Tag: ಕಟ್ಟಡ ನಿರ್ಮಾಣ

  • ಪ್ರವಾಹ ಪೀಡಿತ ಗ್ರಾಮಗಳ ಶಾಲೆಗಳಿಗೆ ಶುರುವಾಗಿದೆ ಕಾಯಕಲ್ಪ ಕಾರ್ಯ

    ಪ್ರವಾಹ ಪೀಡಿತ ಗ್ರಾಮಗಳ ಶಾಲೆಗಳಿಗೆ ಶುರುವಾಗಿದೆ ಕಾಯಕಲ್ಪ ಕಾರ್ಯ

    – ಶಿಕ್ಷಣ ಇಲಾಖೆಯ ಕೆಲಸಕ್ಕೆ ಗ್ರಾಮಸ್ಥರ ಮೆಚ್ಚುಗೆ

    ಬಾಗಲಕೋಟೆ: ನೆರೆ ಹಾವಳಿಗೆ ತುತ್ತಾಗಿದ್ದ ಜಿಲ್ಲೆಯ ನಾನಾ ಕಡೆಗಳಲ್ಲಿನ ಶಾಲಾ ಕಟ್ಟಡಗಳ ಕಾಯಕಲ್ಪ ಕಾರ್ಯ ಹಲವು ಆರೋಪಗಳ ಮಧ್ಯೆಯೂ ಭರದಿಂದ ಸಾಗುತ್ತಿದೆ.

    ಕೃಷ್ಣ, ಘಟಪ್ರಭ ಮತ್ತು ಮಲಪ್ರಭ ನದಿಯಲ್ಲಿ ಕಳೆದ ಆಗಸ್ಟ್‍ನಲ್ಲಿ ಉಂಟಾದ ನೆರೆಯಿಂದ ಸಾವಿರಾರು ಮನೆ, ದೇವಸ್ಥಾನ, ಸಮುದಾಯ ಭವನ ಸೇರಿದಂತೆ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಶಾಲಾ ಕಟ್ಟಡಗಳೂ ಅನೇಕ ಕಡೆಗಳಲ್ಲಿ ನೆಲಸಮಗೊಂಡು, ಬಹುತೇಕ ಕಡೆಗಳಲ್ಲಿ ಶಿಥಿಲಗೊಂಡಿದ್ದವು. ನೆರೆ ಪೀಡಿತ ಪ್ರದೇಶಗಳಲ್ಲಿ ಶಾಲಾ ಕಟ್ಟಡಗಳೇ ಕೊಚ್ಚಿ ಹೋದ ಮೇಲೆ ಅಲ್ಲಿನ ಮಕ್ಕಳ ಶಿಕ್ಷಣ ವ್ಯವಸ್ಥೆ ಹೇಗೆ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.

    ಮಕ್ಕಳ ಶಾಲಾ ಸಾಮಗ್ರಿಗಳು ನೆರೆಯಲ್ಲಿ ಹಾಳಾಗಿದ್ದರೆ, ಕಲಿಕೆ ಮುಂದುವರಿಸಲು ಶಾಲಾ ಕಟ್ಟಡಗಳೇ ಇಲ್ಲವಲ್ಲ. ಮುಂದೆ ಹೇಗೆ ಎನ್ನುವ ಚಿಂತೆಯ ಮಧ್ಯೆ ಅಲ್ಲಲ್ಲಿ ಶಾಲಾ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ತಾತ್ಕಾಲಿಕ ಶೆಡ್‍ಗಳ ನಿರ್ಮಾಣ ಮಾಡಿದ್ದ ಜಿಲ್ಲಾಡಳಿತ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ದುರಸ್ತಿ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಆರೋಪಗಳು ಸಾಮಾನ್ಯವಾಗಿದ್ದವು.

    ಇಂತಹ ಆರೋಪಗಳ ನಡುವೆ ಜಿಲ್ಲೆಯಲ್ಲಿ ನೆರೆ ಹಾವಳಿಗೆ ತುತ್ತಾದ ಗ್ರಾಮಗಳ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿರುವುದು ನೆರೆ ಗ್ರಾಮಸ್ಥರ ಶ್ಲಾಘನೆಗೆ ಒಳಗಾಗಿದೆ. ಜಿಲ್ಲೆಯಲ್ಲಿ ನೆರೆ ಹಾವಳಿಗೆ ತುತ್ತಾದ 113 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 316 ಕೋಣೆಗಳ ದುರಸ್ತಿ ಕಾರ್ಯ ನಡೆದಿದೆ. ಇದಕ್ಕಾಗಿ 2.69 ಕೋಟಿ ರೂ. ಬಿಡುಗಡೆಯಾಗಿದೆ. ಈಗಾಗಲೇ ಆಯಾ ಎಸ್‍ಡಿಎಂಸಿ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ.

    ಸಂಪೂರ್ಣ ಹಾಳಾಗಿ ಬಿದ್ದು ಹೋದ ಶಾಲಾ ಕೊಠಡಿಗಳ ಬದಲಾಗಿ ಮಕ್ಕಳಿಗೆ ಶೈಕ್ಷಣಿಕ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ 94 ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಇಂತಹ 100 ಕೋಣೆಗಳ ಪುನರ್ ನಿರ್ಮಾಣಕ್ಕಾಗಿ 11.21 ಕೋಟಿ ರೂ.ಗಳ ಪ್ರಸ್ತಾವನೆ ಸಹ ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುವ ಮಾಹಿತಿಯನ್ನು ಡಿಡಿಪಿಐ ಶ್ರೀಶೈಲ ಬಿರಾದಾರ ನೀಡಿದ್ದಾರೆ. ಜಿಲ್ಲೆಯ ಒಂಟಗೋಡಿ, ಬುದ್ನಿ ಬಿ.ಕೆಯಲ್ಲಿ ಪಿಇಎಸ್ ಸಂಸ್ಥೆಯು ಮಾದರಿ ಶಾಲೆಗಳ ನಿರ್ಮಾಣ ಕಾರ್ಯ ನಡೆದಿದೆ.

    ಮಣ್ಣೇರಿ, ಬೀರನೂರ, ತಳಕವಾಡಿ, ಢವಳೇಶ್ವರ ಗ್ರಾಮಗಳಲ್ಲಿ ವಿಪ್ರೋ ಸಂಸ್ಥೆಯವರ ಸಹಾಯಧನದಲ್ಲಿ ಹೊಸ ಶಾಲೆಗಳು ನಿರ್ಮಾಣಗೊಳ್ಳುತ್ತಿವೆ. ಶಾಲೆಗಳ ನಿರ್ಮಾಣ ಮತ್ತು ದುರಸ್ತಿ ಜತೆಗೆ ನೆರೆ ಹಾವಳಿಗೆ ತುತ್ತಾದ ಎಲ್ಲ ಗ್ರಾಮಗಳ ಶಾಲಾ ಮಕ್ಕಳಿಗೆ 2.39 ಲಕ್ಷ ಪುಸ್ತಕಗಳು ಸರಬರಾಜಾಗಿವೆ. ಬಾದಾಮಿ ತಾಲೂಕಿಗೆ 34 ಸಾವಿರ, ಹುನಗುಂದ ತಾಲೂಕಿಗೆ 75 ಸಾವಿರ, ಜಮಖಂಡಿ ತಾಲೂಕಿಗೆ 82 ಸಾವಿರ ಹಾಗೂ ಮುಧೋಳಕ್ಕೆ 48 ಸಾವಿರ ಹೊಸ ಪಠ್ಯ ಪುಸ್ತಕಗಳನ್ನು ಇಲಾಖೆ ಪೂರೈಕೆ ಮಾಡಿದೆ.

    ನೆರೆಯಲ್ಲಿ ಮಕ್ಕಳ ಶೂ, ಸಾಕ್ಸ್ ಕೂಡ ಹಾಳಾಗಿದ್ದು, 1,445 ಶಾಲೆಗಳಿಗೆ ಶೂ ಹಾಗೂ ಸಾಕ್ಸ್ ಗಳನ್ನು ಸಹ ಖರೀದಿಸಿ ವಿತರಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ಮಕ್ಕಳ ಕಲಿಕೆಗೆ ಅಗತ್ಯವಾದ ಬೋಧನಾ ಹಾಗೂ ಕಲಿಕಾ ಸಾಮಗ್ರಿಗಳಾದ ವಿವಿಧ ಮ್ಯಾಪ್ ಚಾರ್ಟ್ ಗಳು, ವಿಜ್ಞಾನದ ಉಪಕರಣಗಳು, ಗ್ಲೋಬ್ ಮುಂತಾದವುಗಳ ಖರೀದಿಗೆ ಈಗಾಗಲೇ 50 ಲಕ್ಷ ರೂ.ಗಳ ಅನುದಾನ ಸರ್ಕಾರದಿಂದ ಬಂದಿದೆ. ಶೀಘ್ರವೇ ನೆರೆ ಹಾವಳಿಯ ಶಾಲೆಗಳಿಗೆ ಕಲಿಕಾ ಸಾಮಗ್ರಿಗಳನ್ನು ತಲುಪಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ. ಒಟ್ಟಾರೆ ಶಿಕ್ಷಣ ಇಲಾಖೆ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ನಿಗಾ ವಹಿಸಿ, ಕಲಿಕೆ ಪ್ರಕ್ರಿಯೆ ಎಂದಿನ ಹಾಗೆ ನಡೆಯುವಂತೆ ಸಹಜ ಸ್ಥಿತಿಗೆ ತರಬೇಕಿದೆ.

  • ಕಟ್ಟಡ ನಿರ್ಮಾಣದ ವೇಳೆ ಕುಸಿದ ಗುಡ್ಡ – ಮೂವರು ಜೀವಂತ ಸಮಾಧಿ

    ಕಟ್ಟಡ ನಿರ್ಮಾಣದ ವೇಳೆ ಕುಸಿದ ಗುಡ್ಡ – ಮೂವರು ಜೀವಂತ ಸಮಾಧಿ

    ಮಂಗಳೂರು: ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಪಕ್ಕದ ಗುಡ್ಡವೊಂದು ಕುಸಿದು ಬಿದ್ದು ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡು ಜೀವಂತ ಸಮಾಧಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿರುವ ಪ್ರಸಿದ್ಧ ಕ್ಷೇತ್ರ ಒಡಿಯೂರು ಶ್ರೀ ದತ್ತಾಂಜನೇಯ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಪಿಲ್ಲರ್‍ಗಾಗಿ ಗುಂಡಿ ತೆಗೆಯಲಾಗಿತ್ತು. ಜೆಸಿಬಿ ಮೂಲಕ ಕೆಳಭಾಗದಿಂದ ಗುಡ್ಡದ ಮಣ್ಣು ತೆಗೆಯುತ್ತಿದ್ದಾಗ ಗುಡ್ಡದ ಒಂದು ಭಾಗ ಕುಸಿದು ಕೆಳಗೆ ಬಿದ್ದಿದ್ದು ಕೆಳ ಭಾಗದಲ್ಲಿ ಕೆಲಸ ನಿರತರಾಗಿದ್ದ ಮೂವರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಮಣ್ಣಿನಡಿಯಲ್ಲಿದ್ದ ಓರ್ವ ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸುಳ್ಯದ ಅಲಂಗಾರು ನಿವಾಸಿ ಬಾಳಪ್ಪ ನಾಯ್ಕ(56), ಬಂಟ್ವಾಳದ ಮಾಣಿಲ ಗ್ರಾಮದ ನಿವಾಸಿ ಪ್ರಕಾಶ್(42) ಹಾಗೂ ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ನಿವಾಸಿ ರಮೇಶ್ (50)ಮೃತಪಟ್ಟ ದುರ್ದೈವಿಗಳು. ಮತ್ತೋರ್ವ ಕಾರ್ಮಿಕ ಮಂಗಳೂರಿನ ಉಳ್ಳಾಲ ಕುತ್ತಾರು ನಿವಾಸಿ ಪ್ರಭಾಕರ್ ಗಂಭೀರ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ನಡೆದಾಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವವರನ್ನು ಮೇಲೆತ್ತುವ ಪ್ರಯತ್ನ ಮಾಡಿದ್ರೂ ಮೂವರು ಆ ವೇಳೆಗೆ ಜೀವಂತ ಸಮಾಧಿಯಾಗಿದ್ದರು. ಘಟನೆಯ ಬಗ್ಗೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿತ- ಇಬ್ಬರು ಮಹಿಳೆಯರು ಜೀವಂತ ಸಮಾಧಿ

    ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿತ- ಇಬ್ಬರು ಮಹಿಳೆಯರು ಜೀವಂತ ಸಮಾಧಿ

    ಹೈದ್ರಾಬಾದ್: ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿದು, ಮಣ್ಣಿನಡಿ ಸಿಲುಕಿ ಇಬ್ಬರು ಮಹಿಳೆಯರು ಜೀವಂತ ಸಮಾಧಿಯಾದ ಘಟನೆ ಸೋಮವಾರ ಹೈದ್ರಾಬಾದ್‍ನ ಕೊಂಡಪುರ ಪ್ರದೇಶದಲ್ಲಿ ನಡೆದಿದೆ.

    ಸೆಲ್ಲರ್ ನಿರ್ಮಿಸುವ ಸಲುವಾಗಿ ಕಾರ್ಮಿಕರು ಸುಮಾರು 40 ಅಡಿ ಆಳದ ಗುಂಡಿ ತೆಗೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಟ್ಟಡ ನಿರ್ಮಾಣಕ್ಕೆ ಹಾಕಲಾಗಿದ್ದ ರಾಡ್‍ಗಳ ಭಾರಕ್ಕೆ ಮಣ್ಣು ಕುಸಿದಿದ್ದು ಮಹಿಳೆಯರು ಸಾವನ್ನಪ್ಪಿದ್ದಾರೆ.

    ಮೃತ ಮಹಿಳೆಯರನ್ನು ಭರತಮ್ಮ ಹಾಗೂ ಕಿಸ್ತಮ್ಮ ಎಂದು ಗುರುತಿಸಲಾಗಿದ್ದು, 2 ಗಂಟೆಗಳ ಕಾರ್ಯಾಚರಣೆ ಬಳಿಕ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ಘಟನೆಯಲ್ಲಿ ಮೃತ ಮಹಿಳೆಯರ ಗಂಡಂದಿರಾದ ಬಲರಾಜು ಹಾಗೂ ಪಾಪಯ್ಯ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿರಲಿಲ್ಲ ಹಾಗೂ ಸುರಕ್ಷಾ ಕ್ರಮಗಳನ್ನ ಕೈಗೊಂಡಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಆರೋಪದಡಿ ಸೈಟ್ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಾಗಿದೆ.