Tag: ಒಳಚರಂಡಿ

  • ವಿಲವಿಲ ಅಂತ ಒದ್ದಾಡಿ ಸಾವನ್ನಪ್ಪಿದವು ಸಾವಿರಾರು ಮೀನುಗಳು..!

    ವಿಲವಿಲ ಅಂತ ಒದ್ದಾಡಿ ಸಾವನ್ನಪ್ಪಿದವು ಸಾವಿರಾರು ಮೀನುಗಳು..!

    ಚಿಕ್ಕಬಳ್ಳಾಪುರ: ಇದ್ದಕ್ಕಿದ್ದಂತೆ ಸಾವಿರಾರು ಮೀನುಗಳು ಒಮ್ಮೇಲೆ ವಿಲವಿಲ ಒದ್ದಾಡಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಅಮಾನಿಗೋಪಾಲಕೃಷ್ಣ ಕೆರೆಯಲ್ಲಿ ನಡೆದಿದೆ.

    ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಅಮಾನಿಗೋಪಾಲಕೃಷ್ಣ ಕೆರೆಯಲ್ಲಿ ಮೀನುಗಳ ಮಾರಣ ಹೋಮವೇ ನಡೆದು ಹೋಗಿದೆ. ರಾಶಿ ರಾಶಿ ಮೀನುಗಳು ಸತ್ತು ದಡ ಸೇರಿದ್ರೇ ಅಳಿದುಳಿದಿರುವ ಮೀನುಗಳು ವಿಲವಿಲ ಅಂತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಅಂದಹಾಗೆ ಗಂಗಾಧರ್-ಮಂಜುಳಮ್ಮ ದಂಪತಿ ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಟೆಂಡರ್ ಪಡೆದಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿರೋ ದಂಪತಿ 2 ಲಕ್ಷ ಸಾಲ ಸೋಲ ಮಾಡಿ ಕೆರೆಯಲ್ಲಿ ಮೀನು ಮರಿಗಳನ್ನ ಬಿಟ್ಟು ಸಾಕಾಣಿಕೆ ಮಾಡುತ್ತಿದ್ದರು. ಆದ್ರೆ ಕಳೆದ ಎರಡು ಮೂರು ದಿನಗಳಿಂದ ಇದ್ದಕ್ಕಿದ್ದಂತೆ ಮೀನುಗಳು ಸಾವನ್ನಪ್ಪುತ್ತಿರೋದು ಬಡದಂಪತಿಗೆ ನೋವು ತಂದಿದೆ.

    ಸಾಲ ಸೋಲ ಮಾಡಿ ಮೀನು ಸಾಕಾಣಿಕೆ ಮಾಡುತ್ತಿದ್ದ ದಂಪತಿ ಮೀನುಗಳ ಸಾವಿನಿಂದ ಕಂಗಲಾಗಿದ್ದು ಮಾಡಿದ ಸಾಲ ತೀರಿಸೋದಾದ್ರೂ ಹೇಗೆ ಅಂತ ಕಣ್ಣೀರು ಸುರಿಸುತ್ತಿದ್ದಾರೆ. ಇನ್ನೂ ನಗರಸಭೆಯ ಒಳಚರಂಡಿ ಘಟಕದ ನೀರು ಕರೆಗೆ ಸೇರಿರುವುದು ಮೀನುಗಳ ಸಾವಿಗೆ ಕಾರಣ ಅಂತ ಶಂಕಿಸಿಲಾಗಿದೆ. ಮತ್ತೊಂದೆಡೆ ಚಳಿಗಾಲದಲ್ಲಿ ಅಮ್ಲಜನಕದ ಕೊರತೆಯಿಂದ ಮೀನುಗಳು ಸಾವನ್ನಪ್ಪೋದು ಸರ್ವೆ ಸಾಮಾನ್ಯ ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು!

    ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು!

    ಉಡುಪಿ: ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.

    ಕಾಪು ತಾಲೂಕಿನ ನಗರದೊಳಗೆ ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ದಾಸಪ್ಪ ಮತ್ತು ಉಮೇಶ್ ಎಂಬ ಚಿತ್ರದುರ್ಗ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಪುರಸಭೆಗೆ ಒಳಪಟ್ಟ ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

    ಸುಮಾರು 13 ಅಡಿ ಮಣ್ಣು ಅಗಿಯುತ್ತಿದ್ದಾಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ಘನ ವಾಹನಗಳಿಗೆ ಭೂಮಿ ಅದುರಿ ಮಣ್ಣು ಕುಸಿದಿದೆ ಎನ್ನಲಾಗಿದೆ. ಮೇಲಿನಿಂದ ಬಿದ್ದ ಭಾರೀ ಗಾತ್ರದ ಮಣ್ಣಿಗೆ ಕಾರ್ಮಿಕರು ಮೇಲೆ ಬರಲು ಸಾಧ್ಯವಾಗಲಿಲ್ಲ.

    ವಾಸುದೇವ ಶೆಟ್ಟಿ ಕಾಮಗಾರಿಯ ಗುತ್ತಿಗೆದಾರನಾಗಿದ್ದು ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರ್ಮಿಕರನ್ನು ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.

    ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • 22 ವರ್ಷಗಳಿಂದ ಒಳಚರಂಡಿಯಲ್ಲೇ ಇವರ ಸಂಸಾರ

    ಬೊಗೊಟಾ: ಕೆಲವರು ಎಷ್ಟು ದುಡ್ಡಿದ್ದರೂ ಎಷ್ಟೇ ದೊಡ್ಡ ಮನೆಯಿದ್ದರೂ ಮತ್ತಷ್ಟು ಶ್ರೀಮಂತಿಕೆಗೆ ಹಂಬಲಿಸುತ್ತಾರೆ. ಮತ್ತೂ ಕೆಲವರು ಹಾಸಿಗೆ ಇದ್ದಷ್ಟೇ ಕಾಲು ಚಾಚು ಅನ್ನೋ ಮಾತಿನಂತೆ ಇದ್ದದ್ದರಲ್ಲೇ ನೆಮ್ಮದಿಯಾಗಿರ್ತಾರೆ. ಇದಕ್ಕೆ ಉದಹರಣೆ ದಕ್ಷಿಣ ಅಮೆರಿಕದ ಕೊಲೊಂಬಿಯಾದ ಈ ದಂಪತಿ. ಹಲವಾರು ವರ್ಷಗಳಿಂದ ಇವರು ಒಳಚಂಡಿಯೊಂದರಲ್ಲೇ ಸಂಸಾರ ನಡೆಸುತ್ತಿದ್ದಾರೆ. ಶ್ರೀಮಂತಿಕೆ ವೈಭೋಗಗಳು ಇಲ್ಲದಿದ್ದರೂ ಸಂತೋಷವಾಗಿದ್ದಾರೆ.

    ಮರಿಯಾ ಗಾರ್ಸಿಯಾ ಮತ್ತು ಮೈಗುಯೆಲ್ ರೆಸ್ಟ್ರೆಪೋ ದಂಪತಿ 22 ವರ್ಷಗಳಿಂದ ಒಳಚಂಡಿಯಲ್ಲೇ ಸಂಸಾರ ಮಾಡುತ್ತಿದ್ದಾರೆ ಅಂದ್ರೆ ನಂಬಲೇಬೇಕು. ಈ ದಂಪತಿ ಮೊದಲು ಕೊಲೊಂಬಿಯಾದ ಮೆಡೆಲಿನ್‍ನಲ್ಲಿ ಭೇಟಿಯಾದಾಗ ಇಬ್ಬರೂ ಮಾದಕ ವ್ಯಸನಿಗಳಗಿದ್ದರು. ಈ ಪ್ರದೇಶ ಹೆಚ್ಚು ಹಿಂಸಾಚಾರ ಹಾಗೂ ಮಾದಕದ್ರವ್ಯಗಳ ಕಳ್ಳಸಾಗಣೆಯ ಕೇಂದ್ರವಾಗಿತ್ತು. ಬೀದಿಯಲ್ಲೇ ಬದುಕು ಸಾಗಿಸುತ್ತಿದ್ದ ಇವರ ಜೀವನವನ್ನು ಮಾದಕ ವ್ಯಸನ ಹಾಳು ಮಾಡಿತ್ತು. ಆದ್ರೆ ಈ ಇಬ್ಬರೂ ಪರಸ್ಪರ ಜೊತೆಯಾಗಿದ್ದು ಸಂತೋಷ ಕಂಡುಕೊಂಡಿದ್ದರು. ಹೀಗಾಗಿ ಮಾದಕ ವ್ಯಸನದಿಂದ ಮುಕ್ತರಾಗಬೇಕು ಅಂತ ತೀರ್ಮಾನಿಸಿದ್ದರು.

    ಹಣ ಮತ್ತು ಆಶ್ರಯ ನೀಡಲು ಇಬ್ಬರಿಗೂ ಕುಟುಂಬಸ್ಥರು ಹಾಗೂ ಸ್ನೇಹಿತರಿಲ್ಲದ ಕಾರಣ ಈ ಒಳಚರಂಡಿಯನ್ನೇ ಮನೆಯಾಗಿಸಿಕೊಂಡರು. ಒಳಚರಂಡಿಯಲ್ಲಿ ವಾಸ ಮಾಡೋದನ್ನ ಊಹೆ ಮಾಡಿಕೊಂಡರೆ ನಮ್ಮ ಕಣ್ಣಮುಂದೆ ಬರೋದು ಕೇವಲ ಗಲೀಜು ಹಾಗೂ ಧೂಳಿನ ಚಿತ್ರಣ. ಆದ್ರೆ ಅದಕ್ಕೆ ವಿರುದ್ಧವೆಂಬಂತೆ ಈ ದಂಪತಿ ಒಳಚರಂಡಿಯಲ್ಲೇ ಎಲ್ಲಾ ಅಗತ್ಯ ವಸ್ತುಗಳನ್ನಿಟ್ಟುಕೊಂಡು ಚೊಕ್ಕವಾದ ಮನೆ ಮಾಡಿಕೊಂಡಿದ್ದಾರೆ. ಇದರೊಳಗೆ ಟಿವಿ, ಟೇಬಲ್ ಫ್ಯಾನ್ ಹಾಗೂ ವಿದ್ಯುತ್ ಸಂಪರ್ಕವೂ ಇದೆ. ಅಲ್ಲದೆ ಹಬ್ಬದ ಸಂದರ್ಭದಲ್ಲಿ ಇವರು ಎಲ್ಲರಂತೆ ಮನೆಯನ್ನ ಸಿಂಗರಿಸ್ತಾರೆ.

    ದಂಪತಿಯ ಜೊತೆ ಬ್ಲಾಕಿ ಎಂಬ ನಾಯಿ ಕೂಡ ಇದ್ದು ಮಾಲೀಕರು ಇಲ್ಲದಿದ್ದಾಗ ಮನೆಯನ್ನು ಕಾಯುತ್ತದೆ.