ಕೂಡ ಬಣ್ಣ ಹಚ್ಚಲಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಲಿದ್ದಾರೆ. ಇದು ನಿಜವಾ ಸುಳ್ಳಾ? ಗೊತ್ತಿಲ್ಲ. ಈ ಸುದ್ದಿ ಮಾತ್ರ ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

     

    ಜ್ಯೂ.ಎನ್‌ಟಿಆರ್ ತಾಯಿ ಮೂಲತಃ ಮಂಗಳೂರಿನವರು. ಅದರಲ್ಲೂ ರಿಷಬ್ ಕುಂದಾಪುರದವರು. ಹೀಗಾಗಿಯೇ ತಾರಕ್ ಸ್ಪಷ್ಟ ಕನ್ನಡ ಮಾತಾಡುತ್ತಾರೆ. ಅದನ್ನಿಟ್ಟುಕೊಂಡು ಕಾಡುಶಿವ ಹಾಗೂ ಟೈಗರ್ ಜುಗಲ್‌ಬಂದಿ ತೋರಿಸಲಿದ್ದಾರೆ ಅನ್ನೋದು ಸದ್ಯದ ತಾಜಾ ಸುದ್ದಿ. ಕಾಂತಾರ ಮುಗಿವಷ್ಟರಲ್ಲಿ ಇನ್ನು ಯಾರ್ ಯಾರು ಇದರಲ್ಲಿ ನಾಮಕಾವಾಸ್ತೆ ಸೇರಲಿದ್ದಾರೊ. ಖುದ್ದು ಕಾಡು ಶಿವನಿಗೂ ಗೊತ್ತಿಲ್ಲ. ಸದ್ಯ ಬ್ರೇಕಿಂಗ್ ನ್ಯೂಸ್ ಆಗಿ ಹರಿದಾಡುತ್ತಿದೆ. ಜ್ಯೂ.ಎನ್‌ಟಿಆರ್ ಕಾಂತಾರ ಸಿನಿಮಾದಲ್ಲಿ ನಟಿಸೋದು ಗಾಸಿಪ್ ಅಥವಾ ನಿಜ ಸಂಗತಿನಾ? ಎಂಬುದನ್ನು ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಒಂದು ವೇಳೆ, ಈ ಸುದ್ದಿ ನಿಜವೇ ಆಗಿದಲ್ಲಿ ಪ್ರೇಕ್ಷಕರಿಗೆ ಹಬ್ಬದೂಟ ಗ್ಯಾರಂಟಿ.

  • ‘ಕಾಂತಾರ’ ಕಥೆಗಾಗಿ ಮೆಗಾ ಪ್ಲ್ಯಾನ್ ಹೆಣೆದಿದ್ದಾರಂತೆ ರಿಷಬ್ ಶೆಟ್ಟಿ

    ‘ಕಾಂತಾರ’ ಕಥೆಗಾಗಿ ಮೆಗಾ ಪ್ಲ್ಯಾನ್ ಹೆಣೆದಿದ್ದಾರಂತೆ ರಿಷಬ್ ಶೆಟ್ಟಿ

    ಕಾಂತಾರ (Kantara) ಮೈದಾನ ಸದ್ಯಕ್ಕೆ ಸೈಲೆಂಟಾಗಿದೆ. ಆದರೆ ಇನ್ನೇನು ಕೆಲವೇ ವಾರಗಳಲ್ಲಿ ಹವಾ ಎಬ್ಬಿಸಲಿದೆ. ಅದುವರೆಗೆ ಒಳಗೊಳಗೆ ಹೊಸದೊಂದು ಮೆಗಾಪ್ಲಾನ್ ತಯಾರಾಗುತ್ತಿದೆ. ಅದು ಕನ್ನಡ ಚಿತ್ರರಂಗಕ್ಕೆ ಹೊಸದು. ಇದಕ್ಕೆಲ್ಲ ಮೂಲ ಕಾರಣ ಒನ್ಸ್ ಅಗೇನ್ ರಿಷಬ್‌ ಶೆಟ್ಟಿ (Rishabh Shetty). ಕಾಂತಾರ ಎರಡನೇ ಭಾಗವನ್ನು ಆರಂಭಿಸುವ ಮುನ್ನ ಅವರು ಹೊಸ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗಿದ್ದಾರೆ.

    ಎಲ್ಲರ ಕಣ್ಣು ಈಗ ರಿಷಬ್‌ ಶೆಟ್ಟಿ ಅಂಡ್ ಗ್ಯಾಂಗ್‌ನತ್ತ ನೆಟ್ಟಿವೆ. ಕಾಂತಾರದ ಮಹಾ ಗೆಲುವು ಇಡೀ ತಂಡವನ್ನು ಎಲ್ಲಿಗೋ ಹೋಗಿ ಮುಟ್ಟಿಸಿದೆ. ಆ ಸಂಭ್ರಮವನ್ನು ಅನುಭವಿಸಬೇಕು. ಜೊತೆಗೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕಾಂತಾರಕ್ಕಿಂತ ಅದ್ಭುತವನ್ನು ಸೃಷ್ಟಿ ಮಾಡಬೇಕು. ಅದಕ್ಕಾಗಿ ಸಕಲ ಸಿದ್ಧತೆ ನಡೆಸುತ್ತಿದೆ ಕಾಂತಾರ ತಂಡ. ಮೊಟ್ಟ ಮೊದಲಿಗೆ ಅದ್ಭುತ ಕತೆಯನ್ನು (Story) ಹುಡುಕಬೇಕು. ಅದಕ್ಕಾಗಿ ದೃಶ್ಯಗಳನ್ನು ಹೊಸೆಯಬೇಕು. ಹಾಗೆಯೇ ಪ್ರತಿ ದೃಶ್ಯಕ್ಕೆ ದೇವರಂಥ ಸಂಭಾಷಣೆ ಹೊಸೆಯಬೇಕು. ಇಲ್ಲೇ ರಿಷಬ್ ಹೊಸ ಥಿಯರಿ ಅಳವಡಿಕೊಳ್ಳಲಿದ್ದಾರಂತೆ.

    ಏನಿದು ಡಿವೈನ್ ಸ್ಟಾರ್ ಪ್ಲಾನು? ವಿಷಯ ಇಷ್ಟೇ. ಕಾಂತಾರ ಸಿನಿಮಾಕ್ಕಾಗಿ ಮೂರು ಮೂರು ರೈಟರ್ಸ್ ಕೆಲಸ ಮಾಡುತ್ತಿದ್ದಾರೆ. ಶೆಟ್ಟರ ಜೊತೆ ಇನ್ನು ಮೂವರು ಕುಳಿತು ಚರ್ಚೆ ಮಾಡಿದ್ದಾರೆ. ಅಫ್‌ಕೋರ್ಸ್ ಎಲ್ಲವೂ ಶೆಟ್ಟರ ಬತ್ತಳಿಕೆಯಿಂದ ಬಂದ ಅಸ್ತ್ರಗಳೆ. ಆದರೂ ಫೈನಲ್ ಡ್ರಾಫ್ಟ್ ಮಾಡುವಾಗ ಸಹಜವಾಗಿ ಅಂತಿಮ ಸಲಹೆ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಫೈನಲ್ ವರ್ಶನ್ ಸ್ಕ್ರಿಪ್ಟ್ ಸಿದ್ಧವಾಗಿದೆ. ಈಗ ಕಾಂತಾರದ ಮೇಲಿನ ನಿರೀಕ್ಷೆ ವಿಶ್ವದ ತುಂಬಾ ಹಬ್ಬಿದೆ. ಇದನ್ನೂ ಓದಿ:`ಸಿಟಾಡೆಲ್’ ಫಸ್ಟ್ ಲುಕ್ ಔಟ್: ಆ್ಯಕ್ಷನ್ ಅವತಾರದಲ್ಲಿ ಪ್ರಿಯಾಂಕಾ ಚೋಪ್ರಾ

    ಸಿನಿಮಾದ ಸ್ಕ್ರಿಪ್ಟ್ ಅನ್ನು ಅದ್ಭುತವಾಗಿಸಲು ಒಟ್ಟು ಹದಿನಾರು ಮಂದಿಯ ಬರಹಗಾರರ ತಂಡ ಕಾಂತಾರಕ್ಕಾಗಿ ಒಂದುಗೂಡಿದ್ದಾರೆ ಅನ್ನೋದು ಮಾಹಿತಿ. ಈ ಹಿಂದೆ ಶೆಟ್ಟರ ತಂಡದಲ್ಲಿದ್ದ ಖಾಯಂ ಬರಹಗಾರರು ಇಲ್ಲೂ ಮುಂದುವರೆದಿದ್ದಾರೆ. ಅವರ ಜೊತೆ ಇನ್ನು ಕೆಲವು ಅಕ್ಷರ ಬಲ್ಲವರನ್ನು ಕರೆದುಕೊಂಡು ಬಂದಿದ್ದಾರಂತೆ. ಒಂದೊಂದು ದೃಶ್ಯವನ್ನು ಎಲ್ಲರೂ ಬರೆಯಬೇಕು. ಅದರಲ್ಲಿ ಗ್ರೇಟ್ ಅನ್ನಿಸಿಕೊಳ್ಳುವ ದೃಶ್ಯಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಟಾಲಿವುಡ್‌ನಲ್ಲಿ ಈ ರೀತಿ ಪರಚೂರಿ ಬ್ರದರ್ಸ್ ಮಾಡುತ್ತಿದ್ದರು. ಹಲವು ಹುಡುಗರಿಂದ ಡೈಲಾಗ್ ಬರೆಸುತ್ತಿದ್ದರು. ಅದರಲ್ಲಿ ಬೆಸ್ಟ್ ಡೈಲಾಗ್ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದನ್ನೇ ರಿಷಬ್ ಮಾಡಲಿದ್ದಾರಾ ಅಥವಾ ಇದೆಲ್ಲ ಗಾಳಿಸುದ್ದಿಯಾ ? ಶೆಟ್ಟರಿಗೆ ಸಂದೇಶ ಮಾಡಿದ್ದೇವೆ. ಉತ್ತರ ಇನ್ನೂ ಬಂದಿಲ್ಲ.

    ಇನ್ನು ಕೆಲವು ದಿನಗಳಲ್ಲಿ ಶೆಟ್ಟರ ಮೊಬೈಲ್ ಸ್ವಿಚ್  ಆಫ್ ಆಗಲಿದೆ. ಅಲ್ಲಿಂದ ಅವರ ಕಾಡಿನಲ್ಲಿ ಕತೆ ಬೇಟೆ ಶುರುವಾಗಲಿದೆ. ಅದು ಮುಗಿದ ಮೇಲೆ ಚಿತ್ರಕತೆ, ಸಂಭಾಷಣೆ ಇತ್ಯಾದಿ. ಎಲ್ಲವೂ ಕೆಲವು ತಿಂಗಳಲ್ಲಿ ಅಂತಿಮ ರೂಪು ಪಡೆಯಲಿದೆ. ಅದಾದ ಮೇಲೆ ಶೂಟಿಂಗ್‌ಗೆ ಹೊರಡಲು ಸಜ್ಜಾಗಲಿದ್ದಾರೆ. ಈ ಬಾರಿ ಮೊದಲ ಭಾಗಕ್ಕಿಂತ ದೊಡ್ಡ ಮಟ್ಟದಲ್ಲಿ, ದೊಡ್ಡ ಕ್ವಾನ್ವಾಸ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ಕಥಾ ಕಲ್ಪನೆ ಕೂಡ ವಿಶಾಲವಾಗಿರಲಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಈ ಬಾರಿ ಹಿಂದೆ ಮುಂದೆ ಯೋಚಿಸದೆ ಕಾಸು ಸುರಿಯಲಿದ್ದಾರೆ. ಎಷ್ಟು ಕೋಟಿ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್ ಆಫ್ ಕಾಂತಾರ.

    ಒಂದು ಸಿನಿಮಾ ಅನಿರೀಕ್ಷಿತವಾಗಿ ಗೆದ್ದು ಬಿಟ್ಟರೆ, ಎಲ್ಲರ ಕಲ್ಪನೆ ಮೀರಿ ಕಾಸು ಮಾಡಿದರೆ, ಒಂದು ಚಿತ್ರರಂಗದ ದಿಕ್ಕನ್ನೇ ಹೊಸ ದಾದಿಯತ್ತ ಕರೆದುಕೊಂಡು ಹೋದರೆ ಏನಾಗುತ್ತದೋ ಈಗ ಕಾಂತಾರಕ್ಕೂ ಅದೇ ಆಗಿದೆ. ಕನಸು ಮನಸಲ್ಲೂ ಇಂಥ ದೀಪಾವಳಿ ಮಾಡುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಅದೀಗ ನಡೆದುಹೋಗಿದೆ. ಈಗ ಎಲ್ಲ ಜವಾಬ್ದಾರಿ ರಿಷಬ್‌ಶೆಟ್ಟಿ ಹಾಗೂ ತಂಡದ ಮೇಲೆ ಬಿದ್ದಿದೆ.

  • ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ? ಹೆಣ್ಮಕ್ಕಳ ಹಬ್ಬ ಯಾಕೆ? ಇಲ್ಲಿದೆ ಕಥೆ

    ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ? ಹೆಣ್ಮಕ್ಕಳ ಹಬ್ಬ ಯಾಕೆ? ಇಲ್ಲಿದೆ ಕಥೆ

    ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ, ಊರಿನ ಜಾತ್ರೆಗೆ, ಎಲ್ಲ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು.

    ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.

    ಸ್ಕಂದ ಪುರಾಣದಲ್ಲಿ ನಾಗರ ಪಂಚಮಿಯ ಬಗ್ಗೆ ಕೆಲ ಮಾಹಿತಿಗಳು ಸಿಗುತ್ತದೆ. ಶ್ರೀಕೃಷ್ಣನ ಮಗನಾದ ಸಾಂಬನು ಶಿವಸುತ ಸುಬ್ರಹ್ಮಣ್ಯನಲ್ಲಿ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಎಂದು ಪ್ರಶ್ನೆ ಕೇಳಿದಾಗ ಆತನ ಒಂದು ಕಥೆಯನ್ನು ಹೇಳುತ್ತಾನೆ.

    ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ 8 ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗರವೊಂದು ಈ ಕನ್ನಿಕೆಯ ಬಳಿ ಬಂದು ಆಶ್ರಯವನ್ನು ಕೇಳುತ್ತದೆ. ಭಕ್ತಿಯಿಂದ ಕನ್ನಿಕೆ ಆ ನಾಗನಿಗೆ ಹಾಲು, ಫಲಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಆಕೆಗೆ ಒಂದು ತೊಲೆ ಚಿನ್ನವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಗಂಡು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ, ಕಾಲಿನಿಂದ ಒದೆಯುತ್ತಾನೆ. ಕೋಪಗೊಂಡ ನಾಗರ ಹಾವು ಅವನ್ನು ಸೇರಿದಂತೆ ಇತರ ಏಳು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೇ ಎಂದು ಆ ಕನ್ನಿಕೆ, ದೇವರ ಇದಿರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ, ನಾರಾಯಣನು ವಾಸುಕಿಗೆ ಆ ಸತ್ತ ಹುಡುಗರನ್ನು ಬದುಕಿಸಲು ಹೇಳುತ್ತಾನೆ. ಈ ರೀತಿ ಪುನಃ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆ ಯಶಸ್ವಿಯಾದ ದಿನವೇ ನಾಗರ ಪಂಚಮಿ.

    ಹೆಣ್ಣುಮಕ್ಕಳ ಹಬ್ಬ:
    ನಾಗರಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ನಾಗರಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ. ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. `ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ‘ ಎನ್ನುವ ಜಾನಪದ ಹಾಡು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.

    ಸಿಂಧೂ ಜನರಲ್ಲೂ ನಂಬಿಕೆಯಿತ್ತು:
    ನಮ್ಮ ಪೂರ್ವಜರ ಕಾಲದಿಂದಲೂ ನಾಗಪೂಜೆ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಸಿಂಧೂ ಸಂಸ್ಕೃತಿಯ ಉತ್ಕನನ ತಾಣಗಳಲ್ಲಿ ಸಿಕ್ಕಿರುವ ಅನೇಕ ಅವಶೇಷಗಳು ಅಲ್ಲಿನ ಜನರು ನಾಗ (ಸರ್ಪ) ಪೂಜೆ ಮಾಡುತ್ತಿದ್ದರು ಎನ್ನುವುದು ತಿಳಿದುಬರುತ್ತದೆ. ಅವರ ನಂತರ ಬಂದಿರುವ ಅನೇಕ ರಾಜಮನೆತನಗಳು ಸರ್ಪವನ್ನು ವಿಶೇಷವಾಗಿ ಪೂಜಿಸುತ್ತಿದ್ದರು. ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಮಾನವ ಜನಾಂಗದವರು ಆದಿಕಾಲದಿಂದಲೂ ಈ ನಾಗಾರಾಧನೆ ನಡೆಸಿಕೊಂಡು ಬಂದಿದ್ದರು ತಿಳಿದುಬರುತ್ತದೆ.

    ಭಾರತದ ಇತಿಹಾಸದ ಪುಟಗಳಲ್ಲಿ ನಾಗವಂಶಗಳ ಕುರಿತಾಗಿ ಉಲ್ಲೇಖವಿದೆ. ಈಗಲೂ ಭಾರತದ ಕೇರಳ, ಅಸ್ಸಾಂ, ನಾಗಾಲ್ಯಾಂಡ್‍ಗಳಲ್ಲಿ ನಾಗಾ ಜನಾಂಗದ (ನಾಗವಂಶೀಯರು) ಇದ್ದಾರೆ. ಭಾರತಕ್ಕಷ್ಟೇ ನಾಗ ಪೂಜೆ ಸೀಮಿತವಾಗಿಲ್ಲ. ಗ್ರೀಸ್, ಜಪಾನ್, ಚೀನಾ, ಈಜಿಪ್ಟ್ ಸೇರಿದಂತೆ ಮುಂತಾದ ಪುರಾತನ ಸಂಸ್ಕøತಿಯುಳ್ಳ ಜನತೆ ನಾಗ ಪೂಜೆ ಮಾಡುತ್ತಿದ್ದರು. ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ್ ಗ್ರಾಮದಲ್ಲಿ ನಾಗರಪಂಚಮಿ ದಿನ ಜೀವಂತ ನಾಗರಹಾವುಗಳನ್ನು ಪೂಜಿಸಲಾಗುತ್ತದೆ.

    ಕ್ಷೀರಾಭಿಷೇಕ ಮಾಡೋದು ಯಾಕೆ?
    “ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ” ಎಂಬ ಶ್ಲೋಕವು ನಾಗ ದೇವನ ವಿವಿಧ ಹೆಸರುಗಳನ್ನು ಹೇಳುತ್ತದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆ ಮಾಡಲಾಗುತ್ತದೆ. ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ಹಲವು ಕಡೆ ನಾಗನ ಕಲ್ಲುಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿಯಿದೆ.

    ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಶ್ರಾವಣ ಶುದ್ಧ ಪಂಚಮಿಯ ದಿನ, ಗೋಮಯ (ಸಗಣಿ)ಯಿಂದ ಬಾಗಿಲು ಸಾರಿಸಿ, ರಂಗೋಲಿ, ಇಲ್ಲವೇ ಅರಿಶಿಣ, ಕುಂಕುಮದಿಂದ ನಾಗರ ಚಿತ್ರಗಳನ್ನು ಬರೆದು ನೇಮನಿಷ್ಠೆಯಿಂದ ಪೂಜೆ ಮಾಡುತ್ತಾರೆ.

    ಸರ್ಪಯಜ್ಞವನ್ನು ನಿಲ್ಲಿಸಿದ ದಿನ:
    ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬುದಿಯಾಗತೊಡಗಿತು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ  ದಯವಿಟ್ಟು ನಮ್ಮನ್ನು ಆ ರಾಜನ ಹೋಮದಿಂದ ರಕ್ಷಿಸು ಎಂದು ಬೇಡಿಕೊಳ್ಳುತ್ತವೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ. ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸಿದ. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿದೆಯಂತೆ.

    ಶಿವನ ಆಭರಣ, ವಿಷ್ಣುವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವರತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ನಾಗ ಕಾಣಿಸಿಕೊಳ್ಳುತ್ತಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಲಿವುಡ್ ಸಿನಿಮಾ ಮಾಡಲಿದ್ದಾರೆ ರಾಜಮೌಳಿ : ವಿಜಯೇಂದ್ರ ಪ್ರಸಾದ್

    ಹಾಲಿವುಡ್ ಸಿನಿಮಾ ಮಾಡಲಿದ್ದಾರೆ ರಾಜಮೌಳಿ : ವಿಜಯೇಂದ್ರ ಪ್ರಸಾದ್

    ಹೈದರಾಬಾದ್: ಟಾಲಿವುಡ್ ಖ್ಯಾತ ನಿರ್ದೇಶಕ ರಾಜಮೌಳಿ ಹಾಲಿವುಡ್‍ನಲ್ಲಿ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಅವರ ತಂದೆ ವಿಜಯೇಂದ್ರ ಪ್ರಸಾದ್ ತಿಳಿಸಿದ್ದಾರೆ.

    ಬಾಹುಬಲಿ ಸಿನಿಮಾದ ಮೂಲಕ ಇಡೀ ವಿಶ್ವವೇ ಟಾಲಿವುಡ್ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ ಹಾಲಿವುಡ್‍ನಲ್ಲಿ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು. ಆದರೀಗ ಈ ಮಾತು ಸತ್ಯ ಆಗುತ್ತಿದೆ. ಹೌದು, ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸಂದರ್ಶನವೊಂದರಲ್ಲಿ ರಾಜಮೌಳಿ ಹಾಲಿವುಡ್‍ನಲ್ಲಿ ಸಿನಿಮಾ ನಿರ್ದೇಶಿಸಿತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ:ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

    ವಿಶೇಷವೆಂದರೆ ರಾಜಮೌಳಿಯವರು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ವಿಜಯೇಂದ್ರರವರೆ ಕಥೆ ಬರೆಯುತ್ತಿದ್ದು, ಇದು ಐತಿಹಾಸಿಕ ಕತೆ ಆಧಾರಿಸಿದ ಸಿನಿಮಾವಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಚಿತ್ರ ಕುರಿತಂತೆ ಹಾಲಿವುಡ್ ಪ್ರಖ್ಯಾತ ನಿರ್ಮಾಣ ಸಂಸ್ಥೆಯೊಂದಿಗೆ ಮಾತುಕತೆ ಮಗಿದಿದ್ದು, ಈ ಸಿನಿಮಾದಲ್ಲಿ ಯಾವ ನಟರು ಇರುವುದಿಲ್ಲ. ಇದೊಂದು ಅನಿಮೇಷನ್ ಸಿನಿಮಾ ಆಗಿರಲಿದ್ದು, ಚಿತ್ರದ ಕಥೆ ಭಾರತದ ಪರಿಸರದ್ದೇ ಆಗಿರುತ್ತದೆ ಎಂದು ಹೇಳಿದ್ದಾರೆ.

    ಸದ್ಯ ನಿರ್ದೇಶಕ ರಾಜಮೌಳಿ ಟಾಲಿವುಡ್‍ನ ಸ್ಟಾರ್ ನಟರಾದ ರಾಮ್‍ಚರಣ್ ಹಾಗೂ ಎನ್‍ಟಿಆರ್ ಅಭಿನಯಿಸುತ್ತಿರುವ ‘ಆರ್‌ಆರ್‌ಆರ್‌’ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಈ ಸಿನಿಮಾದಲ್ಲಿ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಈ ಸಿನಿಮಾದಲ್ಲ ಬಾಲಿವುಡ್ ನಟಿ ಅಲಿಯಾ ಭಟ್ ನಾಯಕಿಯಾಗಿ ಅಭಿನಯಿಸಿದ್ದಾರೆ.

  • ಲವ್ ಮಾಕ್‍ಟೇಲ್-2 ಕಥೆ ಕೇಳಿ ಥ್ರಿಲ್ ಆದ ರಘು ದೀಕ್ಷಿತ್

    ಲವ್ ಮಾಕ್‍ಟೇಲ್-2 ಕಥೆ ಕೇಳಿ ಥ್ರಿಲ್ ಆದ ರಘು ದೀಕ್ಷಿತ್

    ಬೆಂಗಳೂರು: ಲವ್ ಮಾಕ್‍ಟೇಲ್-2 ಕಥೆ ಕೇಳಿ ನಾನು ಥ್ರಿಲ್ ಆದೇ ಎಂದು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಹೇಳಿದ್ದಾರೆ.

    ಲವ್ ಮಾಕ್‍ಟೇಲ್ 2020ರ ಜನವರಿಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಯಶಸ್ಸಿನ ಬೆನ್ನಲೇ ಚಿತ್ರದ ನಿರ್ದೇಶಕ ಮತ್ತು ನಾಯಕ ನಟ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್‍ಟೇಲ್ ಸಿನಿಮಾದ ಸಿಕ್ವೇಲ್ ಮಾಡುವುದಾಗಿ ಹೇಳಿಕೊಂಡಿದ್ದರು. ಈಗ ಲಾಕ್‍ಡೌನ್ ಸಮಯದಲ್ಲಿ ಈ ಚಿತ್ರದ ಕಥೆಯನ್ನು ಕೃಷ್ಣ ರೆಡಿ ಮಾಡಿದ್ದಾರೆ.

    https://www.instagram.com/p/CBAn_8TlFir/

    ಲವ್ ಮಾಕ್‍ಟೇಲ್ ಚಿತ್ರಕ್ಕೆ ರಘು ದೀಕ್ಷಿತ್ ಅವರು ಸಂಗೀತ ನೀಡಿದ್ದರು. ಇದೇ ತಂಡವನ್ನು ಇಟ್ಟಿಕೊಂಡು ಕೃಷ್ಣ ಲವ್ ಮಾಕ್‍ಟೇಲ್-2 ಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಚಿತ್ರದ ಕಥೆಯನ್ನು ಕೃಷ್ಣ ರಘು ಅವರಿಗೆ ಹೇಳಿದ್ದು, ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ರಘು ದೀಕ್ಷಿತ್, ಇಂದು ನಾನು ಲವ್ ಮಾಕ್‍ಟೇಲ್-2 ಚಿತ್ರದ ಕಥೆಯನ್ನು ಕೇಳಿದೆ. ಪಾರ್ಟ್-1ಗಿಂತ ಈ ಕಥೆ ಕೇಳಿ ನಾನು ತುಂಬಾ ಥ್ರಿಲ್ ಆದೆ. ಈ ಚಿತ್ರಕ್ಕಾಗಿ ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B8QI93VgrB0/

    ಲವ್ ಮಾಕ್‍ಟೇಲ್ ಪಾರ್ಟ್-1 ಚಿತ್ರ ಬಿಡುಗಡೆಯಾಗಿ ಥೀಯೇಟರ್ ಸಮಸ್ಯೆಯದಾಗ ಚಿತ್ರತಂಡದ ನೆರವಿಗೆ ನಿಂತಿದ್ದ ರಘು ದೀಕ್ಷಿತ್ ಅವರು, ಸಿನಿಮಾ ನೋಡುವಂತೆ ಇನ್‍ಸ್ಟಾಗ್ರಾಮ್ ಮೂಲಕ ಕೇಳಿಕೊಂಡಿದ್ದರು. ಜೊತೆಗೆ ಒಳ್ಳೆಯ ಸಿನಿಮಾಗಳನ್ನು ನೀವು ಹೀಗೇ ಕೈಬಿಟ್ಟರೆ ಮುಂದೆ ಒಳ್ಳೆಯ ಸಿನಿಮಾ ಮಾಡಲು ನಿರ್ಮಾಪಕರು ಭಯಪಡುತ್ತಾರೆ ಎಂದು ಹೇಳಿದ್ದರು. ಆದರೆ ನಂತರ ಸಿನಿಮಾ ಒಳ್ಳೆಯ ಪ್ರತಿಕ್ರಿಯೇ ಪಡೆದು ಜನಮನ್ನಣೆ ಗಳಿಸಿತ್ತು.

    ಲವ್ ಮಾಕ್‍ಟೇಲ್ ಸಿನಿಮಾದ ಯಶಸ್ಸಿನ ನಂತರ ಕೃಷ್ಣ ಲವ್ ಮಾಕ್‍ಟೇಲ್-2 ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಪಾರ್ಟ್ ಒಂದರಲ್ಲಿ ಕಾಣಿಸಿಕೊಂಡ ಯಾವ ಯಾವ ಪಾತ್ರಗಳು ಪಾರ್ಟ್ ಎರಡರಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಇನ್ನೂ ಬಹಿರಂಗವಾಗಿಲ್ಲ. ಆದರೆ ಚಿತ್ರದಲ್ಲಿ ನಾಯಕನ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಮತ್ತು ಸುಷ್ಮಾ ಪಾತ್ರಗಳು ಹಾಗೇ ಇರಲಿವೆ ಎಂದು ಹೇಳಲಾಗಿದೆ. ಆದರೆ ಸಾವನ್ನಪ್ಪಿದ ನಿದಿಮಾ, ಜೋ ಮತ್ತು ಅದಿತಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗೊತ್ತಾಗಿಲ್ಲ.

    ಲವ್‍ ಮಾಕ್‍ಟೇಲ್ ಚಿತ್ರ ಕನ್ನಡದಲ್ಲಿ ಸೂಪರ್ ಹಿಟ್ ಆದ ಕೂಡಲೇ ತೆಲುಗಿಗೆ ರೀಮೇಕ್ ಆಗುತ್ತಿದೆ. ಈ ಚಿತ್ರವನ್ನು ತೆಲುಗಿನಲ್ಲಿ ಕನ್ನಡ ನಿರ್ದೇಶಕ ಮತ್ತು ನಟ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರಕ್ಕೆ ಹೀಗಾಗಲೇ ‘ಚುಕ್ಕಲ ಪಲ್ಲಕಿಲೋ’ ಎಂಬ ಟೈಟಲ್ ಕೂಡ ಇಡಲಾಗಿದೆ. ಆದರೆ ನಿದಿಮಾ, ಅದಿ ಮತ್ತು ಜೋ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ.

  • 70 ಪೈಸೆ ಕೊಟ್ಟು ಬಂಗಾರದ ಪಂಜರ ಸಿನ್ಮಾ ನೋಡಿದ ಕಥೆ ಬಿಚ್ಚಿಟ್ಟ ಜಗ್ಗೇಶ್

    70 ಪೈಸೆ ಕೊಟ್ಟು ಬಂಗಾರದ ಪಂಜರ ಸಿನ್ಮಾ ನೋಡಿದ ಕಥೆ ಬಿಚ್ಚಿಟ್ಟ ಜಗ್ಗೇಶ್

    ಬೆಂಗಳೂರು: ತಾವು ಚಿಕ್ಕವರಾಗಿದ್ದಾಗ ಕೇವಲ 70 ಪೈಸೆ ಕೊಟ್ಟು ಅಣ್ಣಾವರ ಅಭಿನಯದ ಬಂಗಾರದ ಪಂಜರ ಸಿನಿಮಾ ನೋಡಿದ ಕಥೆಯನ್ನು ನವರಸ ನಾಯಕ ಜಗ್ಗೇಶ್ ಅವರು ನೆನಪಿಸಿಕೊಂಡಿದ್ದಾರೆ.

    ಕೊರೊನಾ ಲಾಕ್‍ಡೌನ್ ನಡುವೆ ಮನೆಯಲ್ಲೇ ಉಳಿದಿರುವ ಜಗ್ಗೇಶ್ ಅವರು, ತಮ್ಮ ಪತ್ನಿ, ಮಕ್ಕಳು, ಮೊಮ್ಮಕ್ಕಳ ಜೊತೆ ಕಾಲಕಳೆಯುತ್ತಿದ್ದಾರೆ. ಜೊತೆಗೆ ಎಂದಿನಂತೆ ಅವರು ತಮ್ಮ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿ ಇದ್ದಾರೆ. ನಿನ್ನೇ ತಾನೇ ನನ್ನ ತಾತನೇ ನನ್ನ ಮೊಮ್ಮಗನಾಗಿ ಹುಟ್ಟಿದ್ದಾನೆ ಎಂದು ಟ್ವೀಟ್ ಮಾಡಿದ್ದರು. ಈಗ ತಮ್ಮ ತಾತ ಜೊತೆ ಸಿನಿಮಾ ನೋಡಿದ ಕಥೆಯೊಂದನ್ನು ಹೇಳಿಕೊಂಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ಬಂಗಾರದ ಪಂಜರ 1974ರಲ್ಲಿ ತೆರೆಕಂಡಾಗ ನನಗೆ 11 ವರ್ಷ ವಯಸ್ಸು. ತಾತ ಮಾಯಸಂದ್ರದಿಂದ ಬಂದು ನನಗೆ ಈ ಚಿತ್ರ ತೋರಿಸಿದ್ದರು. ಗೀತಾಂಜಲಿ ಚಿತ್ರಮಂದಿರ 70ಪೈಸೆ ಕೊಟ್ಟು ಮುಂದಿನ ಬೆಂಚಿನಲ್ಲಿ ಕುಳಿತು ಮೈಮರೆತು ಕೇಕೆಹಾಕಿ ಸಿನಿಮಾ ನೋಡುತ್ತಿದ್ದ ಕಾಲ ಅದು. ಇದೇ ಚಿತ್ರವನ್ನು ನಾನು ನಟನಾದ ಮೇಲೆ 1995ರಲ್ಲಿ ಕಥೆ ಸ್ವಲ್ಪ ಬದಲು ಮಾಡಿ ಪಟ್ಟಣಕ್ಕೆ ಬಂದ ಪುಟ್ಟ ಸಿನಿಮಾ ಮಾಡಿ ನಾನು ಅದರಲ್ಲಿ ನಟಿಸಿದ್ದೆ. ಈ ಸಿನಿಮಾ ಮೆಗಾ ಹಿಟ್ ಆಯಿತು. ಇಂದು ಈ ಚಿತ್ರದಿಂದ ಅಮರ ಹಳೆ ನೆನಪು ಎಂದು ಬರೆದುಕೊಂಡಿದ್ದಾರೆ.

    ಅಮರವಾಗಿ ಉಳಿದ ಅಣ್ಣಾವರ ನಟನೆ
    1974ರಲ್ಲಿ ಬಿಡುಗಡೆಯಾದ ಬಂಗಾರ ಪಂಜರ ಸಿನಿಮಾದಲ್ಲಿ ಹಳ್ಳಿಯ ಕುರಿಕಾಯುವ ಯುವಕನ ಪಾತ್ರದಲ್ಲಿ ವರನಟ ಡಾ. ರಾಜ್‍ಕುಮಾರ್ ಅವರು ಮನೋಜ್ಞವಾಗಿ ನಟಿಸಿದ್ದರು. ಹಳ್ಳಿ ಮುಗ್ದ ಹುಡುಗ ಸಿಟಿಗೆ ಬಂದು ಅಲ್ಲಿಯ ಜೀವನ ಶೈಲಿಗೆ ಹೊಂದಿಕೊಳ್ಳು ಪರಿತಪಿಸುವ ಕಥೆಯೇ ಬಂಗಾರದ ಪಂಜರ. ವಿ ಸೋಮಶೇಖರ್ ನಿರ್ದೇಶದ ಈ ಚಿತ್ರ ಅಂದು ಸೂಪರ್ ಹಿಟ್ ಆಗಿತ್ತು. ರಾಜಣ್ಣನ ನಟನೆ ಅಮರವಾಗಿ ಉಳಿದಿತ್ತು.

    ಈ ಸಿನಿಮಾವನ್ನು ಆಧಾರವಾಗಿ ಇಟ್ಟುಕೊಂಡೇ 1995ರಲ್ಲಿ ಪಟ್ಟಣಕ್ಕೆ ಬಂದ ಪುಟ್ಟ ಎಂಬ ಸಿನಿಮಾವನ್ನು ಮಾಡಲಾಗಿತ್ತು. ಈ ಸಿನಿಮಾದಲ್ಲಿ ಜಗ್ಗೇಶ್ ಅವರು ನಾಯಕ ನಟನಾಗಿ ನಟಿಸಿದ್ದರು. ಈ ಸಿನಿಮಾ ಕೂಡ ಬ್ಲಾಕ್ ಬಾಸ್ಟರ್ ಹಿಟ್ ಆಗಿ ಜಗ್ಗೇಶ್ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಒಬ್ಬ ಹಳ್ಳಿಯ ಯುವಕ ಪಟ್ಟಣಕ್ಕೆ ಬಂದು ಕಷ್ಟಪಡುವ ರೀತಿಯನ್ನು ಈ ಸಿನಿಮಾದಲ್ಲಿ ಎಳೆ ಎಳೆಯಾಗಿ ಕಾಮಿಡಿಯೊಂದಿಗೆ ತೋರಿಸಲಾಗಿತ್ತು.

  • ನನ್ನನ್ನು ಯಾಕೆ ದೂಷಿಸುತ್ತೀರಾ, ಉಳಿದ ಮಕ್ಕಳನ್ನು ಯಾಕೆ ಪ್ರಶ್ನಿಸಲ್ಲ: ರಾನು ಪುತ್ರಿ

    ನನ್ನನ್ನು ಯಾಕೆ ದೂಷಿಸುತ್ತೀರಾ, ಉಳಿದ ಮಕ್ಕಳನ್ನು ಯಾಕೆ ಪ್ರಶ್ನಿಸಲ್ಲ: ರಾನು ಪುತ್ರಿ

    ನವದೆಹಲಿ: ರೈಲ್ವೆ ನಿಲ್ದಾಣದಿಂದ ಬಾಲಿವುಡ್ ಅಂಗಳಕ್ಕೆ ಹಾರಿದ ವೈರಲ್ ಸಿಂಗರ್ ರಾನು ಮೊಂಡಲ್ ಈಗ ಸಖತ್ ಫೇಮಸ್. ಇಷ್ಟು ದಿನ ಒಂಟಿಯಾಗಿದ್ದ ರಾನು ಅವರು ವೈರಲ್ ಆಗುತ್ತಿದ್ದಂತೆ ಮಗಳು ಅವರನ್ನು ಭೇಟಿಯಾಗಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ತಾಯಿ ಹೆಸರು ಗಳಿಸಿದ ಬಳಿಕ ಅವರ ಬಳಿಗೆ ಮಗಳು ಬಂದಿದ್ದಾಳೆ ಎಂದವರಿಗೆ ರಾನು ಪುತ್ರಿ ತಿರುಗೇಟು ನೀಡಿದ್ದಾರೆ.

    ಮಾಧ್ಯಮವೊಂದು ರಾನು ಪುತ್ರಿ ಎಲಿಜಬೆತ್ ಸಾಥಿ ರಾಯ್ ಅವರ ಸಂದರ್ಶನ ಮಾಡಿದಾಗ ತಾಯಿ ಬಗ್ಗೆ ಮಾತನಾಡಿ, ನನ್ನ ತಾಯಿ ರೈಲ್ವೇ ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ವಿಚಾರ ನನಗೆ ತಿಳಿದಿರಲಿಲ್ಲ. ಈ ಹಿಂದೆ ಸಾಕಷ್ಟು ಬಾರಿ ನಾನು ಆಕೆಯನ್ನು ಭೇಟಿ ಮಾಡಲು ಪ್ರಯತ್ನಿಸಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ನನ್ನ ಪತಿ ನನ್ನ ಜೊತೆ ಇಲ್ಲ. ನಾನು ಚಿಕ್ಕ ಅಂಗಡಿ ಇಟ್ಟುಕೊಂಡು ಮಗುವೊಂದಿಗೆ ಜೀವನ ನಡೆಸುತ್ತಿದ್ದೇನೆ. ನನ್ನ ಬದುಕು ಸಾಗಿಸುವುದೆ ಕಷ್ಟವಿದೆ. ಆದರಲ್ಲೂ ನಾನು ನನ್ನ ತಾಯಿಯನ್ನು ಆಗಾಗ ನೋಡಲು ಬರುತ್ತಿದ್ದೆ. ಸಾಕಷ್ಟು ಬಾರಿ ನನ್ನ ಜೊತೆಯೇ ಇರು ಎಂದು ಅಮ್ಮನಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಿರಲಿಲ್ಲ. ಆಗಾಗ ನಾನು ತಾಯಿಗೆ ಹಣವನ್ನು ಹಾಗೂ ತಿನ್ನಲು ಆಹಾರವನ್ನು ಕೊಂಡೊಯ್ಯುತ್ತಿದ್ದೆ ಎಂದರು. ಇದನ್ನು ಓದಿ:ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ- ಕುಟುಂಬದ ಕಹಾನಿ ಬಿಚ್ಚಿಟ್ಟ ರಾನು

    ನನ್ನ ತಾಯಿ ಎರಡು ಮದುವೆಯಾಗಿದ್ದಾರೆ. ನಾನು ಅವರ ಮೊದಲ ಪತಿಯ ಮಗಳು, ನನಗೆ ಓರ್ವ ಸಹೋದರ ಕೂಡ ಇದ್ದಾನೆ. ಅವರ ಎರಡನೇ ಗಂಡನಿಗೆ ಎರಡು ಮಕ್ಕಳಿದ್ದಾರೆ. ಒಟ್ಟು 4 ಮಕ್ಕಳಿದ್ದೇವೆ. ಆದರೆ ಎಲ್ಲರೂ ಕೂಡ ನನ್ನನ್ನು ಮಾತ್ರ ದೂಷಿಸುತ್ತಿದ್ದಾರೆ. ಉಳಿದ ಮಕ್ಕಳನ್ನು ಯಾಕೆ ಯಾರು ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಕೆಲವು ವರ್ಷಗಳ ಹಿಂದೆಯಷ್ಟೆ ನನ್ನ ತಂದೆ ತೀರಿಹೋದರು. ಆದರೆ ಅಮ್ಮನ ಎರಡನೇ ಪತಿ ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಎರಡನೇ ಪತಿಯ ಮಕ್ಕಳು ಮುಂಬೈನಲ್ಲಿ ವಾಸವಿದ್ದಾರೆ. ಅವರು ಯಾಕೆ ಅಮ್ಮನನ್ನು ನೋಡಲು ಬಂದಿಲ್ಲ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ ಎಂದು ಕಿಡಿಕಾರಿದರು. ಇದನ್ನು ಓದಿ:ರಾನು ಕಂಠದಲ್ಲಿ ಮತ್ತೊಂದು ಹೊಸ ಹಾಡು ತಂದ ಹಿಮೇಶ್

    ಅವರು ಬೀದಿಯಲ್ಲಿ ಹಾಡಿ, ಜೀವನ ನಡೆಸುತ್ತಿದ್ದ ಬಗ್ಗೆ ನನಗೆ ತಿಳಿದಿರಲಿಲ್ಲ. ಅವರನ್ನು ರಣಘಾಟ್‍ನ ಅಮ್ರಾ ಶೋಬಾಯಿ ಶೊಯ್ತಾನ್ ಕ್ಲಬ್ ಅವರು ನೋಡಿಕೊಳ್ಳುತ್ತಿದ್ದರು. ನನ್ನ ಸಹೋದರರು ಕೂಡ ಈ ಕ್ಲಬ್ ಸದಸ್ಯರಾಗಿದ್ದರು. ಅವರೇ ಅಮ್ಮನನ್ನು ಕ್ಲಬ್‍ನಲ್ಲಿ ನೋಡಿಕೊಳ್ಳುತ್ತಿದ್ದರು. ಅವರು ನನಗೆ ಅಮ್ಮನನ್ನು ಭೇಟಿಯಾಗಲು ಬಿಡುತ್ತಿರಲಿಲ್ಲ. ಫೋನ್ ಮಾಡಿದ್ದರು ಕೂಡ ಮಾತನಾಡಲು ಕೊಡುತ್ತಿರಲಿಲ್ಲ. ಅಮ್ಮನ ಜೊತೆ ಮಾತನಾಡಲು ಪ್ರಯತ್ನಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದ್ದರು. ಆದ್ದರಿಂದ ನಾನು ಅಮ್ಮನಿಂದ ದೂರವಿದ್ದೆ. ಬಳಿಕ ಅಮ್ಮ ಬಗ್ಗೆ ಏನು ಮಾಹಿತಿ ಇರಲಿಲ್ಲ ಎಂದು ಆರೋಪಿಸಿದರು.

    ಈಗ ಅಮ್ಮನಿಗೆ ಹಣ, ಹೆಸರು ಬರುತ್ತಿರುವುದಕ್ಕೆ ಅವರು ನನ್ನನ್ನು ಮತ್ತೆ ಅಮ್ಮನಿಂದ ದೂರ ಮಾಡುತ್ತಿದ್ದಾರೆ. ಅಮ್ಮನಿಗೆ ನನ್ನ ಬಗ್ಗೆ ತಪ್ಪಾಗಿ ಹೇಳಿ ತಲೆಕೆಡಿಸುತ್ತಿದ್ದಾರೆ. ಇಬ್ಬರು ಸೇರಿ ಇತ್ತೀಚೆಗೆ ತಾಯಿಯ ಬ್ಯಾಂಕ್ ಖಾತೆಯಿಂದ 10 ಸಾವಿರ ತೆಗೆದುಕೊಂಡಿದ್ದಾರೆ. ಮನೆಗೆ ಸಾಮಾಗ್ರಿ ತಂದು ಕೊಡುವುದಾಗಿ ಅಮ್ಮನ ಬಳಿ ಹಣ ಪಡೆದು, ಆಕೆಗೆ 4 ಜೊತೆ ಬಟ್ಟೆ, ಬ್ಯಾಗ್ ತಂದು ಕೊಟ್ಟು, ಉಳಿದ ಹಣವನ್ನು ತಾವೇ ಖಾಲಿ ಮಾಡಿದ್ದಾರೆ. ಎಲ್ಲರು ನನ್ನನ್ನೇ ದೂಷಿಸುತ್ತಿದ್ದಾರೆ. ಆದರು ಕೂಡ ನಾನು ಅಮ್ಮನಿಗೆ ಬೆಂಬಲ ನೀಡುತ್ತೇನೆ. ಅವರ ಮಧುರ ಧ್ವನಿಯ ಮೂಲಕ ಅವಕಾಶವನ್ನು ಅವರೇ ಗಿಟ್ಟಿಸಿಕೊಂಡಿದ್ದಾರೆ. ಅವರ ಮಗಳೆಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತೆ ಎಂದರು.

    ಈಗಲೂ ನಾನು ನಮ್ಮ ಮನೆಗೆ ಬಾ, ನನ್ನ ಜೊತೆ ಇರು ಎಂದು ಅಮ್ಮನಿಗೆ ಹೇಳುತ್ತಿದ್ದೇನೆ ಆದರೆ ಅವರು ನನ್ನ ಮಾತನ್ನು ಕೇಳುತ್ತಿಲ್ಲ. ಅವರನ್ನು ನಾನು ಒತ್ತಾಯ ಮಾಡಲ್ಲ. ಅವರಿಗೆ ಇಷ್ಟವಿದ್ದರೆ ನನ್ನ ಜೊತೆಯಲ್ಲಿ ಇರಲಿ ನಾನು ನೋಡಿಕೊಳ್ಳುತ್ತೇನೆ ಎಂದು ಎಲಿಜಬೆತ್ ತಿಳಿಸಿದರು.

  • ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಬೆಂಗಳೂರು: ಚಿರಂಜೀವಿ ಸರ್ಜಾ `ಸಿಂಗ’ ಚಿತ್ರ ಇದೇ ತಿಂಗಳ ಹತ್ತೊಂಬತ್ತರಂದು ಬಿಡುಗಡೆಗೆ ರೆಡಿಯಾಗಿದೆ. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಎಲ್ಲದರಲ್ಲಿಯೂ ಹೊಸ ಕಳೆ ತುಂಬಿಕೊಂಡಿರೋ ಈ ಚಿತ್ರಕ್ಕೆ ಪಾಸಿಟಿವ್ ಟಾಕ್‍ನ ಒಡ್ಡೋಲಗ ಭರ್ಜರಿ ಸಾಥ್ ನೀಡುತ್ತಿದೆ. ಟ್ರೈಲರ್ ಮುಂತಾದ ಬಿಡುಗಡೆ ಪೂರ್ವ ಚಟುವಟಿಕೆಗಳ ಮೂಲಕ ಚರ್ಚೆಗೆ ಕಾರಣವಾಗೋ ಚಿತ್ರಗಳು ಗೆಲುವು ಕಂಡ ಅದೆಷ್ಟೋ ಉದಾಹರಣೆಗಳಿವೆ. ಈ ಫಾರ್ಮುಲಾ ಆಧರಿಸಿ ಹೇಳೋದಾದರೆ ಸಿಂಗ ಚಿತ್ರದ ಗೆಲುವು ನಿಚ್ಚಳವಾದಂತಿದೆ!

    ಅದೇನೇ ಹೈಪು ಸೃಷ್ಟಿಯಾದರೂ ಚಿತ್ರವೊಂದು ಗೆಲ್ಲೋದರಲ್ಲಿ ಗಟ್ಟಿ ಕಥೆಯದ್ದು ಸಿಂಹಪಾಲು. ಸಿಂಗ ಚಿತ್ರದ ಕಥೆಯೂ ಅಷ್ಟೇ ಅದ್ಭುತವಾಗಿದೆಯಂತೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ವಿಶಿಷ್ಟವಾದ ಟೇಸ್ಟ್ ಹೊಂದಿರುವವರು ಚಿರಂಜೀವಿ ಸರ್ಜಾ. ಅವರೇ ಈ ಕಥೆ ಕೇಳಿ ಆರಂಭದಲ್ಲಿಯೇ ಥ್ರಿಲ್ ಆಗಿದ್ದರಂತೆ. ಮಾಸ್ ಸೇರಿದಂತೆ ಎಲ್ಲ ಅಂಶಗಳಿಂದ ಮೈ ಕೈ ತುಂಬಿಕೊಂಡಿರೋ ಈ ಕಥೆಯ ಸೊಗಸು ಕಂಡೇ ವಿಶೇಷ ಆಸಕ್ತಿ ವಹಿಸಿ ಚಿರು ಈ ಚಿತ್ರವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಸಿಂಗ ತಮ್ಮ ವೃತ್ತಿ ಬದುಕಿಗೆ ಹೊಸ ದಿಕ್ಕಾಗಲಿದೆ ಎಂಬ ಗಾಢ ವಿಶ್ವಾಸವೂ ಅವರಲ್ಲಿದೆ.

    ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಸಿನಿಮಾದ ಶ್ಯಾನೆ ಟಾಪಗೌಳೆ ಎಂಬ ಹಾಡೊಂದು ಭಾರೀ ಫೇಮಸ್ ಆಗಿ ಟ್ರೆಂಡ್ ಸೆಟ್ ಮಾಡಿದೆ. ಈ ಹಾಡಿನ ಅದ್ಧೂರಿತನ ಇಡೀ ಚಿತ್ರದಲ್ಲಿಯೂ ತುಂಬಿಕೊಂಡಿದೆಯಂತೆ. ನಿರ್ದೇಶಕರಾದ ವಿಜಯ್ ಕಿರಣ್ ಅಷ್ಟೊಂದು ಕಾಳಜಿಯಿಂದ, ಎಲ್ಲ ಪ್ರೇಕ್ಷಕ ವರ್ಗವನ್ನೂ ಸಂತುಷ್ಟಗೊಳಿಸುವ ಇರಾದೆಯಿಂದಲೇ ಸಿಂಗನನ್ನು ಶೃಂಗರಿಸಿದ್ದಾರೆ. ಯಶಸ್ವಿ ನಿರ್ಮಾಪಕ ಉದಯ್ ಕೆ ಮೆಹ್ತಾ ಅಂಥಾದ್ದೇ ಕಾಳಜಿಯಿಂದ ಪ್ರತಿ ಹೆಜ್ಜೆಯಲ್ಲಿಯೂ ಸಿಂಗನನ್ನು ಪೊರೆದಿದ್ದಾರೆ. ಇಂಥಾ ಪ್ರೀತಿಯಿಂದಲೇ ಪೊಗದಸ್ತಾಗಿ ಮೂಡಿ ಬಂದಿರೋ ಈ ಚಿತ್ರ ಇದೇ ಹತ್ತೊಂಬತ್ತರಂದು ನಿಮ್ಮ ಮುಂದೆ ಬರಲಿದೆ.

  • ಪತಿಬೇಕು ಡಾಟ್ ಕಾಮ್ ಚಿತ್ರದ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ಪತಿಬೇಕು ಡಾಟ್ ಕಾಮ್ ಚಿತ್ರದ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ನೇರ ನುಡಿಯಾದ್ರು ಹಸನ್ಮುಖಿಯಾಗಿ ಕಾಣಿಕೊಳ್ಳುವ ನಟಿ ಶೀತಲ್ ಶೆಟ್ಟಿ ಆ್ಯಕರಿಂಗ್‍ಗೆ ಗುಡ್ ಬೈ ಹೇಳಿದ ಬಳಿಕ ಮತ್ತೊಮ್ಮೆ ತಮ್ಮದೇ ನಟನೆಯ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಕರನ್ನು ಸಂದರ್ಶನ ಮಾಡಿದ್ದಾರೆ. ಪಬ್ಲಿಕ್ ಟಿವಿಯ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಕೇಶ್ ಅವರನ್ನು ಶೀತಲ್ ಮಾತನಾಡಿಸಿ ಚಿತ್ರದ ಇಂಟ್ರೆಸ್ಟಿಂಗ್ ಕಥೆಯನ್ನು ರಿವಿಲ್ ಮಾಡಿಸಿದ್ದಾರೆ.

    ವಿಭಿನ್ನ ಟೈಟಲ್ ಮೂಲಕವೇ ಗಮನ ಸೆಳೆದಿರುವ ಪತಿಬೇಕು ಡಾಟ್‍ಕಮ್ ಸಿನಿಮಾ ನಿರ್ದೇಶಕನಾಗಿರುವುದು ನನಗೆ ಹೆಮ್ಮೆಯ ಅಂಶವಾಗಿದ್ದು, ಕುಟುಂಬ ಪ್ರಧಾನ ಸಿನಿಮಾ ಮಾಡಿದ ಗೌರವ ಈ ಸಿನಿಮಾ ನೀಡುವ ವಿಶ್ವಾಸವಿದೆ. ಏಕೆಂದರೆ ಈ ಹಿಂದಿನ ಸಿನಿಮಾ ನನ್ನ ತಾಯಿ, ಕುಟುಂಬದೊಂದಿಗೆ ನೋಡಲು ಸಾಧ್ಯವಾಗಿರಲಿಲ್ಲ. ಅದ್ದರಿಂದ ಕುಟುಂಬದ ಎಲ್ಲರೊಟ್ಟಿಗೆ ಕುಳಿತು ನೋಡುವಂತಹ ಯೋಚನೆಯಿಂದ ಸಿನಿಮಾ ಕಥೆ ಮೂಡಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು ನಿರ್ದೇಶಕ ರಾಕೇಶ್.

    ಪತಿಬೇಕು ಡಾಟ್ ಕಮ್ ಕಥೆಯೇ ಸಿನಿಮಾಗೆ ಜೀವ:
    ಸಿನಿಮಾ ಪ್ರಮುಖ ಪಾತ್ರದ ಕುರಿತು ಯಾರ ಆಯ್ಕೆ ಎಂಬ ಯೋಚನೆ ಬಂದ ಕೂಡಲೇ ನನಗೆ ಮೊದಲು ನೆನಪು ಬಂದಿದ್ದು ಶೀತಲ್ ಅವ್ರು, ಏಕೆಂದರೆ ಕರ್ನಾಟಕದ ಮನೆ ಹುಡುಗಿಯಾಗಿ ಶೀತಲ್ ಹೆಸರು ಪಡೆದಿದ್ದಾರೆ. ಕಥೆಗೂ ಅವರ ಆಯ್ಕೆ ಸೂಕ್ತ ಎನಿಸಿದ್ದರಿಂದ ಸಿನಿಮಾ ಜರ್ನಿ ಆರಂಭವಾಯ್ತು. ಚಿತ್ರಕಥೆಯೇ ಸಿನಿಮಾದ ಹೀರೋ ಆಗಿದ್ದು, ಎಲ್ಲ ಪಾತ್ರಗಳು ಉತ್ತಮವಾಗಿ ಮೂಡಿಬಂದಿದೆ. ಸದ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನಿರ್ದೇಶಕನಾಗಿ ಕಥೆಯ ಮೇಲಿನ ಭರವಸೆಯೇ ಇಷ್ಟು ಬೇಗ ಚಿತ್ರ ಮೂಡಿಬರಲು ಕಾರಣ. ಸಿನಿಮಾ ಅಭಿಮಾನಿಗಳು ಚಿತ್ರ ನೋಡಿ ಹೊಸ ಪ್ರಯತ್ನಕ್ಕೆ ಬೆಂಬಲ ನೀಡುವ ನಂಬಿಕೆ ಎಂದು ಅನುಭವ ಹಂಚಿಕೊಂಡರು.

    ಚಿತ್ರದ ಟೀಸರ್, ಹಾಡು ಈಗಾಗಲೇ ಜನರಿಗೆ ಇಷ್ಟವಾಗಿದ್ದು, ಎಲ್ಲೆಡೆ ಕೇಳಿ ಬರುತ್ತದೆ. ಚಿತ್ರದ ಕ್ಯಾಮೆರಾಮನ್ ಯೋಗಿ ಪ್ರತಿಯೊಂದು ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡಿದ್ದು, ವಿಜಯ್ ಎಂ ಕುಮಾರ್ ಸಂಕಲನವಿದೆ. ಚಿತ್ರ ಪ್ರಮುಖ ಪಾತ್ರದಲ್ಲಿರುವ ಕೃಷ್ಣ ಅಡಿಗ, ಅರುಣ್ ಗೌಡ ಅನುಭವಿ ತಂಡವಿದೆ. ಅಲ್ಲದೇ ಸೆನ್ಸರ್ ಬೋರ್ಡ್‍ನಲ್ಲಿ ಸಿನಿಮಾದ ಒಂದು ದೃಶ್ಯಕ್ಕೂ ಕತ್ತರಿ ಪ್ರಯೋಗ ಮಾಡದೆ, ಒಂದು ಮ್ಯೂಟ್ ಮಾಡದೇ ಪ್ರಮಾಣ ಪತ್ರ ನೀಡಿ ಹೆಗ್ಗಳಿಕೆಯೂ ಚಿತ್ರತಂಡಕ್ಕಿದೆ.

    ನಮ್ಮ ಹೊಸ ಪ್ರಯತ್ನದ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರು ಹಾಡು, ಟೀಸರ್ ಬಿಡುಗಡೆ ಮಾಡಿ ಬೆಂಬಲ ನೀಡಿದ್ದಾರೆ. ಇಂತಹ ಸ್ಟಾರ್‍ಗಳು ಚಿತ್ರದ ಬಗ್ಗೆ ವಿಶ್ವಾಸ ಮಾತು ಆಡಿದ್ದು ಹೆಚ್ಚಿನ ಸ್ಫೂರ್ತಿ ನೀಡಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತರ ದಿನವಾದ ಇಂದು ಪಬ್ಲಿಕ್ ಟಿವಿ ಓದುಗರಿಗೆ ಪುಟಾಣಿ ಕಥೆ

    ಸ್ನೇಹಿತರ ದಿನವಾದ ಇಂದು ಪಬ್ಲಿಕ್ ಟಿವಿ ಓದುಗರಿಗೆ ಪುಟಾಣಿ ಕಥೆ

    ಗಸ್ಟ್ 05 ಬಂದರೆ ಸಾಕು ಸ್ನೇಹ ಬಳಗದಲ್ಲೊಂದು ಸಂಭ್ರಮದ ವಾತಾವರಣ. ಎಲ್ಲ ಸ್ನೇಹಿತರು ಪರಸ್ಪರ ಒಬ್ಬರಿಗೊಬ್ಬರು ಸ್ನೇಹಿತರ ದಿನದ ಶುಭಕೋರುತ್ತಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ಗೆಳೆಯ/ಗೆಳತಿಯರಿಗೆ ಉಡುಗೊರೆಯನ್ನು ನೀಡುತ್ತಾರೆ. ಇಂದು ಸ್ನೇಹಿತರಿಗಾಗಿ ಸ್ನೇಹತನ ಹೇಳುವ ಕಥೆ ನಿಮಗಾಗಿ ಇಲ್ಲಿದೆ

    ಕೆಲವು ವರ್ಷಗಳ ಹಿಂದೆ ಅಂಕಿತ್ ಮತ್ತು ಸೂರಜ್ ಎಂಬ ಗೆಳೆಯರಿದ್ದರು. ಬಾಲ್ಯದಿಂದ ಒಟ್ಟಾಗಿಯೇ ಶಿಕ್ಷಣ ಮುಗಿಸಿದ ಗೆಳೆಯರಿಗೆ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವೂ ಸಿಗುತ್ತದೆ. ಆದ್ರೆ ಇಲ್ಲಿ ಇಬ್ಬರು ಉದ್ಯೋಗಕ್ಕಾಗಿ ಬೇರೆ ಬೇರೆ ದೇಶಕ್ಕೆ ಹೋಗುತ್ತಾರೆ. ಇಬ್ಬರು ಗೆಳೆಯರು ಹೋಗುವ ಮುನ್ನ ಮುಂದಿನ 10 ವರ್ಷಗಳ ನಂತರ ನಾವಿಬ್ಬರು ಇದೇ ಸ್ಥಳ, ಇದೇ ಸಮಯಕ್ಕೆ ಭೇಟಿ ಆಗೋಣ. ಅಂದು ಯಾರು ಎಷ್ಟು ಯಶಸ್ಸು ಹೊಂದಿರುತ್ತಾರೆ ಎಂಬುದನ್ನು ಲೆಕ್ಕ ಹಾಕೋಣ ಎಂದು ಹೇಳಿ ಹೊರಡುತ್ತಾರೆ.

    10 ವರ್ಷಗಳ ಬಳಿಕ ಇಬ್ಬರು ಭೇಟಿಯಾಗುವ ಸಮಯ ಬರುತ್ತದೆ. ತಮ್ಮ ಯೋಚನೆಯಂತೆಯೇ ಇಬ್ಬರೂ 10 ವರ್ಷಗಳ ಹಿಂದೆ ತೀರ್ಮಾನಿಸಿದ ರೀತಿಯಲ್ಲಿ ಅದೇ ಸ್ಥಳ ಮತ್ತು ಸಮಯಕ್ಕೆ ಭೇಟಿಯಾಗಲು ಬರುತ್ತಾರೆ. ಮೊದಲಿಗೆ ಬಂದ ಅಂಕಿತ್, ಹೋಟೆಲೊಂದರ ಬಾಗಿಲ ಬಳಿಯೇ ಗೆಳೆಯ ಸೂರಜ್ ಗಾಗಿ ಕಾಯುತ್ತಿರುತ್ತಾನೆ. ಅಂಕಿತ್ ಒಳ್ಳೆಯ ಬಟ್ಟೆ ತೊಟ್ಟು ಗೆಳೆಯನ ನಿರೀಕ್ಷೆಯಲ್ಲಿ ಇರುತ್ತಾನೆ. ಅದೇ ವೇಳೆ ಹೋಟೆಲ್‍ಗೆ ಬಂದ ಪೊಲೀಸ್ ಅಧಿಕಾರಿಯೊಬ್ಬ ಅಂಕಿತ್‍ನನ್ನು ಪ್ರಶ್ನಿಸುತ್ತಾರೆ.

    ಪೊಲೀಸ್ ಅಧಿಕಾರಿ: ಯಾರು ನೀವು? ರಾತ್ರಿ 10ಗಂಟೆಗೆ ಏನು ಮಾಡುತ್ತಿದ್ರಿ?
    ಅಂಕಿತ್: ನಾನೊಬ್ಬ ವ್ಯಾಪಾರಸ್ಥ, ನನ್ನ ಗೆಳೆಯನಿಗಾಗಿ ಕಾಯುತ್ತಿದ್ದೇನೆ.
    ಪೊಲೀಸ್ ಅಧಿಕಾರಿ: ಈ ವೇಳೆ ಇಲ್ಲಿ ನೀವು ನಿಲ್ಲೋದು ಸೂಕ್ತವಲ್ಲ ಬೇಗ ಹೊರಡಿ (ಪೊಲೀಸ್ ಅಧಿಕಾರಿ ಹಿಂದಿರುಗುತ್ತಾರೆ)

    (ಕೆಲ ಸಮಯದ ನಂತರ) ದೂರದಲ್ಲಿ ಓರ್ವ ವ್ಯಕ್ತಿ ಬರೋದನ್ನು ಅಂಕಿತ್ ಕಾಣುತ್ತಾನೆ. ಆತ ಹತ್ತಿರ ಬರುತ್ತಲೇ ನೀನು ಸೂರಜ್ ಅಲ್ವ ಎಂದು ಅನುಮಾನದ ರೀತಿಯಲ್ಲಿ ಕೇಳುತ್ತಾನೆ. ಆ ವ್ಯಕ್ತಿ ಹೌದು ಎಂದು ತಲೆ ಅಲ್ಲಾಡಿಸುತ್ತಾನೆ. ಇಬ್ಬರು ಹಲವು ಮಾತುಗಳನ್ನಾಡುತ್ತಾರೆ. ಒಳ್ಳೆಯ ಊಟವನ್ನು ಮಾಡುತ್ತಾರೆ.

    ಅಂಕಿತ್: ಸೂರಜ್, ಜೀವನಕ್ಕೆ ಏನು ಮಾಡಿಕೊಂಡಿದ್ದೀಯಾ?
    ವ್ಯಕ್ತಿ: ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದೇನೆ. ನೀನು ಏನ್ ಮಾಡುತ್ತೀದ್ದಿಯಾ?
    ಅಂಕಿತ್: ಬಂಗಾರ ವ್ಯಾಪಾರಿ (ಈ ಮಧ್ಯೆ ಅಂಕಿತ್‍ಗೆ ಇವನು ನನ್ನ ಗೆಳೆಯನಲ್ಲ ಎಂಬ ಅನುಮಾನ ಮೂಡುತ್ತದೆ)
    ಅಂಕಿತ್: (ಸಿಟ್ಟಿನಿಂದ) ಯಾರು ನೀನು? ನೀವು ನನ್ನ ಗೆಳೆಯ ಸೂರಜ್ ಅಲ್ಲ ಎಂದು ಕಿರುಚುತ್ತಾನೆ.

    ಆ ವ್ಯಕ್ತಿ ಅಂಕಿತ್ ಕೈಗೆ ಪತ್ರವೊಂದನ್ನು ನೀಡುತ್ತಾರೆ. ಈ ಮೊದಲು ಮಾತನಾಡಿಸಿದ್ದ ಪೊಲೀಸ್ ಅಧಿಕಾರಿಯೇ ಸೂರಜ್ ಎಂದು ಆ ವ್ಯಕ್ತಿ ಎಂದು ಹೇಳುತ್ತಾರೆ. ಇಂದು ಸೂರಜ್, ಕಳ್ಳ ಸಾಗಾಟಗಾರನನ್ನು ಹಿಡಿಯಲು ಹೋಟೆಲ್‍ಗೆ ಬಂದಿದ್ದರು. ಆದ್ರೆ ಆ ಸ್ಮಗಲರ್ ತನ್ನ ಆಪ್ತ ಗೆಳೆಯ ಅಂಕಿತ್ ಎಂದು ತಿಳಿದ ಕೂಡಲೇ ಕೇವಲ ಮಾತನಾಡಿಸಿ ನನ್ನ ಬಳಿ ಬಂದರು. ಅಲ್ಲದೇ ನನ್ನ ಗೆಳೆಯನನ್ನು ಬಂಧಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಇದೇ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ರು. ಹಾಗಾಗಿ ನಿಮ್ಮನ್ನು ಬಂಧಿಸಲು ನಾನು ಬಂದಿದ್ದೇನೆ ಎಂದು ಅಲ್ಲಿದ್ದ ಪೊಲೀಸ್ ಅಧಿಕಾರಿ ಹೇಳುತ್ತಾರೆ.

    ತನಗಾಗಿ ಸಾವನ್ನಪ್ಪಿದ ಗೆಳೆಯನಿಗಾಗಿ ಅಂಕಿತ್ ತನ್ನ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು ಪೊಲೀಸರಿಗೆ ಶರಣಾಗುತ್ತಾನೆ.