Tag: ಓಮವತಿ

  • ಕೆಂಪು ಸೀರೆ ಕಟ್ಟಿ, ಹಳಿ ಮೇಲೆ ನಿಂತು ರೈಲು ದುರಂತ ತಪ್ಪಿಸಿದ ಮಹಿಳೆ

    ಕೆಂಪು ಸೀರೆ ಕಟ್ಟಿ, ಹಳಿ ಮೇಲೆ ನಿಂತು ರೈಲು ದುರಂತ ತಪ್ಪಿಸಿದ ಮಹಿಳೆ

    ಲಕ್ನೋ: ಉತ್ತರ ಪ್ರದೇಶದ ಇಟಾಹ್‍ನಲ್ಲಿ 58 ವರ್ಷದ ಮಹಿಳೆಯೊಬ್ಬರು ತಮ್ಮ ಸಮಯಪ್ರಜ್ಞೆಯಿಂದ ರೈಲು ದುರಂತವನ್ನು ತಪ್ಪಿಸಿದ್ದಾರೆ. ಅಷ್ಟಕ್ಕೂ ಅವರು ಮಾಡಿದ್ದು ಸಣ್ಣ ಕೆಲಸವೇನೂ ಅಲ್ಲ, 150 ಪ್ರಯಾಣಿಕರ ಜೀವ ಉಳಿಸಿದ್ದಾರೆ.

    ಇಟಾಹ್​ನ ನಾಗ್ಲಾ ಗುಲೇರಿಯಾ ಪ್ರದೇಶದ ನಿವಾಸಿ ಓಮವತಿ ಮನೆ ಸಮೀಪವೇ ಇವರ ಹೊಲವಿದೆ. ಹಾಗೇ ಅಲ್ಲೆಲ್ಲ ರೈಲ್ವೆ ಹಳಿಗಳು ಹಾದುಹೋಗಿದ್ದು, ಪ್ರತಿದಿನ ವಿವಿಧ ಪ್ರದೇಶಗಳಿಗೆ ಹೋಗುವ ರೈಲುಗಳು ಸಂಚಾರ ಮಾಡುತ್ತಿರುತ್ತವೆ. ಗುರುವಾರ ಬೆಳಗ್ಗೆ 8ಗಂಟೆಯ ಒಳಗೇ ಓಮವತಿ ಕೆಲಸಕ್ಕೆಂದು ಹೊಲಕ್ಕೆ ಹೊರಟಿದ್ದರು. ಆಗ ಅವರಿಗೆ ಅಲ್ಲಿನ ರೈಲ್ವೆ ಹಳಿ ಬಿರುಕುಬಿಟ್ಟಿದ್ದು ಕಾಣಿಸಿಕೊಂಡಿದೆ. ರೈಲು ಬರುವ ಸಮಯ ಎಂದು ಅರಿತ ಓಮವತಿ ಮನೆಗೆ ಓಡಿ ತಮ್ಮ ಕೆಂಪು ಸೀರೆ ತಂದರು. ಹಳಿಯ ಅಕ್ಕಪಕ್ಕ ಎರಡು ಕೋಲುಗಳನ್ನು ನಿಲ್ಲಿಸಿ, ಅದಕ್ಕೆ ಸೀರೆ ಕಟ್ಟಿದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ನಿರ್ಗಮನಕ್ಕೆ ಫಾರೂಕ್ ಅಬ್ದುಲ್ಲಾ ಕಾರಣನಲ್ಲ: ಸುಬ್ರಮಣಿಯನ್ ಸ್ವಾಮಿ

    ರೈಲು ಬರುತ್ತಿರುವ ಶಬ್ದ ಕೇಳಿ ಕೂಡಲೇ ಹಳಿಯ ಮೇಲೆ ರೈಲು ಬರುತ್ತಿರುವ ಮಾರ್ಗಕ್ಕೆ ಅಭಿಮುಖವಾಗಿ ನಿಧಾನಕ್ಕೆ ಓಡಲು ಶುರು ಮಾಡಿದರು. ಆಗ ಅಪಾಯದ ಮುನ್ಸೂಚನೆ ಅರಿತ ಚಾಲಕ ರೈಲಿನ ವೇಗ ತಗ್ಗಿಸಿ, ಕೊನೆಗೂ ನಿಲ್ಲಿಸಿದರು. ಅಷ್ಟರಲ್ಲಿ ಸ್ಥಳೀಯರೂ ಕೆಲವರು ಅಲ್ಲಿಗೆ ಆಗಮಿಸಿದರು. ಬಳಿಕ ಬಂದ ರೈಲ್ವೆ ವಿಭಾಗದ ಅಧಿಕಾರಿಗಳು, ಸಿಬ್ಬಂದಿ, ಇಂಜಿನಿಯರ್‌ಗಳು ಹಳಿಪರಿಶೀಲನೆ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರೈಲ್ವೆ ಹಳಿ ದುರಸ್ತಿಯಾಗಿದೆ. ಇದಕ್ಕೆ ಸುಮಾರು 45 ನಿಮಿಷಗಳು ಬೇಕಾಯಿತು ಎಂದು ಹೇಳಲಾಗಿದೆ.

    ಓಮವತಿ ಮಾತನಾಡಿ, ನಾನು ವಿದ್ಯೆ ಕಲಿತವಳಲ್ಲ. ಆದರೆ ಕೆಂಪು ಬಣ್ಣ ಅಪಾಯದ ಸಂಕೇತ ಎಂಬುದು ನನಗೆ ಗೊತ್ತಿತ್ತು. ಕೆಂಪು ಬಣ್ಣದ ಬಾವುಟ ತೋರಿಸಿದರೆ ರೈಲನ್ನು ನಿಲ್ಲಿಸಬಹುದು ಎಂದು ತಿಳಿದಿತ್ತು. ನನ್ನ ಹಳ್ಳಿಯವರಂತೂ ಸಿಕ್ಕಾಪಟೆ ಖುಷಿಯಾಗಿದ್ದಾರೆ. ನಿಂತಿರುವ ರೈಲಿನ ಎದುರು ನನ್ನೊಂದಿಗೆ ಫೋಟೋವನ್ನೂ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಓಮವತಿ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಯಾಗ್‍ರಾಜ್ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಸಿಂಗ್ ಪ್ರತಿಕ್ರಿಯೆ ನೀಡಿ ಮಹಿಳೆ ಹಲವರ ಜೀವ ಕಾಪಾಡಿದ್ದಕ್ಕಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ