ಮಂಗಳೂರು: ಈ ವರ್ಷದಿಂದ ದಸರಾ ಕ್ರೀಡಾಕೂಟದಲ್ಲಿ ಕಂಬಳವನ್ನು ಸೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D K Shivakumar) ಘೋಷಿಸಿದ್ದಾರೆ.
ಶನಿವಾರ ಮೂಳೂರು ಅಡ್ಡೂರು ಜೋಡುಕೆರೆ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಂಬಳವನ್ನು (Kambala) ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರ ನೀಡಲಾಗುವುದು. ಬೆಂಗಳೂರಿನಲ್ಲಿಯೂ ಕಂಬಳ ನಡೆದಿದೆ. ಕಂಬಳ ಕ್ರೀಡೆಗೆ ಶಾಶ್ವತ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಡ್ರಾಮಾ: ಹೆಚ್.ಡಿ.ಕುಮಾರಸ್ವಾಮಿ ಕಿಡಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಶ್ರೀಮಂತವಾಗಿದೆ. ಧಾರ್ಮಿಕವಾಗಿ ಹಲವಾರು ಪುಣ್ಯಕ್ಷೇತ್ರಗಳಿವೆ. ಅತಿ ಹೆಚ್ಚು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ಇವೆ. ಇದಕ್ಕೆ ಪೂರಕವಾಗಿ ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಶೀಘ್ರವೇ ಪ್ರವಾಸೋದ್ಯಮ ಸಚಿವರೊಂದಿಗೆ ಇಲ್ಲಿಗೆ ಬಂದು ಹೊಸ ಕಾಯ9ಕ್ರಮ, ನೀತಿ ರೂಪಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ
ಕಾರ್ಯಕ್ರಮದಲ್ಲಿ ಶಾಸಕರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಸೇರಿ ಹಲವರು ಭಾಗಿಯಾಗಿದ್ದರು.
ಬೆಂಗಳೂರು: ʻಗುರಿ-ಒಲಿಂಪಿಕ್ ಪದಕʼ (Target Olympics Medal) ಯೋಜನೆ ಅಡಿಯಲ್ಲಿ ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳನ್ನು ಗುರುತಿಸಿ, 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಯಾರಿ ಕೈಗೊಳ್ಳಲು ವಾರ್ಷಿಕ ತಲಾ 10 ಲಕ್ಷ ರೂ.ನಂತೆ ಪ್ರೋತ್ಸಾಹ ಧನವನ್ನು 3 ವರ್ಷಗಳ ವರೆಗೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದರು.
ದಾಖಲೆಯ 16ನೇ ಬಜೆಟ್ ಮಂಡಿಸಿದ ಅವರು ಈ ಬಾರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಬಂಪರ್ ಕೊಡುಗೆಗಳನ್ನ ಘೋಷಣೆ ಮಾಡಿದ್ದಾರೆ. ಅದರಂತೆ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ (Olympics 2028) ಕ್ರೀಡಾಕೂಟಕ್ಕೆ ತಯಾರಿ ಕೈಗೊಳ್ಳಲು ವಾರ್ಷಿಕ ತಲಾ 10 ಲಕ್ಷ ರೂ.ನಂತೆ ಪ್ರೋತ್ಸಾಹ ಧನವನ್ನ ಮೂರು ವರ್ಷ ನೀಡಲಾಗುವುದು. ಅದಕ್ಕಾಗಿ ಪ್ರಸಕ್ತ ವರ್ಷಕ್ಕೆ 6 ಕೋಟಿ ರೂ. ಒದಗಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಅನುದಾನ ಘೋಷಣೆಯಾಗಿದ್ದರೂ ಬಿಡುಗಡೆಯಾಗಿಲ್ಲ: ಬಜೆಟ್ ಭಾಷಣದಲ್ಲಿ ಕೇಂದ್ರಕ್ಕೆ ಸಿದ್ದು ಗುದ್ದು
ಅಲ್ಲದೇ ಗ್ರಾಮೀಣ ಕ್ರೀಡೆಗಳಾದ ಕಂಬಳ, ಎತ್ತಿನಬಂಡಿ ಓಟ ಮತ್ತು ಮಲ್ಲಕಂಬ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು. ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಪ್ರತಿ ವಷ ಕ್ರೀಡಾಕೂಟ ಆಯೋಜಿಸಲಾಗುವುದು. 2025-26ನೇ ಸಾಲಿನಲ್ಲಿ ಈ ಉದ್ದೇಶಕ್ಕೆ 2 ಕೋಟಿ ರೂ. ಒದಗಿಸಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿಯಲ್ಲಿರುವ 20 ಎಕರೆ ನಿವೇಶನದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುವುದು ಹಾಗೂ ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು 5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡೋಮ್ ನಿರ್ಮಿಸಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ತಲಾ 3 ಕೋಟಿ ರೂ. ನಂತೆ ಒಟ್ಟು 6 ಕೋಟಿ ರೂ. ಒದಗಿಸಲಾಗುವುದು. ನಿವೇಶನ ಲಭ್ಯವಿರುವ 12 ತಾಲ್ಲೂಕು ಕೇಂದ್ರಗಳಿಗೆ ತಲಾ 2 ಕೋಟಿ ರೂ. ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಒಟ್ಟು 12 ಕೋಟಿ ರೂ ಒದಗಿಸಲಾಗುವುದು.
ಯಲಬುರ್ಗಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲ್ಲೂಕು ಕ್ರೀಡಾಂಗಣ ಹಾಗೂ ಟಿ.ನರಸೀಪುರ ತಾಲ್ಲೂಕು ಕ್ರೀಡಾಂಗಣವನ್ನು 6 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಲಾ ಒಂದರಂತೆ ಜಿಲ್ಲಾ ಕ್ರೀಡಾಂಗಣಗಳಲ್ಲಿ ಶೂಟಿಂಗ್ ರೇಂಜ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದನ್ನೂ ಓದಿ: ಅಬಕಾರಿ ಇಲಾಖೆಗೆ 40,000 ಕೋಟಿ ತೆರಿಗೆ ಸಂಗ್ರಹ ಟಾರ್ಗೆಟ್
ಕೂಡಿಗೆ ಕ್ರೀಡಾ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ 3 ಕೋಟಿ ರೂ. ಒದಗಿಸಲಾಗುವುದು. ಯಾದಗಿರಿಯ ಶಹಾಪುರದಲ್ಲಿ ಸುಸಜ್ಜಿತವಾದ ಕ್ರೀಡಾ ವಸತಿ ಶಾಲೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗುವುದು. ಮೈಸೂರು ಮತ್ತು ಬೆಳಗಾವಿಯಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು 7 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
ಬೆಂಗಳೂರಿನ ವಿದ್ಯಾನಗರದಲ್ಲಿರುವ ಈಜುಕೊಳವನ್ನು ಹೀಟಿಂಗ್ ಮತ್ತು ಡೈವಿಂಗ್ ಪೂಲ್ ವ್ಯವಸ್ಥೆಗಳನ್ನೊಳಗೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು. ಚಾಮರಾಜನಗರದಲ್ಲಿ ಒಲಿಂಪಿಕ್ಸ್ ಮಾದರಿಯ (50 ಮೀಟರ್) ಈಜುಕೊಳವನ್ನು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್, ಖೋಖೋ ಅಕಾಡೆಮಿಗಳನ್ನು ಸ್ಥಾಪಿಸಲು 2 ಕೋಟಿ ರೂ. ಒದಗಿಸಲಾಗುವುದು.
ಕ್ರೀಡಾಪಟುಗಳು ತರಬೇತಿ ಪಡೆಯಲು ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಹಕಾರಿಯಾಗುವಂತೆ ಶಾಲಾ-ಕಾಲೇಜುಗಳ (ವೃತ್ತಿಪರ ಕಾಲೇಜುಗಳು ಸೇರಿದಂತೆ) ವಾರ್ಷಿಕ ಹಾಜರಾತಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗಿನ ಕ್ರೀಡಾಪಟುಗಳಿಗೆ ಶೇ.15 ರಷ್ಟು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಶೇ.25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗುವುದು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಶೇ.5ರಷ್ಟು ಕೃಪಾಂಕವನ್ನು ವೃತ್ತಿಪರ, ಪದವಿ ಮತ್ತು ಉನ್ನತ ಶಿಕ್ಷಣದ ಪ್ರವೇಶದಲ್ಲಿ ನೀಡಲಾಗುವುದು. ಇದನ್ನೂ ಓದಿ: ಬೆಂಗಳೂರು ನಗರ ವಿವಿ ಇನ್ಮುಂದೆ ಪ್ರಧಾನಿ ಮನಮೋಹನ್ ಸಿಂಗ್ ವಿವಿ
ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಶಾಲೆಗಳಲ್ಲಿ ಆಟದ ಮೈದಾನ ನಿರ್ಮಿಸಲು ತಲಾ 5 ಲಕ್ಷ ರೂ. ವರೆಗೆ ನೆರವು ನೀಡಲಾಗುವುದು. ನಿವೃತ್ತಿ ಹೊಂದಿದ ಕುಸ್ತಿಪಟುಗಳಿಗೆ ನೀಡಲಾಗುತ್ತಿರುವ ಮಾಸಾಶನವನ್ನು, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಿಗೆ 6,000 ರೂ.ಗಳಿಗೆ, ರಾಷ್ಟ್ರ ಮಟ್ಟದ ಕುಸ್ತಿಪಟುಗಳಿಗೆ 5,000 ರೂ.ಗಳಿಗೆ ಹಾಗೂ ರಾಜ್ಯ ಮಟ್ಟದ ಕುಸ್ತಿಪಟುಗಳಿಗೆ 4,500 ರೂ. ಗಳಿಗೆ ಹೆಚ್ಚಿಸಲಾಗುವುದು.
ಒಲಿಂಪಿಕ್ಸ್, ಕಾಮನ್ ವೆಲ್ತ್ ಹಾಗೂ ಏಷಿಯನ್ ಗೇಮ್ಸ್‌ಗಳಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳ ಸೇವೆಯನ್ನು ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಪಡೆಯಲಾಗುವುದು.
– ತುಳುನಾಡಿನ ಜಾನಪದ ಕ್ರೀಡೆ ಕಂಡು ಸಿಎಂ ಫುಲ್ ಖುಷ್ – ಕಂಬಳ ಕೋಣಗಳ ಜೊತೆ ಫೋಟೋಗೆ ಫೋಸ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಮಂಗಳೂರು: ಸ್ಪೀಕರ್ ಯು.ಟಿ.ಖಾದರ್ ನೇತೃತ್ವದ ಕಂಬಳದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ಕಂಬಳ ಕೂಟದಲ್ಲಿ ಕಂಬಳ ಪೇಟಾ ತೊಟ್ಟು ಮಿಂಚಿದರು. ತುಳುನಾಡ ಜಾನಪದ ಆಟ ಕಂಡು, ಕೋಣಗಳ ಜೊತೆ ಪೋಟೋಗೆ ಪೋಸ್ ಕೊಟ್ಟು ಖುಷಿ ಪಟ್ಟರು.
ಕಂಬಳ ತುಳುನಾಡ ಜನಪದ ಕ್ರೀಡೆ, ತುಳುವರ ಸಂಸ್ಕೃತಿ ಕಂಬಳ. ಕಳೆದ ಮೂರು ವರ್ಷಗಳಿಂದ ಸ್ಪೀಕರ್ ಯು.ಟಿ.ಖಾದರ್, ತನ್ನ ಕ್ಷೇತ್ರದ ನರಿಂಗಾನ ಎಂಬಲ್ಲಿ ಲವ-ಕುಶ ಜೋಡುಕರೆ ಕಂಬಳವನ್ನು ಅದ್ದೂರಿಯಾಗಿ ಆಯೋಜನೆ ಮಾಡುತ್ತಿದ್ದಾರೆ. ಈ ಬಾರಿ ವಿಶೇಷ ಎಂಬಂತೆ ಸಿಎಂ ಸಿದ್ದರಾಮಯ್ಯ ಕಂಬಳದಲ್ಲಿ ಭಾಗವಹಿಸಿ ಕಂಬಳಕ್ಕೆ ಹೊಸ ಮೆರುಗು ತುಂಬಿದ್ದರು. ಕಂಬಳಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಆರತಿ ಬೆಳಗಿ, ಸಿಡಿಮದ್ದು ಸಿಡಿಸಿ ಅದ್ದೂರಿ ಸ್ವಾಗತ ನೀಡಲಾಯಿತು. ಕಂಬಳ ಪೇಟಾ ತೊಡಿಸಿ, ಬೆಳ್ಳಿ ನೊಗ, ಬೆಳ್ಳಿಯ ಹಿಡಿಯ ಬೆತ್ತ ನೀಡಿ ಗೌರವಿಸಲಾಯಿತು. ಕಂಬಳ ಕಂಡು ಆನಂದಿಸಿದ ಸಿಎಂ, ಹಿಂದೆ ಕಂಬಳ ನಿಂತಾಗ ನಾವೇ ನಿಷೇಧ ತೆರವುಗೊಳಿಸಿದ್ದು. ಕರಾವಳಿಯ 24 ಕಂಬಳ ನಡೆಸಲು ಪ್ರತಿ ಕಂಬಳಕ್ಕೆ 5 ಲಕ್ಷ ಸರ್ಕಾರ ನೀಡಿದೆ. ಎಲ್ಲ ಭಾಷೆ ಧರ್ಮ, ಸಂಸ್ಕೃತಿಯವರು ಭಾಗವಹಿಸುವ ಕಂಬಳವನ್ನು ನಾವು ಉಳಿಸಿ ಬೆಳೆಸಬೇಕು ಎಂದರು. ಸಿಎಂ ಸಿದ್ದುಗೆ ಸಚಿವ ದಿನೇಶ್ ಗುಂಡೂರಾವ್, ರಹಿಮಾನ್ ಖಾನ್ ಸಾಥ್ ನೀಡಿದರು.
ತುಳು ಭಾಷೆಯನ್ನು ಎರಡನೇ ಭಾಷೆ ಮಾಡಬೇಕು ಎನ್ನುವುದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸಿಎಂ ಆಶ್ವಾಸನೆ ನೀಡಿದರು. ಕಂಬಳ ಕೋಣಗಳ ಜೊತೆ ನಿಂತು ಪೋಟೋಗೆ ಪೋಸ್ ನೀಡಿದರು. ಕಂಬಳಕ್ಕೆ ಪ್ರೋತ್ಸಾಹ ನೀಡಿ, ಸರ್ಕಾರ ಓಟಗಾರಿಗೆ ವಿಮೆ ನೀಡಬೇಕು ಎಂದು ಕಂಬಳ ಸಮಿತಿಯವರು ಮನವಿ ಸಲ್ಲಿಸಿದರು.
ಬೆಂಗಳೂರು: ಅಕ್ಟೋಬರ್ 25 ರಂದು ಬೆಂಗಳೂರಿನಲ್ಲಿ (Bengaluru) ಆಯೋಜನೆಗೊಂಡಿರುವ ಕಂಬಳವನ್ನು (Kambala) ನಿಲ್ಲಿಸುವಂತೆ ಕೋರಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಸಂಸ್ಥೆ ಹೈಕೋರ್ಟ್‌ನಲ್ಲಿ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರ ಪೀಠದ ಮುಂದೆ ಸೋಮವಾರ ಅರ್ಜಿಯನ್ನು ತುರ್ತು ವಿಚಾರಣೆ ಮಾಡಬೇಕೆಂದು ಮನವಿ ಮಾಡಿದರು.
ಈ ವರ್ಷದ ಜುಲೈನಲ್ಲಿ ಪಿಐಎಲ್ (PIL) ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಅದನ್ನು ಪಟ್ಟಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ತುರ್ತು ವಿಚಾರಣೆ ಕೋರಿ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಮಂಗಳವಾರ (ಅ.21 ರಂದು) ವಿಚಾರಣೆ ನಡೆಸುವುದಾಗಿ ಹೇಳಿತು.
ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನ ಬಂಡಿ ಓಟಕ್ಕೆ ಅವಕಾಶ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಳೆದ ವರ್ಷ ಮೇ ತಿಂಗಳಲ್ಲಿ ಎತ್ತಿಹಿಡಿದಿತ್ತು. ಈ ತೀರ್ಪಿನ ವಿರುದ್ಧ ಪೇಟಾ ಮರು ಪರಿಶೀಲನಾ ಅರ್ಜಿಯನ್ನು ಪೇಟಾ ಸಲ್ಲಿಸಿದೆ.
ಬೆಂಗಳೂರು: 2024-25ನೇ ಸಾಲಿನಲ್ಲಿ ರಾಜ್ಯದ 5 ಕಡೆ ನಡೆಯಲಿರುವ ಕಂಬಳಕ್ಕೆ (Kambala) ಈ ಅಧಿವೇಶನ ಮುಗಿಯುವುದರ ಒಳಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಹೆಚ್.ಕೆ ಪಾಟೀಲ್ (HK Patil) ಪ್ರಕಟಿಸಿದ್ದಾರೆ.
2023-24 ಆರ್ಥಿಕ ವರ್ಷದಲ್ಲಿ ಜಾನಪದ ಕ್ರೀಡೆ ಕಂಬಳ ಸಂಘಟಕರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಸಂಘಕರಿಗೆ ಸಮಸ್ಯೆ ಆಗಿದೆ. ರಾಜ್ಯದ 20 ಕಡೆ ಕಂಬಳ ನಡೆದಿದೆ. ಸದಾನಂದಗೌಡರು ಸಿಎಂ ಆಗಿದ್ದಾಗ 1 ಕೋಟಿ ರೂ. ಬಿಡುಗಡೆ ಮಾಡಿದ್ದರು. ಈ ಸರ್ಕಾರ ಯಾಕೆ ಅನುದಾನ ಬಿಡುಗಡೆ ಮಾಡಿಲ್ಲ? ಲಕ್ಷಾಂತರ ಜನ ಈ ಕಂಬಳವನ್ನೇ ನೆಚ್ಚಿಕೊಂಡಿದ್ದಾರೆ. ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲು ಇಡಬೇಕಿತ್ತು. ಕಳೆದ ವರ್ಷದ ಕಂಬಳದ ಅನುದಾನನ್ನೂ ಬಿಡುಗಡೆ ಮಾಡಿಲ್ಲ, ಏಕೆ ಎಂದು ಪ್ರತಾಪ್ ಸಿಂಹ ನಾಯಕ್ ಪ್ರಶ್ನೆ ಮಾಡಿದರು. ಇದನ್ನೂ ಓದಿ: ನ್ಯಾಯಾಂಗದ ಬಗ್ಗೆ ಗೌರವವಿದೆ, ಅಪರಾಧ ಸಾಬೀತಾದ್ರೆ ಯಾರೇ ಆಗಿದ್ರೂ ಶಿಕ್ಷೆ ಆಗಲಿ: ಅನು ಪ್ರಭಾಕರ್
ಇದಕ್ಕೆ ಉತ್ತರಿಸಿದ ಸಚಿವ ಹೆಚ್.ಕೆ ಪಾಟೀಲ್, ಕಳೆದ ವರ್ಷದ ಕಂಬಳದ ಅನುದಾನ ಬಿಡುಗಡೆ ಆಗಿಲ್ಲ. 2 ಕಂಬಳಕ್ಕೆ 5 ಮತ್ತು 10 ಲಕ್ಷ ರೂ. ಅನುದಾನ ನೀಡಿದ್ದೇವೆ. ಡಿಸಿ ಅವರು ಬಿಲ್ ತಯಾರಿಸಿ ಮಾರ್ಚ್ 20ರ ಒಳಗೆ ಕಳಿಸಿದ್ದಾರೆ. ಬಿಲ್ ಕಳಿಸೋದು ತಡವಾಗಿ ಅನುದಾನ ಬಿಡುಗಡೆ ಆಗಿಲ್ಲ. ಕೂಡಲೇ ಅನುದಾನ ಬಿಡುಗಡೆ ಮಾಡುತ್ತೇವೆ. ಈ ಅಧಿವೇಶನ ಮುಗಿಯುವ ಒಳಗೆ ಹಣ ಬಿಡುಗಡೆ ಮಾಡ್ತೀವಿ. ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ ರಾಜ್ಯದ 5 ಕಡೆ ನಡೆಯುವ ಕಂಬಳಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುತ್ತೇವೆ. ಕ್ರೀಡೆಯೊಳಗೆ ನಾವು ರಾಜಕೀಯ ಮಾಡೋದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಉದ್ಯೋಗ ಕಲ್ಪಿಸುವ ವಿಧೇಯಕ ತಡೆಹಿಡಿದು ಕನ್ನಡಿಗ, ಕರ್ನಾಟಕಕ್ಕೆ ಅಪಮಾನ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
ಉಡುಪಿ: ಅಪರ್ಣಾ (Aparna) ಕೊನೆಯುಸಿರೆಳೆಯುವ ಮೂಲಕ ಸ್ವಚ್ಛ ನಿರೂಪಣೆ, ಸ್ವರಭಾರ, ಕನ್ನಡದ ಧ್ವನಿ ಎಲ್ಲವೂ ಅಡಗಿಹೋಯಿತು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕಂಬನಿ ಮಿಡಿದರು.
ಉಡುಪಿಯಲ್ಲಿ (Udupi) ಮಾತನಾಡಿದ ಅವರು, ಮಸಣದ ಹೂ ಚಿತ್ರದ ಮೂಲಕ ಅಪರ್ಣಾ ಚಿತ್ರಲೋಕಕ್ಕೆ ಪದಾರ್ಪಣೆ ಮಾಡಿದರು. ನಮ್ಮ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳ ನಿರೂಪಣೆಗೆ ಅವರೇ ಬರುತ್ತಿದ್ದರು. ಕರಾವಳಿಯ ಕಂಬಳದ ಬಗ್ಗೆ ನಿರೂಪಣೆ ಮಾಡುವಾಗ, ಕಂಬಳದ ಗುರಿಕಾರ ಪ್ರಶಸ್ತಿ ಸ್ವೀಕರಿಸಲು ಬರಬೇಕು ಎಂದು ಹೇಳಿದ್ದರು. ಕಂಬಳದ ಬಗ್ಗೆ ಅಪರ್ಣಾಗೆ ಕಲ್ಪನೆ ಇರಲಿಲ್ಲ. ಆದರೆ ವಿಚಾರವನ್ನು ತಿಳಿದುಕೊಂಡು ನಿರೂಪಣೆ ಮಾಡುತ್ತಿದ್ದರು ಎಂದು ಹಿಂದಿನ ಅನುಭವವನ್ನು ಬಿಚ್ಚಿಟ್ಟರು. ಇದನ್ನೂ ಓದಿ: Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್ ಪತ್ತೆ!
ಅಪರ್ಣಾ ಯಾವುದೇ ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯ ಮೂಲಕ ಮೆರುಗು ನೀಡುತ್ತಿದ್ದರು. ಕನ್ನಡದ ಧ್ವನಿಯೊಂದು ಹುದುಗಿ ಹೋಗಿದೆ. ಅಪರ್ಣಾ ನಿಧನದಿಂದ ಕರ್ನಾಟಕವೇ ದುಃಖದಲ್ಲಿ ಮುಳುಗಿದೆ. ಅವರ ಧ್ವನಿ ಭಾರ ಜನಸಾಮಾನ್ಯರ ಮೇಲೂ ಪರಿಣಾಮ ಬೀರಿದೆ. ಅಪರ್ಣಾ ಕನ್ನಡದ ಮನೆಮಗಳು. ಅರ್ಪಣಾ ಅವರ ಜಾಗ ಖಾಲಿಯಾಗಿಯೇ ಉಳಿಯಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ – ಸಿಎಂ ಖಡಕ್ ಮಾತು
ಬೆಂಗಳೂರು: ಕಳೆದರೆಡು ದಿನದಿಂದ ಸಿಲಿಕಾನ್ ಸಿಟಿ ಜನರನ್ನ ಮೈನವಿರಿಳಿಸಿದ್ದ ಕರಾವಳಿ ಕಂಬಳಕ್ಕೆ (Karavali Kambala) ಅದ್ದೂರಿ ತೆರೆ ಬಿದ್ದಿದೆ. 6 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 158 ಜೊತೆ ಕಂಬಳದ ಕೋಣಗಳು ಭಾಗಿಯಾಗಿದ್ದವು. ಶನಿವಾರ ಬೆಳಗ್ಗೆ ಆರಂಭವಾಗಿದ್ದ ಕಂಬಳಕ್ಕೆ ಸೋಮವಾರ ಬೆಳಗ್ಗಿನ ಜಾವ 4 ವೇಳೆಗೆ ತೆರೆ ಬಿದ್ದಿದೆ.
6 ವಿಭಾಗಗಳ ಪೈಕಿ ಕನಹಲಗೆ ವಿಭಾಗದಲ್ಲಿ, ಬೊಳ್ಳಂಬಳ್ಳಿಯ ಶ್ರೀರಾಮಚೈತ್ರ ಪರಮೇಶ್ವರ ಭಟ್ ಕೋಣಗಳು, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಕೋಣ, ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯಾ ಪೂಜಾರಿ ಕೋಣಗಳು, ನೇಗಿಲ ಹಿರಿಯ ವಿಭಾಗದಲ್ಲಿ ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಕೋಣಗಳು, ನೇಗಿಲ ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಗೆಲ್ಲುವ ಮೂಲಕ ಬೆಂಗಳೂರಿಲ್ಲಿ ಇತಿಹಾಸ ನಿರ್ಮಿಸಿದವು. ಇದರ ಜೊತೆ ಅಡ್ಡ ಹಲಗೆ ವಿಭಾಗದ ಫೈನಲ್ ಪಂದ್ಯ ಸಾಕಷ್ಟು ರೋಚಕತೆಗೆ ಕಾರಣ ಆಯ್ತು. ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಅದ್ಧೂರಿ ತೆರೆ
ಫೈನಲ್ ಪಂದ್ಯದಲ್ಲಿ ಎರಡು ತಂಡದ ಕೋಣಗಳು ಸಮನಾಗಿ ಓಡುವ ಮೂಲಕ ಪಂದ್ಯ ಟೈ ಆಗಿತ್ತು. ನಂತರ ಮತ್ತೆ ಎರಡು ತಂಡಗಳ ನಡುವೆ ಟೈ ಬ್ರೇಕರ್ ಪಂದ್ಯ ಆಯೋಜನೆ ಮಾಡಲಾಗಿ, ಆ ಓಟದಲ್ಲಿ ಎಸ್‍ಎಂಎಸ್ ಫ್ಯಾಮಿಲಿ ಬೆಂಗಳೂರು ತಂಡ ಗೆಲ್ಲುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇನ್ನೂ ಕಂಬಳ ಅದ್ದೂರಿ ತೆರೆ ವಿಚಾರ ಸಂಬಂಧ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ ಮಾತನಾಡಿ, ಬೆಂಗಳೂರು ಕಂಬಳ 100ಕ್ಕೆ 100 ಯಶಸ್ವಿಯಾಗಿದೆ.
ಕಂಬಳವನ್ನ 9 ರಿಂದ 10 ಲಕ್ಷ ವೀಕ್ಷಣೆ ಮಾಡಿದ್ದಾರೆ. ದೊಡ್ಡ ಯಶಸ್ಸು ಸಿಕ್ಕಿದೆ. ಇದಕ್ಕೆ ಶ್ರಮಿಸಿದ ಎಲ್ಲಾರಿಗೂ ಧನ್ಯವಾದ ಎಂದರು. ಇದೇ ಸಂಧರ್ಭದಲ್ಲಿ ಕಂಬಳ ಓಟದಲ್ಲಿ ಗೆದ್ದ ಮಾಲೀಕರು, ಮತ್ತು ಓಟಗಾರರು ಸಂತಸವನ್ನ ಹಂಚಿಕೊಂಡರು. ಸ್ಪರ್ಧೆ ಮುಕ್ತಾಯದ ಬಳಿಕ ಕಂಬಳ ವಿಜೇತರಿಗೆ ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಭಾಗಿಯಾದರು.
ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಅಭಿನಯದ ಕಾಂತಾರ (Kantara) ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಚಿನ್ನದ ಪದಕ ದಕ್ಕಿದೆ.
ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ (Gold Medal) ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಈ ಕೋಣಗಳನ್ನು ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದರು.
ಈ ಕುರಿತು ಕೋಣಗಳ ಮಾಲೀಕರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬೆಂಗಳೂರು ಕಂಬಳಕ್ಕೆ ರಾಯಭಾರಿಯಾಗಿ ರಿಷಭ್ ಶೆಟ್ಟಿ ಇರಬೇಕಿತ್ತು. ಕಾಂತಾರ ಚಿತ್ರ ಯಶಸ್ವಿಗೆ ಕಂಬಳದ ಕೋಣಗಳು ಕಾರಣ. ಆದರೆ ಇವತ್ತು ಅವರು ಇಲ್ಲಿಗೆ ಬಂದಿಲ್ಲ. ಊರಿನ ಬಗ್ಗೆ ಇಡೀ ದೇಶಕ್ಕೆ ಪ್ರಚಾರ ಮಾಡುತ್ತಾರೆ ಎಂದರು. ಇದನ್ನೂ ಓದಿ: ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?
ರಿಷಬ್ ಅವರು ಬಂದು ಇದು ನಮ್ಮ ಕೋಣ ಅಂತಾ ನಿಲ್ಲಬೇಕಿತ್ತು. ಆದರೆ ಅವರು ಇಂದು ಬರದಿರುವುದು ನಮಗೆ ಬೇಸರವಾಗ್ತಿದೆ ಎದು ತಮ್ಮ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ 2ನೇ ದಿನದ ಕಂಬಳ (Kambala) ನಡೆಯುತ್ತಿದೆ. ಬೆಳಗ್ಗೆ ಸುಮಾರು 10 ಗಂಟೆಗೆ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಮತ್ತೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ನವದೆಹಲಿ ಎನ್‌ಸಿಸಿಎಫ್ ಅಧ್ಯಕ್ಷ ವಿಶಾಲ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಇಂದು ಮಧ್ಯಾಹ್ನ ಕಂಬಳದಲ್ಲಿ ಭಾಗಿಯಾಗಲಿದ್ದಾರೆ. ಸಾಧಕ ಕುಸ್ತಿಪಟುಗಳಿಗೆ ಕಂಬಳ ಸಮಿತಿಯ ವತಿಯಿಂದ ಸನ್ಮಾನ ನಡೆಯಲಿದ್ದು, ಇಂದು ಸಂಜೆ 4 ಗಂಟೆಗೆ ಕಂಬಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ನೆರವೇರಲಿದೆ.
ಅತ್ತ ವೇದಿಕೆ 2ರಲ್ಲಿ ನಿರಂತರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಕರಂಗೋಲು ನೃತ್ಯ, ಗಂಡುಕಲೆ ಯಕ್ಷಗಾನ, ಆಟಿ ಕಳಂಜ, ಆಕ್ಸಿಜನ್ ಡ್ಯಾನ್ಸ್ ಟೀಮ್ ಮಂಗಳೂರು ಕಾಮಿಡಿ ಕಲಾವಿದರಿಂದ ಪ್ರದರ್ಶನ, ಮಿಮಿಕ್ರಿ, ಮಂಕಾಳಿ ನಲಿಕೆ ಇರಲಿದೆ.
ಇಂದು ಸಂಜೆ 7 ರಿಂದ ಸೆಲೆಬ್ರಿಟಿಗಳ ಸಂಗೀತ ಸಂಜೆ ಆರಂಭವಾಗಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಂಗೀತ ರಸ ಸಂಜೆ ಬಳಿಕ ಇಂದು ನಾಗರಾಜ್ ಅವರ ಮ್ಯೂಸಿಕಲ್ ಪ್ರೋಗ್ರಾಂ ಇರಲಿದೆ. ಅದಾದ ನಂತರ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರಿಂದ ಕೂಡ ಸಂಗೀತ ಪ್ರೋಗ್ರಾಂ ಇರಲಿದೆ.
ನಿನ್ನೆ ಪ್ರಾರಂಭವಾದ ಕಂಬಳ ಕೋಣಗಳ ಓಟದ ಸ್ಪರ್ಧೆ ಮುಂಜಾನೆಯವರೆಗೂ ಮುಂದುವರಿದಿದೆ. ರಾಜ ಕರೆ, ಮಹಾರಾಜಕರೆಯಲ್ಲಿ ಮಿಂಚಿನ ಓಟದಲ್ಲಿ ಕಂಬಳ ಕೋಣಗಳು ಓಡಿವೆ. ಮಧ್ಯರಾತ್ರಿಯವರೆಗೂ ಕಂಬಳ ಅಭಿಮಾನಿಗಳು ಕಿಕ್ಕಿರಿದಿದ್ದರು. ಮುಂಜಾನೆಯಲ್ಲಿ ಅಭಿಮಾನಿಗಳ ಸಂಖ್ಯೆ ಕೊಂಚ ಕಡಿಮೆಯಾಗಿತ್ತು.
ಇದುವರೆಗೆ ಜ್ಯೂನಿಯರ್ ಕೋಣಗಳ 2 ಸುತ್ತಿನ ಕಂಬಳ ಓಟ ಮುಕ್ತಾಯವಾಗಿದೆ. 175 ಕೋಣಗಳು ಈ ಜ್ಯೂನಿಯರ್ ಕಂಬಳ ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿವೆ. ಇದೀಗ ಜ್ಯೂನಿಯರ್ ಫ್ರೀ ಕ್ವಾಟರ್ ಫೈನಲ್ ಕಂಬಳ ಓಟ ನಡೆಯಲಿದೆ. ಇದನ್ನೂ ಓದಿ: ಕಡ್ಲೆಕಾಯಿ ಪರಿಷೆಯ ತುತ್ತೂರಿ ವಿರುದ್ಧ ಬಸವನಗುಡಿ ನಿವಾಸಿಗಳು ಗರಂ!
ತುಮಕೂರು: ಕಂಬಳ (Kambala) ನೋಡಿ ವಾಪಸ್ಸಾಗುತ್ತಿದ್ದ ವೇಳೆ ಬೋರ್‌ವೆಲ್ ಲಾರಿ (Borewell Lorry) ಹಾಗೂ ಕಾರಿನ (Car) ನಡುವೆ ಭೀಕರ ಅಪಘಾತ (Accident) ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ಚಿಗಣಿಪಾಳ್ಯ ಬಳಿ ಘಟನೆ ನಡೆದಿದೆ. ಘಟನೆಯಲ್ಲಿ ಮಂಗಳೂರಿನ (Mangaluru) ಪೆರಾರ ಬಜಪ್ಪೆ ಗ್ರಾಮದ ನಿವಾಸಿ ಕಿಶನ್ ಶೆಟ್ಟಿ(20) ಹಾಗೂ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಭಟ್ಟರ ತೋಟ ಗ್ರಾಮದ ನಿವಾಸಿ ಫಿಲೀಪ್ ಲೋಬೋ (32) ಮೃತಪಟ್ಟಿದ್ದಾರೆ. ನಿತೀಶ್ ಬಂಡಾರಿ, ಪ್ರೀತಿ ಲೋಬೋ ಮತ್ತು ಹರೀಶ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಫ್ಲೈಓವರ್‌ಗೆ ಬಸ್ ಡಿಕ್ಕಿ- ನಾಲ್ವರಿಗೆ ಗಾಯ
ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಹಾಗೂ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 3ನೇ ಬ್ಯಾಚ್ ಒತ್ತೆಯಾಳುಗಳನ್ನು ಇಂದು ಬಿಡುಗಡೆ ಮಾಡಲಿದೆ ಹಮಾಸ್