Tag: ಓಟ

  • ಚಿನ್ನ ಗೆದ್ದ ಖುಷಿಗೆ ಅಂಗಿ ಹರಿದುಕೊಂಡು ಸಂಭ್ರಮ ಪಟ್ಟ ಕ್ರೀಡಾಪಟು

    ಚಿನ್ನ ಗೆದ್ದ ಖುಷಿಗೆ ಅಂಗಿ ಹರಿದುಕೊಂಡು ಸಂಭ್ರಮ ಪಟ್ಟ ಕ್ರೀಡಾಪಟು

    ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಖುಷಿಗೆ ಕ್ರೀಡಾಪಟು ಓರ್ವ ತನ್ನ ಅಂಗಿಯನ್ನು ಹರಿದುಕೊಂಡು ಸಂಭ್ರಮ ಪಟ್ಟು ಇದೀಗ ವೈರಲ್ ಆಗುತ್ತಿದ್ದಾರೆ.

    ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದೆಂದರೆ ಸುಲಭದ ಮಾತಲ್ಲ. ಹಲವು ವರ್ಷಗಳ ಶ್ರಮ ಅಲ್ಲಿರುತ್ತದೆ. ಪುರುಷರ ವಿಭಾಗದ 400 ಮೀ. ಅಡೆತಡೆ ಓಟದಲ್ಲಿ ನಾರ್ವೇಯ ಕಾರ್ಸ್‍ಟೆನ್ ವಾರ್‍ಹೋಂ ಸ್ಪರ್ಧಿಸಿ ಕೇವಲ 45.94 ಗುರಿ ತಲುಪಿ ಚಿನ್ನದ ಪದಕದೊಂದಿಗೆ ಈ ಹಿಂದಿನ ವಿಶ್ವದಾಖಲೆಯನ್ನು ಮುರಿದರು. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​ನ ಚಿನ್ನದ ಮೀನು ಡ್ರೆಸ್ಸೆಲ್

    25 ವರ್ಷ ಪ್ರಾಯದ ಕಾರ್ಸ್‍ಟೆನ್ ವಾರ್‍ಹೋಂ ಒಲಿಂಪಿಕ್ಸ್‌ನಲ್ಲಿ ತನ್ನ ನೈಜ ಪ್ರದರ್ಶನ ತೋರಿ ಗುರಿಮುಟ್ಟುತಿದ್ದಂತೆ ತಾನು ಧರಿಸಿದ್ದ ಜೆರ್ಸಿಯನ್ನು ಹರಿದುಕೊಂಡು ಸಂಭ್ರಮ ಪಟ್ಟರು. ಈ ಸಂಭ್ರಮಾಚರಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ.

    400 ಮೀಟರ್ ಅಡೆತಡ ಓಟದಲ್ಲಿ ಅಮೆರಿಕದ ರೈ ಬೆಂಜಮಿನ್ 46.17 ಸೆಕೆಂಡುಗಳಲ್ಲಿ ಗುರಿಮುಟ್ಟಿ ಬೆಳ್ಳಿ ಪದಕ ಗೆದ್ದರೆ, ಬ್ರೆಜಿಲ್‍ನ ಅಲಿಸನ್ ಡಾಸ್ ಸ್ಯಾಂಟೋಸ್ 46.72 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದರು.

  • ಗಿನ್ನಿಸ್ ದಾಖಲೆಗಾಗಿ ಓಡುತ್ತಿರೋ ರಾಜಸ್ಥಾನದ ಓಟಗಾರ್ತಿಗೆ ನಾರಾಯಣ ಗೌಡ್ರಿಂದ ಸನ್ಮಾನ

    ಗಿನ್ನಿಸ್ ದಾಖಲೆಗಾಗಿ ಓಡುತ್ತಿರೋ ರಾಜಸ್ಥಾನದ ಓಟಗಾರ್ತಿಗೆ ನಾರಾಯಣ ಗೌಡ್ರಿಂದ ಸನ್ಮಾನ

    ಬೆಂಗಳೂರು: ಗಿನ್ನಿಸ್ ದಾಖಲೆಗಾಗಿ ಓಡುತ್ತಿರುವ ಓಟಗಾರ್ತಿ ಸೂಫಿಯಾರನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ನಾರಾಯಣಗೌಡ ಅವರು ವಿಧಾನಸೌಧದಲ್ಲಿ ಸ್ವಾಗತಿಸಿ, ಸನ್ಮಾನಿಸಿದರು.

    ಡಿಸೆಂಬರ್ ನಲ್ಲಿ ಡೆಲ್ಲಿಯಿಂದ ಓಟ ಆರಂಭಿಸಿ, ಇಂದು ಬೆಂಗಳೂರು ತಲುಪಿರುವ ಸೂಫಿಯಾ ಅವರು ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ ಎಂದು ಇದೇ ವೇಳೆ ಸಚಿವರು ಶ್ಲಾಘಿಸಿದರು. ರಾಜಸ್ಥಾನ ಮೂಲದ ಸೂಫಿಯಾ ಡಿಸೆಂಬರ್ 16 ರಂದು ಇಂಡಿಯಾಗೇಟ್ ನಿಂದ ಓಟ ಆರಂಭಿಸಿದ್ದಾರೆ. Run for hope ಹೆಸರಿನಲ್ಲಿ ಓಟ ಆರಂಭಿಸಿರುವ ಸೂಫಿಯಾ 6 ಸಾವಿರ ಕಿ.ಮಿ. ದೂರವನ್ನ 135 ದಿನಗಳ ಒಳಗಾಗಿ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಲು ಪಣತೊಟ್ಟಿದ್ದಾರೆ. Run for hope ಅಂದರೆ ಮಾನವೀಯತೆ, ಏಕತೆ, ಶಾಂತಿ, ಸಮಾನತೆ ಹಾಗೂ ಆರೋಗ್ಯಕರ ಜೀವನ ಶೈಲಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಈ ಓಟ ಆರಂಭಿಸಿದ್ದಾರೆ.

    2019 ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 4 ಸಾವಿರ ಕಿ.ಮಿ. ದೂರವನ್ನ ಕೇವಲ 87 ದಿನಗಳಲ್ಲಿ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವ ರಾಜಸ್ಥಾನ ಮೂಲದ ಕುಮಾರಿ ಸೂಫಿಯಾ, ಈಗ ಇನ್ನೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಹಂತದಲ್ಲಿದ್ದಾರೆ. ಇಂಡಿಯಾಗೇಟ್ ನಿಂದ ಓಟ ಆರಂಭಿಸಿರುವ ಸೂಫಿಯಾ ಇಂದು ಬೆಂಗಳೂರು ತಲುಪಿದ್ದಾರೆ. ಸುಮಾರು 2400 ಕಿ.ಮೀ. ಕ್ರಮಿಸಿರುವ ಸೂಫಿಯಾ ಚೆನೈ ನತ್ತ ಓಟ ಮುಂದುವರಿಸಿದ್ದಾರೆ.

    ಈ ವೇಳೆ ಮಾತನಾಡಿದ ಸಚಿವರು, ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಓಟದಲ್ಲೂ ದಾಖಲೆ ನಿರ್ಮಿಸುತ್ತಿರುವ ಸೂಫಿಯಾ ಅವರ ಕಾರ್ಯಕ್ಕೆ ಶುಭಕೋರಿದರು. ಸೂಫಿಯಾ ಅವರ ಈ ಕಾರ್ಯ ಕ್ರೀಡಾಪಟುಗಳಿಗೆ, ಯುವ ಜನತೆಗೆ ಸ್ಪೂರ್ತಿಯಾಗಿದೆ. ಕ್ರೀಡಾ ಇಲಾಖೆಯ ಸಚಿವನಾಗಿ ಸೂಫಿಯಾ ಅವರನ್ನ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ ಅಂತ ತಿಳಿಸಿದ್ರು. ಈ ಹಿಂದೆ ಪುಣೆ ಮೂಲದ ಮಿಶೆಲ್ ಕಾಕಡೆ ಎಂಬವರು 190 ದಿನಗಳಲ್ಲಿ 6 ಸಾವಿರ ಕಿ.ಮೀ. ದೂರವನ್ನ ಓಡಿದ್ದರು. ಈಗ 135 ದಿನಗಳ ಒಳಗೆ ಈ ದೂರವನ್ನ ಓಡಿ ಗಿನ್ನಿಸ್ ದಾಖಲೆ ನಿರ್ಮಿಸಲು ಸೂಫಿಯಾ ಮುಂದಾಗಿದ್ದಾರೆ. ವೇಗದ ಮಹಿಳಾ ರನ್ನರ್ ಎಂಬ ಗೌರವಕ್ಕೆ ಪಾತ್ರರಾಗಿರುವ ಸೂಫಿಯಾ, 2018ರಲ್ಲಿ ಡೆಲ್ಲಿ-ಆಗ್ರಾ-ಜೈಪುರ್ ನಡುವೆ 16 ದಿನಗಳಲ್ಲಿ ಓಡಿ ಗುರಿ ತಲುಪಿದ್ದಾರೆ.

    2019ರಲ್ಲಿ 1000, 2000, 3000 ಕಿ.ಮೀ. ಓಡಿದ್ದಾರೆ. ದೆಹಲಿಯಿಂದ ಕೊಲ್ಕತ್ತಾ ಕ್ಕೆ 29 ದಿನಗಳಲ್ಲಿ ಓಡಿ ತಲುಪಿದ್ದಾರೆ. ಸೂಫಿಯಾ ವರ್ಷದ ಹಿಂದೆಯೆ Run for hope ಹೆಸರಿನಲ್ಲಿ ಓಡಿ ದಾಖಲೆ ನಿರ್ಮಿಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ 44 ದಿನಗಳಲ್ಲಿ 2200 ಕಿ.ಮೀ. ಓಡಿ ಅರ್ಧದಲ್ಲೆ ಓಟ ನಿಲ್ಲಿಸಿದ್ರು. ತಮ್ಮ ಕನಸನ್ನು ನನಸು ಮಾಡಲು ಡೆಲ್ಲಿಯಿಂದ ಮತ್ತೆ ಓಟ ಆರಂಭಿಸಿ, ಇಲ್ಲಿವರೆಗೆ ಸಾಗಿ ಬಂದಿದ್ದಾರೆ. ಸೂಫಿಯಾ ಅವರ ಜೊತೆಯಲ್ಲಿ ವಿಕಾಸ ಹಾಗೂ ಗುರ್ಲಿನ್ ಬಂದಿದ್ದಾರೆ. ವಿಕಾಸ್ ಅತ್ಯುತ್ತಮ ಸೈಕ್ಲಿಸ್ಟ್ ಆಗಿದ್ದಾರೆ. ಅಂದಹಾಗೆ ಸೂಫಿಯಾ ಈಗ ದಾಖಲೆ ನಿರ್ಮಿಸಿ, 2023 ರಲ್ಲಿ ಇಡಿ ವಿಶ್ವವನ್ನ ಎರಡು ವರ್ಷಗಳಲ್ಲಿ ಓಡಿ ಇನ್ನೊಂದು ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ.

  • 15 ದಿನದಲ್ಲಿ 4 ಚಿನ್ನದ ಪದಕ ಗೆದ್ದ ಹಿಮಾದಾಸ್

    15 ದಿನದಲ್ಲಿ 4 ಚಿನ್ನದ ಪದಕ ಗೆದ್ದ ಹಿಮಾದಾಸ್

    ನವದೆಹಲಿ: ವೇಗದ ಓಟಗಾರ್ತಿ ಹಿಮಾದಾಸ್ ಜೆಕ್ ಗಣರಾಜ್ಯದಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ 15 ದಿನಗಳಲ್ಲಿ ಬರೋಬ್ಬರಿ ನಾಲ್ಕು ಚಿನ್ನದ ಪದಕವನ್ನು ಪಡೆದುಕೊಂಡಿರುವ ಹೆಗ್ಗಳಿಕೆಗೆ ಹಿಮಾದಾಸ್ ಪಾತ್ರವಾಗಿದ್ದಾರೆ.

    ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ ಭಾರತದ ಮತ್ತೊಬ್ಬ ಓಟಗಾರ್ತಿ ವಿ.ಕೆ. ವಿಸ್ಮಯ ಅವರು 23.43 ಸೆಕೆಂಡ್‍ಗಳಲ್ಲಿ ಓಡುವ ಮೂಲಕ ಬೆಳ್ಳಿ ಪದಕವನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

    ಹಿಮಾದಾಸ್ ಜುಲೈ 2 ರಿಂದ ಇದುವರೆಗೂ ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ. ಮೊದಲನೆಯದಾಗಿ ಯುರೋಪ್‍ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಮೊದಲ ಚಿನ್ನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

    ನಾಲ್ಕು ಚಿನ್ನದ ಪದಕ:
    ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನ ಗೆದ್ದಿದ್ದರು. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಗೆದ್ದಿದ್ದರು. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. ಈಗ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

    ಈ ಬಗ್ಗೆ ಹಿಮಾದಾಸ್ ಟ್ವೀಟ್ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಹಿಮಾದಾಸ್ ತಮ್ಮ 200 ಮೀಟರ್ ಓಟವನ್ನು 23.25 ಅಂತರದಲ್ಲಿ ಮುಗಿಸುವ ಮೂಲಕ ಮೊದಲ ಸ್ಪರ್ಧೆಯ ಓಟದ ಸಮಯವನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದ್ದಾರೆ.

    ಪುರುಷರ ವಿಭಾಗದಲ್ಲಿ ಭಾರತದ ಮೊಹಮ್ಮದ್ ಅನಾಸ್ ಅವರು 400ಮೀ ಓಟವನ್ನು 45.40 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

  • ಭೂಮಿ ಅಷ್ಟೇ ಅಲ್ಲ, ಅಂತರಿಕ್ಷದಲ್ಲಿಯೂ ಬೋಲ್ಟ್ ವೇಗದ ಓಟಗಾರ- ವಿಡಿಯೋ ವೈರಲ್

    ಭೂಮಿ ಅಷ್ಟೇ ಅಲ್ಲ, ಅಂತರಿಕ್ಷದಲ್ಲಿಯೂ ಬೋಲ್ಟ್ ವೇಗದ ಓಟಗಾರ- ವಿಡಿಯೋ ವೈರಲ್

    ನವದೆಹಲಿ: ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ವ್ಯಕ್ತಿ ಎನ್ನುವ ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್, ಈಗ ಅಂತರಿಕ್ಷದಲ್ಲಿಯೂ ಅತಿ ವೇಗವಾಗಿ ಓಡಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

    ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ಉಸೇನ್ ಬೋಲ್ಟ್, ಗುರುತ್ವಾಕರ್ಷನೆ ಇರದ ಏರ್ ಬಸ್ಸಿನಲ್ಲಿ ಓಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ವಿಡಿಯೋದಲ್ಲಿ ಏನಿದೆ?
    ಗುರುತ್ವಾಕರ್ಷನೆ ಇಲ್ಲದ ಬಸ್ಸಿನಲ್ಲಿ ತಮ್ಮೊಂದಿಗೆ ಇದ್ದ ಇಬ್ಬರು ಪ್ರಯಾಣಿಕರ ಜೊತೆಗೆ ಓಟದ ಸ್ಪರ್ಧೆಗೆ ಇಳಿಯುತ್ತಾರೆ. ಓಟ ಆರಂಭಸಿದ ಬೋಲ್ಟ್ ನೆಲಕ್ಕೆ ಕಾಲು ತಾಕಿಸಲು ಕಷ್ಟಪಡಬೇಕಾಯಿತು. ತಮ್ಮ ಎದುರಿಗೆ ಇರುವ ಗೋಡೆಯನ್ನು ಮುಟ್ಟುವ ಮೊದಲೇ ಬೋಲ್ಟ್ ಜಾರಿ ಕೆಳಗೆ ಬೀಳುತ್ತಾರೆ. ತಕ್ಷಣವೇ ಪಲ್ಟಿ ಹೊಡೆದು ಗೋಡೆಯನ್ನು ಮುಟ್ಟಿ ವಾಪಾಸ್ ಆಗುತ್ತಾರೆ. ಮರಳಿ ಗುರಿಯತ್ತ ಬರುವಾಗ ಸ್ಪರ್ಧಿಗಳು ಬಹುದೂರವೇ ಉಳಿದಿರುತ್ತಾರೆ. ಈ ಮೂಲಕ ಗುರುತ್ವಾಕರ್ಷನೆ ಇಲ್ಲದ ಪ್ರದೇಶದಲ್ಲಿಯೂ ಬೋಲ್ಟ್ ವೇಗವಾಗಿ ಓಡಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

    ಫ್ರೆಂಚ್ ಗಗನಯಾತ್ರಿ ಜೀನ್ ಫ್ರಾಂಕೋಯಿಸ್ ಮತ್ತು ನೊವ್‍ಸ್ಪೇಸ್ ಓಕ್ಟಾವ್ ಡೆ ಗೌಲೆ ಬೋಲ್ಟ್ ಜೊತೆಗೆ ಸ್ಪರ್ಧಿಸಿದವರು. ಆದರೆ ಬೋಲ್ಟ್ ಅವರನ್ನು ಹಿಂದಿಕ್ಕಲು ವಿಫಲರಾಗಿದ್ದಾರೆ. ವಿಜಯದ ನಗೆ ಬೀರುತ್ತಿದ್ದಂತೆ ಬೋಲ್ಟ್ ತಮ್ಮ ಶೈಲಿಯಲ್ಲಿಯೇ ಎದೆಯನ್ನು ತಟ್ಟಿಕೊಂಡು ಸಂಭ್ರಮಿಸಿದ್ದಾರೆ. ‘ನಾನು ಸ್ವಲ್ಪ ಹೊತ್ತು ನಿಶಕ್ತನಾಗಿಬಿಟ್ಟಿದ್ದೇ. ಓ ದೇವರೇ ಏನಾಯಿತು ನನಗೆ ಎನ್ನುವ ಭಾವನೆ ಮೂಡಿತ್ತು. ಇದು ನನಗೆ ಉತ್ಸಾಹ (ಕ್ರೇಜ್) ತಂದುಕೊಟ್ಟಿದೆ ಎಂದು ಬೋಲ್ಟ್ ಹೇಳಿದ್ದಾರೆ.

    ಫುಟ್‍ಬಾಲ್ ಆಟದತ್ತ ಹೆಜ್ಜೆ ಹಾಕಿರುವ ಬೋಲ್ಟ್, ರಿಲ್ಯಾಕ್ಸ್ ಮೂಡ್‍ಗಾಗಿ ಇಂತಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಗುರುತ್ವಾಕರ್ಷನೆ ಇಲ್ಲದ ಬಸ್ಸಿನಲ್ಲಿ ನಾಲ್ಕು ನಿಮಿಷಗಳ ಕಾಲ ಜೀಗಿಯುತ್ತ ಹಾಗೂ ಹಾಸ್ಯ ಮಾಡುತ್ತ ಸಹ ಪ್ರಯಾಣಿಕರನ್ನು ರಂಜಿಸಿದ್ದಾರೆ. ವೃತ್ತಿಪರ ಫುಟ್‍ಬಾಲ್ ಆಟಗಾರರಾಗುವ ಉದ್ದೇಶದಿಂದ ಆಸ್ಟ್ರೇಲಿಯಾದ ಮ್ಯಾರಿನೆರ್ ನಲ್ಲಿ ಬೋಲ್ಟ್ ತರಬೇತಿ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕೋಲಾರದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಒಲಿಂಪಿಕ್ ಓಟ

    ಕೋಲಾರದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಒಲಿಂಪಿಕ್ ಓಟ

    ಕೋಲಾರ: ಶಾಂತಿ ಮತ್ತು ಸೌಹಾರ್ದತೆಗಾಗಿ ಓಟ ಎಂಬ ಘೋಷವಾಕ್ಯದ ಅಡಿ ಭಾನುವಾರ ನಗರದಲ್ಲಿ `ಒಲಿಂಪಿಕ್ ಡೇ ರನ್-2018′ ಓಟವನ್ನು ಆಯೋಜಿಸಲಾಗಿತ್ತು.

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಬೆಂಗಳೂರು, ಕೋಲಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಒಲಿಂಪಿಕ್ ಡೇ ರನ್-2018 ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.

    ಒಲಿಂಪಿಕ್ ಡೇ ರನ್-2018 ಕಾರ್ಯಕ್ರಮವನ್ನು ಸ್ಯಾಂಡಲ್‍ವುಡ್ ನಟ ನೆನಪಿರಲಿ ಪ್ರೇಮ್ ಚಾಲನೆ ನೀಡಿ ಕ್ರೀಡಾಭಿಮಾನಿಗಳನ್ನ ಪ್ರೋತ್ಸಾಹಿಸಿದರು. ಈ ವೇಳೆ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ಒಲಿಂಪಿಕ್ ನಲ್ಲಿ ಭಾರತ ಹೆಚ್ಚು ಹೆಚ್ಚು ಚಿನ್ನದ ಪದಕಗಳನ್ನ ಗಳಿಸಲಿ ಎಂದು ಹಾರೈಸಿದರು.

    ಇನ್ನೂ ಸ್ಯಾಂಡಲ್ ವುಡ್‍ನಲ್ಲಿ ಎದ್ದಿರುವ ದಿ ಬಾಸ್ ಹಾಗೂ ವಿಲನ್ ಸಿನಿಮಾ ಕಾಂಟ್ರವರ್ಸಿ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ನಾನು ಕೇವಲ ಕ್ರೀಡೆ ಬಗ್ಗೆ ಮಾತ್ರ ಮಾತನಾಡುತ್ತೇನೆ, ಬೆಳ್ ಬೆಳಗ್ಗೆ ಒಳ್ಳೆಯದನ್ನು ಮಾತ್ರ ಮಾತನಾಡಬೇಕು ಎಂದು ಬೆಳ್ಳಿ ತೆರೆಯ ಗಾಸಿಪ್ ಸುದ್ದಿಗೆ ತೆರೆ ಎಳೆದರು.

    ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ನಿಂದ ಪ್ರಾರಂಭಿಸಿ ಶ್ರೀ ವಿಶ್ವೇಶ್ವರಯ್ಯ ಕ್ರೀಡಾಂಗಣದವರೆಗೂ ಕ್ರೀಡಾಭಿಮಾನಿಗಳು, ಯುವಕ-ಯುವತಿಯರು, ಪುರುಷ-ಮಹಿಳೆಯರು, ನೌಕರರು, ಕ್ರೀಡಾಪಟುಗಳು ಸೇರಿದಂತೆ ನೂರಾರು ಮಂದಿ ಒಲಿಂಪಿಕ್ ಓಟದಲ್ಲಿ ಭಾಗವಹಿಸಿದ್ದರು.

    ಈ ವೇಳೆ ಎಂಎಲ್‍ಸಿ ಗೋವಿಂದ ರಾಜು, ಪ್ರಭಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ರೋಹಿಣಿ ಕಟೋಚ್ ಸಪೆಟ್ ಕೂಡ ಒಲಿಂಪಿಕ್ ಡೇ ಓಟದಲ್ಲಿ ಪಾಲ್ಗೊಂಡಿದ್ದರು.