ಶಬರಿಮಲೆ: ನೀವು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದೀರಾ..? ಹಾಗಿದ್ದರೆ ಸ್ವಲ್ಪ ಎಚ್ಚರ ವಹಿಸಿ, ಸಾಧ್ಯವಾದರೆ ನಿಮ್ಮ ಯಾತ್ರೆಯನ್ನು ಇನ್ನೆರಡು ದಿನ ಮುಂದೂಡೋಕಾಗುತ್ತಾ ನೋಡಿ. ಯಾಕೆಂದರೆ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಬುಧವಾರ ಉಂಟಾದ ವಾಯುಭಾರ ಕುಸಿತದಿಂದಾಗಿ ಗುರುವಾರ ಬೆಳಗಿನಿಂದ ತಮಿಳುನಾಡು ಹಾಗೂ ಕೇರಳದ ಕೆಲವೆಡೆ ಭಾರೀ ಮಳೆಯಾಗುತ್ತಿದೆ.
‘ಓಖಿ’ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಕನ್ಯಾಕುಮಾರಿ, ತಿರುವನಂತಪುರ ಹಾಗೂ ಕೊಲ್ಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಜನರು ಮನೆಯಿಂದ ಹೊರ ಬರದಂತೆ ವಿಪತ್ತು ನಿರ್ವಹಣಾ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಚಂಡಮಾರುತದಿಂದಾಗಿ ಶಬರಿಮಲೆ ದೇಗುಲವಿರುವ ಪತ್ತನಂತಿಟ್ಟ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಇಂದು ಬೆಳಗ್ಗೆ ಶಬರಿಮಲೆ ಸುತ್ತಮುತ್ತ ಭಾರೀ ಮಳೆಯಾಗಿದೆ. ಇದರಿಂದಾಗಿ ಪಂಪಾ ನದಿಯಲ್ಲಿ ನೀರಿನ ಹರಿವಿನ ಮಟ್ಟ ಏರಿಕೆಯಾಗಿದೆ. ಪಂಪಾ ನದಿಯಲ್ಲಿ ಯಾರೂ ನೀರಿಗಿಳಿಯಬೇಡಿ ಎಂದು ಈಗಾಗಲೇ ಅಯ್ಯಪ್ಪ ಭಕ್ತರಿಗೆ ಸೂಚನೆ ಹೊರಡಿಸಲಾಗಿದೆ. ಜೊತೆಯಲ್ಲಿ ಪಂಪಾ ನದಿಯ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ.

ಅಯ್ಯಪ್ಪನ ದರ್ಶನಕ್ಕೆ ಬ್ರೇಕ್!: ಶಬರಿಮಲೆ ಯಾತ್ರಿಕರು ಬೆಟ್ಟ ಪ್ರದೇಶದಲ್ಲಿ ಸಂಜೆ 6ರಿಂದ ಬೆಳಗ್ಗೆ 7 ಗಂಟೆವರೆಗೆ ಯಾವುದೇ ಸಂಚಾರ ಮಾಡಬೇಡಿ. ಶಬರಿಮಲೆಗೆ ಹೋಗಲು ಅರಣ್ಯ ಪ್ರದೇಶದಲ್ಲಿರುವ ಕಾಲು ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸಬೇಡಿ ಎಂದು ಸರ್ಕಾರ ಮೌಖಿಕ ಸೂಚನೆ ನೀಡಿದೆ. ಮೊಬೈಲ್ ಫೋನ್ ಚಾರ್ಜ್ ಹಾಗೂ ಲೈಟ್ ಗಳಲ್ಲಿ ಬ್ಯಾಟರಿ ಚಾರ್ಜ್ ಫುಲ್ ಆಗಿರುವಂತೆ ನೋಡಿಕೊಳ್ಳಿ.
ಭಾರೀ ಮಳೆಯಾಗುತ್ತಿದ್ದರೆ ಸನ್ನಿಧಾನದಿಂದ ಬೆಟ್ಟ ಇಳಿಯಬೇಡಿ. ಮರದ ಕೆಳಗೆ ನಿಲ್ಲಬೇಡಿ. ನದಿ ನೀರಿನಲ್ಲಿ ಸ್ನಾನ ಮಾಡುವ ಸಾಹಸಕ್ಕೆ ಇಳಿಯಬೇಡಿ. ಪಂಪಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ನೀರಿನಲ್ಲಿ ಮುಳುಗಿ ಸ್ನಾನ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಪಂಪಾ ನದಿ ಸಮೀಪದ ತ್ರಿವೇಣಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಎಲ್ಲಾ ವಾಹನಗಳನ್ನು ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಾಂತರಿಸಲಾಗಿದೆ. ಶಬರಿಮಲೆ ಯಾತ್ರೆ ವೇಳೆ ಮರದ ರೆಂಬೆ ಮುರಿದು ಬಿದ್ದು ಆಲೆಪ್ಪಿಯ ಅಯ್ಯಪ್ಪ ವ್ರತಧಾರಿ ವಿವೇಕ್ ಎಂಬವರಿಗೆ ಗಾಯವಾಗಿದೆ. ಈ ಕ್ಷಣದವರೆಗೆ ಭಕ್ತರು ಶಬರಿಮಲೆ ದರ್ಶನಕ್ಕೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. ಆದರೆ, ಮಳೆ ಹಿನ್ನೆಲೆಯಲ್ಲಿ ಶಬರಿಮಲೆಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. (ಇದನ್ನೂ ಓದಿ:ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್: ಐಸಿಸ್ ಸಂಚು ಏನು ಗೊತ್ತಾ?)

85 ಕಿಮೀ ವೇಗ: ದಕ್ಷಿಣ ತಮಿಳುನಾಡಿನಿಂದ ಗಂಟೆಗೆ 85 ಕಿಮೀ ವೇಗದಲ್ಲಿ ಲಕ್ಷದ್ವೀಪದ ಕಡೆಗೆ ಚಂಡಮಾರುತ ಸಾಗುತ್ತಿದೆ. ಈಗಾಗಲೇ ತಮಿಳುನಾಡು, ಕನ್ಯಾಕುಮಾರಿ, ಕೇರಳದಲ್ಲಿ ಮಳೆಗೆ ನಾಲ್ವರು ಸಾವನ್ನಪ್ಪಿದ್ದು, 23 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕೇರಳ, ತಮಿಳುನಾಡಿನ ಕೆಲಭಾಗ ಹಾಗೂ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲೂ ಮಳೆ: ಚಂಡಮಾರುತದ ಎಫೆಕ್ಟ್ ನಿಂದಾಗಿ ಬೆಂಗಳೂರಿನ ಕೆಲವೆಡೆ ಇಂದು ಬೆಳಗ್ಗೆಯಿಂದಲೇ ತುಂತುರು ಮಳೆಯಾಗಿದೆ. ದಿನದ ಬಹುತೇಕ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆಯೇ ಮತ್ತೆ ತುಂತುರು ಮಳೆ ಶುರುವಾಗಿದೆ. ಯಶವಂತಪುರ, ಮಲ್ಲೇಶ್ವರಂ, ಜಾಲಹಳ್ಳಿ, ಕೆ.ಆರ್.ಸರ್ಕಲ್, ಕಾರ್ಪೊರೇಷನ್, ಶಾಂತಿನಗರ, ರಾಜರಾಜೇಶ್ವರಿ ನಗರ, ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಮೋಡ ಕವಿದ ವಾತಾವರಣ, ತುಂತುರು ಮಳೆ ನಾಳೆಯೂ ಮುಂದುವರೆಯುವ ಸಾಧ್ಯತೆಯಿದೆ.













