Tag: ಓಮ್ನಿ ಕಾರ್

  • ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ಓಮ್ನಿ- ತಪ್ಪಿದ ಭಾರೀ ಅನಾಹುತ

    ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ಓಮ್ನಿ- ತಪ್ಪಿದ ಭಾರೀ ಅನಾಹುತ

    ಚಾಮರಾಜನಗರ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರ್ ಒಂದು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ಘಟನೆ ನಡೆದಿದೆ.

    ಗುಂಡ್ಲುಪೇಟೆಯ ಅಶೋಕ್ ಅವರಿಗೆ ಸೇರಿದ್ದ ಮಾರುತಿ ಓಮ್ನಿ ಕಾರ್ ಇದ್ದಾಗಿದ್ದು, ಭೀಮನಬೀಡು ಗ್ರಾಮದ ಬಳಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಅಶೋಕ್ ಹಾಗೂ ಅವರ ಪತ್ನಿ, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಶೋಕ್ ಅವರು ಪತ್ನಿ ಹಾಗೂ ಮಕ್ಕಳ ಜೊತೆಗೆ ಗುಂಡ್ಲುಪೇಟೆ ಕಡೆಗೆ ಹೊರಟಿದ್ದರು. ಈ ವೇಳೆ ಮಾರ್ಗಮಧ್ಯೆ ಒಕ್ಕಣೆ ಮಾಡಲು ರೈತರು ರಸ್ತೆಯ ಮೇಲೆ ಹುರುಳಿ ಸತ್ತೆ ಸುರಿದಿದ್ದರು. ಓಮ್ನಿ ಚಕ್ರಗಳಿಗೆ ಹುರುಳಿ ಸತ್ತೆ ಸುತ್ತಿಕೊಂಡು ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮಿಸಿದ ಅಶೋಕ್ ತಕ್ಷಣವೇ ಎಲ್ಲರನ್ನೂ ಕಾರಿನಿಂದ ಕೆಳಗಿಳಿಸಿದ್ದಾರೆ. ಅಶೋಕ್ ಅವರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ಕೈತಪ್ಪಿದೆ.

    ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ವಾಹನ ಚಾಲಕರು, ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಒಕ್ಕಣೆ ಮಾಡುವವರಿಗೆ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

  • KSRTC ಬಸ್, ಓಮ್ನಿ ಕಾರ್ ಡಿಕ್ಕಿ- ಮದುವೆ ವಿಡಿಯೋ ಚಿತ್ರೀಕರಣ ಮುಗಿಸಿ ಬರುತ್ತಿದ್ದ ಮೂವರು ಸ್ಥಳದಲ್ಲೇ ಸಾವು

    KSRTC ಬಸ್, ಓಮ್ನಿ ಕಾರ್ ಡಿಕ್ಕಿ- ಮದುವೆ ವಿಡಿಯೋ ಚಿತ್ರೀಕರಣ ಮುಗಿಸಿ ಬರುತ್ತಿದ್ದ ಮೂವರು ಸ್ಥಳದಲ್ಲೇ ಸಾವು

    ಮಂಡ್ಯ: ಕೆಎಸ್‍ಆರ್‍ಟಿಸಿ ಬಸ್ ಮತ್ತು ಓಮ್ನಿ ಕಾರ್ ಮುಖಾಮುಖಿ ಡಿಕ್ಕಿಯಾಗಿ ಕಾರ್‍ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ, ಚನ್ನಪಿಳ್ಳೆಕೊಪ್ಪಲು ಗ್ರಾಮದ ಬಳಿ ನಡೆದಿದೆ.

    ದಿಲೀಪ್, ಕುಮಾರ್, ಮತ್ತು ಗಂಗಾಧರ್ ಮೃತ ದುರ್ದೈವಿಗಳು. ಮೂವರು ಸ್ಟುಡಿಯೋ ಮಾಲೀಕರಾಗಿದ್ದು, ಮದುವೆಯೊಂದಕ್ಕೆ ವಿಡಿಯೋ ಚಿತ್ರೀಕರಣ ಮಾಡಲು ಹೋಗಿದ್ರು. ಚಿತ್ರೀಕರಣ ಮುಗಿಸಿ ಕಿರುಗಾವಲು ರಸ್ತೆಯಲ್ಲಿ ಮಳವಳ್ಳಿ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಮಳವಳ್ಳಿಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಮುಖಾ ಮುಖಿ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಪಘಾತ ನಡೆದ ಸ್ಥಳದಲ್ಲಿ ರಸ್ತೆ ತಿರುವಿನಿಂದ ಕೂಡಿದ್ದು, ಎರಡೂ ವಾಹನಗಳು ವೇಗವಾಗಿ ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೃತದೇಹಗಳನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.