Tag: ಕಣ್ಣು

  • ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷ – ಪವಾಡ ವೀಕ್ಷಿಸಲು ದೇವಾಲಯದತ್ತ ಸೇರಿದ ಜನರ ದಂಡು

    ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷ – ಪವಾಡ ವೀಕ್ಷಿಸಲು ದೇವಾಲಯದತ್ತ ಸೇರಿದ ಜನರ ದಂಡು

    ಬೆಳಗಾವಿ: ಕಲ್ಲಿನ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂಬ ವದಂತಿ ಬೆಳಗಾವಿ ಜಿಲ್ಲೆಯ ಗೋಕಾಕ್‍ನಲ್ಲಿ ಹರಿದಾಡುತ್ತಿದೆ. ಶಿವಲಿಂಗ ಮೂರ್ತಿಯನ್ನು ನೋಡಲು ದೇವಾಲಯದತ್ತ ಭಕ್ತಸಾಗರವೇ ಹರಿದುಬರುತ್ತಿದೆ.

    ಬೆಳಗಾವಿ ಜಿಲ್ಲೆ ಗೋಕಾಕ್‍ನ ಬಣಗಾರ ಗಲ್ಲಿಯಲ್ಲಿನ ಶಂಕರಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ದೇವಾಲಯದ ಅರ್ಚಕರು ಹೇಳುತ್ತಿದ್ದಾರೆ. ಅದನ್ನು ನೋಡಲು ಭಕ್ತರು ತಂಡೋಪತಂಡವಾಗಿ ಶಂಕರಲಿಂಗ ದೇವಾಲಯಕ್ಕೆ ಬರುತ್ತಿದ್ದಾರೆ.

    ಶಿವಲಿಂಗ ವೀಕ್ಷಿಸಿದ ಜನರು ಇಂದು ರಾತ್ರಿ ಸಂಕಷ್ಠಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ದೇವಾಲಯದ ಆರ್ಚಕರು ಈ ಹಿಂದೆ 2004 ರಲ್ಲಿಯೂ ಇದೇ ರೀತಿ ಶಿವಲಿಂಗದಲ್ಲಿ ಕಣ್ಣುಗಳು ಪ್ರತ್ಯಕ್ಷವಾಗಿದ್ದವು. ಇದೀಗ ಪುನಃ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಪ್ರತ್ಯಕ್ಷವಾಗಿದೆ. ಇದು ಶುಭ ಸಂದೇಶವಾಗಿದ್ದು ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತದೆ ಎಂದು ಹೇಳುತ್ತಿದ್ದಾರೆ.

    ಈ ಹಿಂದೆ ಸಾಯಿಬಾಬಾ ಫೋಟೋದಲ್ಲಿ ವಿಭೂತಿ ಉದುರಿತ್ತು, ಗಣೇಶ ಹಾಲು ಕುಡಿದಿತ್ತು, ಹೀಗೆ ಹಲವಾರು ರೀತಿಯ ವದಂತಿಗಳು ಹಬ್ಬಿದ್ದವು. ಇದೀಗ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ಜನ ದಂಡೇ ದೇವಾಲಯದತ್ತಾ ಹರಿದುಬರುತ್ತಿದೆ.

  • ಕೊರೊನಾ ಸೋಂಕಿತರ ಮೇಲೆ ಈಗ ಬ್ಲ್ಯಾಕ್‌ ಫಂಗಸ್‌ ದಾಳಿ

    ಕೊರೊನಾ ಸೋಂಕಿತರ ಮೇಲೆ ಈಗ ಬ್ಲ್ಯಾಕ್‌ ಫಂಗಸ್‌ ದಾಳಿ

    – ಕೊರೊನಾದಂತೆ ಇದು ಸಾಂಕ್ರಾಮಿಕ ಸೋಂಕು ಅಲ್ಲ
    – 60ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು, 13 ಜನ ಸಾವು
    – ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯ

    ನವದೆಹಲಿ: ಜನವರಿ, ಫೆಬ್ರವರಿಯಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಬಹುದು ಎಂಬ ಎಚ್ಚರಿಕೆಯ ಬೆನ್ನಲ್ಲೇ ಈಗ ಕೋವಿಡ್‌ ಸೋಂಕಿತರಿಗೆ ಅಪರೂಪದ ಬ್ಲ್ಯಾಕ್‌ ಫಂಗಸ್‌ (ಶಿಲೀಂಧ್ರ) ಹೆಸರಿನ ಮತ್ತೊಂದು ಸೋಂಕು ದಾಳಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ತನ್ನಲ್ಲಿ ದಾಖಲಾದ ಕೆಲ ಕೋವಿಡ್‌ 19 ರೋಗಿಗಳು ಈ ಸೋಂಕಿಗೆ ತುತ್ತಾಗಿದ್ದಾರೆ ಎಂದು ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಯಲ್ಲಿ ವರದಿ ಮಾಡಿದ ಬಳಿಕ ಇತರ ಹಲವಾರು ನಗರಗಳ ಆಸ್ಪತ್ರೆಗಳು ವರದಿ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ. ಮುಂಬೈ, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ 60ಕ್ಕೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

    ಮ್ಯುಕೋರ್‌ಮೈಕೋಸಿಸ್‌ ಎಂದು ಕರೆಯಲಾಗುವ ಅಪರೂಪದ ಸೋಂಕು ಹೊಸದಲ್ಲ. ಆದರೆ ಕೋವಿಡ್‌ 19 ಸಂದರ್ಭದಲ್ಲೇ ಕಾಣಿಸಿಕೊಂಡಿರುವುದರ ಜೊತೆ ಕೊರೊನಾ ಸೋಂಕಿತರು ಮತ್ತು ಸೋಂಕಿನಿಂದ ಗುಣಮುಖರಾದವರ ಮೇಲೆ ಹೆಚ್ಚು ದಾಳಿ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಸಾಂಕ್ರಾಮಿಕ ರೋಗವಲ್ಲ:
    ಇದು ಸಾಂಕ್ರಾಮಿಕ ರೋಗವಲ್ಲ. ಇದು ಮಾನವರಿಂದ ಮಾನವರಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಸೋಂಕಿಗೆ ಅಹಮದಾಬಾದ್‌ನ ವಿವಿಧ ಆಸ್ಪತ್ರೆಗಳಲ್ಲಿ 9 ಮಂದಿ ಮತ್ತು ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.  ಈ ರೋಗಕ್ಕೆ ತುತ್ತಾದವರು ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಿರುವುದು ಖಚಿತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಹೇಗೆ ಬರುತ್ತದೆ?
    ಈ ಸೋಂಕು ಹೇಗೆ ಬೇಕಾದರೂ ದೇಹವನ್ನು ಪ್ರವೇಶಿಸಬಹುದು. ಗಾಯಗೊಂಡರೆ, ಸುಟ್ಟರೂ ಚರ್ಮದ ಮೂಲಕ ಸೋಂಕು ದೇಹವನ್ನು ಪ್ರವೇಶಿಸುತ್ತದೆ. ಮೂಗಿನ ಮೂಲಕ ಶ್ವಾಸಕೋಶ ಪ್ರವೇಶಿಸುವ ಸೋಂಕು, ಬಳಿಕ ಇಡೀ ದೇಹಕ್ಕೆ ಆವರಿಸಿಕೊಳ್ಳುತ್ತದೆ.

    ಇದು ಮೂಗಿನ ಮೂಲಕ ಪ್ರವೇಶಿಸಿ ನಂತರ ಕಣ್ಣುಗಳಿಗೆ ಹರಡುತ್ತದೆ. ಇದರಿಂದಾಗಿ ಕುರುಡುತನಕ್ಕೆ ಕಾರಣವಾಗಬಹುದು. ಇದು ಮೆದುಳಿಗೆ ಹರಡಿದರೆ ಮೆನಿಂಜೈಟಿಸ್‌ಗೆ ಕಾರಣವಾಗಬಹುದು. ಈ ಸೋಂಕು ಯಾರಿಗೆ ಬೇಕಾದರೂ ಹಬ್ಬುವ ಸಾಧ್ಯತೆ ಇದೆಯಾದರೂ, ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಇದರ ಪ್ರಭಾವ ಹೆಚ್ಚು ಎಂಬ ಅಂಶ ದೃಢಪಟ್ಟಿದೆ.

    ಲಕ್ಷಣ ಏನು?
    ವಿಪರೀತ ತಲೆನೋವು, ಜ್ವರ, ಕಫ, ಎದೆನೋವು, ಉಸಿರಾಟದ ತೊಂದರೆ, ಸಿಂಬಳ ಕಪ್ಪು ಬಣ್ಣಕ್ಕೆ ತಿರುಗುವುದು, ಮೂಗು ಕಟ್ಟಿಕೊಳ್ಳುವುದು, ಕಣ್ಣಿನ ಊತ, ಮುಖದ ಒಂದು ಭಾಗ ಊತ, ಮೂಗು ಕಟ್ಟಿಕೊಳ್ಳುವುದು ಈ ಸೋಂಕಿನ ಲಕ್ಷಣವಾಗಿದೆ.

    ಪಾರಾಗೋದು ಹೇಗೆ?
    ಸಾಮಾಜಿಕ ಅಂತರ ಕಾಪಾಡುವುದು, ಆಗಾಗ ಕೈತೊಳೆದುಕೊಳ್ಳುವುದು, ಮಾಸ್ಕ್‌ ಧರಿಸುವ ಮೂಲಕ ರಕ್ಷಣೆ ಪಡೆಯಬಹುದು. ವೈದ್ಯರ ಬಳಿಗೆ ತೆರಳಿ ಆ್ಯಂಟಿ ಫಂಗಲ್‌ ಚಿಕಿತ್ಸೆ ಪಡೆದುಕೊಂಡರೆ ಪಾರಾಗಬಹುದು.

    ಆರಂಭದಲ್ಲೇ ಸೋಂಕು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದರೆ ಕಾಯಿಲೆಯಿಂದ ಪಾರಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಸೋಂಕಿಗೆ ತುತ್ತಾದವರಲ್ಲಿ ಶೇ.54ರಷ್ಟುಜನರು ಸಾವನ್ನಪ್ಪುವ ಸಾಧ್ಯತೆ ಇದೆ  ಎಂದು 2005ರ ವರದಿ ಹೇಳಿದೆ.

  • ಕಣ್ಣುಗಳನ್ನು ಕಿತ್ತು, ಗಂಟಲು ಸೀಳಿ ಲಾರಿ ಚಾಲಕನನ್ನು ಫ್ಯಾನಿಗೆ ನೇತಾಕಿದ ಕ್ರೂರಿ

    ಕಣ್ಣುಗಳನ್ನು ಕಿತ್ತು, ಗಂಟಲು ಸೀಳಿ ಲಾರಿ ಚಾಲಕನನ್ನು ಫ್ಯಾನಿಗೆ ನೇತಾಕಿದ ಕ್ರೂರಿ

    – ಚಾಲಕನ ಪತ್ನಿ ಜೊತೆ ಕೊಲೆಗಾರನ ಅಕ್ರಮ ಸಂಬಂಧದ ಶಂಕೆ
    – ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ

    ಭೋಪಾಲ್: ಲಾರಿ ಚಾಲಕನೋರ್ವನ ಕತ್ತು ಸೀಳಿ, ಕಣ್ಣುಗಳನ್ನು ಕಿತ್ತು ಕೊಲೆಗೈದು, ಆತ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಆತನನ್ನು ಫ್ಯಾನಿಗೆ ನೇತಾಕಿದ ಕೊಲೆಗಾರ ಪರಾರಿಯಾದ ಘಟನೆ ಮಧ್ಯಪ್ರದೇಶದ ಮನಪುರ ಪಟ್ಟಣದಲ್ಲಿ ನಡೆದಿದೆ.

    ಮನಪುರದ ಸೊಂದಿಯಾ ಮೊಹಲ್ಲಾದ ನಿವಾಸಿ ಲಾರಿ ಚಾಲಕ ರವಿ(27) ಮೃತ ದುರ್ದೈವಿ. ಆರೋಪಿ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಸೊಂದಿಯಾ ಮೊಹಲ್ಲಾದ ಅಪಾರ್ಟ್‍ಮೆಂಟ್ ಒಂದರಲ್ಲಿ ರವಿ ತನ್ನ ಪತ್ನಿ ಕವಿತಾ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಶುಕ್ರವಾರ ಪತ್ನಿ ಹಾಗೂ ಮಕ್ಕಳು ಸಂಬಂಧಿಕರ ಮನೆಗೆ ತೆರೆಳಿದ್ದ ವೇಳೆ ದುಷ್ಕರ್ಮಿ ಮನೆಗೆ ನುಗ್ಗಿ ರವಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ.

    ಮೊದಲು ರವಿಯ ಕತ್ತು ಸೀಳಿ ಕೊಲೆಗೈದು, ಬಳಿಕ ಆತನ ಎರಡು ಕಣ್ಣುಗಳನ್ನೂ ಕಿತ್ತು ಆರೋಪಿ ಕ್ರೂರತೆ ಮೆರೆದಿದ್ದಾನೆ. ಅಷ್ಟೇ ಅಲ್ಲದೆ ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಬಿಂಬಿಸಲು ರವಿಯ ಮೃತದೇಹವನ್ನು ಫ್ಯಾನಿಗೆ ನೇತಾಕಿ, ನೇಣಿಗೆ ಶರಣಾಗಿರುವ ರೀತಿ ಕಾಣುವಂತೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಇತ್ತ ಅಕ್ಕಪಕ್ಕದ ಮನೆಯವರು ರವಿ ಕುಟುಂಬವೆಲ್ಲ ಸಂಬಂಧಿಕರ ಮನೆಗೆ ತೆರಳಿದ್ದಾರೆ, ಮನೆಯಲ್ಲಿ ಯಾರೂ ಇಲ್ಲ ಎಂದು ಭಾವಿಸಿದ್ದರು. ಆದರೆ ಘಟನೆ ನಡೆದ ಮರುದಿನ ರವಿ ಮನೆ ಬಳಿ ಹೋಗುತ್ತಿದ್ದ ನೆರೆ ಮನೆಯವರು ಅನುಮಾನ ಬಂದು ಕಿಟಕಿಯಲ್ಲಿ ನೋಡಿದಾಗ ರವಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ತಕ್ಷಣ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಅಲ್ಲದೇ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ರವಿ ಪತ್ನಿ ಜೊತೆ ಕೊಲೆಗಾರನ ಅಕ್ರಮ ಸಂಬಂಧವಿರಬಹುದು ಎಂದು ಶಂಕಿಸಿದ್ದಾರೆ. ಜೊತೆಗೆ ಹಣ ಅಥವಾ ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.

  • ಒಂದೇ ಕಣ್ಬಿಟ್ಟ ಆಂಜನೇಯ ಮೂರ್ತಿ- ಭಜರಂಗಿಯನ್ನು ನೋಡಲು ಮುಗಿಬಿದ್ದ ಭಕ್ತರು

    ಒಂದೇ ಕಣ್ಬಿಟ್ಟ ಆಂಜನೇಯ ಮೂರ್ತಿ- ಭಜರಂಗಿಯನ್ನು ನೋಡಲು ಮುಗಿಬಿದ್ದ ಭಕ್ತರು

    ಬೆಳಗಾವಿ: ಆಂಜನೇಯ ಮೂರ್ತಿ ಒಂದೇ ಕಣ್ಣನ್ನು ತೆರೆದ ಅಚ್ಚರಿಯ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.

    ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನನ್ನು ನೇಣಿಗೇರಿಸಿದ ನಂದಗಡ ಗ್ರಾಮ ಈ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದೆ. ಒಂದೇ ಕಣ್ಣು ಬಿಟ್ಟ ಹನುಮನ ದರ್ಶನ ಪಡೆಯಲು ಭಕ್ತರು ಕಾತುರದಿಂದ ಮುಗಿಬಿದ್ದು ಸ್ಥಳಕ್ಕೆ ಬರುತ್ತಿದ್ದು, ಒಂದು ಕಣ್ಣನ್ನು ಬಿಟ್ಟಿರುವ ವಾಯುಪುತ್ರನ ಮೂರ್ತಿ ಕಂಡು ಅಚ್ಚರಿಪಟ್ಟಿದ್ದಾರೆ. ಆಂಜನೇಯ ಮೂರ್ತಿ ಒಂದೇ ಕಣ್ಣು ಬಿಟ್ಟಿರುವುದು ಶುಭ ಶಕುನವೋ? ಅಪಶಕುನವೋ ಎಂಬ ಆತಂಕ ನಂದಗಡ ಹಾಗೂ ಸುತ್ತಮುತ್ತಲಿನ ಜನತೆಯಲ್ಲಿ ಮನೆಮಾಡಿದೆ.

    ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರದ ಕೆಳಗೆ ಈ ಹನುಮನ ವಿಗ್ರಹವಿದ್ದು, ಆಂಜನೇಯ ದರ್ಶನಕ್ಕೆ ಪ್ರತಿ ಶನಿವಾರ ಜಿಲ್ಲೆಯ ಜನರು ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಭಕ್ತರು ಬರುತ್ತಾರೆ. ಹನುಮನ ದರ್ಶನ ಪಡೆದು ಪುನಿತರಾಗುತ್ತಾರೆ. ಈ ಹಿಂದೆ ಇದೇ ಆಂಜನೇಯನ ವಿಗ್ರಹ ಎರಡು ಕಣ್ಣು ಬಿಟ್ಟು ಅಚ್ಚರಿ ಮೂಡಿಸಿತ್ತು ಎಂದು ಕೆಲ ಸ್ಥಳೀಯರು ತಿಳಿಸಿದ್ದಾರೆ.

    ಅದೇನೆ ಇರಲಿ, ಆಂಜನೇಯನ ಕಲ್ಲಿನ ವಿಗ್ರಹ ಕಣ್ಣು ಬಿಟ್ಟಿರುವುದು ಅಚ್ಚರಿಯ ವಿಷಯವಾಗಿದ್ದು, ಭಕ್ತರು ಆತಂಕದಲ್ಲಿದ್ದರೂ ಕೂಡ ಆನಂಜನೇಯನ ಮಹಿಮೆ ಕಂಡು ಇದೆಂಥ ವಿಸ್ಮಯ ಎಂದು ಚರ್ಚಿಸುತ್ತಿದ್ದಾರೆ.

  • ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕ ಸಾವು

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕ ಸಾವು

    – ವೈದ್ಯ ಪೊಲೀಸರ ವಶಕ್ಕೆ

    ಬೆಂಗಳೂರು: ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಸರ ಘಟ್ಟದಲ್ಲಿ ನಡೆದಿದೆ.

    ತಮಿಳುನಾಡು ಮೂಲದ ಶಂಕರ್ ಮೃತಪಟ್ಟ ಬಾಲಕ. ಶಂಕರ್ ಗೆ ಬಲಗಣ್ಣಿನಲ್ಲಿ ಸಮಸ್ಯೆ ಇದ್ದ ಕಾರಣ ಹೆಸರಘಟ್ಟ ರಸ್ತೆಯ ಮಂಜುನಾಥ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಶಸ್ತ್ರಚಿಕಿತ್ಸೆ ನಡೆಸಿದ ಕೆಲವೇ ಗಂಟೆಗಳಲ್ಲಿ ಉಸಿರಾಟದ ಸಮಸ್ಯೆಯಿಂದ ಬಾಲಕ ಶಂಕರ್ ಮೃತಪಟ್ಟಿದ್ದಾನೆ. ಶಸ್ತ್ರಚಿಕಿತ್ಸೆ ವೇಳೆ ಅತಿಯಾದ ಓವರ್ ಡೋಸ್ ನೀಡಿದ್ದೇ ಬಾಲಕನ ಸಾವಿಗೆ ಕಾರಣ ಅಂತ ಪೋಷಕರು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆ ವೈದ್ಯ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

  • ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ ಎಲ್‍ಕೆಜಿ ವಿದ್ಯಾರ್ಥಿ

    ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ ಎಲ್‍ಕೆಜಿ ವಿದ್ಯಾರ್ಥಿ

    ಹಾಸನ: ಶಿಕ್ಷಕಿಯೊಬ್ಬರ ಕ್ರೌರ್ಯಕ್ಕೆ ವಿದ್ಯಾರ್ಥಿಯೋರ್ವ ಕಣ್ಣು ಕಳೆದುಕೊಂಡ ಘಟನೆ ಜಿಲ್ಲೆಯ ಹೊರವಲಯದ ಎಲ್‍ವಿಜಿಎಸ್ ಶಾಲೆಯಲ್ಲಿ ನಡೆದಿದೆ.

    ವಿದ್ಯಾರ್ಥಿ ಮನಿಷ್ ದೃಷ್ಟಿ ಕಳೆದುಕೊಂಡಿದ್ದಾನೆ. ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಗಿರಿಜಾ ಅವರ ವಿರುದ್ಧ ಈ ಆರೋಪ ಕೇಳಿಬಂದಿದೆ. ಮನಿಷ್ ಎಲ್‍ಕೆಜಿಯಲ್ಲಿ ವ್ಯಾಸಂಗ ವಾಡುತ್ತಿದ್ದಾನೆ. ಅಗಸ್ಟ್ 13ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಶಿಕ್ಷಕಿ ಮನಿಷ್ ಕಣ್ಣಿಗೆ ಕಬ್ಬಿಣದ ಸ್ಕೇಲ್‍ನಿಂದ ಹಲ್ಲೆ ಮಾಡಿದ್ದಾರೆ. ಹೀಗಾಗಿ ನಮ್ಮ ಮಗನಿಗೆ ಕಣ್ಣು ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಪೋಷಕರು ಶಿಕ್ಷಕಿ ವಿರುದ್ಧ ಆರೋಪಿಸಿದ್ದಾರೆ.

    ಶಿಕ್ಷಕಿ ಹಲ್ಲೆ ನಡೆಸಿದ ದಿನದಿಂದ ವಿದ್ಯಾರ್ಥಿ ಕಣ್ಣು ನೋವು ಎಂದು ಹೇಳುತ್ತಿದ್ದನು. ಹೀಗಾಗಿ ವೈದ್ಯರ ಬಳಿ ಚಿಕಿತ್ಸೆಗೆ ಪೋಷಕರು ವಿದ್ಯಾರ್ಥಿಯನ್ನು ಕರೆದುಕೊಂಡ ಹೋದಾಗ ಆತನ ಕಣ್ಣಿಗೆ ಬಲವಾಗಿ ಹಾನಿಯಾಗಿದೆ ಎಂಬ ಸತ್ಯಾಂಶ ಹೊರಬಿದ್ದಿದೆ. ಹೀಗಾಗಿ ಶಿಕ್ಷಕಿಯ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣು ಕಳೆದುಕೊಂಡಿದ್ದಾನೆ. ಇದರಿಂದ ಪೋಷಕರು ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದಾರೆ.

    ಹಾಗೆಯೇ ಈ ಬಗ್ಗೆ ಪೊಲೀಸರಿಗೆ ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಣ್ಣು, ಕಿಡ್ನಿ ಮಾರುತ್ತೇನೆ ನನಗೆ ಸಾಲ ತೀರಿಸಲು ದುಡ್ಡು ಕೊಡಿ – ಬೋರ್ಡ್ ಹಿಡಿದು ಅಲೆಯುತ್ತಿರುವ ರೈತ

    ಕಣ್ಣು, ಕಿಡ್ನಿ ಮಾರುತ್ತೇನೆ ನನಗೆ ಸಾಲ ತೀರಿಸಲು ದುಡ್ಡು ಕೊಡಿ – ಬೋರ್ಡ್ ಹಿಡಿದು ಅಲೆಯುತ್ತಿರುವ ರೈತ

    ತುಮಕೂರು: ಕಣ್ಣು, ಕಿಡ್ನಿ ಮಾರುತ್ತೇನೆ, ನನಗೆ ಸಾಲ ತೀರಿಸಲು ದುಡ್ಡು ಕೊಡಿ ಎಂದು ಬೋರ್ಡ್ ಹಿಡಿದು ಶಿರಾ ತಾಲೂಕಿನಲ್ಲಿ ರೈತರೊಬ್ಬರು ಬೀದಿ ಬೀದಿ ಅಲೆಯುತ್ತಿದ್ದಾರೆ.

    ಮೂರ್ನಾಲ್ಕು ಬೋರ್ ವೆಲ್ ಕೊರೆದರೂ ಕೂಡ ರೇಷ್ಮೆ ಬೆಳೆ ಕೈ ಹತ್ತದೆ ಸಾಲ ಮಾಡಿದ ರೈತ ಚಂದ್ರಶೇಖರ್ ನಂತರ ಆ ಸಾಲವನ್ನು ತೀರಿಸಲಾಗದೆ ವಿಷವನ್ನು ಕುಡಿದಿದ್ದರು. ಅದೃಷ್ಟವಾಶಾತ್ ಬದುಕಿ ಬಂದು ಈಗ ಕೈ ಸಾಲ ಮಾಡಿ ಬ್ಯಾಂಕ್ ಸಾಲ ತೀರಿಸಿದ್ದರು. ಈಗ ಕೈ ಸಾಲ ತೀರಿಸಲಾಗದೆ ಕಿಡ್ನಿ ಮಾರುವ ಹಂತಕ್ಕೆ ಬಂದು ತುಲುಪಿದ್ದಾರೆ.

    ಶಿರಾ ತಾಲೂಕಿನ ಮಾಗೂಡಿನ ರೈತನಾದ ಚಂದ್ರಶೇಖರ್ 15 ವರ್ಷದ ಹಿಂದೆ ಪಿಎಲ್‍ಡಿ ಹಾಗೂ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ನಂತರ ಹಂತಹಂತವಾಗಿ ಸಾಲ ತೀರಿಸಿದ್ದರೂ ಕ್ಲಿಯರೆನ್ಸ್ ಸಿಗದೆ ಪಹಣಿಯಲ್ಲು ಇನ್ನೂ ಸಾಲವಿದೆ ಎಂದು ಬರುತ್ತಿದ್ದು ಜಮೀನನ್ನು ಉಪಯೋಗಿಸಿಕೊಂಡು ಮರುಸಾಲವೂ ಮಾಡಲಾಗದ ಪರಿಸ್ಥಿತಿ ತುಲುಪಿದ್ದಾರೆ.

    ಇನ್ನೊಂದಡೆ ಕೈ ಸಾಲ ವಿಪರೀತ ಬೆಳೆದು 10ನೇ ತರಗತಿ ಓದುತ್ತಿರುವ ಮಗಳ ವಿದ್ಯಾಭ್ಯಾಸಕ್ಕೂ ಹಣವಿಲ್ಲದಂತೆ ಪರಿತಪಿಸುವ ಹಂತಕ್ಕೆ ತಲುಪಿದ್ದಾರೆ. ಈಗ ಕಿಡ್ನಿ ಮಾರಾಟ ಕಾನೂನು ಬಾಹಿರ ಎಂದು ಗೊತ್ತಿದ್ದರೂ ಬೇರೆ ದಾರಿ ಕಾಣದೆ ಇತ್ತ ಜೀವನವನ್ನೂ ನಡೆಸಲಾಗದೆ ತುತ್ತು ಅನ್ನಕ್ಕೂ ಕೈ ಚಾಚುತ್ತಿದ್ದಾರೆ.

  • ಸರಿಗಮಪದ ಋತ್ವಿಕ್ ಗೆ ಕಣ್ಣು ದಾನ ಮಾಡಲು ಮುಂದಾದ ವೃದ್ಧ

    ಸರಿಗಮಪದ ಋತ್ವಿಕ್ ಗೆ ಕಣ್ಣು ದಾನ ಮಾಡಲು ಮುಂದಾದ ವೃದ್ಧ

    ಬಳ್ಳಾರಿ: ಸಂಗೀತಕ್ಕೆ ಮನಸೋಲದ ಮನಸ್ಸುಗಳೇ ಇಲ್ಲ ಎನ್ನುವ ಮಾತಿದೆ. ಈ ಮಾತು ಇದೀಗ ಮತ್ತೊಮ್ಮೆ ರುಜುವಾಗಿದೆ. ಏಕೆಂದರೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಸರಿಗಮಪದಲ್ಲಿ ತನ್ನ ಹಾಡಿನಿಂದಲೇ ಎಲ್ಲರ ಗಮನ ಸೆಳೆದಿರುವ ಋತ್ವಿಕ್ ಕಂಠಸಿರಿಗೆ ಕರಗಿರುವ ವೃದ್ಧರೊಬ್ಬರು, ತಮ್ಮ ಕಣ್ಣುಗಳನ್ನೆ ಗಾಯಕನಿಗೆ ದಾನ ಮಾಡಲು ಮುಂದಾಗಿದ್ದಾರೆ.

    ಸರಿಗಮಪ ಕಾರ್ಯಕ್ರಮದಲ್ಲಿ ಕಣ್ಣುಗಳು ಇಲ್ಲದಿದ್ದರೂ ತಮ್ಮ ಕಂಠಸಿರಿಯಿಂದಲೇ ಎಲ್ಲರ ಕಣ್ಮನ ಸೆಳೆದಿರುವ ಗಾಯಕ ಋತ್ವಿಕ್ ಗೆ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 74 ವರ್ಷದ ವೃದ್ಧ ಸಿದ್ದಲಿಂಗನಗೌಡ ಕಣ್ಣುಗಳನ್ನು ದಾನ ಮಾಡಲು ಮುಂದೆ ಬಂದಿದ್ದಾರೆ.

    ದೃಷ್ಟಿ ವಿಕಲ ಚೇತನರಾಗಿದ್ದರೂ ತಮ್ಮ ಅದ್ಭುತ ಕಂಠಸಿರಿಯಿಂದಲೇ ಅಪಾರ ಅಭಿಮಾನಿಗಳನ್ನು ಋತ್ವಿಕ್ ಗಳಿಸಿದ್ದಾರೆ. ಹಾಡುಗಳನ್ನು ಕೇಳುತ್ತಾ ಅವರ ಅಭಿಮಾನಿಯಾದ ಕೊಟ್ಟೂರಿನ ಸಿದ್ದಲಿಂಗನಗೌಡ ಕಣ್ಣುಗಳನ್ನ ದಾನ ಮಾಡಲು ಹಠ ಹಿಡಿದಿದ್ದಾರೆ. ಅದಕ್ಕಾಗಿ ಸಿದ್ದಲಿಂಗನಗೌಡ ಸಿಕ್ಕ ಸಿಕ್ಕವರಲ್ಲಿ ತನ್ನ ಕಣ್ಣು ದಾನದ ಆಸೆ ಹೊರಹಾಕುತ್ತಿದ್ದಾರೆ.

    ಸಾಯುವ ಮುನ್ನ ಶ್ರೇಷ್ಠವಾದ ಕೆಲಸ ಮಾಡು ಎಂದು ನಮ್ಮ ಅಪ್ಪ ಹೇಳಿದ್ದಾರೆ. ಅದರಂತೆ ನಾನು ಅಂಧ ಹಾಡುಗಾರ ಋತ್ವಿಕ್ ಗೆ ಕಣ್ಣುದಾನ ಮಾಡಲು ಸಿದ್ಧನಾಗಿದ್ದೇನೆ. ಒಂದು ತಿಂಗಳ ಹಿಂದೆ ನನ್ನ ದೇಹ, ಕಣ್ಣುಗಳನ್ನ ಬಳ್ಳಾರಿ ಸರ್ಕರಿ ಆಸ್ಪತ್ರೆಗೆ ಬರೆದುಕೊಟ್ಟಿದ್ದೇನೆ. ನನ್ನ ಸಾವಿನ ನಂತರ ನನ್ನ ಕಣ್ಣುಗಳನ್ನು ಋತ್ವಿಕ್‍ಗೆ ಅಳವಡಿಸಬಹುದು ಎಂದು ಮನವಿ ಮಾಡಬೇಕು ಅಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿಯ ಸಾವಿನಲ್ಲಿಯೂ ಸಾರ್ಥಕತೆ ಮೆರೆದ 8 ತಿಂಗಳ ಗರ್ಭಿಣಿ

    ಪತಿಯ ಸಾವಿನಲ್ಲಿಯೂ ಸಾರ್ಥಕತೆ ಮೆರೆದ 8 ತಿಂಗಳ ಗರ್ಭಿಣಿ

    ಬೆಂಗಳೂರು: ಪತಿಯ ಸಾವಿನಲ್ಲಿಯೂ 8 ತಿಂಗಳ ಗರ್ಭಿಣಿಯೊಬ್ಬರು ಸಾರ್ಥಕತೆ ಮೆರೆದಿದ್ದಾರೆ. ಹೌದು, ಮಗುವಿನ ಜನನದ ಕನಸು ಕಂಡವಳಿಗೆ ಗಂಡನ ಸಾವಿನ ಸುದ್ದಿ ಭರಸಿಡಿಲು ಬಡಿದಂತಾಗಿತ್ತು. ಇಂತಹ ಆಘಾತದಲ್ಲಿಯೂ ಪತ್ನಿ ಪತಿಯ ಕಿಡ್ನಿ, ಹೃದಯ ಹಾಗೂ ಕಣ್ಣುಗಳನ್ನು ದಾನ ಮಾಡಿದ್ದಾರೆ.

    ಗರ್ಭಿಣಿಯ ಪತಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಯಶವಂತಪುರದ ಸ್ಪರ್ಶ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿ ಬದುಕಿ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿಯೇ ಅವರು ದಿನ ದೂಡುತ್ತಿದ್ದರು. ಆದರೆ ಶನಿವಾರ ನಿರೀಕ್ಷೆ ಹುಸಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರ ಪತಿ ಮೃತಪಟ್ಟಿದ್ದಾರೆ.

    ಪತಿಯ ಸಾವಿನ ಸುದ್ದಿ ಕೇಳಿದ್ದ ಪತ್ನಿಗೆ ಶಾಕ್ ಆಗಿತ್ತು. ಕೆಲವೇ ತಿಂಗಳಿಗೆ ಮಗುವಿಗೆ ಜನ್ಮ ನೀಡಲಿರುವ ಅವರಿಗೆ ಪತಿಯ ಅಗಲಿಕೆ ಭಾರೀ ನೋವು ತಂದಿತ್ತು. ನೋವಿಗೆ ಎದೆಗುಂದದೆ ಪತಿಯ ಕಿಡ್ನಿ, ಹೃದಯ ಹಾಗೂ ಕಣ್ಣಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಅವರ ನಿರ್ಧಾರಿಂದಾಗಿ ಇಂದು ನಾಲ್ಕೈದು ಜನರಿಗೆ ಮರು ಜೀವ ಸಿಕ್ಕಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಲಿಕಾನ್ ಸಿಟಿ ಜನರೇ ನಿಮ್ಮ ಕಣ್ಣು ಹುಷಾರು..!

    ಸಿಲಿಕಾನ್ ಸಿಟಿ ಜನರೇ ನಿಮ್ಮ ಕಣ್ಣು ಹುಷಾರು..!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಮದ್ರಾಸ್ ಐ, ರೆಡ್ ಐ ಅಂತೆಲ್ಲ ಕಣ್ಣಿನ ಸಮಸ್ಯೆ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಆದರೆ ಈಗ ಬೆಂಗಳೂರಿಗೆ ಹೊಸ ಕಣ್ಣಿನ ಕಾಯಿಲೆ ಬಂದಿದೆ.

    ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುವಾಗ ಕಣ್ಣು ಉರಿ, ಮಧ್ಯಾಹ್ನ ಹಾಗೂ ಇಳಿಸಂಜೆ ಹೊತ್ತಿನಲ್ಲಿ ಕೆಲವೊಮ್ಮೆ ಕಣ್ಣು ಕೆಂಪಾಗಾಗೋದು, ಉರಿಯೋದು ಸುಮ್ ಸುಮ್ನೆ ಕಣ್ಣಲ್ಲಿ ನೀರು ಬರುತ್ತಿದ್ದರೆ ಇದು ಬೆಂಗಳೂರು ಐ ಎಫೆಕ್ಟ್ ಆಗಿರುತ್ತದೆ.

    ಸಿಲಿಕಾನ್ ಸಿಟಿ ಜನರಿಗೆ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು ಇದಕ್ಕೆ ಕಣ್ಣಿನ ಡಾಕ್ಟರ್‍ಗಳೇ ಬೆಂಗಳೂರು ಐ ಎನ್ನುವ ಹೆಸರಿಟ್ಟಿದ್ದಾರೆ. ವಯಸ್ಸಿನ ವ್ಯತ್ಯಾಸವಿಲ್ಲದೇ ಈ ಸಮಸ್ಯೆ ಎಲ್ಲರಿಗೆ ಕಾಡಲು ಶುರುವಾಗಿದೆ. ಅತಿಯಾದ ವಾಯುಮಾಲಿನ್ಯದ ಕಾರಣ ಬೆಂಗಳೂರಿನಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಳ್ಳಂಬೆಳಗ್ಗೆ ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿರುತ್ತೆ. ಹೀಗಾಗಿ ವಾಕಿಂಗ್ ಹೋಗುವಾಗ ಯಾವುದಕ್ಕೂ ಹುಷಾರಾಗಿರಿ. ಪಾರ್ಕ್, ಗಿಡಮರಗಳು ಹೆಚ್ಚಾಗಿರೋ ಕಡೆ ವಾಕಿಂಗ್ ಹೋದರೆ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಇನ್ನು ಮುಂದೆ ಹೊರಗಡೆ ಕಾಲಿಡುವಾಗ ಕಣ್ಣಿಗೊಂದು ಕನ್ನಡಕ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರು ಐಗೆ ಬಲಿಯಾಗುವ ಮುನ್ನ ಮುನ್ನೆಚ್ಚರಿಕೆ ತೆಗೆದುಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv