Tag: ಒಟಿಪಿ

  • ಡಿ.1 ರಿಂದ ಒಟಿಪಿ ಬರುತ್ತಾ? ಬರಲ್ವಾ? – ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಟ್ರಾಯ್‌

    ಡಿ.1 ರಿಂದ ಒಟಿಪಿ ಬರುತ್ತಾ? ಬರಲ್ವಾ? – ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಟ್ರಾಯ್‌

    ನವದೆಹಲಿ: ಡಿ.1 ರಿಂದ ಒಟಿಪಿಗಳು ಬರುತ್ತಾ? ಬರಲ್ವಾ ಎಂಬ ಗೊಂದಲಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ತೆರೆ ಎಳೆದಿದೆ.

    ಮೊಬೈಲ್ ಫೋನ್‌ಗಳಿಗೆ ಬರುವ ಒಟಿಪಿಗಳ (One Time Password) ಮೂಲವನ್ನು ಪತ್ತೆ ಮಾಡುವ ಸಂಬಂಧ ಟ್ರಾಯ್ ರೂಪಿಸಿದ ಹೊಸ ನಿಯಮಾವಳಿಗೆ ಟೆಲಿಕಾಂ ಕಂಪನಿಗಳು ಇದೇ ನವೆಂಬರ್ 30ರೊಳಗೆ ಒಪ್ಪಿಗೆ ಸೂಚಿಸದೇ ಇದ್ದರೆ ಡಿ.1 ರಿಂದ ಮೊಬೈಲ್‌ಗಳಿಗೆ ಒಟಿಪಿ ಬರುವುದಿಲ್ಲ ಎಂದು ವರದಿಯಾಗಿತ್ತು.

    ಮಾಧ್ಯಮಗಳಲ್ಲಿ ಈ ವರದಿ ಪ್ರಕಟವಾಗುತ್ತಿದ್ದಂತೆ ಬಳಕೆದಾರರಿಗೆ ಆತಂಕ ಎದುರಾಗಿತ್ತು. ಈಗ ಟ್ರಾಯ್‌ ಈ ಎಲ್ಲ ಆತಂಕಗಳಿಗೆ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

    ಟ್ರಾಯ್‌ ಹೇಳಿದ್ದೇನು?
    ಮಾಧ್ಯಮಗಳ ವರದಿ ತಪ್ಪಾಗಿದೆ. ಒಟಿಪಿಗಳ ಮೂಲ ಬಹಿರಂಗಪಡಿಸುವುದನ್ನು ಟ್ರಾಯ್‌ ಕಡ್ಡಾಯಗೊಳಿಸಿದೆ. ಇದರಿಂದ ಯಾವುದೇ ಸಂದೇಶಗಳು ವಿಳಂಬವಾಗುವುದಿಲ್ಲ ಎಂದು ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದೆ.

    ಆನ್‌ಲೈನ್‌ ಹಣಕಾಸು ವ್ಯವಹಾರಗಳಿಗೆ ಇಂದು ಒಟಿಪಿ (OTP) ತೀರಾ ಅಗತ್ಯವಿದೆ. ಒಂದು ವೇಳೆ ಟ್ರಾಯ್ ಗಡುವು ವಿಸ್ತರಿಸದಿದ್ದರೆ ಈ ಸೇವೆಗಳಲ್ಲಿ ಭಾರಿ ಸಮಸ್ಯೆ ಆಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದವು.

    ಇಂದು ಒಟಿಪಿಗಳ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಒಟಿಪಿಗಳ ಮೂಲ ಬಹಿರಂಗಗೊಳಿಸುವ (ಟ್ರ್ಯಾಕಿಂಗ್) ನಿಟ್ಟಿನಲ್ಲಿ ಟ್ರಾಯ್ ಹೊಸ ನಿಯಮಾವಳಿ ರೂಪಿಸಿತ್ತು. ಈ ನಿಯಮಕ್ಕೆ ಜಿಯೋ, ವೊಡಾಫೋನ್, ಏರ್‌ಟೇಲ್, ಬಿಎಸ್‌ಎನ್‌ಎಲ್‌ನಂತಹ ಟೆಲಿಕಾಂ ಕಂಪನಿಗಳು ಇನ್ನೂ ಒಪ್ಪಿಗೆ ನೀಡಿರಲಿಲ್ಲ.

    ಈ ಹಿಂದೆ ಅಕ್ಟೋಬರ್ 31ರ ಗಡುವು ನೀಡಲಾಗಿತ್ತು. ಆದರೆ ಟೆಲಿಕಾಂ ಕಂಪನಿಗಳ ಮನವಿ ಮೇರೆಗೆ ನ.30ರವರೆಗೆ ಗಡುವು ವಿಸ್ತರಿಸಲಾಗಿತ್ತು.

     

  • ಪಾಕಿಸ್ತಾನಕ್ಕೆ ಭಾರತೀಯ ಸಿಮ್‌ಕಾರ್ಡ್, ಒಟಿಪಿ ಹಂಚಿಕೆ – ಮೂವರು ಅರೆಸ್ಟ್

    ಪಾಕಿಸ್ತಾನಕ್ಕೆ ಭಾರತೀಯ ಸಿಮ್‌ಕಾರ್ಡ್, ಒಟಿಪಿ ಹಂಚಿಕೆ – ಮೂವರು ಅರೆಸ್ಟ್

    ಭುವನೇಶ್ವರ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ(ISI) ಏಜೆಂಟ್‌ಗಳೊಂದಿಗೆ ಸಿಮ್ ಕಾರ್ಡ್‌ಗಳು (Sim Card) ಹಾಗೂ ಒಟಿಪಿಗಳನ್ನು (OTP) ಹಂಚಿಕೊಳ್ಳುತ್ತಿದ್ದ ಮೂವರು ಆರೋಪಿಗಳನ್ನು ಒಡಿಶಾ (Odisha) ಪೊಲೀಸರ ವಿಶೇಷ ಕಾರ್ಯಪಡೆ (STF) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಂಧಿತ ಆರೋಪಿಗಳು ನಯಾಗರ್ ಮತ್ತು ಜಾಜ್‌ಪುರ ಜಿಲ್ಲೆಗೆ ಸೇರಿದವರಾಗಿದ್ದು, ಪಠಾಣಿಸಮಂತ್ ಲೆಂಕಾ (35), ಸರೋಜ್ ಕುಮಾರ್ ನಾಯಕ್ (26) ಮತ್ತು ಸೌಮ್ಯಾ ಪಟ್ಟನಾಯಕ್ (19) ಎಂದು ಗುರುತಿಸಲಾಗಿದೆ. ಈ ಎಲ್ಲಾ ಆರೋಪಿಗಳು ವಂಚನೆಯ ಮೂಲಕ ಇತರರ ಹೆಸರಿನಲ್ಲಿ ಅಪಾರ ಸಂಖ್ಯೆಯ ಸಿಮ್‌ಗಳನ್ನು ಪಡೆದುಕೊಂಡಿದ್ದರು. ಅಲ್ಲದೇ ಅದರ ಒಟಿಪಿಗಳನ್ನು ಪಾಕಿಸ್ತಾನದ (Pakistan) ಪಿಐಒ ಮತ್ತು ಐಎಸ್‌ಐ ಏಜೆಂಟ್‌ಗಳು ಸೇರಿದಂತೆ ಅನೇಕ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನಿ ಏಂಜೆಟ್‌ಗಳು ಅವರಿಗೆ ಹಣವನ್ನು ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಆರೋಪಿಗಳು ಕಳೆದ ವರ್ಷ ರಾಜಸ್ಥಾನದಲ್ಲಿ (Rajasthan) ಅಧಿಕೃತ ರಹಸ್ಯ ಕಾಯಿದೆ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಬಂಧಿಸಿದ ಮಹಿಳಾ ಪಿಐಒ ಏಜೆಂಟ್ ಜೊತೆಗೆ ಸಂಪರ್ಕದಲ್ಲಿದ್ದರು. ಸಂಗ್ರಹಿಸಿದ ಈ ಸಿಮ್ ಕಾರ್ಡ್‌ಗಳು ಮತ್ತು ಒಟಿಪಿಗಳನ್ನು ಬಳಸಿಕೊಂಡು ವಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ಟೆಲಿಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ (Social Media) ನಕಲಿ ಖಾತೆಗಳನ್ನು ರಚಿಸಿ ತಮಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಿ ಜನರಿಗೆ ವಂಚಿಸುತ್ತಿದ್ದರು. ಇದು ಭಾರತದ ಸಿಮ್ ಆಗಿರುವುದರಿಂದ ಜನರು ಅದನ್ನು ಬಹುಬೇಗ ನಂಬಿಬಿಡುತ್ತಿದ್ದರು. ಆದರೆ ನಿಜಾಂಶವೇನೆಂದರೆ ಅದು ಭಾರತೀಯರ ಹೆಸರಿನಲ್ಲಿದ್ದು, ಪಾಕಿಸ್ತಾನದ ಏಜೆಂಟ್‌ಗಳು ಅದನ್ನು ಕಂಟ್ರೋಲ್ ಮಾಡುತ್ತಾರೆ. ಇದನ್ನೂ ಓದಿ: ರಿಯಾದ್‌ನಿಂದ ಹೈದರಾಬಾದ್‌ಗೆ ಅಕ್ರಮ ಚಿನ್ನ ಸಾಗಾಟ – 67 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಬಂಧಿತ ಆರೋಪಿಗಳಿಂದ 19 ಮೊಬೈಲ್ ಫೋನ್‌ಗಳು, 47 ಪ್ರೀ-ಆಕ್ಟಿವೇಟೆಡ್ ಸಿಮ್‌ಕಾರ್ಡ್‌ಗಳು, 61 ಎಟಿಎಮ್ ಕಾರ್ಡ್‌ಗಳು, 21 ಸಿಮ್ ಕವರ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಉಗ್ರರ ಸುರಂಗವನ್ನು ಭೇದಿಸಿದ ಭದ್ರತಾ ಪಡೆ – ಅನಂತ್‌ನಾಗ್‌ನಲ್ಲಿ ಗುಂಡಿನ ಚಕಮಕಿ

    ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರ್ಮ್‌ಗಳ ಮೂಲಕ ಭಾರತ ವಿರೋಧಿ ಚಟುವಟಿಕೆಗಳಾದ ಭಯೋತ್ಪಾದಕರೊಂದಿಗೆ ಸಂಪರ್ಕ, ಹನಿ ಟ್ರ್ಯಾಪಿಂಗ್, ಭಾರತದ ವಿರುದ್ಧ ಅಪಪ್ರಚಾರ, ಲೈಂಗಿಕ ದೌರ್ಜನ್ಯ ಮುಂತಾದ ಕೃತ್ಯಗಳನ್ನು ಮಾಡಲು ಈ ಸಿಮ್‌ಕಾರ್ಡ್‌ಗಳು ಹಾಗೂ ಒಟಿಪಿಗಳು ಸಹಾಯ ಮಾಡುತ್ತದೆ. ಇದನ್ನೂ ಓದಿ: ಒಂದು ಧಾರ್ಮಿಕ ಪೋಸ್ಟ್‌ಗೆ ನಡೀತು ಭಾರೀ ಘರ್ಷಣೆ – 1 ಸಾವು, 8 ಮಂದಿಗೆ ಗಾಯ

  • ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಸಮಸ್ಯೆಗಳು ಶೀಘ್ರ ಪರಿಹಾರ: ಆರ್. ಅಶೋಕ್

    ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಸಮಸ್ಯೆಗಳು ಶೀಘ್ರ ಪರಿಹಾರ: ಆರ್. ಅಶೋಕ್

    ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಶೀಘ್ರವಾಗಿ ಸರಿಪಡಿಸಬೇಕು, ಸರ್ವರ್ ಮತ್ತು ಒಟಿಪಿ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಾರ್ವಜನಿಕರಿಗೆ ಆಸ್ತಿ ನೋಂದಣಿಯ ಸಮಯದಲ್ಲಿ ಸರ್ವರ್ ಮತ್ತು ಒಟಿಪಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಹಾಗೂ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿನ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಲಾಗಿದೆ.

    ಶಿವರಾಮ್ ಕಾರಂತ್ ಬಡಾವಣೆಯಲ್ಲಿನ ಸರ್ಕಾರಿ ಜಮೀನನ್ನು ಬಿಡಿಎಗೆ ಹಸ್ತಾಂತರಿಸುವ ಕುರಿತಂತೆ ಚರ್ಚೆ:
    ಶಿವರಾಮ್ ಕಾರಂತ್ ಬಡಾವಣೆಯ ಮಧ್ಯೆ ಇರುವ ಸುಮಾರು 400 ಎಕರೆಗೂ ಹೆಚ್ಚು ಸರ್ಕಾರಿ ಜಮೀನುಗಳನ್ನು ಬಿಡಿಎಗೆ ಹಸ್ತಾಂತರಿಸುವ ಕುರಿತಂತೆ ಚರ್ಚೆ ನಡೆಸಿ, ಅದಕ್ಕೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಆದೇಶ ನೀಡಿದರು. ಸರಿಯಾದ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿದರೆ ಮಾತ್ರ ಬಡಾವಣೆಯ ಅಭಿವೃದ್ಧಿ ಸಾಧ್ಯ, ಆ ಕಾರಣಕ್ಕೆ ಶೀಘ್ರವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

    ಈ ಸಭೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಗೂ ಬಿಡಿಎ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಮನ್ ಸೆನ್ಸ್ ಇಲ್ಲವಾ? – ಬೆಂಬಲಿಗನ ತಲೆಗೆ ಡಿಕೆಶಿ ಏಟು

  • ಸರ್ವರ್ ಡೌನ್, ಒಟಿಪಿ ಬರುತ್ತಿಲ್ಲ – ಉಡುಪಿಯಲ್ಲಿ ಪಡಿತರ ಗೊಂದಲ

    ಸರ್ವರ್ ಡೌನ್, ಒಟಿಪಿ ಬರುತ್ತಿಲ್ಲ – ಉಡುಪಿಯಲ್ಲಿ ಪಡಿತರ ಗೊಂದಲ

    ಉಡುಪಿ: ಕರ್ನಾಟಕದಲ್ಲಿ ಕೊರೊನಾ ಹಬ್ಬುತ್ತಿರುವ ರೀತಿ ಕಂಡು ರಾಜ್ಯದ ಜನರು ಆತಂಕಕ್ಕೀಡಾಗಿದ್ದಾರೆ. ಲಾಕ್‍ಡೌನ್ ಮತ್ತೆ ಮುಂದುವರೆಯಬಹುದು ಎಂದು ಅಂದುಕೊಂಡು ಪಡಿತರ ಅಂಗಡಿಗಳಿಗೆ ಜನ ಮುಗಿಬಿದ್ದಿದ್ದಾರೆ.

    ಉಡುಪಿ ಜಿಲ್ಲೆಯ 298 ಪಡಿತರ ಅಂಗಡಿಗಳಿಗೆ ಅಕ್ಕಿ ಮಾತ್ರ ಈವರೆಗೆ ಪೂರೈಕೆಯಾಗಿದೆ. ಗೋಧಿ, ಸಕ್ಕರೆ, ಎಣ್ಣೆ, ಬೇಳೆ ಕಾಳು ಯಾವುದು ಪೂರೈಕೆಯಾಗಿಲ್ಲ. ಬಿಪಿಎಲ್ ಕಾರ್ಡುದಾರರಿಗೆ ತಲಾ 14 ಕೆಜಿ ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಉಡುಪಿಯಲ್ಲಿ ಒಬ್ಬೊಬ್ಬರಿಗೆ 10 ಕೆಜಿ ಅಕ್ಕಿ ಮಾತ್ರ ಪೂರೈಕೆಯಾಗುತ್ತಿದೆ. ಒಟಿಪಿ, ಹೆಬ್ಬೆಟ್ಟಿನ ಗುರುತು ಇಲ್ಲದೆ ಪಡಿತರ ವಿತರಿಸಬೇಕೆಂದು ಸರ್ಕಾರ ಆದೇಶ ಮಾಡಿದೆ. ಕಳೆದೆರಡು ದಿನಗಳಿಂದ ಸರ್ವರ್ ಡೌನ್ ಆದ ಹಿನ್ನೆಲೆ ನಿಗದಿತ ಪ್ರಮಾಣದಲ್ಲಿ ಅಕ್ಕಿ ವಿತರಣೆ ಆಗುತ್ತಿಲ್ಲ. ಹೀಗಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ಗ್ರಾಮೀಣ ಪ್ರದೇಶದಲ್ಲಿ ಜನ ಜಾತ್ರೆಯೇ ಆಗಿದೆ.

    ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂದೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂದಿತ್ತು. ಸರ್ವರ್ ಡೌನ್ ಆಗಿರುವುದರಿಂದ ಜನ ಬಿಸಿಲಿನಲ್ಲಿ ಬೇಯಬೇಕಾಯಿತು. ದಿನಕ್ಕೆ 50 ಜನರಿಗೆ ಮಾತ್ರ ಪಡಿತರ ವಿತರಣೆ ಮಾಡುವ ಸುದ್ದಿ ಹರಿದಾಡುತ್ತಿರುವುದರಿಂದ ಜನ ಗೊಂದಲಕ್ಕೀಡಾಗಿ ಒಂದೇ ದಿನ ನ್ಯಾಯಬೆಲೆ ಅಂಗಡಿಯತ್ತ ಮುಖ ಮಾಡಿದ್ದರು.

    ಪಡಿತರ ಪಡೆದುಕೊಳ್ಳಲು ಬಂದ ಜನರು ಮಾತನಾಡಿ, ಎಲ್ಲಾ ದಿನಸಿ ಸಿಗುತ್ತಿಲ್ಲ. ಅಕ್ಕಿಗಾಗಿ ಮಧ್ಯಾಹ್ನದವರೆಗೆ ಕಾಯುವ ಸ್ಥಿತಿಯಿದೆ. ಅಧಿಕಾರಿಗಳು ಒಂದೊಂದು ಏರಿಯಾಕ್ಕೆ ಒಂದು ದಿನ ಅಂತ ನಿಗದಿಪಡಿಸಿದರೆ ಬಿಸಿಲಲ್ಲಿ ಕಾಯುವುದು ತಪ್ಪುತ್ತದೆ ಎಂದರು. ಅಲ್ಲದೇ ಸಾಮಾಜಿಕ ಹೋರಾಟಗಾರರು ನ್ಯಾಯಬೆಲೆ ಅಂಗಡಿ ಮಾಲೀಕರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡಾ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆದಿದೆ.