Tag: ಕಂಟ್ರೋಲ್ ರೂಂ

  • ಚುನಾವಣೆಗಾಗಿ ಹಣ ಹಂಚುವ, ಆಮಿಷ ಒಡ್ಡುವವರ ಬಗ್ಗೆ ಮಾಹಿತಿ ನೀಡಿ – ಕಂಟ್ರೋಲ್‌ ರೂಂ ತೆರೆದ ಐಟಿ

    ಚುನಾವಣೆಗಾಗಿ ಹಣ ಹಂಚುವ, ಆಮಿಷ ಒಡ್ಡುವವರ ಬಗ್ಗೆ ಮಾಹಿತಿ ನೀಡಿ – ಕಂಟ್ರೋಲ್‌ ರೂಂ ತೆರೆದ ಐಟಿ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ಜನಪ್ರತಿನಿಧಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಅನೇಕ ಕಡೆಗಳಲ್ಲಿ ಜನರಿಗೆ ಕುಕ್ಕರ್‌, ಸೀರೆ ಹಂಚಲಾಗುತ್ತಿದೆ. ಜೊತೆಗೆ ಭರ್ಜರಿ ಬಾಡೂಟ ಏರ್ಪಡಿಸುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಬ್ರೇಕ್‌ ಹಾಕಲು ಆದಾಯ ತೆರಿಗೆ ಇಲಾಖೆ (Income Tax) ಮುಂದಾಗಿದೆ.

    ಹಣ, ಉಡುಗೊರೆ, ಆಮಿಷವೊಡ್ಡುವವರ ಮೇಲೆ ಐಟಿ ಕಣ್ಣಿಟ್ಟಿದೆ. ಚುನಾವಣೆ ಸಂಬಂಧ ಕಂಟ್ರೋಲ್ ರೂಂ ತೆರೆದಿದೆ. ದಿನದ 24 ಗಂಟೆಯೂ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದೆ. ಇದನ್ನೂ ಓದಿ: ಬಿಎಸ್‌ವೈ ಮನೆಯಲ್ಲಿ ಅಮಿತ್ ಶಾ ನಡೆಗೆ ಅಚ್ಚರಿ – ಭಾರೀ ಚರ್ಚೆ

    ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಗಳು ನಗದು ಹಣ ವಿತರಣೆ, ಯಾವುದೇ ವಸ್ತುಗಳನ್ನ ಉಡುಗೊರೆ ರೂಪದಲ್ಲಿ ಹಂಚುವುದು ಹಾಗೂ ಇತರೆ ಆಮಿಷಗಳನ್ನು ಒಡ್ಡಿದ್ದಲ್ಲಿ ಮಾಹಿತಿ ನೀಡಬಹುದು. ಐಟಿ ಇಲಾಖೆ ತೆರೆದಿರುವ ಕಂಟ್ರೋಲ್ ರೂಂ ಅಥವಾ ಇಮೇಲ್ ಮೂಲಕ ದೂರು ನೀಡಲು ಮನವಿ ಮಾಡಲಾಗಿದೆ. ಅದಕ್ಕಾಗಿ ಟೋಲ್ ಫ್ರೀ ನಂಬರ್ ವ್ಯವಸ್ಥೆ ಮಾಡಿದೆ.

    ಟೋಲ್ ಫ್ರೀ ಸಂಖ್ಯೆ – 1800 425 2115, ದೂರವಾಣಿ ಸಂಖ್ಯೆ – 080 22861126 ಹಾಗೂ ಮೊಬೈಲ್ – 8277422825, 8277413614 ಗೆ ಕರೆ ಮಾಡಬಹುದು. ಅಲ್ಲದೇ ಇಮೇಲ್- cleankarnatakaelection@incometax.gov.in ಗೆ ಮಾಹಿತಿ ನೀಡುವಂತೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಅಪರೇಷನ್ ಕಮಲ ಪ್ರಕ್ರಿಯೆ ಗಿನ್ನಿಸ್ ರೆಕಾರ್ಡ್- ಹೆಚ್‍ಡಿಕೆ

    ಮಾಹಿತಿ ನೀಡಿದ ವ್ಯಕ್ತಿಗಳ ವಿವರವನ್ನ ಗೌಪ್ಯವಾಗಿ ಇಡಲಾಗುವುದು. ಅವರ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ.

  • ಸತ್ಯ ಹೇಳಿದ್ದೆ ತಪ್ಪಾಯ್ತು – ಕೆಲ್ಸದಿಂದ ಕೊರೊನಾ ವಾರಿಯರ್ ಔಟ್

    ಸತ್ಯ ಹೇಳಿದ್ದೆ ತಪ್ಪಾಯ್ತು – ಕೆಲ್ಸದಿಂದ ಕೊರೊನಾ ವಾರಿಯರ್ ಔಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕಂಟ್ರೋಲ್ ರೂಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದ ಮಹಿಳಾ ಕೊರೊನಾ ವಾರಿಯರ್ ಒಬ್ಬರನ್ನು ಬಿಬಿಎಂಪಿ ಕೆಲಸದಿಂದ ಅಮಾನತು ಮಾಡಿದೆ.

    ಕೊರೊನಾ ಕಂಟ್ರೋಲ್ ರೂಂ ನಿರ್ವಹಣೆ ಮಾಡುತ್ತಿದ್ದ ಖಾಸಗಿ ಏಜೆನ್ಸಿಯ ಮಹಿಳಾ ಅಧಿಕಾರಿಯೊಬ್ಬರು, ಕೊರೊನಾ ರೋಗಿಗಳು ಕೈಕಾಲು ಹಿಡಿಯುತ್ತೇವೆ ಬೆಡ್ ವ್ಯವಸ್ಥೆ ಮಾಡಿ. ಒಂದು ಬೆಡ್ ಬ್ಲಾಕ್ ಮಾಡಿ ಅಂತಾರೆ. ಆದರೆ ಕಂಟ್ರೋಲ್ ರೂಂ ನಲ್ಲಿರುವ ನನಗೆ ಬೆಡ್ ಬ್ಲಾಕ್ ಮಾಡೋದಕ್ಕೆ ಅವಕಾಶ ಕೊಡಲ್ಲ. ಸೆಂಟ್ರಲ್ ವಾರ್ ರೂಂ ಟೀಮ್‍ಗೆ ರಿಪೋರ್ಟ್ ಮಾಡಿದರೆ ಅಲ್ಲಿ ಅವರು ರೋಗಿಗಳಿಗೆ ಸ್ಪಂದಿಸುವುದೇ ಇಲ್ಲ. ನಮಗೆ ಮತ್ತೆ ವಾಪಸ್ ರೋಗಿಗಳು ಕರೆ ಮಾಡಿ ಅಳಲು ತೋಡಿಕೊಳುತ್ತಾರೆ ಎಂದು ಹೇಳಿಕೆ ನೀಡಿದ್ದರು.

    ಜೊತೆಗೆ ನಾಲ್ಕು ಅಂಬುಲೆನ್ಸ್ ನನ್ನ ವಾರ್ಡ್‍ಗೆ ಕೊಟ್ಟಿದ್ದಾರೆ. ಆದರೆ ರೋಗಿಗಳು ತುರ್ತಾಗಿ ಕರೆ ಮಾಡಿ ಅಂಬುಲೆನ್ಸ್ ಬೇಕು ಕಳುಹಿಸಿ ಎಂದು ಕೇಳುತ್ತಾರೆ. ಆಗ ನಾವು ಹಿರಿಯ ಅಧಿಕಾರಿಗಳಿಗೆ ಕೇಳಿದರೆ, ನೀವು ಇಲ್ಲಿರುವ ಅಂಬುಲೆನ್ಸ್ ಕಳಿಸಬೇಡಿ ಅಂತಾರೆ. ಒಂದು ತಿಂಗಳಿಂದ ಹಾಗೆ ಬಿದ್ದಿದೆ. ಹೋಂ ಐಸೊಲೇಷನ್‍ನಲ್ಲಿರುವವರ ಆರೋಗ್ಯ ಏರುಪೇರಾದರೂ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸುವುದಕ್ಕೆ ಅವಕಾಶ ಕೊಡಲ್ಲ ಎಂದು ಮಹಿಳಾ ಅಧಿಕಾರಿ ದೂರಿದ್ದರು.

    ವೆಂಟಿಲೇಟರ್ ನಲ್ಲಿರುವ ರೋಗಿಯನ್ನು ಏಳು ದಿನ ಆಯ್ತು ಎಂದು ಡೈರೆಕ್ಟ್ ಡಿಸ್ಚಾರ್ಜ್ ಮಾಡಿದ್ದಾರೆ. ಆಸ್ಪತ್ರೆಯ ವಿರುದ್ಧ ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಾಗಿಲ್ಲ. ಜನರಿಗೆ ಸಹಾಯ ಮಾಡೋಕೆ ಆಗಲ್ಲ. ಕೈಕಟ್ಟಿ ಹಾಕುತ್ತಾರೆ ಅಂದರೆ ಯಾಕೆ ಬೇಕು ಈ ವ್ಯವಸ್ಥೆ ಎಂದು ಮಹಿಳಾ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದರು. ಈ ಅಧಿಕಾರಿಯನ್ನು ಈಗ ಬಿಬಿಎಂಪಿ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದಾರೆ. ಜೊತೆಗೆ ಎಫ್‍ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

    ಇಂದರಿಂದ ಭಯಗೊಂಡ ಮಹಿಳಾ ಅಧಿಕಾರಿ ವಿಡಿಯೋ ಮಾಡಿ ಅಳಲನ್ನು ತೋಡಿಕೊಂಡಿದ್ದು, ಸತ್ಯ ಹೇಳಿದ್ದೇ ತಪ್ಪಾಗಿದೆ. ನನ್ನನ್ನು ಕೆಲಸದಿಂದ ತೆಗದು ಹಾಕಿದ್ದಾರೆ. ಜೊತೆಗೆ ಎಫ್‍ಐಆರ್ ದಾಖಲಿಸಿ ಮನೆಯ ಹತ್ತಿರ ಪೊಲೀಸ್ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳಾ ಅಧಿಕಾರಿ ಒತ್ತಾಯ ಮಾಡಿದ್ದಾರೆ.

  • ಬೆಳಗ್ಗೆ 5 ಗಂಟೆಗೆ ಕರೆ ಮಾಡಿ ಪೊಲೀಸ್ ಅತಿಥಿಯಾದ

    ಬೆಳಗ್ಗೆ 5 ಗಂಟೆಗೆ ಕರೆ ಮಾಡಿ ಪೊಲೀಸ್ ಅತಿಥಿಯಾದ

    ನೊಯ್ಡಾ: ತನ್ನ ಪತ್ನಿಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆಂದು ಸುಳ್ಳು ದೂರು ನೀಡಿದ ವ್ಯಕ್ತಿಯೊಬ್ಬ ಪೊಲೀಸ್ ಅತಿಥಿಯಾಗಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

    ನೊಯ್ಡಾ ಪೇಸ್ 2 ಪೊಲೀಸ್ ಠಾಣೆ ವ್ಯಾಪ್ತಿಯ ಇಲಾಹಾಬಸ್ ನಿವಾಸಿ 30 ವರ್ಷದ ನರೇಶ್ ಸಿಂಗ್ ಬಂಧಿತ ವ್ಯಕ್ತಿ. ಸುಳ್ಳು ದೂರು ನೀಡಿದ ಪ್ರಕರಣದ ಮೇಲೆ ಪೊಲೀಸರು ನರೇಶ್ ನನ್ನು ಬಂಧಿಸಿದ್ದಾರೆ.

    ವ್ಯಕ್ತಿ ಬುಧವಾರ ಬೆಳಗ್ಗೆ 5 ಗಂಟೆಗೆ ಪೊಲೀಸ್ ಕಂಟ್ರೋಲ್ ರೂಂ 100ಕ್ಕೆ ಕರೆ ಮಾಡಿ, ನನ್ನ ಪತ್ನಿಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ ಎಂದು ದೂರು ನೀಡಿದ್ದಾನೆ. ಪೊಲೀಸ್ ತಂಡ ತಕ್ಷಣವೇ ಗ್ರಾಮದ ಆತನ ಮನೆಗೆ ಧಾವಿಸಿದ್ದು, ಮನೆಯಲ್ಲಿ ಎಲ್ಲವೂ ಸರಿಯಾಗಿಯೇ ಇದೆ. ಆತನ ಪತ್ನಿಯೂ ಸಹ ಮನೆಯಲ್ಲಿಯೇ ಇದ್ದು, ಚೆನ್ನಾಗಿಯೇ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ನರೇಶ್ ಸಿಂಗ್‍ನನ್ನು ಐಪಿಸಿ ಸೆಕ್ಷನ್ 107 (ಪಿತೂರಿ ನಡೆಸಿರುವುದು), 116 (ಅಪರಾಧ ನಡೆಯದಿದ್ದರೂ, ಅಪರಾಧಕ್ಕೆ ಪ್ರಚೋದಿಸಿರುವುದು) ಹಾಗೂ ಸೆಕ್ಷನ್ 151 ಕ್ರಿಮಿನಲ್ ಪ್ರೊಸಿಜರ್ ಕೋಡ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.