Tag: ಕಂದಾಯ

  • ಇ-ಖಾತೆದಾರರಿಗೆ ಬಿಗ್ ಶಾಕ್ – ಬಿಬಿಎಂಪಿಯಿಂದ ಶೋಕಾಸ್ ನೋಟಿಸ್ ಜಾರಿ

    ಇ-ಖಾತೆದಾರರಿಗೆ ಬಿಗ್ ಶಾಕ್ – ಬಿಬಿಎಂಪಿಯಿಂದ ಶೋಕಾಸ್ ನೋಟಿಸ್ ಜಾರಿ

    – 26 ಸಾವಿರ ಇ – ಖಾತಾದಾರರಿಗೆ ನೋಟಿಸ್

    ಬೆಂಗಳೂರು: ನೈಜ ಅಳತೆ ನಮೂದಿಸದೇ, ಕಡಿಮೆ ತೆರಿಗೆ ಕಟ್ಟಿ ವಂಚಿಸಿರುವ ಇ-ಖಾತಾದಾರರಿಗೆ ಬಿಬಿಎಂಪಿ (BBMP) ಶೋಕಾಸ್ ನೋಟಿಸ್ (Show Cause Notice) ಜಾರಿ ಮಾಡಿದೆ.

    ಸುಮಾರು 26 ಸಾವಿರ ಇ-ಖಾತಾದಾರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಮನೆ, ನಿವೇಶನ ಸೈಟ್‌ನ ಅಳತೆ ಹೆಚ್ಚಿದ್ದರೂ, ಕಡಿಮೆ ಅಳತೆ ತೋರಿಸಿ ಟ್ಯಾಕ್ಸ್ (Tax) ವಂಚನೆ ಎಸಗಿದವರಿಗೆ ಬಿಸಿ ಮುಟ್ಟಿಸಿದೆ.

     

    15 ದಿನದ ಒಳಗಡೆ ಹೆಚ್ಚಾಗಿ ಘೋಷಣೆ ಮಾಡಿಕೊಂಡಿರುವ ಜಾಗಕ್ಕೆ ಟ್ಯಾಕ್ಸ್ ಕಟ್ಟಬೇಕು. ಒಂದು ವೇಳೆ ಟ್ಯಾಕ್ಸ್ ಕಟ್ಟದೇ ಹೋದರೆ ಖಾತೆಯನ್ನ ಸೀಜ್ ಮಾಡೋದಾಗಿ ಪಬ್ಲಿಕ್ ಟಿವಿಗೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜುಲೈನಲ್ಲೇ ತಮಿಳುನಾಡಿಗೆ ಹರಿದ 100 ಟಿಎಂಸಿ ನೀರು ಕೆಆರ್‌ಎಸ್ ಹೊಸ ದಾಖಲೆ

    ಬಿಬಿಎಂಪಿ ವ್ಯಾಪ್ತಿಯಲ್ಲಿ 22 ಲಕ್ಷ ಆಸ್ತಿ ಇದ್ದು ಅದರಲ್ಲಿ 5 ಲಕ್ಷ ಮಂದಿ ಮಾತ್ರ ಇ – ಖಾತಾ ಪಡೆದಿದ್ದಾರೆ. ಇನ್ನೂ 80% ಮಂದಿ ಇ-ಖಾತಾ ಪಡೆಯಬೇಕಿದೆ. ಇ-ಖಾತಾ ಪಡೆದಿರುವ 5 ಲಕ್ಷ ಮಂದಿಯಲ್ಲೇ 26 ಸಾವಿರ ಜನರಿಗೆ ಈಗ ಶೋಕಾಸ್ ನೋಟಿಸ್ ಜಾರಿಯಾಗಿದೆ.

    ಶೋಕಾಸ್ ನೋಟಿಸ್‌ ಜಾರಿ ಆಗಿರುವವರು 15 ದಿನದ ಒಳಗಡೆ ತೆರಿಗೆ ಕಟ್ಟದೇ ಇದ್ದರೆ ಖಾತೆ ಸೀಜ್ ಆಗುವ ಎಚ್ವರಿಕೆಯನ್ನು ನೀಡಲಾಗಿದೆ.

  • ಪ್ರಾಥಮಿಕ ಒತ್ತುವರಿ ಪಟ್ಟಿ ತಯಾರಿಸಿ, ಪ್ರತೀ ವಾರಾಂತ್ಯ ತೆರವಿಗೆ ಮುಂದಾಗಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

    ಪ್ರಾಥಮಿಕ ಒತ್ತುವರಿ ಪಟ್ಟಿ ತಯಾರಿಸಿ, ಪ್ರತೀ ವಾರಾಂತ್ಯ ತೆರವಿಗೆ ಮುಂದಾಗಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

    ಬೆಂಗಳೂರು: ಸರ್ಕಾರಿ ಒತ್ತುವರಿ ಜಮೀನುಗಳ ಪ್ರಾಥಮಿಕ ಒತ್ತುವರಿ ಪಟ್ಟಿಯನ್ನು ಶೀಘ್ರದಲ್ಲಿ ತಯಾರಿಸಿ ಹಾಗೂ ಪ್ರತೀ ವಾರಾಂತ್ಯದಲ್ಲಿ ಒತ್ತುವರಿ (Encroachment) ತೆರವಿಗೆ ಮುಂದಾಗಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಸೂಚಿಸಿದ್ದಾರೆ.

    ವಿಕಾಸ ಸೌಧದಲ್ಲಿ ಇಂದು ಸರ್ಕಾರ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ/ಗ್ರಾಮೀಣ ಭಾಗದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಆಯುಕ್ತರ ಸಭೆ ಕರೆದಿದ್ದ ಸಚಿವರು, ಸಭೆಯಲ್ಲಿ ಒತ್ತುವರಿ ತೆರವಿಗೆ ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದಾರೆ.

    ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಮೀನು ಒತ್ತುವರಿ ಅತಿದೊಡ್ಡ ಸಮಸ್ಯೆಯಾಗಿದೆ. ಸರ್ಕಾರದ ಜಮೀನು ಭೂ ಮಾಫಿಯಾ ಪಾಲಾಗುತ್ತಿದೆ. ಪರಿಣಾಮ ಸರ್ಕಾರಕ್ಕೆ ಸಾಕಷ್ಟು ಆದಾಯ (Income) ಖೋತಾ ಆಗುತ್ತಿದೆ. ಹೀಗಾಗಿ ಅಧಿಕಾರಿಗಳು ಶೀಘ್ರದಲ್ಲಿ ಒತ್ತುವರಿ ಜಮೀನಿನ ಪ್ರಾಥಮಿಕ ಪಟ್ಟಿ ಸಿದ್ದಪಡಿಸಿ, ಪ್ರತೀ ಶನಿವಾರ ಹಾಗೂ ಭಾನುವಾರ ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ತಿಳಿಸಿದರು.

     

    ಕಳೆದ ಅಧಿವೇಶನದಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವಿನ ಬಗ್ಗೆ ನಮ್ಮ ಸರ್ಕಾರ ಮಾತು ನೀಡಿದೆ. ಕೊಟ್ಟ ಮಾತಿನಂತೆ ಒತ್ತುವರಿ ತೆರವಿನ ಜೊತೆಗೆ ಸರ್ಕಾರಿ ಜಮೀನನ್ನು ರಕ್ಷಿಸುವ ಕೆಲಸವೂ ಆಗಬೇಕು. ಸರ್ಕಾರಿ ಜಮೀನಿನ ಸುತ್ತ ಸುರಕ್ಷಿತ ಬೇಲಿ ಹಾಕಬೇಕು, ಪ್ರತಿವಾರ ಅಧಿಕಾರಿಗಳು ‘ಬೀಟ್’ ಹಾಕುವ ಮೂಲಕ ಸರ್ಕಾರಿ ಸ್ವತ್ತನ್ನು ಕಾಪಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ ಸಿಐಡಿ ತನಿಖೆಗೆ

    ಸರ್ಕಾರಿ ಭೂಮಿಯ ರೀ ಸರ್ವೆ ಆಗಲಿ
    ಹಲವಾರು ಪ್ರಕರಣಗಳಲ್ಲಿ ಸರ್ಕಾರಿ ದಾಖಲೆಗಳು ಕಳುವಾಗಿವೆ ಅಥವಾ ಕೆಲವು ದಾಖಲೆಗಳನ್ನು ತಿದ್ದಲಾಗಿದೆ. ಇದರ ಹಿಂದೆ ಭೂ ಮಾಫಿಯಾ ಕೈವಾಡವೂ ಇದೆ. ಹೀಗಾಗಿ ಭೂ ಸುಧಾರಣೆ-ಬಗರ್ ಹುಕುಂ ಅಡಿಯಲ್ಲಿ ಜಮೀನು ಗ್ರ್ಯಾಂಟ್ ಪಡೆದ ಅರ್ಹ ಫಲಾನುಭವಿಗಳೂ ಸಂಕಷ್ಟ ಎದುರಿಸುವಂತಾಗಿದೆ.

    ಇದಲ್ಲದೆ, ಗೋಮಾಳ, ಸ್ಮಶಾನದ ಭೂಮಿ, ಕೆರೆ-ಕಟ್ಟೆಗಳೂ ಸಹ ಒತ್ತುವರಿ ಆಗಿದೆ. ಹೀಗಾಗಿ ಭೂ ಮಾಪಕರು ಹಾಗೂ ಗ್ರಾಮ ಲೆಕ್ಕಿಗರು ತಹಶೀಲ್ದಾರ್ ನೇತೃತ್ವದಲ್ಲಿ ಸರ್ಕಾರಿ ದಾಖಲೆಗಳಲ್ಲಿರುವ ಪ್ರತಿ ಸರ್ಕಾರಿ ಜಮೀನನ್ನು ಮತ್ತೆ ರೀ ಸರ್ವೆ (ಮರು ಮಾಪನ) ನಡೆಸಬೇಕು. ಆ ವರದಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಒತ್ತುವರಿಯಾದ ಸರ್ಕಾರಿ ‌ಜಮೀನನ್ನು ಗುರುತಿಸಿ ಪಟ್ಟಿ ಸಿದ್ದಪಡಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಪ್ಲ್ಯಾನ್ ಅನುಮತಿಗೆ ಮುನ್ನ ಎಚ್ಚರ
    ವಸತಿ ಸಮುಚ್ಚಯ ಸೇರಿದಂತೆ ಯಾವುದೇ ಯೋಜನೆಗಾಗಿ ನೋಂದಣಿ ಬಂದರೂ ಸಹ ಅಧಿಕಾರಿಗಳು ಎಚ್ಚರವಹಿಸಬೇಕು. ನೋಂದಣಿಯಾಗುತ್ತಿರುವ ಭೂಮಿಯ ದಾಖಲೆಗಳನ್ನು ಪರಿಶೀಲಿಸಬೇಕು, ಸರ್ಕಾರಿ ಜಮೀನಾಗಿದ್ದಲ್ಲಿ ಕೂಡಲೇ ಕ್ರಮ ಜರುಗಿಸಬೇಕು. ಇನ್ನಾದರೂ ಅಕ್ರಮ ಒತ್ತುವರಿಗೆ ತಡೆಯೊಡ್ಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

    ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಪಿ. ಸುನೀಲ್ ಕುಮಾರ್ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿ ಡಾ ಶಿವಶಂಕರ್. ಎನ್, ಹಾಗೂ ಕಂದಾಯ ಇಲಾಖೆಯ ಹಲವು ಅಧಿಕಾರಿಗಳು ಇದ್ದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಸಿ ವರದಿಯ ಬಳಿಕ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ತೀರ್ಮಾನ: ಬೊಮ್ಮಾಯಿ

    ಡಿಸಿ ವರದಿಯ ಬಳಿಕ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ತೀರ್ಮಾನ: ಬೊಮ್ಮಾಯಿ

    ಚಿತ್ರದುರ್ಗ:  ಮುರುಘಾ ಮಠಕ್ಕೆ(Muruga Math) ಆಡಳಿತಾಧಿಕಾರಿ ನೇಮಿಸಿ ಎಂದು ಮಠದ ಭಕ್ತರು ಸಲ್ಲಿಸಿದ್ದಾರೆ. ಆ ವಿಚಾರದಲ್ಲಿ ಕಂದಾಯ ಇಲಾಖೆಯಿಂದ(Revenue Department) ಡಿಸಿಯ ವರದಿ ಪಡೆದ ಬಳಿಕ ಅಗತ್ಯ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommai) ತಿಳಿಸಿದರು.

    ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಪೂರ್ವದಲ್ಲಿ ಮಠದಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದೇವೆ. ಆ ವರದಿ ಬಂದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಮಾಜಿ ಸಿಎಂ ಯಡಿಯೂರಪ್ಪ ಮುರುಘಾಶ್ರೀ ಪ್ರಕರಣದ ಬಗ್ಗೆ ಅಕ್ಷಮ್ಯ ಅಪರಾದವೆಂದಿದ್ದಾರೆಂದು ಸಿಎಂಗೆ ಪ್ರಶ್ನಿಸಿದಾಗ, ಮುರುಘಾ ಶ್ರೀ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಅದರ ಬಗ್ಗೆ ವ್ಯಾಖ್ಯಾನ ಮಾಡುವುದಿಲ್ಲ. ಆ‌ ವಿಚಾರದಲ್ಲಿ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೂದಲು ಉದುರುತ್ತಿದೆ ಎಂದು ಮನನೊಂದ ಯುವಕ ಡೆತ್‍ನೋಟ್ ಬರೆದು ಆತ್ಮಹತ್ಯೆ

    ಸತೀಶ್ ಜಾರಕಿಹೊಳಿ(Satish Jarkiholi) ಹೇಳಿಕೆಗೆ ಪ್ರತಿಕ್ರಿಯಿದ ಅವರು, ಶತಮಾನಗಳಿಂದ ನಂಬಿಕೆ, ವಿಶ್ವಾಸದ ಮೇಲೆ ಧರ್ಮ ನಡೆಯುತ್ತದೆ. ಸ್ಥಾಪಿತವಾಗಿರುವ ನಂಬಿಕೆಗಳಿಗೆ ಕೊಡಲಿ ಏಟು ಕೊಡುವ ಕೆಲಸ ಮಾಡಿದ್ದಾರೆ. ಅದರ ಮೇಲೆ ಚರ್ಚೆ ಮಾಡುವುದೇನಿದೆ? ತಾಂತ್ರಿಕವಾಗಿ ಅವರ ಶಾಲಾ, ಕಾಲೇಜುಗಳ ಪ್ರಮಾಣಪತ್ರದಲ್ಲಿ ಹಿಂದೂ ಎಂದೇ ನಮೂದಾಗಿದೆ. ನಂಬಿಕೆಗಳು ಶತಮಾನಗಳಿಂದ ಇದೆ. ಜನರ ನಂಬಿಕೆಯನ್ನು ಘಾಸಿ ಮಾಡುವಂಥ ಕೆಲಸ ಮಾಡಿ ಪುನ: ಚರ್ಚೆ ಮಾಡುವುದು ಏನೂ ಇಲ್ಲ. ಅವರ ಕ್ಷಮೆಯೂ ಬೇಕಾಗಿಲ್ಲ. ಜನ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.

    ಜನಸಂಕಲ್ಪ ಯಾತ್ರೆಯಲ್ಲಿ ಜನರೇ ಸೇರುತ್ತಿಲ್ಲ ಎಂದು ಹೇಳಿಕೆ‌ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನಾನು ಈ ಮೂಲಕ ಅವರಿಗೆ ಆಹ್ವಾನ ನೀಡುತ್ತೇನೆ. ಯಾತ್ರೆಗೆ ಬಂದು ನೋಡಲಿ.  ಎಲ್ಲಾ ಮಾಧ್ಯಮದಲ್ಲಿ ತೋರಿಸುವ ಜನಸಾಗರವೇ ಇದಕ್ಕೆ ಉತ್ತರವಾಗಿದ್ದು ಈ ಜನಸಂಕಲ್ಪ ಯಾತ್ರೆ ಮುಂದೆ ವಿಜಯಸಂಕಲ್ಪವಾಗಿ ಪರಿವರ್ತನೆಯಾಗಲಿದೆ ಎಂದು ತಿರುಗೇಟು ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಕುಶಾಲನಗರ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಎಸಿಬಿ ಬಲೆಗೆ

    ಕುಶಾಲನಗರ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಎಸಿಬಿ ಬಲೆಗೆ

    ಮಡಿಕೇರಿ: ಜಾಗದ ದಾಖಲಾತಿಗಳನ್ನು ಸರಿಪಡಿಸುವ ಸಾಲುವಾಗಿ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದ ತಾಲೂಕು ಕಚೇರಿ ಬಳಿ ನಡೆದಿದೆ.

    ತಾಲೂಕು ಕಚೇರಿಯ ಅಧಿಕಾರಿ ವಿನೋದ್ ಲಂಚ ಪಡೆದಾತ. ಕುಶಾಲನಗರ ತಾಲೂಕಿನ ಶುಂಠಿಕೊಪ್ಪ ಹೋಬಳಿಯ ಅಂದಗೋವೆ ನಿವಾಸಿ ಬೆಳ್ಳಿಯಪ್ಪ ಆಸ್ತಿ ದಾಖಲಾತಿಗಳನ್ನು ಸರಿಪಡಿಸಲು ತಾಲೂಕು ಕಚೇರಿಗೆ ಬಂದಿದ್ದರು. ಈ ವೇಳೆ ಶಿರಸ್ತೆದಾರ ವಿನೋದ್ ಅವರು 14.5 ಲಕ್ಷ ಲಂಚ ನೀಡಲು ಬೇಡಿಕೆ ಇಟ್ಟಿದ್ದರು.

    ಈ ಹಿನ್ನೆಲೆಯಲ್ಲಿ ಬೆಳ್ಳಿಯಪ್ಪ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಇಂದು ವಿನೋದ್ ತಾಲೂಕು ಕಚೇರಿ ಬಳಿ ಇರುವ ಟೀ ಕ್ಯಾಂಟೀನ್ ಬಳಿ ಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಲಂಚ ಸ್ವೀಕರಿಸಿದ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ, ವಿನೋದ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಿಚಾರಣೆಯಲ್ಲಿ ಎಸಿಬಿ ಇನ್ಸ್‍ಪೆಕ್ಟರ್ ಹರೀಶ್, ಕುಮಾರ್ ಸಿಬ್ಬಂದಿ ದಿನೇಶ್, ವಿಶ್ವನಾಥ್, ಸುರೇಶ್, ಲೋಹಿತ್, ದೀಪಿಕಾ, ವಿಜಯ್ ಕುಮಾರ್ ಭಾಗಿಯಾಗಿದ್ದರು. ಇದನ್ನೂ ಓದಿ: ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ ಮರು ದಿನವೇ ಶಾಲೆ ಪ್ರಾರಂಭ: ಬಿಸಿ ನಾಗೇಶ್

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್

    ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್

    ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು ನಾಳೆಯಿಂದ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ಅನುಮತಿ ಸಿಗಲಿದೆ.

    ಕ್ರಷರ್ ವ್ಯವಹಾರ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಸಬ್‍ರಿಜಿಸ್ಟ್ರಾರ್ ಚೇರಿಗೆ ಬರುವ ಮುನ್ನ ಕಚೇರಿಗೆ ಕರೆ ಮಾಡಿ ಅಧಿಕಾರಿಗಳಿಗೆ ಸಮಯ ಕೇಳಿ ಬರಬೇಕಾಗುತ್ತದೆ.

    ಕಚೇರಿಗೆ ಬರುವವವರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಕಂದಾಯ ಸಚಿವ ಅಶೋಕ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಲಾಕ್‍ಡೌನ್ ನಿರ್ಧಾರ ರಾಜ್ಯಗಳಿಗೆ ಬಿಟ್ಟರೆ ಬಿಎಸ್‍ವೈ ಪ್ಲಾನ್ ಏನು?

    ಈಗಾಗಲೇ ಅಗತ್ಯ ಸೇವೆ ಜೊತೆ ಆರ್ಥಿಕ ಚಟುವಟಿಕೆಗಾಗಿ ಕೆಲ ನಿಯಮಗಳನ್ನು ಸಡಿಲ ಮಾಡಲಾಗಿದೆ. ಹೀಗಾಗಿ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದಿಂದ ಅಧಿಕೃತ ಆದೇಶ ಇನ್ನೂ ಪ್ರಕಟವಾಗಿಲ್ಲ. ಇಂದು ಈ ಬಗ್ಗೆ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.

  • ‘ಸಂಧ್ಯಾ ಸುರಕ್ಷಾ’ ಹೆಚ್ಚುವರಿ ಹಣ ಬರೋಕೆ ನವೆಂಬರ್ ವರೆಗೆ ಕಾಯಬೇಕು!

    ‘ಸಂಧ್ಯಾ ಸುರಕ್ಷಾ’ ಹೆಚ್ಚುವರಿ ಹಣ ಬರೋಕೆ ನವೆಂಬರ್ ವರೆಗೆ ಕಾಯಬೇಕು!

    – ಕಂದಾಯ ಇಲಾಖೆಗೆ ಎಚ್‍ಡಿಕೆ ಕೊಟ್ಟಿದ್ದೇನು?

    ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಮಂಡಿಸಿದ ಬಜೆಟ್‍ನಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಫಲಾನುಭವಿಗಳ ಮಾಸಾಶನವನ್ನು ಏರಿಕೆ ಮಾಡಲಾಗಿದೆ. ಇದುವರೆಗೆ 600 ರೂ. ಇದ್ದ ಮಾಸಾಶನ ಇನ್ನು ಮುಂದೆ 1000 ರೂ.ಗೆ ಏರಿಕೆಯಾಗಿದೆ. ಆದರೆ ಈ ಏರಿಕೆ ಈ ವರ್ಷ ನವೆಂಬರ್ 1ರಿಂದ ಜಾರಿಗೆ ಬರಲಿದೆ.

    65 ವರ್ಷ ಮೀರಿದ 32.92 ಲಕ್ಷ ವೃದ್ಧರಿಗೆ ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಮೊತ್ತ ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಏರಿಕೆಯಾಗಲಿದೆ. ಇದಕ್ಕಾಗಿ ಈ ಬಜೆಟ್‍ನಲ್ಲಿ ಹೆಚ್ಚುವರಿ 660 ಕೋಟಿ ರೂ. ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

    ರಾಜ್ಯದಲ್ಲಿ ಮರು ಭೂಮಾಪನಾ ಕಾರ್ಯ ಆರಂಭವಾಗಲಿದೆ. ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿದ್ದು, ಮೊದಲಿಗೆ 5 ಜಿಲ್ಲೆಗಳಲ್ಲಿ ಮರು ಭೂ ಮಾಪನ ಆರಂಭವಾಗಲಿದೆ. 50 ನಾಡ ಕಚೇರಿಗಳ ಮೂಲಭೂತ ಸೌಕರ್ಯ ಕಲ್ಪಿಸಲು 10 ಕೋಟಿ ರೂಪಾಯಿ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ.

  • ಶುಕ್ರವಾರದ ಸಭೆಯಲ್ಲಿನ ನಿರ್ಧಾರಗಳೇ ಸರ್ಕಾರದ ಗೈಡ್‍ಲೈನ್ಸ್: ಆರ್ ವಿ ದೇಶಪಾಂಡೆ

    ಶುಕ್ರವಾರದ ಸಭೆಯಲ್ಲಿನ ನಿರ್ಧಾರಗಳೇ ಸರ್ಕಾರದ ಗೈಡ್‍ಲೈನ್ಸ್: ಆರ್ ವಿ ದೇಶಪಾಂಡೆ

    ಚಿಕ್ಕಮಗಳೂರು: ಸಮ್ಮಿಶ್ರ ಸರ್ಕಾರದ ಗುದ್ದಾಟದ ನಡುವೆ ಶುಕ್ರವಾರ ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳೇ ಸರ್ಕಾರಕ್ಕೇ ಗೈಡ್‍ಲೈನ್ಸ್ ಅಂತ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಇದೇ ಶುಕ್ರವಾರ 29ನೇ ತಾರೀಖಿನಂದು ನಡೆಯಲಿದೆ. ಸಭೆಯಲ್ಲಿ ಅಧ್ಯಕ್ಷರಾದ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ರಾಜ್ಯ ಕಾರ್ಯದರ್ಶಿ ವೇಣುಗೋಪಾಲ್, ಜೆಡಿಎಸ್ ಕಾರ್ಯದರ್ಶಿ ಡ್ಯಾನಿಶ್ ಅಲಿ ಹಾಗೂ ಮುಖಂಡರನ್ನು ಒಳಗೊಂಡಿದ್ದು, ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳೇ ಸರ್ಕಾರಕ್ಕೆ ಗೈಡ್‍ಲೈನ್ಸ್ ಆಗಿದೆ. ಸರ್ಕಾರ ಇದನ್ನೇ ಭಗವದ್ಗೀತೆ, ಕುರಾನ್, ಬೈಬಲ್ ಅಂತಾ ತಿಳಿದುಕೊಂಡು ಇದರ ಆಧಾರದಲ್ಲಿ ಸರ್ಕಾರ ನಡೆಯಬೇಕು ಎಂದು ತಿಳಿಸಿದ್ದಾರೆ.

    ಸಮ್ಮಿಶ್ರ ಸರ್ಕಾರದ ಗುದ್ದಾಟದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ಬಲಿಷ್ಟ ಹಾಗೂ ಸುಭದ್ರವಾಗಿದ್ದು, ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡ್ತಿದೆ. ಎಲ್ಲಾ ಸಚಿವರು ತಮ್ಮ ತಮ್ಮ ಇಲಾಖೆಗಳ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಕಾನೂನಿನ ಪ್ರಕಾರ ಸರ್ಕಾರ ಐದು ವರ್ಷ ಉಳಿಯಬೇಕು, ಯಾವುದೇ ತೊಂದರೆ ಇಲ್ಲದೆ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ ಎಂದು ಹೇಳಿಕೆ ನೀಡಿದ್ದಾರೆ.

  • ಅಕ್ರಮ ಗಣಿಗಾರಿಕೆ: ಎಸ್‍ಐಟಿಯಿಂದ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅರೆಸ್ಟ್

    ಅಕ್ರಮ ಗಣಿಗಾರಿಕೆ: ಎಸ್‍ಐಟಿಯಿಂದ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅರೆಸ್ಟ್

    – ಸೇವೆಯಲ್ಲಿದ್ದಾಗಲೇ ಅರೆಸ್ಟ್ ಆದ ಮೊದಲ ಅಧಿಕಾರಿ
    – ಗಣಿ ಇಲಾಖೆಯ ನಿರ್ದೇಶಕರಾಗಿದ್ದ ವೇಳೆ ಅಕ್ರಮ

    ಬೆಂಗಳೂರು: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕಂದಾಯ ಇಲಾಖೆ ಕಾರ್ಯದರ್ಶಿಯಾಗಿರುವ ಗಂಗಾರಾಮ್ ಬಡೇರಿಯಾ ಅವರನ್ನು ವಿಶೇಷ ತನಿಖಾ ತಂಡದ(ಎಸ್‍ಐಟಿ) ಪೊಲೀಸರು ಬಂಧಿಸಿದ್ದಾರೆ.

    ಈ ಹಿಂದೆ ಗಣಿ ಇಲಾಖೆಯ ನಿರ್ದೇಶಕರಾಗಿದ್ದ ಬಡೇರಿಯಾ ಅವಧಿಯಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಸಮನ್ಸ್ ಜಾರಿ ಮಾಡಿತ್ತು. ಇಂದು ಎಸ್‍ಪಿ ಅಣ್ಣಗಿರಿ ಮುಂದೆ ಬಡೇರಿಯಾ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಎಸ್‍ಐಟಿ ಪೊಲೀಸರ ತಂಡ ಬಡೇರಿಯಾ ಅವರನ್ನು ಬಂಧಿಸಿದೆ.

    ಏನಿದು ಜಂತಕಲ್ ಮೈನಿಂಗ್ ಪ್ರಕರಣ?
    ಚಿತ್ರದುರ್ಗ ಜಿಲ್ಲೆಯ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್‍ಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಪಾಕಿಸ್ತಾನಕ್ಕೆ ಅಕ್ರಮವಾಗಿ ಅದಿರು ಸಾಗಿಸಿ ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಗಣಿ ಗುತ್ತಿಗೆ ಮಾಡಿದ ಪರಿಣಾಮ ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು. ಜಂತಕಲ್ ಮೈನಿಂಗ್ ಪರವನಾಗಿ ನೀಡುವ ವಿಚಾರದಲ್ಲಿ ಬಡೇರಿಯಾ ಅವರು ವಿನೋದ್ ಗೋಯಲ್ ಸಹಾಯ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ತನಿಖೆ ವೇಳೆ ಬಡೇರಿಯಾ ಮಗನ ಖಾತೆಗೆ ವಿನೋದ್ ಗೋಯಲ್ 10 ಲಕ್ಷ ರೂ. ಹಣ ಹಾಕಿದ್ದ ವಿಚಾರ ಬೆಳಕಿಗೆ ಬಂದಿತ್ತು. ಮಗನ ಅಕೌಂಟ್ ಪರಿಶೀಲನೆ ಮಾಡಿದಾಗ ಬಡೇರಿಯಾ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ಈ ಹಿಂದೆ ಮೂರು ಬಾರಿ ಎಸ್‍ಐಟಿ ವಿಚಾರಣೆಗೆ ಹಾಜರಾಗಿದ್ದ ಬಡೇರಿಯಾ ನಾಲ್ಕನೇಯ ಬಾರಿಯ ವಿಚಾರಣೆ ವೇಳೆ ಅರೆಸ್ಟ್ ಆಗಿದ್ದಾರೆ.

    ಮೊದಲ ಅಧಿಕಾರಿ: ಸೇವೆಯಲ್ಲಿ ಇದ್ದಾಗಲೇ ಇದೂವರೆಗೆ ಕರ್ನಾಟಕದಲ್ಲಿ ಯಾವೊಬ್ಬ ಐಎಎಎಸ್ ಅಧಿಕಾರಿಯ ಬಂಧನವಾಗಿರಲಿಲ್ಲ. ಆದರೆ ಈಗ ಬಡೇರಿಯಾ ಅರೆಸ್ಟ್ ಆಗುವ ಮೂಲಕ ಸೇವೆಯಲ್ಲಿರುವಾಗಲೇ ಬಂಧನಕ್ಕೊಳಗಾದ ಮೊದಲ ಐಎಎಸ್ ಅಧಿಕಾರಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

    ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆಯವರ ಈ ಕುರಿತ ವರದಿಯಲ್ಲಿದ್ದ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ದೂರು ಸಲ್ಲಿಸಿದ್ದರು. ಅಪಾರ ಪ್ರಮಾಣದ ಅರಣ್ಯಭೂಮಿಯನ್ನು ಕಬಳಿಸಿ ಅಕ್ರಮ ಗಣಿಗಾರಿಕೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್, ಎಸ್.ಎಂ.ಕೃಷ್ಣ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮಾರ್ಚ್ ನಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಪೊಲೀಸ್‌ನ ವಿಶೇಷ ತನಿಖಾ ತಂಡಕ್ಕೆ ಸೂಚಿಸಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿರುದ್ಧ ತನಿಖೆಗೆ ಸುಪ್ರೀಂ ತಡೆಯಾಜ್ಞೆ ನೀಡಿದೆ.