Tag: ಕಂಡಕ್ಟರ್

  • ಪತ್ನಿ, ಮಗು ನೋಡಿ ವಾಪಸ್ ಬರೋವಾಗ ಲಾಕ್‍ಡೌನ್ ಅಡ್ಡಿ – ಹುಚ್ಚು ಸಾಹಸಕ್ಕೆ ಕೈ ಹಾಕಿ ಜೀವಬಿಟ್ಟ ಕಂಡಕ್ಟರ್

    ಪತ್ನಿ, ಮಗು ನೋಡಿ ವಾಪಸ್ ಬರೋವಾಗ ಲಾಕ್‍ಡೌನ್ ಅಡ್ಡಿ – ಹುಚ್ಚು ಸಾಹಸಕ್ಕೆ ಕೈ ಹಾಕಿ ಜೀವಬಿಟ್ಟ ಕಂಡಕ್ಟರ್

    ಬಾಗಲಕೋಟೆ: ಪತ್ನಿ ಮತ್ತು ಮಗು ನೋಡಿಕೊಂಡು ವಾಪಸ್ ಬರುವಾಗ ಕೊರೊನಾ ಲಾಕ್‍ಡೌನ್ ಅಡ್ಡಿಯಾದ ಪರಿಣಾಮ, ಕೆಎಸ್ಆರ್‌ಟಿಸಿ ಕಂಡಕ್ಟರ್ ಓರ್ವ ಹುಚ್ಚು ಸಾಹಸಕ್ಕೆ ಕೈ ಹಾಕಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

    ಹುನಗುಂದದ ನಿವಾಸಿ ಮಲ್ಲಪ್ಪ ಬೊಮ್ಮಣಗಿ (45) ಮೃತ ಕೆಎಸ್ಆರ್‌ಟಿಸಿ ಕಂಡಕ್ಟರ್. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಪ್ಪ ತನ್ನ ಪತ್ನಿ ಮತ್ತು ಮಗುವನ್ನು ನೋಡಲು ಗ್ರಾಮಕ್ಕೆ ತೆರಳಿದ್ದನು. ಬಳಿಕ ಇಬ್ಬರನ್ನು ನೋಡಿಕೊಂಡು ವಾಪಸ್ ಬರುತ್ತಿದ್ದನು. ಈ ವೇಳೆ ಚೆಕ್‍ಪೋಸ್ಟ್ ಬಳಿ ಹೋದರೆ ಪೊಲೀಸರು ಹೋಗಲು ಬಿಡುವುದಿಲ್ಲ ಎಂದುಕೊಂಡು ತಂಗಡಗಿ ಬಳಿಯ ನದಿಯಲ್ಲಿ ಈಜಿ ದಡ ಸೇರಲು ಯತ್ನಿಸಿದ್ದಾನೆ.

    ಅದರಂತೆಯೇ ಮಲ್ಲಪ್ಪ ಕೃಷ್ಣಾ ನದಿಯಲ್ಲಿ ಈಜಲು ಮುಂದಾಗಿದ್ದಾನೆ. ಆದರೆ ನದಿಯಲ್ಲಿ ಈಜಲಾಗದೇ ಕಂಡಕ್ಟರ್ ಮಲ್ಲಪ್ಪ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿ, ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ.

    ಮೃತ ಮಲ್ಲಪ್ಪ ಚೆಕ್‍ಪೋಸ್ಟ್ ಬಳಿ ಹೋಗಿ ಪೊಲೀಸರು ಹತ್ತಿರ ಮನವಿ ಮಾಡಿಕೊಂಡಿಲ್ಲ. ಆದರೆ ಪೊಲೀಸರಿಗೆ ಹೆದರಿ ನದಿಯಿಂದ ಈಜಿ ತಡ ಸೇರುವ ಯತ್ನ ಮಾಡಿ ಮೃತಪಟ್ಟಿದ್ದಾನೆ.

  • ಸ್ವಂತ ಹಣದಲ್ಲಿ ಉಚಿತ ಮಾಸ್ಕ್ ವಿತರಿಸಿದ ಡ್ರೈವರ್, ಕಂಡಕ್ಟರ್

    ಸ್ವಂತ ಹಣದಲ್ಲಿ ಉಚಿತ ಮಾಸ್ಕ್ ವಿತರಿಸಿದ ಡ್ರೈವರ್, ಕಂಡಕ್ಟರ್

    ಹುಬ್ಬಳ್ಳಿ: ಪ್ರಯಾಣಿಕರೇ ನಮ್ಮ ದೇವರು ಎಂದು ಹೇಳುವ ಸಾರಿಗೆ ಸಂಸ್ಥೆ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರ ಹಿತಾಸಕ್ತಿಗಾಗಿ ಹೊಸ ಪ್ರಯೋಗವೊಂದನ್ನು ಕೈಗೊಂಡಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಪ್ರಯಾಣಿಕರಿಗೆ ಉಚಿತ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

    ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಯರಗುಪ್ಪಿಗೆ ಪ್ರಯಾಣಿಸುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಉಚಿತವಾಗಿ ಮಾಸ್ಕ್ ನೀಡಲಾಗುತ್ತಿದೆ. ಕಂಡಕ್ಟರ್ ಎಂ.ಎಲ್.ನದಾಫ್ ಹಾಗೂ ಚಾಲಕ ಎಚ್.ಟಿ.ಮಾಯನವರ್ ಸ್ವಯಂ ಪ್ರೇರಿತರಾಗಿ ಹಾಗೂ ಸ್ವಂತ ಕರ್ಚಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಮೂಲಕ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

    ಸಾರಿಗೆ ಸಂಸ್ಥೆ ಅಭಿವೃದ್ಧಿಗೆ ಪ್ರಯಾಣಿಕರೇ ಆಧಾರ ಸ್ಥಂಭ. ಪ್ರಯಾಣಿಕರು ಆರೋಗ್ಯವಾಗಿದ್ದರೆ, ಸಂಸ್ಥೆ ಕೂಡ ಉತ್ತಮ ರೀತಿಯಲ್ಲಿ ಇರುತ್ತದೆ ಎಂಬ ಸುದುದ್ದೇಶದಿಂದ ಚಾಲಕ ಮತ್ತು ಕಂಡಕ್ಟರ್ ಇಬ್ಬರು ಉಚಿತ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

    ಕೊರೊನಾ ವೈರಸ್ ಈಗ ರಾಜ್ಯದ ವಿವಿಧ ಮೂಲೆಗಳಿಗೆ ಲಗ್ಗೆ ಇಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಆರೋಗ್ಯದ ಬಗ್ಗೆ ಚಿಂತನೆ ನಡೆಸಿದ್ದು, ಚಾಲಕ ಮತ್ತು ಕಂಡಕ್ಟರ್ ಇಂತಹ ಕಾರ್ಯ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • ಮಾತನಾಡಿಸದ ವಿವಾಹಿತ ಸ್ನೇಹಿತೆಗೆ ಬೆಂಕಿ ಹಚ್ಚಿದ ಕಂಡಕ್ಟರ್

    ಮಾತನಾಡಿಸದ ವಿವಾಹಿತ ಸ್ನೇಹಿತೆಗೆ ಬೆಂಕಿ ಹಚ್ಚಿದ ಕಂಡಕ್ಟರ್

    ಚೆನ್ನೈ: ಮಾತನಾಡಿಸುವುದನ್ನು ಬಿಟ್ಟಿದ್ದಾಳೆ ಎಂಬ ಕಾರಣಕ್ಕೆ ಖಾಸಗಿ ಬಸ್ಸಿನ ಕಂಡಕ್ಟರ್ ಓರ್ವ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.

    ಘಟನೆಯಲ್ಲಿ ಗಾಯಗೊಂಡ ಸಂತ್ರಸ್ತೆಯನ್ನು 26 ವರ್ಷದ ಜೆ ಸಲೋಮಿ ಎಂದು ಗುರುತಿಸಲಾಗಿದೆ. ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಸಲೋಮಿ ಮನೆಯಿಂದ ಕಚೇರಿಗೆ ಖಾಸಗಿ ಬಸ್ಸಿನಲ್ಲಿ ಓಡಾಡುತ್ತಿದ್ದರು. ಈ ವೇಳೆ ಸುಂದರಮೂರ್ತಿ ಇದೇ ಬಸ್ಸಿನ ಕಂಡಕ್ಟರ್ ಅಗಿ ಕೆಲಸ ಮಾಡುತ್ತಿದ್ದು, ಇಬ್ಬರು ಸ್ನೇಹಿತರಾಗಿದ್ದರು.

    10 ವರ್ಷದ ಹಿಂದೆಯೇ ಮದುವೆಯಾಗಿದ್ದ ಸಲೋಮಿಗೆ ಎರಡು ಮಕ್ಕಳಿದ್ದಾರೆ. ಜೊತೆಗೆ ಆಕೆಯ ಪತ್ನಿ ಜಾನ್ ವಿಕ್ಟರ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಸ್ಸಿನಲ್ಲಿ ಪ್ರಯಾಣಮಾಡುವಾಗ ಸಲೋಮಿ ಅವರು ಸುಂದರಮೂರ್ತಿ ಜೊತೆ ಚೆನ್ನಾಗಿ ಮಾತನಾಡಿದ್ದಾರೆ. ಇದನ್ನೆ ತಪ್ಪು ತಿಳಿದುಕೊಂಡ ಕಂಡಕ್ಟರ್ ಸಲೋಮಿಗೆ ತೀರ ಹತ್ತಿರವಾಗಲು ಪ್ರಯತ್ನ ಮಾಡಿದ್ದಾನೆ. ಇದನ್ನು ತಿಳಿದ ಸಲೋಮಿ ಆತನನ್ನು ಮಾತನಾಡಿಸುವುದನ್ನು ಬಿಟ್ಟಿದ್ದಾರೆ.

    ಈ ವೇಳೆ ಸಲೋಮಿ ಹಿಂದೆ ಬಿದ್ದಿದ್ದ ಕಂಡಕ್ಟರ್ ಮಾತನಾಡಿಸುವಂತೆ ಹಿಂಸೆ ಕೊಟ್ಟಿದ್ದಾನೆ. ಆದರೆ ಜೆ ಸಲೋಮಿ ಇದಕ್ಕೆ ಒಪ್ಪಿಲ್ಲ. ಇದರಿಂದ ಕೋಪಗೊಂಡ ಸುಂದರಮೂರ್ತಿ ಆಕೆಯನ್ನು ಹಿಂಬಾಲಿಸಿ ಬಂದು ಕಚೇರಿಯನ್ನು ತಿಳಿದುಕೊಂಡಿದ್ದಾನೆ. ನಂತರ ಕಚೇರಿಗೆ ಬಂದ ಸುಂದರಮೂರ್ತಿ ನನ್ನನ್ನು ಮಾತನಾಡಿಸು ಎಂದು ಮತ್ತೆ ಪೀಡಿಸಿದ್ದಾನೆ. ಇದಕ್ಕೆ ಒಪ್ಪದ ಸಲೋಮಿ ಮೇಲೆ ಕಚೇರಿಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

    ಘಟನೆಯಲ್ಲಿ ಶೇ.20 ರಷ್ಟು ಸುಟ್ಟುಹೋಗಿದ್ದ ಸಲೋಮಿಯನ್ನು ಸ್ಥಳದಲ್ಲಿ ಇದ್ದ ಕೆಲವರು ಕಾಪಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಜೊತೆಗೆ ಸುಂದರಮೂರ್ತಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

  • ಬೆಂಗ್ಳೂರಿನಲ್ಲಿ ಸಿಕ್ಕಿಬಿದ್ದ ಕಾಮಚೇಷ್ಟೆ ಕಂಡಕ್ಟರ್ – ಯುವತಿ ಪೋಷಕರಿಂದ ಹಿಗ್ಗಾಮುಗ್ಗಾ ಥಳಿತ

    ಬೆಂಗ್ಳೂರಿನಲ್ಲಿ ಸಿಕ್ಕಿಬಿದ್ದ ಕಾಮಚೇಷ್ಟೆ ಕಂಡಕ್ಟರ್ – ಯುವತಿ ಪೋಷಕರಿಂದ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ಚಲಿಸುವ ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.

    ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿದ್ದ ಯುವತಿಗೆ ಜೊತೆಯಲ್ಲೇ ಕುಳಿತ ಕಂಡಕ್ಟರ್ ಕೈ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ್ದನು. ಜೋರಾಗಿ ಕಿರುಚಿಕೊಂಡರೆ ನಿನ್ನ ಮರ್ಯಾದೆನೇ ಹೋಗುವುದು, ನಾನು ನಿನ್ನ ಮೇಲೆನೇ ಹೇಳುತ್ತೇನೆ ಎಂದು ಕಂಡೆಕ್ಟರ್ ಯುವತಿಗೆ ಹೆದರಿಸಿದ್ದನು. ಇದನ್ನೂ ಓದಿ: KSRTC ಬಸ್ಸಿನಲ್ಲಿ ಮಹಿಳೆಯ ಜೊತೆ ಕಂಡಕ್ಟರ್ ಅಸಭ್ಯ ವರ್ತನೆ

    ಈ ವೇಳೆ ಪ್ಲಾನ್ ಮಾಡಿದ ಯುವತಿ ಕಂಡಕ್ಟರ್ ಇಸಾಕ್ ಅಲಿಯ ಕಾಮಚೇಷ್ಟೇಯನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಳು. ನಂತರ ಬೆಂಗಳೂರಿಗೆ ಬಂದ ಯುವತಿ ತನ್ನ ಪೋಷಕರ ಬಳಿ ನಡೆದ ಘಟನೆಯನ್ನು ವಿಡಿಯೋ ಸಮೇತ ಹೇಳಿಕೊಂಡಿದ್ದಳು. ಇದರಿಂದ ಕೋಪಗೊಂಡ ಯುವತಿಯ ಪೋಷಕರು ಹಾಸನ ಟು ಬೆಂಗಳೂರಿನ ಬಸ್ ನಂಬರ್ ಪಡೆದು ಆ ಬಸ್ ಮತ್ತೆ ಯಾವಾಗ ಬೆಂಗಳೂರಿಗೆ ಬರುತ್ತೆ ಎಂದು ಕಾಯುತ್ತಿದ್ದರು.

    ಭಾನುವಾರ ಸಂಜೆ ವೇಳೆ ಅದೇ ಬಸ್, ಅದೇ ಕಂಡಕ್ಟರ್ ಬೆಂಗಳೂರಿಗೆ ಬರುತ್ತಿದ್ದನ್ನು ತಿಳಿದು ಯಶವಂತಪುರ ಬಸ್ ನಿಲ್ದಾಣದ ಬಳಿ ಕಾದು ಕಾಮುಕ ಕಂಡಕ್ಟರ್‍ಗೆ ಹಿಗ್ಗಾಮುಗ್ಗಾ ಥಳಿಸಿ ಸುಬ್ರಮಣ್ಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

  • KSRTC ಬಸ್ಸಿನಲ್ಲಿ ಮಹಿಳೆಯ ಜೊತೆ ಕಂಡಕ್ಟರ್ ಅಸಭ್ಯ ವರ್ತನೆ

    KSRTC ಬಸ್ಸಿನಲ್ಲಿ ಮಹಿಳೆಯ ಜೊತೆ ಕಂಡಕ್ಟರ್ ಅಸಭ್ಯ ವರ್ತನೆ

    – ವಿಡಿಯೋ ರೆಕಾರ್ಡ್ ಮಾಡಿದ ಮಹಿಳೆ

    ಬೆಂಗಳೂರು: ಡ್ಯೂಟಿ ಸಮಯದಲ್ಲೇ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಮಹಿಳೆ ಜೊತೆ ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಿಂದ ಹಾಸನಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು, ಕಂಡಕ್ಟರ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಹಿಳೆ ಹಾಸನದಿಂದ ಪುತ್ತೂರಿಗೆ ಹೊರಟಿದ್ದರು. ಈ ವೇಳೆ ಟಿಕೆಟ್ ನೀಡುವ ನೆಪದಲ್ಲಿ ಕಂಡಕ್ಟರ್ ಮಹಿಳೆಯ ಪಕ್ಕದಲ್ಲಿ ಬಂತು ಕೂತಿದ್ದನು. ನಂತರ ಪಕ್ಕದಲ್ಲಿ ಕೂತಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸುವುದಕ್ಕೆ ಶುರುಮಾಡಿದ್ದನು.

    ಮಹಿಳೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಕಂಡಕ್ಟರ್ ಮಾತ್ರ ಮಹಿಳೆಯ ಕೈ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಕಂಡಕ್ಟರ್‌ಗೆ ಗೊತ್ತಾಗದಂತೆ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕಂಡಕ್ಟರ್ ವರ್ತನೆಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಡಿಯೋ ನೋಡಿದ ಕೆಎಸ್ಆರ್‌ಟಿಸಿ ಎಮ್.ಡಿ ಮತ್ತು ಸಿಐಟಿಯು ಸಿಬ್ಬಂದಿ ತನಿಖೆಗೆ ಆದೇಶಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಂಡಕ್ಟರ್ ಪುತ್ತೂರು ಡಿಪೋದಲ್ಲಿ ಕೆಲಸ ಮಾಡುತ್ತಾನೆ ಎಂದು ಗೊತ್ತಾಗಿದೆ. ತನಿಖಾ ಹಂತದಲ್ಲಿ ಇರುವುದರಿಂದ ಸದ್ಯ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪು ಕಂಡುಬಂದರೆ ಯಾವುದೇ ಮೂಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಸಿಐಟಿಯು ಕಾರ್ಯದರ್ಶಿ ಯೋಗೇಶ್‍ಗೌಡ ತಿಳಿಸಿದರು.

  • ನಕಲಿ ಅಧಿಕಾರಿಯಿಂದ ಸರ್ಕಾರಿ ಬಸ್ ತಪಾಸಣೆ – ಕಂಡಕ್ಟರ್‌ಗೆ ಸಿಕ್ಕಿಬಿದ್ದ ಭೂಪ

    ನಕಲಿ ಅಧಿಕಾರಿಯಿಂದ ಸರ್ಕಾರಿ ಬಸ್ ತಪಾಸಣೆ – ಕಂಡಕ್ಟರ್‌ಗೆ ಸಿಕ್ಕಿಬಿದ್ದ ಭೂಪ

    ಕೊಪ್ಪಳ: ಸರ್ಕಾರಿ ಬಸ್ ತಪಾಸಣೆ ಮಾಡುತ್ತಿದ್ದ ನಕಲಿ ಸಾರಿಗೆ ಅಧಿಕಾರಿಯನ್ನು ಕಂಡಕ್ಟರ್ ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಹುಲಗಿಯಿಂದ ಗಂಗಾವತಿ ಕಡೆ ಹೊರಟಿದ್ದ ಬಸ್‍ನ್ನು ತಪಾಸಣೆ ಮಾಡುವ ನೆಪದಲ್ಲಿ ಬಂದ ಆತ, ಟಿಕೆಟ್ ಮತ್ತು ಕ್ಯಾಶ್ ತಪಾಸಣೆ ಮಾಡಿದ್ದಾನೆ. ಈ ವೇಳೆ ಬಸ್ ಕಂಡೆಕ್ಟರ್ ಗೆ ಸಂಶಯ ಬಂದು ವಿಚಾರಣೆ ಮಾಡಿದಾಗ ನಕಲಿ ಅಧಿಕಾರಿ ಎಂದು ತಿಳಿದು ಬಂದಿದೆ.

    ಬಸ್ ಪ್ರಯಾಣಿಕನ ಸೋಗಿನಲ್ಲಿ ಬಸ್ ಹತ್ತಿದ ಅಸಾಮಿ ನಂತರ ಕಂಡಕ್ಟರ್ ಬಳಿ ಬಂದು ನಾನು ತನಿಖಾಧಿಕಾರಿ ಎಂದು ಹೇಳಿ ಟಿಕೆಟ್ ಮಷಿನ್ ಪಡೆದುಕೊಂಡಿದ್ದಾನೆ. ಟೆಕೆಟ್ ಮತ್ತು ಹಣ ಎಲ್ಲವನ್ನು ಪರಿಶೀಲನೆ ಮಾಡಿದ್ದಾನೆ. ನಂತರ ನೀನು ಟಿಕೆಟ್ ಸರಿಯಾಗಿ ನೀಡಿಲ್ಲ. ನಿನ್ನ ಮೇಲೆ ಕೇಸ್ ಹಾಕುತ್ತೇನೆ ಎಂದು ಕಂಡಕ್ಟರ್ ಗೆ ಅವಾಜ್ ಹಾಕಿದ್ದಾನೆ. ಜೊತೆಗೆ 500 ರೂ. ದುಡ್ಡನ್ನು ಪಡೆದುಕೊಂಡಿದ್ದಾನೆ.

    ಈ ವೇಳೆ ಅಸಾಮಿಯ ನಡುವಳಿಕೆ ನೋಡಿ ಅನುಮಾನಗೊಂಡ ಕಂಡಕ್ಟರ್, ಆತನನ್ನು ಪಶ್ನೆ ಮಾಡಲು ಶುರು ಮಾಡಿದ್ದಾರೆ. ನೀನು ನಮ್ಮ ಸಾರಿಗೆ ಇಲಾಖೆ ಅಧಿಕಾರಿನಾ? ನಿನ್ನ ಗುರುತಿನ ಚೀಟಿ ತೋರಿಸು ಎಂದು ಕೇಳಿದ್ದಾರೆ. ಈ ವೇಳೆ ಬೇರೆ ಏನೋ ಸಬೂಬು ಹೇಳಿ ಹೊರಹೋಗಲು ನೋಡಿದ ಆತನನ್ನು ಹಿಡಿದ ಕಂಡಕ್ಟರ್, ಆತನನ್ನು ಸಾರಿಗೆ ಇಲಾಖೆ ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

    ಸಿಕ್ಕಿಬಿದ್ದ ವ್ಯಕ್ತಿ ಆಂಧ್ರ ಮೂಲದವನು ಎಂದು ತಿಳಿದುಬಂದಿದ್ದು, ವಿಚಾರಣೆ ಮಾಡುವ ವೇಳೆ ನಾನು ನಕಲಿ ಅಧಿಕಾರಿ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಕೂಡಲೆ ನಕಲಿ ಅಧಿಕಾರಿಯನ್ನು ಕಂಡೆಕ್ಟರ್ ಹನುಮೇಶ್ ಮೇಲಾಧಿಕಾರಿ ವಶಕ್ಕೆ ಒಪ್ಪಿಸಿದ್ದಾರೆ.

  • ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

    ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

    ಹಾವೇರಿ: ಹಣ ಕಳೆದುಕೊಂಡ ಪ್ರಯಾಣಿಕನಿಗೆ ಸಿಕ್ಕ ಹಣವನ್ನು ವಾಪಸ್ ನೀಡುವ ಮೂಲಕ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

    ಶುಕ್ರವಾರ ಹಾವೇರಿ ತಾಲೂಕಿನ ಮರಡೂರ ಗ್ರಾಮದ ಸ್ವಾಮಿ ಎಂಬ ವ್ಯಕ್ತಿಯು ಹಾವೇರಿಯಿಂದ ಬೆಳವಗಿ ಮಾರ್ಗದಲ್ಲಿ ಸಂಚರಿಸುವ ಬಸ್‍ನಲ್ಲಿ ನಾಲ್ಕು ಸಾವಿರ ಹಣವನ್ನು ಕಳೆದುಕೊಂಡಿದ್ದರು.

    ಅದೇ ಬಸ್ ನಲ್ಲಿ ಕಂಡಕ್ಟರ್ ಆಗಿದ್ದ ಹಾಲಗಿ ಗ್ರಾಮದ ಶ್ರೀನಿವಾಸ ಅವರು, ಬಸ್ ನಲ್ಲಿ ಸಿಕ್ಕಿದ್ದ ಹಣವನ್ನು ಕಳೆದುಕೊಂಡ ವ್ಯಕ್ತಿಗೆ ನೀಡುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ. ನಿರ್ವಾಹಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಮಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

  • ತಡರಾತ್ರಿಯಲ್ಲಿ ವಿದ್ಯಾರ್ಥಿನಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತ ಬಸ್ ಡ್ರೈವರ್, ಕಂಡಕ್ಟರ್

    ತಡರಾತ್ರಿಯಲ್ಲಿ ವಿದ್ಯಾರ್ಥಿನಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತ ಬಸ್ ಡ್ರೈವರ್, ಕಂಡಕ್ಟರ್

    ತಿರುವನಂತಪುರಂ: ತಡರಾತ್ರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸುರಕ್ಷತೆಗಾಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿಕೊಂಡು ಕಾದು ಕುಳಿತ ಬಸ್ ಕಂಡಕ್ಟರ್ ಮತ್ತು ಡ್ರೈವರ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಇತ್ತೀಚಿಗೆ ದೇಶಾದ್ಯಂತ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮನೆ ಮಾಡಿದೆ. ಇದರ ಬೆನ್ನಲ್ಲೇ ಕೇರಳ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ ಕಂಡಕ್ಟರ್ ಪಿ.ಶಜುದ್ದೀನ್ ಮತ್ತು ಡ್ರೈವರ್ ಡೆನ್ನಿಸ್ ಕ್ಸೇವಿಯರ್ ಓರ್ವ ವಿದ್ಯಾರ್ಥಿನಿಗೆ ಮಾಡಿರುವ ಸಹಾಯಕ್ಕೆ ಎಲ್ಲರೂ ಮೆಚ್ಚಿಕೊಂಡಾಡಿದ್ದಾರೆ.

    ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಫಿಲ್ ಓದುತ್ತಿರುವ ಕೇರಳದ ಕಣ್ಣೂರಿನ ವಿದ್ಯಾರ್ಥಿ ಎಲ್ಸಿನಾ ತನ್ನ ಸಂಶೋಧನೆ ಕೆಲಸದ ನಿಮಿತ್ತ ಕಳೆದ ಮಂಗಳವಾರ ಸರ್ಕಾರಿ ಬಸ್ ನಲ್ಲಿ ಕೊಟ್ಟಾಯಂ ಜಿಲ್ಲೆಯ ಪೊಡಿಮಟ್ಟಂಗೆ ತೆರಳಿದ್ದಾಳೆ. ಈ ವೇಳೆ ಅವಳು ಪೊಡಿಮಟ್ಟಂ ಹತ್ತಿರದ ಕಂಜರಪಲ್ಲಿ ಬಸ್ ನಿಲ್ದಾಣಕ್ಕೆ ಬರುವುದರೊಳಗೆ ರಾತ್ರಿ 11 ಗಂಟೆಯಾಗಿದೆ. ಆ ದಿನ ಅಂದು ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರಿಂದ ನಿಲ್ದಾಣದ ಬಳಿಯಿದ್ದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

    ಈ ವೇಳೆ ಅಲ್ಲಿ ಎಲ್ಸಿನಾ ಒಬ್ಬಳೇ ಆ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಜನರೇ ಇಲ್ಲದ ಸ್ಥಳದಲ್ಲಿ ಒಬ್ಬಳೇ ಹೆಣ್ಣುಮಗಳನ್ನು ಕೆಳಗಿಳಿಸಬಾರದು ಎಂದು ಡ್ರೈವರ್ ಮತ್ತು ಕಂಡಕ್ಟರ್ ಅದೇ ನಿಲ್ದಾಣದಲ್ಲಿ ಬಸ್ ಸಿಲ್ಲಿಸಿಕೊಂಡು ಎಲ್ಸಿನಾಳನ್ನು ಕರೆದುಕೊಂಡು ಹೋಗಲು ಅವಳ ಸಂಬಂಧಿ ಬರುವವರೆಗೂ ಕಾಯ್ದಿದ್ದಾರೆ. ಇದಕ್ಕೆ ಬಸ್‍ನಲ್ಲಿ ಇದ್ದ ಸಹ ಪ್ರಯಾಣಿಕರು ಸಹ ಸಾಥ್ ನೀಡಿದ್ದಾರೆ. ಕೆಲ ಸಮಯದ ನಂತರ ಎಲ್ಸಿನಾ ಸಂಬಂಧಿಯೊಬ್ಬರು ಸ್ಥಳಕ್ಕೆ ಬಂದು ಅವಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

    ಬಸ್ ಕಂಡಕ್ಟರ್ ಪಿ.ಶಜುದ್ದೀನ್ ಮತ್ತು ಡೆನ್ನಿಸ್ ಕ್ಸೇವಿಯರ್ ಅವರು ರಾತ್ರಿ ವೇಳೆ ವಿದ್ಯಾರ್ಥಿನಿಯ ಭದ್ರತೆಯ ಬಗ್ಗೆ ತೋರಿದ ಕಾಳಜಿಗೆ ಮತ್ತು ಸಹ ಪ್ರಯಾಣಿಕರ ತಾಳ್ಮೆಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೊಟ್ಟಾಯಂ ಜಿಲ್ಲೆಯ ಪುಂಜಾರ್ ತಾಲೂಕಿನ ಶಾಸಕರಾದ ಪಿ.ಸಿ. ಜಾರ್ಜ್ ಅವರು ಶಜುದ್ದೀನ್ ಮತ್ತು ಕ್ಸೇವಿಯರ್ ಅವರನ್ನು ಅಭಿನಂದಿಸಿದ್ದಾರೆ.

  • 1 ರೂ. ಚಿಲ್ಲರೆಗಾಗಿ ಪ್ರಯಾಣಿಕನ ತಲೆ ಒಡೆದ ಬಸ್ ಕಂಡಕ್ಟರ್

    1 ರೂ. ಚಿಲ್ಲರೆಗಾಗಿ ಪ್ರಯಾಣಿಕನ ತಲೆ ಒಡೆದ ಬಸ್ ಕಂಡಕ್ಟರ್

    ತುಮಕೂರು: ಒಂದು ರೂಪಾಯಿ ಚಿಲ್ಲರೆಗಾಗಿ ಬಸ್ ಕಂಡಕ್ಟರ್ ಪ್ರಯಾಣಿಕನ ತಲೆ ಒಡೆದಿದ್ದಾನೆ. ಬೆಂಗಳೂರು-ಕೊರಟಗೆರೆ ಹೆದ್ದಾರಿಯ ಚಿಕ್ಕಪಾಲನಹಳ್ಳಿ ಬಳಿ ಈ ಘಟನೆ ನಡೆದಿದೆ.

    ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‍ನಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕ ಕಂಬಯ್ಯ ಎಂಬವರಿಗೆ ಬಸ್ ಕಂಡಕ್ಟರ್ ಟಿಕೆಟ್ ಕೊಡುವ ಮೆಷಿನ್‍ಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ಪ್ರಯಾಣಿಕ ತಲೆ ಒಡೆದು ರಕ್ತ ಬಂದಿದೆ.

    ಪಾವಗಡದಿಂದ ಬರುತ್ತಿದ್ದ ಬಸ್‍ಗೆ ನಾಗೇನಹಳ್ಳಿ ನಿಲ್ದಾಣದಲ್ಲಿ ಹತ್ತಿದ್ದ ಕಂಬಯ್ಯ ಮಾಕಳಿಗೆ ಟಿಕೆಟ್ ಪಡೆಯಲು ಹಣ ನೀಡಿದ್ದಾರೆ. ಈ ವೇಳೆ ಒಂದು ರೂಪಾಯಿ ಚಿಲ್ಲರೆ ಕಡಿಮೆ ಇದೇ ಎಂಬ ವಿಚಾರಕ್ಕೆ ಕಂಡಕ್ಟರ್ ಮತ್ತು ಕಂಬ್ಬಯ್ಯನ ನಡುವೆ ಜಗಳವಾಗಿದೆ. ಈ ಕಾರಣಕ್ಕೆ ಕೋಪಗೊಂಡ ಕಂಡಕ್ಟರ್ ಟಿಕೆಟ್ ಮೆಷಿನ್ ನಿಂದ ಕಂಬಯ್ಯನ ತಲೆ ಭಾಗಕ್ಕೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮ ಕಂಬ್ಬಯ್ಯನ ತಲೆ ಒಡೆದು ಹೋಗಿ ಬಟ್ಟೆಯೆಲ್ಲಾ ರಕ್ತಸಿಕ್ತವಾಗಿದೆ.

    ಒಂದು ರೂ. ಚಿಲ್ಲರೆಗಾಗಿ ಪ್ರಯಾಣಿಕ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಬಸ್ ಕಂಡಕ್ಟರ್ ಮೇಲೆ ಸಾರ್ವಜನಿಕರು ಮತ್ತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಕಂಬ್ಬಯ್ಯನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

  • ಟಿಕೆಟ್ ಪಡೆಯದ್ದಕ್ಕೆ ವಿದ್ಯಾರ್ಥಿನಿಯನ್ನೇ ಚಲಿಸ್ತಿದ್ದ ಬಸ್ಸಿನಿಂದ ಹೊರ ತಳ್ಳಿದ ಕಂಡಕ್ಟರ್

    ಟಿಕೆಟ್ ಪಡೆಯದ್ದಕ್ಕೆ ವಿದ್ಯಾರ್ಥಿನಿಯನ್ನೇ ಚಲಿಸ್ತಿದ್ದ ಬಸ್ಸಿನಿಂದ ಹೊರ ತಳ್ಳಿದ ಕಂಡಕ್ಟರ್

    ಬೆಂಗಳೂರು: ಪಾಸ್ ಇದ್ದಿದ್ದರಿಂದ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿದ ವಿದ್ಯಾರ್ಥಿನಿಯನ್ನು ಕಂಡಕ್ಟರ್ ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ತಳ್ಳಿರುವ ಅಮಾನವೀಯ ಘಟನೆ ಕೋಣನಕುಂಟೆ ಬಳಿ ನಡೆದಿದೆ.

    ಯಲಚೇನಹಳ್ಳಿಯ ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಕನಕಪುರ ಪಟ್ಟಣದ 16 ವರ್ಷದ ಭೂಮಿಕಾ(17) ತೀವ್ರವಾಗಿ ಗಾಯಗೊಂಡಿದ್ದಾಳೆ. ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ಊರಿಗೆ ಹೋಗಲು ಕೆಎಸ್ಆರ್‌ಟಿಸಿ ಬಸ್ ಹತ್ತಿದಾಗ ಈ ಘಟನೆ ನಡೆದಿದೆ.

    ನವೆಂಬರ್ 11ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿದ್ಯಾರ್ಥಿನಿ ಕನಕಪುರದ ಬಸ್ ಹತ್ತಿದ್ದು, ಬಸ್ ಪಾಸ್ ಇದ್ದಿದ್ದರಿಂದ ಆಕೆ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟುಗೊಂಡ ಕಂಡಕ್ಟರ್ ಶಿವಶಂಕರ್, ವಿದ್ಯಾರ್ಥಿನಿಯನ್ನು ಚಲಿಸುತ್ತಿರುವ ಬಸ್ಸಿನಿಂದ ಹೊರಕ್ಕೆ ತಳ್ಳಿದ್ದಾನೆ.

    ಈ ಬಸ್ಸಿನಲ್ಲಿ ವಿದ್ಯಾರ್ಥಿ ಪಾಸ್ ನಡೆಯುವುದಿಲ್ಲ ಎಂದು ಕಂಡಕ್ಟರ್ ಹೇಳಿದರು. ಹೀಗಾಗಿ ನಾನು ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ಹೇಳಿದೆ. ಆದರೆ ಅಲ್ಲೇ ಇಳಿಯುವಂತೆ ಕಂಡಕ್ಟರ್ ಒತ್ತಾಯಿಸಿದರು. ಅಷ್ಟರಲ್ಲಿ ಬಸ್ ಚಲಿಸಲಾರಂಭಿಸಿತು. ಆದರೂ ಕಂಡಕ್ಟರ್ ನನ್ನನ್ನು ಬಲವಂತವಾಗಿ ಹೊರದಬ್ಬಿದರು ಎಂದು ವಿದ್ಯಾರ್ಥಿನಿ ಭೂಮಿಕಾ ನಡೆದ ಘಟನೆಯನ್ನು ವಿವರಿಸಿದ್ದಾಳೆ.

    ಬಸ್ಸಿನಿಂದ ಬಿದ್ದ ಗಾಯಗೊಂಡ ಭೂಮಿಕಾಳನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಘಟನೆ ಕುರಿತು ವಿದ್ಯಾರ್ಥಿನಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಹಾರೋಹಳ್ಳಿ ಡಿಪೋಗೆ ಸೇರಿದ ಬಸ್ ಇದಾಗಿದೆ.

    ಆರೋಪಿ ವಿರುದ್ಧ ಸೆಕ್ಷನ್ 325(ಸ್ವಯಂ ಪ್ರೇರಣೆಯಿಂದ ತೀವ್ರ ನೋವುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದು ಕೋಣನಕುಂಟೆ ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಕುರಿತು ಕೆಎಸ್ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ ಪ್ರತಿಕ್ರಿಯಿಸಿ, ಅಮಾನವೀಯವಾಗಿ ವರ್ತಿಸಿದ ಆರೋಪಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ. ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಹೊರದಬ್ಬಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಂಡಕ್ಟರ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಸಾರಿಗೆ ಸಿಬ್ಬಂದಿಗೆ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಲು ಮಾರ್ಗಸೂಚಿ ಹಾಗೂ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳಲು ಸೂಚನೆ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.