Tag: ಕಣ್ಣೂರು

  • ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆ : ಹೆಗ್ಗಳಿಕೆಗೆ ಪಾತ್ರವಾಯ್ತು ಕೇರಳ – ಕೊಡಗಿಗೆ ಲಾಭ ಹೇಗೆ?

    ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆ : ಹೆಗ್ಗಳಿಕೆಗೆ ಪಾತ್ರವಾಯ್ತು ಕೇರಳ – ಕೊಡಗಿಗೆ ಲಾಭ ಹೇಗೆ?

    ಕಣ್ಣೂರು: ಕೇರಳದ ಕಣ್ಣೂರಿನಲ್ಲಿ ನಿರ್ಮಾಣಗೊಂಡಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಭಾನುವಾರ ಅಧಿಕೃತವಾಗಿ ಲೋಕಾರ್ಪಣೆಯಾಗಿದೆ.

    ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಜೊತೆಯಾಗಿ ಬೆಳಗ್ಗೆ 9.55ಕ್ಕೆ ಅಬುಧಾಬಿಗೆ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಹಸಿರು ಬಾವುಟ ತೋರಿಸಿ ಅಧಿಕೃತವಾಗಿ ಚಾಲನೆ ನೀಡಿದರು.

    ಕಣ್ಣೂರು ವಿಮಾನ ನಿಲ್ದಾಣ ಉದ್ಘಾಟನೆಯಾಗುವ ಮೂಲಕ ದೇಶದಲ್ಲಿ 4 ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ. ಈಗಾಗಲೇ ತಿರುವಂತಪುರಂ, ಕೋಳಿಕ್ಕೋಡ್, ಕೊಚ್ಚಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ.

    ಕಣ್ಣೂರು ನಗರದಿಂದ 16 ಕಿ.ಮೀ ದೂರದಲ್ಲಿರುವ ಮಟ್ಟನ್ನೂರಿನ 2,062 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. 3,050 ಮೀಟರ್ ಉದ್ದದ ರನ್ ವೇ ಹೊಂದಿದ್ದು ಮುಂದಿನ ದಿನಗಳಲ್ಲಿ 3,400 ಮೀಟರ್ ವರೆಗೆ ರನ್‍ವೇ ವಿಸ್ತರಣೆಯಾಗಲಿದೆ.

    ಉದ್ಘಾಟನಾ ದಿನದಿಂದಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆ ಕಣ್ಣೂರಿನಿಂದ ಆರಂಭವಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿದೇಶ ಸೇವೆ ಹಾಗೂ ಗೋ ಏರ್ ಸರ್ವೀಸ್ ಸಿಗಲಿದೆ. ಏರ್ ಇಂಡಿಯಾ ಕಂಪನಿ ರಿಯಾದ್ ಮತ್ತು ದೋಹಾ ನಡುವೆ ವಿಮಾನ ಸೇವೆ ನೀಡುವುದಾಗಿ ಹೇಳಿದೆ.

    ಕೇಂದ್ರ ಅನುಮತಿ ನೀಡದ ಕಾರಣ ಮೊದಲ ಹಂತದಲ್ಲಿ ವಿದೇಶಿ ಕಂಪನಿಗಳ ವಿಮಾನಗಳು ಕಣ್ಣೂರಿಗೆ ಬರುತ್ತಿಲ್ಲ. ಬೆಂಗಳೂರಿಗೆ ವಾರಕ್ಕೆ 6 ಬಾರಿ, ಹೈದರಾಬಾದಿಗೆ 4 ಬಾರಿ, ಚೆನ್ನೈಗೆ 3 ಸಲ ಸೇವೆ ನೀಡುವುದಾಗಿ ಗೋ ಏರ್ ಹೇಳಿಕೊಂಡಿದೆ.

    ಕೊಡಗಿಗೆ ಹೇಗೆ ಲಾಭ?
    ಮಡಿಕೇರಿಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ 300 ಕಿ.ಮೀ ದೂರದಲ್ಲಿದ್ದು ಬಸ್ಸಿನಲ್ಲಿ ಏಳುವರೆ ಗಂಟೆ ಸಮಯ ಬೇಕು. ಸಮೀಪದಲ್ಲಿರುವ ಮಂಗಳೂರು ವಿಮಾನ ನಿಲ್ದಾಣಕ್ಕೆ 140 ಕಿ.ಮೀ ದೂರವಿದ್ದು 4 ಗಂಟೆ ಸಮಯ ಬೇಕು. ಆದರೆ ಕಣ್ಣೂರು ವಿಮಾನ ನಿಲ್ದಾಣ 85 ಕಿ.ಮೀ ದೂರದಲ್ಲಿದ್ದು, ಎರಡು ಗಂಟೆಯಲ್ಲಿ ತಲುಪಬಹುದು. ಕೇರಳ ಮತ್ತು ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಭವಿಷ್ಯದಲ್ಲಿ ಈ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಬಿವಿಪಿ ಕಾರ್ಯಕರ್ತನ ಕಗ್ಗೊಲೆ- ಎಸ್‍ಡಿಪಿಐ ಸಂಘಟನೆಯ ನಾಲ್ವರ ಬಂಧನ

    ಎಬಿವಿಪಿ ಕಾರ್ಯಕರ್ತನ ಕಗ್ಗೊಲೆ- ಎಸ್‍ಡಿಪಿಐ ಸಂಘಟನೆಯ ನಾಲ್ವರ ಬಂಧನ

    ತಿರುವನಂತಪುರಂ: ಕೇರಳದಲ್ಲಿ ಎಬಿವಿಪಿ ಕಾರ್ಯಕರ್ತರೊಬ್ಬರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

    ಬಂಧಿತರನ್ನು ಮೊಹಮ್ಮದ್, ಮಿನಿಕ್ಕೊಲದ ಸಲೀಂ, ನೀವೆಲಿ ಅಮೀರ್ ಹಾಗೂ ಶಾಹಿನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎಸ್‍ಡಿಪಿಐ ಸದಸ್ಯರು ಎನ್ನಲಾಗಿದೆ.

    ಏನಿದು ಘಟನೆ?: ಎಬಿವಿಪಿ ಕಾರ್ಯಕರ್ತ ಹಾಗೂ ಆರ್‍ಎಸ್‍ಎಸ್ ನ ಮುಖ್ಯ ಶಿಕ್ಷಕ್ ಆಗಿದ್ದ ಶ್ಯಾಮ್ ಪ್ರಸಾದ್ ಅವರ ಮೇಲೆ ಶುಕ್ರವಾರ ಸಂಜೆ ಕನ್ನಾವಂ ಸಮೀಪದ ಕೊಮ್ಮೇರಿ ಎಂಬಲ್ಲಿ ತಂಡವೊಂದು ದಾಳಿ ಮಾಡಿತ್ತು. ಕೂಡಲೇ ಶ್ಯಾಮ್ ಪ್ರಸಾದ್ ತಪ್ಪಿಸಿಕೊಂಡು ಅಲ್ಲೆ ಇದ್ದ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದರು. ಆದ್ರೆ ಆ ಮನೆಗೆ ಬೀಗ ಜಡಿದಿದ್ದರಿಂದ ಶ್ಯಾಮ್ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪರಿಣಾಮ ದುಷ್ಕರ್ಮಿಗಳ ಕೈಗೆ ಸಿಲುಕಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದರು ಎಂದು ವರದಿಯಾಗಿದೆ.

    ಘಟನೆಯ ಬಳಿಕ ದುಷ್ಕರ್ಮಿಗಳು ವಾಯ್‍ನಾಡಿಗೆ ಪರಾರಿಯಾಗಿದ್ದರು. ಕೊಲೆ ಸಂಬಂಧ ಪೆರಾವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಆರೋಪಿಗಳನ್ನು ವಾಯ್‍ನಾಡಿನಲ್ಲಿ ಬಂಧಿಸಲಾಗಿದ್ದು, ಪೆರಾವೂರ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

    ಬಿಜೆಪಿ ಪ್ರತಿಭಟನೆ: ಎಬಿವಿಪಿ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಶನಿವಾರ ಪ್ರತಿಭಟನೆ ನಡೆಸಿತ್ತು. 12 ಗಂಟೆ ನಡೆಸಿದ ಹರತಾಳದಲ್ಲಿ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಅಲ್ಲದೇ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

    ಶನಿವಾರ ಸಂಜೆ ಮೃತನ ಅಂತ್ಯಸಂಸ್ಕಾರ ನಡೆದಿದೆ. ಅದಕ್ಕೂ ಮೊದಲು ಮರಣೋತ್ತರ ಪರೀಕ್ಷೆಯ ಬಳಿಕ ಅಂತಿಮ ದರ್ಶನಕ್ಕಾಗಿ ಮೃತನ ಪಾರ್ಥೀವ ಶರೀರವನ್ನು ಪರಿಯರಮ್ ಮೆಡಿಕಲ್ ಕಾಲೇಜಿನಲ್ಲಿ ಇಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಭಾಗವಹಿಸಿ ಅಂತಿಮ ದರ್ಶನ ಪಡೆದ್ರು. ಬಳಿಕ ಶ್ಯಾಮ್ ಪ್ರಸಾದ್ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

  • ಬ್ರಿಡ್ಜ್ ಮೇಲಿಂದ ನದಿಗೆ ಉರುಳಿಬಿದ್ದ ಬಸ್- ಮೂವರ ಸಾವು

    ಬ್ರಿಡ್ಜ್ ಮೇಲಿಂದ ನದಿಗೆ ಉರುಳಿಬಿದ್ದ ಬಸ್- ಮೂವರ ಸಾವು

    ತಿರುವನಂತಪುರಂ: ಬಸ್‍ವೊಂದು ಬ್ರಿಡ್ಜ್ ಮೇಲಿಂದ ನದಿಗೆ ಉರುಳಿದ ಪರಿಣಾಮ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

    ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಇಲ್ಲಿನ ಪೆರಿಂಗತೂರ್‍ನ ಮಯ್ಯಾಜಿ ನದಿಗೆ ಬಸ್ ಉರುಳಿ ಬಿದ್ದಿದೆ. ಬಸ್‍ನ ಕ್ಲೀನರ್ ಹಾಗೂ ಒಬ್ಬ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡಿದ್ದ ಬಸ್ ಚಾಲಕನನ್ನು ರಕ್ಷಣೆ ಮಾಡಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಸ್ ಬೆಂಗಳೂರಿನಿಂದ ತಲಸ್ಸೆರಿಗೆ ಬರುತ್ತಿದ್ದ ವೇಳೆ ಪೆರಿಂಗತೂರ್ ಬ್ರಿಡ್ಜ್ ಮೇಲಿಂದ ತಡೆಗೋಡೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ. ಘಟನೆ ನಡೆದ ವೇಳೆ ಬಸ್ಸಿನಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಇದ್ದರು ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

    ಮೊದಲಿಗೆ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು. ನಂತರ ಪೊಲೀಸರು ಪರಿಸ್ಥಿತಿ ನಿಯಂತ್ರಿಸಬೇಕಾಯಿತು. ಅಪಘಾತದಿಂದಾಗ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

  • ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

    ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

    ಕಣ್ಣೂರು: ಕೇರಳದ ಪ್ಲಸ್ ಟು ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ತೆಗೆದು ಪಾಸಾಗಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಹೌದು. ಕಣ್ಣೂರು ಜಿಲ್ಲೆಯ ಮಾಲೂರಿನ ಶಿವಪುರಂ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ರಫ್ಸೀನಾ(17) ಪ್ಲಸ್ ಟು ತರಗತಿಯಲ್ಲಿ ಒಟ್ಟು 1200 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ  1180 ಅಂಕಗಳಿಸಿ ಪಾಸಾಗಿದ್ದಳು. ಈಕೆಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಅಭಿನಂದನೆಗಳ ಸ್ವೀಕರಿಸಿದ ಬಳಿಕ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬುಧವಾರ ನೇಣಿಗೆ ಶರಣಾಗಿದ್ದಾಳೆ.

    ತನ್ನ ಮರಣ ಪತ್ರದಲ್ಲಿ ರಫ್ಸಿನಾ, ನನ್ನ ಜೀವನ ನನ್ನ ಆಯ್ಕೆ, ನನ್ನ ಜೀವನದಲ್ಲಿ ಬೇರೆಯವರು ಮಧ್ಯಪ್ರವೇಶಿಸುವುದು ನನಗೆ ಇಷ್ಟ ಇಲ್ಲ ಎಂದು ಬರೆದಿದ್ದಳು.

    ಮಾಧ್ಯಮಗಳ ವರದಿಯಿಂದ ಆತ್ಮಹತ್ಯೆ?
    ತೀವ್ರ ಬಡತನದಲ್ಲಿ ಓದಿ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದ ರಫ್ಸೀನಾ ಬಡತನದ ವಿಷಯವನ್ನು ತನ್ನ ಸ್ನೇಹಿತರಲ್ಲೂ ಹೇಳಿರಲಿಲ್ಲ. ಮಾಧ್ಯಮಗಳು ತನ್ನ ಸಾಧನೆ ವಿಚಾರಕ್ಕಿಂತಲೂ ಬಡತನದ ವಿಚಾರವನ್ನೇ ಮುಂದಿಟ್ಟುಕೊಂಡು ಸುದ್ದಿಯನ್ನು ಪ್ರಕಟಿಸಿದ್ದಕ್ಕೆ ಬೇಸರಗೊಂಡಿದ್ದಳು.

    ಈಕೆಯ ಬಡತನವನ್ನು ನೋಡಿ ಹಲವು ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಸಹಕಾರವನ್ನು ನೀಡಲು ಮುಂದೆ ಬಂದಿತ್ತು. ಬುಧವಾರ ಶಿವಪುರಂ ಹೈಯರ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಕೆಯ ಮನೆಗೆ ಬಂದು ಅಭಿನಂದನೆ ಸಲ್ಲಿಸಿದ್ದರು. ಅಭಿನಂದನೆ ಸ್ವೀಕರಿಸಿದ ಬಳಿಕ ಆಕೆ ನೇಣಿಗೆ ಶರಣಾಗಿದ್ದಾಳೆ.

    ಮಾಧ್ಯಮಗಳು ಈಕೆಯ ಶಿಕ್ಷಣಕ್ಕೆ ಜನರು ಮುಂದೆ ಸಹಕಾರ ನೀಡಲಿ ಎನ್ನುವ ದೃಷ್ಟಿಯಿಂದ, ರಫ್ಸೀನಾಗೆ ಹಣಕಾಸಿನ ಸಹಾಯ ನೀಡಿದವರ ಫೋಟೋಗಳನ್ನು ಸಹ ಸುದ್ದಿಯಲ್ಲಿ ಪ್ರಸಾರ ಮಾಡಿತ್ತು. ಮಾಧ್ಯಮಗಳು ಈಕೆಯ ಸುದ್ದಿಯನ್ನು ಕವರ್ ಮಾಡಿದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ.