Tag: ಓಲಾ ಕ್ಯಾಬ್

  • ಓಲಾ ಕ್ಯಾಬ್‍ನಲ್ಲೇ ಹೆರಿಗೆ- ತಾಯಿ ಮಗುವಿಗೆ 5 ವರ್ಷ ಫ್ರೀ ರೈಡ್!

    ಓಲಾ ಕ್ಯಾಬ್‍ನಲ್ಲೇ ಹೆರಿಗೆ- ತಾಯಿ ಮಗುವಿಗೆ 5 ವರ್ಷ ಫ್ರೀ ರೈಡ್!

    ಪುಣೆ: ಮಹಿಳೆಯೊಬ್ಬರು ಓಲಾ ಕ್ಯಾಬ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗುವಿಗೆ ಮುಂದಿನ 5 ವರ್ಷಗಳವರೆಗೆ ಉಚಿತವಾಗಿ ಓಲಾದಲ್ಲಿ ಪ್ರಯಾಣಿಸುವ ಅವಕಾಶವನ್ನು ಕಂಪನಿ ನೀಡಿದೆ.

    ಹೌದು. ಪುಣೆಯ ರಮೇಶ್ ಸಿಂಗ್ ಹಾಗೂ ಈಶ್ವರಿ ಸಿಂಗ್ ವಿಶ್ವಕರ್ಮ ಎಂಬ ದಂಪತಿ ಓಲಾ ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈಶ್ವರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಈಶ್ವರಿಗೆ ಅಕ್ಟೋಬರ್ 24ರಂದು ಹೆರಿಗೆ ದಿನಾಂಕ ನಿಗದಿಯಾಗಿತ್ತು. ಆದ್ರೆ ಅಕ್ಟೋಬರ್ 2ರಂದು ಈಶ್ವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ದಂಪತಿ ಪುಣೆಯಿಂದ 12 ಕಿಮೀ ದೂರದಲ್ಲಿರೋ ಕಮಲ ನೆಹರು ಆಸ್ಪತ್ರೆಗೆ ತೆರಳಲೆಂದು ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ 5 ಕಿಮಿ ದೂರ ಕ್ರಮಿಸುವ ವೇಳೆಗೆ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಈಶ್ವರಿ ಜೊತೆಗಿದ್ದ ಸಂಬಂಧಿಕರೊಬ್ಬರ ಸಹಾಯದಿಂದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಕ್ಯಾಬ್ ಚಾಲಕ ತಾಯಿ-ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

    ಗುರುವಾರದಂದು ತಾಯಿ- ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಆರೋಗ್ಯವಾಗಿದ್ದಾರೆ ಎಂಬುವುದಾಗಿ ವರದಿಯಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಓಲಾ ಕಂಪನಿಯವರು ಈ ಉಚಿತ ರೈಡ್‍ನ ಉಡುಗೊರೆಯನ್ನು ನೀಡಿದ್ದಾರೆ. ಮಗುವಿನ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿರುವ ವಿಶೇಷ ಕೂಪನ್ ಮೂಲಕ ಅವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

    ಈಶ್ವರಿ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋದ ಚಾಲಕ ಗಲಾಂಡೆ ಡಿಸ್ಚಾರ್ಜ್ ಆದ ತಾಯಿ ಹಾಗೂ ಮಗುವನ್ನು ಅದೇ ಕ್ಯಾಬ್‍ನಲ್ಲಿ ಉಚಿತವಾಗಿಯೇ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಮಹಿಳೆಗೆ ಸಹಾಯ ಮಾಡಿದ್ದಕ್ಕೆ ಕ್ಯಾಬ್ ಚಾಲಕ ಗಲಾಂಡೆ ಅವರಿಗೂ ಕೂಡ ಕಂಪನಿ ಸನ್ಮಾನಿಸಿದೆ.