Tag: ಕಂಕಣ ಸೂರ್ಯ ಗ್ರಹಣ

  • ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆ

    ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆ

    ಬಾಗಲಕೋಟೆ: ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.

    ಬಾಗಲಕೋಟೆ ನಗರದ ಕಿಲ್ಲಾ ಏರಿಯಾದ ಗುರು ರಾಘವೇಂದ್ರ ರಾಯರ ಮಠದಲ್ಲಿ ಗ್ರಹಣ ಗಂಡಾಂತರ ನಿವಾರಣೆಗಾಗಿ, ರಾಯರ ಬೃಂದಾವನಕ್ಕೆ ಜಲಾಭಿಷೇಕ ಹಾಗೂ ಹೋಮ ಹವನ ಹಾಗೂ ಜಪಯಜ್ಞಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ಮಡಿವಂತಿಕೆಯಿಂದ ಮಠಕ್ಕೆ ಬಂದು ರಾಯರ ಜಪಯಜ್ಞಗಳನ್ನು ಮಾಡಿ ಗ್ರಹಣ ಗಂಡಾಂತರವನ್ನು ದೂರ ಮಾಡಿಕೊಂಡರು.

    ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಿ ದೇವಸ್ಥಾನದಲ್ಲಿ ಗ್ರಹಣ ವೇಳೆಯಲ್ಲಿ ದೇವಿಗೆ ಜಲಾಭಿಷೇಕ ನೆರವೇರಿಸಲಾಯಿತು. ಗ್ರಹಣ ಮೋಕ್ಷದವರೆಗೆ ದೇವಿ ಗರ್ಭಗುಡಿ ದರ್ಶನಕ್ಕೆ ಅವಕಾಶವಿರಲಿಲ್ಲ, ಯಾವುದೇ ಪೂಜೆ ಸಹ ಇರಲಿಲ್ಲ. ಹೊರಗಡೆಯಿಂದ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಗ್ರಹಣ ಮೋಕ್ಷದ ನಂತರ ದೇವಿಗೆ ಹಾಲು, ಹಣ್ಣು ಅಭಿಷೇಕ, ವಿಶೇಷ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಹೇಳಿದರು. ನಗರದ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಗ್ರಹಣ ಗಂಡಾಂತರ ನಿವಾರಣೆಗಾಗಿ ಅಯ್ಯಪ್ಪ ಮಾಲಾಧಾರಿಗಳು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ, ಜಪ ಯಜ್ಞಗಳನ್ನುನೆರವೇರಿಸಿದರು.

    ಗ್ರಹಣ ವೀಕ್ಷಣೆಗಾಗಿ ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜ್ ಮೈದಾನದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಗ್ರಹಣ ವೀಕ್ಷಣೆ ಮಾಡಿದರು. ಉಳಿದಂತೆ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕರು ಗ್ರಹಣ ವೀಕ್ಷಣೆ ಮಾಡಿ, ಗ್ರಹಣ ರೂಪ ಬದಲಾಗ್ತಿರೋ ಬಗ್ಗೆ ಮಾಹಿತಿ ಪಡೆದರು.

  • ಮೋಡಗಳ ಮರೆಯಲ್ಲಿ ದರ್ಶನ ಭಾಗ್ಯ ಕೊಟ್ಟ ಸೂರ್ಯಗ್ರಹಣ

    ಮೋಡಗಳ ಮರೆಯಲ್ಲಿ ದರ್ಶನ ಭಾಗ್ಯ ಕೊಟ್ಟ ಸೂರ್ಯಗ್ರಹಣ

    ಚಿಕ್ಕಬಳ್ಳಾಪುರ: ಮೋಡ ಮುಸುಕಿದ ವಾತಾವಾರಣದ ನಡುವೆಯೂ ಕೇತುಗ್ರಸ್ಥ ಕಂಕಣ ಸೂರ್ಯ ಗ್ರಹಣ ಚಿಕ್ಕಬಳ್ಳಾಪುರದಲ್ಲಿ ಗೋಚರವಾಗಿದೆ.

    ಗ್ರಹಣ ಸ್ಪರ್ಶಕಾಲದಲ್ಲಿ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಗ್ರಹಣ ದರ್ಶನ ಭಾಗ್ಯ ಸಿಗಲಿಲ್ಲ. ಆದರೆ ಗ್ರಹಣ ಮಧ್ಯ ಕಾಲ ಆಗಮಿಸುತ್ತಿದ್ದಂತೆ ಮೋಡಗಳು ಮರೆಯಾದ ಕಾರಣ ಜನರಿಗೆ ಸೂರ್ಯ ಗ್ರಹಣ ದರ್ಶನ ಭಾಗ್ಯ ಸಿಕ್ಕಿತು.

    ಆಗೊಮ್ಮೆ ಹೀಗೊಮ್ಮೆ ಎಂದು ಮೋಡಗಳು ಮರೆಯಾಗುತ್ತಿದ್ದಂತೆ ಜನರಿಗೆ ಸೂರ್ಯ ಗ್ರಹಣ ಭಾಗ್ಯ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿತ್ತು. ಮೋಡಗಳ ಆಟ ನೋಡುಗರಿಗೆ ಇರುಸು ಮುರುಸಾದರೂ ಆಗಾಗ ಮೋಡಗಳ ಮರೆಯಲ್ಲಿ ನಾನು ಇರುವೆ ಎಂದು ಬಂದು ಹೋಗುತ್ತಿದ್ದ ಸೂರ್ಯಗ್ರಹಣದ ಭಾಗ್ಯ ನೋಡುಗರ ಮನ ಸಂತಸಗೊಳಿಸಿತ್ತು.

    ಹಲವು ವರ್ಷಗಳ ನಂತರ ಸೂರ್ಯಗ್ರಹಣ ಕಂಡ ಜಿಲ್ಲೆಯ ಜನರಗೆ ಕೊನೆಗೂ ಮೋಡಗಳ ಮರೆಯಿಂದ ಸೂರ್ಯ ಗ್ರಹಣದ ದರ್ಶನ ಭಾಗ್ಯವಂತೂ ದಕ್ಕಿದೆ.