Tag: ಓಟಿಪಿ

  • ಓಟಿಪಿ ಬರದೇ ವೋಟಿಲ್ಲ- ಮೊಬೈಲ್ ಟವರ್‌ಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಅಭಿಯಾನ

    ಓಟಿಪಿ ಬರದೇ ವೋಟಿಲ್ಲ- ಮೊಬೈಲ್ ಟವರ್‌ಗೆ ಆಗ್ರಹಿಸಿ ಗ್ರಾಮಸ್ಥರಿಂದ ವಿನೂತನ ಅಭಿಯಾನ

    ಚಿಕ್ಕಮಗಳೂರು: ಮೊಬೈಲ್ ಟವರ್ (Mobile Tower) ಗೆ ಆಗ್ರಹಿಸಿ ಗ್ರಾಮಸ್ಥರು ವಿನೂತನ ಅಭಿಯಾನ ನಡೆಸುತ್ತಿದ್ದಾರೆ.

    ಹೌದು. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಲಿಗೆ, ಮೆಣಸಿನ ಹ್ಯಾಡ ಈ ಕಾಡಂಚಿನ ಗ್ರಾಮಸ್ಥರು ಈ ಅಭಿಯಾನ ಶುರು ಮಾಡಿದ್ದಾರೆ. ಭರವಸೆ ಬೇಕಿಲ್ಲ, ಮೊಬೈಲ್ ಟವರ್ ಬೇಕು ಎಂದು ಆಗ್ರಹಿಸಿ ಓಟಿಪಿ (OTP) ಬರದೇ ವೋಟಿಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

    ನಕ್ಸಲ್ ಪೀಡಿತ ಪ್ರದೇಶಗಳೆಂಬ ಹಣೆಪಟ್ಟಿ ಹೊತ್ತ ಬಲಿಗೆ, ಮೆಣಸಿನ ಹ್ಯಾಡ ಗ್ರಾಮಗಳಲ್ಲಿ ಇದೀಗ ಮತದಾನ ಬಹಿಷ್ಕಾರದ ಕೂಗು ಎದ್ದಿದೆ. ಸುಮಾರು 70 ಕುಟುಂಬಗಳಿರುವ ಗ್ರಾಮದಲ್ಲಿ ದಶಕಗಳಿಂದ ಮೊಬೈಲ್ ನೆಟ್ ವರ್ಕ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ಗ್ರಾಮಸ್ಥರು ಹೈರಾಣಾಗುತ್ತಿದ್ದಾರೆ. ಟವರ್ ಗೆ ಆಗ್ರಹಿಸಿ ಮನವಿ, ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

    ಈ ಹಿನ್ನೆಲೆಯಲ್ಲಿ ಇದೀಗ ಗ್ರಾಮದ ಜನ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಅಭಿಯಾನ ಆರಂಭ ಮಾಡುವ ಮೂಲಕ ವಿನೂತನವಾಗಿ ರಾಜಕೀಯ ನಾಯಕರುಗಳ ಗಮನಕ್ಕೆ ತರಲು ಮುಂದಾಗಿದ್ದಾರೆ. ಇದನ್ನೂ ಓದಿ: ಆಕಸ್ಮಿಕವಾಗಿ ಗುಂಡು ತಗುಲಿ ಯೋಗಿ ಆದಿತ್ಯನಾಥ್ ಭದ್ರತಾ ಸಿಬ್ಬಂದಿ ಸಾವು

  • ಬ್ಯಾಂಕ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ 7 ಲಕ್ಷ ವಂಚನೆ!

    ಬ್ಯಾಂಕ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ 7 ಲಕ್ಷ ವಂಚನೆ!

    ಮುಂಬೈ: ಬ್ಯಾಂಕ್‍ನ ಓಟಿಪಿ(ಒನ್ ಟೈಮ್ ಪಾಸವರ್ಡ್)ಯನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯ ಖಾತೆಯಿಂದ 7 ಲಕ್ಷ ರೂಪಾಯಿಗಳನ್ನು ವಂಚನೆ ಮಾಡಿದ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ.

    40 ವರ್ಷದ ನೆರುಲ್ ಹಣ ಕಳೆದುಕೊಂಡ ಮಹಿಳೆ. ತಸ್ನೀಮ್ ಮುಜ್ಜಕ್ಕರ್ ಮೊದಕ್ ಹೆಸರಿನ ಆರೋಪಿಯು ಮೇ 17ರಂದು ಮಹಿಳೆಗೆ ಕರೆ ಮಾಡಿ ತನ್ನನ್ನು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಎಟಿಎಂ ಕಾರ್ಡ್ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಪುನಃ ಸರಿಪಡಿಸಲು ಎಟಿಎಂನ ಮಾಹಿತಿಗಳನ್ನು ಕೇಳಿದ್ದಾನೆ.

    ಇದನ್ನು ನಂಬಿದ ಆಕೆಯು ತನ್ನ ಎಟಿಎಂನ 16 ಅಂಕಿಗಳು ಹಾಗೂ ಎಲ್ಲಾ ಗುಪ್ತ ಮಾಹಿತಿಗಳನ್ನು ಆರೋಪಿಯೊಂದಿಗೆ ಹಂಚಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಆರೋಪಿಯು 28 ಬಾರಿ ಮೊಬೈಲ್‍ಗೆ ಓಟಿಪಿಯನ್ನು ಕಳುಹಿಸಿದ್ದ, ಸಂದೇಶಗಳನ್ನು ಅವನೊಂದಿಗೆ ಹಂಚಿಕೊಂಡಿದ್ದಾರೆ. ಬಳಿಕ ಖಾತೆಯಿಂದ ಒಟ್ಟು 7 ಲಕ್ಷ 20 ಸಾವಿರ ರೂಪಾಯಿ ಕಡಿತಗೊಂಡಾಗ ಅನುಮಾನಗೊಂಡು ಬ್ಯಾಂಕ್‍ನಲ್ಲಿ ವಿಚಾರಿಸಿದ್ದಾರೆ. ಬ್ಯಾಂಕ್‍ನಲ್ಲಿ ವಂಚನೆಯಾಗಿರುವುದು ತಿಳಿದ ಬಳಿಕ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

    ಪೊಲೀಸ್ ಅಧಿಕಾರಿಯಾದ ಬಿ. ಎನ್. ಆಟಿರವರು ಮಾತನಾಡಿ, ಆರೋಪಿಯು ಮಹಿಳೆಗೆ ಬ್ಯಾಂಕ್ ಅಧಿಕಾರಿಯೆಂದು ಕರೆ ಮಾಡಿದ್ದಾನೆ. ಮಹಿಳೆಯ ಎಟಿಎಂನ ಮಾಹಿತಿಯನ್ನು ಪಡೆದುಕೊಂಡು ಹಂತ ಹಂತವಾಗಿ ಹಣ ಎಗರಿಸಿದ್ದಾನೆ. ಒಟ್ಟು ಆರೋಪಿಯು 6,98,973 ರೂಪಾಯಿ ವಂಚನೆ ಮಾಡಿದ್ದು, ಆರೋಪಿಯು ಮೂರು ಬೇರೆ ಬೇರೆ ಸಿಮ್‍ಗಳನ್ನು ಕೃತ್ಯಕ್ಕೆ ಬಳಸಿರುವುದು ತಿಳಿದು ಬಂದಿದೆ. ಮುಂಬೈ, ನೋಯ್ಡಾ, ಗುರುಗಾವ್, ಕೊಲ್ಕತ್ತಾ ಮತ್ತು ಬೆಂಗಳೂರಿನ ವಿವಿಧ ನಗರಗಳಲ್ಲಿ ಆನ್‍ಲೈನ್ ಮೂಲಕ ವಹಿವಾಟು ನಡೆಸಿದ್ದಾನೆಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

    ಹೆಚ್ಚಿನ ಆನ್‍ಲೈನ್ ವಂಚನೆಗಳಲ್ಲಿ ಆರೋಪಿಗಳು ತಾವು ಬ್ಯಾಂಕ್‍ನ ಸಿಬ್ಬಂದಿಗಳೆಂದು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಮಾಧ್ಯಮಗಳ ಮೂಲಕ ಗ್ರಾಹಕರನ್ನು ಎಚ್ಚರಿಸುತ್ತಿದ್ದರೂ, ಗ್ರಾಹಕರು ಪದೇ ಪದೇ ಇಂತಹ ವಂಚನೆ ಪ್ರಕರಣಗಳಿಗೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಯಾವುದೇ ಬ್ಯಾಂಕ್‍ನ ಸಿಬ್ಬಂದಿ ಅಥವಾ ಅಧಿಕಾರಿಗಳಾಗಲಿ ಗ್ರಾಹಕರಿಗೆ ಕರೆ ಮಾಡಿ ಯಾವುದೇ ಮಾಹಿತಿ ಪಡೆಯುವುದಿಲ್ಲವೆಂದು ಈ ವೇಳೆ ತಿಳಿಸಿದ್ದಾರೆ.