Tag: ಕಟೀಲು ಮೇಳ

  • ರಂಗಸ್ಥಳದಲ್ಲೇ ಹೃದಯಾಘಾತ – ಕಟೀಲು ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ನಿಧನ

    ರಂಗಸ್ಥಳದಲ್ಲೇ ಹೃದಯಾಘಾತ – ಕಟೀಲು ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ನಿಧನ

    ಮಂಗಳೂರು: ಯಕ್ಷಗಾನ(Yakshagana) ನಡೆಯುತ್ತಿದ್ದಾಗ ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು(Kateelu) ಮೇಳದ ಕಲಾವಿದರೊಬ್ಬರು ನಿಧನರಾಗಿದ್ದಾರೆ.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ‌ ಮೇಳದ ಗುರುವಪ್ಪ ಬಾಯಾರು (58)ಮೃತ ಕಲಾವಿದ. ಇದನ್ನೂ ಓದಿ: ರಾಜ್ಯದಲ್ಲಿ 2.53 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ – ಬೊಮ್ಮಾಯಿ

    ಕಟೀಲಿನ ಕ್ಷೇತ್ರದ ಸರಸ್ವತೀ ಸದನದಲ್ಲಿ ಗುರುವಾರ ತ್ರಿಜನ್ಮ ಮೋಕ್ಷ ಯಕ್ಷಗಾನ ನಡೆಯುತ್ತಿತ್ತು. ಈ ಸಂದರ್ಭ ಶಿಶುಪಾಲನ ಪಾತ್ರಧಾರಿಯಾಗಿದ್ದ ಗುರುವಪ್ಪ ಬಾಯರು(Guruvappa Bayaru) ರಂಗಸ್ಥಳದಲ್ಲೇ ಇದ್ದರು. ಇನ್ನೊಂದು ಪಾತ್ರಧಾರಿ  ಕುಣಿಯುತ್ತಿದ್ದಾಗ ಅಲ್ಲೇ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಯಾಘಾತವಾಗಿ ರಂಗಸ್ಥಳದಿಂದ ಕೆಳಗೆ ಕುಸಿದು ಬಿದ್ದಿದ್ದಾರೆ.

    ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ʼತ್ರಿಜನ್ಮ ಮೋಕ್ಷʼ ಯಕ್ಷಗಾನ ಪ್ರದರ್ಶನದಲ್ಲಿ ಶಿಶುಪಾಲನ ಪಾತ್ರ ನಿರ್ವಹಣೆ ಮಾಡುತ್ತಿದ್ದ ಗುರುವಪ್ಪ ಬಾಯಾರು ರಂಗದಲ್ಲೇ ಮೋಕ್ಷ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ಯಕ್ಷಗಾನ ಭಾಗವತ ಬಲಿಪ ಪ್ರಸಾದ ನಿಧನ

    ಖ್ಯಾತ ಯಕ್ಷಗಾನ ಭಾಗವತ ಬಲಿಪ ಪ್ರಸಾದ ನಿಧನ

    ಮಂಗಳೂರು: ಖ್ಯಾತ ಯಕ್ಷಗಾನ ಭಾಗವತ ಬಲಿಪ ಪ್ರಸಾದ ಭಟ್‌(45) ನಿಧನರಾಗಿದ್ದಾರೆ.

    ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಸಂಜೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮಾರೂರು ನಿವಾಸಿಯಾಗಿದ್ದ ಬಲಿಪ ಪ್ರಸಾದ ಅವರು ಕಟೀಲು ಮೇಳದ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರ ಪುತ್ರರಾಗಿದ್ದಾರೆ. ಇದನ್ನೂ ಓದಿ: ನಾನು ಮಾತನಾಡಲ್ಲ, ನನ್ನ ಆಕ್ಷನ್ ಮಾತನಾಡುತ್ತದೆ: ವಿಪಕ್ಷಗಳಿಗೆ ಬೊಮ್ಮಾಯಿ ತಿರುಗೇಟು

    ಕಟೀಲು ಎರಡನೇ ಮೇಳದ ಪ್ರಧಾನ ಭಾಗವತರಾಗಿದ್ದ ಇವರು ಅನಾರೋಗ್ಯ ಕಾರಣದಿಂದ ಈ ಬಾರಿಯ ತಿರುಗಾಟದಲ್ಲಿ ಇರಲಿಲ್ಲ. ತಂದೆ ಬಲಿಪ ಶೈಲಿಯ ಭಾಗವತಿಕೆ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಇವರು ತಂದೆ, ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

  • ನೈಟ್ ಕರ್ಫ್ಯೂ: ಕಟೀಲು ಮೇಳದ ಎಲ್ಲಾ ಪ್ರದರ್ಶನಗಳು ಕಾಲಮಿತಿ ಯಕ್ಷಗಾನ

    ನೈಟ್ ಕರ್ಫ್ಯೂ: ಕಟೀಲು ಮೇಳದ ಎಲ್ಲಾ ಪ್ರದರ್ಶನಗಳು ಕಾಲಮಿತಿ ಯಕ್ಷಗಾನ

    ಮಂಗಳೂರು: ರಾಜ್ಯಾದ್ಯಂತ ಡಿ.24 ರಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಕಟೀಲು ಯಕ್ಷಗಾನ ಮೇಳ ಕಾಲಮಿತಿ ಯಕ್ಷಗಾನವನ್ನು ಪ್ರದರ್ಶಿಸಲಿದೆ.

    ಕಟೀಲು‌ ದೇವಸ್ಥಾನದ ಎಲ್ಲಾ ಆರು ಯಕ್ಷಗಾನ ಮೇಳಗಳು ಡಿಸೆಂಬರ್ ‌24ರ ಗುರುವಾರದಿಂದ ಸಂಜೆ 4 ಗಂಟೆಗೆ ಚೌಕಿ ಪೂಜೆ ನಡೆದು ಬಳಿಕ ಯಕ್ಷಗಾನ ಪ್ರಸಂಗ ಆರಂಭಿಸಲಿದೆ. ರಾತ್ರಿ 9:45 ಕ್ಕೆ ಮಂಗಳ ಹಾಡುವುದರ ಮೂಲಕ ಯಕ್ಷಗಾನ‌ ಕೊನೆಗೊಳ್ಳಲಿದೆ.

    ಎಲ್ಲ ಕಲಾವಿದರು ಮಧ್ಯಾಹ್ನ 2:30ಕ್ಕೆ ಚೌಕಿಯಲ್ಲಿ ಹಾಜರಿರಲು ಸೂಚಿಸಲಾಗಿದೆ. ನಾಳೆಯಿಂದ ಕರ್ಫ್ಯೂ ಮುಗಿಯುವ ತನಕ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಈ ದಿನದಲ್ಲಿ‌ ಯಕ್ಷಗಾನ ಬುಕ್ ಮಾಡಿದವರು ಕಾಲಮಿತಿ ಯಕ್ಷಗಾನಕ್ಕೆ‌ ಸಹಕಾರ ನೀಡಬೇಕೆಂದು ಕ್ಷೇತ್ರದ ಆಡಳಿತ‌ ಮಂಡಳಿ ವಿನಂತಿ ಮಾಡಿಕೊಂಡಿದೆ.

    ಕಟೀಲು ಯಕ್ಷಗಾನ ಮೇಳ‌ ಮಾಮೂಲಿಯಾಗಿ ರಾತ್ರಿ 9 ಗಂಟೆಗೆ ಪ್ರಸಂಗ ಆರಂಭಿಸಿ ಬೆಳಗ್ಗಿನ‌ ಜಾವ 6 ಗಂಟೆಯವರೆಗೂ ನಡೆಯುತ್ತದೆ. ಆದರೆ ನೈಟ್ ಕರ್ಫ್ಯೂ ಹಿನ್ನಲೆಯಲ್ಲಿ ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

  • ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಯಕ್ಷಗಾನ ಮೇಳ

    ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಯಕ್ಷಗಾನ ಮೇಳ

    – ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ
    – ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ

    ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಧಾನ ಭಾಗವತಿಕೆಯೊಂದಿಗೆ ಹೊಸ ಯಕ್ಷಗಾನ ಮೇಳ ಆರಂಭಗೊಂಡಿದ್ದು, ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ರಂಗಸ್ಥಳದಲ್ಲಿ ಮೇಳೈಸಲಿದ್ದಾರೆ.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಿಂದ ಹೊರ ಬಂದ ಬಳಿಕ ಪಟ್ಲ ಅವರು ಹೊಸ ಯಕ್ಷಗಾನ ಮೇಳ ಮಾಡುತ್ತಾರೆ ಎಂಬ ಸುದ್ದಿ ಇತ್ತು, ಅದು ಈಗ ನಿಜವಾಗಿದೆ. ನವೆಂಬರ್ ತಿಂಗಳ 27ರಿಂದ ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರದರ್ಶನ ಆರಂಭವಾಗಲಿದೆ ಎಂದು ಪಾವಂಜೆ ದೇವಳದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಹೇಳಿದ್ದಾರೆ.

    ಮೇಳದ ಯಕ್ಷಗಾನ ಪ್ರದರ್ಶನವು ಕಾಲಮಿತಿಯದ್ದಾಗಿದ್ದು, ಸಾಮಾನ್ಯವಾಗಿ ಸಂಜೆ 6 ಗಂಟೆಯಿಂದ 11ರವರೆಗಿನ ಅವಧಿಯಲ್ಲಿ ನಡೆಯಲಿದೆ. ಈ ಎಲ್ಲಾ ಪ್ರದರ್ಶನಗಳನ್ನು ಕೋವಿಡ್-19ರ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ನಿರ್ದೇಶನಗಳಿಗೆ ಒಳಪಟ್ಟು ನಡೆಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.

    ನೂತನ ಮೇಳದ ಕಲಾವಿದರು
    ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಪ್ರಧಾನ ಭಾಗವತರಾಗಿದ್ದು, ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತಿಕೆಯಲ್ಲಿ ಸಾಥ್ ನೀಡಲಿದ್ದಾರೆ. ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ ಇರಲಿದ್ದಾರೆ. ಉಜಿರೆ ನಾರಾಯಣ, ಸಂದೇಶ್ ಮಂದಾರ ಹಾಸ್ಯ ಪಾತ್ರಧಾರಿಗಳಾಗಿ ಬಣ್ಣ ಹಚ್ಚಲಿದ್ದಾರೆ.

    ಅಕ್ಷಯ್ ಕುಮಾರ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು ಸ್ತ್ರೀಪಾತ್ರಧಾರಿಗಳಾಗಲಿದ್ದಾರೆ. ಪ್ರಧಾನ ವೇಷಧಾರಿಗಳಾಗಿ ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್, ಸಂತೋಷ್ ಮಾನ್ಯ, ರಾಕೇಶ್ ರೈ, ಸತೀಶ್ ನೈನಾಡು, ಮಾಧವ ಕೊಳ್ತಮಜಲು, ಮೋಹನ್ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷಣ, ಮಧುರಾಜ್, ಭುವನ್ ಮತ್ತಿತರು ಇರಲಿದ್ದಾರೆ.

    ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ
    ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಸತೀಶ್ ಪಟ್ಲರಿಗೆ ಶ್ರೀದೇವಿ ಮಹಾತ್ಮೆ ಪ್ರಸಂಗ ಸಾಕಷ್ಟು ಪ್ರಖ್ಯಾತಿ ತಂದು ಕೊಟ್ಟಿದ್ದು, ಇಲ್ಲಿಯೂ ಕೂಡ ದೇವಿ ಮಹಾತ್ಮೆ ಪ್ರಸಂಗಕ್ಕೆ ಕಲಾವಿದರು ಸೆಟ್ ಆದಂತೆ ಇದ್ದಾರೆ. ಅಕ್ಷಯ್ ಕುಮಾರ್ ದೇವಿ, ರಾಜೇಶ್ ನಿಟ್ಟೆ ಮಾಲಿನಿ, ಸತೀಶ್ ನೈನಾಡು ಮಹಿಷಾಸುರ, ರಾಧಾಕೃಷ್ಣ ನಾವಡ ರಕ್ತಬೀಜ, ಲೋಕೇಶ್ ಮುಚ್ಚೂರು ಮತ್ತು ಬೆಳ್ಳಿಪಾಡಿ ಮೋಹನ್ ಚಂಡ- ಮುಂಡರು ಹೀಗೆ ದೇವಿ ಮಹಾತ್ಮೆ ಪ್ರಸಂಗಕ್ಕೆ ಸೆಟ್ ಆಗುವಂತೆ ಕಲಾವಿದರ ಆಯ್ಕೆ ಆದಂತೆ ಇದೆ.

    ಯಕ್ಷಗಾನದ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಪಟ್ಲ ಸತೀಶ್ ಶೆಟ್ಟಿ ಅವರ ಕಂಠಸಿರಿಯನ್ನು ಅವರೇ ನೇತೃತ್ವವಹಿಸಿದ ಯಕ್ಷಗಾನ ಮೇಳದೊಂದಿಗೆ ನೋಡಿ ಆನಂದಿಸಲು ಅವರ ಅಭಿಮಾನಿಗಳು ಕಾತುರರಾಗಿರೋದಂತು ಸತ್ಯ. ಹಿಂದಿನಿಂದಲೂ ಪಾವಂಜೆ ಕ್ಷೇತ್ರ ಯಕ್ಷಗಾನಕ್ಕೆ ಗರಿಷ್ಠ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಇಲ್ಲಿಂದ ಹೊರಡುವ ನೂತನ ಮೇಳ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  • ರಂಗಸ್ಥಳದಲ್ಲೇ ಕುಸಿದು ಇಹಲೋಕ ತ್ಯಜಿಸಿದ ಗೇರುಕಟ್ಟೆ ಗಂಗಯ್ಯಶೆಟ್ಟಿ

    ರಂಗಸ್ಥಳದಲ್ಲೇ ಕುಸಿದು ಇಹಲೋಕ ತ್ಯಜಿಸಿದ ಗೇರುಕಟ್ಟೆ ಗಂಗಯ್ಯಶೆಟ್ಟಿ

    ಮಂಗಳೂರು: ಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಅವರು ಪಾತ್ರ ನಿರ್ವಹಿಸುತ್ತಿರುವಾಗ ವೇದಿಕೆಯಲ್ಲೇ ಕುಸಿದು ಮೃತಪಟ್ಟಿದ್ದಾರೆ.

    ಬುಧವಾರ ರಾತ್ರಿ ಎಕ್ಕಾರಿನ ದುರ್ಗಾನಗರದಲ್ಲಿ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗ ಆಯೋಜನೆಗೊಂಡಿತ್ತು. ಗಂಗಯ್ಯ ಶೆಟ್ಟರು ಅರುಣಾಸುರ ಪಾತ್ರ ನಿರ್ವಹಿಸುತ್ತಿದ್ದರು. ಮುಂಜಾನೆ ದುಂಭಿಯನ್ನು ಕೊಲ್ಲಲು ಬಂಡೆಯನ್ನು ಒಡೆಯುವ ಸನ್ನಿವೇಶ ಬಂದಾಗ ಶೆಟ್ಟರು ವೇದಿಕೆಯಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

    ಕಟೀಲು ಮೇಳವೊಂದರಲ್ಲೇ ಸುದೀರ್ಘ 47 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಮೂರನೇ ಮೇಳದ ಮ್ಯಾನೇಜರ್ ಆಗಿದ್ದರು. ದೇವಿ ಮಹಾತ್ಮೆಯಲ್ಲಿನ ಮಹಿಷಾಸುರ ಪಾತ್ರ ಗಂಗಯ್ಯ ಶೆಟ್ಟರಿಗೆ ಅಪಾರವಾದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

     

    15 ವರ್ಷಗಳ ಹಿಂದೆ ಹೃದಯಾಘಾತಕ್ಕೊಳಗಾದ ಬಳಿಕ ವೈದ್ಯರ ಸಲಹೆಯಂತೆ ಅವರು ಮಹಿಷಾಸುರನ ಪಾತ್ರವನ್ನು ಮಾಡುತ್ತಿರಲಿಲ್ಲ. ಅರುಣಾಸುರ, ರಕ್ತಬೀಜ, ರುದ್ರಭೀಮ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ಅಪರೂಪಕ್ಕೊಮ್ಮೆ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ಎಂಟು ವರ್ಷಗಳ ಹಿಂದೆ ಯಕ್ಷಮಿತ್ರರು, ದುಬೈ ಇವರ ವತಿಯಿಂದ ದುಬೈಯಲ್ಲಿ ಜರಗಿದ್ದ ಪ್ರದರ್ಶನದಲ್ಲಿ ಮಹಿಷಾಸುರ ಪಾತ್ರ ಮಾಡಿದ್ದರು.

    ಅರುಣಾಸುರನ ಪಾತ್ರದಲ್ಲಿ ಅದ್ಭುತ ನಿರ್ವಹಣೆ ನೀಡಿದ್ದರು. ಕೊನೆಯ ಎರಡು ಪದ್ಯಗಳಲ್ಲಿ ವಿಶೇಷವಾಗಿ ಅಭಿನಯ ನೀಡಿದ್ದರು ಎಂದು ಎಂದು ಪ್ರೇಕ್ಷಕರು ಹಾಗೂ ಮೇಳದ ಕಲಾವಿದರು ತಿಳಿಸಿದ್ದಾರೆ.

    ಧರ್ಮಪತ್ನಿ, ಸುಪುತ್ರರಾದ ಶಶಿಕಾಂತ, ಮುಕೇಶ್ ಹಾಗೂ ಶ್ರೀನಿಧಿ, ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಗಂಗಯ್ಯ ಶೆಟ್ಟರ ನಿಧನಕ್ಕೆ ಯಕ್ಷಗಾನ ಅಭಿಮಾನಿಗಳು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.

    ರಂಗಸ್ಥಳದಲ್ಲೇ ನಿಧನರಾದ ಕಲಾವಿದರು: ಈ ಹಿಂದೆ ಇದೇ ರೀತಿಯಲ್ಲಿ ಮೇರು ಶಿರಿಯಾರ ಮಂಜು ನಾಯ್ಕ, ಕೆರೆಮನೆ ಶಂಭುಹೆಗಡೆ, ದಾಮೋದರ ಮಂಡೆಚ್ಚ, ಚಿಪ್ಪಾರು ಕೃಷ್ಣಯ್ಯ ಬಳ್ಳಾಲ್, ಅರುವ ನಾರಾಯಣ ಶೆಟ್ಟಿ, ಅಶೋಕ ಕೊಲೆಕಾಡಿ ಅವರಂತಹ ದಿಗ್ಗಜ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದ ವೇಳೆ ರಂಗದಲ್ಲೇ ಮೃತಪಟ್ಟಿದ್ದರು.

    ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಲನಾ ಭಟ್ ಅವರು ಗಂಗಯ್ಯ ಶೆಟ್ಟರನ್ನು ಈ ರೀತಿಯಾಗಿ ನೆನಪುಮಾಡಿಕೊಳ್ಳುತ್ತಾರೆ

    ಕೊನೆಗೂ ಪಾತ್ರವನ್ನು ಬಿಟ್ಟು ಕೊಡದ ಶೆಟ್ಟರು.
    ಬಂಡೆಗಲ್ಲಿಗೆ ಅರುಣಾಸುರ ಖಡ್ಗದಿಂದ ಬಡಿದಾಗ ಬಂಡೆಯೊಡೆದು ಚಿಮ್ಮುವ ವಜ್ರದುಂಬಿ, ಮತ್ತೆ ಸಭೆಯಲ್ಲಿ ಅರುಣಾಸುರ ಓಡುವ ಸನ್ನಿವೇಶ. ಕಲ್ಲಿಗೆ ಹೊಡೆದು ಭ್ರಾಮರಿಯನ್ನು ಸಾಕ್ಷಾತ್ಕರಿಸಿದ ಶೆಟ್ಟರ ಅರುಣ ಕುಸಿದು ಬಿದ್ದಿದ್ದ. ರಂಗದಲ್ಲಿ ರಾರಾಜಿಸಿದ್ದ ಖಳಪಾತ್ರಗಳ ದೊರೆ ತನ್ನ ಕೊನೆಯ ಪಾತ್ರವನ್ನೂ ಬಿಟ್ಟುಕೊಡದೆ ಮುಗಿಸಿಯೇ ಹೋಗಿದ್ದ. ಕನ್ನಡದ ಚಿತ್ರರಂಗಕ್ಕೆ ಖಳನಾಯಕ ವಜ್ರಮುನಿಯಾದರೆ ನನ್ನ ಮಟ್ಟಿಗೆ ಪೌರಾಣಿಕ ಪ್ರಸಂಗಗಳ ಯಕ್ಷಗಾನದ ಖಳನಾಯಕ ಗಂಗಯ್ಯ ಶೆಟ್ಟರು.

    ಚಿಕ್ಕಂದಿನಲ್ಲಿ ನಮ್ಮ ಊರಿಗೆ ಕಟೀಲು ಮೇಳ ಬಂದಿದ್ದಾಗ ಗಂಗಯ್ಯ ಶೆಟ್ಟರನ್ನು ಮೊದಲು ನೋಡಿದ ನೆನಪು, ನಾಟಕೀಯ ವೇಷಗಳಲ್ಲಿ ದೃಢಕಾಯರಾದ ಶೆಟ್ಟರು ಭೀಮಕಾಯರಾಗುತ್ತಿದ್ದರು, ಅವರ ವೇಷವನ್ನು ಚೌಕಿಯಲ್ಲಿ ಹತ್ತಿರದಿಂದ ನೋಡುವ ಸೊಗಸೇ ಬೇರೆ. ಬಣ್ಣಗಳನ್ನು ಅದ್ಭುತವಾಗಿ ಬಳಸಿ ಖಳಪಾತ್ರದ ಛಾಯೆ ಮುಖದಲ್ಲಿ ಎದ್ದು ಕಾಣುವಂತೆ ಬರೆಯುತ್ತಿದ್ದರು. ಶೆಟ್ಟರು ವೇಷಧರಿಸಿದ ಬಳಿಕ ನಡೆಯುತ್ತಿದ್ದ ಶೈಲಿಯೂ ಆಕರ್ಶಕ. ಹಿರಣ್ಯಕಶ್ಯಪನ ಪಾತ್ರ ಶೆಟ್ಟರ ಅದ್ಭುತ ಪಾತ್ರಗಳಲ್ಲೊಂದು, ಅದನ್ನು ನೋಡಿದ ನೆನಪಿದೆ. ಪ್ರಹ್ಲಾದನ ಮೇಲೆ ಒಮ್ಮೆ ಉಕ್ಕುವ ಮಮತೆ, ಮತ್ತೆ ಅರೆಕ್ಷಣದಲ್ಲಿ ಹುಟ್ಟಿಕೊಳ್ಳುವ ಹರಿದ್ವೇಷವನ್ನು ಅವರು ತೋರಿಸುತ್ತಿದ್ದ ಪರಿ ಅನನ್ಯ, ಅದನ್ನು ಇನ್ನು ಕಾಣುವುದಕ್ಕಿಲ್ಲ.

    ಇಂದು ಬೆಳಗ್ಗೆ ವಾಟ್ಸಾಪ್ ತೆರೆದು ನೋಡಿದಾಗ ಕಂಡದ್ದು ಮಹಾನ್ ಕಲಾವಿದನ ಕೊನೆಯ ವೇಷದ ಸುದ್ದಿ, ಕ್ಷಣಮಾತ್ರ ಕಣ್ಣು ಮಂಜಾಯ್ತು. ಛೇ ಇನ್ನವರ ವೇಷ ನೋಡುವ ಭಾಗ್ಯ ಇಲ್ಲವಲ್ಲ ಅನ್ನಿಸಿತು. ಗಂಗಯ್ಯ ಶೆಟ್ಟರ ರುದ್ರಭೀಮನ ವಿಡಿಯೋ ಸಿಡಿ ನಾನು ಹೈಸ್ಕೂಲ್ ಮುಗಿಸುವ ಸಂದರ್ಭದಲ್ಲಿ ಹೊರಬಂದಿತ್ತು, ಅದನ್ನು ಎಷ್ಟು ಬಾರಿ ನೋಡಿದ್ದೇನೋ ನನಗೇ ಗೊತ್ತಿಲ್ಲ. ನಮ್ಮ ಕಾಲದ ರುದ್ರಭೀಮ ಎಂದರೆ ಗಂಗಯ್ಯ ಶೆಟ್ಟರದ್ದು ಎನ್ನುವ ಭಾವನೆ ಇವತ್ತಿಗೂ ಜೀವಂತವಾಗಿದೆ.

    ಅನೇಕ ಕ್ಯಾಸೆಟ್ ಗಳಲ್ಲಿ ಅವರ ಧ್ವನಿಯನ್ನಾಲಿಸಿದ್ದೇನೆ. ಚಂದಗೋಪ, ವಿದ್ಯುನ್ಮಾಲಿ,ಅರುಣಾಸುರ, ಬಣ್ಣದವೇಷ ಇತ್ಯಾದಿ ವೇಷಗಳನ್ನು ನೋಡಿದ್ದೇನೆ. ನೇರವಾಗಿ ಅವರ ವೇಷ ನೋಡಿದ್ದಕ್ಕಿಂತ ಹೆಚ್ಚು ಸಿಡಿಗಳಲ್ಲೇ ನೋಡಿದ್ದು,ಅನುಭವಿಸಿದ್ದು ಹೆಚ್ಚು. ಪಾತ್ರಗಳ ಮನೋಧರ್ಮವನ್ನರಿತುಕೊಂಡು ಸ್ವಭಾವ ಮತ್ತು ಭಾವನೆಯನ್ನು ವ್ಯಕ್ತಪಡಿಸಿ ಅದ್ಭುತವಾದ ವಾತಾವರಣ ಸೃಷ್ಟಿಸುತ್ತಿದ್ದ ವಿರಳ ಕಲಾವಿದರವರು. ಅವರ ವೇಷ ರಂಗದಲ್ಲಿ ಇದ್ದಷ್ಟು ಹೊತ್ತು ಪಾತ್ರವೇ ಆಗಿರುತ್ತಿತ್ತು ಹೊರತು ಗಂಗಯ್ಯ ಶೆಟ್ಟರು ಎಂದೂ ಕಾಣಿಸುತ್ತಿರಲಿಲ್ಲ. ಪರಂಪರೆಯ ಬಣ್ಣದವೇಷದ ಹಳೆ ತಲೆಮಾರಿನ ಕೊಂಡಿಯೊಂದು ಕಳಚಿದೆ. ಅಗಲಿದ ದಿವ್ಯಾತ್ಮಕ್ಕೆ ದೇವಿ ಭ್ರಾಮರಿ ಚಿರಶಾಂತಿಯನ್ನು ಕರುಣಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ.

    ಇಲ್ಲಿ ಗಂಗಯ್ಯ ಶೆಟ್ಟಿಯವರು ವೇದಿಕೆಯಲ್ಲಿ ಕುಸಿದು ಬೀಳುತ್ತಿರುವ ವಿಡಿಯೋ ಮತ್ತು ಈ ಹಿಂದೆ ಅವರ ನಿರ್ವಹಿಸಿದ ರುದ್ರಭೀಮ ಪಾತ್ರದ ವಿಡಿಯೋವನ್ನು ನೀಡಲಾಗಿದೆ.

    https://www.youtube.com/watch?v=RRAkNKSejyw


    ವಿಡಿಯೋ ಕೃಪೆ. ಕೆಆರ್ ಕೆ ಭಟ್