Tag: ಒಲಿಂಪಿಕ್ಸ್ 2024

  • Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?

    Paris Olympics 2024 | ಕ್ರೀಡೆಗಳ ಮಹಾಸಂಗಮ; ಒಲಿಂಪಿಯಾ ಬೆಟ್ಟದಲ್ಲಿ ಹುಟ್ಟಿದ ಕ್ರೀಡೆ ವಿಶ್ವವಿಖ್ಯಾತಿಯಾಗಿದ್ದು ಹೇಗೆ?

    ಪ್ರಯಣನಗರಿ ಪ್ಯಾರಿಸ್‌ನಲ್ಲೀಗ ಒಲಿಂಪಿಕ್ಸ್‌ ಕ್ರೀಡಾಕೂಟ (Olympics 2024) ಸಂಭ್ರಮ ಮನೆ ಮಾಡಿದೆ. ಅದ್ಧೂರಿ ಕ್ರೀಡೋತ್ಸವ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ಅಖಾಡದಲ್ಲಿ ಸೆಣಸಲು ತೊಡೆ ತಟ್ಟಿ ನಿಂತಿದ್ದಾರೆ. ಒಲಿಂಪಿಕ್ಸ್‌ ವೇದಿಕೆಯಲ್ಲಿ ವಿಶ್ವದ ಅಗ್ರ ಕ್ರೀಡಾಪಟುಗಳು ಒಬ್ಬರನ್ನೊಬ್ಬರು ಸೆಣಸುವುದನ್ನು ಇಡೀ ವಿಶ್ವವೇ ಉಸಿರು ಬಿಗಿಹಿಡಿದು ನೋಡುತ್ತಿರುತ್ತದೆ. ಇಲ್ಲಿ ಪದಕ ಗಳಿಸುವ ಹುರಿಯಾಳುಗಳ ಸಾಧನೆ, ಮಾನವೀಯತೆಗೆ ಸವಾಲೊಡ್ಡುವ ದೃಶ್ಯಗಳೂ ಹೆಮ್ಮೆಯಿಂದ ಎದೆ ಉಬ್ಬಿಸುವಂತೆ ಮಾಡುತ್ತದೆ. ಇದು ಕೇವಲ ಒಲಿಂಪಿಕ್ಸ್‌ ಅಲ್ಲ, ಇಡೀ ವಿಶ್ವವೇ ಆಚರಿಸುವ ಅದ್ಧೂರಿ ಕ್ರೀಡಾಜಾತ್ರೆ. ಕಣದಲ್ಲಿರುವ ವಿಶ್ವಚೇತನಗಳನ್ನ ತಟ್ಟಿ ಎಬ್ಬಿಸಿ, ದಾಖಲೆ ಮುಟ್ಟುವಂತೆ ಪ್ರೇರೇಪಿಸುವ ಅದ್ಬುತ ಅಂಗಳವೂ ಇದಾಗಿದೆ. ಅದರಲ್ಲೂ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಅತ್ಯಂತ ವಿಶೇಷವೆಂದೇ ಹೇಳಬಹುದು. ಏಕೆಂದರೆ 1900ರಲ್ಲಿ ಆಧುನಿಕ ಯುಗದ ಒಲಿಂಪಿಕ್ಸ್‌ ಕೂಟಕ್ಕೆ ನಾಂದಿ ಹಾಡಿದ್ದ ಪ್ಯಾರಿಸ್‌ನಲ್ಲಿ (Paris) ಈಗ 3ನೇ ಐತಿಹಾಸಿಕ ಒಲಿಂಪಿಕ್ಸ್‌ ಮೇಳ ನಡೆಯುತ್ತಿರುವುದು ಮತ್ತೊಂದು ವಿಶೇಷ.

    ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ವಿಶ್ವದ ಎಲ್ಲಾ ಕ್ರೀಡಾಪಟುಗಳು (Athletes) ಈಗಾಗಲೇ ಪ್ಯಾರಿಸ್‌ ಅಂಗಳ ತಲುಪಿದ್ದು, ಜುಲೈ 26ರಂದು (ಶುಕ್ರವಾರ) ಅಧಿಕೃತ ಚಾಲನೆ ದೊರೆಯಲಿದೆ. ಭಾರತದಿಂದ ಈ ಬಾರಿ 117 ಕ್ರೀಡಾಪಟುಗಳು ಹಾಗೂ 140 ಮಂದಿ ಕ್ರೀಡಾ ಸಿಬ್ಬಂದಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಲಿಂಪಿಕ್ಸ್‌‌ ಜಾತ್ರೆಯ ಇತಿಹಾಸ ತಿಳಿಯುವುದು ಅತೀ ಮುಖ್ಯ. ಮೊದಲ ಒಲಿಂಪಿಕ್ಸ್‌ ಯಾವಾಗ ಶುರುವಾಯ್ತು ಅಂದ್ರೆ ಎಲ್ಲರೂ ಹೇಳೋದು 1896ರಲ್ಲಿ ಗ್ರೀಸ್‌ನ ರಾಜಧಾನಿ ಅಥೆನ್ಸ್‌ ನಗರದಲ್ಲಿ ಶುರುವಾಯಿತು ಎಂದು. ಆದ್ರೆ ಕ್ರೀಸ್ತಪೂರ್ವದಲ್ಲೇ ಒಲಿಂಪಿಕ್ಸ್‌ ಶುರುವಾಗಿತ್ತು ಎಂಬುದಕ್ಕೆ ಪುರಾವೆಗಳು ಇವೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಮುಂದೆ ಓದಿ…

    ಕ್ರಿಸ್ತಪೂರ್ವದಲ್ಲಿ ಹುಟ್ಟಿದ ಒಲಿಂಪಿಕ್ಸ್‌

    ಹೌದು. ಕೆಲ ದಾಖಲೆಯ ಪ್ರಕಾರ ಮೊದಲ ಒಲಿಂಪಿಕ್ಸ್‌ ನಡೆದಿದ್ದು, ಕ್ರಿ.ಪೂರ್ವ 776ರಲ್ಲಿ, ಈ ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಗೆದ್ದುಕೊಂಡ ಮೊದಲ ಓಟಗಾರ ಒಬ್ಬಬಾಣಸಿಗ. ಅಚ್ಚರಿಯಾದರೂ ನೀವು ಇದನ್ನು ನಂಬಲೇಬೇಕು. ಎಲಿಸ್ ದ್ವೀಪದ ʻಕೊರೋಬಸ್ʼ ಎಂಬ ಹೆಸರಿನ ಈ ಬಾಣಸಿಗ, ʻಸ್ಟೇಡ್ʼ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ. ಆ ಕಾಲದಲ್ಲಿ ಮೊದಲು ಬಂದವರಿಗಷ್ಟೇ ಮನ್ನಣೆ ಸಿಗುತ್ತಿತ್ತು. ಹಾಗಾಗಿ ಬಹುಮಾನವಾಗಿ ಅವನ ತಲೆಯ ಮೇಲೆ ʻಕೋಟಿನೋಸ್ʼ (ಕಾಡು ಆಲಿವ್‌ ಮರದ ಎಲೆಗಳನ್ನು ಸೇರಿಸಿ ಮಾಡಿದ ವೃತ್ತಾಕಾರದ ಕಿರೀಟ) ಇಟ್ಟು ಗೌರವಿಸಲಾಗುತ್ತಿತ್ತು.

    ʻಒಲಿಂಪಿಯಾ ಬೆಟ್ಟʼದ ಕ್ರೀಡೆ

    ಹೌದು. ಕ್ರಿಸ್ತಪೂರ್ವದಲ್ಲಿ ಒಲಿಂಪಿಕ್ಸ್‌ ಕ್ರೀಡೆ ನಡೆಯುತ್ತಿದ್ದದ್ದು ʻಒಲಿಂಪಿಯಾ’ ಎಂಬ ಬೆಟ್ಟದಲ್ಲಿ. ಆ ಕಾಲದಲ್ಲಿ ಇದು ಗ್ರೀಸ್‌ನ ಧಾರ್ಮಿಕ ಕೇಂದ್ರವಾಗಿತ್ತು. ಬೆಟ್ಟದ ಮೇಲಿನ ಜೀಯಸ್‌ನ ಪ್ರಾರ್ಥನಾ ಮಂದಿರ, ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿತ್ತು ಎಂದೂ ಸಹ ಹೇಳಲಾಗಿದೆ. ಒಲಿಂಪಿಯಾದ ಕ್ರೀಡಾಂಗಣ 40 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಷ್ಟು ವಿಶಾಲವಾಗಿತ್ತು. ಈ ಕ್ರೀಡಾಂಗಣದ ಸುತ್ತ ಕ್ರೀಡಾಳುಗಳ ತರಬೇತಿಗಾಗಿ ಭವ್ಯ ಕಟ್ಟಡಗಳಿದ್ದವು. ದಂತಕಥೆಗಳ ಪ್ರಕಾರ ಜೀಯಸ್‌ನ ಮಗ ಹರ್ಕ್ಯುಲಸ್‌ (ಹೆರಾಕ್ಲಿಸ್) ಈ ಕ್ರೀಡಾಕೂಟ ಆರಂಭಿಸಿದರು ಎಂದು ಹೇಳಲಾಗಿದೆ. ಹೆರಾಕ್ಲಿಸ್‌ ಈ ಕ್ರೀಡೋತ್ಸವಕ್ಕಾಗಿ ದೇವತೆ ಅಥೆನಾಳ ನೆರವಿನಲ್ಲಿ ಬೆಟ್ಟದ ಮೇಲೆ ಒಲಿಂಪಿಯಾ ದೇವಾಲಯ ಮತ್ತು ವಿಶಾಲ ಕ್ರೀಡಾಂಗಣ ನಿರ್ಮಿಸಿದ.

    ಒಲಿಂಪಿಕ್ಸ್‌ನಲ್ಲಿ ಒಂದೇ ಓಟ

    ಆರಂಭದ ಒಲಿಂಪಿಕ್ಸ್‌ನಲ್ಲಿ ʻಸ್ಟೇಡ್‌ʼ ಎಂಬ ಓಟದ ಸ್ಪರ್ಧೆ ಮಾತ್ರ ನಡೆಯಿತು. ಪುರುಷರು ಮತ್ತು ಹುಡುಗರಿಗೆ ಮಾತ್ರ ಮೀಸಲಾಗಿತ್ತು. ಈ ಓಟದ ದೂರವನ್ನು ಸ್ವತಃ ಹರ್ಕ್ಯುಲಸ್ ನಿಗದಿ ಮಾಡಿದ್ದ. ಮುಂದೆ ಪೆಂಟಾಥಾನ್ ಅಂದ್ರೆ ಜಾವೆಲಿನ್ ಎಸೆತ, ದೂರ ನೆಗೆತ, ಡಿಸ್ಕಸ್ ಎಸೆತ, ಓಟ ಮತ್ತು ಕುಸ್ತಿ ಐದು ಸ್ಪರ್ಧೆಗಳು, ಚಾರಿಯಟ್ ರೇಸ್ (ರಥಗಳ ಓಟ) ಮತ್ತು ಮುಷ್ಟಿಯುದ್ಧ ಸ್ಪರ್ಧೆಗಳನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಲಾಗಿತ್ತು. ಗ್ರೀಸ್‌ನ ಹಲವು ರಾಜ್ಯಗಳ ನಡುವೆ ಆಗಾಗ್ಗೆ ಯುದ್ಧ ನಡೆಯುತ್ತಿತ್ತು. ಆದ್ರೆ ಒಲಿಂಪಿಕ್ಸ್‌ ಸಂದರ್ಭದಲ್ಲಿ ಶಾಂತಿ ಪಾಲನೆ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಗ್ರೀಕ್ ಭಾಷೆ ಅರಿತ ಯಾವ ಸ್ವತಂತ್ರ ನಾಗರಿಕನೂ ಇಲ್ಲಿ ಭಾಗವಹಿಸಬಹುದಿತ್ತು. ಯಾವುದೇ ತಾರತಮ್ಯವೂ ಇರಲಿಲ್ಲ. ಕ್ರೀಡಾಂಗಣದಲ್ಲಿ ಸ್ಪರ್ಧಿಗಳು ಮೈಮೇಲೆ ಬಟ್ಟೆ ತೊಡುತ್ತಿರಲಿಲ್ಲ. ಹೀಗಾಗಿ ವಿವಾಹಿತ ಮಹಿಳೆಯರಿಗೆ ಈ ಕ್ರೀಡಾಂಗಣದೊಳಗೆ ಪ್ರವೇಶ ನಿಷಿದ್ಧವಾಗಿತ್ತು. ಆದ್ದರಿಂದ ರಾಜ ಪೆಲೋಪ್ಸ್ನ ಮಡದಿ ಹಿಪ್ಪೋಡಾಮಿಯಾ ಮಹಿಳೆಯರಿಗಾಗಿ ಪ್ರತ್ಯೇಕ ಹೇರಿಯಾ ಕ್ರೀಡೆಗಳನ್ನು ಆರಂಭಿಸಿದಳು. ಈ ಓಟಗಳಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮಾತ್ರ ಅವಕಾಶ ಇತ್ತು.

    ಕಣ್ಮರೆಯಾಯ್ತು ಒಲಿಂಪಿಯಾ ಪಟ್ಟಣ

    ಕಾಲಕ್ರಮೇಣ ಗ್ರೀಕ್ ಯುವಕರು ಆಟೋಟಗಳಿಂದ ದೂರವಾದರು. ಕ್ರಿಸ್ತಪೂರ್ವ 146ರ ಸುಮಾರಿಗೆ ರೋಮನ್ನರು ಗ್ರೀಸ್ ದೇಶವನ್ನು ಕಬಳಿಸಿದ ಬಳಿಕ ಒಲಿಂಪಿಕ್ಸ್‌ನ ಸ್ವರೂಪವೇ ಬದಲಾಯಿತು. ಒಲಿಂಪಿಕ್ಸ್ ಜೊತೆ ಸೇರಿದ್ದ ಧಾರ್ಮಿಕ ಸಂಪ್ರದಾಯಗಳು ಕಾಣೆಯಾಗಿ ರೋಮನ್ನರ ವಿಕೃತ ಕ್ರೀಡೆಗಳು ಆರಂಭವಾದವು. ಗ್ಲಾಡಿಯೇಟರ್‌ಗಳು, ಗುಲಾಮರು ಮತ್ತು ಕ್ರೂರ ಪ್ರಾಣಿಗಳ ನಡುವೆ ರಕ್ತಪಾತದ ಕ್ರೀಡೆಗಳು ಸ್ಟೇಡಿಯಮ್‌ಗಳಲ್ಲಿ ನಡೆದವು. ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದ ಥಿಯೋಡೋಸಿಯಸ್ ರೋಮ್‌ನ ಗದ್ದುಗೆ ಏರಿದ. ಬಳಿಕ ಕ್ರಿ.ಶ. 394ರಲ್ಲಿ ಈ ಕ್ರೀಡೆಗಳಿಗೆ ಶಾಶ್ವತ ಬಹಿಷ್ಕಾರ ಹಾಕಿದ. ಅಲ್ಲಿಗೆ ಸುಮಾರು 1,200 ವರ್ಷಗಳ ಇತಿಹಾಸದ ಒಲಿಂಪಿಕ್ಸ್‌ ಪರಿಸಮಾಪ್ತಿಯಾಯಿತು. ಕಾಲಾಂತರದಲ್ಲಿ ಒಲಿಂಪಿಕ್ಸ್ ಬರೀ ನೆನಪಾಗಿ ಉಳಿಯಿತು. ಮುಂದಿನ ಶತಮಾನಗಳಲ್ಲಿ ಒಲಿಂಪಿಯಾ ಪಟ್ಟಣವೇ ಕಣ್ಮರೆಯಾಯಿತು. ʻಒಲಿಂಪಿಯಾ’ ಎಂದರೆ, ಒಂದು ಕಾಲ್ಪನಿಕ ಸ್ಥಳ, ತಮ್ಮ ಪುರಾಣಗಳಲ್ಲಿ ಬರುವ ಒಂದು ದಂತಕಥೆ ಮಾತ್ರ ಎಂದು ಗ್ರೀಕರು ನಂಬತೊಡಗಿದರು.

    ಒಲಿಂಪಿಕ್ಸ್‌ಗೆ ಮರುಜೀವ

    18ನೇ ಶತಮಾನದ ವೇಳೆಗೆ ಗ್ರೀಸ್ ದೇಶ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯದ ಸಾಮಂತ ರಾಷ್ಟ್ರವಾಗಿತ್ತು. ಒಟ್ಟೋಮನ್‌ಗಳ ವಿರುದ್ಧ ಗ್ರೀಕರು ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಆ ಕಾಲದಲ್ಲಿ ʻಪೆಲೋಪೊನೀಸ್’ ಎಂಬ ದ್ವೀಪದ ನಡುವೆ ಮರಳಿನಲ್ಲಿ ಒಂದು ಪುರಾತನ ಸ್ತಂಭದ ಅವಶೇಷ ಪತ್ತೆಯಾಗಿತ್ತು. ಜರ್ಮನಿಯ ಆರ್ನ್ಸ್ ಕರ್ಟಿಯಸ್ (1814-1896) ಎಂಬ ಪುರಾತತ್ತ್ವ ಶೋಧಕ, ಈ ಸ್ತಂಭದ ಕೆಳಗೆ ಗ್ರೀಸ್‌ನ ಗತಕಾಲದ ಇತಿಹಾಸ ಇರಬೇಕು ಎಂದು ಲೆಕ್ಕ ಹಾಕಿದ್ದ. ಅವನ ಸತತ ಪ್ರಯತ್ನದ ಫಲವಾಗಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಒಲಿಂಪಿಯಾ ಪಟ್ಟಣ ಮೇಲೆದ್ದು ಬಂತು. ʻಒಲಿಂಪಿಯಾ’ ಎಂಬ ಜಾಗ ನಿಜಕ್ಕೂ ಇತ್ತು ಎಂದು ತಿಳಿದಾಗ ಜಗತ್ತೇ ಬೆರಗಾಗಿತ್ತು.

    ಒಲಿಂಪಿಕ್ಸ್‌ನ ಅವಶೇಷಗಳ ನಡುವೆ ʻಪಾನಥಿನಾಯ್ಯೋಸ್’ ಎಂಬ ಪ್ರಾಚೀನ ಕ್ರೀಡಾಂಗಣ ಬೆಳಕಿಗೆ ಬಂತು. ಇವಾಂಜೆಲೋಸ್ ಜಾಪ್ಪಾಸ್ ಎಂಬ ಧನಿಕ ಗ್ರೀಕ್ ವ್ಯಾಪಾರಿ 1859ರಲ್ಲಿ ಈ ಸ್ಟೇಡಿಯಮ್‌ನ ಪುನರುತ್ಥಾನ ಮಾಡಿ, ಅಲ್ಲಿ ಮೊಟ್ಟಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸಿದ. ಈ ಬಗ್ಗೆ ಐರೋಪ್ಯ ಪತ್ರಿಕೆಗಳು ವರದಿ ಮಾಡಿದ್ದವು. ಈ ಕ್ರೀಡೋತ್ಸವದ ಯಶಸ್ಸಿನಿಂದ ಉತ್ತೇಜಿತನಾದ ಜಾಪ್ಪಾಸ್ 1870 ಮತ್ತು 1875ರಲ್ಲಿ ಒಲಿಂಪಿಕ್ಸ್‌ನಲ್ಲಿ ಇನ್ನೆರಡು ಅಂತಾರಾಷ್ಟ್ರೀಯ ಕ್ರೀಡಾಮೇಳಗಳನ್ನು ನಡೆಸಿದ. ಫ್ರಾನ್ಸ್‌ನ ಗಣ್ಯ ಬ್ಯಾರನ್ ಪಿಯರೆ ಡಿ ಕೂಬರ್ಟಿನ್ ಈ ಸುದ್ದಿಯಿಂದ ಪ್ರೇರಣೆ ಪಡೆದಿದ್ದ. ಯುವಕರ ಮನಸ್ಸನ್ನು ಕ್ರೀಡೆಯತ್ತ ತಿರುಗಿಸಿದರೆ ಮಾತ್ರ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ, ಜಗತ್ತು ಒಂದುಗೂಡುತ್ತದೆ ಎಂಬುದನ್ನ ಮನಗಂಡ. ಹಾಗಾಗಿ ಕೂಬರ್ಟಿನ್ 1893ರಲ್ಲಿ ಒಂಬತ್ತು ದೇಶಗಳ 79 ಪ್ರತಿನಿಧಿಗಳನ್ನು ಸೇರಿಸಿ ಒಲಿಂಪಿಕ್ಸ್ ಮತ್ತೆ ಆರಂಭಿಸುವ ಬಗ್ಗೆ ತಿಳಿಸಿದ. ʻಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ’ (IOA) ಇಲ್ಲಿ ಹುಟ್ಟಿಕೊಂಡಿತು ಎನ್ನಲಾಗಿದೆ.

    ಗ್ರೀಸ್‌ನ ಐತಿಹಾಸಿಕ ರಾಜಧಾನಿ ಅಥೆನ್ಸ್‌ನಲ್ಲಿ ಮೊದಲ ಒಲಿಂಪಿಕ್ಸ್‌ ನಡೆಸಬೇಕೆಂಬ ತೀರ್ಮಾನ ಕೂಡ ಅಲ್ಲೇ ತೆಗೆದುಕೊಳ್ಳಲಾಗಿತ್ತು. ಅದರಂತೆ 1896ರಲ್ಲಿ ಗ್ರೀಸ್‌ನ ಅಥೆನ್ಸ್‌ ನಗರದಲ್ಲಿ ಆಧುನಿಕ ಯುಗದ ಮೊದಲ ಅದ್ಧೂರಿ ಕ್ರೀಡಾ ಜಾತ್ರೆ ನಡೆಯಿತು. ಇಂದಿಗೂ ಅದು ಮುಂದುವರಿದಿದೆ. 2024ರ ಕ್ರೀಡಾಕೂಟಕ್ಕೆ ವಿಶ್ಚ ವೇದಿಕೆ ಪ್ಯಾರಿಸ್‌ನಲ್ಲಿ ಸಜ್ಜಾಗಿದೆ.

  • Malaysia Masters: ಜಿದ್ದಾ ಜಿದ್ದಿ ಕಣದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು!

    Malaysia Masters: ಜಿದ್ದಾ ಜಿದ್ದಿ ಕಣದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು!

    ಕೌಲಾಲಂಪುರ: ಮಲೇಷ್ಯಾ ಮಾಸ್ಟರ್ಸ್ (Malaysia Masters) ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ ಸಿಂಧು (PV Sindhu), ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

    ಶನಿವಾರ ಕೌಲಾಲಂಪುರದಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 5ನೇ ಶ್ರೇಯಾಂಕಿತ ಸಿಂಧು ಅವರು ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 88 ನಿಮಿಷಗಳ ಕಾಲ ನಡೆದ ಜಿದ್ದಾ ಜಿದ್ದಿ ಹೋರಾಟದಲ್ಲಿ ವಿಶ್ವದ 20ನೇ ಶ್ರೇಯಾಂಕಿತ ಬುಸಾನನ್ (Busanan Ongbamrungphan) ವಿರುದ್ಧ 13-21, 21-16, 21-12 ಅಂಕಗಳೊಂದಿಗೆ ಗೆಲುವು ಸಾಧಿಸಿ ಮೈಲುಗಲ್ಲು ಸಾಧಿಸಿದ್ದಾರೆ. ಇದನ್ನೂ ಓದಿ: IPL 2024: ಫೈನಲ್‌ ಪಂದ್ಯಕ್ಕೆ ʻರೆಮಲ್‌ʼ ಚಂಡಮಾರುತದ ಆತಂಕ – ಮಳೆ ಅಡ್ಡಿಯಾದ್ರೆ ವಿಜೇತರನ್ನ ನಿರ್ಧರಿಸೋದು ಹೇಗೆ?

    ಕಳೆದ 2 ವರ್ಷಗಳಿಂದ ಫಾರ್ಮ್‌ ಕಳೆದುಕೊಂಡಿದ್ದ ಸಿಂಧು ಯಾವುದೇ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಇದಕ್ಕೂ ಮುನ್ನ ಕಳೆದ ವರ್ಷ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್‌ ಆಗಿದ್ದರು. 2022ರಲ್ಲಿ ಸಿಂಗಾಪುರ ಓಪನ್ಸ್‌ (Singapore Opens) ಟ್ರೋಫಿ ಗೆದ್ದಿದ್ದರು. 2019ರ ಹಾಂಗ್‌ ಕಾಂಗ್‌ ಓಪನ್ಸ್‌ನಲ್ಲಿ ತಮ್ಮ ವೃತ್ತಿ ಬದುಕಿನಲ್ಲಿ ಮೊದಲಬಾರಿಗೆ ಭಾರತೀಯರನ್ನು ಸೋಲಿಸಿದ್ದ ಥಾಯ್ಲೆಂಡ್‌ನ ಬುಸಾನನ್ ವಿರುದ್ಧ ಇದು ಸಿಂಧು ಅವರ 18ನೇ ಜಯವಾಗಿದೆ. ಇದನ್ನೂ ಓದಿ: ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಯಾವುದೇ ಆಟಗಾರರನ್ನು ಬಿಸಿಸಿಐ ಸಂಪರ್ಕಿಸಿಲ್ಲ: ಜಯ್‌ಶಾ

    ಕಳೆದ ಎರಡು ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ವಿಜೇತೆಯಾಗಿದ್ದ ಪಿ.ವಿ ಸಿಂಧು ಅವರು ಪ್ರಸಕ್ತ ವರ್ಷದಲ್ಲಿ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬ್ಯಾಡ್ಮಿಂಟನ್‌ನಿಂದ ಕೆಲಕಾಲ ಹೊರಗುಳಿದಿದ್ದರು. ಆ ನಂತರ ಹಲವು ಟೂರ್ನಿಗಳನ್ನು ಎದುರಿಸಿದ್ದರೂ ಫಾರ್ಮ್‌ ಕಳೆದುಕೊಂಡು ಸೋಲಿಗೆ ತುತ್ತಾಗಿದ್ದರು. ಇದೀಗ ಈ ಪ್ರಶಸ್ತಿ ಗೆಲುವಿನೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಇದನ್ನೂ ಓದಿ: Divorce Rumours: ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ರೆ 70% ಕರಗಲಿದೆ ಪಾಂಡ್ಯ ಸಂಪತ್ತು!

  • World Athletics Championships: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

    World Athletics Championships: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

    ಬುಡಾಪೆಸ್ಟ್ (ಹಂಗೇರಿ): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ (Neeraj Chopra) ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಜೊತೆಗೆ 2024ಕ್ಕೆ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್ (Paris Olympic 2024) ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

    ಶುಕ್ರವಾರ ನಡೆದ ಪುರುಷರ ಜಾವೆಲಿನ್ ಥ್ರೋ `ಎ’ ಗುಂಪಿನ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 88.77 ಮೀಟರ್ ದೂರದ ಜಾವೆಲಿನ್ ಎಸೆದಿರುವ ನೀರಜ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹಗೆ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾಗೆ ಗಾಯದ ಸಮಸ್ಯೆ – ಕಾಮನ್‍ವೆಲ್ತ್ ಗೇಮ್ಸ್‌ಗೂ ಮುನ್ನವೇ ಭಾರತಕ್ಕೆ ಹಿನ್ನಡೆ

    NEERAJ

    2021ರ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀರಜ್ ಸ್ವರ್ಣ ಪದಕ ಜಯಿಸಿದ್ದರು. ಅಂದು ಅವರು 87.58 ಮೀಟರ್ ದೂರ ಜಾವೆಲಿನ್ ಎಸೆದಿದ್ದರು.

    ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ನೀರಜ್ ಚೋಪ್ರಾ 85.50 ಮೀಟರ್ ದೂರ ಜಾವೆಲಿನ್ ಎಸೆಯಬೇಕಿತ್ತು. ಆದ್ರೆ ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ ಚೋಪ್ರಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗಿನ ಗೇಮ್ಸ್‌ನಲ್ಲಿ 89.94 ಮೀಟರ್ ದೂರ ಜಾವೆಲಿನ್ ಎಸೆದಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ.

    ಕೆಲ ದಿನಗಳ ಹಿಂದೆಯಷ್ಟೇ ನೀರಜ್ ಚೋಪ್ರಾ ಲಾಸೆನ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದು ಸತತ 2ನೇ ಬಾರಿಗೆ ಡೈಮಂಡ್ ಲೀಗ್ ಗೆದ್ದ ಭಾರತೀಯನೆಂಬ ಹೆಗ್ಗಳಿಗೆ ಪಡೆದಿದ್ದರು. ಇದನ್ನೂ ಓದಿ: Lausanne Diamond League: ಚಿನ್ನಕ್ಕೆ ಮುತ್ತಿಟ್ಟ ನೀರಜ್‌ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]