Tag: ಓಡಿಶಾ

  • ಮಾವೋವಾದಿಗಳ ನಾಲ್ಕು ಕ್ಯಾಂಪ್ ಧ್ವಂಸಗೊಳಿಸಿದ ಪೊಲೀಸರು

    ಮಾವೋವಾದಿಗಳ ನಾಲ್ಕು ಕ್ಯಾಂಪ್ ಧ್ವಂಸಗೊಳಿಸಿದ ಪೊಲೀಸರು

    ಭುವನೇಶ್ವರ: ಓಡಿಶಾದ ಪೊಲೀಸರ ಸ್ಪೆಷಲ್ ಆಪರೇಷನ್ ಗ್ರೂಪ್ ಮತ್ತು ಸಿಆರ್‍ಪಿಎಫ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಮಾವೋವಾದಿಗಳ ನಾಲ್ಕು ಶಿಬಿರಗಳನ್ನು ಧ್ವಂಸಗೊಳಿಸಿದ್ದಾರೆ. ಒಡಿಶಾದ ಬರ್ಗಢ ಜಿಲ್ಲೆಯ ಗಂಧಮರ್ದನ್ ರಕ್ಷಿತ ಅರಣ್ಯಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.

    ಗಂಧಮರ್ದನ್ ರಕ್ಷಿತ ಅರಣ್ಯ ಪ್ರದೇಶದಲ್ಲಿ ಕೆಲ ಮಾವೋವಾದಿಗಳು ನೆಲೆಸಿ ರಾಜ್ಯದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಖಚಿತ ಮಾಹಿತಿ ಲಭ್ಯವಾಗಿತ್ತು ಎಂದು ಓಡಿಶಾ ಪೊಲೀಸರು ತಿಳಿಸಿದ್ದಾರೆ.

    ಜಂಟಿ ಕಾರ್ಯಾಚರಣೆ ವೇಳೆ 10 ರಿಂದ 15 ಮಾವೋವಾದಿಗಳು ನಮ್ಮ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದರು. ಘಟನಾ ಸ್ಥಳದಲ್ಲಿ ಕೆಲ ಕೈ ಬರಹದ ಪ್ರತಿಗಳು ಲಭ್ಯವಾಗಿವೆ. ಮಾವೋವಾದಿಗಳಿಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಇರಬಹುದು ಎಂದು ಎಸ್.ಪಿ. ಪದ್ಮಿನಿ ಸಾಹೂ ಅನುಮಾನ ವ್ಯಕ್ತಪಡಿಸಿದ್ದಾರೆ.

  • ಮೊಸಳೆ ಕೊಂದು, ಅಡುಗೆ ಮಾಡ್ಕೊಂಡು ತಿಂದು ತೇಗಿದ್ರು

    ಮೊಸಳೆ ಕೊಂದು, ಅಡುಗೆ ಮಾಡ್ಕೊಂಡು ತಿಂದು ತೇಗಿದ್ರು

    -ತನಿಖೆಗೆ ಮೂರು ತಂಡ ರಚಿಸಿದ ಅರಣ್ಯ ಇಲಾಖೆ

    ಭುವನೇಶ್ವರ: ಓಡಿಶಾ ರಾಜ್ಯದ ಮಕಾನಗಿರಿ ವ್ಯಾಪ್ತಿಯ ಪೋಡಿಯಾ ಬ್ಲಾಕ್‍ನಲ್ಲಿರುವ ಗ್ರಾಮದ ಜನರು ಮೊಸಳೆ ಕೊಂಡು ಅಡುಗೆ ಮಾಡಿಕೊಂಡು ತಿಂದಿದ್ದಾರೆ.

    ಸಾಮಾನ್ಯವಾಗಿ ಮೊಸಳೆಯನ್ನು ಕಂಡ್ರ ಜನ ಭಯಬೀಳುತ್ತಾರೆ. ಆದ್ರೆ ಪೋಡಿಯಾ ಬ್ಲಾಕ್ ನಲ್ಲಿರುವ ಕಳಾದಪಲ್ಲಿ ಗ್ರಾಮದ ಕೆಲವರು ಉಪಾಯದಿಂದ ಮೊಸಳೆಯನ್ನ ಹಿಡಿದು ಗ್ರಾಮಕ್ಕೆ ತಂದಿದ್ದಾರೆ. ಮೊಸಳೆ ಗ್ರಾಮಕ್ಕೆ ತರುತ್ತಿದ್ದಂತೆ ಸುದ್ದಿ ಪಕ್ಕದ ಊರುಗಳಿಗೂ ಹಬ್ಬಿದೆ. ಈ ವಿಷಯ ಅರಣ್ಯಾಧಿಕಾರಿಗಳ ಗಮನಕ್ಕೂ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಅರಣ್ಯಾಧಿಕಾರಿ ಪ್ರದೀಪ್ ಮೀರಾಸೆ, ಕಳಾದಪಲ್ಲಿಯ ಕೆಲವರು ಮೊಸಳೆ ಹಿಡಿದು ಕೊಂದಿದ್ದಾರೆ. ನಂತರ ಅದರ ಮಾಂಸವನ್ನು ಬೇಯಿಸಿಕೊಂಡು ತಿಂದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನ ರಚಿಸಲಾಗಿದ್ದು, ಶಂಕೆಯ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಎರಡು ಮಕ್ಕಳ ನಿಯಮ ಉಲ್ಲಂಘನೆ – ಗ್ರಾ.ಪಂ.ಅಧ್ಯಕ್ಷೆ ಸ್ಥಾನದಿಂದ ಶಾಸಕನ ಪತ್ನಿ ಅನರ್ಹ

    ಎರಡು ಮಕ್ಕಳ ನಿಯಮ ಉಲ್ಲಂಘನೆ – ಗ್ರಾ.ಪಂ.ಅಧ್ಯಕ್ಷೆ ಸ್ಥಾನದಿಂದ ಶಾಸಕನ ಪತ್ನಿ ಅನರ್ಹ

    ಭುವನೇಶ್ವರ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದ ಒಡಿಶಾ ಶಾಸಕರ ಪತ್ನಿಯನ್ನು ಜಿಲ್ಲಾ ನ್ಯಾಯಾಲಯ ಅನರ್ಹಗೊಳಿಸಿದೆ.

    1994ರ ಸಮಿತಿ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಂಠಮಾಲ್ ಜಿಲ್ಲೆಯ ದಾರಿಂಗಬಡಿ ಪಂಚಾಯಿತಿ ಅಧ್ಯಕ್ಷೆ ಸುಭ್ರೆಂತಿ ಪ್ರಧಾನ್ ಅವರನ್ನು ಕಂಠಮಾಲ್ ಜಿಲ್ಲಾ ನ್ಯಾಯಾಧೀಶರು ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ. ಸುಭ್ರೆಂತಿ ಅವರು ಜಿ ಉದಯಗಿರಿ ಕ್ಷೇತ್ರದ ಶಾಸಕ ಸಲುಗಾ ಪ್ರಧಾನ್ ಅವರ ಪತ್ನಿಯಾಗಿದ್ದಾರೆ.

    ಪಂಚಾಯತ್ ಸದಸ್ಯರು ಅಥವಾ ಅಧ್ಯಕ್ಷರಾಗಬೇಕಾದಲ್ಲಿ ಕೇವಲ ಇಬ್ಬರು ಮಕ್ಕಳನ್ನು ಮಾತ್ರ ಹೊಂದಿರಬೇಕು ಎಂಬ ಕಾನೂನಿದೆ. ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಪ್ರಧಾನ್ ಅವರಿಗೆ ಮೂವರು ಮಕ್ಕಳಿದ್ದರು. ಹೀಗಾಗಿ ಅವರನ್ನು ಕೋರ್ಟ್ ಅನರ್ಹ ಮಾಡಿ ಆದೇಶ ಪ್ರಕಟಿಸಿದೆ.

    ತಜುಂಗಿಯಾ ಪಂಚಾಯಿತಿಯ ಸದಸ್ಯ ರೂಡಾ ಮಲ್ಲಿಕ್ ಪಂಚಾಯಿತಿಯ ಅಧ್ಯಕ್ಷೆಯಾಗುವ ಸಲುವಾಗಿ ತಮ್ಮ ಮಕ್ಕಳ ಸಂಖ್ಯೆಯನ್ನು ಮರೆಮಾಚಿದ್ದಾರೆ ಆರೋಪಿಸಿ ದೂರು ನೀಡಿದ್ದರು.

    1991ರ ಜನಗಣತಿಯ ನಂತರ ಜಾರಿಗೆ ಬಂದಿರುವ ಎರಡು ಮಕ್ಕಳನ್ನು ಹೊಂದುವ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗದವರಿಗೆ ಹಾಗೂ ಮಹಿಳೆಯರಿಗೆ ತಾರತಮ್ಯವಾಗಿದೆ ಎಂದು ಟೀಕಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸುಪ್ರೀಂ ಕೋರ್ಟ್ ನುವಾಪಾ ಜಿಲ್ಲೆಯ ಮಾಜಿ ಬುಡಕಟ್ಟು ಜನಾಂಗ ಸರ್ಪಂಚ್ ಅವರನ್ನು ಮೂರು ಮಕ್ಕಳನ್ನು ಹೊಂದಿದ್ದಕ್ಕಾಗಿ ವಜಾಗೊಳಿಸಲಾಗಿತ್ತು.

  • ಮೇಕೆ ಸಾವಿನಿಂದ 2.68 ಕೋಟಿ ರೂ. ನಷ್ಟ

    ಮೇಕೆ ಸಾವಿನಿಂದ 2.68 ಕೋಟಿ ರೂ. ನಷ್ಟ

    ಭುವನೇಶ್ವರ: ಮೇಕೆಯೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದಕ್ಕೆ ಮಹಾನದಿ ಕೋಲ್‍ಫೀಲ್ಡ್ಸ್ ಲಿ.(ಎಂಸಿಎಲ್)ಗೆ 2.68 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕಂಪನಿ ತಿಳಿಸಿದೆ.

    ಓಡಿಶಾದಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೇಕೆಯೊಂದು ಸಾವನ್ನಪ್ಪಿದ ನಂತರ ಸ್ಥಳೀಯರು ನಡೆಸಿದ ಪ್ರತಿಭಟನೆಯಿಂದಾಗಿ 2.68 ಕೋಟಿ ರೂ. ನಷ್ಟ ಸಂಭವಿಸಿದೆ.

    ಏನಿದು ಪ್ರಕರಣ?
    ಕಲ್ಲಿದ್ದಲು ಸಾಗಿಸುತ್ತಿದ್ದ ಟಿಪ್ಪರ್ ಗೆ ಸಿಲುಕಿ ಅಪಘಾತದಲ್ಲಿ ಮೇಕೆ ಸಾವನ್ನಪ್ಪಿತ್ತು. ಇದಕ್ಕೆ ಪರಿಹಾರ ರೂಪವಾಗಿ ಸ್ಥಳೀಯರು 60 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಟಾಲ್ಚರ್ ಕಲ್ಲಿದ್ದಲು ಪ್ರದೇಶದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಕೋಲಾಹಲ ಸೃಷ್ಟಿಸಿದ್ದರಿಂದ ನಷ್ಟ ಉಂಟಾಗಿದೆ ಎಂದು ಎಂಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

    ಪಕ್ಕದ ಹಳ್ಳಿಯ ನಿವಾಸಿಗಳ ನೇತೃತ್ವದ ಜನಸಮೂಹ ಸೋಮವಾರ ಬೆಳಗ್ಗೆ 11 ಗಂಟೆಯಿಂದ ಟಾಲ್ಚರ್ ಕಲ್ಲಿದ್ದಲು ಕ್ಷೇತ್ರಗಳಲ್ಲಿನ ಜಗನ್ನಾಥ ಸಿಡಿಂಗ್ಸ್ ನಂ.1 ಹಾಗೂ 2ರಲ್ಲಿ ಪ್ರತಿಭಟನೆ ನಡೆಸಿ ಕಲ್ಲಿದ್ದಲು ಸಾಗಣೆ ಮತ್ತು ರವಾನೆ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಪ್ರತಿಭಟನೆ ಕುರಿತು ಮಾಹಿತಿ ತಿಳಿದು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ, ಪ್ರತಿಭಟನೆ ತಣ್ಣಗಾಗಿಸಲು ಮಧ್ಯಾಹ್ನ 2.30 ಆಗಿದ್ದು, ನಂತರ ಕೆಲಸ ಪುನರಾರಂಭಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.

    ಈ ಮೂರುವರೆ ಗಂಟೆಗಳ ಅಕ್ರಮ ಕೆಲಸ ಸ್ಥಗಿತದಿಂದಾಗಿ ಕಲ್ಲಿದ್ದಲು ಸಾಗಣೆಯಲ್ಲಿ 1.4 ಕೋಟಿ ರೂ. ಹಾಗೂ ರೈಲ್ವೇ ಮೂಲಕ ರವಾನೆಯಾಗುತ್ತಿದ್ದ ಕಲ್ಲಿದ್ದಲು ಸಾಗಣೆಯಲ್ಲಿ ತಡವಾಗಿದ್ದರಿಂದ 1.28 ಕೋಟಿ ರೂ. ನಷ್ಟವಾಗಿದೆ. ಒಟ್ಟು ಅಂದಾಜು 2.68 ಕೋಟಿ ರೂ.ಗಳ ನಷ್ಟದ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ 46 ಲಕ್ಷ ರೂ. ನಷ್ಟವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

    ಅಕ್ರಮವಾಗಿ ಕೆಲಸಕ್ಕೆ ಅಡ್ಡಿಯುಂಟುಮಾಡಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕಂಪನಿಯೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದೆ. ಕಲ್ಲಿದ್ದಲು ಗಣಿಗಾರಿಕೆ ಕಾರ್ಯಾಚರಣೆಗೆ ಇಂತಹ ಅಕ್ರಮ ಅಡೆತಡೆಯಲು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ವಿರುದ್ಧವಾಗಿದೆ. ಅಲ್ಲದೆ, ದೇಶದ ಐದು ಟ್ರಿಲಿಯನ್ ಆರ್ಥಿಕತೆ ಗುರಿಗೆ ಅಡೆತಡೆಗಳನ್ನು ಉಂಟುಮಾಡುತ್ತದೆ ಎಂದು ಎಂಸಿಎಲ್ ವಕ್ತಾರರು ತಿಳಿಸಿದ್ದಾರೆ.

    ಕಲ್ಲಿದ್ದಲು ಗಣಿಗಾರಿಕೆ ಪ್ರದೇಶವನ್ನು ಕಾರ್ಯನಿರತ ವಲಯವನ್ನಾಗಿ ಗುರುತಿಸಲಾಗಿದೆ. ಇಲ್ಲಿ ಅಧಿಕೃತ ಚಲನೆ, ತರಬೇತಿ ಪಡೆದ ಮತ್ತು ಗಣಿಗಾರಿಕೆ ಕುರಿತು ಜ್ಞಾನ ಹೊಂದಿರುವವರಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿದೆ. ಜನಸಾಮಾನ್ಯರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದಾಗ್ಯೂ ಅಪರಿಚಿತರು ಹಾಗೂ ಇಲ್ಲಿನ ಸ್ಥಳೀಯರು ಕಲ್ಲಿದ್ದಲು ಪಡೆಯಲು ಹಾಗೂ ಕಟ್ಟಿಗೆ ಆಯ್ದುಕೊಳ್ಳಲು ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ತಾವು ಬರುವುದಲ್ಲದೆ ತಮ್ಮ ಜಾನುವಾರುಗಳನ್ನೂ ಮೇಯಿಸಲು ತರುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ ಎಂದು ಸಂಸ್ಥೆಯ ವಕ್ತಾರರು ಆರೋಪಿಸಿದ್ದಾರೆ.

  • ಗಣೇಶ ಪೂಜೆ ವೇಳೆ ಮುಖ್ಯ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ

    ಗಣೇಶ ಪೂಜೆ ವೇಳೆ ಮುಖ್ಯ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಕಿರುಕುಳ

    ಭುವನೇಶ್ವರ: ಶಾಲೆಯಲ್ಲಿ ಗಣೇಶ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ 8ನೇ ತರಗತಿ ವಿದ್ಯಾರ್ಥಿನಿಗೆ ಶಾಲೆಯ ಮುಖ್ಯ ಶಿಕ್ಷಕ ಕಿರುಕುಳ ನೀಡಿರುವ ಘಟನೆ ಓಡಿಶಾದಲ್ಲಿ ನಡೆದಿದೆ.

    ಪರಾರಿಯಾಗಿರುವ ಆರೋಪಿ ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶಾಲೆಯಲ್ಲಿ ಗಣೇಶ ಪೂಜೆಯನ್ನು ನೆರವೇರಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೆಪ್ಟೆಂಬರ್ 2ರಂದು ಮಧ್ಯಾಹ್ನ 2.30ರ ಸುಮಾರಿಗೆ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಗಣೇಶನ ಪೂಜೆ ನಡೆಯುತ್ತಿತ್ತು. ಪೂಜೆಯಲ್ಲಿ ಭಾಗವಹಿಸಿದ್ದ ಮುಖ್ಯ ಶಿಕ್ಷಕ 8ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ಬಾಲಕಿಯ ಮುಗ್ಧತೆಯನ್ನು ಬಳಸಿಕೊಂಡು ಕೆಟ್ಟದಾಗಿ ವರ್ತಿಸಿದ್ದಾನೆ. ಈ ಕುರಿತು ಗ್ರಾಮಸ್ಥರಿಗೆ ತಿಳಿಸಿದರೂ ಆರೋಪಿ ಪತ್ತೆಯಾಗಲಿಲ್ಲ. ಹೀಗಾಗಿ ಸಂತ್ರಸ್ತ ವಿದ್ಯಾರ್ಥಿನಿ ತನ್ನ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ಮುಖ್ಯ ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ ಎಂದು ಎಸ್‍ಡಿಪಿಓ ಎಸ್.ಟಿಗ್ಗಾ ತಿಳಿಸಿದ್ದಾರೆ.

    ಆರೋಪಿ ಪರಾರಿಯಾಗಿದ್ದು, ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೋಕ್ಸೊ ಕಾಯ್ದೆಯಲ್ಲದೆ, ಆರೋಪಿ ಮುಖ್ಯ ಶಿಕ್ಷಕನ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಹಾಗೂ ಎಸ್‍ಸಿ, ಎಸ್‍ಟಿ ಕಾಯ್ದೆಯ ವಿಭಾಗಗಳಡಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

  • ಆಟೋ ಚಾಲಕನಿಗೆ ಬಿತ್ತು ಬರೋಬ್ಬರಿ 47,500 ರೂ. ದಂಡ

    ಆಟೋ ಚಾಲಕನಿಗೆ ಬಿತ್ತು ಬರೋಬ್ಬರಿ 47,500 ರೂ. ದಂಡ

    ಭುವನೇಶ್ವರ: ಸಂಚಾರಿ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು, ಕುಡಿದು ಆಟೋ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬರೋಬ್ಬರಿ 47,500 ರೂ. ದಂಡ ವಿಧಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.

    ಕುಡಿದು ವಾಹನ ಚಾಲನೆ ಮಾಡಿರುವುದು, ಪರ್ಮಿಟ್, ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ತಿದ್ದುಪಡಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 47,500 ರೂ. ದಂಡ ವಿಧಿಸಲಾಗಿದೆ. ಭಾನುವಾರದಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಭುವನೇಶ್ವರದ ಟ್ರಾಫಿಕ್ ಪೊಲೀಸ್ ಹಾಗೂ ಆರ್‍ಟಿಓ ಸಿಬ್ಬಂದಿ ಬುಧವಾರ ನಗರದ ಆಚಾರ್ಯ ವಿಹಾರ ಚೌಕ್‍ನಲ್ಲಿ ಆಟೋ ರಿಕ್ಷಾ ತಡೆದು, ಸಂಚಾರಿ ನಿಯಮ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ 47,500 ರೂ.ಗಳ ಚಲನ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಾಮಾನ್ಯ ಅಪರಾಧ 500ರೂ., ಅಮಾನ್ಯಗೊಂಡ ಡ್ರೈವಿಂಗ್ ಲೈಸೆನ್ಸ್ 5000 ರೂ., ಪರ್ಮಿಟ್ ನಿಯಮ ಉಲ್ಲಂಘಿಸಿದ್ದಕ್ಕೆ 10,000 ರೂ., ಕುಡಿದು ವಾಹನ ಚಲಾಯಿಸಿದ್ದಕ್ಕೆ 10,000ರೂ., ಗಾಳಿ, ಶಬ್ದ ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ 10,000, ಅನಧಿಕೃತ ವ್ಯಕ್ತಿಗೆ ಚಾಲನೆ ಮಾಡಲು ಬಿಟ್ಟಿದ್ದಕ್ಕೆ 5,000 ರೂ. ನೋಂದಣಿ ಮಾಡದೆ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ 5,000 ರೂ., ಇನ್ಶುರೆನ್ಸ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ 2,000 ರೂ. ಒಟ್ಟು 47,500 ರೂ. ದಂಡವನ್ನು ವಿಧಿಸಲಾಗಿದೆ.

    ಮದ್ಯ ಸೇವಿಸಿರುವುದಾಗಿ ಒಪ್ಪಿಕೊಂಡ ಆಟೋ ಚಾಲಕ ಹರಿಬಂಧು ಕನ್ಹಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನನಗೆ ಅಷ್ಟು ದೊಡ್ಡ ಪ್ರಮಾಣದ ದಂಡವನ್ನು ಪಾವತಿಸಲು ಸಾಧ್ಯವಿಲ್ಲ. ಅವರು ನನ್ನ ವಾಹನವನ್ನು ವಶಪಡಿಸಿಕೊಳ್ಳಲಿ ಅಥವಾ ಜೈಲಿಗೆ ಕಳುಹಿಸಲಿ, ನಾನು ಅಷ್ಟು ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ. ಅಲ್ಲದೆ, ಎಲ್ಲ ದಾಖಲೆಗಳು ನನ್ನ ಮನೆಯಲ್ಲಿವೆ ಎಂದು ತಿಳಿಸಿದ್ದಾರೆ.

    ಚಾಲಕ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಸೆಪ್ಟೆಂಬರ್ 1ರಿಂದ ಜಾರಿಯಾಗಿರುವ ಹೊಸ ಸಂಚಾರಿ ನಿಯಮಗಳ ನಿಬಂಧನೆ ಪ್ರಕಾರ ದಂಡ ವಿಧಿಸಲಾಗಿದೆ. ಒಟ್ಟು 47,500 ರೂ. ದಂಡವನ್ನು ಚಂದ್ರಶೇಖರಪುರದ ಚಾಲನಾ ಪರೀಕ್ಷಾ ಕೇಂದ್ರದಲ್ಲಿ ಪಾವತಿಸುವಂತೆ ಆಟೋ ಚಾಲಕನಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಪಾರ್ಸೆಲ್ ಮೂಲಕ ನಾಗರಹಾವು ಕಳುಹಿಸಿದ ಕೊರಿಯರ್ ಕಂಪನಿ

    ಪಾರ್ಸೆಲ್ ಮೂಲಕ ನಾಗರಹಾವು ಕಳುಹಿಸಿದ ಕೊರಿಯರ್ ಕಂಪನಿ

    ಭುವನೇಶ್ವರ್: ಕೊರಿಯರ್ ಕಂಪನಿಯೊಂದು ಕಳುಹಿಸಿದ್ದ ಪಾರ್ಸೆಲ್ ಬಾಕ್ಸ್ ನಲ್ಲಿ ನಾಗರ ಹಾವು ಕಾಣಿಸಿಕೊಂಡ ಘಟನೆ ಓಡಿಶಾದ ಮಯೂರ್‍ ಭಂಜ್ ಜಿಲ್ಲೆಯ ರಾಯರಂಗ್‍ನಲ್ಲಿ ನಡೆದಿದೆ.

    ಮನೆಗೆ ಸಂಬಂಧಪಟ್ಟ ಲೇಖನಗಳು 15 ದಿನಗಳ ಹಿಂದೆ ಆಂಧ್ರ ಪ್ರದೇಶದ ವಿಜಯ್‍ವಾಡ ಮೂಲದ ಎಸ್ ಮುತ್ತುಕುಮಾರ್ ಖಾಸಗಿ ಕೊರಿಯರ್ ಎಜೆನ್ಸಿ ಮೂಲಕ ಬುಕ್ ಮಾಡಿದ್ದಾರೆ. ಈ ಪಾರ್ಸೆಲ್ ಭಾನುವಾರ ಮುತ್ತುಕುಮಾರ್ ಮನೆಗೆ ಬಂದಿದೆ.

    ಈ ವೇಳೆ ಪಾರ್ಸೆಲ್ ಬಂದಿದೆ ಎಂದು ಮುತ್ತುಕುಮಾರ್ ಅವರು ತನ್ನ ಮಯೂರ್‍ ಭಂಜ್‍ನ ರಾಯರಾಂಗ್‍ನಲ್ಲಿ ಇರುವ ಮನೆಯಲ್ಲಿ ಓಪನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಒಂದು ಭಾಗವನ್ನು ತೆರೆದ ಮುತ್ತುಕುಮಾರ್ ಅವರಿಗೆ ಪಾರ್ಸೆಲ್ ಒಳಗೆ ನಾಗರಹಾವು ಕಂಡಿದೆ. ಪಾರ್ಸೆಲ್‍ನಲ್ಲಿ ಹಾವು ಕಂಡ ಮುತ್ತುಕುಮಾರ್ ಆಘಾತಕ್ಕೊಳಗಾಗಿದ್ದಾರೆ. ನಂತರ ತಕ್ಷಣ ಅರಣ್ಯ ಇಲಾಖೆಗೆ ಕೆರೆ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮುತ್ತುಕುಮಾರ್ ನಾನು 15 ದಿನದ ಹಿಂದೆ ಈ ಪಾರ್ಸೆಲ್ ಬುಕ್ ಮಾಡಿದ್ದೆ. ಅದರಂತೆ ಆಗಸ್ಟ್ 9 ರಂದು ಗುಂಟೂರಿನ ಕೊರಿಯರ್ ಸಂಸ್ಥೆಯಿಂದ ಈ ಪಾರ್ಸೆಲ್ ಬಂದಿದೆ. ಆದರೆ ಓಡಿಶಾಗೆ ಬಂದ ನಂತರ ಈ ಹಾವು ಪಾರ್ಸೆಲ್ ಒಳಗೆ ಸೇರಿಕೊಂಡಿರಬಹುದು ಎಂದು ಹೇಳಿದ್ದಾರೆ.

    ಅರಣ್ಯ ಅಧಿಕಾರಿ ಬಿಪಿನ್ ಚಂದ್ರ ಬೆಹೆರಾ ಪ್ರತಿಕ್ರಿಯಿಸಿ, ನಮಗೆ ಭಾನುವಾರ ಪಾರ್ಸೆಲ್ ಒಳಗೆ ನಾಗರಹಾವು ಇದೆ ಎಂದು ಕರೆ ಬಂತು. ನಾನು ತಕ್ಷಣ ನನ್ನ ಸಹೋದ್ಯೋಗಿಯೊಂದಿಗೆ ಸ್ಥಳಕ್ಕೆ ಬಂದು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

  • ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಭುವನೇಶ್ವರ್: ಖಾಸಗಿ ಕೋಚಿಂಗ್ ಕ್ಲಾಸಿನ ಇಂಗ್ಲಿಷ್ ಶಿಕ್ಷಕರೊಬ್ಬರು ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಅವರಿಗೆ ಬೂಟ್ ಹಾರ ಹಾಕಿ ಅವಮಾನ ಮಾಡಿದ ಘಟನೆ ಓಡಿಶಾದ ನಯಾಗರ್ ಜಿಲ್ಲೆಯಲ್ಲಿ ನಡೆದಿದೆ.

    ಮಾಯಾಧರ್ ಮೋಹಪಾತ್ರ ಎಂಬವರು ಖಾಸಗಿ ಕೋಚಿಂಗ್ ಸಂಸ್ಥೆ ಸತ್ಯಸಾಯಿ ಟ್ಯುಟೋರಿಯಲ್ ನಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋಚಿಂಗ್ ಕ್ಲಾಸಿನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ಹಾಗಾಗಿ ತಮ್ಮ ತಿಂಗಳ ಸಂಬಳ ಕೊಡಿ ಎಂದು ಕೇಳಿದ್ದಕ್ಕೆ ಸಿಟ್ಟಾದ ಮಾಲೀಕ ತಪನ್ ಪಾತ್ರ ಶಿಕ್ಷಕ ಮಾಯಾಧರ್ ರವರಿಗೆ ಬೂಟಿನ ಹಾರ ಹಾಕಿ ಅವಮಾನ ಮಾಡಿದ್ದಾರೆ.

    ಮಹಾಪಾತ್ರ ರವರು ಹೇಳುವಂತೆ ಕೋಚಿಂಗ್ ಕ್ಲಾಸ್ ನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ತಮ್ಮ ಸಂಬಳವನ್ನು ನೀಡುವಂತೆ ಪದೇ ಪದೇ ಮಾಲೀಕನಿಗೆ ಕೇಳಿಕೊಂಡಿದ್ದರೂ, ಇದಕ್ಕೆ ತಪನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಮಾಲೀಕ ತಪನ್ ಶಿಕ್ಷಕ ಮಾಯಾಧರ್ ರವರಿಗೆ ನೌಕರಿಯನ್ನೇ ಬಿಟ್ಟು ಹೋಗುವಂತೆ ಕೇಳಿದ್ದಾರೆ. ಅಲ್ಲದೇ ಕೋಪಗೊಂಡ ತಪನ್ ತಮ್ಮ ಇಬ್ಬರು ಸಹಾಯಕರೊಂದಿಗೆ ಶಿಕ್ಷಕ ಮಾಯಾಧರ್ ರವರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿಹಾಕಿದ್ದಾರೆ. ನಿಷ್ಕಾರುಣವಾಗಿ ಶಿಕ್ಷಕ ಮಹಾಪಾತ್ರ ರನ್ನು ಥಳಿಸಿ, ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ.

  • ಆದಿವಾಸಿ ರಾಣಿ ಕಿರೀಟ ಧರಿಸಿದ ಪಲ್ಲವಿ ದುರುವಾ

    ಆದಿವಾಸಿ ರಾಣಿ ಕಿರೀಟ ಧರಿಸಿದ ಪಲ್ಲವಿ ದುರುವಾ

    ಭುವನೇಶ್ವರ್: ಮೊದಲ ಆದಿವಾಸಿ ಜನಾಂಗದ ರಾಣಿ ಎಂಬ ಹೆಗ್ಗಳಿಕೆಗೆ ಓಡಿಶಾದ ಪಲ್ಲವಿ ದುರುವಾ ಪಾತ್ರರಾಗಿದ್ದಾರೆ.

    ನಗರದ ಉತ್ಕಳ್ ಮಂಡಪ್ ದಲ್ಲಿ ಭಾನುವಾರ ನಡೆದ ಆದಿವಾಸಿ ರಾಣಿ ಕಳಿಂಗಾ ಸ್ಪರ್ಧೆಯಲ್ಲಿ ಆದಿವಾಸಿ ರಾಣಿ ಕಿರೀಟವನ್ನು ಧರಿಸಿದರು. ಓಡಿಶಾದ ಕೊರಪುಟ್ ಜಿಲ್ಲೆಯವರಾದ ಪಲ್ಲವಿ ದುರುವಾ ಆದಿವಾಸಿ ರಾಣಿ ಹೆಗ್ಗಳಿಕೆಗೆ ಪಾತ್ರವಾದರೆ ದ್ವಿತಿಯ ಸ್ಥಾನವನ್ನು ತಿತ್ಲಘರ್ ದ ಪಂಚಮಿ ಮಝಿ ಹಾಗೂ ತೃತೀಯ ಸ್ಥಾನವನ್ನು ರಶ್ಮಿರೇಖಾ ಹನ್ಸ್‍ದಾ ಪಡೆದು ಸಂಭ್ರಮಿಸಿದರು.

    ಈ ಸಮಾರಂಭದಲ್ಲಿ ಮಾತನಾಡಿದ ವಿಜೇತೆ ಪಲ್ಲವಿ, ಹಲವಾರು ಆದಿವಾಸಿ ಸಮುದಾಯದ ಹೆಣ್ಣು ಮಕ್ಕಳು ಹೊರಗಡೆ ಸುತ್ತಾಡುವಂತಿಲ್ಲ, ವಿದ್ಯಾಭ್ಯಾಸವನ್ನೂ ಕೂಡ ಮಾಡುತ್ತಿಲ್ಲ. ಈಗ ನಾನು ಈ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಅವರೆಲ್ಲರಿಗೂ ಮಾದರಿಯಾಗಿದ್ದೇನೆ. ಇದರಿಂದಲಾದರೂ ಆದಿವಾಸಿ ಸಮುದಾಯದ ಹೆಣ್ಣುಮಕ್ಕಳು ಮೂಢನಂಬಿಕೆಗಳನ್ನು ಬಿಟ್ಟು ಜಗತ್ತನ್ನು ಎದುರಿಸುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಸ್ಪರ್ಧೆಯಲ್ಲಿ ಬುಡಕಟ್ಟು ಉಡುಪು, ಛಾಯಾಗ್ರಹಣ, ಉತ್ತಮ ಚರ್ಮ, ಉತ್ತಮ ಪ್ರಸ್ತುತಿ, ಉತ್ತಮ ವ್ಯಕ್ತಿತ್ವ, ಮತ್ತು ಪ್ರತಿಭೆ ಸೇರಿದಂತೆ ಹಲವು ವಿಭಾಗಗಳಲ್ಲಿ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಆದಿವಾಸಿ ಸಮುದಾಯ ಕುರಿತ ಕಿರುಚಿತ್ರ ನಿರ್ಮಾಣವಾಗುತ್ತಿದ್ದು ಮುಂಬೈ ಮೂಲದ ನಿರ್ಮಾಪಕರು ಇದನ್ನು ಹೊರತರುತ್ತಿದ್ದಾರೆ.

     

    ಈ ಸ್ಪರ್ಧೆಯಲ್ಲಿ ರಾಜ್ಯ ಹಾಗು ರಾಷ್ಟ್ರ ಮಟ್ಟದ ಪ್ರಸಿದ್ದ ವ್ಯಕ್ತಿಗಳು ನಿರ್ಣಾಯಕರಾಗಿ ಆಗಮಿಸಿದ್ದರು. ಅಲ್ಲದೇ ಪದ್ಮಶ್ರೀ ಪ್ರಸಸ್ತಿ ಪುರಸ್ಕೃತ ಹಾಗೂ ಕಾರ್ಯಕ್ರಮದ ರಾಯಭಾರಿಗಳೂ ಆದ ತುಳಸಿ ಮುಂಡಾ ಇದರ ನಾಯಕತ್ವವನ್ನು ವಹಿಸಿದ್ದರಿದ್ದರು.

    ಓಡಿಶಾ ಸರ್ಕಾರದ ಎಸ್‍ಸಿ, ಎಸ್‍ಟಿ ಇಲಾಖೆಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ದೇಶದ ವಿವಿಧ ಭಾಗಗಳ ಆದಿವಾಸಿ ಸ್ಫರ್ಧಾಳುಗಳು ತಮ್ಮ ಸಮುದಾಯವನ್ನು ಪ್ರತಿನಿಧಿಸಿದ್ದರು. ಅಲ್ಲದೇ 20 ಕ್ಕೂ ಹೆಚ್ಚು ಸ್ಪರ್ಧಾಳುಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಬುಡಕಟ್ಟು ಹಲೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಸ್ಫರ್ಧಾಳುಗಳು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು  ಹೆಜ್ಜೆಹಾಕಿದರು.

    ಈ ಕುರಿತಂತೆ ಮಾತನಾಡಿದ ಈ ಲಾರ್ಯಕ್ರಮದ ಮುಖ್ಯಸ್ಥ ಚಿದಾತ್ಮಿಕ ಕಟುವಾ ಇಂದು ನಾವು ರಾಷ್ಟ್ರಮಟ್ಟದಲ್ಲಿ ಆದಿವಾಸಿ ಸಮುದಾಯದ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಇತಿಹಾಸವನ್ನು ಸೃಸ್ಟಿಸಿದ್ದೇವೆ. ರಾಣಿ ಎಂಬ ಪದವು ಅದು ಕೇವಲ ಸೌಂದರ್ಯಕ್ಕೆ ಸೀಮಿತವಾಗಿಲ್ಲ. ಆದಿವಾಸಿ ರಾಣಿ ಎಂದಾಗ ನಾವು ಅವರನ್ನು ಅವರ ನೃತ್ಯ ಹಾಗೂ ಕಲೆಯ ಮೂಲಕ ಗುರುತಿಸಬೇಕಾಗುತ್ತದೆ. ಈ ಮೂಲಕ ನಾವಿಂದು ಆದಿವಾಸಿ ಸಮುದಾಯಗಳಿಗೆ ಅವುಗಳದೇ ಆದ ಛಾಪನ್ನು ಮೂಡಿಸಿದ್ದೇವೆ ಎಂದರು.