ನವದೆಹಲಿ: ಈ ವರ್ಷದ ಅಂತ್ಯದ ವೇಳೆಗೆ ತನ್ನ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ (Windows) ಅನ್ನು ದೇಶದಲ್ಲೇ ಅಭಿವೃದ್ಧಿಪಡಿಸಿದ ಮಾಯಾ ಒಎಸ್‌ಗೆ (Maya OS) ಬದಲಾಯಿಸಲು ಭಾರತೀಯ ರಕ್ಷಣಾ ಸಚಿವಾಲಯ (Indian Defence Ministry) ನಿರ್ಧರಿಸಿದೆ.
ಕಳೆದ ಕೆಲ ವರ್ಷಗಳಿಂದ ಕಂಪ್ಯೂಟರ್‌ಗಳಲ್ಲಿ (Computer) ಮಾಲ್‌ವೇರ್‌ಗಳು ಹೆಚ್ಚುತ್ತಿದ್ದು, ಈ ದಾಳಿಗಳ ವಿರುದ್ಧ ತಮ್ಮ ಸಿಸ್ಟಂಗಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಮಾಯಾ ಒಎಸ್ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಉಬುಂಟು ಆಧಾರಿತ ಸ್ವದೇಶಿ ಆಪರೇಟಿಂಗ್ ಸಿಸ್ಟಂ ಆಗಿದೆ. ಇದು ಮೈಕ್ರೋಸಾಫ್ಟ್‌ಗೆ ಹೋಲಿಸಿದರೆ ಕ್ರಿಯಾತ್ಮಕತೆ ಹಾಗೂ ಇಂಟರ್ಫೇಸ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡುವ ಗುರಿ ಹೊಂದಿದೆ.
ಏನಿದು ಮಾಯಾ ಒಎಸ್?
ಮಾಯಾ ಒಎಸ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (C-DC) ಹಾಗೂ ನ್ಯಾಷನಲ್ ಇನ್‌ಫರ್ಮ್ಯಾಟಿಕ್ಸ್ ಸೆಂಟರ್‌ನ (NIC) ತಜ್ಞರ ತಂಡ ಅಭಿವೃದ್ಧಿಪಡಿಸಿದೆ. ಇದು ವಿಂಡೋಸ್‌ಗಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತಿದ್ದು, ರಕ್ಷಣಾ ಸಚಿವಾಲಯ ಸಾಮಾನ್ಯವಾಗಿ ಬಳಸುವ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಸಹ ಬೆಂಬಲಿಸುತ್ತದೆ.
ಮಾಯಾ ಒಎಸ್ ಬಳಸಲು ಮತ್ತು ನಿರ್ವಹಿಸಲು ಸುಲಭವಾಗಿದ್ದು, ವಿಂಡೋಸ್‌ಗೆ ಹೋಲುವ ಬಳಕೆದಾರ ಇಂಟರ್ಫೇಸ್ ಇದೆ. 2021ರಲ್ಲಿ ಸರ್ಕಾರ ಹಾಗೂ ರಕ್ಷಣಾ ವ್ಯವಸ್ಥೆಗಳ ಮೇಲೆ ಸೈಬರ್ ದಾಳಿ ಪ್ರಕರಣಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ಮಾಯಾ ಒಎಸ್ ಅಭಿವೃದ್ಧಿ ಪಡಿಸಲು ಮುಂದಾಯಿತು. ವರದಿಗಳ ಪ್ರಕಾರ ಇದನ್ನು ಕೇವಲ 6 ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಮಾಯಾ ಒಎಸ್ ಬಿಡುಗಡೆ ಯಾವಾಗ?
ಮಾಯಾ ಒಎಸ್ ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ. ಆಗಸ್ಟ್ 15 ರೊಳಗೆ ಸೌತ್ ಬ್ಲಾಕ್‌ನಲ್ಲಿರುವ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಮಾಯಾವನ್ನು ಇನ್‌ಸ್ಟಾಲ್ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ಭಾರತೀಯ ರಕ್ಷಣಾ ಸಚಿವಾಲಯದ ಸಿಸ್ಟಂಗಳಲ್ಲಿ ವಿಂಡೋಸ್ ಬದಲು ಮಾಯಾ ಒಎಸ್ ಇನ್‌ಸ್ಟಾಲ್ ಮಾಡಲಾಗುತ್ತದೆ.
ಮಾಯಾ ಒಎಸ್ ಕಂಪ್ಯೂಟರ್ ಸಿಸ್ಟಮ್‌ಗಳ ಸುರಕ್ಷತೆಯನ್ನು ಸುಧಾರಿಸುವುದಲ್ಲದೆ, ಸ್ಥಳೀಯ ಆವಿಷ್ಕಾರವನ್ನು ಉತ್ತೇಜಿಸುತ್ತದೆ ಮತ್ತು ವಿದೇಶಿ ಸಾಫ್ಟ್‌ವೇರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮಾಯಾ ಒಎಸ್ ಅನ್ನು ಮುಂದಿನ ದಿನಗಳಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿಯೂ ಅಳವಡಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: JioBook: 16,499 ರೂ.ಗೆ ಸಿಗಲಿದೆ ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್..!
ಮನುಷ್ಯ ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ರೀತಿಯಾಗಿ ಎಐನ (Artificial Intelligence) ಜಾಲಕ್ಕೆ ಸಿಲಕಿದ್ದಾನೆ. ಈಗ ಎಐ (AI) ಬದುಕಿನ ಭಾಗವಾಗಿ ಹೋಗಿದೆ. ಉದಾಹರಣೆಗೆ ನಮ್ಮ ಆಸಕ್ತಿದಾಯಕ ವಿಚಾರಗಳೇ ನಮಗೆ ಇಂಟರ್‌ನೆಟ್‌ನಲ್ಲಿ ಲಭಿಸುತ್ತದೆ. ಯಾಕೆಂದರೆ ಕಾರಣ ಈ ಎಐ, ನಾವು ಗೂಗಲ್ ಅಥವಾ ಯೂಟ್ಯೂಬ್‍ನಲ್ಲಿ ನಮಗೆ ಬೇಕಾದ ಮಾಹಿತಿ ಹುಡುಕಿದಾಗ ಬೇರೆ ಏನನ್ನಾದರೂ ನೋಡುವಾಗಲೂ ಈ ಹಿಂದೆ ಹುಡುಕಿದ ವಿಚಾರಕ್ಕೆ ಸಂಬಂಧಿಸಿದ ಜಾಹಿರಾತುಗಳು, ಅದರ ವಿಧಗಳು ನಮಗೆ ಕಾಣಿಸುತ್ತವೆ.
ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕಾರ್ತಿಯವರು 1956ರಲ್ಲಿ ಮೊದಲ ಬಾರಿಗೆ ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಪದವನ್ನು ಬಳಕೆ ಮಾಡುತ್ತಾರೆ. ನಂತರದ ಬೆಳವಣಿಗೆಯಲ್ಲಿ ಸಂಶೋಧನೆಗಳಿಂದ ಇಂದು ಎಐ ತಂತ್ರಜ್ಞಾನ ಜಗತ್ತಿಗೆ ಹಬ್ಬಿದೆ.
ಮನುಷ್ಯ ದೈಹಿಕ ಅಥವಾ ಬೌದ್ಧಿಕವಾಗಿ (Human Intelligence) ನಿರ್ವಹಿಸಬಹುದಾದ ಕೆಲಸವನ್ನು ತಂತ್ರಜ್ಞಾನ ಆಧಾರಿತವಾದ ಸಾಧನಗಳ ಮೂಲಕ ಮಾಡುವಂತಹ ಅಥವಾ ಮಾಡಿಸುವಂತಹ ಆವಿಷ್ಕಾರವನ್ನೇ ಕೃತಕ ಬುದ್ಧಿಮತ್ತೆ (Artificial Intelligence) ಎಂದು ಕರೆಯಬಹುದು. ಉದಾಹರಣೆಗೆ ಕ್ಯಾಲ್ಕೂಲೇಟರ್, ಕಂಪ್ಯೂಟರ್ (Computer), ರೋಬೋಟ್ ಇತ್ಯಾದಿ. ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಸುದ್ದಿ ಮನೆ ಹುಡುಗಿ ಮತ್ತೀತರರು ಇದೇ ಸಾಲಿಗೆ ಸೇರುತ್ತಾರೆ.
ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು 1. ಮಾನವ ದೋಷದಲ್ಲಿ ಕಡಿತ
ಕೃತಕ ಬುದ್ಧಿಮತ್ತೆಯ ಪ್ರಯೋಜನವೆಂದರೆ ಅದರಿಂದ ದೋಷಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ. ನಿಖರವಾದ ಕೆಲಸ ಸಾಧ್ಯವಿದೆ. ಉದಾಹರಣೆಗೆ ರೋಬೋಟಿಕ್ (Robots) ಸರ್ಜರಿ ವ್ಯವಸ್ಥೆ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗಿ ಗುರುತಿಸಲ್ಪಟ್ಟಿದೆ. ಇದರಿಂದ ಹಲವಾರು ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಾಧ್ಯವಾಗಿದೆ. ಹಾಗೂ ಮನುಷ್ಯ ಮಾಡಬಹುದಾದ ಅಜಾಗರೂಕತೆಯನ್ನು ಇದು ತಪ್ಪಿಸಲಿದೆ.
2. ಅಪಾಯಗಳಿಂದ ಪಾರು ಮಾಡುವ ಸಾಧನವಾಗಿ ಎಐ
ಬಾಂಬ್ ನಿಷ್ಕ್ರಿಯಗೊಳಿಸುವುದು, ಬಾಹ್ಯಾಕಾಶಕ್ಕೆ ಹೋಗುವುದು, ಸಾಗರಗಳ ಆಳವಾದ ಭಾಗಗಳನ್ನು ಅನ್ವೇಷಿಸುವ ಕಾರ್ಯದಲ್ಲಿ ರೋಬೋಟ್ ಬಳಕೆ ಮಾಡುವುದರಿಂದ ಸಂಶೋಧನೆ ಹಾಗೂ ರಕ್ಷಣಾ ಕಾರ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ತಪ್ಪಿಸಲು ಸಾಧ್ಯವಿದೆ.
3. ದಿನದ 24 ಗಂಟೆಗಳ ಕಾಲ ಲಭ್ಯತೆ
ಮನುಷ್ಯ ದಿನಕ್ಕೆ 5 ರಿಂದ 6 ಗಂಟೆಗಳ ಕಾಲ ಮಾತ್ರ ಉತ್ಸಾಹದಿಂದ ಕಾರ್ಯನಿರ್ವಹಿಸಬಲ್ಲ ಎಂಬ ಅನೇಕ ಅಧ್ಯಯನ ವರದಿಗಳಿವೆ. ಜೊತೆಗೆ ತಮ್ಮ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಲು ವಿರಾಮಗಳ ಅಗತ್ಯವಿದೆ. ಎಐ ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಬೇಸರದ ಪುನರಾವರ್ತಿತ ಕೆಲಸಗಳನ್ನು ಎಐನಿಂದ ಸರಳವಾಗಿ ಸಾಧಿಸಲು ಸಾಧ್ಯವಿದೆ.
4. ಡಿಜಿಟಲ್ ಸಹಾಯ
ಕೆಲವು ತಾಂತ್ರಿಕವಾಗಿ ಮುಂದುವರಿದ ಕಂಪನಿಗಳು ಡಿಜಿಟಲ್ ಸಹಾಯಕಗಳನ್ನು ಬಳಸಿಕೊಂಡು ಗ್ರಾಹಕರೊಂದಿಗೆ ಸಂವಹನ ನಡೆಸುತ್ತವೆ. ಕರೆ ಅಥವಾ ಸಂದೇಶಗಳಿಗೆ ಸೂಕ್ತ ಉತ್ತರವನ್ನು ನೀಡಲು ಇದು ಸಹಕಾರಿಯಾಗಿದೆ. ಅಲ್ಲದೇ ವೆಬ್‌ಸೈಟ್‌ಗಳಲ್ಲೂ ನಮಗೆ ಬೇಕಾದ ಮಾಹಿತಿಗಳನ್ನು ಹುಡುಕಿ ಪಡೆಯಬಹುದಾದ ವ್ಯವಸ್ಥೆ ಸಹ ಲಭ್ಯವಿದೆ.
5. ಹೊಸ ಆವಿಷ್ಕಾರಗಳು
ಪ್ರಾಯೋಗಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಎಐ ಎಂಬುದು ಹಲವಾರು ಆವಿಷ್ಕಾರಗಳ ಹಿಂದಿನ ಶಕ್ತಿಯಾಗಿದೆ. ಅದು ಬಹುಪಾಲು ಸವಾಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಕಾರಿಯಾಗಿದೆ. ವೈದ್ಯಕೀಯ ಲೋಕದಲ್ಲಿ ಸವಾಲಾಗಿರುವ ಎಷ್ಟೋ ಖಾಯಿಲೆಗಳನ್ನು ಪತ್ತೆ ಹಚ್ಚಲು ಎಐ ಬಹಳಷ್ಟು ಸಹಕಾರಿಯಾಗಿದೆ. ಉದಾಹರಣೆಗೆ ಇತ್ತೀಚಿನ ಬೆಳವಣಿಗೆಯಲ್ಲಿ ವೈದ್ಯರಿಗೆ ಮೊದಲ ಹಂತದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ್ನು ಪತ್ತೆಹಚ್ಚಲು ಎಐನಿಂದ ಸಾಧ್ಯವಾಗಿದೆ.
ಸ್ವಯಂ-ಚಾಲಿತ ಕಾರುಗಳು, ಇದು ಮಾನವ ಹಸ್ತಕ್ಷೇಪವಿಲ್ಲದೆ ಕ್ಯಾಮೆರಾ ಹಾಗೂ ತಂತ್ರಜ್ಞಾನದ ಮೂಲಕ ಸಂಚರಿಸುವ ಶಕ್ತಿ ಹೊಂದಿದೆ. ಇದರಿಂದ ರಸ್ತೆ ಸುರಕ್ಷತೆಯನ್ನು ಸುಧಾರಿಸಲು, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ವಿಕಲಾಂಗರಿಗೆ ಅನುಕೂಲವಾಗಲಿದೆ. ಅಲ್ಲದೇ ವಾಹನ ಚಾಲನೆಯಲ್ಲಿ ಎಐ ನಿಕಯಂತ್ರಿತ ವ್ಯವಸ್ಥೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು.
6. ಪಕ್ಷಪಾತವಿಲ್ಲದ ನಿರ್ಧಾರಗಳು
ಕೃತಕ ಬುದ್ಧಿಮತ್ತೆ ಯಾವುದೇ ಪಕ್ಷಪಾತದ ದೃಷ್ಟಿಕೋನಗಳನ್ನು ಹೊಂದಿಲ್ಲ. ಇದರಿಂದ ಹೆಚ್ಚು ನಿಖರವಾದ ನಿರ್ಧಾರವನ್ನು ತೆಗೆದುಕೊಳ್ಳಲು ಅನುಕೂಲವಾಗಲಿದೆ. ಈ ಸಾಮರ್ಥ್ಯದಿಂದ ನೇಮಕಾತಿಯಂತಹ ಪ್ರಕ್ರಿಯೆಯಲ್ಲಿ ಪಕ್ಷಪಾತವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
7. ದೈನಂದಿನ ಅಪ್ಲಿಕೇಶನ್‌ಗಳು
ಇಂದು, ನಮ್ಮ ದೈನಂದಿನ ಜೀವನವು ಮೊಬೈಲ್ ಸಾಧನಗಳು ಮತ್ತು ಇಂಟರ್ನೆಟ್‌ನ್ನು ಸಂಪೂರ್ಣವಾಗಿ ಅವಲಂಬಿಸಲಾಗಿದೆ. ಇದರಲ್ಲಿ ಒಂದು ಕಡೆಯಿಂದ ಇನ್ನೊಂದೆಡೆಗೆ ಸಂಚರಿಸಲು ಮಾರ್ಗಗಳನ್ನು ಹುಡುಕಲು ಹಾಗೂ ಹವಾಮಾನದ ವೈಪರಿತ್ಯಗಳನ್ನು ಲೆಕ್ಕಾಚಾರಹಾಕಲು ಈ ಸಾಧನಗಳ ಬಳಕೆ ಮಾಡಲಾಗುತ್ತದೆ. ಇದರಿಂದ ನಮ್ಮ ಕೆಲಸಗಳು ಸರಳವಾಗುತ್ತವೆ.
8. ಅಪಾಯಕಾರಿ ಕೆಲಸಗಳಲ್ಲಿ ಎಐಗಳ ಬಳಕೆ
ಗಣಿಗಾರಿಕೆ ಹಾಗೂ ವಿಕಿರಣಗಳನ್ನು ಹೊರ ಹೊಮ್ಮಿಸುವಂತಹ ಜಾಗಗಳಲ್ಲಿ ಎಐಗಳ ಬಳಕೆಯಿಂದ ಮನುಷ್ಯನಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ದೂರ ಮಾಡಬಹುದಾಗಿದೆ. ಭದ್ರತೆ ಹಾಗೂ ಸೇನೆಯಲ್ಲಿ ಎಐಗಳ ಬಳಕೆ ಪರಿಣಾಮಕಾರಿಯಾಗಿ ಸಹಕಾರಿಯಾಗಿದೆ.
9. ವೈದ್ಯಕೀಯ ಅಪ್ಲಿಕೇಶನ್‌ಗಳು
ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ ಹಿಡಿದು ಔಷಧ ಶೋಧನೆ ಮತ್ತು ಕ್ಲಿನಿಕಲ್ ಪ್ರಯೋಗಗಳವರೆಗಿನ ರೋಗಿಗಳ ಡೇಟಾವನ್ನು ವಿಶ್ಲೇಷಿಸಲು ಎಐ ಸಹಕಾರಿಯಾಗಿದೆ. ಅಲ್ಲದೇ ಸಂಭಾವ್ಯ ಆರೋಗ್ಯ ಅಪಾಯಗಳನ್ನು ಗುರುತಿಸಿ ಮುನ್ಸೂಚನೆ ನೀಡುವಂತಹ ಸಾಧನವಾಗಿ ಎಐ ಬಳಕೆಯಾಗುತ್ತಿದೆ.
10. ಪ್ರವೃತ್ತಿಗಳನ್ನು ಗುರುತಿಸುವಿಕೆ
ಹೆಚ್ಚಿನ ಪ್ರಮಾಣದ ಡೇಟಾವನ್ನು ವಿಶ್ಲೇಷಿಸುವ ಮತ್ತು ಪ್ರವೃತ್ತಿಗಳನ್ನು ಗುರುತಿಸುವ ಸಾಮರ್ಥ್ಯದೊಂದಿಗೆ ಗ್ರಾಹಕರ ನಡವಳಿಕೆ, ಮಾರುಕಟ್ಟೆ ಪ್ರವೃತ್ತಿಗಳು ಮತ್ತು ಇತರೆ ಪ್ರಮುಖ ಅಂಶಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಎಐ ವ್ಯಾಪರ ಸಂಬಂಧ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. ಇದರಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವ್ಯಾಪಾರದ ಫಲಿತಾಂಶಗಳನ್ನು ಸುಧಾರಿಸಲು ಸಹಕಾರಿಯಾಗುತ್ತದೆ.
ಅನಾನುಕೂಲಗಳೇನು? 1. ಹೆಚ್ಚಿನ ವೆಚ್ಚ
ಮಾನವ ಬುದ್ಧಿಮತ್ತೆಯನ್ನು ಅನುಕರಿಸುವ ಯಂತ್ರಗಳನ್ನು ರಚಿಸುವುದು ಸಣ್ಣ ಸಾಧನೆಯಲ್ಲ. ಇದಕ್ಕೆ ಸಾಕಷ್ಟು ಸಮಯ ಮತ್ತು ಸಂಪನ್ಮೂಲಗಳು ಬೇಕಾಗುತ್ತವೆ. ದೊಡ್ಡ ಪ್ರಮಾಣದ ಹಣವನ್ನು ವೆಚ್ಚ ಮಾಡಬೇಕಾಗುತ್ತದೆ. ಈ ರ್ಸಾಧನಗಳು ನವೀಕೃತವಾಗಿರಲು ಮತ್ತು ಇತ್ತೀಚಿನ ಅವಶ್ಯಕತೆಗಳನ್ನು ಪೂರೈಸಲು ಅಪ್ಡೇಟ್ ಆಗಲು ಸಾಕಷ್ಟು ಹಣದ ಖರ್ಚಾಗಲಿದೆ.
2. ಸೃಜನಶೀಲತೆ ಇಲ್ಲ
ಎಐ ತನ್ನ ಮಿತಿಯೊಳಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಅದರಾಚೆ ಅದು ಯೋಚಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಒದಗಿಸಲಾದ ಡೇಟಾ ಮತ್ತು ಸಂಗತಿಗಳನ್ನು ಮಾತ್ರ ಅದು ಒಳಗೊಂಡಿರುತ್ತದೆ.
3. ನಿರುದ್ಯೋಗ
ಕೃತಕ ಬುದ್ಧಿಮತ್ತೆಯ ರೋಬೋಟ್‌ಗಳು ಮನುಷ್ಯನ ಕೆಲಸ ಕಸಿಯುವ ಸಾಧ್ಯತೆ ಎದ್ದು ಕಾಣುತ್ತದೆ. ಇದರಿಂದ ನಿರುದ್ಯೋಗದ ಸಮಸ್ಯೆ ತಲೆದೂರುವ ಸಾಧ್ಯತೆಗಳು ಹೆಚ್ಚಾಗಿದೆ. ಉದಾಹರಣೆಗೆ ಜಪಾನ್‌ನಂತಹ ಕೆಲವು ಹೆಚ್ಚು ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲಿ ಕೈಗಾರಿಕಾ ಕೆಲಸಗಳಲ್ಲಿ ಮಾನವ ಸಂಪನ್ಮೂಲಗಳ ಬದಲು ರೋಬೋಟ್‌ಗಳನ್ನು ಬಳಸಲಾಗುತ್ತದೆ. ಇದು ನಿರುದ್ಯೋಗಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿವೆ.
4. ಮನುಷ್ಯರ ಬೌದ್ಧಿಕ ಮಟ್ಟ ಕುಂಠಿತಗೊಳ್ಳುವ ಸಾಧ್ಯತೆ
ಎಐ ಅಪ್ಲಿಕೇಶನ್‌ಗಳ ಹೆಚ್ಚಿನ ಬಳಕೆ ಮೆದುಳಿಗೆ ಕೆಲಸ ಕಡಿಮೆ ಮಾಡುತ್ತವೆ. ಮನುಷ್ಯನ ಬೌದ್ಧಿಕ ಸಾಮರ್ಥ್ಯದಲ್ಲಿ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.
5. ನೈತಿಕತೆ ಇಲ್ಲ
ನೈತಿಕತೆಯು ಪ್ರಮುಖ ಮಾನವ ಲಕ್ಷಣವಾಗಿದೆ. ಆದರೆ ಇದನ್ನೂ ಎಐಗೆ ಅಳವಡಿಸಲು ಕಷ್ಟವಾಗುತ್ತದೆ. ಎಐ ಮುಂದೊಂದು ದಿನ ಅನಿಯಂತ್ರಿತವಾಗಿ ಬೆಳೆಯುತ್ತದೆ. ಅಂತಿಮವಾಗಿ ಮಾನವೀಯತೆಯನ್ನು ಅಳಿಸಿಹಾಕುತ್ತದೆ ಎಂಬ ಹಲವಾರು ಕಳವಳಗಳನ್ನು ಹುಟ್ಟು ಹಾಕಿದ್ದಾರೆ. ಯುದ್ಧ ಹಾಗೂ ಸೇನೆಯ ಕಾರ್ಯಾಚರಣೆಗಳಲ್ಲಿ ಎಐಗಳ ಬಳಕೆ ಮಹಾ ವಿನಾಶಕ್ಕೆ ಕಾರಣವಾಗಬಹುದು.
6. ಭಾವರಹಿತ
ಕಂಪ್ಯೂಟರ್‌ಗಳು ಹಾಗೂ ಎಐ ಆಧಾರಿತ ಯಂತ್ರಗಳು ಭಾವನೆಗಳನ್ನು ಹೊಂದಿಲ್ಲ. ಆದರೆ ಇತ್ತೀಚೆಗೆ ಮಾನವನ ಸಂಗಾತಿಯ ಸ್ಥಾನವನ್ನು ಆಕ್ರಮಿಸುವ ಮಟ್ಟಕ್ಕೆ ಇವು ಬೆಳೆದು ನಿಂತಿವೆ.
ಹಾಸನ: ಉಪಕರಣಗಳ ಸಮೇತ ಮಸೀದಿಗೆ (Mosque) ನುಗ್ಗಿದ ಖತರ್ನಾಕ್ ಕಳ್ಳ (Thief) ಕಚೇರಿಯಲ್ಲಿದ್ದ ಕಂಪ್ಯೂಟರ್, ಕ್ಯಾಮೆರಾ ಹೊತ್ತೊಯ್ದಿರುವ ಘಟನೆ ಹಾಸನ (Hassana) ನಗರದ ಶರೀಫ್ ಕಾಲೋನಿಯಲ್ಲಿ ನಡೆದಿದೆ.
ತಡರಾತ್ರಿ ಖುಬಾ ಮಸೀದಿಗೆ ಬಂದಿರುವ ಕಳ್ಳ ಕೆಲಕಾಲ ಹೊಂಚು ಹಾಕಿದ್ದಾನೆ. ನಂತರ ಗೇಟ್ ಹಾರಿ ಒಳಬಂದಿರುವ ಚೋರ ಮಸೀದಿಯ ಮುಖ್ಯದ್ವಾರದ ಬೀಗ ಮುರಿದು ಹುಂಡಿ ಕದಿಯಲು ಯತ್ನಿಸಿದ್ದಾನೆ. ಇದು ಸಾಧ್ಯವಾಗದಿದ್ದಾಗ ಮಸೀದಿಯ ಕಚೇರಿಯ ಬೀಗ ಮುರಿದು ಒಳ್ಳನುಗ್ಗಿದ್ದಾನೆ. ಅಲ್ಲಿದ್ದ ಕಂಪ್ಯೂಟರ್ ಹಾಗೂ ಕೆನಾನ್ ಕ್ಯಾಮೆರಾವನ್ನು ಕದ್ದೊಯ್ದಿದ್ದಾನೆ.
ಕಳ್ಳತನದ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಮಾರು 3 ಲಕ್ಷ ರೂ. ಬೆಲೆಬಾಳುವ ಕಂಪ್ಯೂಟರ್, ಕ್ಯಾಮೆರಾ ಕಳುವಾಗಿದೆ. ರಾತ್ರಿ ಮಳೆ ಬರುತ್ತಿದ್ದ ಕಾರಣ ಪ್ರಮುಖ ಪತ್ರಿಕೆಯ ಛಾಯಾಗ್ರಾಹಕ ಅತೀಕ್ ಉರ್ ರೆಹಮಾನ್ ತಮ್ಮ ಕ್ಯಾಮೆರಾವನ್ನು ಮಸೀದಿಯ ಕಚೇರಿಯಲ್ಲಿಟ್ಟು ಮನೆಗೆ ತೆರಳಿದ್ದರು. ಆ ಕ್ಯಾಮೆರಾದೊಂದಿಗೆ ಕಳ್ಳ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: 3 ದಿನಗಳ ಹಿಂದೆ ಉದ್ಘಾಟನೆಗೊಂಡಿದ್ದ ವಂದೇ ಭಾರತ್ ರೈಲಿಗೆ ಮಳೆಯಿಂದ ಹಾನಿ – ಸಂಚಾರ ಸ್ಥಗಿತ
ಪಂಜಾಬ್: ಇಲ್ಲಿನ ಮೊಗಾ ಜಿಲ್ಲೆಯಲ್ಲಿ ಶಾಲಾ ಶಿಕ್ಷಣವನ್ನು ಆಧುನೀಕರಿಸಲು ಇನ್ಫೋಸಿಸ್ (Infosys), ಸರ್ಕಾರಿ ಶಾಲೆಗಳಿಗೆ 150 ಕಂಪ್ಯೂಟರ್‌ಗಳನ್ನು ವಿತರಿಸಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಮತ್ತು ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವುದು ಈ ನೆರವಿನ ಮುಖ್ಯ ಉದ್ದೇಶವಾಗಿದೆ ಎಂದು ಆಡಳಿತ ತಿಳಿಸಿದೆ. ಮೊಗಾ ಜಿಲ್ಲೆ ಡಿಸಿ ಕುಲವಂತ್ ಸಿಂಗ್ ಮಾತನಾಡಿ, ಅಭಿವೃದ್ಧಿಗಾಗಿ ʻಆಕಾಂಕ್ಷೆಯ ಜಿಲ್ಲೆʼ ಎಂದು ಕೇಂದ್ರವು ಆಯ್ಕೆ ಮಾಡಿರುವ ಜಿಲ್ಲೆಗಳಲ್ಲಿ ಮೊಗಾವು ಸೇರಿದೆ. ಇದನ್ನೂ ಓದಿ: ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ಆಸ್ಪತ್ರೆಗೆ ದಾಖಲು
ಇನ್ಫೋಸಿಸ್ ಮೊಗಾ ಜಿಲ್ಲೆಗೆ ಇದುವರೆಗೆ 350 ಕಂಪ್ಯೂಟರ್‌ಗಳನ್ನು ಒದಗಿಸಿದ್ದು, ಇದರಲ್ಲಿ ಕಳೆದ ವರ್ಷ 200 ಕಂಪ್ಯೂಟರ್‌ಗಳನ್ನು ಸರ್ಕಾರಿ ಶಾಲೆಗಳಿಗೆ ಹಂಚಿಕೆ ಮಾಡಲಾಗಿತ್ತು. ಈಗ ಪಡೆದ 150 ಕಂಪ್ಯೂಟರ್‌ಗಳನ್ನು ಶೀಘ್ರದಲ್ಲೇ ಶಾಲೆಗಳಿಗೆ ಹಂಚಿಕೆ ಮಾಡಲಾಗುವುದು. ಈ ಕ್ರಮದಿಂದ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್‌ಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಡಿಸಿ ತಿಳಿಸಿದ್ದಾರೆ.
ಇನ್ಫೋಸಿಸ್‌ನೊಂದಿಗೆ ನಿರಂತರ ಸಂಪರ್ಕದಲ್ಲಿರುವ ಜಿಲ್ಲಾಧಿಕಾರಿಗೆ ಉಪ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ರಾಕೇಶ್ ಕುಮಾರ್ ಮಕ್ಕರ್ ಧನ್ಯವಾದ ತಿಳಿಸಿದರು. ಎಲ್ಲಾ ಸರ್ಕಾರಿ ಶಾಲೆಗಳನ್ನು ಆಧುನಿಕ ಮತ್ತು ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲು ಪ್ರಯತ್ನಿಸಲಾಗುವುದು ಎಂದು ಮಕ್ಕರ್ ಹೇಳಿದರು. ಇದನ್ನೂ ಓದಿ: ಫೇಕ್ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿ – ಸತ್ತವನ 19 ಕೋಟಿ ಆಸ್ತಿ ಹೊಡೆದ್ಲು ಖತರ್ನಾಕ್ ಸುಂದ್ರಿ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕಡ್ಡಾಯವಾಗಿ ಕಂಪ್ಯೂಟರ್ ಕಲಿಯಬೇಕು ಎಂಬ ಆದೇಶ ಕೆಲ ಇಲಾಖೆಯ ಸಿಬ್ಬಂದಿಗೆ ದೊಡ್ಡ ಸಮಸ್ಯೆಯಾಗಿದೆ.
ಪೊಲೀಸ್ ಇಲಾಖೆಗೂ ಈ ಆದೇಶ ಅನ್ವಯಿಸಲಾಗಿದ್ದು, ಪೊಲೀಸರಿಗೆ ನುಂಗಲಾರದ ತುತ್ತಾಗಿದೆ. ಡಿಸೆಂಬರ್ 31 ಒಳಗೆ ಕಡ್ಡಾಯವಾಗಿ ಕಂಪ್ಯೂಟರ್ ಪರೀಕ್ಷೆ ಪಾಸ್ ಆಗಿರಬೇಕು ಅಂತ ಆದೇಶಿಸಲಾಗಿದೆ. ಆದರೆ ಪರೀಕ್ಷೆ ಪಾಸ್ ಆಗಲು ಇರೋ ಸರ್ಕಾರದ ನಿಯಮ ಪೊಲೀಸರಿಗೆ ತಲೆ ನೋವಾಗಿದೆ. ಒಂದು ವೇಳೆ ಕಂಪ್ಯೂಟರ್ ಪರೀಕ್ಷೆ ಪಾಸ್ ಆಗದಿದ್ದರೆ ಪ್ರಮೋಷನ್ ಇಲ್ಲ ಎಂಬ ಆದೇಶ ಪೊಲೀಸ್ ಸಿಬ್ಬಂದಿಗೆ ಟೆನ್ಷನ್ ಹೆಚ್ಚಿಸಿದೆ.
ಮನೆಗೆ ಹೋಗೋಕೆ ನಮಗೆ ಸಮಯ ಇಲ್ಲ. ಹೆಂಡತಿ, ಮಕ್ಕಳು, ಕುಟುಂಬದ ಜೊತೆ ಸಮಯ ಕಳೆಯೋಕು ಆಗ್ತಿಲ್ಲ. ಹೀಗಿರುವಾಗ ಕಂಪ್ಯೂಟರ್ ಕಲಿಯೋದು ಯಾವಾಗ…? ಕೆಲಸದೊತ್ತಡದಿಂದ ಹೇಗೆ ಕಲಿತು ಪಾಸ್ ಮಾಡೋಕೆ ಆಗುತ್ತೆ ಎಂದು ಪೊಲೀಸ್ ಸಿಬ್ಬಂದಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಮಳೆ ಎಫೆಕ್ಟ್, ದುಬಾರಿ ವಸ್ತುಗಳು ಅರ್ಧ ಬೆಲೆಗೆ ಸೇಲ್- ಮುಗಿಬಿದ್ದ ಗ್ರಾಹಕರು
ಪೊಲೀಸರಿಗೆ ಕಂಪ್ಯೂಟರ್ ಎಕ್ಸಾಂ ಪ್ರಾಬ್ಲಂ: ಕೆಲವೊಮ್ಮೆ ಹಗಲು-ರಾತ್ರಿ ಕೆಲಸ ಇದ್ದು, ಈ ವೇಳೆ ಕಂಪ್ಯೂಟರ್ ಕಲಿಕೆ ಕಷ್ಟ. ಕಂಪ್ಯೂಟರ್ ಕಲಿಕೆಗೆ ಇಲಾಖೆ ತರಬೇತಿಯೂ ಕೊಡ್ತಿಲ್ಲ. ರಜೆಯೂ ಕೊಡ್ತಿಲ್ಲ. ಆಡಳಿತ ವಿಭಾಗದಲ್ಲಿ ನಾನ್ ಎಕ್ಸಿಕ್ಯುಟಿವ್‍ಗಳಿಗೆ ಕಡ್ಡಾಯ ಮಾಡಿ, ಎಲ್ಲರಿಗೂ ಬೇಡ. ಇಲಾಖೆಯಲ್ಲಿ ಈಗ ವೀಕಾಫ್ ಸಿಗೋದು ಕಷ್ಟ ಆಗ್ತಿದೆ. ಕುಟುಂಬ, ಹೆಂಡತಿ, ಮಕ್ಕಳಿಗೆ ಸಮಯ ಕೊಡಲು ಆಗ್ತಿಲ್ಲ. 7-10ನೇ ತರಗತಿ ಆಧಾರದಲ್ಲಿ ಕೆಲವರು ಇಲಾಖೆಗೆ ಸೇರ್ಪಡೆಯಾಗಲಿದೆ.
ಇಂಗ್ಲೀಷ್ ಭಾಷೆ ಕೊರತೆ ಇದ್ದು, ಕಂಪ್ಯೂಟರ್ ಕಲಿಕೆ ಕಷ್ಟವಾಗಬಹುದು. 50+ ಆದ ಸಿಬ್ಬಂದಿಗೆ ಕಂಪ್ಯೂಟರ್ ಕಲಿಯಲು ಆಸಕ್ತಿ ಕಡಿಮೆ. 50+ ದಾಟಿದವರಿಗೆ ರಿಯಾಯ್ತಿ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಕಿಯೋನಿಕ್ಸ್‍ನಲ್ಲೇ ಎಕ್ಸಾಂ ಬರೆಯಬೇಕು.. ಇದಕ್ಕೆ 350-450 ರೂ. ಖರ್ಚಾಗಲಿದೆ. 2012ರ ಮುಂಚೆ ಸೇರ್ಪಡೆಯಾದ ಸಿಬ್ಬಂದಿ 80ಕ್ಕೆ 28 ಅಂಕ ಕಡ್ಡಾಯ. 2013ರ ನಂತರ ಸಿಬ್ಬಂದಿಗೆ 80ಕ್ಕೆ 40 ಅಂಕ ಕಡ್ಡಾಯವಾಗಲಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಕೆ ಕಡ್ಡಾಯಗೊಳಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ತಿದ್ದುಪಡಿ ಮಾಡಿ ಸರ್ಕಾರ ಅಧಿಸೂಚನೆ ಸೂಚನೆ ಹೊರಡಿಸಿದೆ.
ಈ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರರು ಇನ್ನುಮುಂದೆ ಕಂಪ್ಯೂಟರ್ ಪರೀಕ್ಷೆ ಪಾಸಾಗದಿದ್ದರೆ ಮುಂಬಡ್ತಿ, ವಾರ್ಷಿಕ ವೇತನ ಭಡ್ತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈವರೆಗೆ ಅಧಿಸೂಚನೆ ಹೊರಡಿಸಿದ 10 ವರ್ಷದೊಳಗೆ ಪರೀಕ್ಷೆ ಪಾಸ್ ಮಾಡಿಕೊಳ್ಳಲು ಅವಕಾಶ ನೀಡಿದ್ದ ಸರ್ಕಾರ. ಅದಕ್ಕಾಗಿ 2012ರಲ್ಲೇ ಸರ್ಕಾರ ನಿಯಮ ಜಾರಿಗೊಳಿಸಿತ್ತು. ಈಗ ಮತ್ತೆ ತಿದ್ದುಪಡಿ ಮಾಡಿ ಎಲ್ಲಾ ಸರ್ಕಾರಿ ನೌಕರರು 2022 ಡಿಸೆಂಬರ್ ಅಂತ್ಯದೊಳಗೆ ಕಂಪ್ಯೂಟರ್ ಪರೀಕ್ಷೆ ಪಾಸ್ ಮಾಡಿಕೊಳ್ಳುವಂತೆ ಕಡ್ಡಾಯ ಮಾಡಿ ಗಡುವು ವಿಧಿಸಿದೆ. ಇದನ್ನೂ ಓದಿ: ಗೌರವ್ ಗುಪ್ತ ಎತ್ತಂಗಡಿ – ತುಷಾರ್ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ವರ್ಗ
ಬೀದರ್: ಕಾಂಗ್ನಿಜೆಂಟ್ ತಂತ್ರಜ್ಞಾನವು ಉಚಿತವಾಗಿ ನೀಡಿರುವ 30 ಕಂಪ್ಯೂಟರ್‌ಗಳನ್ನು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಚಿಟಗುಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿತರಿಸಿತು.
ಕಾಲೇಜಿನ ಗಣಿತಶಾಸ್ತ್ರ ಪ್ರಯೋಗಾಲಯ ಹಾಗೂ ಗಣಕ ವಿಜ್ಞಾನ ಪ್ರಯೋಗಾಲಯದಲ್ಲಿ ಅಳವಡಿಸಿದ ಕಂಪ್ಯೂಟರ್‍ಗಳ ಸೇವೆಗೆ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗರ್ವನರ್ ತಿರುಪತಿ ನಾಯ್ಡು ಚಾಲನೆ ನೀಡಿದರು. ಕಾಂಗ್ನಿಜೆಂಟ್ ತಂತ್ರಜ್ಞಾನ ಸಂಸ್ಥೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ವಿತರಿಸಲು ರಾಜ್ಯ ಸರ್ಕಾರಕ್ಕೆ ಉಚಿತವಾಗಿ ಕಂಪ್ಯೂಟರ್‌ಗಳನ್ನು ಕೊಟ್ಟಿದೆ. ಸರ್ಕಾರ ಕಂಪ್ಯೂಟರ್‌ಗಳ ಸಾಗಣೆ ಹಾಗೂ ಅನುಷ್ಠಾನದ ಹೊಣೆಯನ್ನು ರೋಟರಿ ಸಂಸ್ಥೆಗೆ ವಹಿಸಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಎಸಿಬಿ ಅಧಿಕಾರಿಗಳ ಭರ್ಜರಿ ರಣಬೇಟೆ – 503 ಅಧಿಕಾರಿಗಳು 68 ಕಡೆ ದಾಳಿ..!
ಉಚಿತ ಕಂಪ್ಯೂಟರ್ ವಿತರಣೆಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ರೋಟರಿ ಸಂಸ್ಥೆಯು ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದ ಪ್ರಗತಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಸಹಾಯಕ ಗವರ್ನರ್ ಶಿವಕುಮಾರ್ ಯಲಾಲ್ ಮಾತನಾಡಿ, ಬೀದರ್‌ನಲ್ಲಿ ಇನ್ನಷ್ಟು ರೋಟರಿ ಕ್ಲಬ್‍ಗಳನ್ನು ರಚಿಸುವ ಉದ್ದೇಶ ಇದೆ. ಹೊಸ ತಾಲೂಕು ಚಿಟಗುಪ್ಪದಲ್ಲೂ ಕ್ಲಬ್ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಅತ್ತೆಯತ್ತ ಚಾಕು ಬಿಸಿದ ಸೋಸೆ
ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ‘ಹೆಲ್ಪ್ ಎಜುಕೇಟ್’ ಉಪಕ್ರಮದ ಅಡಿಯಲ್ಲಿ ವಿವಿಧ ಕಾಲೇಜುಗಳಿಗೆ ಡಿಬಾಂಡೆಡ್ ಕಂಪ್ಯೂಟರ್ ಗಳನ್ನು ಇಲಾಖೆಯ ಉನ್ನತ ಅಧಿಕಾರಿಗಳು ಇಂದು ಕಳಿಸಿಕೊಟ್ಟಿದ್ದಾರೆ.
ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ಕಚೇರಿ ಮುಂಭಾಗದಲ್ಲಿ ಕಂಪ್ಯೂಟರ್ ಗಳನ್ನು ಹೊತ್ತುಹೊರಟ ವಾಹನಗಳಿಗೆ ಇಲಾಖೆಯ ಆಯುಕ್ತ ಪ್ರದೀಪ್ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಪ್ರದೀಪ್ ಅವರು, “ಕಾಗ್ನಿಜೆಂಟ್ ಸಂಸ್ಥೆ ಡಿಬಾಂಡೆಡ್ 12,500 ಕಂಪ್ಯೂಟರ್ ಗಳನ್ನು ಕಾಲೇಜು ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಇದಕ್ಕೆ ಅಗತ್ಯವಾದ ಸಾಫ್ಟ್ ವೇರ್ ಅನ್ನು ರೋಟರಿ ಕ್ಲಬ್ ಅಪ್ ಡೇಟ್ ಮಾಡಿಕೊಡುತ್ತಿದೆ. ಈ ಕಂಪ್ಯೂಟರ್ ಗಳನ್ನು ಸರ್ಕಾರಿ ಪದವಿ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಎಲ್ಲ ಸರ್ಕಾರಿ ಪದವಿ, ಎಂಜಿನಿಯರಿಂಗ್, ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30,000 ಕಂಪ್ಯೂಟರ್ ಗಳು ಬೇಕು. ಈಗ ಕಾಗ್ನಿಜೆಂಟ್ ಕಂಪನಿ 12,500 ಕಂಪ್ಯೂಟರ್ ಗಳನ್ನು ನೀಡುತ್ತಿದೆ. ಮತ್ತೆ 8000 ಕಂಪ್ಯೂಟರ್ ಗಳನ್ನು ಕೊಡುವುದಾಗಿ ತಿಳಿಸಿದೆ. ಉಳಿದ 10,000 ಕಂಪ್ಯೂಟರ್ ಗಳನ್ನು ಬೇರೆ ಬೇರೆ ಕಂಪನಿಗಳಿಂದ ಪಡೆಯುವ ಕೆಲಸ ಮಾಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.
ವಿದ್ಯಾರ್ಥಿಗಳಿಗೆ ನೆರವಾಗುಗುವುದರೊಂದಿಗೆ, ಅಧ್ಯಾಪಕರಿಗೆ ತರಬೇತಿ ನೀಡುವುದು, ಕಾಲೇಜುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲುವಂತಹ ಉತ್ತಮ ಕೆಲಸಕ್ಕಾಗಿ ಹೆಲ್ಪ್ ಎಜುಕೇಟ್ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ ಎಂದರು.
ಕಾಗ್ನಿಜೆಂಟ್ ಸಂಸ್ಥೆ ನೀಡಿರುವ ಡಿಬಾಂಡೆಡ್ ಕಂಪ್ಯೂಟರ್ ಗಳನ್ನು ವಿವಿಧ ಕಾಲೇಜುಗಳಿಗೆ ರವಾನಿಸಲಾಯಿತಲ್ಲದೆ, ವಿವಿಧ ಹಂತಗಳಲ್ಲಿ ಒಟ್ಟು 12,500 ಡಿಬಾಂಡೆಡ್ ಕಂಪ್ಯೂಟರ್ ಗಳನ್ನು ಕಳಿಸಲಾಗುತ್ತಿದೆ. ಇಂದು ರವಾನಿಸಲ್ಪಟ್ಟ ಕಂಪ್ಯೂಟರ್ ಗಳನ್ನು ಬೆಂಗಳೂರು ವಲಯದ ಕಾಲೇಜುಗಳಿಗೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮುಖ್ಯಸ್ಥ ನಾಗೇಂದ್ರ ಪ್ರಸಾದ್, ಕಾಗ್ನಿಜೆಂಟ್ ಸಂಸ್ಥೆಯ ನಿರ್ದೇಶಕ (ಸಿಎಸ್‍ಆರ್) ದೀಪಕ್ ಪ್ರಭು, ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಹರಿಸಿಂಗ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
– ಸ.ಪ್ರ.ಕಾಲೇಜುಗಳಿಗೆ 12,500 ಡಿ-ಬಾಂಡೆಡ್ ಕಂಪ್ಯೂಟರ್
– ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್, ರೋಟರಿ ಕ್ಲಬ್ ಜೊತೆ ಒಪ್ಪಂದ
ಬೆಂಗಳೂರು: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ `ಶಿಕ್ಷಣಕ್ಕೆ ಸಹಾಯ’ದ (Help Educate) ಕಾರ್ಯಕ್ರಮದ ಅಂಗವಾಗಿ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 12,500 ಡಿ-ಬಾಂಡೆಡ್ ಡೆಸ್ಕ್‍ಟಾಪ್ ಕಂಪ್ಯೂಟರ್ ಗಳನ್ನು ನೀಡುವ ಬಗ್ಗೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.
ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರ ಪರಿಕಲ್ಪನೆಯಂತೆ ಈ ಒಪ್ಪಂದ ಆಗಿದ್ದು, ನಗರ-ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಅಂತರವನ್ನು ಅಳಿಸಿಹಾಕಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ.
ಉನ್ನತ ಶಿಕ್ಷಣ ಇಲಾಖೆ ವತಿಯಿಂದ @Cognizant ಹಾಗೂ @rotary_india ಸಹಭಾಗಿತ್ವದಲ್ಲಿ ‘Help Educate’ ಎಂಬ ಉಪಕ್ರಮವನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಡಿಜಿಟಲ್ ಕಲಿಕೆಯ ಈ ಯುಗದಲ್ಲಿ, ಕಾಲೇಜುಗಳ ಮೂಲಸೌಕರ್ಯ ವೃದ್ಧಿಸಲು ನೆರವಾಗುವಂತೆ ಸರ್ಕಾರಿ ಪದವಿ ಕಾಲೇಜುಗಳಿಗೆ 12500 De-bonded Computer ಗಳನ್ನು ನೀಡಲಾಗುತ್ತಿದೆ.
ಈ ಕುರಿತು ತಿಳುವಳಿಕೆ ಪತ್ರಕ್ಕೆ ಶುಕ್ರವಾರ ಉಪ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಸಹಿ ಹಾಕಲಾಗಿದ್ದು, ಇದರಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ), ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ರೋಟರಿ ಕ್ಲಬ್ ವೈಟ್‍ಫೀಲ್ಡ್ ಸೆಂಟ್ರಲ್ (ಜಿಲ್ಲೆ 1390) ವತಿಯಿಂದ ಸಹಿ ಬಿದ್ದಿದೆ.
ಈ ಕಾರ್ಯಕ್ರಮದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಮತ್ತು ವಿದ್ಯಾರ್ಥಿಗಳ ಕಲಿಕೆಯಲ್ಲಿ ವ್ಯತ್ಯಾಸವನ್ನುಂಟು ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಒಪ್ಪಂದಕ್ಕೆ ಅಂಕಿತ ಬಿದ್ದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಶಿಕ್ಷಣದಲ್ಲಿ ಮಹತ್ವದ ಬದಲಾವಣೆ:
‘ಶಿಕ್ಷಣಕ್ಕೆ ಸಹಾಯ’ ಮಾಡುವ ಈ ಕಾರ್ಯಕ್ರಮದ ಅಡಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಾರ್ಪೊರೇಟ್ ಕಂಪನಿಗಳು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಕಲಿಕೆ ಬಗ್ಗೆ ತರಬೇತಿ ನೀಡಲಾಗುವುದು. ಬೋಧಕ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮಗಳು, ಡಿಜಿಟಲ್ ಬೋಧನೆಯ ಮೂಲಕ ಆಧುನಿಕ ವಿಧಾನದಲ್ಲಿ ಪ್ರಾಧ್ಯಾಪಕರು ಅಪ್‍ಗ್ರೇಡ್ ಆಗಲು ಇದರಿಂದ ಸಾಧ್ಯವಿದೆ. ಜೊತೆಗೆ, ಡಿಜಿಟಲ್ ಕಲಿಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸರ್ಕಾರಿ ಕಾಲೇಜುಗಳನ್ನು ಸಜ್ಜುಗೊಳಿಸುವ ಅಂಶವೂ ಇದರಲ್ಲಿ ಸೇರಿದೆ ಎಂದರು.
ಸರ್ಕಾರಿ ಕಾಲೇಜುಗಳಿಗೆ ಸುಮಾರು 30,000 ಕಂಪ್ಯೂಟರ್‍ಗಳು ಅಗತ್ಯ ಇದ್ದು, ಆ ಪೈಕಿ ಈಗ 12,500 ಕಂಪ್ಯೂಟರ್‍ಗಳನ್ನು ಒದಗಿಸಲಾಗಿದೆ. ಸುಮಾರು 50 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ವಿದ್ಯಾರ್ಥಿಗಳನ್ನು ಆಧುನಿಕ ಕಲಿಕೆಯತ್ತ ಕರೆದೊಯ್ಯಲು, ಡಿಜಿಟಲ್ ತಾರತಮ್ಯವನ್ನು ನಿವಾರಿಸುವ ಈ ಉದಾತ್ತ ಉದ್ದೇಶಕ್ಕೆ ಖಾಸಗಿ ಸಂಘ ಸಂಸ್ಥೆಗಳು ಸರಕಾರದ ಜತೆ ಕೈಜೋಡಿಸುತ್ತಿರುವುದು ಸಂತೋಷ ಉಂಟು ಮಾಡಿದೆ. ಅನೇಕ ದಾನಿಗಳು ಶಿಕ್ಷಣಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಈ ಉದಾತ್ತ ಕಾರ್ಯಕ್ರಮದ ಅಡಿಯಲ್ಲಿ ಕಾಗ್ನಿಜೆಂಟ್ ಇಂಡಿಯಾ ಪ್ರೈ. ಲಿಮಿಟೆಡ್ ಇಲಾಖೆಗೆ 12,500 ಡಿ-ಬಾಂಡೆಡ್, ಡೆಸ್ಕ್‍ಟಾಪ್ ಕಂಪ್ಯೂಟರ್ ಗಳನ್ನು ಒದಗಿಸಲು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದೆ. ಇದರೊಂದಿಗೆ ವಿದ್ಯಾರ್ಥಿಗಳ ಬಳಕೆಗಾಗಿ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಂಪ್ಯೂಟರ್ ಲ್ಯಾಬ್‍ಗಳನ್ನು ಸ್ಥಾಪಿಸಲಾಗುವುದು. ರೋಟರಿ ಕ್ಲಬ್ ನವರು ವಿಂಡೋಸ್ ಒಎಸ್ ಒದಗಿಸಲಿದ್ದಾರೆ. ನಂತರ ಕಂಪ್ಯೂಟರ್ ಗಳನ್ನು ನಿಗದಿತ ಕಾಲೇಜುಗಳಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಡಿಸಿಎಂ ಮಾಹಿತಿ ಕೊಟ್ಟರು.
ಕಾಗ್ನಿಜೆಂಟ್ ಸಂಸ್ಥೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥ ನವೀನ್ ರಾವ್ ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆಯ ನೇತೃತ್ವದ ಈ ನಿರ್ಣಾಯಕ ಕಾರ್ಯಕ್ರಮದಲ್ಲಿ ಭಾಗವಾಗಿರುವುದಕ್ಕೆ ಸಂತೋಷವಾಗಿದೆ. ಡಿಜಿಟಲ್ ಕಲಿಕೆಯನ್ನು ಉತ್ತೇಜಿಸುವ ಈ ಕಾರ್ಯಕ್ರಮ ಅರ್ಥಪೂರ್ಣವಾದದ್ದು ಎಂದರು.
ಡಿಜಿಟಲ್ ವೇದಿಕೆಯಲ್ಲಿರುವ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ ಮೂಲಕ ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಕಾರ್ಯಕ್ರಮ ಪೂರಕ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ ಎಂದು ರೋಟರಿ ಕ್ಲಬ್ ಜಿಲ್ಲಾ ಗರ್ವನರ್ ನಾಗೇಂದ್ರ ಪ್ರಸಾದ್ ಅವರು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಪ್ರಭಾಕರ್ ಮಾತನಾಡಿ, ಯೋಜನೆ ಕುರಿತು ಮಾಹಿತಿ ನೀಡಿದರು. ಕಾಗ್ನಿಜೆಂಟ್ ಸಂಸ್ಥೆಯ ನಿರ್ದೇಶಕ (ಸಿಎಸ್‍ಆರ್) ದೀಪಕ್ ಪ್ರಭು, ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಹರಿಸಿಂಗ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಂಗಳೂರು: ವಿಜ್ಞಾನಿಯೊಬ್ಬನ ಕೂದಲ ವಿನ್ಯಾಸವನ್ನು ಕಾಲೇಜು ಯುವಕರು ಅನುಸರಿಸಿದ ದಿನ ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಕಾಣಲಿದೆ. ಸ್ಟಾರ್ ನಟರು ಇದ್ದಂತೆ, ವಿಜ್ಞಾನಿಗಳು ತಾರೆಯರಾಗಬೇಕಿದೆ ಎಂದು ಸಿಎಫ್‍ಟಿಆರ್‌ಐನ ನಿವೃತ್ತ ವಿಜ್ಞಾನಿ ಹಾಗೂ ಹಿರಿಯ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮ ಅಭಿಪ್ರಾಯಪಟ್ಟಿದ್ದಾರೆ.
ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘಗಳು ಶುಕ್ರವಾರ ಜಂಟಿಯಾಗಿ ಆಯೋಜಿಸಿದ್ದ `ಭಾರತದಲ್ಲಿ ವಿಜ್ಞಾನದ ಬೆಳವಣಿಗೆ’ ಕುರಿತ ವೆಬಿನಾರ್‌ನಲ್ಲಿ `ಅಭಿವೃದ್ಧಿಶೀಲ ಭಾರತದಲ್ಲಿ ವಿಜ್ಞಾನ’ ವಿಷಯದ ಕುರಿತು ಅವರು ಮಾತನಾಡಿದರು. ಡಿಸೆಂಬರ್ 22ರಿಂದ ಆರಂಭವಾಗಲಿರುವ `ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮಹೋತ್ಸವ -2020’ಕ್ಕೆ ಪೂರ್ವಭಾವಿಯಾಗಿ ಈ ವೆಬಿನಾರ್ ಆಯೋಜಿಸಲಾಗಿತ್ತು.
`ಭಾರತವು ಸಾವಿರಾರು ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿದ್ದರೂ ಯಂತ್ರಗಳನ್ನಾಧರಿಸಿದ ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಹಿಂದಕ್ಕೆ ಉಳಿಯಿತು. ಇದಕ್ಕೆ ಇಲ್ಲಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಕಾರಣ ಇರಬಹುದು. ಆದರೆ, 1958ರಲ್ಲಿ ಸ್ವಾತಂತ್ರ್ಯ ಬಂದ ಹೊಸದರಲ್ಲೇ ದೇಶದ ಅಭಿವೃದ್ಧಿಗೆ ವಿಜ್ಞಾನದ ಬೆಳವಣಿಗೆ ಅನಿವಾರ್ಯ ಎಂದು ಮನಗಂಡು ವೈಜ್ಞಾನಿಕ ನೀತಿಯನ್ನು ಆಡಳಿತದಲ್ಲಿ ಅಳವಡಿಸಿಕೊಂಡಿತ್ತು. ವೈಜ್ಞಾನಿಕ ಸಂಶೋಧನೆ ಮತ್ತು ಕೈಗಾರಿಕೆಗಳ ಬೆಳವಣಿಗೆಯ ನಡುವಿನ ಸಂಬಂಧ ಅರಿತುಕೊಂಡು ಸ್ವಾತಂತ್ರ್ಯಪೂರ್ವದಲ್ಲಿ 1942ರಲ್ಲೇ `ಕೌನ್ಸಿಲ್ ಆಫ್ ಸೈಂಟಿಫಿಕ್ ಎಂಡ್ ಇಂಡಸ್ಟ್ರಿಯಲ್ ರಿಸರ್ಚ್’ ಸ್ಥಾಪಿಸಲಾಗಿತ್ತು. ಪರಮಾಣು ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಕೈಗಾರಿಕೆ, ಕೃಷಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ, ದೇಶದ ಇತರ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾದ ಸಲಕರಣೆ, ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳದಂತೆ ನಾವು ಸ್ವಾವಲಂಬನೆ ಸಾಧಿಸುವ ಅಗತ್ಯವಿದೆ’ ಎಂದು ಶರ್ಮ ಅವರು ಪ್ರತಿಪಾದಿಸಿದರು.
`ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನದ ಇತಿಹಾಸ’ ದ ಕುರಿತು ಮಾತನಾಡಿದ ಇಜ್ಞಾನ.ಕಾಮ್ ಸಂಪಾದಕ ಶ್ರೀನಿಧಿ ಟಿ.ಜಿ. ಅವರು, `1931ರಲ್ಲಿ ಕೋಲ್ಕತ್ತದಲ್ಲಿ `ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್’ ಸ್ಥಾಪಿಸಿದ ಪ್ರಶಾಂತ್ ಚಂದ್ರ ಮಹಾಲಾನೋಬಿಸ್ ಅವರು ವಿದೇಶಗಳಲ್ಲಿ ನಡೆಯುತ್ತಿದ್ದ ಸಂಶೋಧನೆಗಳನ್ನು ಗಮನಿಸಿ, ತಮ್ಮ ಸಂಸ್ಥೆಯ ಕೆಲಸಗಳಿಗಾಗಿ ಕಂಪ್ಯೂಟರ್ ಅಗತ್ಯ ಮನಗಂಡು 1953ರಲ್ಲೇ ಅನಲಾಗ್ ಕಂಪ್ಯೂಟರನ್ನು ತಮ್ಮ ಪ್ರಯೋಗಾಲಯದಲ್ಲೇ ರೂಪಿಸಿದರು. ಆನಂತರ ಭಾರತದ ಪರಮಾಣು ವಿಜ್ಞಾನದ ಪಿತಾಮಹ ಅನಿಸಿಕೊಂಡ ಡಾ. ಹೋಮಿ ಭಾಬಾ ಅವರು, ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮಂಟಲ್ ರಿಸರ್ಚ್‍ನಲ್ಲಿ ಕಂಪ್ಯೂಟರ್ ಅಭಿವೃದ್ಧಿಗೆ ಒತ್ತು ನೀಡಿದರು. ಟಿಐಎಫ್‍ಆರ್‌ನ ಪ್ರೊ. ನರಸಿಂಹನ್ ನೇತೃತ್ವದ ತಂಡ ಸತತ ಸಂಶೋಧನೆ ನಡೆಸಿ, 1960ರಲ್ಲಿ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ರೂಪಿಸಿತು. ಇದು ಭಾರತದಲ್ಲೇ ಸಿದ್ಧಗೊಂಡ ಮೊದಲ ಡಿಜಿಟಲ್ ಕಂಪ್ಯೂಟರ್’ ಎಂದು ಮಾಹಿತಿ ನೀಡಿದರು. 50, 60 ದಶಕದಲ್ಲೇ ನಮ್ಮ ವಿಜ್ಞಾನಿಗಳು ಮಾಡಿದ ಸಾಧನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಕಂಪ್ಯೂಟರ್ ಕ್ಷೇತ್ರದಲ್ಲಿ ನಾವು ಕೇವಲ ಬಳಕೆದಾರರಾಗದೇ ಮತ್ತಷ್ಟು ಆವಿಷ್ಕಾರಗಳನ್ನು ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
`ಎಲ್ ಅಂಡ್ ಟಿ’ ಸಂಸ್ಥೆಯ ಡಿಜಿಟಲ್ ಸೇವೆಗಳ ಮುಖ್ಯಸ್ಥರಾದ ಶಶಿಧರ್ ಡೊಂಗ್ರೆ ಅವರು, ಜಗತ್ ಪ್ರಸಿದ್ಧ ವಿಜ್ಞಾನಿಗಳ ಬಗ್ಗೆ ನಾಟಕ ಪ್ರಸ್ತುತಪಡಿಸಿ ವಿಜ್ಞಾನವನ್ನು ಜನಪ್ರಿಯಗೊಳಿಸಬಹುದಾಗಿದೆ ಎಂದು ಹೇಳಿದರು. ಯುರೋಪ್‍ನಲ್ಲಿ ವಿಜ್ಞಾನ ನಾಟಕಗಳು ಬಹು ಪ್ರಸಿದ್ಧವಾಗಿದ್ದು, ಕೆಲ ನಾಟಕಗಳು ಕನ್ನಡಕ್ಕೂ ಅನುವಾದಗೊಂಡು ರಂಗಕ್ಕೆ ಬಂದಿವೆ ಮತ್ತು ಜನಪ್ರಿಯವೂ ಆಗಿವೆ ಎಂದು ಅವರು ತಿಳಿಸಿದರು.
ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಅಧಿಕಾರಿ ಜಯಂತಿ ಸ್ವಾಗತಿಸಿದರು. ಪತ್ರಕರ್ತೆಯರ ಸಂಘದ ಕಾರ್ಯದರ್ಶಿ ಮಾಲತಿ ಭಟ್ ವಂದಿಸಿದರು. ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಹಿರಿಯ ಪತ್ರಕರ್ತೆಯರಾದ ಎಂ. ಪಿ. ಸುಶೀಲಾ, ಕೆ. ಎಚ್. ಸಾವಿತ್ರಿ, ಸಿ. ಜಿ. ಮಂಜುಳಾ, ಪತ್ರಕರ್ತ ಮತ್ತು ಬರಹಗಾರ ಜಿ. ಎನ್. ಮೋಹನ್, ಪತ್ರಕರ್ತೆಯರಾದ ಎಸ್. ನಯನಾ, ಚಿತ್ರಾ ಫಾಲ್ಗುಣಿ, ಶ್ರೀಜಾ ವಿ. ಎನ್. ಜಗದೀಶ್ವರಿ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.