Tag: ಕಟ್ಟೆ

  • ಕಟ್ಟೆಯಲ್ಲಿ ಮುಳುಗಿ ಬಾಲಕರಿಬ್ಬರ ದುರ್ಮರಣ

    ಕಟ್ಟೆಯಲ್ಲಿ ಮುಳುಗಿ ಬಾಲಕರಿಬ್ಬರ ದುರ್ಮರಣ

    ತುಮಕೂರು: ಕಟ್ಟೆಯಲ್ಲಿ ಮುಳುಗಿ ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕರನ್ನು ಕಾಮಗೊಂಡನಹಳ್ಳಿಯ ಗ್ರಾಮದ 10 ವರ್ಷದ ಸಲ್ಮಾನ್ ಮತ್ತು 11 ವರ್ಷದ ಮಾರುತಿ ಎಂದು ಗುರುತಿಸಲಾಗಿದೆ. ಈ ಇಬ್ಬರು ಬಾಲಕರು ಪಟ್ಟನಾಯಕಹಳ್ಳಿ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ಇರುವ ಕಟ್ಟೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ಇಂದು ಭಾನುವಾರವಾಗಿದ್ದು ಶಾಲೆಗೆ ರಜೆ ಇದ್ದ ಕಾರಣ ಸಲ್ಮಾನ್ ಮತ್ತು ಮಾರುತಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಕಟ್ಟೆಯ ಬಳಿ ಆಟವಾಡಲು ಹೋಗಿದ್ದಾರೆ. ಕಟ್ಟೆಯ ದಡದ ನೀರಿನಲ್ಲಿ ಆಟವಾಡುತ್ತಿದ್ದ ಇಬ್ಬರೂ ಕಾಲುಜಾರಿ ಕಟ್ಟೆಯ ಒಳಗೆ ಬಿದ್ದಿದ್ದಾರೆ. ಆ ಸಮಯದಲ್ಲಿ ಕಟ್ಟೆಯ ಬಳಿ ಯಾರೂ ಇಲ್ಲದ ಕಾರಣ ಬಾಲಕರು ಮೃತಪಟ್ಟಿದ್ದಾರೆ.

    ಈ ಘಟನೆ ಪಟ್ಟನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ನೀರು ಕುಡಿಯಲು ಹೋಗಿ ವ್ಯಕ್ತಿ ಸಾವು

    ನೀರು ಕುಡಿಯಲು ಹೋಗಿ ವ್ಯಕ್ತಿ ಸಾವು

    ರಾಮನಗರ: ನೀರು ಕುಡಿಯಲು ಹೋಗಿ ಕಾಲು ಜಾರಿ ಕಟ್ಟೆಯಲ್ಲಿ ಮುಳುಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಮತ್ತ ಗ್ರಾಮದಲ್ಲಿ ನಡೆದಿದೆ.

    ಮಾಗಡಿಯ ಅತ್ತಿಂಗೆರೆ ಸಮೀಪದ ಮತ್ತ ಗ್ರಾಮದ ರಮೇಶ್ ಮೃತ ದುರ್ದೈವಿ. ರಮೇಶ್ ನೀರು ಕುಡಿಯಲೆಂದು ಕಟ್ಟೆಯ ಬಳಿ ತೆರಳಿದ್ದರು. ಈ ವೇಳೆ ರಮೇಶ್ ಕಾಲು ಜಾರಿ ಕಟ್ಟೆಯ ಒಳಗೆ ಬಿದ್ದಿದ್ದಾರೆ. ಸುಮಾರು 15 ಅಡಿಯಷ್ಟು ಆಳವಿರುವ ಹಾಗೂ ಕಲ್ಲಿನಿಂದಲೇ ಆವೃತ್ತವಾಗಿರುವ ಕಟ್ಟೆಯಿಂದ ಮೇಲೆ ಬರಲಾಗದೇ ಮುಳುಗಿ ಮೃತಪಟ್ಟಿದ್ದಾನೆ.

    ತಕ್ಷಣ ಸ್ಥಳದಲ್ಲಿದ್ದವರು ಫೋನ್ ಮಾಡಿ ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಮೃತದೇಹಕ್ಕಾಗಿ ಹುಡುಕಾಡಿದ್ದಾರೆ. ಕೊನೆಗೆ ರಮೇಶ್ ಮೃತದೇಹ ಸಿಕ್ಕಿದ್ದು, ಸ್ಥಳದಲ್ಲಿ ಮೃತ ರಮೇಶ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

    ಈ ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.