Tag: ಕಥಾ ಸಂಗಮ

  • ಕಥಾಸಂಗಮ: ಟ್ರೇಲರ್ ಪ್ರಭೆಯಲ್ಲಿ ಮಹಾ ಗೆಲುವಿನ ಮುನ್ಸೂಚನೆ!

    ಕಥಾಸಂಗಮ: ಟ್ರೇಲರ್ ಪ್ರಭೆಯಲ್ಲಿ ಮಹಾ ಗೆಲುವಿನ ಮುನ್ಸೂಚನೆ!

    ನ್ನಡದ ಪ್ರೇಕ್ಷಕರು ವೈವಿಧ್ಯತೆ ಬಯಸುವ ಮನಸ್ಥಿತಿ ಹೊಂದಿರುವವರು. ಈ ಕಾರಣದಿಂದಲೇ ಇಲ್ಲಿ ಹೊಸ ಆಲೋಚನೆ, ಪ್ರಯೋಗಗಳ ಚಿತ್ರಗಳು ಸೋಲುವುದಿಲ್ಲ. ಅದೆಂಥಾ ಸವಾಲುಗಳೆದುರಾದ ಘಳಿಗೆಯಲ್ಲಿಯೂ ಪ್ರೇಕ್ಷಕರು ಅಂಥಾ ಸಿನಿಮಾಗಳನ್ನು ಕೈ ಬಿಡುವುದಿಲ್ಲ. ಬಹುಶಃ ಪ್ರೇಕ್ಷಕರ್ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಮೂಡಿ ಬಂದು ತೆರೆಗಾಣಲು ಸಜ್ಜುಗೊಂಡಿರೋ ಕಥಾ ಸಂಗಮ ಚಿತ್ರ ರೂಪುಗೊಂಡಿದ್ದರ ಹಿಂದೆಯೂ ಪ್ರೇಕ್ಷಕರ ಔದಾರ್ಯವಿದೆ. ಇಂಥಾ ಸೂಕ್ಷ್ಮಗಳನ್ನು ಖಚಿತವಾಗಿಯೇ ಅರ್ಥ ಮಾಡಿಕೊಂಡಿರುವ ರಿಷಬ್ ಶೆಟ್ಟಿ ವರ್ಷಗಳ ಹಿಂದೆಯೇ ಕಥಾ ಸಂಗಮವೆಂಬ ಕನಸಿಗೆ ಕಾವು ಕೊಟ್ಟಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾ ಟ್ರೇಲರ್‍ಗೆ ಸಿಕ್ಕಿರೋ ಅಭೂತಪೂರ್ವ ಬೆಂಬಲವೇ ಮಹಾ ಗೆಲುವೊಂದರ ಮುನ್ಸೂಚನೆಯಂತೆ ಕಾಣಿಸುತ್ತಿದೆ. ಇದರ ಬೆನ್ನಲ್ಲಿಯೇ ಹೊರ ಬಿದ್ದಿರುವ ಪೂರಕ ಮಾಹಿತಿಗಳು ಕಥಾ ಸಂಗಮದತ್ತ ಮತ್ತಷ್ಟು ಪ್ರೇಕ್ಷಕರು ಆಕರ್ಷಿತರಾಗುವಂತಿವೆ.

    ಈ ಟ್ರೇಲರ್‌ನಲ್ಲಿ ಏಳೂ ಕಥೆಗಳ ಝಲಕ್ಕುಗಳನ್ನು ಜಾಹೀರು ಮಾಡುತ್ತಲೇ ಪಾತ್ರಗಳ ಪರಿಚಯವನ್ನೂ ಮಾಡಿಸಲಾಗಿದೆ. ಅದರಲ್ಲಿ ಎಂಥವರೂ ಆಹ್ಲಾದಗೊಳ್ಳುವಂಥಾ ತಾಜಾ ತಾಜ ಸನ್ನಿವೇಶಗಳು, ನಿಗೂಢ ಕಥೆಗಳ ಮುನ್ಸೂಚನೆಗಳೆಲ್ಲ ಗೋಚರಿಸುತ್ತಾ ಲಕ್ಷ ಲಕ್ಷ ವೀಕ್ಷಣೆಯೊಂದಿಗೆ ಟ್ರೆಂಡಿಂಗ್‍ನಲ್ಲಿದೆ. ಶ್ರೀದೇವಿ ಎಂಟರ್‍ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಅಪರೂಪದ ಕಥೆಗಳ ಮಹಾ ಸಂಗಮವಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಪ್ರತೀ ಪ್ರೇಕ್ಷಕರಿಗೂ ಮನವರಿಕೆ ಮಾಡಿ ಕೊಡುವಲ್ಲಿ ಈ ಟ್ರೇಲರ್ ಗೆದ್ದಿದ್ದಾರೆ. ಈ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ.

    ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಂದು ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರೂಪಿಸೋದೇ ಕಷ್ಟದ ಸಂಗತಿ. ಅಂಥಾದ್ದರಲ್ಲಿ ಏಳು ಕಥೆಗಳ ಸೂತ್ರ ಹಿಡಿದು ಎಲ್ಲಿಯೂ ಗೊಂದಲ ಉಂಟಾಗದಂತೆ ರೂಪಿಸೋದೊಂದು ಸಾಹಸ. ನಿರ್ದೇಶಕ ರಿಷಬ್ ಶೆಟ್ಟಿ ಏಳು ಮಂದಿ ಪ್ರತಿಭಾನ್ವಿತ ಯುವ ನಿರ್ದೇಶಕರ ಬೆಂಬಲದೊಂದಿಗೆ ಅದನ್ನು ಸಾಧ್ಯವಾಗಿಸಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿಯೇ ದಾಖಲೆ ಸೃಷ್ಟಿಸುವಂತಿದೆ ಎಂಬ ನಂಬಿಕೆಯಂತೂ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿದೆ. ರಿಷಬ್ ಶೆಟ್ಟಿ ಯಾವ ಚಿತ್ರ ಮಾಡಿದರೂ ಅಲ್ಲೊಂದು ಹೊಸತನ ಇರುತ್ತದೆ. ಆದರೆ ಈ ಬಾರಿ ಹೊಸತನವೇ ಕಥಾ ಸಂಗಮವಾಗಿ ಮೈದಾಳಿದೆ. ಚೆಂದದ ಏಳು ಕಥೆ, ಚಿತ್ರವಿಚಿತ್ರವಾದ ಪಾತ್ರಗಳನ್ನು ಒಡಲಲ್ಲಿಟ್ಟುಕೊಂಡಿರೋ ಈ ಚಿತ್ರ ವಾರದೊಪ್ಪತ್ತಿನಲ್ಲಿಯೇ ತೆರೆಗಾಣಲಿದೆ.

  • ರಿಷಬ್ ಶೆಟ್ಟರ ಕಥಾ ಸಂಗಮ ಸಾಧ್ಯವಾದ ಅಚ್ಚರಿ!

    ರಿಷಬ್ ಶೆಟ್ಟರ ಕಥಾ ಸಂಗಮ ಸಾಧ್ಯವಾದ ಅಚ್ಚರಿ!

    ಶ್ರೀದೇವಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಚಿತ್ರ ಡಿಸೆಂಬರ್ 6ನೇ ತಾರೀಕಿನಂದು ತೆರೆ ಕಾಣಲಿದೆ. ಒಂದು ಕಥೆಯ ಸೂತ್ರ ಹಿಡಿದು ಒಂದು ಸಿನಿಮಾವನ್ನು ಸಮರ್ಥವಾಗಿ ನಿರ್ದೇಶನ ಮಾಡೋವಷ್ಟರಲ್ಲಿ ಹೈರಾಣಾಗಬೇಕಾಗುತ್ತದೆ. ಅಂಥದ್ದರಲ್ಲಿ ಏಳು ಕಥೆ, ಏಳು ಮಂದಿ ನಿರ್ದೇಶಕರು, ಏಳು ಜನ ಛಾಯಾಗ್ರಾಹಕರು ಮತ್ತು ಅಷ್ಟೇ ಸಂಖ್ಯೆಯ ಸಂಗೀತ ನಿರ್ದೇಶಕರ ದೊಡ್ಡ ತಂಡವನ್ನು ಸಂಭಾಳಿಸುತ್ತಾ ಚೆಂದದ ಚಿತ್ರ ಕಟ್ಟಿ ಕೊಡೋದು ಕಷ್ಟದ ಕೆಲಸ. ಆದರೆ ಅದನ್ನು ರಿಷಬ್ ಶೆಟ್ಟಿ ಮತ್ತವರ ತಂಡ ಇಷ್ಟಪಟ್ಟು ಮಾಡಿದೆ. ಆದ್ದರಿಂದಲೇ ಬಿಡುಗಡೆಯ ಕಡೆಯ ಕ್ಷಣಗಳೆಲ್ಲ ಗೆಲುವಿನ ಸೂಚನೆಗಳಿಂದಲೇ ಕಳೆಗಟ್ಟಿಕೊಂಡಿವೆ.

    ಇಂಥಾ ಮಹಾ ಕನಸುಗಳು ಹುಟ್ಟು ಪಡೆಯುವ ರೀತಿಯೂ ಒಂದು ಸಿನಿಮಾದಷ್ಟೇ ಸುಂದರವಾಗಿರುತ್ತವೆ. ಕಥಾ ಸಂಗಮವೆಂಬ ಕನಸು ಊಟೆಯೊಡೆದ ಕ್ಷಣಗಳ ಬಗ್ಗೆ ರಿಷಬ್ ಶೆಟ್ಟಿ ಕೂಡಾ ಒಂದಷ್ಟು ವಿಚಾರಗಳನ್ನು ನೆನಪಿಸಿಕೊಳ್ಳುತ್ತಾರೆ. ಸದಾ ಏನಾದರೊಂದು ಹೊಸತು ಸೃಷ್ಟಿಸಬೇಕೆಂಬ ಹಂಬಲ ಹೊಂದಿರೋ ರಿಷಬ್ ಶೆಟ್ಟರ ಪಾಲಿಗೆ ಪುಟ್ಟಣ್ಣ ಕಣಗಾಲ್ ರೋಲ್ ಮಾಡೆಲ್. ತಂತ್ರಜ್ಞಾನವೂ ಸೇರಿದಂತೆ ಏನೆಂದರೆ ಏನೂ ಇಲ್ಲದಿದ್ದ ಕಾಲದಲ್ಲಿಯೇ ಕಣಗಾಲರು ಸೃಷ್ಟಿಸಿದ್ದ ಅಚ್ಚರಿಗಳೇನು ಕಡಿಮೆಯವುಗಳಾ? ಅಂಥಾದ್ದೇ ಹೊಸ ಸೃಷ್ಟಿಯನ್ನು ಮಾಡಬೇಕೆಂಬ ಹಂಬಲದಲ್ಲಿಯೇ ರಿಷಬ್‍ರೊಳಗೆ ಮತ್ತೊಂದು ಕಥಾ ಸಂಗಮದ ಕನಸು ಊಟೆಯೊಡೆದಿತ್ತಂತೆ.

    ವರ್ಷಾಂತರಗಳ ಹಿಂದೆ ರಂಗಿತರಂಗದಂಥಾ ಚಿತ್ರ ಕೊಟ್ಟಿದ್ದ ನಿರ್ಮಾಪಕ ಹೆಚ್.ಕೆ ಪ್ರಕಾಶ್‍ರೊಂದಿಗೆ ರಿಷಬ್ ಶೆಟ್ಟರ ಅಚಾನಕ್ ಭೇಟಿ ಸಂಭವಿಸಿತ್ತು. ಇಂಥಾ ಭೇಟಿಗಳೆಲ್ಲ ರಿಷಬ್ ಪಾಲಿಗೆ ಸಿನಿಮಾ ಕನಸಿಗೆ ಕಾವು ಕೊಡುವ ಸಂದರ್ಭಗಳಷ್ಟೇ. ಸಿನಿಮಾ ಬಿಟ್ಟರೆ ಬೇರ್ಯಾವ ಚರ್ಚೆಗಳೂ ಇಂಥಾ ಬೇಟಿಗಳಲ್ಲಿ ಹುಟ್ಟಿಕೊಳ್ಳುವುದಿಲ್ಲ. ಅದಕ್ಕೆ ಸರಿಯಾಗಿ ಅಂದೂ ಕೂಡಾ ಕಥಾ ಸಂಗಮದ ಪರಿಕಲ್ಪನೆಯನ್ನು ನಿರ್ಮಾಪಕ ಹೆಚ್.ಕೆ ಪ್ರಕಾಶ್ ಅವರ ಮುಂದೆ ಹೇಳಿಕೊಂಡಿದ್ದರಂತೆ. ಅದರಿಂದ ಇಂಪ್ರೆಸ್ ಆಗಿದ್ದ ಪ್ರಕಾಶ್ ತನ್ನ ಸ್ನೇಹಿತ ಪ್ರದೀಪ್ ಎನ್ ಆರ್ ಅವರ ಜೊತೆಗೂಡಿ ಈ ಸಿನಿಮಾ ನಿರ್ಮಾಣ ಮಾಡೋದಾಗಿ ಹೇಳಿದ್ದರಂತೆ. ಆ ನಂತರದಲ್ಲಿ ಏಳು ಮಂದಿ ಪ್ರತಿಭಾವಂತ ನಿರ್ದೇಶಕರನ್ನು ಹುಡುಕಿ, ಕಥೆಗಳನ್ನು ಕಲೆ ಹಾಕಿ ಕಡೆಗೂ ಕನಸಿನ ಕಥಾ ಸಂಗಮವನ್ನು ಅಣಿಗೊಳಿಸಿದ್ದಾರೆ. ಇದು ಇದೇ ಡಿಸೆಂಬರ್ 6ರಂದು ತೆರೆಗಾಣಲಿದೆ.

  • ಅಚ್ಚರಿಯ ಲೋಕಕ್ಕೆ ಕರೆದೊಯ್ಯುವ ಕಥಾ ಸಂಗಮ ಹಾಡು!

    ಅಚ್ಚರಿಯ ಲೋಕಕ್ಕೆ ಕರೆದೊಯ್ಯುವ ಕಥಾ ಸಂಗಮ ಹಾಡು!

    ನಿರ್ದೇಶಕ ರಿಷಬ್ ಶೆಟ್ಟಿ ಯಾವುದೇ ಸಿನಿಮಾ ಆರಂಭಿಸಿದರೂ ಅಲ್ಲೊಂದು ಹೊಸತನ, ಹೊಸ ಪ್ರಯೋಗ ಇದ್ದೇ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಆದರೀಗ ಅವರು ಕಥಾ ಸಂಗಮವೆಂಬ ಸಿನಿಮಾ ಮೂಲಕ ಎಲ್ಲರ ನಿರೀಕ್ಷೆಯನ್ನು ಮೀರಿದ ಪ್ರಯೋಗದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕಥಾ ಸಂಗಮದಲ್ಲಿ ಏಳು ಮಂದಿ ನಿರ್ದೇಶಕರ ಏಳು ಕಥೆಗಳನ್ನು ರಿಷಬ್ ಶೆಟ್ಟಿ ಒಂದೇ ಸಿನಿಮಾ ಫ್ರೇಮಿನಲ್ಲಿ ಕಟ್ಟಿ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ಏಳು ಭಿನ್ನ ಕಥೆಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಈ ಮೂಲಕ ಪ್ರೇಕ್ಷಕರ ಪಾಲಿಗೆ ಬಂದೊದಗಿದೆ. ಇತ್ತೀಚೆಗಷ್ಟೇ ಆಡಿಯೋ ಲಾಂಚ್ ಮಾಡಿದ್ದ ಚಿತ್ರತಂಡ ಇದೀಗ ಇಡೀ ಕಥೆಯ ಹೊಳಹು ನೀಡುತ್ತಲೇ ಬೇರೆಯದ್ದೊಂದು ಅನೂಹ್ಯ ಜಗತ್ತಿಗೆ ಕೈ ಹಿಡಿದು ಕರೆದೊಯ್ಯವಂಥಾ ಅದ್ಭುತ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ.

    ಮನೆಯೊಂದಿರುವುದು ಇಲ್ಲಿ, ಮನವೇ ನಿಲ್ಲದು ನೋಡಿ. ಹೆಜ್ಜೆಯು ಮುಗಿಯಲೇ ಇಲ್ಲ ಗೋಡೆಯ ಜಾಗದಲಿ ಬರೀ ಬಾಗಿಲೇ ಇರಬಹುದೇ… ಎಂಬ ಚೆಂದದ ಸಾಹಿತ್ಯವಿರೋ ಈ ಹಾಡು ಅದಿತಿ ಸಾಗರ್ ಅವರ ವಿಶಿಷ್ಟ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಮಾಯಸಂದ್ರ ಕೃಷ್ಣಪ್ರಸಾದ್ ಅವರು ಬರೆದಿರುವ ಈ ಹಾಡು ನಿಗೂಢಾರ್ಥಗಳೊಂದಿಗೆ ಇಡೀ ಕಥೆಯ ಸಾರವನ್ನು ತನ್ನೊಳಗೆ ಹಿಡಿದಿಟ್ಟುಕೊಂಡಂತಿದೆ. ಈ ಹಾಡಿನ ಭಾವಕ್ಕೆ ತಕ್ಕುದಾಗಿ ಕಥಾ ಸಂಗಮದ ಏಳು ಕಥೆಗಳ ಪದರಗಳೂ ತೆರೆದುಕೊಳ್ಳುತ್ತವೆ. ಪಾತ್ರಗಳ ಚಹರೆ ಕಣ್ಣೆದುರು ಅನಾವರಣಗೊಳ್ಳುತ್ತವೆ. ಇಲ್ಲಿ ಪ್ರತೀ ಪ್ರೇಕ್ಷಕರೂ ಅಚ್ಚರಿಗೊಳ್ಳುವಂಥ ಏಳು ಕಥೆಗಳ ಗುಚ್ಛವಿದೆ ಅನ್ನೋದನ್ನು ಈ ಹಾಡು ಸಮರ್ಥವಾಗಿಯೇ ಪ್ರೇಕ್ಷಕರಿಗೆ ಮನವರಿಕೆ ಮಾಡಿ ಕೊಟ್ಟಿದೆ.

    ಈ ಹಾಡೂ ಕೂಡಾ ರಿಷಬ್ ಶೆಟ್ಟಿ ಮತ್ತವರ ತಂಡದ ಹೊಸತನದ ಹಂಬಲದ ಪ್ರತಿಫಲ. ಟ್ರೇಲರ್ ಮತ್ತು ಟೀಸರ್‍ನಂಥವುಗಳ ಮೂಲಕ ಕಥೆಯ ಹೂರಣದ ಸುಳಿವು ಕೊಡುವುದು ಮಾಮೂಲು. ಆದರೆ ಕಥಾ ಸಂಗಮ ಅದನ್ನು ಈ ಹಾಡಿನ ಮೂಲಕವೇ ಮಾಡಿದೆ. ಮತ್ತದು ತುಂಬಾನೇ ಪರಿಣಾಮಕಾರಿಯಾಗಿದೆ. ಇಲ್ಲಿ ಏಳು ಮಂದಿ ಯುವ ನಿರ್ದೇಶಕರ ಏಳು ಕಥೆಗಳಿವೆ. ಅವೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿರುವಂಥವುಗಳು. ಒಂದೇ ಸಿನಿಮಾದಲ್ಲಿ ಏಳು ಸಿನಿಮಾ ತೋರಿಸೋ ಮಹತ್ವದ ಪ್ರಯತ್ನವೂ ಈ ಚಿತ್ರದಲ್ಲಿದೆ. ಏಳು ಮಂದಿ ನಿರ್ದೇಶಕರು, ಏಳು ಕಥೆ, ಏಳು ಜನ ಛಾಯಾಗ್ರಾಹಕರು ಈ ಸಿನಿಮಾದ ಪ್ರಧಾನ ಅಂಶಗಳಂತಿದ್ದಾರೆ. ಪ್ರತೀ ಕಥೆಗಳಲ್ಲಿಯೂ ಭಿನ್ನ ಪಾತ್ರಗಳು ಪ್ರೇಕ್ಷಕರನ್ನು ಚಕಿತಗೊಳಿಸಲು ತಯಾರಾಗಿವೆ.

    ಲವ್, ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಕ್ರೈಂ ಜಾನರಿನಡಿ ಬರುವಂಥಾ ಕಥೆಗಳು ಇಲ್ಲಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಕಥಾ ಸಂಗಮದತ್ತ ಪ್ರತೀ ಪ್ರೇಕ್ಷಕರೂ ಕಣ್ಣಿಟ್ಟು ಕಾಯುವಂತೆ ಮಾಡಿ ಬಿಟ್ಟಿದೆ. ಆ ಟ್ರೇಲರ್‍ಗೆ ಸಿಕ್ಕಿರೋ ಪ್ರತಿಕ್ರಿಯೆ ಮತ್ತು ವೀಕ್ಷಣೆಗಳೇ ಎಲ್ಲವನ್ನೂ ಹೇಳುವಂತಿವೆ. ಪುಟ್ಟಣ್ಣ ಕಣಗಾಲರು ದಶಕಗಳ ಹಿಂದೆಯೇ ಇಂಥಾದ್ದೊಂದು ಪ್ರಯತ್ನ ಮಾಡಿದ್ದರು. ಇದೀಗ ರಿಷಬ್ ಶೆಟ್ಟಿ ಮತ್ತು ತಂಡ ಸಂಪೂರ್ಣ ಹೊಸತನದೊಂದಿಗೆ ಕಥಾ ಸಂಗಮದ ಮೂಲಕ ಕಮಾಲ್ ಮಾಡ ಹೊರಟಿದ್ದಾರೆ. ಅದರ ಮಜವೇನನ್ನೋದು ಇದೀಗ ಬಿಡುಗಡೆಯಾಗಿರೋ ಹಾಡಿನ ಮೂಲಕವೇ ಸ್ಪಷ್ಟಗೊಂಡಿದೆ.

  • ಚಿತ್ರರಂಗಕ್ಕೆ ಹರಿಪ್ರಿಯಾ ಚಿಕ್ಕ ಬ್ರೇಕ್!

    ಚಿತ್ರರಂಗಕ್ಕೆ ಹರಿಪ್ರಿಯಾ ಚಿಕ್ಕ ಬ್ರೇಕ್!

    ಬೆಂಗಳೂರು: ಹರಿಪ್ರಿಯಾ ಅಂದರೆ ಭಿನ್ನಾತಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದಿರೋ ಪ್ರತಿಭಾವಂತ ನಟಿ. ಅವರ ಪಾಲಿಗೆ ಈ ವರ್ಷ ಸುಗ್ಗಿ ಸಂಭ್ರಮ. ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿ, ಇನ್ನೂ ಒಂದಷ್ಟು ಅವಕಾಶಗಳೂ ಅವರಿಗಾಗಿ ಕಾದು ನಿಂತಿವೆ. ಹೀಗಿರುವಾಗಲೇ ಹರಿಪ್ರಿಯಾ ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರ ಸರಿಯೋ ನಿರ್ಧಾರ ಪ್ರಕಟಿಸಿದ್ದಾರೆ!

    ಈ ಸುದ್ದಿ ಕೇಳಿದಾಕ್ಷಣವೇ ಅರೇ ಅಂಥಾದ್ದೇನಾಯ್ತೆಂಬ ದಿಗಿಲು ತುಂಬಿದ ಪ್ರಶ್ನೆ ಕಾಡೋದು ಸಹಜವೇ. ಆದರೆ ಈ ಬಗ್ಗೆ ಖುದ್ದು ಹರಿಪ್ರಿಯಾ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಕೆಲ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರವಾಗಿ ಹೇಳೋದಾದರೆ ಈ ತಾತ್ಕಾಲಿಕ ಬ್ರೇಕ್ ಹಿಂದಿರೋದು ರಿಲ್ಯಾಕ್ಸ್ ಆಗೋ ಉದ್ದೇಶವಷ್ಟೇ!

    `ನಾನು ನಟಿಸಲು ಒಪ್ಪಿಕೊಂಡಿದ್ದ ಬಿಚ್ಚುಗತ್ತಿ, ಕುರುಕ್ಷೇತ್ರ, ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲೀತನಕ, ಕಥಾ ಸಂಗಮ ಸೇರಿದಂತೆ ಎಲ್ಲ ಚಿತ್ರಗಳ ನನ್ನ ಭಾಗದ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿದ್ದೇನೆ. ಈ ಎಲ್ಲ ಸಿನಿಮಾಗಳಲ್ಲಿಯೂ ನನ್ನ ಪಾತ್ರ ವಿಭಿನ್ನವಾಗಿದೆ. ಅದನ್ನು ಪ್ರೇಕ್ಷಕರೆದುರು ಅನಾವರಣಗೊಳಿಸಲು ಕಾತರಳಾಗಿದ್ದೇನೆ. ಇದೆಲ್ಲವನ್ನೂ ಬಿಡುವೇ ಇಲ್ಲದಂತೆ ಮಾಡಿ ಮುಗಿಸಿದ್ದೇನೆ. ಇದೀಗ ನಾನು ಪ್ರವಾಸ ಹೊರಟಿದ್ದೇನೆ. ಈ ಚಿಕ್ಕ ಬ್ರೇಕ್ ಆದ ನಂತರ ಹೊಸ ಚಿತ್ರದ ವಿವರಗಳೊಂದಿಗೆ ನಿಮ್ಮೆದುರು ಮತ್ತೆ ಬರುತ್ತೇನೆ’ ಎಂಬರ್ಥದಲ್ಲಿ ಹರಿಪ್ರಿಯಾ ಬರೆದುಕೊಂಡಿದ್ದಾರೆ.

     

    ಹರಿಪ್ರಿಯಾ ವರ್ಷದಿಂದೀಚೆಗೆ ಒಂದರ ಹಿಂದೊಂದರಂತೆ ಬಿಡುವೇ ಇರದೇ ನಟಿಸುತ್ತಾ ಬಂದಿದ್ದಾರೆ. ಆದ ಕಾರಣ ಒಂದಷ್ಟು ದಿನ ರಿಲ್ಯಾಕ್ಸ್ ಆಗಲು ಪ್ರವಾಸ ಹೊರಟಿರುವಂತಿದೆ. ಇನ್ನು ಮುಂದೆ ಅವರು ನಟಿಸಿರೋ ಸಾಲು ಸಾಲು ಚಿತ್ರಗಳು ತೆರೆ ಕಾಣಲಿವೆ. ಅದರ ಜೊತೆಗೆ ಈ ಬ್ರೇಕ್ ಮುಗಿಸಿಕೊಂಡು ಅವರು ಮತ್ತೆ ಮರಳಲಿದ್ದಾರೆ.