Tag: ಓಬವ್ವ ಪಡೆ

  • ಲಾಕ್‍ಡೌನ್‍ಗೆ ಕ್ಯಾರೆ ಅನ್ನದ ಮಂದಿಗೆ ಬಿಸಿಮುಟ್ಟಿಸಲು ಫೀಲ್ಡ್‌ಗೆ ಇಳಿದ ಓಬವ್ವ ಪಡೆ

    ಲಾಕ್‍ಡೌನ್‍ಗೆ ಕ್ಯಾರೆ ಅನ್ನದ ಮಂದಿಗೆ ಬಿಸಿಮುಟ್ಟಿಸಲು ಫೀಲ್ಡ್‌ಗೆ ಇಳಿದ ಓಬವ್ವ ಪಡೆ

    ವಿಜಯಪುರ: ದೇಶದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ಆದರೆ ಕೆಲವರು ಮಾತ್ರ ಲಾಕ್‍ಡೌನ್‍ಗೆ ಕ್ಯಾರೆ ಅನ್ನದೇ ಎಲ್ಲೆಡೆ ಸುತ್ತಾಡುತ್ತಿದ್ದಾರೆ. ಇಂತಹ ಮಂದಿಗೆ ಬಿಸಿಮುಟ್ಟಿಸಲು ಈಗ ವಿಜಯನಗರದಲ್ಲಿ ಓಬವ್ವ ಪಡೆ ಫೀಲ್ಡ್‌ಗೆ ಇಳಿದಿದೆ.

    ಲಾಕ್‍ಡೌನ್ ಆಗಿದ್ದರೂ ನಗರದ ಬಹುತೇಕ ಬೀದಿಗಳಲ್ಲಿ ಜನರು ಎಂದಿನಂತೆ ಓಡಾಡುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ವಿಜಯಪುರದ ಓಬವ್ವ ಪಡೆ ಫೀಲ್ಡ್‌ಗೆ ಇಳಿದಿದ್ದು, ಮನೆಯಲ್ಲಿ ಇರಿ ಎಂದರೆ ಊರು ತುಂಬಾ ಓಡಾಡುತ್ತಿರುವ ಜನರಿಗೆ ಲಾಠಿಯ ಬಿಸಿ ಬಿಸಿ ಕಜ್ಜಾಯವನ್ನ ಓಬವ್ವ ಪಡೆ ನೀಡುತ್ತಿದೆ. ವಿಜಯಪುರದ ಓಣಿ, ಕಾಲೋನಿಗಳಿಗೆ ಹೊಕ್ಕಿ ವಿನಾಕಾರಣ ಅಡ್ಡಾಡುತ್ತಿದ್ದವರಿಗೆ ಓಬವ್ವ ಪಡೆ ಸಿಬ್ಬಂದಿ ಧರ್ಮದೇಟು ನೀಡುತ್ತಿದ್ದಾರೆ.

    ಬೈಕ್ ಮೇಲೆ ಬೀದಿ ಬೀದಿ ಅಡ್ಡಾಡುತ್ತಿದ್ದ ಯುವಕನಿಗೆ ಕಪಾಳ ಮೋಕ್ಷ ಮಾಡಿ, ಮನೆ ಹೊರಗೆ ಕಾಣಿಸಿದವರಿಗೆ ಲಾಠಿ ಬೀಸುತ್ತಿದ್ದಾರೆ. ವಿಜಯಪುರ ನಗರದ ಹಕ್ಕಿಂ ಚೌಕ್, ಬೆಂಡಿಗೇರಿ ಓಣಿ, ಜಾಮಿಯಾ ಮಸೀದ್, ಜೆಂಡಾ ಕಟ್ಟಿ ಬಳಿ ವಿನಾಕಾರಣ ಅಡ್ಡಾಡುತ್ತಿದ್ದವರಿಗೆ ಸಕತ್ ಒದೆಬಿದ್ದಿದೆ.

  • ವಿಜಯಪುರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಲು ರೆಡಿಯಾಗಿದೆ ಓಬವ್ವ ಪಡೆ

    ವಿಜಯಪುರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಲು ರೆಡಿಯಾಗಿದೆ ಓಬವ್ವ ಪಡೆ

    ವಿಜಯಪುರ: ಜಿಲ್ಲೆಯಲ್ಲಿ ಹೆಣ್ಮಕ್ಕಳ ರಕ್ಷಣೆಗೆ ಪ್ರಾತಿನಿಧ್ಯ ಕೊಡಲಾಗುತ್ತಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಓಬವ್ವ ಪಡೆ ರೋಡ್ ರೋಮಿಯೋಗಳಿಗೆ ಸಿಂಹಸ್ವಪ್ನವಾಗಲಿದೆ. ವಿಜಯಪುರದ ಹೆಣ್ಣು ಮಕ್ಕಳು ನಿಶ್ಚಿಂತೆಯಿಂದ ಯಾವ ಭಯವಿಲ್ಲದೆ ಓಡಾಡಬಹುದಾಗಿದೆ.

    ವೀರ ಒನಕೆ ಓಬವ್ವ ತನ್ನ ರಾಜ್ಯದ ಮೇಲೆ ಕಣ್ಣು ಹಾಕಿದ್ದ ಹೈದರಾಲಿ ಶತ್ರುಪಡೆಯನ್ನು ಬರಿ ಒನಕೆಯಿಂದಲೇ ಮಣ್ಣು ಮುಕ್ಕಿಸಿದ್ದಳು. ಈಗ ಈ ವೀರ ವನಿತೆ ಓಬವ್ವ ಹೆಸರಿನಲ್ಲಿ ಪಡೆಯೊಂದು ರೆಡಿಯಾಗಿದೆ. ಅದು ಹೆಣ್ಮಕ್ಕಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳಿಗಾಗಿ. ಇಲ್ಲಿಯವರೆಗೂ ಇಂತಹ ಯಾವ ಪಡೆಯೂ ವಿಜಯಪುರದಲ್ಲಿರಲಿಲ್ಲ, ಹೀಗಾಗಿ ಹೆಣ್ಣು ಮಕ್ಕಳ ರಕ್ಷಣೆಗಾಗಿಯೆ ವಿಶೇಷವಾಗಿ ಓಬವ್ವ ಪಡೆ ರೆಡಿಯಾಗುತ್ತಿದೆ.

    ವಿಜಯಪುರ ಜಿಲ್ಲಾ ಪೊಲೀಸ್ ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 15 ಜನ ಮಹಿಳಾ ಪೊಲೀಸ್ ಪೇದೆಗಳನ್ನೊಳಗೊಂಡ ಪಡೆ ಇದಾಗಿದೆ. ಇವರಿಗೆ ಜಬರ್ದಸ್ತ್ ತರಬೇತಿ ಕೊಡಲಾಗುತ್ತಿದೆ. ಬೈಕ್ ರೈಡಿಂಗ್, ಕರಾಟೆ, ಸೇರಿದಂತೆ ಇತರೆ ತರಬೇತಿ ನೀಡಲಾಗುತ್ತಿದೆ. ವಿಜಯಪುರ ಎಸ್‍ಪಿ ಪ್ರಕಾಶ ನಿಕ್ಕಂ ನೇತೃತ್ವದಲ್ಲಿ ಮಹಿಳಾ ಪೇದೆಗಳಿಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಓಬವ್ವ ಪಡೆ ಬೈಕ್ ಮೇಲೆ ಗಸ್ತು ತಿರುಗುತ್ತಲೇ ಇರುತ್ತದೆ. ಶಾಲಾ- ಕಾಲೇಜುಗಳ ಸುತ್ತಮುತ್ತ, ಮಾರುಕಟ್ಟೆಗಳಲ್ಲಿ ಚಿತ್ರಮಂದಿರದ ಹತ್ತಿರದ ಸ್ಥಳಗಳು ಹೀಗೆ ಎಲ್ಲಡೆ ಗಸ್ತು ತಿರುಗುತ್ತಲೆ ಇರುತ್ತಾರೆ. ಹೆಣ್ಣು ಮಕ್ಕಳಿಗೆ ಕಾಟ ಕೊಡುವ ರೋಡ್ ರೋಮಿಯೋಗಳಿಗೆ ಓಬವ್ವ ಪಡೆ ಒದ್ದು ಬುದ್ಧಿ ಕಲಿಸಲಿದೆ. ಅಲ್ಲದೆ ಹೆಣ್ಣುಮಕ್ಕಳ ತಂಟೆಗೆ ಬರುವವರಿಗೆ ತಕ್ಕ ಶಿಕ್ಷೆಯೂ ನಿಶ್ಚಿತ.

    ಈ ಓಬವ್ವ ಪಡೆ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ತರಬೇತಿ ಕೊಡುವ ಕೆಲಸವನ್ನು ಮಾಡಲಿದೆ. ಸ್ವಯಂರಕ್ಷಣೆ ಮಾಡಿಕೊಳ್ಳುವುದು ಹೇಗೆ, ಪುಂಡ ಪೋಕರಿಗಳಿಗೆ ಬುದ್ಧಿ ಕಲಿಸುವುದು ಹೇಗೆ ಎಂಬುದನ್ನು ತರಬೇತಿ ನೀಡಲಿದೆ. ಸೂಕ್ತ ತರಬೇತಿ ಪಡೆದು ಆದಷ್ಟು ಬೇಗ ಓಬವ್ವ ಪಡೆ ಫೀಲ್ಡ್ ಗೆ ಇಳಿಯಲಿದೆ. ಓಬವ್ವ ಪಡೆ ರೋಡ್ ರೋಮಿಯೋ, ಪುಡಾರಿಗಳು, ಕಾಮುಕರ ಹೆಡೆಮುರಿ ಕಟ್ಟಲಿದೆ.

    ಓಬವ್ವ ಪಡೆಗೆ ಜಿಲ್ಲೆಯಾದ್ಯಂತ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜುಗಳ ಆವರಣಗಳ ಮುಂದೆ ಮಹಿಳಾ ವಸತಿ ನಿಲಯಗಳ ಮುಂದೆ ಪಡ್ಡೆ ಹುಡುಗರ ಕಾಟ ಹೇಳತೀರದು. ಹೆಣ್ಣು ಮಕ್ಕಳನ್ನು ಚುಡಾಯಿಸುವವರಿಗೆ ಓಬವ್ವ ಪಡೆ ದೊಡ್ಡ ಭರವಸೆಯ ರಕ್ಷಣಾ ಕವಚವಾಗಿ ಮೂಡಿ ಬರಲೆಂದು ವಿಜಯಪುರದ ಜನ ಆಶಿಸುತ್ತಿದ್ದಾರೆ.

  • ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ತಲೆ ಎತ್ತಿದೆ ಓಬವ್ವ ಪಡೆ

    ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ತಲೆ ಎತ್ತಿದೆ ಓಬವ್ವ ಪಡೆ

    – ವಿಶೇಷ ಪಿಂಕ್ ವಾಹನದಲ್ಲಿ ಗಸ್ತು ತಿರುಗಲಿದೆ 10 ಜನರ ತಂಡ
    – ನಗರ ಹಾಗೂ ಹೊರವಲಯದಲ್ಲಿ ಮಹಿಳೆಯರ ರಕ್ಷಣೆಗೆ ಖಾಕಿ ಕ್ರಮ

    ರಾಯಚೂರು: ನಗರದಲ್ಲೀಗ ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ಎಲ್ಲೇ ದೌರ್ಜನ್ಯ ನಡೆಯುತ್ತೆ ಅಂತ ತಿಳಿದರೂ ಈ ವಿಶೇಷ ಸಿಬ್ಬಂದಿ ಅಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಪ್ರತ್ಯಕ್ಷವಾಗುತ್ತೆ. ಮಹಿಳಾ ಪೊಲೀಸರ ಓಬವ್ವ ಪಡೆ ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ಸಿದ್ಧವಾಗಿದೆ.

    ಎಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ. 10 ಮಹಿಳಾ ಸಿಬ್ಬಂದಿಗೆ ಕರಾಟೆ ಸೇರಿ ಇತರೆ ತರಬೇತಿ ಹಾಗೂ ಮಹಿಳೆಯರ ರಕ್ಷಣೆ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಾರ್ಯಗಾರಗಳ ಮೂಲಕ ತಿಳುವಳಿಕೆ ನೀಡಲಾಗಿದೆ. ಎರಡು ತಂಡಗಳಾಗಿ ನಗರದ ಕಾಲೇಜು, ಹಾಸ್ಟೆಲ್ ಗಳು ಸೇರಿದಂತೆ ಎಲ್ಲಡೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಓಬವ್ವ ಪಡೆ ವಿಶೇಷ ಪಿಂಕ್ ವಾಹನದಲ್ಲಿ ಸಂಚರಿಸಿ ಮಹಿಳೆಯರಿಗೆ ರಕ್ಷಣೆ ನೀಡಲಿದ್ದಾರೆ. ಸಹಾಯ ವಾಣಿ ಸಂಖ್ಯೆ 94808 03800 ಕ್ಕೆ ಕರೆ ಮಾಡಿದರೆ ಓಬವ್ವ ಪಡೆ ಪ್ರತ್ಯಕ್ಷ ವಾಗುತ್ತೆ.

    ಕಳೆದ ಐದು ವರ್ಷದಲ್ಲಿ ರಾಯಚೂರು ಜಿಲ್ಲೆಯಲ್ಲಿ 72 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 2018 ರಲ್ಲಿ 22 ಪ್ರಕರಣ, 2019ರಲ್ಲಿ 9 ಪ್ರಕರಣ ದಾಖಲಾಗಿವೆ. ಅಲ್ಲದೆ ಕಳೆದ ಐದು ವರ್ಷದಲ್ಲಿ 173 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 2019ರಲ್ಲೇ 31 ಪ್ರಕರಣ ದಾಖಲಾಗಿವೆ. ಆದರೆ ಇಷ್ಟು ಪ್ರಕರಣಗಳಲ್ಲಿ ಇದುವರೆಗೆ ಕೇವಲ 3 ಪ್ರಕರಗಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದ್ದು, 70 ಪ್ರಕರಣಗಳು ನ್ಯಾಯಾಲಯದಲ್ಲಿ ವಜಾಗೊಂಡಿವೆ. ಇದಕ್ಕೆ ಪ್ರತಿಕೂಲ ಸಾಕ್ಷಿಯೇ ಕಾರಣವಾಗಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಹೀಗಾಗಿ ಓಬವ್ವ ಪಡೆಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಹೇಳಿದ್ದಾರೆ.

    ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಿಲ್ಲಾ ಪೊಲೀಸರು ಹೊಸದೊಂದು ಹೆಜ್ಜೆಯನ್ನಿಟ್ಟಿದ್ದಾರೆ. ಆಸಕ್ತ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಕರಾಟೆ ಸೇರಿದಂತೆ ಆತ್ಮರಕ್ಷಣೆ ವಿದ್ಯೆ ಕಲಿಸಲು ಇಲಾಖೆ ಮುಂದಾಗಿದೆ. ಖಾರದ ಪುಡಿ, ಮೆಣಸಿನ ಪುಡಿ ಸದಾ ಜೊತೆಗಿಟ್ಟುಕೊಳ್ಳಿ ಅಂತ ಸಲಹೆ ನೀಡುವ ಪೊಲೀಸರು ಓಬವ್ವ ಪಡೆಯ ಮೂಲಕ ಮಹಿಳಾ ರಕ್ಷಣೆಗೆ ಮುಂದಾಗಿರುವುದಕ್ಕೆ ರಾಯಚೂರಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.