ಭೋಪಾಲ್: ಬೆಳೆದು ನಿಂತ ಬೆಳೆಯನ್ನು ಸರ್ಕಾರಿ ಕಂದಾಯ ಇಲಾಖೆ ಅಧಿಕಾರಿಗಳು ನಾಶ ಮಾಡಿದ್ದರಿಂದ ಅಧಿಕಾರಿಗಳ ಮುಂದೆಯೇ ದಲಿತ ರೈತ ದಂಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಪೊಲೀಸರು ರೈತ ದಂಪತಿಯ ಮೇಲೆ ಹಲ್ಲೆ ಮಾಡಿ ಅವರನ್ನು ಅಂಬುಲೆನ್ಸ್‌ಗೆ ಎಳೆದು ಹಾಕುತ್ತಿರುವುದನ್ನು ಕಾಣಬಹುದು. ರೈತ ದಂಪತಿಗಳಾದ ರಾಮ್ ಕುಮಾರ್ ಅಹಿರ್ವಾರ್ (38) ಮತ್ತು ಸಾವಿತ್ರಿ ದೇವಿ (35) ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅವರು ಪ್ರಾಣಾಪಾಯದಿಂದ ಪರಾಗಿದ್ದಾರೆ.
ಸರ್ಕಾರದ ದಾಖಲೆಯ ಪ್ರಕಾರ, 2018ರಲ್ಲಿ ಕಾಲೇಜು ನಿರ್ಮಿಸಲು ಸುಮಾರು 5.5 ಎಕರೆ ಸಾರ್ವಜನಿಕ ಭೂಮಿಯನ್ನು ಮೀಸಲಿಡಲಾಗಿತ್ತು. ಈ ಭೂಮಿಯನ್ನು ರಾಮ್ ಕುಮಾರ್ ಅಹಿರ್ವಾರ್ ಮತ್ತು ಸಾವಿತ್ರಿ ದೇವಿ ಅವರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಹಲವು ವರ್ಷಗಳಿಂದ ಅಲ್ಲಿ ಕೃಷಿ ಮಾಡುತ್ತಿದ್ದರು. ಆದರೆ ಈಗ ಸರ್ಕಾರ ಈ ಜಾಗದಲ್ಲಿ ಕಾಲೇಜು ನಿರ್ಮಾಣ ಮಾಡಲು ತೀರ್ಮಾನಿಸಿರುವ ಕಾರಣ ನಾವು ಜಾಗವನ್ನು ಖಾಲಿ ಮಾಡಿಸುತ್ತಿದ್ದೇವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ರೈತ ಮಹಿಳೆ ಸಾವಿತ್ರಿ ದೇವಿ, ಇದು ಯಾರ ಜಮೀನು ಎಂದು ನಮಗೆ ಗೊತ್ತಿಲ್ಲ. ಆದರೆ ನಾವು ಬಹಳ ವರ್ಷದಿಂದ ಈ ಜಾಗದಲ್ಲಿ ಕೃಷಿ ಮಾಡುತ್ತಿದ್ದೇವೆ. ಈಗ ನಮ್ಮ ಬೆಳೆದು ನಿಂತ ಬೆಳೆಯನ್ನು ಅಧಿಕಾರಿಗಳು ನಾಶ ಮಾಡಿದ್ದಾರೆ. ನಮಗೆ ಮೂರು ಲಕ್ಷ ಸಾಲವಿದೆ, ಅದನ್ನು ಯಾರು ಕೊಡುತ್ತಾರೆ. ಸರ್ಕಾರ ಸಾಲವನ್ನು ಕಟ್ಟುತ್ತದೆಯೇ? ನಮಗೆ ಆತ್ಮಹತ್ಯೆ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಹೇಳಿದ್ದಾರೆ.

ಮಂಗಳವಾರ ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಅಧಿಕಾರಿಗಳು, ಇದು ಸರ್ಕಾರಿ ಜಾಗ ಎಂದು ದಾಖಲೆಯನ್ನು ತೋರಿಸಿದ್ದಾರೆ. ಆ ನಂತರ ಬೆಳೆದು ನಿಂತು ಬೆಳೆಯನ್ನು ನಾಶ ಮಾಡಿ ಅಲ್ಲಿ ಸುತ್ತಲೂ ಗೋಡೆ ನಿರ್ಮಿಸಲು ಆರಂಭ ಮಾಡಿದ್ದಾರೆ. ಈ ವೇಳೆ ರೈತರು ಇದಕ್ಕೆ ವಿರೋಧ ಮಾಡಿದ್ದಾರೆ. ಆಗ ಪೊಲೀಸ್ ಅಧಿಕಾರಿಗಳು ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಬೇಸತ್ತ ರೈತ ದಂಪತಿ ಅಲ್ಲಿ ಅಧಿಕಾರಿಗಳ ಮುಂದೆಯೇ ಕೀಟನಾಶಕ ಸೇವಿಸಿದ್ದಾರೆ.

ನಾವು ಸ್ಥಳದಲ್ಲಿ ನಡೆದ ಘಟನೆಯ ಬಗ್ಗೆ ವಿಡಿಯೋ ನೋಡಿದ್ದೇವೆ. ಅಲ್ಲಿ ನಮ್ಮ ಅಧಿಕಾರಿಗಳ ತಪ್ಪು ಕಾಣಿಸುತ್ತಿಲ್ಲ. ರೈತ ದಂಪತಿ ವಿಷ ಸೇವಿಸಿದ ನಂತರವೇ ನಮ್ಮ ಅಧಿಕಾರಿಗಳು ಅವರನ್ನು ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ನಮ್ಮ ಅಧಿಕಾರಿಗಳ ತಂಡ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರದೇ ಇದ್ದರೆ ಅವರು ಸಾವನ್ನಪ್ಪುತ್ತಿದ್ದರು ಎಂದು ಗುಣ ಜಿಲ್ಲೆಯ ಜಿಲ್ಲಾಧಿಕಾರಿ ವಿಶ್ವನಾಥ್ ಅವರು ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಸದ್ಯ ಅಧಿಕಾರಿಗಳು ಆ ಜಾಗವನ್ನು ಬಿಟ್ಟು ಬರಬೇಕು. ಸರ್ಕಾರ ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ. ಇತ್ತ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸಿಂಗ್ ಅವರು ಇಂದು ಜಂಗಲ್ ರಾಜ್ಯ ಎಂದು ಸರ್ಕಾರ ಮೇಲೆ ಕಿಡಿಕಾರಿದ್ದಾರೆ.