Tag: ಕಣ್ಣು

  • ಚಂದದ ಕಣ್ಣಿಗೆ ಮನೆಯಲ್ಲಿಯೇ ಆರೈಕೆ ಮಾಡಿ

    ಚಂದದ ಕಣ್ಣಿಗೆ ಮನೆಯಲ್ಲಿಯೇ ಆರೈಕೆ ಮಾಡಿ

    ಸಾಮಾನ್ಯವಾಗಿ ಎಲ್ಲರಿಗೂ ಕಣ್ಣಿನ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಅದು ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಸರಿಯಾಗಿ ನಿದ್ದೆ ಮಾಡದೇ, ಕಣ್ಣಿಗೆ ಸರಿಯಾಗಿ ಆರೈಕೆ ಮಾಡದೇ ಇರುವುದರಿಂದ ಕಣ್ಣಿನ ಸುತ್ತ ಕಪ್ಪು ಕಲೆಯಾಗುತ್ತದೆ. ಅದರಲ್ಲೂ ಕಂಪ್ಯೂಟರ್ ಮುಂದೆ ಹೆಚ್ಚಾಗಿ ಕುಳಿತು ಕೆಲಸ ಮಾಡುವುದರಿಂದ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬರುತ್ತದೆ. ಆದ್ದರಿಂದ ಇದನ್ನು ತಡೆಯಲು ಮನೆಯಲ್ಲಿಯೇ ಮದ್ದು ಮಾಡಬಹುದು.

    ಕಣ್ಣಿನ ಅಂದಕ್ಕೆ ಮನೆಮದ್ದು:
    * ಪ್ರತಿದಿನ ಕಡಿಮೆ ಎಂದರೆ 7 ಗಂಟೆ ನಿದ್ದೆ ಮಾಡಬೇಕು.
    * ಸೌತೆಕಾಯಿಯ ರಸವನ್ನು ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ ಮತ್ತು 15 ನಿಮಿಷದ ನಂತರ ನೀರಿನಿಂದ ತೊಳೆಯಿರಿ.
    * ಪ್ರತಿ ದಿನದ ಒತ್ತಡ ಮತ್ತು ಆತಂಕಗಳನ್ನು ಕಡಿಮೆ ಮಾಡಿಕೊಳ್ಳುವುದು ಕೂಡ ಕಪ್ಪು ವೃತ್ತ ತಡೆಯಲು ಉತ್ತಮ ವಿಧಾನವಾಗಿದೆ.

    * ತಣ್ಣಗಿನ ಟೀ ಬ್ಯಾಗ್ ಅನ್ನು ಕಣ್ಣಿನ ಕೆಳಭಾಗದಲ್ಲಿ ಇಡುವುದರಿಂದ ಕೂಡ ಕಣ್ಣಿನ ಕಪ್ಪು ಕಲೆಗಳು ಮಾಯವಾಗುತ್ತವೆ.
    * ದಿನಕ್ಕೆ 10 ಲೋಟ ನೀರು ಕುಡಿಯಬೇಕು. ನೀರಿನಾಂಶ ಹೆಚ್ಚಾದಷ್ಟು ಕಣ್ಣಿನ ಸುತ್ತ ಇರೋ ಕಲೆಗಳನ್ನು ಹೋಗಲಾಡಿಸಬಹುದು.

    * ನಿಂಬೆ ಹಣ್ಣು ಮತ್ತು ಸೌತೆ ಕಾಯಿಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಅದರ ರಸವನ್ನು ಪ್ರತಿದಿನ ಹಚ್ಚಿ. 15 ನಿಮಿಷದ ನಂತರ ನೀರಿನಲ್ಲಿ ತೊಳೆದುಕೊಂಡರೆ ಕಪ್ಪು ವೃತ್ತ ಕಡಿಮೆಯಾಗುತ್ತದೆ.
    * ಕೆಲಸ, ಕಾಲೇಜು ಮುಗಿಸಿ ಮನೆಗೆ ಹೋದಾಗ ಬೆಚ್ಚಗಿನ ಅಥವಾ ತಣ್ಣನೆ ನೀರಿನಿಂದ ಕಣ್ಣನ್ನು ತೊಳೆಯಿರಿ. ಇದರಿಂದ ರಕ್ತ ಸಂಚಲನ ಸುಗಮವಾಗಿಸುವುದರ ಮೂಲಕ ಕಪ್ಪು ವೃತ್ತ ಹೋಗುತ್ತದೆ.

    * ಪುದೀನಾ ಎಲೆಗಳನ್ನು ಜಜ್ಜಿ ಅದನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ. 10 ರಿಂದ 15 ನಿಮಿಷ ಬಿಟ್ಟು ತೊಳೆಯಿರಿ. ಈ ರೀತಿ ಮಾಡಿದರೆ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.
    * ಆಲೂಗಡ್ಡೆ ಮತ್ತು ಸೌತೆಕಾಯಿ ಮಿಶ್ರಣದ ರಸವನ್ನು ಬಳಿದರೆ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಯನ್ನು ಹೋಗಲಾಡಿಸಬಹುದು.

    * ಕಿತ್ತಳೆ ರಸವನ್ನು ಗ್ಲಿಸರಿನ್ ಜೊತೆ ಬೆರೆಸಿ ವಾರದಲ್ಲಿ 3 ಬಾರಿ ಕಣ್ಣಿನ ಸುತ್ತ ಹಚ್ಚಿ. ಬಳಿಕ 20 ನಿಮಿಷದ ನಂತರ ತೊಳೆಯಿರಿ. ಇದರಿಂದ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ.


    * ಮಲಗುವ ಮೊದಲು ಬಾದಾಮಿ ಮತ್ತು ಹಾಲನ್ನು ಮಿಶ್ರ ಮಾಡಿ ಅದನ್ನು ಕಣ್ಣಿನ ಸುತ್ತಲು ಹಚ್ಚಿ. ಮಾರನೆಯ ದಿನ ಬೆಳಗ್ಗೆ ತಣ್ಣನೆಯ ನೀರಿನಿಂದ ತೊಳೆಯಿರಿ.

    * ತಾಜಾ ಹಣ್ಣು, ಮೊಸರು, ಬೇಳೆಕಾಳುಗಳು, ಕೆನೆ ತೆಗೆದ ಹಾಲು, ಸೊಪ್ಪುಗಳು ಮತ್ತು ಬೀನ್ಸ್ ಇವುಗಳನ್ನು ಹೆಚ್ಚಾಗಿ ತಿನ್ನಬೇಕು. ಅದರಲ್ಲೂ ಪೈನಾಪಲ್ ಹಣ್ಣಿನ ಜ್ಯೂಸ್ ತುಂಬಾ ಒಳ್ಳೆಯದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವರಾತ್ರಿ ಮಹಿಮೆ – ಕಣ್ಣು ಬಿಟ್ಟ ದೇವಿ: ವಿಡಿಯೋ ವೈರಲ್

    ನವರಾತ್ರಿ ಮಹಿಮೆ – ಕಣ್ಣು ಬಿಟ್ಟ ದೇವಿ: ವಿಡಿಯೋ ವೈರಲ್

    ಹಾಸನ: ಜಿಲ್ಲೆಯ ಅರಸೀಕರೆ ತಾಲೂಕಿನ ಬೆಂಡೆಕೆರೆ ಗ್ರಾಮದ ಭದ್ರಕಾಳಿ ಮೂರ್ತಿ ಕಣ್ಣುಬಿಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೆಂಡೆಕೆರೆ ಗ್ರಾಮದ ವೀರಭದ್ರೇಶ್ವರ ದೇವಾಲಯದಲ್ಲಿ ಈ ಭದ್ರಕಾಳಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಕಳೆದ ಮಹಾಲಯ ಅಮಾವಾಸ್ಯೆ ದಿನದಂದು ದೇವಸ್ಥಾನದ ಪೂಜೆ ಸಂದರ್ಭದಲ್ಲಿ ಭದ್ರಕಾಳಿ ಮೂರ್ತಿಯು ಕಣ್ಣು ಬಿಟ್ಟಂತೆ ಗೋಚರಿಸಿದೆ. ತಕ್ಷಣ ಭಕ್ತಾದಿಯೊಬ್ಬರು ಅದನ್ನು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ತಂಡೋಪತಂಡವಾಗಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

    ಬೆಂಡೆಕೆರೆ ಗ್ರಾಮದ ಹೊರಭಾಗದಲ್ಲಿ ಈ ದೇವಾಲಯ ಇದ್ದು, ಅಮವಾಸ್ಯೆಗಳಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಮಹಾಲಯ ಅಮಾವಾಸ್ಯೆಯ ದಿನದಂದು ಭದ್ರಕಾಳಿ ಕಣ್ಣು ತೆರೆದಿದ್ದು, ಆ ವಿಡಿಯೋ ತಡವಾಗಿ ವೈರಲ್ ಆಗಿದೆ. ಈ ಹಿಂದೆಯೂ ಕೂಡ ಅಮವಾಸ್ಯೆ ದಿನ ಈ ರೀತಿಯ ಪವಾಡ ನಡದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ವೀರಭದ್ರೇಶ್ವರ ದೇವಾಲಯದಲ್ಲಿ ಈ ಭದ್ರಕಾಳಿ ಮೂರ್ತಿ ಇದೆ. ಈ ಹಿಂದೆ ದೇವಿ ಮೂರ್ತಿ ಕಣ್ಣು ಬಿಟ್ಟಾಗ ಫೋಟೋವನ್ನು ತೆಗೆದಿದ್ದೆ. ಈಗ ಮಹಾಲಯ ಅಮಾವಾಸ್ಯೆ ದಿನ ಸಂಜೆ ಕುಂಕುಮ ತೆಗೆದುಕೊಂಡು ಬರೋಣ ಎಂದು ದೇವಾಲಯದ ಬಳಿ ಹೋಗಿದ್ದೆ. ಆಗ ದೇವಿ ಕಣ್ಣು ಬಿಟ್ಟು ಗೋಚರಿಸುತ್ತಿತ್ತು. ಅದನ್ನು ವಿಡಿಯೋ ಮಾಡಿದ್ದೇವೆ. ನಾನು ಮಾತ್ರವಲ್ಲ ಅಲ್ಲಿದ್ದ ಹತ್ತಾರು ಜನರು ಅದನ್ನು ನೋಡಿದ್ದಾರೆ ಎಂದು ಸ್ಥಳೀಯ ಚಂದ್ರು ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=M2rIA8MjG90

  • ಕೂದಲಿನ ಸೌಂದರ್ಯಕ್ಕೆ ಮಾರು ಹೋಗಿ ಕಣ್ಣಿಗೆ ಕುತ್ತು ತಂದುಕೊಂಡ ಬಾಲಕಿಯರು

    ಕೂದಲಿನ ಸೌಂದರ್ಯಕ್ಕೆ ಮಾರು ಹೋಗಿ ಕಣ್ಣಿಗೆ ಕುತ್ತು ತಂದುಕೊಂಡ ಬಾಲಕಿಯರು

    ಕೊಪ್ಪಳ: ಕೂದಲಿನ ಸೌಂದರ್ಯಕ್ಕೆ ಮಾರು ಹೋಗಿ ಬಾಲಕಿ ಹಾಗೂ ಯುವತಿ ಕಣ್ಣಿಗೆ ಕುತ್ತು ತಂದುಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಹಾಗೂ ಹಣವಾಳ ಗ್ರಾಮದಲ್ಲಿ ಪ್ರತ್ಯೇಕವಾಗಿ ಇಂತಹ ಘಟನೆ ನಡೆದಿದೆ. ಹಣವಾಳ ಗ್ರಾಮದ ಅನಿತಾ, ಜಂಗಮರ ಕಲ್ಗುಡಿ ಗ್ರಾಮದ ಚಾತುರ್ಯ ಕಣ್ಣಿಗೆ ಕುತ್ತು ತಂದುಕೊಂಡವರಾಗಿದ್ದು, ಇದೀಗ ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅನಿತಾ ಹಾಗೂ ಚಾತುರ್ಯನ ಅಮ್ಮಂದಿರು ನಮ್ಮ ಮಕ್ಕಳ ಕೂದಲು ಕಪ್ಪಾಗಿ ಆಗುತ್ತವೆ ಅಲ್ಲದೇ ತಲೆಯಲ್ಲಿ ಹೇನಿನ ಸಮಸ್ಯೆ ಇರಲ್ಲ ಎಂದು ಸೀತಾಫಲ ಹಣ್ಣಿನ ಬೀಜವನ್ನು ಮಿಕ್ಸಿಯಲ್ಲಿ ಹಾಕಿ ಅದನ್ನು ಪೇಸ್ಟ್ ಮಾಡಿ ರಾತ್ರಿ ತಲೆಗೆ ಹಚ್ಚಿದ್ದಾರೆ. ಆದರೆ ಆ ಬೀಜದ ವಿಷಭರಿತ ರಾಸಾಯನಿಕವು ಕಣ್ಣಿನ ಒಳಗೆ ಹೋಗಿ ಕಣ್ಣುಗಳು ಮಂಜು ಮಂಜಾಗಿ ಕಂಡಿವೆ.

    ಸದ್ಯ ಇದರಿಂದ ಆತಂಕಗೊಂಡ ಪೋಷಕರು ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಬ್ಬರಿಗೆ ಕಣ್ಣಿನ ಚಿಕಿತ್ಸೆ ಮಾಡಿದ ವೈದ್ಯರು, ಯುವತಿ ಮತ್ತು ಬಾಲಕಿಯನ್ನು ಕಣ್ಣಿನ ದೋಷದಿಂದ ಪಾರು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನುಮತಿ ಇಲ್ಲಾಂದ್ರೂ ಗಣಪನ ಕೂರಿಸಿದ್ರು – ಪಟಾಕಿ ಕಿಡಿಗೆ ಎಎಸ್‍ಐ ಕಣ್ಣೇ ಹೋಯ್ತು

    ಅನುಮತಿ ಇಲ್ಲಾಂದ್ರೂ ಗಣಪನ ಕೂರಿಸಿದ್ರು – ಪಟಾಕಿ ಕಿಡಿಗೆ ಎಎಸ್‍ಐ ಕಣ್ಣೇ ಹೋಯ್ತು

    ಬೆಂಗಳೂರು: ನಗರದಲ್ಲಿ ಗಣೇಶನ ವಿಸರ್ಜನೆ ವೇಳೆ ಪಟಾಕಿ ಹೊಡೆದಿದ್ದರಿಂದ ಅದರ ಕಿಡಿ ಎಎಸ್‍ಐ ಕಣ್ಣಿಗೆ ಬಿದ್ದು, ಗಂಭೀರವಾಗಿ ಗಾಯವಾಗಿರುವ ಘಟನೆ ನಡೆದಿದೆ.

    ಈ ಘಟನೆ ಭಾನುವಾರ ಗಣೇಶನ ವಿಸರ್ಜನೆ ವೇಳೆ ನಡೆದಿದ್ದು, ತಡವಾಗಿ ಬೆಳಕಿಗೆ ಬೆಂದಿದೆ. ಆರ್.ಟಿ ನಗರದದಲ್ಲಿ ಗಣೇಶನನ್ನು ಕೂರಿಸಲು ಪೋಲೀಸರ ಅನುಮತಿಯನ್ನು ಕೇಳಿದ್ದಾರೆ. ಆದರೆ ಪೊಲೀಸರು ಇದಕ್ಕೆ ಒಪ್ಪದೆ ನಿರಾಕರಿಸಿದ್ದರು. ಇದನ್ನೂ ಓದಿ: ಗಣಪತಿ ವಿಸರ್ಜನೆ ವೇಳೆ ಎಸ್‍ಐರನ್ನು ಹೊತ್ತು ಕುಣಿದ ವಿಡಿಯೋ ವೈರಲ್

    ಪೊಲೀಸರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೊಡದಿದ್ದರೂ ಆರ್.ಟಿ.ನಗರ ಪೋಸ್ಟ್ ಆಫೀಸ್ ಮುಂಭಾಗದ ರಸ್ತೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿತ್ತು. ಭಾನುವಾರ ಸಂಜೆ ಗಣೇಶನ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಪಟಾಕಿ ಮತ್ತು ಡಿಜೆಯನ್ನು ಕೂಡ ಏರ್ಪಡಿಸಲಾಗಿತ್ತು.

    ಪೊಲೀಸರು ಬಂದು ಪಟಾಕಿ ಹೊಡೆಯದೆ ಗಣೇಶ ವಿಸರ್ಜನೆ ಮಾಡಿ ಎಂದು ಸೂಚಿಸಿದ್ದಾರೆ. ಆದ್ರೆ ಅವರ ಮಾತನ್ನು ಲೆಕ್ಕಿಸದೆ ಹುಡುಗರ ಗುಂಪು ಪಟಾಕಿಯನ್ನು ಸಿಡಿಸಿದ್ದಾರೆ. ಇದೇ ವೇಳೆ ಅಲ್ಲಿಗೆ ಆಗಮಿಸಿದ್ದ ಎಎಸ್‍ಐ ನಾರಾಯಣಪ್ಪ ಅವರ ಬಲಗಣ್ಣಿಗೆ ಪಟಾಕಿ ಕಿಡಿ ತಗುಲಿ ಗಂಭೀರವಾಗಿ ಗಾಯವಾಗಿದೆ. ನಂತರ ಸಹ ಪೊಲೀಸರು ತಕ್ಷಣವೇ ನಾರಾಯಣಪ್ಪನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

    ಕಣ್ಣಿಗೆ ಬಲವಾಗಿ ಗಾಯವಾಗಿದ್ದರಿಂದ ಕಣ್ಣನ್ನು ಕಳೆದುಕೊಂಡಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಬಳಿಕ ಅವರನ್ನು ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಸಹ ಪೊಲೀಸರು ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಇದೀಗ ನಾರಾಯಣಪ್ಪ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರು 18 ದಿನಗಳ ಬಳಿಕ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ ಅಂತ ತಿಳಿದುಬಂದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅತಿಯಾದ ವಯಾಗ್ರ ಸೇವಿಸಿ ದೃಷ್ಟಿ ಹೋಯ್ತು!

    ಅತಿಯಾದ ವಯಾಗ್ರ ಸೇವಿಸಿ ದೃಷ್ಟಿ ಹೋಯ್ತು!

    ನವದೆಹಲಿ: ಎಲ್ಲದಕ್ಕೂ ಒಂದು ಮಿತಿಯಿರುತ್ತದೆ. ಅದರ ವ್ಯಾಪ್ತಿಯನ್ನು ದಾಟಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಇದಕ್ಕೆ ಉದಾರಹಣೆ ಎಂಬಂತೆ ವ್ಯಕ್ತಿಯೊಬ್ಬರು ಲೈಂಗಿಕ ತೃಪ್ತಿಯಾಗಿ ಹೆಚ್ಚು ವಯಾಗ್ರ ಸೇವಿಸಿ, ದೃಷ್ಟಿ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.

    ಹೌದು, ವ್ಯಕ್ತಿಯೊಬ್ಬರು ಆನ್‍ಲೈನ್ ಮೂಲಕ ವಯಾಗ್ರ ಖರೀದಿಸಿದ್ದು, ನಿತ್ಯವೂ 50 ಗ್ರಾಂ ಗಿಂತ ಹೆಚ್ಚಿನ ಪ್ರಮಾಣದಲ್ಲಿ ವಯಾಗ್ರಾ ಸೇವಿಸಿದ್ದಾರೆ. ಹೀಗಾಗಿ ಅವರ ಎರಡೂ ಕಣ್ಣುಗಳು ಕೆಂಪಾಗಿ ದೃಷ್ಟಿ ದೋಷಕ್ಕೆ ತುತ್ತಾಗಿದ್ದಾರೆ. ಅವರ ಮುಂದಿರುವ ವ್ಯಕ್ತಿ ಹಾಗೂ ವಸ್ತುಗಳು ಮಂಜು ಮಂಜಾಗಿ ಕಾಣಿಸಲು ಪ್ರಾರಂಭಿಸಿವೆ. ತಮಗೆ ಎದುರಾದ ವಿಚಿತ್ರ ಸಮಸ್ಯೆಯಿಂದ ಭಯಗೊಂಡ ಅವರು ವೈದ್ಯರನ್ನು ಭೇಟಿಯಾಗಿದ್ದಾರೆ. ಇದನ್ನೂ ಓದಿ: ಕಾಂಡೋಮ್ ಬಳಸಿ ಆಸ್ಪತ್ರೆ ಸೇರಿದ! ವೈದ್ಯರು ಹೇಳಿದ್ದು ಏನು?

    ತಪಾಸಣೆಗೆ ಒಳಪಡಿಸಿ ನಂತರ ರೋಗಿಯನ್ನು ವಿಚಾರಿಸಿದ ವೈದ್ಯರು, ಅತಿಯಾದ ವಯಾಗ್ರ ಸೇವನೆ ಮಾಡಿದ್ದೆ ಈ ಸಮಸ್ಯೆಗೆ ಕಾರಣ ಎಂದು ಖಚಿತಪಡಿಸಿದ್ದಾರೆ. ಕೆಲವು ಪುರುಷರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಶಿಶ್ನ ನಿಮಿರುವಿಕೆ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದಾಗಿ ತಮ್ಮ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ವಯಾಗ್ರ ಸೇವಿಸುತ್ತಾರೆ. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ

    ಕೆಲವರು ತಮಗಿರುವ ಲೈಂಗಿಕ ಕ್ರಿಯೆಯ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅವರು ವೈದ್ಯರ ಸಲಹೆ ಪಡೆಯದೇ ಔಷಧಗಳನ್ನು ತೆಗೆದುಕೊಂಡ ಪರಿಣಾಮ ದೃಷ್ಟಿ ದೋಷದಂತಹ ಸಮಸ್ಯೆಗಳು ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋ ‘ಕಾಂಡೋಮ್ ಚಾಲೆಂಜ್’ ಟ್ರೈ ಮಾಡ್ಬೇಡಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವ್ಯಕ್ತಿ ಕಣ್ಣಿನಿಂದ 15 ಸೆ.ಮೀ ಉದ್ದದ ಹುಳ ತೆಗೆದ ವೈದ್ಯರು

    ವ್ಯಕ್ತಿ ಕಣ್ಣಿನಿಂದ 15 ಸೆ.ಮೀ ಉದ್ದದ ಹುಳ ತೆಗೆದ ವೈದ್ಯರು

    ಉಡುಪಿ: 60 ವರ್ಷದ ವ್ಯಕ್ತಿಯೊಬ್ಬರ ಕಣ್ಣಿನಿಂದ 15 ಸೆ.ಮೀ ಉದ್ದದ ಹುಳವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರಗೆ ತೆಗೆಯಲಾಗಿದೆ.

    ಹಲವು ದಿನಗಳಿಂದ ಬಲಗಣ್ಣಿನ ನೋವಿನಿಂದ ಬಳಲುತ್ತಿದ್ದ ವ್ಯಕ್ತಿ, ಕುಂದಾಪುರದ ನ್ಯೂ ಮೆಡಿಕಲ್ ಸೆಂಟರಿನ ನೇತ್ರ ತಜ್ಞರಾದ ಡಾ. ಶ್ರೀಕಾಂತ್ ಶೆಟ್ಟಿಯವರನ್ನು ಸಂಪರ್ಕಿಸಿದ್ದಾರೆ. ವೈದ್ಯರು ಕಣ್ಣಿನ ತಪಾಸಣೆ ಮಾಡಿದಾಗ ಬಲಗಣ್ಣಿನ ಒಳಗೆ ಜೀವಂತವಾಗಿ ಹರಿದಾಡುತ್ತಿರುವ ಹುಳವನ್ನು ಪತ್ತೆಹಚ್ಚಿದ್ದಾರೆ.

    ಕಣ್ಣಿನ ಒಳಗಿರುವ ಹುಳವನ್ನು ಔಷಧಿಗಳ ಮೂಲಕ ಸಾಯಿಸಿ ತೆಗೆದರೆ ಕಣ್ಣಿನ ಒಳಗೆ ಊತ ಬಂದು ದೃಷ್ಟಿಗೆ ತೊಂದರೆ ಆಗುವ ಸಾಧ್ಯತೆ ಇತ್ತು. ಆ ಹುಳವನ್ನು ಒಂದು ಬದಿಗೆ ಬರುವಂತೆ ಮಾಡಿ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಜೀವಂತ ಹುಳವನ್ನು ತೆಗೆದಿದ್ದಾರೆ.

    ಈ ಹುಳು ವುಚೆರಿಯಾ ಬ್ಯಾನ್ಕ್ರಾಫ್ಟಿ ಎನ್ನುವ ಜಾತಿಯದಾಗಿದ್ದು, ಇದು ಸೊಳ್ಳೆಗಳ ಮೂಲಕ ಹರಡುತ್ತದೆ ಎನ್ನಲಾಗಿದೆ. ಸೊಳ್ಳೆಗಳು ಕಚ್ಚಿದಾಗ ಇದರ ಲಾರ್ವಾಗಳು ರಕ್ತದಲ್ಲಿ ಸೇರಿ ಅಲ್ಲೇ ಬೆಳೆದು ಮೊಟ್ಟೆಯನ್ನಿಡುತ್ತವೆ. ಅಪರೂಪಕ್ಕೆ ಈ ಮೊಟ್ಟೆಗಳು ಕಣ್ಣಿನಲ್ಲಿ ಸೇರಿ ಅಲ್ಲೇ ಬೆಳೆದು ಹುಳುವಾಗಿ ಪರಿವರ್ತನೆ ಆಗುವ ಸಾಧ್ಯತೆಗಳಿವೆ. ಹುಳ ತೆಗೆದ ನಂತರ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸ್ತಿಗಾಗಿ ಬೆರಳುಗಳಿಂದ ತಂದೆಯ ಕಣ್ಣುಗುಡ್ಡೆಯನ್ನೇ ಕಿತ್ತ ಪಾಪಿ ಮಗ!

    ಆಸ್ತಿಗಾಗಿ ಬೆರಳುಗಳಿಂದ ತಂದೆಯ ಕಣ್ಣುಗುಡ್ಡೆಯನ್ನೇ ಕಿತ್ತ ಪಾಪಿ ಮಗ!

    ಬೆಂಗಳೂರು: ಆಸ್ತಿ ಬರೆದುಕೊಡಲಿಲ್ಲ ಅಂತಾ ಪಾಪಿ ಮಗನೊಬ್ಬ ತಂದೆಯ ಕಣ್ಣು ಕಿತ್ತು ಹಾಕಿರುವ ಪೈಶಾಚಿಕ ಕೃತ್ಯ ಜೆ.ಪಿ.ನಗರದ ಶಾಕಾಂಬರಿ ಬಡವಾಣೆಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಸುಮಾರು 12.30ಕ್ಕೆ ಈ ಭಯಾನಕ ಘಟನೆ ನಡೆದಿದೆ.

    ಚೇತನ್ ಎಂಬಾತ ತನ್ನ ಬೆರಳುಗಳಿಂದಲೇ 65 ವರ್ಷದ ತಂದೆ ಪರಮೇಶ್ ಅವರ ಕಣ್ಣು ಕಿತ್ತು ಹಾಕಿದ್ದಾನೆ. ವಿಧಾನಸೌಧದ ಮುಖ್ಯ ಕಾರ್ಯದರ್ಶಿಗಳ ಕಚೇರಿಯ ನಿವೃತ್ತ ನೌಕರರಾಗಿರುವ ಪರಮೇಶ್ ಶಾಕಾಂಬರಿ ನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ನಿವೃತ್ತಿ ಜೀವನ ನಡೆಸುತ್ತಿದ್ದರು. ಎರಡನೇ ಮಗನಾಗಿರುವ ಚೇತನ್ ಆಸ್ತಿಯಲ್ಲಿ ಪಾಲು ಬೇಕೆಂದು ತಂದೆಯೊಂದಿಗೆ ಜಗಳ ಮಾಡಿದ್ದಾನೆ. ಈ ವೇಳೆ ತನ್ನ ಬೆರಳುಗಳ ಉಗುರಿನ ಸಹಾಯದಿಂದ ಕಣ್ಣು ಗುಡ್ಡೆಯನ್ನು ಕಿತ್ತು ಬಿಸಾಕಿದ್ದಾನೆ. ಮತ್ತೊಂದು ಕಣ್ಣು ಸಂಪೂರ್ಣ ರಕ್ತಮಯವಾಗಿದೆ.

    ಘಟನೆ ಬಳಿಕ ಭಯಬೀತನಾದ ಚೇತನ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಚೇತನ್ ನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಮಗನ ಹಲ್ಲೆಯಿಂದ ಗಾಯಗೊಂಡಿದ್ದ ಪರಮೇಶ್ ಅವರನ್ನು ಜೆ.ಪಿ.ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಮೇಶ್ ರನ್ನು ನೋಡಿದ ವೈದ್ಯರು ಎರಡು ಕಣ್ಣುಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.

    ಚೇತನ್ ಓರ್ವ ಡ್ರಗ್ ಅಡಿಕ್ಟ್ ಆಗಿದ್ದು, ಮನೆಯಲ್ಲಿ ಹಣಕ್ಕಾಗಿ ಪೋಷಕರನ್ನು ಪದೇ ಪದೇ ಪೀಡಿಸುತ್ತಿದ್ದನಂತೆ. ಪೋಷಕರು ಹಣ ಕೊಡದೇ ಇದ್ದಾಗ ಆಸ್ತಿಯಲ್ಲಿ ಪಾಲು ಬೇಕೆಂದು ಹಠ ಹಿಡಿದಿದ್ದಾನೆ. ಒಂದು ವೇಳೆ ಆಸ್ತಿಯಲ್ಲಿ ಭಾಗ ನೀಡಿದ್ರೆ ಹಾಳು ಮಾಡ್ತಾನೆ ಅಂತಾ ಪೋಷಕರು ಪಾಲು ನೀಡಿರಲಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಸ್ಟಂಟ್ ಮಾಡಲು ಹೋಗಿ ಶಾಶ್ವತವಾಗಿ ಕಣ್ಣಿಗೆ ಗಾಯಮಾಡಿಕೊಂಡ ಜಾಕ್ವೇಲಿನ್!

    ಮುಂಬೈ: ಬಾಲಿವುಡ್ ಬೆಡಗಿ ಜಾಕ್ವೇಲಿನ್ ಫರ್ನಾಂಡಿಸ್ ರೇಸ್- 3 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈಗ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ರೇಸ್-3 ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರು ಸಾಕಷ್ಟು ಆ್ಯಕ್ಷನ್ ಸ್ಟಂಟ್ ಮಾಡಿದ್ದಾರೆ. ಹೀಗೆ ಮಾರ್ಚ್ ತಿಂಗಳಲ್ಲಿ ಜಾಕ್ವೇಲಿನ್ ಚಿತ್ರಕ್ಕಾಗಿ ಸಾಹಸ ದೃಶ್ಯ ಮಾಡುವಾಗ ತಮ್ಮ ಕಣ್ಣಿಗೆ ಗಾಯ ಮಾಡಿಕೊಂಡಿದ್ದರು. ಆದರೆ ಈ ಗಾಯ ಈಗ ಶಾಶ್ವತವಾಗಿರುತ್ತದೆ ಎಂದು ಹೇಳುವ ಮೂಲಕ ಜಾಕ್ವೇಲಿನ್ ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

    ಜಾಕ್ವೇಲಿನ್ ತಮ್ಮ ಕಣ್ಣಿನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ “ಈ ಗಾಯ ಈಗ ಶಾಶ್ವತವಾಗಿ ಇರುತ್ತದೆ. ನನ್ನ ಐರಿಸ್ ಎಂದಿಗೂ ವೃತ್ತಾಕಾರ ಆಗುವುದಿಲ್ಲ. ಆದರೆ ನನಗೆ ಸರಿಯಾಗಿ ಕಣ್ಣು ಕಾಣಿಸುತ್ತಿರುವುದು ಸಂತೋಷವಾಗಿದೆ. ಇದು ರೇಸ್-3 ಚಿತ್ರದ ನೆನಪು” ಎಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

    ರೇಸ್-3 ಚಿತ್ರ ಅಬುಧಾಬಿಯಲ್ಲಿ ಚಿತ್ರೀಕರಿಸುವಾಗ ಜಾಕ್ವೇಲಿನ್ ಸ್ಕ್ವಾಶ್ ಆಡುತ್ತಿದ್ದರು. ಆ ವೇಳೆ ತಮ್ಮ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಆಗ ತಕ್ಷಣ ಜಾಕ್ವೇಲಿನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದ್ದರು.

    ಜಾಕ್ವೇಲಿನ್ ಅವರ ಕಣ್ಣಿಗೆ ಗಾಯವಾಗಿದೆ. ಇದು ಒಂದು ಸಾಮಾನ್ಯವಾದ ಗಾಯ. ಸ್ಕ್ವಾಶ್ ಆಡುವಾಗ ಜಾಕ್ವೇಲಿನ್ ಕಣ್ಣಿನ ಮೇಲ್ಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಈಗ ಜಾಕ್ವೇಲಿನ್ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ರೇಸ್-3 ಚಿತ್ರದ ನಿರ್ಮಾಪಕ ರಮೇಶ್ ತೌರಾಣಿ ಹೇಳಿದ್ದರು.

    ರೇಸ್-3 ಚಿತ್ರದಲ್ಲಿ ಸಲ್ಮಾನ್ ಖಾನ್, ಬಾಬಿ ಡಿಯೋಲ್, ಅನಿಲ್ ಕಪೂರ್, ಡೈಸಿ ಷಾ ಹಾಗೂ ಸಾಕಿಬ್ ಸಲೀಮ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಜೂನ್ 15ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

  • ಕಣ್ಣಿಗೆ ರಾಸಾಯನಿಕ ಎರಚಿ 20 ಲಕ್ಷ ರೂ., ಕಾರು ದರೋಡೆ- ಧರ್ಮದರ್ಶಿ ಆಸ್ಪತ್ರೆಗೆ ದಾಖಲು

    ಕಣ್ಣಿಗೆ ರಾಸಾಯನಿಕ ಎರಚಿ 20 ಲಕ್ಷ ರೂ., ಕಾರು ದರೋಡೆ- ಧರ್ಮದರ್ಶಿ ಆಸ್ಪತ್ರೆಗೆ ದಾಖಲು

    ತುಮಕೂರು: ಶನಿಮಹಾತ್ಮ ದೇವಾಲಯದ ಧರ್ಮದರ್ಶಿ ಧನಂಜಯ್ಯ ಸ್ವಾಮೀಜಿ ಕಣ್ಣಿಗೆ ರಾಸಾಯನಿಕ ಎರಚಿ ದರೋಡೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.

    ಈ ಘಟನೆ ತುಮಕೂರು ಜಿಲ್ಲೆಯ ತುಮಕೂರಿನ ಕುಣಿಗಲ್ ತಾಲೂಕಿನ ಬಿದನಗೆರೆಯಲ್ಲಿ ನಡೆದಿದೆ. ದೇವಾಲಯದ ಧರ್ಮದರ್ಶಿ ಧನಂಜಯ್ಯ ಸ್ವಾಮೀಜಿ ಪೂಜೆ ಮುಗಿಸಿ ವಾಪಸ್ ಆಗುತ್ತಿದ್ರು. ಈ ವೇಳೆ ಭಕ್ತರ ಸೋಗಿನಲ್ಲಿ ಬಂದ 6 ಮಂದಿ ದರೋಡೆಕೋರರು ಕಣ್ಣಿಗೆ ಕೆಮಿಕಲ್ ಸ್ಪ್ರೇ ಮಾಡಿ, 20 ಲಕ್ಷ ನಗದು ಮತ್ತು ಎಸ್‍ಯುವಿ ಕಾರ್ ದರೋಡೆ ಮಾಡಿದ್ದಾರೆ.

    ಧನಂಜಯ್ಯ ಸ್ವಾಮಿಜಿ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ದೃಷ್ಟಿ ಕಳೆದುಕೊಂಡ ಬಾಲಕ ಪ್ರಕರಣ- ಸ್ಕೇಲ್ ನಿಂದ ಹೊಡೆದ ಮುಖ್ಯ ಶಿಕ್ಷಕ ಅಮಾನತು

    ದೃಷ್ಟಿ ಕಳೆದುಕೊಂಡ ಬಾಲಕ ಪ್ರಕರಣ- ಸ್ಕೇಲ್ ನಿಂದ ಹೊಡೆದ ಮುಖ್ಯ ಶಿಕ್ಷಕ ಅಮಾನತು

    ಚಾಮರಾಜನಗರ: ಮುಖ್ಯ ಶಿಕ್ಷಕ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕನ್ನು ಅಮಾನತು ಮಾಡಿರುವ ಘಟನೆ ಚಾಮರಾಜನಗರದಲ್ಲಿ ಜರುಗಿದೆ.

    ಚಾಮರಾಜನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯ ಮುಖ್ಯ ಶಿಕ್ಷಕ ಯುಸೇಫ್, ಗಿರಿಮಲ್ಲೇಶ್ ಎಂಬ ವಿದ್ಯಾರ್ಥಿಗೆ ಸ್ಕೇಲ್‍ನಿಂದ ಹೊಡೆದಿರುವ ಪ್ರಕರಣ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಶಾಲೆಯ ಆಡಳಿತ ಮಂಡಳಿ ಮುಖ್ಯಶಿಕ್ಷಕನನ್ನು ಅಮಾನತು ಮಾಡಿದೆ. ಸ್ಕೇಲ್ ನಿಂದ ಹೊಡೆದ ಪರಿಣಾಮ ವಿದ್ಯಾರ್ಥಿ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.

    ಏನಿದು ಘಟನೆ?;
    ಜನವರಿಯಲ್ಲಿ ಶಾಲೆಯ ಸಮಯದಲ್ಲಿ ಗಿರಿಮಲ್ಲೇಶ್ ಗಲಾಟೆ ಮಾಡುತ್ತಿದ್ದ ಎಂದು ಶಿಕ್ಷಕ ಸ್ಕೇಲ್ ಮೂಲಕ ಹೊಡೆದಿದ್ದಾನೆ. ಈ ವೇಳೆ ವಿದ್ಯಾರ್ಥಿ ಕಣ್ಣಿಗೆ ಸ್ಕೇಲ್ ಬಿದ್ದ ಕಾರಣ ವಿದ್ಯಾರ್ಥಿಯ ಕಣ್ಣಿಗೆ ಪೆಟ್ಟು ಬಿದ್ದಿದೆ. ಇದಾದ ನಂತರ ವಿದ್ಯಾರ್ಥಿ ತನಗೆ ಯಾವುದೇ ನೋವಾಗಿಲ್ಲ ಎಂದು ತಿಳಿದುಕೊಂಡಿದ್ದಾನೆ. ಇದೀಗ ವಿದ್ಯಾರ್ಥಿಗೆ ಕಣ್ಣಿನ ನೋವು ಕಾಡುತ್ತಿದ್ದ ಕಾರಣ ತಂದೆ ಸೋಮೇಶ್ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. ಹೀಗಾಗಿ ಈತನ ದೃಷ್ಟಿ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ನಂತರ ಗಿರಿಮಲ್ಲೇಶ್‍ನನ್ನು ಪೋಷಕರು ವಿಚಾರಿಸಿದಾಗ ಐದು ತಿಂಗಳ ಹಿಂದೆ ಶಾಲೆಯಲ್ಲಿ ಹೀಗೆ ಆಗಿದೆ ಎಂದು ಹೇಳಿದ್ದಾನೆ. ಈ ಬಗ್ಗೆ ಗಿರಿಮಲ್ಲೇಶ್ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಇದ್ದನ್ನು ಒಪ್ಪಿಕೊಳ್ಳದ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕ ಯುಸೇಫ್‍ರನ್ನು 10 ದಿನಗಳ ರಜೆ ಮೇಲೆ ಕಳುಹಿಸಿತ್ತು. ಆದರೆ ಇದೀಗ ಪ್ರಕರಣ ವ್ಯಾಪಕ ಚರ್ಚೆ ಆದ ಕಾರಣ ಶಾಲೆಯ ಆಡಳಿತ ಮಂಡಳಿ ಯುಸೇಫ್ ನನ್ನು ಅಮಾನತುಗೊಳಿಸಿದೆ. ಸದ್ಯ ಗಿರಿಮಲ್ಲೇಶ್ ತಮಿಳುನಾಡಿನ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.