Tag: ಕಣಿವೆ ಪ್ರದೇಶ

  • ಕಣಿವೆಯಲ್ಲಿ ಟೈಲ್ಸ್ ಲಾರಿ ಪಲ್ಟಿ – ಚಾಲಕ ಸಾವು

    ಕಣಿವೆಯಲ್ಲಿ ಟೈಲ್ಸ್ ಲಾರಿ ಪಲ್ಟಿ – ಚಾಲಕ ಸಾವು

    ಚಿಕ್ಕಬಳ್ಳಾಪುರ: ಟೈಲ್ಸ್ ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಕಣಿವೆ ಪ್ರದೇಶದಲ್ಲಿ ನಡೆದಿದೆ.

    ಶ್ರೀನಿವಾಸಪುರ ಮೂಲದ ವೆಂಕಟೇಶ್ ಮೃತ ಲಾರಿ ಚಾಲಕ ಅಂತ ತಿಳಿದುಬಂದಿದೆ. ಚಿಂತಾಮಣಿಯಿಂದ ಬಾಗೇಪಲ್ಲಿ ಗೆ ಟೈಲ್ಸ್ ಸಾಗಾಟ ಮಾಡಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಣಿವೆ ಪ್ರದೇಶದ ತಡೆಗೋಡೆಯನ್ನ ಭೇದಿಸಿಕೊಂಡು ಉರುಳಿಬಿದ್ದಿದೆ.

    ಅಪಘಾತದಲ್ಲಿ ಕ್ಲೀನರ್ ಶ್ರೀಕಾಂತ್ ಗಾಯಗೊಂಡಿದ್ದಾನೆ. ಈ ಸಂಬಂಧ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಶ್ಮೀರಕ್ಕೆ ನುಸುಳಿದ್ದಾರೆ ಐವರು ಉಗ್ರರು- ಹೈ ಅಲರ್ಟ್ ಘೋಷಣೆ

    ಕಾಶ್ಮೀರಕ್ಕೆ ನುಸುಳಿದ್ದಾರೆ ಐವರು ಉಗ್ರರು- ಹೈ ಅಲರ್ಟ್ ಘೋಷಣೆ

    ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‍ಗೆ ಸೇರಿದ ಐದು ಉಗ್ರರು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತದ ಕಣಿವೆ ಪ್ರದೇಶಕ್ಕೆ ಐದು ಜನ ಉಗ್ರರು ನುಸುಳಿದ್ದಾರೆ. ಈ ಉಗ್ರರು ಕಣಿವೆಯಲ್ಲಿನ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಈ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಭಾರತಕ್ಕೆ ನುಸುಳಿರುವ ಭಯೋತ್ಪಾದಕರು ಹೆಚ್ಚು ತರಬೇತಿ ಪಡೆದವರು ಮತ್ತು ಅವರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಬಹುದು ಎಂದು ಮೂಲಗಳು ತಿಳಿಸಿರುವ ಕಾರಣ ಕೇಂದ್ರ ಸರ್ಕಾರ ಕಾಶ್ಮೀರ ಕಣಿವೆ ಪ್ರದೇಶಕ್ಕೆ ಹೆಚ್ಚಿನ ಸೈನಿಕರು ಮತ್ತು ವಾಯು ಪಡೆಯನ್ನು ನಿಯೋಜನೆ ಮಾಡಿ ತೀವ್ರ ಎಚ್ಚರಿಕೆ ವಹಿಸಿದೆ.

    ಈ ವಿಷಯ ತಿಳಿಯುತ್ತಿದ್ದಂತೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಗುರುವಾರ ಸಂಜೆಯಿಂದ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ. ಹೆಚ್ಚಿನ ಭದ್ರತೆಗೆ ಸೇನೆಯನ್ನು ಸಿದ್ಧಗೊಳಿಸಲಾಗಿದೆ. ಕಾಶ್ಮೀರ ಕಣಿವೆಗಳಲ್ಲಿ ಭದ್ರತಾ ಪಡೆಗಳ 280 ಗುಂಪುಗಳನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರದ ನಗರ ಭಾಗದ ಕೆಲ ದುರ್ಬಲ ಸ್ಥಳಗಳಲ್ಲಿ ಸಿ.ಆರ್‍.ಪಿ.ಎಫ್ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

    ನಗರದ ಎಲ್ಲಾ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆ (ಸಿಎಪಿಎಫ್) ಮತ್ತು ಸ್ಥಳೀಯ ಪೊಲೀಸರನ್ನು ನೇಮಿಸಲಾಗಿದೆ. ಭಯೋತ್ಪಾದಕರು ದೇವಾಲಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿಯಿಂದಾಗಿ ಪ್ರಾರ್ಥನ ಮಂದಿರಕ್ಕೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ. ರಾಜ್ಯದ ಶಾಲೆಗಳಿಗೆ 10 ದಿನಗಳವರೆಗೆ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಘಟನೆಯಿಂದ ಅಮರನಾಥ ಯಾತ್ರೆಯ ಕೆಲವು ಊಟದ ಗೃಹಗಳನ್ನು ಸಹ ಮುಚ್ಚಲಾಗಿದೆ. ಈ ಕಾರ್ಯಾಚರಣೆ ನಡೆಸಲು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕರ್ತವ್ಯಗಳನ್ನು ಬಲಪಡಿಸುವ ಸಲುವಾಗಿ ಸುಮಾರು 10,000 ಕೇಂದ್ರ ಪಡೆಗಳ ಸಿಬ್ಬಂದಿಯನ್ನು ಕಾಶ್ಮೀರಕ್ಕೆ ನಿಯೋಜಿಸಿತ್ತು. ಈ ನಿರ್ಧಾರದ ಬೆನ್ನಲ್ಲೇ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 25,000 ಅರೆಸೈನಿಕ ಸಿಬ್ಬಂದಿಯನ್ನು ಕಾಶ್ಮೀರಕ್ಕೆ ಕಳುಹಿಸಿದೆ.

  • ಅಡ್ಡ ಬಂದ ವಾಹನ ತಪ್ಪಿಸಲು ಹೋಗಿ ಪಲ್ಟಿಯಾದ KSRTC ಬಸ್!

    ಅಡ್ಡ ಬಂದ ವಾಹನ ತಪ್ಪಿಸಲು ಹೋಗಿ ಪಲ್ಟಿಯಾದ KSRTC ಬಸ್!

    ಚಿಕ್ಕಬಳ್ಳಾಪುರ: ದಾರಿ ಮಧ್ಯೆ ಅಡ್ಡ ಬಂದ ವಾಹನವೊಂದನ್ನು ಅಪಘಾತದಿಂದ ತಪ್ಪಿಸಲು ಹೋಗಿ ಕೆಎಸ್‍ಆರ್ ಟಿಸಿ ಬಸ್ಸೊಂದು ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಅರಣ್ಯಪ್ರದೇಶದಲ್ಲಿ ಪಲ್ಟಿಯಾಗಿದೆ.

    ಈ ಬಸ್ ಚಿಂತಾಮಣಿ ಕೆಎಸ್‍ಆರ್ ಟಿಸಿ ಘಟಕಕ್ಕೆ ಸೇರಿದ್ದು, ಇಂದು ಚಿಂತಾಮಣಿಯಿಂದ ಪಾವಗಡಕ್ಕೆ ಬಸ್ಸು ತೆರಳುತ್ತಿದ್ದ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. ಕಣಿವೆ ಪ್ರದೇಶದ ಅಂಕು ಡೊಂಕಿನ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ವಾಹನವೊಂದನ್ನು ಅಪಘಾತದಿಂದ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ. ಆದ್ರೆ ಬಸ್ಸಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಕಣಿವೆ ಪ್ರದೇಶದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಕಾರಣಾಂತರಗಳಿಂದ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ರಸ್ತೆ ಅಗಲೀಕರಣ ಕಾಮಗಾರಿಗಾಗಿ ರಸ್ತೆಯ ಒಂದು ಬದಿ ಇದ್ದ ಕಲ್ಲುಗಳನ್ನು ತೆರವುಗೊಳಿಸಲಾಗಿದ್ದು, ಅಳಿದುಳಿದ ಕಲ್ಲುಗಳು ರಸ್ತೆ ಬದಿಯಲ್ಲೆ ಇವೆ. ಇದರಿಂದ ಪದೇ ಪದೇ ಈ ಮಾರ್ಗದಲ್ಲಿ ವಾಹನಗಳ ಓಡಾಟಕ್ಕೆ ಆಡಚಣೆ ಉಂಟಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ.

    ಬಸ್ ಪಲ್ಟಿಯಾದ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಇತರೆ ವಾಹನ ಸವಾರರು ಪರದಾಡುವಂತಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಗಾಯಾಳುಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಪಲ್ಟಿಯಾದ ಬಸ್ಸನ್ನು ಕ್ರೇನ್ ಮೂಲಕ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

  • ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ ಪಾತ್ರ ಏನು? ಕಣಿವೆ ರಾಜ್ಯದಲ್ಲಿ ಎಲ್ಲಿ ಉಗ್ರರು ಹೆಚ್ಚಿದ್ದಾರೆ?

    ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ ಪಾತ್ರ ಏನು? ಕಣಿವೆ ರಾಜ್ಯದಲ್ಲಿ ಎಲ್ಲಿ ಉಗ್ರರು ಹೆಚ್ಚಿದ್ದಾರೆ?

    ಭಾರತೀಯ ಸೇನೆಯ ಇತಿಹಾಸಲ್ಲಿ ಕಂಡು ಕೇಳರಿಯದ ಉಗ್ರರ ದಾಳಿ ನಡೆದಿದಿದ್ದು ಸಿಆರ್‌ಪಿಎಫ್‌ನ 47 ಯೋಧರು ಹುತಾತ್ಮರಾಗಿದ್ದಾರೆ. ನರಹಂತಕ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆಸಿದ ಪರಿಣಾಮ 47 ಮಂದಿ ಯೋಧರು ವೀರಮರಣವನ್ನು ಹೊಂದಿದ್ದಾರೆ.. 2,547 ಸೈನಿಕರು ಜಮ್ಮುವಿನಿಂದ ಶ್ರೀನಗರ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಹೀಗಾಗಿ ಕಣಿವೆ ರಾಜ್ಯದಲ್ಲಿ ಸಿಆರ್‌ಪಿಎಫ್‌ ಪಾತ್ರ ಏನು? ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ಸಿಆರ್‌ಪಿಎಫ್‌?
    ದೇಶದ ಶಸಸ್ತ್ರ ಪೊಲೀಸ್ ಪಡೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್‌) ಅತಿ ದೊಡ್ಡ ಪಡೆಯಾಗಿದ್ದು ಕೇಂದ್ರ ಗೃಹ ಇಲಾಖೆಯ ಅಡಿ ಕೆಲಸ ಮಾಡುತ್ತದೆ.

    ಸಿಆರ್‌ಪಿಎಫ್‌ ಕೆಲಸ ಏನು?
    ದೇಶದ ಗಡಿಯಲ್ಲಿ ಬಿಎಸ್‍ಎಫ್ ಸೈನಿಕರು ನಿಯೋಜನೆಗೊಂಡರೆ ದೇಶದ ಒಳಗಡೆ ನಡೆಯುತ್ತಿರುವ ಗಲಭೆಗಳನ್ನು ನಿಯಂತ್ರಿಸುವುದು ಸಿಆರ್‌ಪಿಎಫ್‌ ಪೊಲೀಸರ ಕೆಲಸ. ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್‌ಪಿಎಫ್‌ ಪೊಲೀಸರನ್ನು ಸರ್ಕಾರ ನಿಯೋಜಿಸಿದೆ.

    ಜಮ್ಮು ಕಾಶ್ಮೀರದಲ್ಲಿ ಎಷ್ಟಿದ್ದಾರೆ?
    ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿ ಪ್ರಕಾರ ಒಟ್ಟು 60 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಯೋಧರು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾರೆ. ಕಣಿವೆ ರಾಜ್ಯವನ್ನು ಜಮ್ಮು, ಕಾಶ್ಮೀರ, ಲಡಾಖ್ ಎಂಬ ಮೂರು ಪ್ರಾಂತ್ಯಗಳ ಮೂಲಕ ಗುರುತಿಸಲಾಗುತ್ತದೆ. ಇದರಲ್ಲಿ ಕಾಶ್ಮೀರ ಭಾಗದ ಎಲ್ಲ ಜಿಲ್ಲೆಗಳಲ್ಲಿ ಸಿಆರ್‌ಪಿಎಫ್‌ ಯೋಧರನ್ನು ನಿಯೋಜಿಸಲಾಗಿದೆ. ಅದರಲ್ಲೂ ಕಾಶ್ಮೀರದ ಬಾರಾಮುಲ್ಲಾ, ಕುಪ್ವಾರ, ಪುಲ್ವಾಮಾ, ಬಂದೀಪುರ, ಶೋಪಿನ್ ಜಿಲ್ಲೆಗಳಲ್ಲಿ ಹೆಚ್ಚು ಆತಂಕವಾದಿಗಳಿದ್ದು ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

    ಈ ಹಿಂದೆ ಗಡಿ ಭದ್ರತೆ ಮತ್ತು ದೇಶದ ಕಾನೂನು ಸುವ್ಯವಸ್ಥೆಯನ್ನು ಬಿಎಸ್‍ಎಫ್ ಮತ್ತು ಸಿಆರ್‌ಪಿಎಫ್‌ ನೋಡಿಕೊಳ್ಳುತ್ತಿತ್ತು. ಆದರೆ 2005ರಿಂದ ಬಿಎಸ್‍ಎಫ್ ಯೋಧರಿಗೆ ಗಡಿ ರಕ್ಷಣೆಯ ಜವಾಬ್ದಾರಿ ನೀಡಿದರೆ, ಸಿಆರ್‌ಪಿಎಫ್‌ ಯೋಧರನ್ನು ದೇಶದ ಆಂತರಿಕ ಸಮಸ್ಯೆ ನಿವಾರಿಸಲು ನಿಯೋಜಿಸಲಾಗುತ್ತದೆ.

    ಕಾಶ್ಮೀರದಲ್ಲಿ ಕೆಲಸ ಏನು?
    ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಸಿಆರ್‌ಪಿಎಫ್‌ ಯೋಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ಮಾಡುವುದು, ಸೇನಾ ಕಾರ್ಯಾಚಣೆಗೆ ಸಹಕಾರ ನೀಡುವ ಕೆಲಸವನ್ನು ಮಾಡುತ್ತದೆ.

    ಹಿಂದೆ ಯಾವಾಗ ದಾಳಿಯಾಗಿತ್ತು?
    2018ರ ಜುಲೈ 13ರಂದು ಅನಂತ್‍ನಾಗ್ ಜಿಲ್ಲೆಯಲ್ಲಿ ಉಗ್ರರು ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರೆ, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದಕ್ಕೂ ಮುನ್ನ 2018ರ ಫೆಬ್ರವರಿ ತಿಂಗಳು ಶ್ರೀನಗರದ ಸಿಆರ್‌ಪಿಎಫ್‌ ಶಿಬಿರದ ಮೇಲೆ ಉಗ್ರರು ದಾಳಿ ಮಾಡಿದ್ದರು. ಆಗ 30 ಗಂಟೆಗಳ ಕಾಲ ನಿರಂತರ ಗುಂಡಿನ ದಾಳಿಯ ಮೂಲಕ ಭಾರತೀಯ ಯೋಧರು, ಉಗ್ರರನ್ನು ಹತ್ಯೆ ಮಾಡಿದ್ದರು.

    ಹಿಂದೆ ಐಇಡಿ ದಾಳಿ ನಡೆ ನಡೆದಿತ್ತಾ?
    ಕಣಿವೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸುಧಾರಿತ ಸ್ಫೋಟಕ ಬಳಸಿ ಸ್ಫೋಟಿಸುವ ಕೃತ್ಯಗಳು ಕಡಿಮೆಯಾಗಿದೆ. 1990ರ ಅವಧಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತಿತ್ತು. 2017ರಲ್ಲಿ ಒಂದು ಪ್ರಕರಣ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv