Tag: ಕಂಡಕ್ಟರ್

  • ಪಾಸ್ ಇದೆ ಆದ್ರೆ ತೋರಿಸಲ್ಲ – ಬಿಎಂಟಿಸಿಯಲ್ಲಿ ಮಹಿಳೆ ಕ್ಯಾತೆ

    ಪಾಸ್ ಇದೆ ಆದ್ರೆ ತೋರಿಸಲ್ಲ – ಬಿಎಂಟಿಸಿಯಲ್ಲಿ ಮಹಿಳೆ ಕ್ಯಾತೆ

    – ಮಹಿಳಾ ಅಧಿಕಾರಿ ಮೇಲೆ ಹಲ್ಲೆ

    ಬೆಂಗಳೂರು: ನಗರದ ಬಿಎಂಟಿಸಿ ಬಸ್ಸಿನಲ್ಲಿ ಮಹಿಳೆಯೊಬ್ಬರು ಕ್ಯಾತೆ ತೆಗೆದಿದ್ದು, ಪರಿಣಾಮ ಪ್ರಯಾಣಿಕರು ಹಾಗೂ ಬಸ್ಸಿನ ನಿರ್ವಾಹಕರು ಸುಸ್ತಾಗಿದ್ದಾರೆ.

    ಈ ಘಟನೆ ಜೆಪಿ ನಗರದ ಬಿಎಂಟಿಸಿ ಬಸ್ಸಿನಲ್ಲಿ ನಡೆದಿದೆ. ಮಹಿಳೆ, ಟಿಕೆಟ್ ತಗೊಳ್ಳಲ್ಲ, ಪಾಸ್ ತೋರಿಸಲ್ಲ. ಏನ್ ಮಾಡ್ಕೋತಿರೋ ಮಾಡ್ಕೊಳ್ಳಿ ಎಂದು ರೇಗಾಡಿದ್ದಾರೆ. ಅಷ್ಟೇ ಅಲ್ಲದೆ ಟಿಕೆಟ್ ಕೊಡಮ್ಮ ಎಂದು ಕೇಳಿದ ಬಿಎಂಟಿಸಿ ಮಹಿಳಾ ಅಧಿಕಾರಿಯ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ.

    ಮಹಿಳೆಯ ಕಿರಿಕ್ ನಿಂದಾಗಿ ಬಸ್ ಸರಿಸುಮಾರು ಅರ್ಧ ಗಂಟೆಗಳ ಕಾಲ ನಿಂತಿದೆ. ಬಸ್ ಹತ್ತಿದ ಮಹಿಳೆಗೆ ಕಂಡೆಕ್ಟರ್ “ಎಲ್ಲಿಗೆ ಟಿಕೆಟ್” ಎಂದು ಕೇಳಿದ್ದಾರೆ. ಆಗ ಮಹಿಳೆ ಪಾಸ್ ಇದೆ ಎಂದು ಹೇಳಿದ್ದಾರೆ. ಆಗ ಕಂಡಕ್ಟರ್ ಪಾಸ್ ತೋರಿಸಿ ಅಂದಿದ್ದೇ ತಡ ಮಹಿಳೆ ನಾನು ಪಾಸ್ ತೋರಿಸಲ್ಲ ಅಂದ್ರೆ ತೋರಿಸಲ್ಲ ಎಂದು ರಂಪಾಟ ಮಾಡಿದ್ದಾರೆ. ನಂಗೆ ಹೋಂಮಿನಿಸ್ಟರ್ ನಿಂದ ಬಿಎಂಟಿಸಿ ಅಧಿಕಾರಿಗಳು ಗೊತ್ತು ಎಂದು ಫುಲ್ ಅವಾಜ್ ಹಾಕಿದ್ದಾರೆ.

    ಕೊನೆಗೆ ಕಂಡಕ್ಟರ್ ಬಿಎಂಟಿಸಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದಾಗಲೂ ಅಧಿಕಾರಿಯ ಮೇಲೆಯೇ ಹಲ್ಲೆ ಮಾಡಲು ಮಹಿಳೆ ಮುಂದಾಗಿದ್ದಾರೆ. ಈಗ ಈ ಮಹಿಳೆಯ ವಿಡಿಯೋ ವೈರಲ್ ಆಗಿದೆ.

    ಸಂಭಾಷಣೆ ಹೀಗಿದೆ..
    ಬಿಎಂಟಿಸಿ ಅಧಿಕಾರಿ– ನಿಮ್ಮಿಂದ ಪ್ಯಾಸೆಂಜರ್ ಗೆ ತೊಂದರೆಯಾಗ್ತಿದೆ, ಎಷ್ಟು ಜನ ಇದ್ದಾರೆ ನೋಡಿ
    ನಿರ್ವಾಹಕ – ಪಾಸ್ ಇದ್ಯೋ ಇಲ್ವೋ ನಿಮ್ಮ ಹತ್ರ
    ಮಹಿಳೆ– ಇದೆ
    ನಿರ್ವಾಹಕ – ತೋರಿಸಿ ಪಾಸ್ ಮತ್ತೆ.
    ಮಹಿಳೆ– ತೋರಿಸಲ್ಲ ಅಂದ್ರೇ ತೋರಿಸಲ್ಲ, ಎಲ್ಲಾ ಸೇರಿ ಕಿತಾಪತಿ ಮಾಡ್ತೀರಾ..?

    ಅಧಿಕಾರಿ– ಕಿತಾಪತಿ ಅಂದ್ರೇ ಏನ್ರಿ ಅರ್ಥ, ನಮಗ್ಯಾಕೆ ತೊಂದರೆ ಕೊಡ್ತೀರಾ
    ಪ್ರಯಾಣಿಕರು– ಲೇಟ್ ಆಗುತ್ತೆ ನಮ್ಗೆ ಇಳ್ಕೊಳ್ರಿ..
    ಮಹಿಳೆ– ನಂಗೆ ಬಿಎಂಟಿಸಿಲಿ ಗೊತ್ತು
    ಅಧಿಕಾರಿ– ಯಾರ್ರಿ ಗೊತ್ತು? ಗೊತ್ತಿದ್ರೇ ನಾವೇನ್ ಮಾಡೋಣ? ಕಾಮನ್ ಸೆನ್ಸ್ ಇದ್ಯಾ

    ಮಹಿಳೆ– ನಂಗೆ ಕಾಮನ್ ಸೆನ್ಸ್ ಇದೆ. ನಿಮಗೆ ಇದ್ಯಾ?
    ಪ್ರಯಾಣಿಕರು – ಅಯ್ಯೋ ಇಳ್ಕೊಳ್ರಿ ಹೋಗ್ಲಿ
    ನಿರ್ವಾಹಕ– ಟಿಕೇಟ್ ತಗೊಳ್ರಿ
    ಮಹಿಳೆ– ಬಿಎಂಟಿಸಿನಾ ಕೇಳಿ. ..

    ಪ್ರಯಾಣಿಕರು– ಎಲ್ ಹೋಗ್ಬೇಕು
    ಮಹಿಳೆ– ಜಂಬೂ ಸವಾರಿ ದಿಣ್ಣೆಗೆ
    ಪ್ರಯಾಣಿಕರು– ದುಡ್ಡು ಇಲ್ವಾ
    ಮಹಿಳೆ– ದುಡ್ಡು ಇದೆ, ಪಾಸ್ ಇದೆ ಆದ್ರೇ ಪಾಸ್ ತೋರಿಸಲ್ಲ.

  • ಮಹಿಳೆಯರ ಮುಂದೆ ಬಟ್ಟೆ ಬದಲಿಸಿದ ಕಂಡಕ್ಟರ್ – ವಿರೋಧಿಸಿದವನಿಗೆ ಥಳಿತ

    ಮಹಿಳೆಯರ ಮುಂದೆ ಬಟ್ಟೆ ಬದಲಿಸಿದ ಕಂಡಕ್ಟರ್ – ವಿರೋಧಿಸಿದವನಿಗೆ ಥಳಿತ

    ಚೆನ್ನೈ: ಬಸ್ಸಿನಲ್ಲಿ ಮಹಿಳೆಯರ ಮುಂದೆಯೇ ನಿರ್ವಾಹನೊಬ್ಬ ಬಟ್ಟೆ ಬದಲಿಸಿದ್ದು, ಇದನ್ನು ಪ್ರಶ್ನೆ ಮಾಡಿದ ಪ್ರಯಾಣಿಕನಿಗೆ ಕೆಲ ಬಸ್ ಚಾಲಕರು ಮತ್ತು ನಿರ್ವಾಹಕರು ಸೇರಿ ಥಳಿಸಿರುವ ಘಟನೆ ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯಲ್ಲಿ ನಡೆದಿದೆ.

    ಬಸ್‍ನಲ್ಲಿ ಮಹಿಳಾ ಪ್ರಯಾಣಿಕರ ಮುಂದೆಯೇ ಕಂಡಕ್ಟರ್ ಬಟ್ಟೆ ಬದಲಿಸಿದ್ದಾನೆ. ಇದನ್ನು ಥೇನಿ ಜಿಲ್ಲೆಯ ನಿವಾಸಿ ವಿಜಯ್ ವಿರೋಧ ಮಾಡಿದ್ದಕ್ಕೆ ಸಾರಿಗೆ ನೌಕರರು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ.

    ಈ ವಿಡಿಯೋದಲ್ಲಿ ವಿಜಯ್ ಮತ್ತು ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಈ ಸಮಯದಲ್ಲಿ ಕೋಪಗೊಂಡ ಕಂಡಕ್ಟರ್ ಮೊದಲು ವಿಜಯ್‍ನ ಕಪಾಳಕ್ಕೆ ಹೊಡೆಯುತ್ತಾನೆ. ನಂತರ ಕೋಪಗೊಂಡ ವಿಜಯ್ ಕಂಡಕ್ಟರ್‍ ಗೆ ಹೊಡೆಯುತ್ತಾರೆ. ಈ ವೇಳೆ ಕಂಡಕ್ಟರ್ ಜೊತೆ ಇದ್ದ ಕೆಲ ಸರ್ಕಾರಿ ನೌಕರರು ವಿಜಯ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪ್ರಯಾಣಿಕ ವಿಜಯ್, ಕಂಡಕ್ಟರ್ ಇದ್ದಕ್ಕಿದಂತೆ ಮಹಿಳೆಯರು ಸೇರಿದಂತೆ ಪ್ರಯಾಣಿಕರ ಮುಂದೆಯೇ ಬಟ್ಟೆ ಬದಲಾಯಿಸುತ್ತಿದ್ದರು. ಇದರಿಂದ ನಾನು ಬೇರೆ ಕಡೆ ಹೋಗಿ ಬಟ್ಟೆ ಬದಲಾಯಿಸಿ ಎಂದು ಹೇಳಿದೆ. ಇದರಿಂದ ಕೋಪಗೊಂಡ ಕಂಡಕ್ಟರ್ ಬಸ್ ದಿಂಡಿಗಲ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಹಾಗೇ ನನ್ನ ಮೇಲೆ ಜಗಳಕ್ಕೆ ಬಂದು ಅವರ ಸಿಬ್ಬಂದಿ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿಸಿದರು ಎಂದು ಹೇಳಿದ್ದಾರೆ.

    ಈಗ ಪ್ರಯಾಣಿಕ ಕುಡಿದು ನಮ್ಮ ಬಳಿ ಕೆಟ್ಟದಾಗಿ ವರ್ತಿಸಿದ ಎಂದು ಬಸ್ ಕಂಡಕ್ಟರ್ ವಿಜಯ್ ವಿರುದ್ಧ ದೂರು ನೀಡಿದ್ದಾರೆ. ಆದರೆ ಕೆಲ ಸ್ಥಳೀಯರು ಈ ಘಟನೆಯಲ್ಲಿ ಇಬ್ಬರ ಕಡೆಯಿಂದಲು ತಪ್ಪಾಗಿದೆ ಪೊಲೀಸರು ಈ ಬಗ್ಗೆ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದ್ದು, ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಮೂರು ರೂ. ಚಿಲ್ಲರೆಗಾಗಿ ಕಂಡಕ್ಟರ್, ಡ್ರೈವರ್‌ನಿಂದ ಪ್ರಯಾಣಿಕನ ಮೇಲೆ ಹಲ್ಲೆ

    ಮೂರು ರೂ. ಚಿಲ್ಲರೆಗಾಗಿ ಕಂಡಕ್ಟರ್, ಡ್ರೈವರ್‌ನಿಂದ ಪ್ರಯಾಣಿಕನ ಮೇಲೆ ಹಲ್ಲೆ

    ಬೆಂಗಳೂರು: ಮೂರು ರೂಪಾಯಿ ಚಿಲ್ಲರೆ ನೀಡುವ ವಿಚಾರಕ್ಕೆ ಬಿಎಂಟಿಸಿ ಕಂಡಕ್ಟರ್ ಮತ್ತು ಡ್ರೈವರ್ ಸೇರಿಕೊಂಡು ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಫ್ಲೈಓವರ್ ಬಳಿ ನಡೆದಿದೆ.

    ಮಹಮ್ಮದ್ ಹಲ್ಲೆಗೊಳಾಗದ ಪ್ರಯಾಣಿಕ. ಮಹಮ್ಮದ್ ಮಾರತ್ತಹಳ್ಳಿ ಮತ್ತು ಐಟಿಪಿಎಲ್ ಮಾರ್ಗದ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಂಡಕ್ಟರ್ ಟಿಕೆಟ್ ಕೊಟ್ಟಿದ್ದು, ಮಹಮ್ಮದ್‍ಗೆ ಮೂರು ರೂಪಾಯಿ ಚಿಲ್ಲರೆ ನೀಡಬೇಕಿತ್ತು.

    ಇದೇ ವಿಚಾರಕ್ಕೆ ಮೊದಲಿಗೆ ಕಂಡಕ್ಟರ್ ಮತ್ತು ಮಹಮ್ಮದ್ ನಡುವೆ ಗಲಾಟೆ ಶುರುವಾಗಿದೆ. ನಂತರ ಇವರಿಬ್ಬರ ಗಲಾಟೆಗೆ ಡ್ರೈವರ್ ಸಹ ಭಾಗಿಯಾಗಿದ್ದು, ಇಬ್ಬರು ಸೇರಿಕೊಂಡು ಪ್ರಯಾಣಿಕ ಮಹಮ್ಮದ್‍ಗೆ ಮನಬಂದಂತೆ ಥಳಿಸಿದ್ದಾರೆ. ಸದ್ಯಕ್ಕೆ ಪ್ರಯಾಣಿಕ ಮಹಮ್ಮದ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಕುರಿತು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 6.50 ಲಕ್ಷ ಮೌಲ್ಯದ ಒಡವೆಯನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

    6.50 ಲಕ್ಷ ಮೌಲ್ಯದ ಒಡವೆಯನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

    ತುಮಕೂರು: ಶಿರಾ ಡಿಪೋದ ನಿರ್ವಾಹರೊಬ್ಬರು ಬರೋಬ್ಬರಿ 6.50 ಲಕ್ಷ ಬೆಲೆ ಬಾಳುವ ಒಡವೆಯನ್ನು ಮಹಿಳಾ ಪ್ರಯಾಣಿಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

    ಶಿರಾ ಡಿಪೋ ವ್ಯಾಪ್ತಿಯ ಶ್ರೀಧರ್ ಒಡವೆ ಹಿಂದಿರುಗಿಸಿದ ನಿರ್ವಾಹಕ. ಸೋಮವಾರ ರಾತ್ರಿ ಪಾವಗಡ ನಿವಾಸಿ ನಾಗಲತಾ ಅವರು ಪಾವಗಡದಿಂದ ಬೆಂಗಳೂರು ಮಾರ್ಗವಾಗಿ ಬಸ್ಸಿನಲ್ಲಿ ಸಂಚರಿಸಿದ್ದಾರೆ. ನಾಗಲತಾ ಅವರು ತಮ್ಮ ಮಗಳ ಸೀಮಂತಕ್ಕಾಗಿ ಒಡವೆಯನ್ನು ತಗೆದುಕೊಂಡು ಹೋಗುತ್ತಿದ್ದರು. ಆದರೆ ಇಳಿಯುವ ಅವಸರದಲ್ಲಿ ಮಹಿಳೆ ಒಡವೆ ಇದ್ದ ವ್ಯಾನಿಟಿ ಬ್ಯಾಗನ್ನು ಬಸ್ಸಿನಲ್ಲೇ ಮರೆತು ಇಳಿದಿದ್ದರು.

    ಕರ್ತವ್ಯ ಮುಗಿಸಿ ಡಿಪೋಗೆ ಹಿಂದಿರುಗುವಾಗ ಬಸ್ಸಿನಲ್ಲಿ ಕಂಡಕ್ಟರ್ ಶ್ರೀಧರ್ ಅವರಿಗೆ ಬ್ಯಾಗ್ ಸಿಕ್ಕಿದೆ. ಬ್ಯಾಗಿನಲ್ಲಿ ಒಡವೆಗಳನ್ನು ನೋಡಿ ತಕ್ಷಣ ಬ್ಯಾಗನ್ನು ಕಂಡಕ್ಟರ್ ಶ್ರೀಧರ್ ತಂದು ಡಿಪೋ ಮೇಲಾಧಿಕಾರಿಗಳು ಹಾಗೂ ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಮಹಿಳೆಗೆ ಫೋನ್ ಮಾಡಿ ಬ್ಯಾಗ್ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ಮಹಿಳೆ ಇಂದು ಡಿಪೋಗೆ ಬಂದು ಒಡೆಯ ಇದ್ದ ಬ್ಯಾಗನ್ನು ಪಡೆದುಕೊಂಡಿದ್ದಾರೆ. ಬಳಿಕ ಬ್ಯಾಗ್ ಹಿಂದಿರುಗಿಸಿದ್ದ ಕಂಡಕ್ಟರ್ ಶ್ರೀಧರ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇತ್ತ ಲಕ್ಷ ಬೆಲೆ ಬಾಳುವ ಒಡೆಯನ್ನು ಹಿಂದಿರುಗಿಸಿದ್ದಕ್ಕೆ ಶ್ರೀಧರ್ ಅವರನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧ್ಯರಾತ್ರಿ ಬಸ್ಸಿಳಿದ ಯುವತಿ- ಆಟೋ ಹತ್ತೋವರೆಗೂ ಬಸ್ ನಿಲ್ಲಿಸಿ ಕಾದ ಕಂಡಕ್ಟರ್ -ಡ್ರೈವರ್

    ಮಧ್ಯರಾತ್ರಿ ಬಸ್ಸಿಳಿದ ಯುವತಿ- ಆಟೋ ಹತ್ತೋವರೆಗೂ ಬಸ್ ನಿಲ್ಲಿಸಿ ಕಾದ ಕಂಡಕ್ಟರ್ -ಡ್ರೈವರ್

    ಮುಂಬೈ: ನಾವು ಪ್ರತಿದಿನ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆಗಳ ಸುದ್ದಿಯನ್ನು ನೋಡುತ್ತಿರುತ್ತೇವೆ. ಇತ್ತ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಗಳು ಕೂಡ ರಾತ್ರಿ ಯುವತಿಯೊಬ್ಬಳೆ ಬಸ್ ಇಳಿದ ತಕ್ಷಣ ಹೊರಟು ಹೋಗುತ್ತಾರೆ. ಆದರೆ ಇಂತಹವರ ಮಧ್ಯೆ ನಗರದ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಯುವತಿಯೊಬ್ಬಳು ಬಸ್ ಇಳಿದು ಮನೆಗೆ ಆಟೋ ಹತ್ತೊವರೆಗೂ ಅಲ್ಲೆ ನಿಂತಿದ್ದು, ಬಳಿಕ ಹೋಗಿದ್ದಾರೆ.

    ಯುವತಿ ತನಗಾಗಿ ಕಾದಿದ್ದ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಬಗ್ಗೆ ಟ್ವೀಟ್ ಮಾಡಿ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. “ಮೊದಲಿಗೆ ಯುವತಿ ಈ ಕಾರಣಕ್ಕೆ ನಾನು ಮುಂಬೈಯನ್ನ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    https://twitter.com/nautankipanti/status/1048081287393632256

    “ನಾನು ಪ್ರಯಾಣಿಸುತ್ತಿದ್ದ ಬಸ್ಸಿನಿಂದ ಮಧ್ಯರಾತ್ರಿ 1.30 ಕ್ಕೆ ಮುಂಬೈನ ಬಸ್ ನಿಲ್ದಾಣದಲ್ಲಿ ಇಳಿದುಕೊಂಡಿದ್ದೆ. ನಂತರ ನಾನು ಒಬ್ಬಳೇ ಇರುವುದು ಕಂಡು, ಬಸ್ ಹೋಗದೇ ಅಲ್ಲಿಯೇ ನಿಲ್ಲಿಸಿ ನಿಮ್ಮನ್ನು ಕರೆದೊಕೊಂಡು ಹೋಗಲು ಯಾರಾದರೂ ಬರುತ್ತಾರಾ ಎಂದು ಕೇಳಿದರು. ಈ ವೇಳೆ ಯಾರು ಬರಲ್ಲ ಎಂದು ಹೇಳಿದೆ. ನಂತರ ನಾನು ಒಬ್ಬಳೇ ಇರುತ್ತೇನೆ ಎಂಬ ಕಾರಣಕ್ಕೆ ಕಂಡಕ್ಟರ್ ಮತ್ತು ಡ್ರೈವರ್ ಬಸ್ ನಿಲ್ಲಿಸಿ ಅಲ್ಲೆ ನಿಂತಿದ್ದರು. ಬಳಿಕ ನಾನು ಆಟೋ ಹತ್ತಿ ಹೊರಟೆ, ನಾನು ಸುರಕ್ಷಿತವಾಗಿ ಹೊರಟ ನಂತರ ಅವರು ಅಲ್ಲಿಂದ ಹೊರಟರು” ಅಂತ ಟ್ವೀಟ್ ಮಾಡಿ ಧನ್ಯವಾದವನ್ನು ತಿಳಿಸಿದ್ದಾರೆ.

    ಚಾಲಕ ಮತ್ತು ಕಂಡಕ್ಟರ್ ತಮ್ಮ ಕರ್ತವ್ಯವನ್ನಷ್ಟೇ ಮಾಡಿದ್ದರೆ, ಯುವತಿಗಾಗಿ ಕಾಯುವುದು ಅವರ ಕೆಲಸ ಆಗಿರಲಿಲ್ಲ. ಯುವತಿಯನ್ನು ಬಸ್ಸಿಂದ ಇಳಿಸಿ ಸೀದಾ ಹೋಗಬಹುದಿತ್ತು.  ಆದರೆ ಅವರು ಮಾನವೀಯತೆಯ ದೃಷ್ಟಿಯಿಂದ ನಿಂತಿದ್ದರು. ನಿಜಕ್ಕೂ ಡ್ರೈವರ್ ಮತ್ತು ಚಾಲಕನ ಕೆಲಸ ಮೆಚ್ಚುವಂತಹದ್ದು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾಸ್ ಇರೋ ವಿದ್ಯಾರ್ಥಿಗಳನ್ನು ಹತ್ತಿಸದ್ದಕ್ಕೆ ಬಸ್ ಚೇಸ್ ಮಾಡಿ ಸಿಬ್ಬಂದಿಗೆ ಅಂಜಲಿ ನಿಂಬಾಳ್ಕರ್ ಕ್ಲಾಸ್!

    ಪಾಸ್ ಇರೋ ವಿದ್ಯಾರ್ಥಿಗಳನ್ನು ಹತ್ತಿಸದ್ದಕ್ಕೆ ಬಸ್ ಚೇಸ್ ಮಾಡಿ ಸಿಬ್ಬಂದಿಗೆ ಅಂಜಲಿ ನಿಂಬಾಳ್ಕರ್ ಕ್ಲಾಸ್!

    ಬೆಳಗಾವಿ: ಪಾಸ್ ಇರುವ ವಿದ್ಯಾರ್ಥಿಗಳನ್ನು ಹತ್ತಿಸದೇ ಸತಾಯಿಸುತ್ತಿದ್ದ ಸರ್ಕಾರಿ ಬಸ್ ಕಂಡಕ್ಟರ್ ಗೆ  ಖಾನಪುರದ ಎಂಎಲ್‍ಎ ಅಂಜಲಿ ನಿಂಬಾಳ್ಕರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಘಟನೆ ಖಾನಾಪುರದ ಬಳಿ ನಡೆದಿದ್ದು, ಬಸ್ ಪಾಸ್ ಇರೋ ವಿದ್ಯಾರ್ಥಿಗಳು ಹತ್ತಿದರೆ ರಷ್ ಆಗುತ್ತೆ. ರಷ್ ಆದರೆ ಬೇರೆ ಪ್ರಯಾಣಿಕರನ್ನು ಹತ್ತಿಸೋಕೆ ಆಗುವುದಿಲ್ಲ. ಬೇರೆ ಪ್ರಯಾಣಿಕರು ಹತ್ತದೆ ಇದ್ದರೆ ಹಣ ಬರುವುದಿಲ್ಲ ಎಂದು ಹೇಳಿ ವಿದ್ಯಾರ್ಥಿಗಳನ್ನು ಬಸ್ ಹತ್ತಿಸದೇ ಕಂಡಕ್ಟರ್ ಸತ್ತಾಯಿಸುತ್ತಿದ್ದರು.

    ಇದೇ ವೇಳೆ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೆ ಖಾಲಿ ಹೋಗುತ್ತಿದ್ದ ಮೂರು ಬಸ್ಸುಗಳನ್ನು ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಹಿಂಬಾಲಿಸಿದ್ದಾರೆ. ಬಸ್ ಖಾಲಿ ಇದ್ದರೂ ವಿದ್ಯಾರ್ಥಿಗಳನ್ನ ಯಾಕೆ ಹತ್ತಿಸಿಲ್ಲ. ವಿದ್ಯಾರ್ಥಿಗಳು ಬಸ್ ಹತ್ತಿದರೆ ಕಷ್ಟ ಆಗುತ್ತೆ ಅಂತ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇನ್ನೊಮ್ಮೆ ಈ ರೀತಿ ಪ್ರಕರಣ ನಡೆದರೆ ನಿಮ್ಮನ್ನು ಸೇವೆಯಿಂದ ಅಮಾನತು ಮಾಡಿಸುತ್ತೇನೆ ಎಂದು ಡ್ರೈವರ್ ಹಾಗೂ ಕಂಡಕ್ಟರ್ ಎಚ್ಚರಿಕೆ ನೀಡಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=JVfCbmWNqpQ

  • ಟಿಕೆಟ್ ನೀಡದ್ದಕ್ಕೆ ಕಂಡಕ್ಟರ್ ಮೇಲೆ ಕೇಸ್: ಮನನೊಂದು ಆತ್ಮಹತ್ಯೆಗೆ ಮುಂದಾದ ನಿರ್ವಾಹಕ

    ಟಿಕೆಟ್ ನೀಡದ್ದಕ್ಕೆ ಕಂಡಕ್ಟರ್ ಮೇಲೆ ಕೇಸ್: ಮನನೊಂದು ಆತ್ಮಹತ್ಯೆಗೆ ಮುಂದಾದ ನಿರ್ವಾಹಕ

    ಯಾದಗಿರಿ: ಪ್ರಯಾಣಿಕನಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಸಂಚಾರಿ ನಿರೀಕ್ಷಕ ತಂಡವು ಕಂಡಕ್ಟರ್ ಮೇಲೆ ಕೇಸ್ ಹಾಕಿದ್ದರು. ಇದರಿಂದ ಮನನೊಂದು ಕಂಡಕ್ಟರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದದಲ್ಲಿ ನಡೆದಿದೆ.

    ನಾಗರಾಜ್ ಆತ್ಮಹತ್ಯೆಗೆ ಯತ್ನಿಸಿದ ನಿರ್ವಾಹಕ. ಇವರು ವಾಯುವ್ಯ ಸಾರಿಗೆ ವಿಭಾಗಕ್ಕೆ ಸೇರಿದ ಬಸ್ಸಿನ ನಿರ್ವಾಹಕರಾಗಿದ್ದು, ಶನಿವಾರ ಬಾದಾಮಿಯಿಂದ ಯಾದಗಿರಿ ಮಾರ್ಗವಾಗಿ ಹೈದರಾಬಾದ್‍ಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಸಂಚಾರಿ ನೀರಿಕ್ಷಕ ತಂಡವು ಬಸ್ಸಿನಲ್ಲಿದ್ದ ಪ್ರಯಾಣಿಕರ ಟಿಕೆಟ್ ಪರಿಶೀಲನೆಗೆ ಮುಂದಾಗಿದ್ದರು. ಬಸ್ಸಿನಲ್ಲಿ ಓರ್ವ ಪ್ರಯಾಣಿಕ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಅಧಿಕಾರಿಗಳು ಪ್ರಯಾಣಿಕನಿಗೂ ದಂಡ ವಿಧಿಸಿ, ಕರ್ತವ್ಯಲೋಪ ಎಸಗಿದ್ದ ನಿರ್ವಾಹಕನ ಮೇಲೆ ಕೇಸ್ ಹಾಕಿ ತೆರಳಿದ್ದರು.

    ಅಧಿಕಾರಿಗಳು ಕೇಸ್ ಹಾಕಿದ್ದಕ್ಕೆ ನಿರ್ವಾಹಕ ತೀವ್ರವಾಗಿ ಮನನೊಂದು, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಬಸ್ಸು ಯಾದಗಿರಿಗೆ ಬರುತ್ತಿದ್ದಂತೆ, ವಿಷವನ್ನು ಖರೀದಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ವಿಷ ಕುಡಿದ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡು, ಒದ್ದಾಡುತ್ತಿದ್ದ ನಾಗರಾಜುನನ್ನು ಗಮನಿಸಿದ ಬಸ್ಸಿನ ಚಾಲಕ, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ನಿರ್ವಾಹಕ ನಾಗರಾಜು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಿಕೆಟ್ ಪಡೆಯದೇ ಪ್ರಯಾಣಿಸಿದ್ದ ಮಹಿಳೆಗೆ ಬೈದಿದ್ದಕ್ಕೆ ಪ್ರಯಾಣಿಕರಿಂದ ಕಂಡಕ್ಟರ್ ಗೆ ತರಾಟೆ!

    ಟಿಕೆಟ್ ಪಡೆಯದೇ ಪ್ರಯಾಣಿಸಿದ್ದ ಮಹಿಳೆಗೆ ಬೈದಿದ್ದಕ್ಕೆ ಪ್ರಯಾಣಿಕರಿಂದ ಕಂಡಕ್ಟರ್ ಗೆ ತರಾಟೆ!

    ಹುಬ್ಬಳ್ಳಿ: ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ ಮಹಿಳೆಗೆ ಬೈದಿದ್ದಕ್ಕೆ ಕಂಡಕ್ಟರ್ ನನ್ನು ಸಹ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿ ಗ್ರಾಮೀಣ ಘಟಕಕ್ಕೆ ಸೇರಿದ ಬಸ್ಸಿನಲ್ಲಿ ಮಹಿಳೆಯೊಬ್ಬಳು ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದಳು. ಆಗ ಕಂಡಕ್ಟರ್ ಹಾಗೂ ಮಹಿಳೆ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಹಿಳೆಯನ್ನು ಬಸ್ಸಿನಿಂದ ಕೆಳಗೆ ಇಳಿಸಲು ಕಂಡಕ್ಟರ್ ಮುಂದಾಗಿದ್ದಾರೆ.

    ಪ್ರತಿ ಬಾರಿಯು ಇದೇ ರೀತಿ ಮಹಿಳೆ ಮಾಡುತ್ತಿರುವುದಕ್ಕೆ ಕಂಡಕ್ಟರ್ ತರಾಟೆಗೆ ತೆಗೆದುಕೊಂಡು ಬಸ್ಸಿನಿಂದ ಇಳಿಸಲು ಮುಂದಾಗಿದ್ದಾರೆ. ಆದರೆ ಮಹಿಳೆ ಬಸ್ಸಿನಿಂದ ಇಳಿಯಲು ನಿರಾಕರಿಸಿದ್ದಾರೆ. ಕಂಡಕ್ಟರ್ ವರ್ತನೆಯನ್ನು ಕಂಡು ಸಹ ಪ್ರಯಾಣಿಕರು ಕಂಡಕ್ಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರಯಾಣಿಕರು ಗಲಾಟೆ ಮಾಡಿದ್ದನ್ನು ಕಂಡು ಕಂಡಕ್ಟರ್ ಹಣ ಪಡೆಯದೇ ಮಹಿಳೆಗೆ ಟಿಕೆಟ್ ನೀಡಿದ್ದಾರೆ. ಈ ಗಲಾಟೆಯನ್ನು ಬಸ್ ನಲ್ಲಿದ್ದ ಪ್ರಯಾಣಿಕನೊರ್ವ ವಿಡಿಯೋ ಮಾಡಿ ವೈರಲ್ ಮಾಡಿದ್ದಾನೆ.

  • ಬಸ್ಸಿನಲ್ಲಿ ಸೀಟ್ ಸಿಗಲಿಲ್ಲ ಎಂದು ಗಲಾಟೆ- ಪ್ರಯಾಣಿಕನ ಕಪಾಳಕ್ಕೆ ಭಾರಿಸಿದ ಕಂಡಕ್ಟರ್

    ಬಸ್ಸಿನಲ್ಲಿ ಸೀಟ್ ಸಿಗಲಿಲ್ಲ ಎಂದು ಗಲಾಟೆ- ಪ್ರಯಾಣಿಕನ ಕಪಾಳಕ್ಕೆ ಭಾರಿಸಿದ ಕಂಡಕ್ಟರ್

    ಚಿಕ್ಕಮಗಳೂರು: ಟಿಕೆಟ್ ವಿಚಾರವಾಗಿ ನಿರ್ವಾಹಕ ಹಾಗೂ ಪ್ರಯಾಣಿಕರ ನಡುವೆ ಗಲಾಟೆಯಾಗಿ ಪ್ರಯಾಣಿಕನಿಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಧರ್ಮಸ್ಥಳದಿಂದ ಹಾಸನದ ಕಡೆ ಬರುತ್ತಿದ್ದ ಬಸ್ ಡ್ರೈವರ್ ಗೆ ಅನಾರೋಗ್ಯದ ನಿಮಿತ್ತ ಕೊಟ್ಟಿಗೆಹಾರದ ಬಳಿ ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ಕಳಿಸುವಂತೆ ಸಲಹೆ ನೀಡಿದ್ದಾನೆ. ಈ ವೇಳೆ 35 ಪ್ರಯಾಣಿಕರನ್ನು ಕಂಡಕ್ಟರ್ ಎರಡು ಬಸ್‍ಗೆ ಹತ್ತಿಸಿದ್ದಾರೆ.

    ಆದರೆ ಆ ಎರಡು ಬಸ್ಸಿನಲ್ಲೂ ಪ್ರಯಾಣಿಕರಿದ್ದ ಕಾರಣ ಸುಮಾರು ಜನರಿಗೆ ಸೀಟು ಸಿಕ್ಕಿಲ್ಲ. ಈ ವೇಳೆ ಪ್ರಯಾಣಿಕನೋರ್ವ ನಾನು ಧರ್ಮಸ್ಥಳದಿಂದ ಕುತ್ಕೊಂಡು ಬಂದಿದ್ದೇನೆ, ನನಗೆ ಸೀಟ್ ಬೇಕು, ನಾನು ನಿಂತುಕೊಂಡು ಹೋಗೋದಿಲ್ಲ ಎಂದು ಗಲಾಟೆ ಮಾಡಿದ್ದಾನೆ.

    ಈ ವೇಳೆ ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವೆ ಮಾತಿಗೆ ಮಾತು ಬೆಳೆದು ಕಂಡಕ್ಟರ್ ಪ್ರಯಾಣಿಕನ ಕಪಾಳಕ್ಕೆ ಭಾರಿಸಿದ್ದಾರೆ. ಇಬ್ಬರೂ ಕೈ-ಕೈ ಮಿಲಾಯಿಸಿ ಬಸ್ ಸ್ಟ್ಯಾಂಡ್‍ನಲ್ಲೇ ಹೊಡೆದಾಡಿಕೊಂಡಿದ್ದಾರೆ. ಬಳಿಕ ಸಾರ್ವಜನಿಕರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ.

  • ಬಸ್ಸಿನಲ್ಲಿ ಮೃತಪಟ್ಟ ಪ್ರಯಾಣಿಕನ ಶವ ರಸ್ತೆ ಬದಿ ಇಳಿಸಿ ಹೋದ ಕಂಡಕ್ಟರ್!

    ಬಸ್ಸಿನಲ್ಲಿ ಮೃತಪಟ್ಟ ಪ್ರಯಾಣಿಕನ ಶವ ರಸ್ತೆ ಬದಿ ಇಳಿಸಿ ಹೋದ ಕಂಡಕ್ಟರ್!

    ಚೆನ್ನೈ: ತಮಿಳುನಾಡು ರಾಜ್ಯ ರಸ್ತೆ ಸಾರಿಗೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, ಇದನ್ನು ಕಂಡ ಬಸ್ ಕಂಡಕ್ಟರ್ ವ್ಯಕ್ತಿಯ ಶವವನ್ನು ಆತನ ಸ್ನೇಹಿತನ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಬಿಟ್ಟು ತೆರಳಿರುವ ಆಘಾತಕಾರಿ ಘಟನೆ ಕೃಷ್ಣಗಿರಿ ಬಳಿ ನಡೆದಿದೆ.

    ರಾಧಾ ಕೃಷ್ಣನ್(43) ಹಾಗೂ ಅವರ ಸ್ನೇಹಿತ ವೀರನ್(54) ಎಂಬುವರು ಬೆಂಗಳೂರಿನಿಂದ ತಿರುವಣ್ಣಾಮಲೈಗೆ ತಮಿಳುನಾಡು ಸಾರಿಗೆ ಇಲಾಖೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ವೀರನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿಷಯ ತಿಳಿದ ಬಸ್ ಕಂಡಕ್ಟರ್ ವೀರನ್ ಅವರ ಮೃತದೇಹ ಹಾಗೂ ಅವರ ಸ್ನೇಹಿತ ರಾಧಾ ಕೃಷ್ಣನ್ ಜೊತೆ ಬಸ್ಸಿನಿಂದ ಕೆಳಗಿಳಿಸಿ ಮಾರ್ಗ ಮಧ್ಯೆ ಬಿಟ್ಟು ತೆರಳಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಶವದ ಪಕ್ಕದಲ್ಲಿ ರಾಧಾ ಕೃಷ್ಣನ್ ಅವರು ತಮ್ಮ ಸ್ನೇಹಿತನ ಶವವಿಟ್ಟು ಮೂರು ಗಂಟೆಗಳ ಕಾಲ ಕುಳಿತಿದ್ದಾರೆ. ಈ ವೇಳೆ ರಾಧಾಕೃಷ್ಣನ್ ಅವರನ್ನು ಕಂಡ ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಮೂಲತಃ ತಮಿಳುನಾಡಿನ ಕೃಷ್ಣಗಿರಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

    ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ರಾಧಾಕೃಷ್ಣನ್ ಅವರು, ಬಸ್ ನಿಂದ ನಮ್ಮನ್ನು ಕೆಳಗಿಳಿಸುವಾಗ ವೇಳೆ ಟಿಕೆಟ್ ನೀಡಿದ್ದ ತಲಾ 150 ರೂ. ವನ್ನು ವಾಪಸ್ ಕೇಳಿಕೊಂಡರು ಕಂಡಕ್ಟರ್ ನೀಡಲಿಲ್ಲ. ಈ ವೇಳೆ ಅವರನ್ನು ಗೋಗರೆದ ಕಾರಣ 150 ರೂ. ನೀಡಿದರು ಎಂದು ತಿಳಿದ್ದಾರೆ.

    ಬೇರೆ ವಾಹನಗಳಲ್ಲಿ ಮೃತದೇಹವನ್ನು ಸಾಗಿಸಲು ಜನ ಅನುಮತಿ ನೀಡದ ಕಾರಣ ನಾನು ಯಾವುದಾದರೂ ಅಂಬುಲೆನ್ಸ್ ಬರಬಹುದು ಎಂದು ಕಾದು ಕುಳಿತ್ತಿದ್ದೆ ಎಂದು ತಿಳಿಸಿದ್ದರು. ಮಾಧ್ಯಮದಿಂದ ಮಾಹಿತಿ ಪಡೆದ ಸ್ಥಳಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ವೀರನ್ ಅವರ ಮೃತ ದೇಹವನ್ನು ಅಂಬುಲೆನ್ಸ್ ಮೂಲಕ ರವಾನಿಸಿದ್ದಾರೆ.