Tag: ಕಟಿಂಗ್

  • ಮೋದಿ ಗೆದ್ದಿದ್ದಕ್ಕೆ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಉಚಿತ

    ಮೋದಿ ಗೆದ್ದಿದ್ದಕ್ಕೆ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಉಚಿತ

    ಬಾಗಲಕೋಟೆ: ಲೋಕಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಪ್ರಚಂಡ ಗೆಲುವು ಸಾಧಿಸಿದ ಬೆನ್ನಲ್ಲೇ ಬಾಗಲಕೋಟೆಯ ಕ್ಷೌರಿಕರೊಬ್ಬರು ಉಚಿತವಾಗಿ ಗ್ರಾಹಕರಿಗೆ ಕಟಿಂಗ್, ಶೇವಿಂಗ್ ಮಾಡುವುದರ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

    ನಗರದ ಲಕ್ಕಿ ಹೇರ್ ಕಟಿಂಗ್ ಸೆಲೂನ್ ಮಾಲೀಕ ಸುನೀಲ್ ಶಹಪೂರ್ ಹಾಗೂ ಸಹೋದರರ ತಂಡ ಉಚಿತವಾಗಿ ಕಟಿಂಗ್, ಶೇವಿಂಗ್ ಮಾಡುವುದರ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಶಹಪೂರ್ ಬ್ರದರ್ಸ್, ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಉಚಿತ ಕಟಿಂಗ್, ಶೇವಿಂಗ್ ಮಾಡುವುದಾಗಿ ತಮ್ಮ ಅಂಗಡಿಯ ಮುಂದೆ ಬ್ಯಾನರ್ ಕೂಡ ಹಾಕಿದ್ದಾರೆ.

    ಮೋದಿ ಹಾಗೂ ಬಿಜೆಪಿ ಪಕ್ಷ ದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸುನೀಲ್ ಶಹಪೂರ್ ಈ ರೀತಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಶಹಪೂರ್ ಅವರ ಈ ಅಭಿಮಾನದ ಕಾರ್ಯ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಬೆಳಗ್ಗೆಯಿಂದಲೇ ಗ್ರಾಹಕರು ಉಚಿತ ಕ್ಷೌರ ಮಾಡಿಕೊಳ್ಳಲು ಮುಗಿ ಬಿದ್ದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 349 ಸ್ಥಾನ ಗಳಿಸಿದ್ದರೆ, ಯುಪಿಎ 82 ಹಾಗೂ ಇತರೇ 111 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅದರಲ್ಲಿ ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

  • ಕಿಚ್ಚ ಸುದೀಪ್ ಓದಿದ ಶಿವಮೊಗ್ಗದ ವಾಸವಿ ಶಾಲೆಯಲ್ಲಿ ವಿವಾದಕ್ಕೆ ಕಾರಣವಾಯ್ತು ಹೆಬ್ಬುಲಿ ಕಟಿಂಗ್

    ಕಿಚ್ಚ ಸುದೀಪ್ ಓದಿದ ಶಿವಮೊಗ್ಗದ ವಾಸವಿ ಶಾಲೆಯಲ್ಲಿ ವಿವಾದಕ್ಕೆ ಕಾರಣವಾಯ್ತು ಹೆಬ್ಬುಲಿ ಕಟಿಂಗ್

    ಶಿವಮೊಗ್ಗ: ಹೆಬ್ಬುಲಿ ಚಿತ್ರದ ಹೀರೋ ಕಿಚ್ಚ ಸುದೀಪ್ ಓದಿದ ಶಿವಮೊಗ್ಗದ ವಾಸವಿ ಶಾಲೆಯಲ್ಲಿ ಹೆಬ್ಬುಲಿ ಕಟಿಂಗ್ ವಿವಾದಕ್ಕೆ ಕಾರಣವಾಗಿದೆ.

    ಈ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬ ಹೆಬ್ಬುಲಿ ಕಟಿಂಗ್ ಮಾಡಿಸಿಕೊಂಡು ಬಂದಿದ್ದ. ಪ್ರಾರ್ಥನೆ ವೇಳೆ ಇದನ್ನು ಗಮನಿಸಿದ ದೈಹಿಕ ಶಿಕ್ಷಕರೊಬ್ಬರು ಈ ಬಾಲಕನಿಗೆ ಪೆಟ್ಟು ನೀಡಿದ್ದಾರೆ. ನಂತರ ಎರಡು ದಿನಗಳ ನಂತರ ತಲೆನೋವು ಎಂದ ಬಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿಸಲಾಗಿತ್ತು. ಅಲ್ಲಿ ಆ ಬಾಲಕನ ಸಿಟಿ ಸ್ಕ್ಯಾನ್ ಮಾಡಿದಾಗ ಯಾವುದೇ ತೊಂದರೆ ಇಲ್ಲ ಎಂದು ತಿಳಿದು ಬಂದಿದೆ.

    ಆದರೆ ಬಾಲಕನಿಗೆ ಶಾಲೆಯಲ್ಲಿ ಶಿಕ್ಷಕರು ಹೊಡೆದಿದ್ದಾರೆ ಎಂದು ಎಂಎಲ್‍ಸಿ ಪ್ರಕರಣ(ಮೆಡಿಕೋ ಲೀಗಲ್ ಕೇಸ್) ದಾಖಲಾಗಿದೆ. ಈ ಬಗ್ಗೆ ಬಾಲಕನ ತಂದೆ ಪ್ರತಿಕ್ರಿಯಿಸಿ, ನಮ್ಮದೂ ತಪ್ಪಿದೆ. ಆದರೆ ಬಾಲಕನಿಗೆ ಈ ಮುಂಚೆಯೇ ಅಪಘಾತಕ್ಕೀಡಾಗಿ ತಲೆ ಭಾಗಕ್ಕೆ ಪೆಟ್ಟಾಗಿತ್ತು. ಅದೇ ಭಾಗಕ್ಕೆ ಶಿಕ್ಷಕರು ಹೊಡೆದಿದ್ದು ನಮಗೆ ಆತಂಕ ಮೂಡಿಸಿತ್ತು. ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಬೆಳೆಸಲು ಪೆಟ್ಟು ಕೊಡಲಿ. ಆದರೆ ಮಕ್ಕಳ ಸ್ಥಿತಿಗತಿ ಯೋಚಿಸಲಿ ಎಂದಿದ್ದಾರೆ.

    ಆಡಳಿತ ಮಂಡಳಿಯವರೂ ಸಹ ಪ್ರತಿಕ್ರಿಯೆ ನೀಡಿದ್ದು, ಹೇರ್ ಸ್ಟೈಲ್, ಉಗುರು, ಯೂನಿಫಾರಂ ಇಂಥ ವಿಷಯಗಳ ಶಿಸ್ತು ಇರಲಿ ಎಂಬ ಕಾರಣಕ್ಕೆ ಪೆಟ್ಟು ಕೊಡುವುದು ಸಹಜ. ಆದರೆ ಇದರಿಂದ ಬಾಲಕನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ.