Tag: ಕಂಚಿನ ಪ್ರತಿಮೆ

  • ನ.19 ರಂದು ಮಂಗಳೂರಿನಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ

    ನ.19 ರಂದು ಮಂಗಳೂರಿನಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ

    ಮಂಗಳೂರು: ಬ್ರಿಟಿಷರ ವಿರುದ್ಧ ರೈತ ಸೇನೆ ಕಟ್ಟಿ, ಸ್ಮರಣೀಯ ಹೋರಾಟ ನಡೆಸಿದ ಕೆದಂಬಾಡಿ ರಾಮಯ್ಯ ಗೌಡರ(Kedambadi Ramaiah Gowda) ಕಂಚಿನ ಪ್ರತಿಮೆ ನ.19ರ ಶನಿವಾರ ಮುಖ್ಯಮಂತ್ರಿಗಳಿಂದ ಅದ್ದೂರಿಯಾಗಿ ಲೋಕಾರ್ಪಣೆಯಾಗಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್(Vedavyas Kamath) ಅವರು ತಿಳಿಸಿದರು.

    ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ವೇದವ್ಯಾಸ ಕಾಮತ್ ಮಾತನಾಡಿದರು.  ಇದನ್ನೂ ಓದಿ: ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಜನಸಾಮಾನ್ಯರ ಮತ್ತು ರೈತರ ಮೇಲೆ ಬ್ರಿಟಿಷರ ಕ್ರೌರ್ಯ ಹಾಗೂ ದಬ್ಬಾಳಿಕೆಯನ್ನು ಸಹಿಸದೇ 1837ರಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಬ್ರಿಟಿಷರ ವಿರುದ್ಧ ರೈತ ಸೇನೆ ಕಟ್ಟಿ ರಣ ಕಹಳೆ ಮೊಳಗಿಸಿದ್ದರು. ಆ ಪರಿಣಾಮ ಬೆಳ್ಳಾರೆ, ಪುತ್ತೂರು, ಬಂಟ್ವಾಳ, ಮಂಗಳೂರು ಸೇರಿದಂತೆ ಕೆದಂಬಾಡಿ ರಾಮಯ್ಯ ಗೌಡರ ಮನೆಯಿಂದ ಹೊರಟ ಸೈನ್ಯ ಸುಮಾರು 90 ಕಿ.ಮೀ.ದೂರದ ಪ್ರದೇಶದಲ್ಲಿ ರಾಮಯ್ಯ ಗೌಡರ ನೇತೃತ್ವದಲ್ಲಿ 13 ದಿನಗಳ ಕಾಲ ಸ್ಥಾಪಿತ ಸರಕಾರವನ್ನು ಮುನ್ನಡೆಸಲಾಯಿತು. ಇದು ಭಾರತದ ನೆಲದಲ್ಲಿ ಬ್ರಿಟಿಷರಿಗೆ ಒದಗಿದ ಪ್ರಥಮ ಸೋಲು ಹಾಗೂ ಭಾರತದ ಸಾಮಾನ್ಯ ಜನರಿಗೆ ಬ್ರಿಟಿಷರ ವಿರುದ್ಧ ದೊರಕಿದ ಪ್ರಪ್ರಥಮ ಜಯ.

    ಈ ಹೋರಾಟದಲ್ಲಿ ಹುತಾತ್ಮರಾದ ಅವರು ಹೋರಾಟವನ್ನು ಶಾಶ್ವತವಾಗಿ ಭಾರತದ ಇತಿಹಾಸ ಪುಟಗಳಲ್ಲಿ ದಾಖಲಿಸಿ ಸ್ಮಾರಕ ನಿರ್ಮಾಣದ ಮೂಲಕ ಅವರ ಹೆಸರನ್ನು ಈ ನಾಡಿನಲ್ಲಿ ಶಾಶ್ವತವಾಗಿ ಉಳಿಸಲು ಮಂಗಳೂರಿನ ಚಾರಿತ್ರಿಕ ಸ್ಥಳವಾದ ಬಾವುಟಗುಡ್ಡೆಯಲ್ಲಿ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ನ.19ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿಯವರು ಅದ್ದೂರಿಯಾಗಿ ಲೋಕಾರ್ಪಣೆ ಮಾಡಲಿದ್ದಾರೆ. ನಂತರ ನೆಹರೂ ಮೈದಾನದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಅಂದಾಜು 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಅಲ್ಲಿ ವಿವಿಧ ಇಲಾಖೆಗಳ ವತಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಹ ನೆರವೇರಿಸಲಾಗುವುದು. ಒಟ್ಟಾರೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.

    ಇದಕ್ಕೆ ಸಂಬಂಧಿಸಿದಂತೆ ಸುಸಜ್ಜಿತ ವೇದಿಕೆ ನಿರ್ಮಾಣ, ಎಲ್ ಇ ಡಿ ಅಳವಡಿಕೆ, ಕುರ್ಚಿಗಳು, ಅತಿಥಿಗಳಿಗೆ ಉಟೋಪಚಾರ, ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕೊಡಗು ಸೇರಿದಂತೆ ವಿವಿಧೆಡೆಯಿಂದ ಬರುವ ಕೆದಂಬಾಡಿ ರಾಮಯ್ಯ ಗೌಡರ ಅಭಿಮಾನಿಗಳನ್ನು ಕರೆತರಲು ಅಗತ್ಯ ಬಸ್ ಗಳ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಕಾರ್ಯಕ್ರಮದ ಆಯೋಜನೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಮುಖ ಪಾತ್ರ ವಹಿಸಬೇಕಾಗಿದ್ದು, ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರುಗಳು ದಕ್ಷಿಣ ಕನ್ನಡ ಹಾಗೂ ಕೊಡಗಿನ ಶಾಸಕರು ಆಗಮಿಸಲಿದ್ದಾರೆ ಎಂದು ಹೇಳಿದರು.

    ಅಂದು ವಿವಿಧಡೆಯಿಂದ ಮಂಗಳೂರಿಗೆ ಬಸ್ಸುಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು, ಸಂಚಾರಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಹಾಗೂ ಸೂಕ್ತ ಭದ್ರತೆ ಒದಗಿಸುವಂತೆ ಟ್ರಾಫಿಕ್ ವಿಭಾಗದ ಡಿಸಿಪಿ ದಿನೇಶ್ ಅವರಿಗೆ ಶಾಸಕರು ಸೂಚಿಸಿದರು.

    ಜಿಲ್ಲೆಯ ಸಾರ್ವಜನಿಕರು ಹಾಗೂ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಈ ಕಾರ್ಯಕ್ರಮದಲ್ಲಿ ಸರ್ವ ಜನಾಂಗದವರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

    ಮಂಗಳೂರು ಮೇಯರ್ ಜಯಾನಂದ ಅಂಜನ್, ಉಪಮೇಯ ಪೂರ್ಣಿಮಾ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ದಿನೇಶ್ ವೇದಿಕೆಯಲ್ಲಿದ್ದರು.

    ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರುಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಸೇರಿದಂತೆ ಆನಂದ್, ಸುರೇಶ್ ಬೈಲು, ಶರಣ್, ಭಾಸ್ಕರ್ ದೇವಪ್ಪ ಹಾಗೂ ಇತರೆ ಪದಾಧಿಕಾರಿಗಳು ಸಭೆಯಲ್ಲಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ರೆಬಲ್ ಸ್ಟಾರ್ ಅಂಬರೀಶ್ ಅವರ 14 ಅಡಿ ಕಂಚಿನ ಪ್ರತಿಮೆಯನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬರೀಶ್ ಸಮಾಧಿ ಎದುರು ತಲೆಯತ್ತಲಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂಬರೀಶ್ ಅವರ ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡಿ, 12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸ್ಮಾರಕಕ್ಕೆ ಚಾಲನೆ ನೀಡಿದ್ದಾರೆ. ಮುಂದುವರೆಕೆಯಾಗಿ ಈ ಸ್ಥಳದಲ್ಲಿಯೇ ಅಂಬರೀಶ್ ಕಂಚಿನ ಪ್ರತಿಮೆಯಾಗಲಿದ್ದಾರೆ. ಇದನ್ನೂ ಓದಿ : ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು

    ಪಕ್ಕದಲ್ಲಿಯೇ ಡಾ.ರಾಜ್ ಕುಮಾರ್ ಅವರ ಸ್ಮಾರಕ ನಿರ್ಮಾಣವಾಗಿದೆ. ಒಂದಷ್ಟು ಅದೇ ಮಾದರಿಯನ್ನು ಅನುಸರಿಸಿ, ಮತ್ತಷ್ಟು ವಿಭಿನ್ನವಾಗಿ ಸ್ಮಾರಕ ಮಾಡುವ ಯೋಜನೆ ಸರಕಾರದ್ದು. ಕಂಚಿನ ಪ್ರತಿಮೆಗೆ ಹೊಂದಿಕೊಂಡಂತೆ ಕಾರಂಜಿ, ವಸ್ತು ಸಂಗ್ರಹಾಲಯ, ಬಯಲು ರಂಗಮಂದಿರ, ಅಂಬರೀಶ್ ಅವರ ಸಿನಿಮಾಗಳ ಭಿತ್ತಿಚಿತ್ರಗಳು, ಆಡಿಯೋ, ವಿಡಿಯೋ ಪ್ರಸಾರ ಸೇರಿದಂತೆ ಅಂಬರೀಶ್ ಅವರ ಹೆಸರಿನಲ್ಲಿ ಹತ್ತು ಹಲವು ಯೋಜನೆಗಳನ್ನು ಡಾ.ಅಂಬರೀಶ್ ಪ್ರತಿಷ್ಠಾನ ಹಾಗೂ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಡೆಯಲಿವೆ.

  • ಕೊಡಗಿನ ವೀರಯೋಧ ಅಜ್ಜಮಾಡ ದೇವಯ್ಯರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

    ಕೊಡಗಿನ ವೀರಯೋಧ ಅಜ್ಜಮಾಡ ದೇವಯ್ಯರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

    ಮಡಿಕೇರಿ: ಭಾರತ ಪಾಕ್ ನಡುವೆ 1965ರಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿ ವೀರಮರಣವನ್ನಪ್ಪಿದ ಕೊಡಗಿನ ವೀರಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಆರು ಮೂಕ್ಕಾಲು ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದ್ದು, ನಗರದ ದೇವಯ್ಯ ವೃತ್ತದಲ್ಲಿ ಇಂದು ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

    ಅಜ್ಜಮಾಡ ಕುಟುಂಬಸ್ಥರು, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮೆಮೋರಿಯಲ್ ಟ್ರಸ್ಟ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಮತ್ತು ಕೊಡವ ಮಕ್ಕಡ ಕೂಟ ಆಶ್ರಯದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಲಾಯಿತು. ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಪ್ರತಿಮೆ ತಲೆಎತ್ತಲಿರುವ ಜಾಗದಲ್ಲಿ ಇರುವ ಹೈ ಮಾಸ್ಕ್ ದೀಪವನ್ನು ನಾಳೆಯೇ ತೆರವುಗೊಳಿಸಬೇಕು, ನಾಳೆಯಿಂದಲೇ ಇಲ್ಲಿ ಪ್ರತಿಮೆ ನಿರ್ಮಾಣ ಸಂಬಂಧ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮೊಮೇರಿಯಲ್ ಟ್ರಸ್ಟ್ ನ ಅಜ್ಜಮಾಡ ಕಟ್ಟಿ ಮಂದಯ್ಯ, ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಮಾಜಿ ಸೈನಿಕರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

    ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪತ್ರಿಮೆ ಈಗಾಗಲೇ ಸಿದ್ಧವಾಗಿದ್ದು, ಅಜ್ಜಮಾಡ ಐನ್‍ಮನೆಯಲ್ಲಿದೆ. ಕಂಚಿನ ಪ್ರತಿಮೆಗೆ 20 ಲಕ್ಷ ರೂ. ವೆಚ್ಚವಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ಪುತ್ಥಳಿಯನ್ನು ಸಿದ್ಧಗೊಳಿಸಲಾಗಿದೆ.

    ಯಾರಿದು ಅಜ್ಜಮಾಡ ದೇವಯ್ಯ?
    ದೇವಯ್ಯ ವಿರಾಜಪೇಟೆ ತಾಲೂಕಿನ ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಅಜ್ಜಮಾಡ ಕುಟುಂಬದ ಬೋಪಯ್ಯ ಹಾಗೂ ನೀಲಮ್ಮ ದಂಪತಿ ಪುತ್ರ. 1932 ಡಿ. 24ರಂದು ದೇವಯ್ಯ ಅವರು ಜನಿಸಿದರು. ದೇವಯ್ಯ ಅವರು 1954 ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಪೈಲಟ್ ಆಗಿ ನೇಮಕಗೊಂಡರು. 1965ರಲ್ಲಿ ಪಾಕಿಸ್ತಾನ ಭಾರತದ ಯುದ್ಧದಲ್ಲಿ ಅಜ್ಜಮಾಡ ದೇವಯ್ಯ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿ ಹಿಂತಿರುಗುತ್ತಿದ್ದಾಗ ಪಾಕಿಸ್ತಾನದ ಯುದ್ಧ ವಿಮಾನ ಹಿಂಬಾಲಿಸಿ ಬರುತಿತ್ತು. ದೇವಯ್ಯ ಅವರು ಈ ಸಂದರ್ಭ ಪಾಕ್ ಸೈನಿಕರಿಂದ ತಪ್ಪಿಸಿಕೊಳ್ಳುವ ಎಲ್ಲ ಅವಕಾಶವೂ ಇತ್ತು. ಆದರೂ ಅವರು ಭಾರತದ ಉಳಿದ ವಿಮಾನಗಳ ರಕ್ಷಣೆಗಾಗಿ ಪಾಕ್ ವಿಮಾನದೊಂದಿಗೆ ಕಾದಾಟಕ್ಕೆ ನಿಂತು, ತಮ್ಮ ದುರ್ಬಲ ವಿಮಾನದಲ್ಲಿ ಕೆಚ್ಚೆದೆಯಿಂದ ನೇರವಾಗಿ ಹೋರಾಡಿ, ಶತ್ರುವಿನ ವಿಮಾನವನ್ನು ಹೊಡೆದುರುಳಿಸಿ ತಾವು ಕೂಡ ಹುತಾತ್ಮರಾದರು.

    1965ರಲ್ಲಿ ದೇವಯ್ಯ ಅವರ ಫೈಟರ್ ವಿಮಾನ ಕಣ್ಮರೆಯಾದ ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸೇನೆ ಅವರನ್ನು ನಾಪತ್ತೆಯಾದವರ ಪಟ್ಟಿಗೆ ಸೇರಿಸಿತ್ತು. ಆದರೆ 1979ರಲ್ಲಿ ಬ್ರಿಟನ್ ಲೇಖಕರೊಬ್ಬರು ಬರೆದ ಪುಸ್ತಕದಲ್ಲಿ ದೇವಯ್ಯ ತನ್ನ ಪ್ರಾಣ ಹಂಗನ್ನು ತೊರೆದು ದೇಶದ ರಕ್ಷಣೆಗೆ ಮುಂದಾದ ಸಂದರ್ಭವನ್ನು ಹೇಳಿದ್ದರು. ನಂತರ ಸರ್ಕಾರ ದೇವಯ್ಯ ಅವರನ್ನು ಹುತಾತ್ಮರೆಂದು ಪರಿಗಣಿಸಿ 1988ರಲ್ಲಿ ಮರಣೋತ್ತರ ಮಹಾವೀರ್ ಪ್ರಶಸ್ತಿ ನೀಡಿ ಗೌರವಿಸಿತ್ತು.

  • ಏಕತಾ ಪ್ರತಿಮೆಯ ವಿಶೇಷತೆ ಏನು? ಎಷ್ಟು ಬಲಶಾಲಿಯಾಗಿದೆ? ಖರ್ಚು ಎಷ್ಟಾಗಿದೆ? – ಇಲ್ಲಿದೆ ಪೂರ್ಣ ವಿವರ

    ಏಕತಾ ಪ್ರತಿಮೆಯ ವಿಶೇಷತೆ ಏನು? ಎಷ್ಟು ಬಲಶಾಲಿಯಾಗಿದೆ? ಖರ್ಚು ಎಷ್ಟಾಗಿದೆ? – ಇಲ್ಲಿದೆ ಪೂರ್ಣ ವಿವರ

    2018 ಅಕ್ಟೋಬರ್ 31 ಭಾರತ ಇತಿಹಾಸದಲ್ಲಿ ಐತಿಹಾಸಿಕ ದಿನ. ದೇಶದ ಏಕತೆಗೆ ಶ್ರಮಿಸಿದ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ ಅನಾವರಣಗೊಳ್ಳಲಿದೆ. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಲಿದೆ. ವಲ್ಲಭಭಾಯ್ ಅವರ ಪೂರ್ಣ ಪ್ರತಿಮೆ ಇದಾಗಿದ್ದು ಧೋತಿ ಮತ್ತು ಜುಬ್ಬ ತೊಟ್ಟ ಸ್ಯಾಂಡಲ್ ಚಪ್ಪಲಿ ಧರಿಸಿರುವ ಪಟೇಲ್ ರ ಸರಳ ವ್ಯಕ್ತಿತ್ವವನ್ನು ಕಾಣಬಹುದು. ವಿಶ್ವ ಮಟ್ಟದಲ್ಲಿ ಭಾರತದ ಹೆಗ್ಗಳಿಕೆಗೆ ಪಾತ್ರವಾಗಲಿರುವ ಹಿನ್ನೆಲೆಯಲ್ಲಿ ಈ ಪ್ರತಿಮೆ ಕುರಿತ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಗುಜರಾತಿನಲ್ಲಿ ಎಲ್ಲಿದೆ?
    ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಆಣೆಕಟ್ಟಿನ ಬಳಿ ಪ್ರತಿಮೆ ತಲೆ ಎತ್ತಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ ‘ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಆಚರಣೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 182 ಅಡಿ ಎತ್ತರದ ಏಕತಾ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ.

    ಯೋಜನೆ ಆರಂಭಗೊಂಡಿದ್ದು ಹೇಗೆ?
    2010 ರಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯನ್ನು ಘೋಷಿಸಿದ್ದರು. 2013 ರಲ್ಲಿ ಯೋಜನೆ ನಿರ್ಮಾಣ ಶಂಕುಸ್ಥಾಪನೆ ನಡೆಸಿ ಕಾಮಗಾರಿಯನ್ನು ಆರಂಭಿಸಲಾಯಿತು. 2015 ರಲ್ಲಿ ಹೈಡ್ರಲಾಜಿಕಲ್ ಸಮೀಕ್ಷೆ, ಸುರಂಗ ಪರೀಕ್ಷೆ, ನೆರಳು ಬೆಳಕಿನ ಅಧ್ಯಯನಗಳನ್ನು ಪೂರ್ಣಗೊಳಿಸಿದ ಎಲ್ ಆಂಡ್ ಟಿ ಸಂಸ್ಥೆಯೂ ಈ ಬೃಹತ್ ಯೋಜನೆ ಉಸ್ತುವಾರಿಯನ್ನು ಹೊತ್ತುಕೊಂಡು ಈಗ ಸಂಪೂರ್ಣ ಮಾಡಿದೆ. 182 ಮೀಟರ್ ಎತ್ತರ ಈ ಪ್ರತಿಮೆಗೆ 25 ಸಾವಿರ ಟನ್ ಉಕ್ಕು, 90 ಸಾವಿರ ಟನ್ ಸಿಮೆಂಟ್, ಸುಮಾರು ಏಳು ಕಿಲೋಮೀಟರ್ ತ್ರಿಜ್ಯದಿಂದ ಕಾಣುವ ಹಾಗೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ಹಲವು ಕಡೆಯಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು.

    ಎಷ್ಟು ಖರ್ಚಾಗಿದೆ?
    ವಿಶ್ವದ ಉತ್ಕೃಷ್ಟ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪವನ್ನು ಏಕತಾ ಮೂರ್ತಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. 2,989 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನಷ್ಟೇ ಗಟ್ಟಿಯಾಗಿ ಪ್ರತಿಮೆ ನಿರ್ಮಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು 2012-13ರ ಬಜೆಟ್ ನಲ್ಲಿ 100 ಕೋಟಿ, 2014-15ರ ಬಜೆಟ್ ನಲ್ಲಿ 500 ಕೋಟಿ ಹಣವನ್ನು ಗುಜರಾತ್ ಸರ್ಕಾರ ನೀಡಿದ್ದರೆ, 200 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ 2014-15ರ ಬಜೆಟ್ ನಲ್ಲಿ ನೀಡಿತ್ತು.

    ಏನೆಲ್ಲ ವಿಶೇಷತೆಯಿದೆ?
    ಪ್ರತಿಮೆಯಲ್ಲೇ ಎರಡು ಲಿಫ್ಟ್ ಗಳಿವೆ. ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರವಾಸಿಗರ ವಸತಿಗಾಗಿ 52 ರೂಂಗಳಿರುವ ಶ್ರೇಷ್ಠ ಭಾರತ ಹೆಸರಿನ ತ್ರಿಸ್ಟಾರ್ ಲಾಡ್ಜ್ ನಿರ್ಮಿಸಿದೆ. ಸೆಲ್ಫಿ ಪಾಯಿಂಟ್, ರೆಸ್ಟೋರೆಂಟ್‍ಗಳು, ಫೆರ್ರಿ ಸೇವೆ, ಬೋಟಿಂಗ್ ಸೌಕರ್ಯವಿದೆ. 250 ಟೆಂಟ್‍ಗಳಿರುವ ‘ಟೆಂಟ್ ಸಿಟಿ’, 306 ಮೀಟರ್ ಉದ್ದದ ಮಾರ್ಬಲ್ ಫ್ಲೋರಿಂಗ್ ವಾಕ್‍ವೇ, ವೀಕ್ಷಣಾ ಗ್ಯಾಲರಿಯೂ ಇರಲಿದೆ. ಪಟೇಲರಿಗೆ ಸಂಬಂಧಿಸಿದ ಮ್ಯೂಸಿಯಂ. ಆಡಿಯೊ-ವಿಡಿಯೊ ಗ್ಯಾಲರಿ, ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ. ನಾಲ್ಕು ಹಂತದಲ್ಲಿ ಕಾಮಗಾರಿ ಮಾಡಲಾಗಿದ್ದು ತ್ರೀಡಿ ತಂತ್ರಜ್ಞಾನದ ಮೂಲಕ ಪಟೇಲರ ಚಿತ್ರಗಳನ್ನು ಸೃಷ್ಟಿಸಿ ಅವರ ಸಾಧನೆಗಳನ್ನು ಪ್ರವಾಸಿಗರಿಗೆ ತಿಳಿಸುವ ಪ್ರೊಗ್ರಾಮ್ ಫಿಕ್ಸ್ ಮಾಡಲಾಗಿದೆ.

    ಪ್ರತಿಮೆ ಎಷ್ಟು ಬಲಶಾಲಿಯಾಗಿದೆ?
    ವಿಶ್ವದ ಅತಿದೊಡ್ಡ ಪ್ರತಿಮೆಯಾದ ಹಿನ್ನೆಲೆ ಸಾಕಷ್ಟು ಜಾಗರುಕತೆಯಿಂದ ಕಾಮಗಾರಿ ಮಾಡಲಾಗಿದೆ. ಬಿರುಗಾಳಿ ಮತ್ತು ಭೂಕಂಪದ ಸವಾಲುಗಳನ್ನು ಎದುರಿಸುವ ಸಲುವಾಗಿ ಪ್ರತಿಮೆ ಕೆಳಭಾಗವನ್ನು ವಿಶಾಲವಾಗಿ ನಿರ್ಮಿಸಿದೆ. ರಿಕ್ಟರ್ ಮಾಪಕದಲ್ಲಿ 6.5 ಕಂಪನದ ತೀವ್ರತೆಯಲ್ಲಿ ಹದಿನೈದು ಕಿಮೀ ಸುತ್ತಳತೆಯಲ್ಲಿ ಭೂಕಂಪನವಾದರೂ ಪ್ರತಿಮೆಗೆ ಯಾವುದೇ ಧಕ್ಕೆಯೂ ಆಗುವುದಿಲ್ಲ, ಗಂಟೆಗೆ 220 ಕಿ.ಮೀ ಗಾಳಿ ಬೀಸಿದರೂ ಪ್ರತಿಮೆ ಒಂಚೂರು ಅಲುಗಾಡದಷ್ಟು ಭದ್ರವಾಗಿದ್ದು, ಮಳೆ ಗುಡುಗು ಸಿಡಿಲಿನಿಂದ ಹಾನಿಯಾಗದಂತೆ ರೇಡಿಯೋ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

    182 ಮೀಟರ್ ಎತ್ತರ ಯಾಕೆ?
    ಗುಜರಾತ್ ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿರುವ ಕಾರಣ ಎತ್ತರವನ್ನು 182 ಅಡಿಗೆ ನಿಗಧಿಪಡಿಸಲಾಗಿದೆ. ನ್ಯೂಯಾರ್ಕ್ ನ ನದಿ ತೀರದಲ್ಲಿರುವ ಲಿಬರ್ಟಿ ಪ್ರತಿಮೆಗಿಂತ 93 ಮೀಟರ್ ಎತ್ತರವಿದೆ ಪಟೇಲರ ಪ್ರತಿಮೆ. 7 ಕಿ.ಮೀ ದೂರದಿಂದಲೇ ಈ ಪ್ರತಿಮೆಯನ್ನು ವೀಕ್ಷಿಸಬಹುದಾಗಿದೆ.

    ವಿವಾದ ಕೇಳಿ ಬಂದಿತ್ತು:
    ಈ ಯೋಜನೆಯಲ್ಲಿ ಸಾವಿರಾರು ಕಾರ್ಮಿಕರು ಬಂದಿದ್ದು ಸುಮಾರು 200 ಜನರು ಚೀನಾದವರು ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದ ಮೋದಿ ಚೀನಿಗಳಿಗೆ ಮಣೆ ಹಾಕಿದ್ದು ಸರಿಯಲ್ಲ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಪ್ರತಿಮೆ ಸುತ್ತಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಭೂಮಿ ಒತ್ತುವರಿ ಸಂಬಂಧ ಜನರು ವಿರೋಧವನ್ನು ವ್ಯಕ್ತಪಡಿಸಿದ್ದರು. ಪರಿಸರ ಸಚಿವಾಲಯದ ಅನುಮತಿ ಪಡೆಯದೇ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪರಿಸರ ಹೋರಾಟಗಾರರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೇವಾಡಿಯ, ಕೋಟಿ, ವಾಘೋಡಿಯಾ, ಲಂಬ್ಡಿ ಹಳ್ಳಿಗಳ ಜನರು ಇನ್ನು ಸರ್ಕಾರದ ಪರಿಹಾರ ಸಿಗದ ಹಿನ್ನಲೆಯಲ್ಲಿ ಸರ್ದಾರ್ ಸರೋವರ ಆಣೆಕಟ್ಟು ನಿರ್ಮಾಣಕ್ಕೆ ವಶಪಡಿಸಿಕೊಂಡ 927 ಎಕರೆ ಜಮೀನು ಮರಳಿ ನೀಡುವಂತೆ ಒತ್ತಾಯಿಸಿದ್ರು.

    ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನವಾದ ಅಕ್ಟೋಬರ್ 31 ದಿನವನ್ನು `ಏಕತಾ ದಿನ’ ವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಅದರೆ, ಅಂದೇ ‘ಉಕ್ಕಿನ ಮಹಿಳೆ’ ಇಂದಿರಾ ಗಾಂಧೀ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಪಟೇಲ್‍ರ ಸಂಭ್ರಮ ಏಕತಾ ದಿವಸ್ ಆಚರಣೆಗೆ ಕಾಂಗ್ರೆಸ್ಸಿಗರು ಮೋದಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

    ಸರ್ದಾರ್ ಪಟೇಲ್ ಯಾರು?
    ಗುಜರಾತಿನ ಕರಮ್ ಸಂದ್ ನಲ್ಲಿ 1875ರ ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ವಾತಂತ್ರ್ಯ ಭಾರತದ ಬಳಿಕ ಮೊದಲ ಗೃಹ ಸಚಿವರಾಗಿದ್ದವರು. ಕಾನೂನು ಪದವಿ ಪಡೆದಿದ್ದ ಅವರು ಗಾಂಧೀಜಿ ಅವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮುಕಿ ಸ್ವತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಸ್ವಾತಂತ್ರ್ಯದ ಬಳಿಕ ರಾಜ್ಯಗಳ ಪುನರ್ ವಿಂಗಡನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸುಮಾರು 500ಕ್ಕೂ ಅಧಿಕ ರಾಜಮನೆತನ ಅಡಿಯಲ್ಲಿದ್ದ ರಾಜ್ಯಗಳನ್ನು ನೆಹರೂ ಸರ್ಕಾರದ ಸುಪರ್ದಿಗೆ ತಂದರು. ಇದಲ್ಲದೆ ಗುಜರಾತಿನ ಖೇದ, ಬೊರ್ಸದ್, ಬಾರ್ಡೋಲಿಗಳಲ್ಲಿ ರೈತರ ಪರ ಹೋರಾಟದಲ್ಲೂ ಪಟೇಲ್ ಅವರು ಪಾಲ್ಗೊಂಡಿದ್ದರು.

    ರಾಷ್ಟ್ರೀಯ ಏಕತಾ ದಿವಸ ಏಕೆ?
    ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಗಳಿಸಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕುರಿತಾದ ಮಾಹಿತಿ, ಇತಿಹಾಸದ ಬಗ್ಗೆ ಹೆಚ್ಚಿನ ವಿವರ ನೀಡಲಾಗಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಟೇಲ್ ಅವರಿಂದ ಬಿಗಿಕ್ರಮಗಳ ಬರದೇ ಹೋಗಿದ್ದರೆ ದೇಶ ಇನ್ನಷ್ಟು ದುರ್ಬಲವಾಗುತ್ತಿತ್ತು. ದೇಶದ ಸಮಗ್ರತೆ, ಐಕ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಅಂದಿನ ಗೃಹ ಸಚಿವರಾಗಿದ್ದ ಪಟೇಲರು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಇಂದು ಸದೃಢ ಭಾರತವನ್ನು ಕಟ್ಟಿವೆ. ದೇಶದ ಏಕತೆಗಾಗಿ ಸರ್ಧಾರ್ ಪಟೇಲ್ ಅವರು ನಡೆಸಿದ ಹೋರಾಟ ಮತ್ತು ಅವರ ಸಂದೇಶವನ್ನು ಸಾರುವುದು ಈ ದಿನಾಚರಣೆಯ ಉದ್ದೇಶ. ಈ ನಿಟ್ಟಿನಲ್ಲಿ ಪಟೇಲ್ ಅವರಿಗೆ ಸೂಕ್ತ ಗೌರವ ನೀಡಲು ಅವರ ಜನ್ಮದಿನವನ್ನು `ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಆಚರಿಸಲು ಪ್ರಧಾನಿ ಮೋದಿ ಸರ್ಕಾರ ನಿರ್ಧರಿಸಿದೆ.

    ಏಕತಾ ದಿವಸ ಆಚರಣೆ ಹೇಗೆ?
    ಬುಧವಾರದಂದು ಮೋದಿಯವರು ಸಾರ್ವಜನಿಕ ಭಾಷಣಗಳನ್ನ ಮಾಡುವುದರ ಜೊತೆಗೆ ರೇಡಿಯೋದಲ್ಲೂ ಭಾಷಣ ಮಾಡಲಿದ್ದಾರೆ. ಅಂದು ಸಂಜೆ ಪೊಲೀಸ್ ಪೆರೇಡನ್ನೂ ಹಮ್ಮಿಕೊಳ್ಳಲಾಗುತ್ತದೆ. ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಏಕತಾ ಮ್ಯಾರಥಾನ್ ನಡೆಸಲಾಗುತ್ತದೆ, ಎನ್ ಸಿಸಿ, ಹೋಮ್ ಗಾರ್ಡ್, ಗೃಹರಕ್ಷಕ ದಳ ಮುಂತಾದ ಪಡೆಗಳ ಪಥ ಸಂಚಲನ ಕೂಡಾ ಇರುತ್ತದೆ. ಇದರಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಿರಿಯ ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ.
    – ಶಬ್ಬೀರ್ ನಿಡಗುಂದಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv