Tag: ಕಂಟೈನ್ಮೆಂಟ್

  • ಕೊರೊನಾ ಕಂಟಕ – ಶಿವಮೊಗ್ಗದ ಕಂಟೈನ್ಮೆಂಟ್ ವಲಯದಲ್ಲಿ ತೀವ್ರ ಕಟ್ಟೆಚ್ಚರ

    ಕೊರೊನಾ ಕಂಟಕ – ಶಿವಮೊಗ್ಗದ ಕಂಟೈನ್ಮೆಂಟ್ ವಲಯದಲ್ಲಿ ತೀವ್ರ ಕಟ್ಟೆಚ್ಚರ

    ಶಿವಮೊಗ್ಗ: ಜಿಲ್ಲೆಯಲ್ಲಿ ಈಗಾಗಲೇ ಐದು ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗಿದ್ದು, ಈ ಪ್ರದೇಶದಲ್ಲಿ ಯಾರೂ ಮನೆಯಿಂದ ಹೊರ ಬಾರದಂತೆ ಸೂಕ್ತ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕೆ.ಬಿ ಶಿವಕುಮಾರ್ ಅವರು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು. ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಕಂಟೈನ್ಮೆಂಟ್ ಪ್ರದೇಶದಿಂದ ಮೆಡಿಕಲ್ ಎಮರ್ಜೆನ್ಸಿ ಪ್ರಕರಣಗಳನ್ನು ಮಾತ್ರ ಹೊರಗೆ ಬಿಡಬೇಕು. ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ತಕ್ಷಣ ಕಂಟೈನ್ಮೆಂಟ್ ಪ್ರದೇಶ ಗುರುತಿಸಿ ಬಂದೋಬಸ್ತು ಏರ್ಪಡಿಸಬೇಕು. ಕಂಟೈನ್ಮೆಂಟ್ ಪ್ರದೇಶದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು. ಈ ವಲಯದಲ್ಲಿ 2 ಆಶಾ ಕಾರ್ಯಕರ್ತೆಯರು, 2 ಪೊಲೀಸ್ ಸಿಬ್ಬಂದಿ ಬಿಟ್ಟರೆ ಬೇರೆ ಯಾವುದೇ ಸರ್ಕಾರಿ ಅಧಿಕಾರಿಗಳು ಅಡ್ಡಾಡಬಾರದು. ಅದೇ ರೀತಿ ಕ್ವಾರಂಟೈನ್ ಕೇಂದ್ರಗಳ ಒಳಗೆ ನಿಗದಿಪಡಿಸಿರುವ ಸಿಬ್ಬಂದಿ ಬಿಟ್ಟರೆ ಬೇರೆ ಯಾರಿಗೂ ಪ್ರವೇಶವಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.

    ಕಂಟೈನ್ಮೆಂಟ್ ಪ್ರದೇಶದಲ್ಲಿ ಪ್ರತಿದಿನ ಆರೋಗ್ಯ ಸಮೀಕ್ಷೆ ನಡೆಸಬೇಕು. ರೋಗ ಲಕ್ಷಣಗಳು ಕಂಡು ಬಂದವರ ಗಂಟಲು ದ್ರವವನ್ನು ಸಂಗ್ರಹಿಸಿ ಕಳುಹಿಸಬೇಕು ಎಂದರು. ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲು ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ತಂಡವನ್ನು ರಚಿಸಲಾಗಿದ್ದು, ಈ ತಂಡಕ್ಕೆ ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆ ಸಮರ್ಪಕ ಮಾಹಿತಿಯನ್ನು ತಕ್ಷಣ ಒದಗಿಸಬೇಕು. ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿದ ತಕ್ಷಣ ಅವರ ಗಂಟಲು ದ್ರವ ಸಂಗ್ರಹಿಸಿ ತಪಾಸಣೆಗೆ ಕಳುಹಿಸಬೇಕು. 14 ದಿನ ಕ್ವಾರಂಟೈನ್ ಪೂರ್ಣಗೊಳಿಸಿರುವವರನ್ನು ಹೋಂ ಕ್ವಾರೆಂಟೈನ್‍ಗೆ ಕಳುಹಿಸಬೇಕು ಎಂದು ಹೇಳಿದರು.

    ಇನ್ನು ಜನರು ಹೆಚ್ಚು ಸೇರುವ ಸ್ಥಳಗಳನ್ನು ಈಗಾಗಲೇ ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದ್ದು, ಅಂತಹ ಕಡೆಗಳಲ್ಲಿ ಪ್ರತಿದಿನ ರಾತ್ರಿ ಕಡ್ಡಾಯವಾಗಿ ಸೋಂಕು ನಾಶಕ ಸಿಂಪಡಣೆ ಮಾಡಬೇಕು ಎಂದರು. ಗುರುವಾರ ಒಂದೇ ದಿನ ಶಿಮ್ಸ್ ಪ್ರಯೋಗಾಲಯದಲ್ಲಿ 781 ಗಂಟಲ ದ್ರವ ಸ್ಯಾಂಪಲ್ ಫಲಿತಾಂಶ ಬಂದಿದ್ದು, ಪ್ರಯೋಗಾಲಯದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ, ಶಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ಬೆಂಗಳೂರಿನಲ್ಲಿ 22ಕ್ಕೆ ಇಳಿಕೆಯಾದ ಕಂಟೈನ್‍ಮೆಂಟ್ ಝೋನ್- ಕೆಂಪು ಔಟ್ ನೇರಳೆ ಇನ್

    ಬೆಂಗಳೂರಿನಲ್ಲಿ 22ಕ್ಕೆ ಇಳಿಕೆಯಾದ ಕಂಟೈನ್‍ಮೆಂಟ್ ಝೋನ್- ಕೆಂಪು ಔಟ್ ನೇರಳೆ ಇನ್

    -ನಿವೃತ್ತಿ ಹೊಂದಿರೋ ಆರೋಗ್ಯ ಇಲಾಖೆ ಸಿಬ್ಬಂದಿಯ ಸೇವಾವಧಿ ಮುಂದುವರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಂಟೈನ್‍ಮೆಂಟ್ ಝೋನ್ ಗಳ ಸಂಖ್ಯೆ 25ರಿಂದ 22ಕ್ಕೆ ಇಳಿಕೆಯಾಗಿದೆ. ಕೆಂಪು ವಲಯವನ್ನ ತೆಗೆದು ನೇರಳೆ ಮತ್ತು ಕಡು ನೇರಳೆ ಎರಡು ವಲಯಗಳನ್ನ ಬಿಬಿಎಂಪಿ ವಿಂಗಡನೆ ಮಾಡಿದೆ. ಹೊರಮಾವು, ಗುರಪ್ಪನ ಪಾಳ್ಯ ಮತ್ತು ಜೆಪಿ ನಗರವನ್ನು ಕಂಟೈನ್‍ಮೆಂಟ್ ಝೋನ್ ನಿಂದ ಕೈ ಬಿಡಲಾಗಿದೆ.

    ಎಲ್ಲ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಒಂದೇ ಪರಿಸ್ಥಿತಿ ಇಲ್ಲ. ಕಂಟೈನ್‍ಮೆಂಟ್ ಝೋನ್‍ಗಳನ್ನು ಬಿಬಿಎಂಪಿ ನೇರಳೆ ಮತ್ತು ಕಡು ನೇರಳೆ ಎಂದು ವಿಂಗಡನೆ ಮಾಡಿಕೊಂಡಿದೆ. ಇದನ್ನು ಸೋಂಕಿನ ತೀವ್ರತೆಯ ಆಧಾರದ ಮೇಲೆ ವಿಂಗಡನೆ ಮಾಡಲಾಗಿದೆ.

    ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ನಿವೃತ್ತಿ ಹೊಂದಿರೋ ಆರೋಗ್ಯ ಇಲಾಖೆ ವೈದ್ಯಕೀಯ, ಅರೆ ವೈದ್ಯಕೀಯ, ಕ್ಲಿನಿಕಲ್, ನಾನ್ ಕ್ಲಿನಿಕಲ್ ಸಿಬ್ಬಂದಿ, ನೌಕರರ ಸೇವಾ ಅವಧಿಯನ್ನು ಸರ್ಕಾರ ಮುಂದುವರಿಕೆ ಮಾಡಿದೆ. ಇವರೆಲ್ಲರ ಸೇವಾವಧಿ ಜೂನ್ 30ಕ್ಕೆ ಅಂತ್ಯವಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

  • ಬೆಂಗ್ಳೂರಲ್ಲಿ 19 ಏರಿಯಾ ಕಂಟೈನ್ಮೆಂಟ್- ಮನೆಯಿಂದ ಹೊರಬರುವಂತಿಲ್ಲ, ವಾಹನಗಳು ಓಡಾಡುವಂತಿಲ್ಲ

    ಬೆಂಗ್ಳೂರಲ್ಲಿ 19 ಏರಿಯಾ ಕಂಟೈನ್ಮೆಂಟ್- ಮನೆಯಿಂದ ಹೊರಬರುವಂತಿಲ್ಲ, ವಾಹನಗಳು ಓಡಾಡುವಂತಿಲ್ಲ

    – ಕಂಟೈನ್‍ಮೆಂಟ್ ಉಲ್ಲಂಘಿಸಿದ್ರೆ ಜೈಲೂಟ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್ ಡೌನ್, ಸೀಲ್ ಡೌನ್ ಬೆನ್ನಲ್ಲೇ ಈಗ ಕಂಟೈನ್ಮೆಂಟ್ ವಾರ್ಡ್ ಬಂದಿದೆ. ಕೋವಿಂಡ್ 19 ಕಾಡುತ್ತಿರುವ ಏರಿಯಾಗಳಲ್ಲಿ ನಿಯಂತ್ರಿತ ವಲಯ ಎಂದು ಘೋಷಿಸಲಾಗಿದೆ. ಇಂದಿನಿಂದ ಪಕ್ಕಾ ನಿಯಮಗಳನ್ನು ಪಾಲಿಸಲೇಬೇಕು. ರಾಜ್ಯ ಸರ್ಕಾರ ಈ ಏರಿಯಾದಲ್ಲೇ ಹೀಗೆ ಇರಬೇಕು ಎಂದು ಆದೇಶಿಸಿದೆ.

    19 ವಾರ್ಡ್ ಸಂಪೂರ್ಣ ಕಂಟೈನ್ಮೆಂಟ್ ಝೋನ್ ಎಂದು ಗುರುತಿಲಾಗಿದೆ. ದಕ್ಷಿಣ ವಲಯದ ಜೆ.ಪಿ.ನಗರ, ಗುರಪ್ಪನಪಾಳ್ಯ, ಶಾಕಾಂಬರಿನಗರ, ಹೊಸಹಳ್ಳಿ, ಬಾಪೂಜಿನಗರ, ಕರಿಸಂದ್ರ, ಸುಧಾಮನಗರ, ಪೂರ್ವ ವಲಯ ರಾಮಸ್ವಾಮಿ ಪಾಳ್ಯ, ಪುಲಕೇಶಿನಗರ, ಮಾರುತಿಸೇವಾನಗರ, ರಾಧಾಕೃಷ್ಣ ದೇವಸ್ಥಾನ ವಾರ್ಡ್, ಪಶ್ವಿಮ ವಲಯ ಶಿವನಗರ, ಕೆ.ಆರ್.ಮಾರುಕಟ್ಟೆ, ಪಾದರಾಯನಪುರ, ಆರ್.ಆರ್.ನಗರ ವಲಯದ ಆರ್.ಆರ್.ನಗರ ವಾರ್ಡ್, ಮಹದೇವಪುರವಲಯದ ಹೂಡಿ, ಹೊರಮಾವು ವಾರ್ಡ್, ಸಿಂಗಸಂದ್ರ, ಬೊಮ್ಮನಹಳ್ಳಿಯ ಬೇಗೂರು ವಾರ್ಡ್‍ಗಳನ್ನು ಕಂಟೈನ್ಮೆಂಟ್ ವಾರ್ಡ್ ಎಂದು ಘೋಷಣೆ ಮಾಡಲಾಗಿದೆ.

    ಕಂಟೈನ್ಮೆಂಟ್ ಏರಿಯಾಗಳಲ್ಲಿ ಏನಿರುತ್ತೆ-ಏನಿರಲ್ಲ..?
    * ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ತಲುಪುತ್ತದೆ
    * ಮೆಡಿಕಲ್ ಶಾಪ್ ,ಆಸ್ಪತ್ರೆ ,ತರಕಾರಿ ಮಳಿಗೆಗಳು ಮಾತ್ರ ಓಪನ್
    * ಸುಖಾ ಸುಮ್ಮನೆ ಓಡಾಡುವಂತಿಲ್ಲ
    * ವಾಕಿಂಗ್ ,ಜಾಕಿಂಗ್ ಕಾರಣ ನೀಡಿ ಹೊರಬರುವಂತಿಲ್ಲ
    * ಪೊಲೀಸರ ಸರ್ಪಗಾವಲು ದಾಟುವಂತಿಲ್ಲ
    * ಕೊವಿಂಡ್ ಬಂದ್ ಅಪಾಟ್ರ್ಮೆಂಟ್ ,ರಸ್ತೆಗಳು ಸೀಲ್ ಡೌನ್ ಪಕ್ಕಾ

    ಕಂಟೈನ್ಮೆಂಟ್ ನಿಯಮಗಳೇನು?
    ಕೊರೊನಾ ರೋಗಿ ವಾಸದ ಮನೆಯ 100 ಮೀಟರ್ ಸುತ್ತಮುತ್ತಲ ಪ್ರದೇಶವನ್ನು ಕಂಟೈನ್ಮೆಂಟ್‍ಝೋನ್ ಎಂದು ಕರೆಯಲಾಗುತ್ತದೆ. ಅಪಾರ್ಟ್‍ಮೆಂಟ್‍ನಲ್ಲಿ ಕೊರೊನಾ ಕೇಸ್ ಪತ್ತೆಯಾದ್ರೆ ಆ ಅಪಾರ್ಟ್‍ಮೆಂಟ್ ಬ್ಲಾಕ್ ಮಾಡಲಾಗುತ್ತದೆ. ಈ ಏರಿಯಾಗಳಿಗೆ ಯಾರೂ ಹೋಗುವಂತಿಲ್ಲ, ಯಾರೂ ಹೊರ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತದೆ, ದಿನಸಿ ಅಂಗಡಿಗಳನ್ನು ತೆರೆಯುವಂತಿಲ್ಲ. ಹೈರಿಸ್ಕ್ ರೋಗಿಗಳನ್ನು ಬೇರೆ ಕಡೆಗಳಿಗೆ ಕರೆದೊಯ್ದು ಕ್ವಾರಂಟೈನ್ ಮಾಡಲಾಗುತ್ತದೆ. ಉಳಿದವರಿಗೆ ಹೋಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗುತ್ತದೆ.

    ಕಂಟೈನ್‍ಮೆಂಟ್ ಝೋನ್‍ನಿಂದ 5 ಕಿಲೋ ಮೀಟರ್ ಸುತ್ತಮುತ್ತಲ ಪ್ರದೇಶವನ್ನು ಬಫರ್ ಝೋನ್ ಎಂದು ಕರೆಯಲಾಗುತ್ತಿದ್ದು, 1 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಮನೆ ಮನೆಗೂ ತೆರಳಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.

    ಒಟ್ಟಿನಲ್ಲಿ ಕಂದಾಯ ಇಲಾಖೆ ಅಗತ್ಯ ವಸ್ತುಗಳ ಪೂರೈಕೆ, ಬಿಬಿಎಂಪಿ ಸ್ವಚ್ಚತೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಜವಬ್ದಾರಿ ಒಪ್ಪಿದೆ. ಇದೆಲ್ಲ ಎಷ್ಟರಮಟ್ಟಿಗೆ ವರ್ಕ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

  • ಹೊರಗೆ ಬಿಡುವಂತೆ ಮುಗಿಬಿದ್ದ ಕಂಟೈನ್ಮೆಂಟ್ ಪ್ರದೇಶದ ಜನರು

    ಹೊರಗೆ ಬಿಡುವಂತೆ ಮುಗಿಬಿದ್ದ ಕಂಟೈನ್ಮೆಂಟ್ ಪ್ರದೇಶದ ಜನರು

    ಗದಗ: ಕೊರೊನಾ ವೈರಸ್‍ಗೆ ನಗರದಲ್ಲಿ ರೋಗಿ ನಂಬರ್ 166ರ 80 ವರ್ಷದ ವೃದ್ಧ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಗರದ ರಂಗನವಾಡಿ ಗಲ್ಲಿಯನ್ನ ಕಂಟೈನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.

    ಕಳೆದ ಮೂರು ದಿನಗಳಿಂದ ಇಲ್ಲಿನ ಜನರನ್ನ ಹೊರ ಬರದಂತೆ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗಿದ್ದು, ಬಿಗಿ ಬಂದೋಬಸ್ತ್‌ನಿಂದ ಜನರು ಹೊರಬರದಂತೆ ಹಾಗೂ ಒಳಹೋಗದಂತೆ ಮಾಡಲಾಗುತ್ತಿದೆ. ಇದರಿಂದ ರಂಗನವಾಡಿ ಕಂಟೈನ್ಮೆಂಟ್ ಪ್ರದೇಶ ಜನರು ನಮ್ಮನ್ನ ಹೊರಬಿಡುವಂತೆ ಗಲಾಟೆಗೆ ಮಾಡಿದ್ದಾರೆ.

    ನಮಗೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಆಹಾರ ಪದಾರ್ಥ, ಹಾಲು, ತರಕಾರಿ, ಮೆಡಿಷನ್ ಇದ್ಯಾವುದು ಸಿಗುತ್ತಿಲ್ಲ. ಅಗತ್ಯ ವಸ್ತುಗಳನ್ನು ತರಲು ಹೋಗಲು ಪೊಲೀಸರು ಬಿಡುತ್ತಿಲ್ಲ. ಜೊತೆಗೆ ಈ ಏರಿಯಾದಲ್ಲಿ ಶೌಚಾಲಯಗಳಿಲ್ಲ. ಇದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದೆ. ನಮ್ಮನ್ನ ಹೊರಬಿಡಿ ಅಂತ ಮಹಿಳೆಯರು, ಮಕ್ಕಳು, ಯುವಕರು ಗಲಾಟೆ ಮಾಡಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ನಂತರ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಿಷೇಧಿತ ಪ್ರದೇಶದ ಜನರನ್ನು ಯಾವುದೇ ಕಾರಣಕ್ಕೂ ಹೊರಬಿಡಲ್ಲ. ಶೌಚಾಲಯ ಸಮಸ್ಯೆ ಆದರೆ ನಗರಸಭೆಯಿಂದ ಮೊಬೈಲ್ ಟಾಯ್ಲೆಟ್ ಮಾಡುತ್ತೀವಿ. ಹಾಲು, ಆಹಾರ, ದಿನಸಿ ಹಾಗೂ ಕಿರಾಣಿ ಸಾಮಗ್ರಿ ಮನೆಗೆ ತಲುಪಿಸುತ್ತೇವೆ. ಲಾಕ್‍ಡೌನ್ ಮುಗಿಯುವವರೆಗೆ ನಿಷೇಧಿತ ಪ್ರದೇಶದ ಜನರನ್ನು ಹೊರಬಿಡುವುದಿಲ್ಲ ಎಂದು ಹೇಳಿದರು.

    ಕಂಟೈನ್ಮೆಂಟ್ ಪ್ರದೇಶದ ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಡಿಸಿ ಭರವಸೆ ನೀಡಿದ್ದಾರೆ. ಈ ವೇಳೆ ಗದಗ ಜಿಲ್ಲಾಧಿಕಾರಿ, ಡಿವೈಎಸ್‍ಪಿ ಪ್ರಹ್ಲಾದ್ ಸೇರಿದಂತೆ ಎಲ್ಲ ಅಧಿಕಾರಿಗಳು ಸ್ಥಳೀಯರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಲಾಕ್‍ಡೌನ್ ಮುಗಿಯುವವರೆಗೆ ಹೊರಬರಬೇಡಿ. ನಿಮಗೆ ಬೇಕಾಗುವ ಸೌಲಭ್ಯಗಳನ್ನ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.