– ಒಂದು ಗೂಡಿನಲ್ಲಿ 100ಕ್ಕೂ ಅಧಿಕ ಮೊಟ್ಟೆ
ಭುವನೇಶ್ವರ: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಜನರ ಓಡಾಟ ಇಲ್ಲದಿರುವುದರಿಂದ ಮಾಲಿನ್ಯ ಪ್ರಮಾಣ ತುಂಬಾ ಕಡಿಮೆಯಾಗಿದೆ. ಇತ್ತ ಜನರ ಓಡಾಟದಿಂದ ಕಂಗೆಟ್ಟಿದ್ದ ಪ್ರಾಣಿ-ಪಕ್ಷಿಗಳಿಗೆ ಸ್ವಾತಂತ್ರ ಸಿಕ್ಕಿದ್ದಂತಾಗಿದೆ. ಒಡಿಶಾದ ತೀರವೊಂದರಲ್ಲಿ ಒಂದೇ ದಿನ ಬರೋಬ್ಬರಿ 72 ಸಾವಿರಕ್ಕೂ ಅಧಿಕ ಆಮೆಗಳು ಕಡಲಿಗೆ ಬಂದಿದ್ದವು.
ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ಬೀಚ್‍ನಲ್ಲಿ ಒಲಿವ್ ರಿಡ್ಲಿ ಕಡಲಾಮೆಗಳು ಕಳೆದ ಐದು ದಿನಗಳಿಂದ ಆರು ಕಿಲೋಮೀಟರ್ ದೂರದವರೆಗೂ ಬಂದು ವಿಹಾರಿಸುತ್ತಿವೆ. ಈ ಅಪರೂಪದ ಕಡಲಾಮೆಗಳು ರುಶಿಕುಲ್ಯ ಬೀಚ್‍ನಲ್ಲಿ ಒಟ್ಟಾಗಿ ತಮ್ಮ ಗೂಡಿಗೆ ಬರುತ್ತವೆ. ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಆದ ಕಾರಣ ಸಾವಿರಾರು ಕಡಲಾಮೆಗಳು ಒಟ್ಟಾಗಿ ಬಂದಿವೆ ಎಂದು ಒಡಿಶಾ ವನ್ಯಜೀವಿ ಸಂಸ್ಥೆ ಹೇಳಿದೆ.

ಮಾರ್ಚ್ 22 ರಂದು ಮುಂಜಾನೆ ಸುಮಾರು 2 ಗಂಟೆಗೆ 2,000 ಹೆಣ್ಣಾಮೆಗಳು ಬೀಚ್‍ಗೆ ಬರಲು ಶುರುಮಾಡಿದ್ದವು. ಹೆಣ್ಣಾಮೆಗಳು ತಾವು ಹುಟ್ಟಿದ್ದ ಸ್ಥಳಕ್ಕೆ ಬಂದು ಮತ್ತೆ ಮೊಟ್ಟೆಗಳನ್ನಿಡುತ್ತವೆ. ಒಡಿಶಾ ಕಡಲ ತೀರಾ ಆಮೆಗಳಿಗೆ ಅಧಿಕ ಮೊಟ್ಟೆ ಇಡುವ ಸ್ಥಳವಾಗಿದೆ. 2,78,502ಕ್ಕೂ ಹೆಚ್ಚು ಹೆಣ್ಣಾಮೆಗಳು ಏಕಕಾಲಕ್ಕೆ ಮೊಟ್ಟೆಯಿಡಲು ಬಂದಿದ್ದವು. ಅದರಲ್ಲೂ ಮಂಗಳವಾರ ಬೆಳಿಗ್ಗೆ 72,142ಕ್ಕೂ ಹೆಚ್ಚು ಕಡಲಾಮೆಗಳು ತಮ್ಮ ಗೂಡುಗಳಿಗೆ ಬಂದಿದ್ದವು ಎಂದು ಅರಣ್ಯ ಅಧಿಕಾರಿ ಆಮ್ಲಾನ್ ನಾಯಕ್ ಹೇಳಿದ್ದಾರೆ.
ಆಮೆಗಳು ಮೊಟ್ಟೆ ಇಡಲು ಮಾಡುವ ಪ್ರತಿಯೊಂದು ಗೂಡಿನಲ್ಲೂ ಸುಮಾರು 100ಕ್ಕೂ ಹೆಚ್ಚು ಮೊಟ್ಟೆಗಳಿರುತ್ತವೆ. ಅವುಗಳು ಮರಿಯಾಗಲು 45 ದಿನಗಳ ಕಾಲಾವಧಿಬೇಕು. ಈ ಹಿಂದೆ ತ್ಯಾಜ್ಯಗಳು, ಮಾಲೀನ್ಯದಿಂದ ಆಮೆಗಳು ಮೊಟ್ಟೆ ಇಡಲು ತೀರಕ್ಕೆ ಬರುತ್ತಿರಲಿಲ್ಲ.
ಈ ವರ್ಷ ಅತಿ ಹೆಚ್ಚು ಆಮೆಗಳು ಕಂಡುಬಂದಿವೆ. ಹಿಂದಿನ ಎರಡು ವರ್ಷಗಳಲ್ಲಿ ಇಷ್ಟೊಂದು ಆಮೆಗಳು ತೀರಕ್ಕೆ ಬಂದಿರಲಿಲ್ಲ. ಹೀಗಾಗಿ ಈ ವರ್ಷ ರುಶಿಕುಲ್ಯ ಕಡಲತೀರದಲ್ಲಿ ಕನಿಷ್ಠ 4.75 ಲಕ್ಷ ಆಮೆಗಳು ಗೂಡಿಗೆ ಬಂದಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.
ಮಾರ್ಚ್ 24 ರಿಂದ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಪರಿಣಾಮ ರುಶಿಕುಲ್ಯ ಬೀಚ್‍ಗೆ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಲಾಗಿದೆ. ಆದರೆ ಸಂಶೋಧಕರು ಮತ್ತು ಪರಿಸರವಾದಿಗಳಿಗೆ ಆಮೆ ಗೂಡುಕಟ್ಟುವ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಈ ವರ್ಷ ಕಡಲಾಮೆಗಳು ಸುಮಾರು 6 ಕೋಟಿ ಮೊಟ್ಟೆಗಳನ್ನಿಟ್ಟಿವೆ ಎಂದು ಅಂದಾಜಿಸಲಾಗಿದೆ.
https://twitter.com/_harikrishnan_s/status/1242994351967318016