Tag: ಕಡಬಗೆರೆ ಶ್ರೀನಿವಾಸ್

  • ಕಡಬಗೆರೆ ಶ್ರೀನಿವಾಸ್ ಶೂಟೌಟ್ ಕೇಸ್‍ನಲ್ಲಿ ಬಿಜೆಪಿ ಶಾಸಕನ ಕೈವಾಡ?

    ಕಡಬಗೆರೆ ಶ್ರೀನಿವಾಸ್ ಶೂಟೌಟ್ ಕೇಸ್‍ನಲ್ಲಿ ಬಿಜೆಪಿ ಶಾಸಕನ ಕೈವಾಡ?

    ಬೆಂಗಳೂರು: ಹಾಡಹಗಲೇ ಕಡಬಗೆರೆ ಶ್ರೀನಿವಾಸ್ ಮೇಲೆ ಫೈರ್ ಮಾಡಿದ್ದ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬಿಜೆಪಿ ಶಾಸಕರ ಆಪ್ತರಾದ ಬೂನ್ ಬಾಬು, ಸತೀಶ್ ಸೇರಿದಂತೆ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಷ್ಟೇ ಅಲ್ಲದೆ ಶಾಸಕರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

    ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಶೂಟೌಟ್ ನಡೆದ ಸ್ಥಳದಲ್ಲಿ ಪಂಚನಾಮೆ ಮಾಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಮಹಜರು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪುನರ್ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪರಾಧ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು, ಎಸಿಪಿ ಬಾಲರಾಜ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಘಟನಾ ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ಮಾಹಿತಿ ಕಲೆಹಾಕಲಾಗಿದೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಿದ್ದೇವೆ. ಈ ಸಂಬಂಧ ಈಗಾಗಲೇ ಕೆಲ ಆರೋಪಿಗಳನ್ನು ಕರೆದು ವಿಚಾರಣೆ ನಡೆಸಲಾಗಿದೆ. ಅವಶ್ಯವಿದ್ದಲ್ಲಿ ಶಂಕಿತರನ್ನು ಕರೆತಂದು ವಿಚಾರಣೆ ನಡೆಸುತ್ತೇವೆ ಎಂದರು.

    ಏನಿದು ಪ್ರಕರಣ?:
    ಯಲಹಂಕದ ಕೋಗಿಲು ಕ್ರಾಸ್ ಬಳಿ 2017ರ ಫೆಬ್ರವರಿ 3ರಂದು ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ಶ್ರೀನಿವಾಸ್ ದೇಹಕ್ಕೆ 3 ಗುಂಡು ಹೊಕ್ಕಿತ್ತು. ಭುಜಕ್ಕೆ ಒಂದು, ಹೊಟ್ಟೆಯ ಭಾಗಕ್ಕೆ 2 ಗುಂಡು ಹೊಕ್ಕಿತ್ತು. ಈ ಪ್ರಕರಣದ ತನಿಖೆ ತೀವ್ರಗೊಳಿಸಿದ ತನಿಖಾ ತಂಡ 15 ಕ್ಕೂ ಹೆಚ್ಚು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪ್ರಮುಖವಾಗಿ ಮಾದನಾಯಕನಹಳ್ಳಿ, ನೆಲಮಂಗಲ ಹಾಗೂ ಬಸವೇಶ್ವರನಗರದ ಸುತ್ತ ಮುತ್ತಲಿನ ಹಳೇ ರೌಡಿಶೀಟರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಗ್ನಿ ಶ್ರೀಧರ್‍ಗೆ ಮಧ್ಯಂತರ ಜಾಮೀನು ಮಂಜೂರು

    ಬೆಂಗಳೂರು: ಮಾಜಿ ರೌಡಿಶೀಟರ್ ಅಗ್ನಿ ಶ್ರೀಧರ್‍ಗೆ ಜಾಮೀನು ಸಿಕ್ಕಿದೆ. 53 ನೇ ಸೆಷನ್ಸ್ ನ್ಯಾಯಾಲಯ 15 ದಿನಗಳ ಕಾಲ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ.

    ಅಗ್ನಿ ಶ್ರೀಧರ್ ಪರವಾಗಿ ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯಪ್ಪ, ನಿರೀಕ್ಷಣಾ ಜಾಮೀನು ಇತ್ಯರ್ಥವಾಗೋವರೆಗೋ ಮಧ್ಯಂತರ ಜಾಮೀನಿಗಾಗಿಯೂ ಮನವಿ ಮಾಡಿದ್ರು. ಈ ಮನವಿಯನ್ನು ಪುರಸ್ಕರಿಸಿದ 53ನೇ ಸೆಷನ್ಸ್ ನ್ಯಾಯಾಲಯ 15 ದಿನಗಳ ಕಾಲ ಮದ್ಯಂತರ ಜಾಮೀನನ್ನು ಮಂಜೂರು ಮಾಡಿದೆ.

    ಕಾಂಗ್ರೆಸ್ ಮುಖಂಡ ಕಡಬಗೆರೆ ಶ್ರೀನಿವಾಸ್ ಮೇಲಿನ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಪೊಲೀಸರು ಶ್ರೀಧರ್ ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶ ಪಡೆಸಿಕೊಂಡಿದ್ದರು. ಶ್ರೀಧರ್ ಸಹಚರರಾದ ಬಚ್ಚನ್ ಸೇರಿದಂತೆ ಇತರರನ್ನು ಬಂಧಿಸಿ ಎಫ್‍ಐಆರ್ ದಾಖಲಿಸಿದ್ದರು.

    ಲಘು ಹೃದಯಾಘಾತವಾಗಿ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹೆಚ್ಚಿನ ತನಿಖೆಗಾಗಿ ಬಂಧನವಾಗುವ ಸಾಧ್ಯತೆಗಳು ಇದ್ದ ಕಾರಣ ನಿರೀಕ್ಷಣಾ ಜಾಮೀನಿಗಾಗಿ ಅಗ್ನಿ ಶ್ರೀಧರ್ ಕೋರ್ಟ್ ಮೋರೆ ಹೋಗಿದ್ದರು.

  • ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ಹೇಗಾಯ್ತು? ಏನೇನು ಸಿಕ್ಕಿದೆ?

    ಬೆಂಗಳೂರು: ಕಾಂಗ್ರೆಸ್ ಮುಖಂಡ, ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ಇವತ್ತು ಬೆಂಗಳೂರಿನ ಅಂಡರ್ ವರ್ಲ್ಡ್ ಗಢಗಢ ನಡುಗಿದೆ.

    ಈಗಾಗಲೇ ಪೊಲೀಸರ ವಶದಲ್ಲಿರುವ ಬಿಜೆಪಿ ಶಾಸಕರ ಬಲಗೈ ಬಂಟ ಸತೀಶ್ ನೀಡಿದ ಮಾಹಿತಿ ಮೇರೆಗೆ ಇವತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಇಸ್ರೋ ಲೇಔಟ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ

    ಐವರು ಡಿಸಿಪಿಗಳ ತಂಡ ದಾಳಿ ನಡೆಸಿ ರೌಡಿ ಒಂಟೆ ರೋಹಿತ್, ಸೈಲೆಂಟ್ ಸುನೀಲ ಸೇರಿದಂತೆ ಕೆಲ ಆರೋಪಿಗಳನ್ನು ಹುಡುಕಾಡಿದೆ. ಪೊಲೀಸ್ ದಾಳಿ ವೇಳೆ ಅಗ್ನಿ ಶ್ರೀಧರ್ ಮಧ್ಯಾಹ್ನ 3.30ರ ವೇಳೆಗೆ ಲಘು ಹೃದಯಾಘಾತವಾಗಿದ್ದು ಆಂಬುಲೆನ್ಸ್‍ನಲ್ಲೇ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಚ್ಚನ್ ಸೇರಿದಂತೆ ಪೊಲೀಸರು 7 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.

    ದಾಳಿ ಹೇಗಾಯ್ತು?
    ಟಾಟಾ ರಮೇಶ್ ಹಾಗೂ ಕಡಬಗೆರೆ ಶ್ರೀನಿವಾಸ್‍ಗೆ ಒಂಟೆ ರೋಹಿತ್, ಸೈಲೆಂಟ್ ಸುನೀಲ ಬೆದರಿಕೆ ಹಾಕಿದ್ದರು. ಇವರಿಬ್ಬರ ಮೊಬೈಲ್ ಟವರ್ ಲೊಕೇಶನ್ ಬೆನ್ನತ್ತಿದ್ದಾಗ ಇಬ್ಬರು ಪತ್ರಕರ್ತ ಅಗ್ನಿ ಶ್ರೀಧರ್ ಮನೆಯಲ್ಲಿದ್ದಾರೆ ಎನ್ನುವ ಶಂಕೆ ಆಧಾರದಲ್ಲಿ ದಾಳಿ ನಡೆಸಲಾಯಿತು.

    ತಕ್ಷಣ ಸರ್ಚ್ ವಾರೆಂಟ್ ಪಡೆದು ಐವರು ಡಿಸಿಪಿಗಳ ತಂಡದಿಂದ ಏಕಕಾಲಕ್ಕೆ ದಾಳಿ ನಡೆಯುತ್ತದೆ. ಸರ್ಚ್ ವಾರೆಂಟ್ ಇಲ್ಲದ ಕಾರಣ 10 ನಿಮಿಷ ಗೇಟ್ ಮುಂದೆ ಪೊಲೀಸರನ್ನು ಅಗ್ನಿ ಶ್ರೀಧರ್ ನಿಲ್ಲಿಸುತ್ತಾರೆ. ಈ ವೇಳೆ ಅಗ್ನಿ ಶ್ರೀಧರ್ ಮನೆಯಲ್ಲಿದ್ದ 10ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ.

    ದಾಳಿ ವೇಳೆ ಮನೆಯಲ್ಲಿ ಲೈಸೆನ್ಸ್ ಇಲ್ಲದ ಗನ್, ಮಾರಕಾಸ್ತ್ರಗಳು ಹಾಗೂ 70 ವಿದೇಶಿ ಮದ್ಯದ ಬಾಟಲ್‍ಗಳು, ಗಾಂಜಾ ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ಈ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆಯಡಿ ಅಗ್ನಿ ಶ್ರೀಧರ್ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಅಗ್ನಿ ಶ್ರೀಧರ್ ಆಪ್ತ, ಭೂಗತಪಾತಕಿ ಚೋಟಾ ರಾಜನ್ ಸಹಚರನಾಗಿದ್ದ ಅಮಾನ್ ಅಲಿಯಾಸ್ ಸೈಯದ್ ಅಮಾನುಲ್ಲಾ ಬಚ್ಚನ್ ನನ್ನು ಪೊಲೀಸರು ಬಂಧಿಸಿದ್ದಾರೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಅಗ್ನಿ ಶ್ರೀಧರ್ ನೋಡಲು ಬಂದ ವೇಳೆ ರಾತ್ರಿ 8.30ರ ವೇಳೆ ಸೈಲೆಂಟ್ ಸುನೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸೈಲೆಂಟ್ ಸುನೀಲನ ಗಾಯತ್ರಿನಗರ, ಪ್ರಕಾಶ್ ನಗರ, ಕುಮಾರಸ್ವಾಮಿ ಲೇಔಟ್‍ನ ಮನೆಗಳ ಮೇಲೆ ಪೊಲೀಸರು ಶೋಧ ನಡೆಸಿದ್ದರು.

  • ಮನೆಯಲ್ಲಿ ಪೊಲೀಸರ ಶೋಧ: ಅಗ್ನಿ ಶ್ರೀಧರ್‍ಗೆ ಲಘು ಹೃದಯಾಘಾತ

    ಬೆಂಗಳೂರು: ಬರಹಗಾರ ಅಗ್ನಿ ಶ್ರೀಧರ್‍ಗೆ ಲಘು ಹೃದಯಾಘಾತವಾಗಿದ್ದು, ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಡಬಗೆರೆ ಶ್ರೀನಿವಾಸ್ ಹತ್ಯೆ ಸಂಚು ಕೇಸ್‍ನಲ್ಲಿ ರೌಡಿ ಶೀಟರ್ ರೋಹಿತ್ ಕೈವಾಡದ ಶಂಕೆ ಇರುವ ಹಿನ್ನೆಲೆಯಲ್ಲಿ ಇಸ್ರೋ ಲೇಔಟ್‍ನಲ್ಲಿರುವ ಅಗ್ನಿ ಶ್ರೀಧರ್ ಮನೆಯ ಮೇಲೆ ಮಂಗಳವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿ ಶೋಧ ಆರಂಭಿಸಿದ್ದರು.

    ಬೆಳಗ್ಗೆಯಿಂದ ಪೊಲೀಸರ ವಿಚಾರಣೆ ಉತ್ತರಿಸುತ್ತಿದ್ದ ಅಗ್ನಿ ಶ್ರೀಧರ್‍ಗೆ ಮಧ್ಯಾಹ್ನ 3.30ರ ವೇಳೆಗೆ ಲಘು ಹೃದಯಾಘಾತಕ್ಕೆ ತುತ್ತಾದರು. ಕೂಡಲೇ ಅವರನ್ನು ಅಂಬುಲೆನ್ಸ್ ನಲ್ಲಿ ಸಮೀಪದಲ್ಲಿದ್ದ ಸಾಗರ್ ಆಸ್ಪತ್ರೆಗೆ ದಾಖಲಿಸಲಾಯಿತು.

    ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಬಲಗೈ ಬಂಟ ಸತೀಶ್ ಬಂಧನವಾಗಿತ್ತು. ವಿಚಾರಣೆ ವೇಳೆ ಸತೀಶ್ ರೋಹಿತ್ ಮತ್ತು ಸೈಲೆಂಟ್ ಸುನೀಲ್ ಅಗ್ನಿ ಶ್ರೀಧರ್ ಮನೆಯಲ್ಲಿ ಇರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಕೋರ್ಟ್‍ನಿಂದ ಸರ್ಚ್ ವಾರೆಂಟ್ ಪಡೆದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿಗಳಾದ ಹರ್ಷ, ನಾರಾಯಣ್, ಶರಣಪ್ಪ, ಅನುಚೇತ್ ನೇತೃತ್ವದಲ್ಲಿ ಪೊಲೀಸರು ಇಂದು ಫೀಲ್ಡಿಗೆ ಇಳಿದು ಶೋಧ ಆರಂಭಿಸಿದ್ದರು.

  • ಕಡಬಗೆರೆ ಶೂಟೌಟ್ ಕೇಸ್: ಅಗ್ನಿ ಶ್ರೀಧರ್ ಮನೆಯಲ್ಲಿ ಪೊಲೀಸರ ಶೋಧ

    ಬೆಂಗಳೂರು: ಕಡಬಗೆರೆ ಶ್ರೀನಿವಾಸ್ ಹತ್ಯೆ ಸಂಚು ಕೇಸ್‍ನಲ್ಲಿ ರೌಡಿ ಶೀಟರ್ ರೋಹಿತ್ ಕೈವಾಡದ ಶಂಕೆ ಇರುವ ಹಿನ್ನೆಲೆಯಲ್ಲಿ ಬರಹಗಾರ ಅಗ್ನಿ ಶ್ರೀಧರ್ ಮನೆಯ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿ ಶೋಧ ಆರಂಭಿಸಿದ್ದಾರೆ.

    ಕಡಬಗೆರೆ ಸೀನನ ಆಪ್ತ ರಮೇಶ್‍ಗೆ ರೌಡಿ ರೋಹಿತ್ ಬೆದರಿಕೆ ಹಾಕಿದ್ದ. ಶೂಟೌಟ್ ನಡೆಯುವುದಕ್ಕೂ 4 ದಿನ ಮೊದಲು ರಮೇಶ್ ಮತ್ತು ಕಡಬಗೆರೆ ಶ್ರೀನಿವಾಸ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

    ಶೂಟೌಟ್ ನಡೆದ ಬಳಿಕ ಅಗ್ನಿ ಶ್ರೀಧರ್ ಮನೆಯಲ್ಲಿ ರೋಹಿತ್ ಮತ್ತು ಸೈಲೆಂಟ್ ಸುನೀಲ್ ಅಡಗಿರಬಹುದು ಎನ್ನುವ ಶಂಕೆಯ ಆಧಾರದಲ್ಲಿ ಪೊಲೀಸರು ಕೋರ್ಟ್‍ನಿಂದ ಸಂರ್ಚ್ ವಾರೆಂಟ್ ಪಡೆದು ಕುಮಾರಸ್ವಾಮಿ ಲೇಔಟ್ ನಲ್ಲಿರುವ ಮನೆಯಲ್ಲಿ ಶೋಧ ಆರಂಭಿಸಿದ್ದಾರೆ.

    ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿಗಳಾದ ಹರ್ಷ, ನಾರಾಯಣ್, ಶರಣಪ್ಪ, ಅನುಚೇತ್ ನೇತೃತ್ವದಲ್ಲಿ ಪೊಲೀಸರು ಇಂದು ಫೀಲ್ಡಿಗೆ ಇಳಿದು ಶೋಧ ಆರಂಭಿಸಿದ್ದಾರೆ.

    ಶ್ರೀಧರ್ ಮನೆಯಲ್ಲಿ ಶೋಧ ಯಾಕೆ?
    ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಬಲಗೈ ಬಂಟ ಸತೀಶ್ ಬಂಧನವಾಗಿತ್ತು. ವಿಚಾರಣೆ ವೇಳೆ ಸತೀಶ್ ರೋಹಿತ್ ಮತ್ತು ಸೈಲೆಂಟ್ ಸುನೀಲ್ ಅಗ್ನಿ ಶ್ರೀಧರ್ ಮನೆಯಲ್ಲಿ ಇರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

  • ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಸ್ಥಿತಿ ಚಿಂತಾಜನಕ

    – 15ಕ್ಕೂ ಹೆಚ್ಚು ರೌಡಿಗಳ ವಿಚಾರಣೆ ತೀವ್ರ

    ಬೆಂಗಳೂರು: ಶುಕ್ರವಾರದಂದು ಶೂಟೌಟ್‍ಗೆ ಒಳಗಾದ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಸ್ಥಿತಿ ಚಿಂತಾಜನಕವಾಗಿದೆ.

    ಶುಕ್ರವಾರದಂದು ಯಲಹಂಕದ ಕೋಗಿಲು ಕ್ರಾಸ್ ಬಳಿ ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ಶ್ರೀನಿವಾಸ್ ದೇಹಕ್ಕೆ 3 ಗುಂಡು ಹೊಕ್ಕಿತ್ತು. ಭುಜಕ್ಕೆ ಒಂದು, ಹೊಟ್ಟೆಯ ಭಾಗಕ್ಕೆ 2 ಗುಂಡು ಹೊಕ್ಕಿತ್ತು. ಹೊಟ್ಟೆಗೆ 2 ಗುಂಡು ತಗುಲಿರುವುದರಿಂದ ಲಿವರ್‍ಗೆ ಡ್ಯಾಮೇಜ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿರುವ ಕಡಬಗೆರೆ ಶ್ರೀನಿವಾಸ್, ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ.

    ಈ ಪ್ರಕರಣದ ತನಿಖೆ ತೀವ್ರಗೊಳಿಸಿದ ತನಿಖಾ ತಂಡ 15 ಕ್ಕೂ ಹೆಚ್ಚು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖವಾಗಿ ಮಾದನಾಯಕನಹಳ್ಳಿ, ನೆಲಮಂಗಲ ಹಾಗೂ ಬಸವೇಶ್ವರನಗರದ ಸುತ್ತ ಮುತ್ತಲಿನ ಹಳೇ ರೌಡಿಶೀಟರ್‍ಗಳನ್ನು ವಶಕ್ಕೆ ಪಡೆದು ರಾತ್ರಿಯಿಡೀ ಶಂಕಿತರ ವಿಚಾರಣೆ ನಡೆಸಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಶೂಟೌಟ್ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಕಡಬಗೆರೆ ಶ್ರೀನಿವಾಸ್‍ರೊಂದಿಗೆ ಹೆಚ್ಚು ಆತ್ಮೀಯತೆ ಹೊಂದಿದ್ದ ಹೇರೋಹಳ್ಳಿ ಮಾಜಿ ಕಾರ್ಪೊರೇಟರ್ ಹನುಮಂತೇಗೌಡರನ್ನು ಯಲಹಂಕ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ಅವರ ಇತ್ತೀಚಿನ ಚಟುವಟಿಕೆ ಬಗ್ಗೆ ಮಾಹಿತಿ ಸಿಗುವ ಹಿನ್ನೆಲೆಯಲ್ಲಿ ಹನುಮಂತೇಗೌಡ ಅವರ ವಿಚಾರಣೆ ನಡೆಯುತ್ತಿದೆ.

  • ಬೆಂಗಳೂರಿನಲ್ಲಿ ಹಾಡಹಗಲೇ ಎಪಿಎಂಸಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಶೂಟೌಟ್ ನಡೆದಿದೆ. ಕೋಗಿಲು ಸಿಗ್ನಲ್ ಬಳಿ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರಿನಲ್ಲಿದ್ದ ವ್ಯಕ್ತಿಗಳ ಮೇಲೆ ಶೂಟೌಟ್ ಮಾಡಿದ್ದಾರೆ.

    ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಅವರಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದ್ದು, ಶ್ರೀನಿವಾಸ್ ಮತ್ತು ಡ್ರೈವರ್ ಅವರನ್ನು ಈಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಯಲಹಂಕ ನ್ಯೂಟೌನ್ ಕಡೆಯಿಂದ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕಿನಲ್ಲಿ ಆಗಮಿಸಿದ ಇಬ್ಬರು ಶುಕ್ರವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಕೆಎ 04 ಎಂಎಸ್ 605 ನ ಹೋಂಡಾ ಸಿಟಿ ಕಾರ್ ಮೇಲೆ ಆರು ಸುತ್ತಿನ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಬ್ಲಾಕ್ ಪಲ್ಸರ್ ನಲ್ಲಿ ಮುಖಕ್ಕೆ ಪ್ಲಾಸ್ಟಿಕ್ ಮಾಸ್ಕ್ ಹಾಕಿಕೊಂಡು ಬಂದಿದ್ದರು. ಫೈರಿಂಗ್ ಆದ ಬಳಿಕ ಬೈಕನ್ನು ಬಿಟ್ಟು ಸಿಗ್ನಲ್ ದಾಟಿ ಮಾಸ್ಕ್ ತೆಗೆದು ಹೋಗಿದ್ದಾರೆ.

    ರೌಡಿಶೀಟರ್ ಪಾಯಿಸನ್ ರಾಮನ ಸಹೋದರನಾಗಿರುವ ಕಡಬಗೆರೆ ಶ್ರೀನಿವಾಸ್ ಈ ಹಿಂದೆ ಬಿಜೆಪಿಯಿಂದ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರೆ, ಎರಡನೇ ಬಾರಿಗೆ ಕಾಂಗ್ರೆಸ್‍ನಿಂದ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.