Tag: ಕಂಡಕ್ಟರ್

  • KSRTC ಬಸ್‍ನಲ್ಲಿ ಲೈಟ್ ಆಫ್ ಮಾಡಿ ಯುವತಿಯ ಮೈ ಕೈ ಮುಟ್ಟಿದ ಕಾಮುಕ ಕಂಡಕ್ಟರ್ ಗೆ ಗೂಸಾ

    KSRTC ಬಸ್‍ನಲ್ಲಿ ಲೈಟ್ ಆಫ್ ಮಾಡಿ ಯುವತಿಯ ಮೈ ಕೈ ಮುಟ್ಟಿದ ಕಾಮುಕ ಕಂಡಕ್ಟರ್ ಗೆ ಗೂಸಾ

    ತುಮಕೂರು: ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾಮುಕ ಕಂಡಕ್ಟರ್ ಗೆ ಸಹಪ್ರಯಾಣಿಕರೆಲ್ಲರೂ ಸೇರಿ ಸಖತ್ ಗೂಸಾ ಕೊಟ್ಟಿರುವ ಘಟನೆ ತುಮಕೂರಿನ ಕುಣಿಗಲ್ ನಲ್ಲಿ ನಡೆದಿದೆ.

    ಹೊಳೆನರಸೀಪುರ ಡಿಪೋ ಕಂಡಕ್ಟರ್ ಜವಾಹರ್ ಅಹಮದ್ ಪ್ರಯಾಣಿಕರಿಂದ ಗೂಸಾ ತಿಂದ ಕಂಡಕ್ಟರ್. ಹಾಸನದಿಂದ ಬೆಂಗಳೂರಿಗೆ ಹೊರಟ್ಟಿದ್ದ ಬಸ್ಸಿನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ರೇಖಾ ಎಂಬ ಯುವತಿ ಹಾಸನದಿಂದ ಬಸ್ ಹತ್ತಿದ್ದಾರೆ. ಸೀಟ್ ಇಲ್ಲದೆ ಇದ್ದ ಕಾರಣ ನಿರ್ವಾಹಕನ ಸೀಟ್ ಪಕ್ಕದಲ್ಲಿ ಕುಳಿತಿದ್ದರು.

    ಬಸ್ ಚನ್ನರಾಯಪಟ್ಟಣ ದಾಟಿ ಕುಣಿಗಲ್ ಕಡೆ ಬರುತ್ತಿದ್ದಂತೆ ಆರೋಪಿ ಜವಾಹರ್ ಬಸ್ ಲೈಟ್ ಆಫ್ ಮಾಡಿದ್ದಾನೆ. ಬಳಿಕ ಕತ್ತಲೆಯಲ್ಲಿ ಜವಾಹರ್ ಯುವತಿ ರೇಖಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ನಿರ್ವಾಹಕನ ವರ್ತನೆಗೆ ಪ್ರತಿರೋಧ ಒಡ್ಡಿ ಕಿರುಚಿಕೊಂಡಿದ್ದಾರೆ.

    ಯುವತಿಯ ಕಿರುಚಾಟ ಕೇಳಿದ ತಕ್ಷಣ ಸಹಪ್ರಯಾಣಿಕರು ಯುವತಿ ನೆರವಿಗೆ ಬಂದು ಕಾಮುಕ ಕಂಡಕ್ಟರ್ ಗೆ ಥಳಿಸಿದ್ದಾರೆ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜವಾಹರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಪ್ರದ್ಯುಮನ್ ಕೊಲೆ ಪ್ರಕರಣ- ತಪ್ಪಾಗಿ ಅರೆಸ್ಟ್ ಆಗಿದ್ದ ಕಂಡಕ್ಟರ್ ಗೆ ನಾಳೆ ಬಿಡುಗಡೆ ಸಾಧ್ಯತೆ

    ಪ್ರದ್ಯುಮನ್ ಕೊಲೆ ಪ್ರಕರಣ- ತಪ್ಪಾಗಿ ಅರೆಸ್ಟ್ ಆಗಿದ್ದ ಕಂಡಕ್ಟರ್ ಗೆ ನಾಳೆ ಬಿಡುಗಡೆ ಸಾಧ್ಯತೆ

    ಗುರ್ಗಾಂವ್: ಬಾಲಕ ಪ್ರದ್ಯುಮನ್ ಕೊಲೆ ಪ್ರಕರಣದಲ್ಲಿ ಹರಿಯಾಣ ಪೊಲೀಸರು ತಪ್ಪಾಗಿ ಆರೋಪಿಯನ್ನಾಗಿಸಿದ್ದ ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಮಂಗಳವಾರದಂದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಗುರುಗ್ರಾಮದ ಜಿಲ್ಲಾ ನ್ಯಾಯಾಲಯ ಕುಮಾರ್ ಅವರ ಜಾಮೀನು ಅರ್ಜಿಯ ಆದೇಶವನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕಾಯ್ದಿರಿಸಿದೆ.

    ಅಶೋಕ್ ಕುಮಾರ್ ವಿರುದ್ಧ ಸಿಬಿಐ ಯಾವುದೇ ಸಾಕ್ಷಿ ಒದಗಿಸಲು ಸಾಧ್ಯವಾಗಿಲ್ಲ. ಹಾಗೂ ಡಿಎನ್‍ಎ ಕೂಡ ಹೊಂದಾಣಿಕೆ ಆಗಿಲ್ಲ ಎಂದು ಅಶೋಕ್ ಕುಮಾರ್ ಪರ ವಕೀಲರಾದ ಮೋಹಿತ್ ವರ್ಮಾ ಹೇಳಿದ್ದಾರೆ.

    ಇಲ್ಲಿ ರಯಾನ್ ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್‍ನನ್ನು ಕತ್ತು ಸೀಳಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ರನ್ನು ಬಂಧಿಸಲಾಗಿತ್ತು. ಕಂಡಕ್ಟರ್ ಅಶೋಕ್ ಕುಮಾರ್ ಈ ಕೊಲೆ ಮಾಡಿದ್ದಾರೆಂದು ಹೇಳಲು ಸಾಕ್ಷಿಗಳು ಸಿಕ್ಕಿರುವುದಾಗಿ ಹರಿಯಾಣ ಪೊಲೀಸರು ಹೇಳಿದ್ದರು. ಆದರೂ ಅಶೋಕ್ ಕುಮಾರ್ ಕುಟುಂಬಸ್ಥರು ಹಾಗೂ ಪ್ರದ್ಯುಮನ್ ಪೋಷಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

    ಸಿಬಿಐ ಗೆ ಪ್ರಕರಣವನ್ನು ವರ್ಗಾಯಿಸಿದ ನಂತರ ಸ್ಫೋಟಕ ತಿರುವು ಸಿಕ್ಕಿತ್ತು. ಈ ತಿಂಗಳ ಆರಂಭದಲ್ಲಿ ಸಿಬಿಐ ಕೊಲೆಗೆ ಸಂಬಂಧಿಸಿದಂತೆ ಇದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿನ್ನು ಬಂಧಿಸಿತ್ತು. ಪರೀಕ್ಷೆ ಮುಂದೂಡುವ ಸಲುವಾಗಿ ಪ್ರದ್ಯುಮನ್‍ನನ್ನು ಕೊಲೆ ಮಾಡಿದ್ದಾಗಿ ಆರೋಪಿ ವಿದ್ಯಾರ್ಥಿ ಹೇಳಿಕೆ ನೀಡಿದ್ದ.

    ಅಶೋಕ್‍ರನ್ನು ಆರೋಪಿಯಾಗಿಸುವ ವಿಷಯದಲ್ಲಿ ತಪ್ಪಾಗಿರುವುದಾಗಿ ಹರಿಯಾಣ ಪೊಲೀಸರು ಕೂಡ ಒಪ್ಪಿಕೊಂಡಿದ್ದರು. ಅಶೋಕ್‍ರನ್ನು ಬಂಧಿಸಿದ ತಂಡ ಸೂಕ್ಷ್ಮವಾಗಿ ಸಿಸಿಟಿವಿ ದೃಶ್ಯವನ್ನು ನೋಡಿರಲಿಲ್ಲ ಎಂದು ಒಪ್ಪಿಕೊಂಡಿತ್ತು.

  • ಬಸ್ ನಲ್ಲಿ ಮಹಿಳಾ ಪೇದೆ ಹಾಗೂ ಕಂಡಕ್ಟರ್ ಜಟಾಪಟಿ ವೈರಲ್ ವಿಡಿಯೋ

    ಬಸ್ ನಲ್ಲಿ ಮಹಿಳಾ ಪೇದೆ ಹಾಗೂ ಕಂಡಕ್ಟರ್ ಜಟಾಪಟಿ ವೈರಲ್ ವಿಡಿಯೋ

    ತೆಲಂಗಾಣ: ಟಿಕೆಟ್ ವಿಚಾರದಲ್ಲಿ ಮಹಿಳಾ ಪೇದೆ ಮತ್ತು ಮಹಿಳಾ ಕಂಡಕ್ಟರ್ ನಡುವೆ ಮೆಹಬೂಬ್ ನಗರದಲ್ಲಿ ನಡೆದ ಜಗಳದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪೇದೆಯೊಬ್ಬರು ನಾನು ಕರ್ತವ್ಯದಲ್ಲಿರುವ ಕಾರಣ ಉಚಿತವಾಗಿ ಪ್ರಯಾಣಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪದ ಕಂಡಕ್ಟರ್ ಮೊದಲು ಟಿಕೆಟ್ ಪಡೆದುಕೊಳ್ಳಿ ನಂತರ ಪ್ರಯಾಣಿಸಿ ಎಂದು ತಿಳಿಸಿದ್ದಾರೆ.

    ಮಹಿಳಾ ಪೊಲೀಸ್ ಪೇದೆಗೆ 15 ರೂ. ಟಿಕೆಟ್ ಪಡೆದುಕೊಳ್ಳುವಂತೆ ಕಂಡಕ್ಟರ್ ಹೇಳಿದ್ದಾರೆ. ಇದಕ್ಕೆ ಒಪ್ಪದ ಪೇದೆ ನಾನು ಸರ್ಕಾರ ಕೆಲಸಕ್ಕೆ ಹೊರಟಿದ್ದೇನೆ. ನಮಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ ಎಂದು ಹೇಳಿ ವಾದ ನಡೆಸಲು ಆರಂಭಿಸಿದ್ದಾರೆ.

    ಹಣ ನೀಡದ್ದಕ್ಕೆ ಆರಂಭದಲ್ಲಿ ಮಾತಿನಲ್ಲೇ ಇಬ್ಬರು ಚಕಮಕಿ ನಡೆಸಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಬಸ್ ಕಂಡಕ್ಟರ್ ಮಹಿಳಾ ಪೇದೆ ಮೇಲೆ ಕೈ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪೇದೆಯೂ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಬಸ್ಸಿನಲ್ಲಿದ್ದ ಪ್ರಯಾಣಿಕರು ಇಬ್ಬರ ಜಗಳವನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ ಒಬ್ಬರು ಪ್ರಯಾಣಿಕರು ಇಬ್ಬರು ಮಹಿಳಾಮಣಿಗಳ ಗಲಾಟೆಯ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವೈರಲ್ ಆಗಿದೆ.

    ಜಗಳದ ನಂತರ ಕಂಡಕ್ಟರ್, ನವಾಬಪೇಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ನಡೆಸುವಂತೆ ಮಹಬೂಬ್ ನಗರ ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

    https://youtu.be/uQTZ9ZsFMmQ

  • ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕನನ್ನು ಕೊಂದಿದ್ದು ಹೇಗೆ: ಶಾಕಿಂಗ್ ಸಂಗತಿ ಬಾಯ್ಬಿಟ್ಟ ಕಂಡಕ್ಟರ್

    ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕನನ್ನು ಕೊಂದಿದ್ದು ಹೇಗೆ: ಶಾಕಿಂಗ್ ಸಂಗತಿ ಬಾಯ್ಬಿಟ್ಟ ಕಂಡಕ್ಟರ್

    ಗುರ್ಗಾವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿ ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಿರೋ ಪ್ರಕರಣ ದೇಶದಾದ್ಯಂತ ಜನರನ್ನ ಬೆಚ್ಚಿ ಬೀಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಬಸ್ ಕಂಡಕ್ಟರ್‍ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಈತ ಒಂದೊಂದೇ ಶಾಕಿಂಗ್ ಸಂಗತಿಗಳನ್ನ ಬಾಯ್ಬಿಡುತ್ತಿದ್ದಾನೆ.

    ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 8ರಂದು ಘಟನೆ ನಡೆದ ದಿನ ಆರೋಪಿ ಅಶೋಕ್ ಕುಮಾರ್ ಬಾಲಕ ಟಾಯ್ಲೆಟ್‍ಗೆ ಬರುವ ಮುಂಚೆಯೇ ಅಲ್ಲಿದ್ದ. ಟೇಕ್ವಾಂಡೋ ಕ್ಲಾಸ್(ಕರಾಟೆ ರೀತಿಯ ಕೊರಿಯನ್ ಮಾರ್ಷಲ್ ಆರ್ಟ್) ಗೆ ಹೋಗಲು ಬಟ್ಟೆ ಬದಲಾಯಿಸಲೆಂದು ಇನ್ನೂ ಮೂರು ವಿದ್ಯಾರ್ಥಿಗಳು ಟಾಯ್ಲೆಟ್‍ನೊಳಗೆ ಬಂದಿದ್ರು. ಓರ್ವ ತೋಟದ ಮಾಲಿ ಸಹ ಟಾಯ್ಲೆಟ್‍ನಲ್ಲಿದ್ದ. ಈ ನಾಲ್ವರೂ ಟಾಯ್ಲೆಟ್‍ನಿಂದ ಹೊರಹೋಗಲು ಆರೋಪಿ ಅಶೋಕ್ ಕಾಯ್ತಿದ್ದ. ಅವರೆಲ್ಲರೂ ಹೋದ ಬಳಿಕ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದ.

    ಇದೀಗ ಆ ಮೂವರು ವಿದ್ಯಾರ್ಥಿಗಳು ಹಾಗೂ ತೋಟದ ಮಾಲಿಯನ್ನು ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಆದರೂ ಕೊಲೆಗೀಡಾದ ಬಾಲಕನ ಪೋಷಕರು ಕೊಲೆಯ ಹಿಂದೆ ಏನೋ ಆಳವಾದ ಪಿತೂರಿ ಇದೆ ಎಂದು ಆರೋಪ ಮಾಡಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸದಸ್ಯರ ಸತ್ಯಶೋಧನಾ ಸಮಿತಿ ಈಗಾಗಲೇ ಗುರ್ಗಾವ್ ಪೊಲೀಸರಿಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯ ಆಡಳಿತ ಮಂಡಳಿಯ ದೋಷಗಳ ಬಗ್ಗೆ ಉಲ್ಲೇಖಿಸಿದೆ. ಶಾಲೆಯ ಆವರಣದಲ್ಲಿ ಅಳವಡಿಸಲಾಗಿದ್ದ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿರಲಿಲ್ಲ. ಶಾಲೆಯ ಕಾಪೌಂಡ್ ಒಡೆದಿದ್ದು, ಹೊರಗಿನವರು ಸುಲಭವಾಗಿ ಶಾಲೆಯೊಳಗೆ ಬರಲು ಅವಕಾಶವಿತ್ತು. ಶಾಲಾ ವಿದ್ಯಾರ್ಥಿಗಳಿಗಾಗಿ ಇದ್ದ ಶೌಚಾಲಯವನ್ನೇ ಬಸ್ ಡ್ರೈವರ್ ಹಾಗೂ ಕಂಡಕ್ಟರ್‍ಗಳು ಬಳಸುತ್ತಿದ್ರು. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಬಗ್ಗೆ ಪೊಲೀಸ್ ವೆರಿಫಿಕೇಷನ್ ಆಗಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

    ಸೆಪ್ಟೆಂಬರ್ 8ರ ಶುಕ್ರವಾರದಂದು ಬೆಳಿಗ್ಗೆ ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಓದುತ್ತಿದ್ದ 7 ವರ್ಷದ ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಅದೇ ದಿನ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಿದ್ದು, ತನ್ನ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದ.

    ಭಾನುವಾರದಂದು ಹರ್ಯಾಣದ ಶಿಕ್ಷಣ್ ಸಚಿವ ರಾಮ್‍ಬಿಲಾಸ್ ಶರ್ಮಾ ಹೇಳಿಕೆ ನೀಡಿದ್ದು, ಪ್ರಕರಣದ ಶೀಘ್ರ ತನಿಖೆಯ ಭರವಸೆ ನೀಡಿದ್ರು. ಸಂತ್ರಸ್ತ ಬಾಲಕನ ಕುಟುಂಬಕ್ಕೆ ರಾಜ್ಯ ಪೊಲೀಸರ ತನಿಖೆಯಿಂದ ತೃಪ್ತಿ ಇಲ್ಲವಾದ್ರೆ ಮತ್ತೊಂದು ತನಿಖಾ ತಂಡಕ್ಕೆ ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಸೂಚಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಆದರೆ ಈ ಪ್ರಕರಣದಲ್ಲಿ ಬಸ್ ಕಂಡಕ್ಟರ್‍ನನ್ನು ಬೇಕಂತಲೇ ಆರೋಪಿಯನ್ನಾಗಿಸಿದ್ದಾರೆ ಎಂದು ಶಾಲೆಯಲ್ಲಿ ಓದುತ್ತಿರೋ ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಅನೇಕ ಮಂದಿ ಆರೋಪ ಮಾಡಿದ್ದಾರೆ.